ಆಂತರಿಕ ನಿರ್ಬಂಧ ವರ್ತನೆ ಅದು ನಿಮ್ಮ ಜೀವಿತವನ್ನು ನಿಯಂತ್ರಿಸುತ್ತದೊ?
“ನಾನು ಪ್ರತಿದಿನ ಬೆಳಗ್ಗೆ 6 ಗಂಟೆಗೆ ಎದ್ದೇಳುತ್ತೇನೆ,” ಎಂದು ಕೀತ್ ಹೇಳುತ್ತಾನೆ.a “ನನ್ನ ಅಲಾರ್ಮ್ ಗಡಿಯಾರವು ಸ್ವಯಂಚಾಲಿತವಾಗಿ 6 ಗಂಟೆಗೆ ತಿರುಗಿಸಿ ಇಡಲ್ಪಟ್ಟಿದೆ. ಅದು ತಿರುಗಿಸಿ ಇಡಲ್ಪಟ್ಟಿದೆ ಎಂದು ನನಗೆ ಗೊತ್ತಿದೆ. ನಾನು ಅದನ್ನು ಎಂದಿಗೂ ಬದಲಾಯಿಸುವುದಿಲ್ಲ. ಆದರೂ, ನಾನು ಅದನ್ನು ಪರಿಶೀಲಿಸುತ್ತಾ ಇರಬೇಕು. ಪ್ರತಿದಿನ ರಾತ್ರಿ, ನಾನು ಮಲಗುವ ಮುಂಚೆ ಕಡಿಮೆ ಪಕ್ಷ ಐದು ಬಾರಿಯಾದರೂ ಅದನ್ನು ನೋಡುತ್ತೇನೆ. ಮತ್ತು ಸ್ಟೋವಿನ ಗುಬುಟುಗಳು—ಅವುಗಳಲ್ಲಿ ಪ್ರತಿಯೊಂದು ಆಫ್ ಮಾಡಲಾಗಿದೆಯೊ ಎಂಬುದನ್ನು ನಾನು ಖಚಿತ ಮಾಡಿಕೊಳ್ಳಲೇಬೇಕು. ಅವು ಆಫ್ ಮಾಡಲ್ಪಟ್ಟಿವೆ ಎಂಬುದನ್ನು ನಾನು ನೋಡಬಲ್ಲೆ, ಆದರೆ ಹಿಂದಿರುಗಿ ಹೋಗಿ ಅದನ್ನು ಒಂದು, ಎರಡು, ಮೂರು ಬಾರಿ—ಕೇವಲ ಖಚಿತಪಡಿಸಿಕೊಳ್ಳಲು—ನಾನು ನೋಡಲೇಬೇಕು. ಆಮೇಲೆ ನಾನು, ಶೀತಕದ ಬಾಗಿಲು ಮುಚ್ಚಿದೆಯೊ ಎಂಬುದನ್ನು ಖಚಿತಪಡಿಸಿ- ಕೊಳ್ಳಲು, ಪುನಃ ಪುನಃ ಅದನ್ನು ಪರಿಶೀಲಿಸಬೇಕು. ಆಮೇಲೆ ಅಡ್ಡತೆರೆಯ ಬೀಗ, ಮತ್ತು ಮನೆಯ ಮುಖ್ಯ ಬಾಗಿಲಿನ ಎರಡು ಬೀಗಗಳು ಇವೆ . . .”
ಕೀತ್, ನಿಯಂತ್ರಿಸಲಾಗದ ಆಲೋಚನೆಗಳು (ಗೀಳುಗಳು) ಮತ್ತು ಕ್ರಿಯೆಗಳ (ನಿರ್ಬಂಧಗಳು) ಮೂಲಕ ನಿರೂಪಿಸಲ್ಪಡುವ, ದೌರ್ಬಲ್ಯಗೊಳಿಸುವ ಒಂದು ಸ್ಥಿತಿಯೋಪಾದಿ ವಿಶದೀಕರಿಸಲ್ಪಟ್ಟ ಗೀಳುಪೀಡಿತ ಆಂತರಿಕ ನಿರ್ಬಂಧ ಕಾಯಿಲೆ [ಆಬ್ಸೆಸಿವ್ ಕಂಪಲ್ಸಿವ್ ಡಿಸ್ಆರ್ಡರ್] (ಓಸೀಡೀ)ಯಿಂದ ಕಷ್ಟಾನುಭವಿಸುತ್ತಾನೆ.b ಈ ಗೀಳುಗಳು ಮತ್ತು ನಿರ್ಬಂಧಗಳು, ಸಂಪೂರ್ಣವಾಗಿ ಅನೈಚ್ಛಿಕವಾಗಿವೆ ಎಂಬುದಾಗಿ ಓಸೀಡೀ ಇರುವ ವ್ಯಕ್ತಿಯೊಬ್ಬನಿಗೆ ಅನಿಸುತ್ತದೆ. ಅವು ಒತ್ತಾಯದಿಂದ ಒಳನುಗ್ಗಿ ಸ್ವಾಧೀನಪಡಿಸಿಕೊಳ್ಳುತ್ತವೆಯೊ ಎಂಬಂತಿದೆ.
ಪ್ರತಿಯೊಬ್ಬ ಮಾನವನು ಬೇಡವಾದ ಆಲೋಚನೆಗಳನ್ನು ಮತ್ತು ಪ್ರೇರಣೆಗಳನ್ನು ಆಗಾಗ ಅನುಭವಿಸುತ್ತಾನೆ. ಆದರೆ ಓಸೀಡೀಯಲ್ಲಿ ಇವು ಎಷ್ಟು ಪಟ್ಟುಹಿಡಿಯುವಂತಹ ಮತ್ತು ಆವರ್ತಿಸಿ ಬರುವಂತಹವುಗಳಾಗುತ್ತವೆಂದರೆ, ಅವು ಸಾಮಾನ್ಯ ಜೀವನವನ್ನು ಭಂಗಮಾಡಿ, ಕೆಲವೊಮ್ಮೆ ಖಿನ್ನತೆಯಲ್ಲಿ ಪರಿಣಮಿಸುತ್ತಾ, ತೀವ್ರವಾದ ಕಿರಿಕಿರಿಯನ್ನುಂಟುಮಾಡುತ್ತವೆ. “ಸತತವಾದ ಮಾನಸಿಕ ಹೋರಾಟವು, ಆತ್ಮಹತ್ಯೆಯ ಕುರಿತು ಆಲೋಚಿಸುವಂತೆ ನನ್ನನ್ನು ಪ್ರೇರಿಸಿತು,” ಎಂಬುದಾಗಿ ಪೀಡಿತನೊಬ್ಬನು ಹೇಳುತ್ತಾನೆ. ತಬ್ಬಿಬ್ಬಾಗಿಸುವ ಈ ರೋಗದ ಕೆಲವು ರೋಗಲಕ್ಷಣಗಳನ್ನು ಪರಿಗಣಿಸಿರಿ.
ನೋಡುವುದು ನಂಬುವುದನ್ನು ಅರ್ಥೈಸುವುದಿಲ್ಲ
ಒಂದು ಉಬ್ಬಿನ ಮೇಲೆ ತನ್ನ ಕಾರನ್ನು ಬ್ರೂಸ್ ಚಲಾಯಿಸುವಾಗ, ನಿತ್ರಾಣಗೊಳಿಸುವಂತಹ ಒಂದು ಕಡುಭಯವು ಅವನನ್ನು ಭಾವಪರವಶಗೊಳಿಸುತ್ತದೆ. ‘ನಾನು ಈಗ ತಾನೇ ಒಬ್ಬ ಪಾದಚಾರಿಯನ್ನು ಕೆಡವಿದ್ದರೆ ಏನು?’ ಎಂದು ಅವನು ತನ್ನನ್ನು ಕೇಳಿಕೊಳ್ಳುತ್ತಾನೆ. ಅವನು “ಅಪರಾಧ”ದ ಸ್ಥಳಕ್ಕೆ ಹಿಂದಿರುಗಿ, ಕೇವಲ ಒಮ್ಮೆಯಲ್ಲ ಆದರೆ ಪದೇ ಪದೇ ಪರಿಶೀಲಿಸುವ ತನಕ, ಆ ಭಾವನೆಯು ಪ್ರಬಲವಾಗುತ್ತದೆ. ನಿಶ್ಚಯವಾಗಿ, ಬ್ರೂಸ್ ಗಾಯಗೊಂಡಿರುವ ಒಬ್ಬ ಪಾದಚಾರಿಯನ್ನು ಕಂಡುಕೊಳ್ಳುವುದಿಲ್ಲ. ಇನ್ನೂ ಅವನಿಗೆ ಖಾತರಿಯಾಗಿರುವುದಿಲ್ಲ! ಆದುದರಿಂದ ಅವನು ಮನೆಯನ್ನು ತಲಪಿದ ಕೂಡಲೇ, ಕೆಡವಿ ಪಲಾಯನ ಮಾಡಿದ ಒಂದು ಅಪಘಾತದ ವರದಿಗಳಿಗಾಗಿ ವಾರ್ತೆಗಳನ್ನು ವೀಕ್ಷಿಸುತ್ತಾನೆ. “ತಪ್ಪೊಪ್ಪಿಕೊಳ್ಳಲು” ಅವನು ಪೊಲೀಸರನ್ನು ಸಹ ಕರೆಯುತ್ತಾನೆ.
ಬ್ರೂಸ್ನಂತೆ, ಓಸೀಡೀ ಇರುವ ಅನೇಕರು ಸಂದೇಹಗಳಿಂದ ಬಾಧಿಸಲ್ಪಡುತ್ತಾರೆ: ‘ನಾನು ಯಾರನ್ನಾದರೂ ಗಾಯಗೊಳಿಸಿದೆನೊ? ನಾನು ಮನೆಯನ್ನು ಬಿಟ್ಟಾಗ ಸ್ಟೋವನ್ನು ಆಫ್ ಮಾಡಿದೆನೊ? ಮನೆಬಾಗಿಲಿಗೆ ಬೀಗ ಹಾಕಿದೆನೊ?’ ಹೆಚ್ಚಿನ ಜನರು ಆಗಾಗ ತದ್ರೀತಿಯ ಆಲೋಚನೆಗಳನ್ನು ಪಡೆಯುತ್ತಾರೆ, ಆದರೆ ಓಸೀಡೀ ಇರುವ ವ್ಯಕ್ತಿಯು ಪುನಃ ಪುನಃ ಪರಿಶೀಲಿಸಿದರೂ ಇನ್ನೂ ಸಂತೃಪ್ತಗೊಳ್ಳದಿರುವನು. ಡಾ. ಜೂಡಿತ್ ರ್ಯಾಪಪಾರ್ಟ್ ಬರೆಯುವುದು, “ಪರಿಶೀಲಿಸುತ್ತಾ ಇರುವ ನನ್ನ ರೋಗಿಗಳು, ‘ಜ್ಞಾನವು ಜ್ಞಾನೇಂದ್ರಿಯಗಳಿಂದ ಮಾತ್ರ ಬರುತ್ತದೆ,’ ಎಂದು ಹೇಳುವಂತೆ ತೋರುತ್ತದೆ. ಆದಕಾರಣ ಬಾಗಿಲಿನ ಗುಬುಟು ಮತ್ತೆ ಮತ್ತೆ ತಿರುಗಿಸಲ್ಪಡಬೇಕು; ಬೆಳಕನ್ನು ಮತ್ತೆ ಮತ್ತೆ ಆನ್ ಆಫ್ ಮಾಡಬೇಕು. ಈ ಕ್ರಿಯೆಗಳು ತತ್ಕ್ಷಣ ಮಾಹಿತಿಯನ್ನು ತರುತ್ತವೆ ಆದರೆ ಅದು ಅವರನ್ನು ಮನಗಾಣಿಸುವುದಿಲ್ಲ.”
ಸ್ವಚ್ಛತೆಯು ಸಾಕಷ್ಟು ಸ್ವಚ್ಛತೆಯಾಗಿರುವುದಿಲ್ಲ
ಚಾರ್ಲ್ಸ್ ಎಂಬ ಹೆಸರಿನ, ಒಬ್ಬ 14 ವರ್ಷ ಪ್ರಾಯದ ಹುಡುಗನು, ಸೂಕ್ಷ್ಮಾಣುಗಳ ಮೂಲಕ ಕಲುಷಿತಗೊಳ್ಳುವ ಭಯದಿಂದ ಗೀಳುಪೀಡಿತನಾಗಿದ್ದನು. ಅವನು ಮುಟ್ಟಬಹುದಾದ ಪ್ರತಿಯೊಂದು ವಸ್ತುವನ್ನು, ಅವನ ತಾಯಿಯು ರಬಿಂಗ್ ಆ್ಯಲ್ಕೊಹಾಲ್ನಿಂದ ಸ್ವಚ್ಛಮಾಡಬೇಕಿತ್ತು. ಇನ್ನೂ ಹೆಚ್ಚಾಗಿ, ಭೇಟಿಕಾರರು ರಸ್ತೆಯಿಂದ ಕಾಲುಷ್ಯವನ್ನು ಒಳತರುವರೆಂದು ಚಾರ್ಲ್ಸ್ ಭಯಪಟ್ಟನು.
ತನ್ನ ಬಟ್ಟೆಗಳನ್ನು ಒಗೆಯುವಾಗ ಫ್ರ್ಯಾನ್ ಭಯಪಟ್ಟಳು. “ನಾನು ಬಟ್ಟೆಗಳನ್ನು ಹೊರಗೆ ತೆಗೆಯುವಾಗ, ಅವು ವಾಷಿಂಗ್ ಮಷೀನ್ನ ಪಕ್ಕವನ್ನು ಮುಟ್ಟಿದರೆ, ಅವು ಪುನಃ ಒಗೆಯಲ್ಪಡಲೇಬೇಕಿತ್ತು,” ಎಂದು ಆಕೆ ಹೇಳುತ್ತಾಳೆ.
ಚಾರ್ಲ್ಸ್ ಮತ್ತು ಫ್ರ್ಯಾನ್ಳಂತೆ, ಓಸೀಡೀ ಇರುವ ಅನೇಕರಿಗೆ ಸೂಕ್ಷ್ಮಾಣುಗಳು ಮತ್ತು ಕಾಲುಷ್ಯದ ಮೇಲೆ ಕೇಂದ್ರೀಕರಿಸುವಂತಹ ಗೀಳುಗಳಿವೆ. ಇದು ಅತಿರೇಕದ ವೃಷ್ಟಿ ಸ್ನಾನ ಅಥವಾ ಕೈ ತೊಳೆಯುವಿಕೆಯಲ್ಲಿ—ಕೆಲವೊಮ್ಮೆ ಬೊಕ್ಕೆಗಳನ್ನು ಉಂಟುಮಾಡುವ ಮಟ್ಟಿಗೆ—ಪರಿಣಮಿಸಬಹುದು, ಆದರೂ ಪೀಡಿತನಿಗೆ ಇನ್ನೂ ಸ್ವಚ್ಛತೆಯ ಅನಿಸಿಕೆ ಆಗುವುದಿಲ್ಲ.
ಮನಸ್ಸಿನ ಮೂಲಕ ಹಿಂಸಿಸಲ್ಪಡುವುದು
ಇಲೇನ್, ದೇವರ ಕಡೆಗೆ ಅನೈಚ್ಛಿಕವಾದ ಅನಾದರದ ಆಲೋಚನೆಗಳಿಂದ ಬಾಧಿಸಲ್ಪಡುತ್ತಾಳೆ. “ಇವು ನಾನೆಂದೂ ಉದ್ದೇಶಿಸಸಾಧ್ಯವಿಲ್ಲದ ವಿಷಯಗಳು ಮತ್ತು ಉದ್ದೇಶಿಸುವುದಕ್ಕಿಂತಲೂ ಸಾಯಲು ಹೆಚ್ಚು ಇಷ್ಟಪಡುವೆನು,” ಎಂದು ಆಕೆ ಹೇಳುತ್ತಾಳೆ. ಆದರೂ, ಆ ಆಲೋಚನೆಗಳು ಪಟ್ಟುಹಿಡಿದಿರುತ್ತವೆ. “ಕೆಲವೊಮ್ಮೆ ಪ್ರತಿದಿನ ಈ ಆಲೋಚನೆಗಳನ್ನು ನಿಯಂತ್ರಿಸಲು ಹೆಣಗಾಡುತ್ತಾ, ರಾತ್ರಿಯಲ್ಲಿ ನಾನು ಅಕ್ಷರಶಃ ಬಳಲಿಹೋಗಿರುತ್ತೇನೆ.”
ತನ್ನ ತಪ್ಪುಗಳ ಕುರಿತಾಗಿ, ಅಪರಾಧಿತನದ ಅನಿಸಿಕೆಗಳ ಮೂಲಕ ಪ್ರಚೋದಿಸಲ್ಪಟ್ಟ “ಹರಕೆಗಳನ್ನು” ಸ್ಟೀವನ್ ದೇವರಿಗೆ ಮಾಡುತ್ತಾನೆ. “ಈ ಪ್ರವೃತ್ತಿಯು ನನ್ನನ್ನು ದುಃಖಪಡಿಸುತ್ತದೆ ಏಕೆಂದರೆ ಅದು ನನ್ನ ಚಿತ್ತದ ವಿರುದ್ಧ ಬರುವಂತೆ ತೋರುತ್ತದೆ” ಎಂದು ಅವನು ಹೇಳುತ್ತಾನೆ. “ತದನಂತರ, ವಾಗ್ದಾನಿಸಿರುವುದನ್ನು ನೆರವೇರಿಸುವಂತೆ ನನ್ನ ಮನಸ್ಸಾಕ್ಷಿಯು ನನ್ನನ್ನು ಒತ್ತಾಯಿಸುತ್ತದೆ. ಇದರಿಂದಾಗಿ, ಬಹಳಷ್ಟು ಭಾವಾತ್ಮಕ ಮೌಲ್ಯವನ್ನು ಪಡೆದಿದ್ದ ಯಾವುದೊ ಒಂದು ವಸ್ತುವನ್ನು ನಾಶಪಡಿಸುವಂತೆ ನಾನೊಮ್ಮೆ ಒತ್ತಾಯಿಸಲ್ಪಟ್ಟೆ.”
ಇಲೇನ್ ಮತ್ತು ಸ್ಟೀವನ್—ಇಬ್ಬರಿಗೂ—ಬಹುಮಟ್ಟಿಗೆ ಮನಸ್ಸಿನಲ್ಲಿ ಕಾರ್ಯ ನೆರವೇರಿಸುವ ಗೀಳುಗಳಿವೆ. ಅವರ ರೋಗಲಕ್ಷಣಗಳು ಸುಲಭವಾಗಿ ಗಮನಕ್ಕೆ ಬಾರದಿದ್ದರೂ, ಗೀಳುಪೀಡಿತ ಆಲೋಚನೆಗಳಿರುವವರು ಅಪರಾಧಿತನ ಮತ್ತು ಭಯದ ಚಕ್ರದಲ್ಲಿ ಬಂಧಿಸಲ್ಪಟ್ಟಿರುತ್ತಾರೆ.
ಇವು ಓಸೀಡೀಯ ಅನೇಕ ರೋಗಲಕ್ಷಣಗಳಲ್ಲಿ ಕೇವಲ ಕೆಲವಾಗಿವೆ.c ಈ ಕಾಯಿಲೆಯನ್ನು ಯಾವುದು ಉಂಟುಮಾಡುತ್ತದೆ? ಅದನ್ನು ಹೇಗೆ ಪರಿಹರಿಸಸಾಧ್ಯವಿದೆ?
ನಿಯಂತ್ರಿಸಸಾಧ್ಯವಿಲ್ಲದ್ದನ್ನು ನಿಯಂತ್ರಿಸುವುದು
ಒಬ್ಬ ವೈದ್ಯನು ಓಸೀಡೀ ವರ್ತನೆಯನ್ನು, ಇಂದ್ರಿಯ ಸಂಬಂಧವಾದ ಮಾಹಿತಿಯು ದಾಖಲಾಗದೆ, “ಕಾರ್ಯಕ್ರಮವು ಪುನಃ ಪುನಃ ನುಡಿಸಲ್ಪಡುವ ಮಿದುಳಿನ ಮಾರ್ಗ ಸಂಕೋಚ”ದ ಪರಿಣಾಮವೆಂದು ವರ್ಣಿಸುತ್ತಾನೆ. ಈ ಕುಣಿಕೆಯನ್ನು ಯಾವುದು ಉಂಟುಮಾಡುತ್ತದೆ? ಯಾರೊಬ್ಬರಿಗೂ ಖಚಿತವಾಗಿ ಹೇಳಸಾಧ್ಯವಿಲ್ಲ. ಸಿರಟೋನಿನ್ ಎಂಬ ನರವಾಹಕವು ಒಳಗೊಂಡಿರುವಂತೆ ತೋರುತ್ತದೆ, ಆದರೆ ಮಿದುಳಿನ ಬೇರೆ ಅಂಶಗಳು ಸಹ ಪರಿಗಣಿಸಲ್ಪಡಲಾಗುತ್ತಿವೆ. ಬಹುಶಃ ಉತ್ಪತ್ತಿ ಸಂಬಂಧಿತವಾದೊಂದು ದೇಹಸ್ಥಿತಿಯ ಸಂಯೋಗದೊಂದಿಗೆ ಆರಂಭಿಕ ಜೀವಿತ ಅನುಭವಗಳು ಓಸೀಡೀಯನ್ನು ಜಾಗೃತಗೊಳಿಸಬಹುದೆಂದು ಕೆಲವರು ಹೇಳುತ್ತಾರೆ.
ಆದರೆ, ಕಾರಣವು ಏನೇ ಆಗಿರಲಿ, ಒಂದು ವಿಷಯವು ಸ್ಪಷ್ಟವಾಗಿದೆ: ಓಸೀಡೀ ಇರುವವರಿಗೆ ತೊಳೆಯುವುದನ್ನು ಅಥವಾ ಪರಿಶೀಲಿಸುವುದನ್ನು ನಿಲ್ಲಿಸುವಂತೆ ಸುಮ್ಮನೆ ಹೇಳುವುದು ಬಹುಶಃ ವಿಫಲವಾಗುವುದು. ಸಂಯಮಶಕ್ತಿಗಿಂತ ಹೆಚ್ಚಿನದ್ದು ಒಳಗೊಂಡಿದೆ.
ಔಷಧವು ಅನೇಕರಿಗೆ ಸಹಾಯಕಾರಿಯಾಗಿ ಪರಿಣಮಿಸಿದೆ. ಮತ್ತೊಂದು ವಿಧವು, ರೋಗಿಯನ್ನು ಭಯಪಡುವಂತಹ ಸನ್ನಿವೇಶಕ್ಕೆ ಒಡ್ಡುತ್ತಾ, ತದನಂತರ ಸಾಮಾನ್ಯವಾದ ಪ್ರತಿಕ್ರಿಯೆಯನ್ನು ತಡೆಯುವುದನ್ನು ಒಳಗೊಳ್ಳುತ್ತದೆ. ಉದಾಹರಣೆಗೆ, ತೊಳೆಯುವ ಸಂಸ್ಕಾರಗಳಿರುವ ಒಬ್ಬ ವ್ಯಕ್ತಿಯು, ಹೊಲಸಾಗಿರುವ ಯಾವುದನ್ನೊ ಹಿಡಿಯುವಂತೆ ಮತ್ತು ತದನಂತರ ತೊಳೆಯುವುದರಿಂದ ತಡೆಯಲ್ಪಡುವಂತೆ ಕೇಳಿಕೊಳ್ಳಲ್ಪಡುವನು. ನಿಶ್ಚಯವಾಗಿ, ಅಂತಹ ಚಿಕಿತ್ಸೆಯು ಹಗಲು ರಾತ್ರಿಯಾಗುವುದರೊಳಗೆ ಒಬ್ಬನನ್ನು ಗುಣಪಡಿಸಲಾರದು. ಆದರೆ ಪಟ್ಟುಹಿಡಿಯುವಿಕೆಯೊಂದಿಗೆ ಅದು ಉಪಶಮನವನ್ನು ಒದಗಿಸಬಲ್ಲದೆಂದು ಕೆಲವರಿಗೆ ಅನಿಸುತ್ತದೆ.
ಕನಿಷ್ಠ ಪಕ್ಷ ಕೆಲವೊಂದು ವಿದ್ಯಮಾನಗಳಲ್ಲಿ, ಓಸೀಡೀ ಆರಂಭಿಕ ಜೀವಿತ ಅನುಭವಗಳಲ್ಲಿ ಬೇರೂರಿರಬಹುದೆಂಬ ಸಾಧ್ಯತೆಯನ್ನೂ ಪರಿಣತರು ಸಂಶೋಧಿಸಿದ್ದಾರೆ. ದುರುಪಚರಿಸಲ್ಪಟ್ಟ ಅನೇಕ ಮಕ್ಕಳು, ಅಂತರ್ಗತವಾಗಿ ಅಯೋಗ್ಯ ಅಥವಾ ಹೊಲಸಾದ ಅನಿಸಿಕೆಯೊಂದಿಗೆ ಬೆಳೆಯುತ್ತಾರೆಂದು ಮತ್ತು ಇವರಲ್ಲಿ ಕೆಲವರು ತರುವಾಯ ಆಂತರಿಕ ನಿರ್ಬಂಧಿತ ತೊಳೆಯುವ ಸಂಸ್ಕಾರಗಳನ್ನು ವಿಕಸಿಸಿಕೊಂಡಿದ್ದಾರೆಂಬುದನ್ನು ಗಮನಿಸಲಾಗಿದೆ.
ಗೀಳುಗಳಿಂದ ಮತ್ತು ನಿರ್ಬಂಧಗಳಿಂದ ಉಪಶಮನ
ನೀವು ಓಸೀಡೀ ಪೀಡಿತರಾಗಿದ್ದರೆ, ನೀವು ಭಿನ್ನರಾಗಿದ್ದೀರೆಂದು ಅಥವಾ ಬಹುಶಃ ಹುಚ್ಚರಾಗುತ್ತಿದ್ದೀರೆಂದು ಎಣಿಸಬೇಡಿ. “ತಮ್ಮ ವಿಶೇಷವಾದ ಭಯಗಳನ್ನು ಬಿಟ್ಟರೆ, ಓಸೀಡೀ ಇರುವ ಜನರು ತಮ್ಮ ಜೀವಿತಗಳ ಇತರ ಎಲ್ಲ ಕ್ಷೇತ್ರಗಳಲ್ಲಿ ಇನ್ನೂ ನೈಜತೆಯ ಅರಿವುಳ್ಳವರಾಗಿ ಉಳಿಯುತ್ತಾರೆ” ಎಂಬುದಾಗಿ ಡಾ. ಲೀ ಬ್ಯಾಅರ್ ಬರೆಯುತ್ತಾರೆ. ನಿಮಗೆ ಸಹಾಯವು ನೀಡಲ್ಪಡಸಾಧ್ಯವಿದೆ! ಓಸೀಡೀ, ಅಪರಿಪೂರ್ಣತೆಯ ಒಂದು ಉತ್ಪನ್ನವಾಗಿದೆ ಎಂಬುದನ್ನು ಜ್ಞಾಪಕದಲ್ಲಿಡಿ. ಅದು ನೈತಿಕ ಬಲಹೀನತೆ ಅಥವಾ ಆತ್ಮಿಕ ಸೋಲಿನ ಚಿಹ್ನೆಯಾಗಿರುವುದಿಲ್ಲ! ಅದು ದೇವರ ಅಪ್ರಸನ್ನತೆಯನ್ನೂ ಸೂಚಿಸುವುದಿಲ್ಲ. “ಯೆಹೋವನು ಕನಿಕರವೂ ದಯೆಯೂ ದೀರ್ಘಶಾಂತಿಯೂ ಪೂರ್ಣಪ್ರೀತಿಯೂ ಉಳ್ಳವನು. ಆತನು ನಮ್ಮ ಪ್ರಕೃತಿಯನ್ನು ಬಲ್ಲನು; ನಾವು ಧೂಳಿಯಾಗಿದ್ದೇವೆಂಬದನ್ನು ನೆನಪುಮಾಡಿಕೊಳ್ಳುತ್ತಾನೆ.”—ಕೀರ್ತನೆ 103:8, 14.
ಆದರೆ ಗೀಳುಪೀಡಿತ ಆಲೋಚನೆಗಳು ಪೂಜ್ಯಭಾವವಿಲ್ಲದ್ದೂ ನಿಂದಾತ್ಮಕವಾದದ್ದೂ ಆಗಿ ತೋರುವುದಾದರೆ, ಆಗೇನು? ಓಸೀಡೀಯೊಂದಿಗೆ, ಅಸಹ್ಯಕರ ಆಲೋಚನೆಗಳು ಅಪರಾಧಿತನವನ್ನು ಉದ್ರೇಕಿಸುತ್ತವೆ ಮತ್ತು ಅಪರಾಧಿತನವು ಇನ್ನೂ ಹೆಚ್ಚಿನ ಅಸಹ್ಯಕರ ಆಲೋಚನೆಗಳನ್ನು ಉದ್ರೇಕಿಸಬಹುದು. “ನಾನು ಬಹಳ ಬೇಗ ಸಿಟ್ಟಿಗೇಳುವಂತೆ ಅದು ಮಾಡುತ್ತದೆ,” ಎಂದು ಇಲೇನ್ ಹೇಳುತ್ತಾಳೆ. “ಯೆಹೋವನು ನನ್ನೊಂದಿಗೆ ಕೋಪಗೊಂಡಿರಬಹುದೆಂದು ಎಲ್ಲ ಸಮಯ ನೆನೆಸುತ್ತಾ, ಅದು ನನ್ನನ್ನು ಉದ್ವೇಗಗೊಳಿಸುತ್ತದೆ.” ತಮ್ಮ ಯೋಚನೆಗಳು ಅಕ್ಷಮ್ಯ ಪಾಪಕ್ಕೆ ಸಮವಾಗಿವೆ ಎಂಬುದಾಗಿ ಸಹ ಕೆಲವರಿಗೆ ಅನಿಸಬಹುದು!
ಹಾಗಿದ್ದರೂ, ಅಕ್ಷಮ್ಯ ಪಾಪ—ದೇವರ ಪವಿತ್ರಾತ್ಮದ ವಿರುದ್ಧವಾಗಿ ಮಾಡಲ್ಪಟ್ಟ ಪಾಪ—ದ ಕುರಿತು ಯೇಸುವಿನ ಹೇಳಿಕೆಗಳು, ಸ್ಪಷ್ಟವಾಗಿ ದುಡುಕಿನ, ಗೀಳುಪೀಡಿತ ಆಲೋಚನೆಗಳನ್ನು ಸೂಚಿಸುತ್ತಿರಲಿಲ್ಲ. (ಮತ್ತಾಯ 12:31, 32) ಯೇಸು ತನ್ನ ಹೇಳಿಕೆಗಳನ್ನು ಫರಿಸಾಯರಿಗೆ ನಿರ್ದೇಶಿಸಿದನು. ಅವರ ಆಕ್ರಮಣಗಳು ಪೂರ್ಣವಾಗಿ ಉದ್ದೇಶಪೂರ್ವಕವಾಗಿದ್ದವೆಂದು ಅವನಿಗೆ ಗೊತ್ತಿತ್ತು. ಅವರ ಉದ್ದೇಶಪೂರ್ವಕ ಕ್ರಿಯೆಗಳು ದ್ವೇಷದಿಂದ ತುಂಬಿದ ಹೃದಯಗಳಿಂದ ಬಂದವು.
ನಿಶ್ಚಯವಾಗಿ, ತಾನು ದೇವರ ಮನನೋಯಿಸಿದ್ದೇನೆಂಬ ಚಿಂತೆಯು, ಒಬ್ಬನು ಅಕ್ಷಮ್ಯವಾಗಿ ಪಾಪ ಮಾಡಿಲ್ಲ ಎಂಬುದಕ್ಕೆ ಪ್ರಾಯಶಃ ಪುರಾವೆಯಾಗಿರಬಹುದು. (ಯೆಶಾಯ 66:2) ಇನ್ನೂ ಹೆಚ್ಚಾಗಿ, ಸೃಷ್ಟಿಕರ್ತನು ಈ ಕಾಯಿಲೆಯನ್ನು ಅರ್ಥಮಾಡಿಕೊಳ್ಳುತ್ತಾನೆಂದು ತಿಳಿಯುವುದು ಆಶ್ವಾಸನೆ ನೀಡುವಂತಹದ್ದಾಗಿದೆ. ಆತನು ಕರುಣಾಭರಿತನು ಮತ್ತು “ಕ್ಷಮಿಸಲು ಸಿದ್ಧನು” ಆಗಿದ್ದಾನೆ. (ಕೀರ್ತನೆ 86:5, NW; 2 ಪೇತ್ರ 3:9) ನಮ್ಮ ಸ್ವಂತ ಹೃದಯಗಳು ನಮ್ಮನ್ನು ಖಂಡಿಸುವಾಗಲೂ, “ದೇವರು ನಮ್ಮ ಹೃದಯಕ್ಕಿಂತ ದೊಡ್ಡವನಾಗಿದ್ದು ಎಲ್ಲವನ್ನೂ ಬಲ್ಲವನಾಗಿದ್ದಾನೆ.” (1 ಯೋಹಾನ 3:20) ಯಾವ ಕಾಯಿಲೆಯ ಮೇಲೆ ಒಬ್ಬನಿಗೆ ಸೀಮಿತವಾದ ನಿಯಂತ್ರಣವಿದೆಯೊ, ಅದರಿಂದ ಬರುವ ಆಲೋಚನೆಗಳು ಮತ್ತು ಪ್ರೇರಣೆಗಳ ಮಟ್ಟವು ಆತನಿಗೆ ಗೊತ್ತಿದೆ. ಇದನ್ನು ಗ್ರಹಿಸುವ ಓಸೀಡೀ ಪೀಡಿತನು, ಹೀಗೆ ತನ್ನನ್ನು ಅನಾವಶ್ಯಕವಾದ ಅಪರಾಧಿತನದಿಂದ ಹಿಂಸಿಸಿಕೊಳ್ಳುವುದರಿಂದ ತಡೆಯಸಾಧ್ಯವಿದೆ.
ಸಕಲ ಶಾರೀರಿಕ, ಮಾನಸಿಕ, ಹಾಗೂ ಭಾವನಾತ್ಮಕ ಬಾಧೆಗಳಿಂದ ಪರಿಹಾರವಿರುವ ಒಂದು ಹೊಸ ಲೋಕವನ್ನು ಯೆಹೋವನು ವಾಗ್ದಾನಿಸಿದ್ದಾನೆಂಬುದರ ಕುರಿತು ನಾವೆಷ್ಟು ಕೃತಜ್ಞರಾಗಿರಸಾಧ್ಯವಿದೆ! (ಪ್ರಕಟನೆ 21:1-4) ಈ ನಡುವೆ, ಈ ಕಾಯಿಲೆಯನ್ನು ತಾಳಿಕೊಳ್ಳಬೇಕಾದವರು ತಮ್ಮ ಕಷ್ಟಾನುಭವವನ್ನು ಕಡಮೆ ಮಾಡಲು ಪ್ರಾಯೋಗಿಕ ಹೆಜ್ಜೆಗಳನ್ನು ತೆಗೆದುಕೊಳ್ಳಬಲ್ಲರು.
[ಅಧ್ಯಯನ ಪ್ರಶ್ನೆಗಳು]
a ಈ ಲೇಖನದಲ್ಲಿನ ಕೆಲವು ಹೆಸರುಗಳು ಬದಲಾಯಿಸಲ್ಪಟ್ಟಿವೆ.
b ಎಚ್ಚರ! ಪತ್ರಿಕೆಯು ಯಾವುದೇ ವಿಶೇಷವಾದ ಚಿಕಿತ್ಸಾಕ್ರಮವನ್ನು ಸಮರ್ಥಿಸುವುದಿಲ್ಲ. ಈ ಕಾಯಿಲೆಯಿರುವ ಕ್ರೈಸ್ತರು, ತಾವು ಬೆನ್ನಟ್ಟುವ ಯಾವುದೇ ಚಿಕಿತ್ಸಾಕ್ರಮವು ಬೈಬಲ್ ತತ್ವಗಳೊಂದಿಗೆ ಘರ್ಷಿಸುವುದಿಲ್ಲವೆಂಬುದರ ಕುರಿತು ಜಾಗರೂಕರಾಗಿರಲು ಬಯಸುವರು.
c ಇತರ ಹಲವಾರು ರೋಗಲಕ್ಷಣಗಳಲ್ಲಿ ಕೆಲವು, ಎಣಿಸುವುದನ್ನು ಅಥವಾ ಅತ್ಯಧಿಕವಾಗಿ ಕೂಡಿಡುವುದನ್ನು ಅಥವಾ ಸಮರೂಪತೆಯೊಂದಿಗಿನ ಗೀಳನ್ನು ಒಳಗೊಳ್ಳುತ್ತವೆ.
[ಪುಟ 33 ರಲ್ಲಿರುವ ಚೌಕ]
ಬೆಂಬಲವನ್ನು ಒದಗಿಸಲು
ಒಬ್ಬ ಮಿತ್ರ ಅಥವಾ ಕುಟುಂಬದ ಸದಸ್ಯನೋಪಾದಿ, ಗೀಳುಪೀಡಿತ ಆಂತರಿಕ ನಿರ್ಬಂಧ ಕಾಯಿಲೆ (ಓಸೀಡೀ)ಯೊಂದಿಗೆ ಹೋರಾಡುತ್ತಿರುವ ವ್ಯಕ್ತಿಯೊಬ್ಬನಿಗೆ ಬೆಂಬಲ ನೀಡಲು ನೀವು ಹೆಚ್ಚನ್ನು ಮಾಡಬಲ್ಲಿರಿ.
• ಪ್ರಥಮವಾಗಿ, ನಿಮ್ಮ ಸ್ವಂತ ಮನೋಭಾವವನ್ನು ಪರಿಶೀಲಿಸಿಕೊಳ್ಳಿರಿ. ಪೀಡಿತನು ಬಲಹೀನನು, ಸೋಮಾರಿಯು, ಅಥವಾ ಹಟಮಾರಿಯೆಂದು ನೀವು ನಂಬುವುದಾದರೆ, ಅವನು ಅಥವಾ ಅವಳು ಇದನ್ನು ಸ್ಪಷ್ಟವಾಗಿ ಗ್ರಹಿಸುವರು ಮತ್ತು ಉತ್ತಮಗೊಳ್ಳಲು ಪ್ರಚೋದಿಸಲ್ಪಡರು.
• ಪೀಡಿತನೊಂದಿಗೆ ಮಾತಾಡಿರಿ. ಅವನು ಅಥವಾ ಅವಳು ಯಾವ ವಿಷಯದೊಂದಿಗೆ ಕಾದಾಡುತ್ತಿದ್ದಾರೆಂಬುದನ್ನು ಕಲಿಯಿರಿ. ತೆರೆದ ಹೃದಯದವನೂ ಪ್ರಾಮಾಣಿಕನೂ ಆದ ಒಬ್ಬ ಆಪ್ತಮಿತ್ರನನ್ನು ಪಡೆದಿರುವುದು, ಅನೇಕ ವೇಳೆ ಓಸೀಡೀ ರೋಗಲಕ್ಷಣಗಳನ್ನು ನಿಯಂತ್ರಿಸುವ ಕಡೆಗೆ ಪೀಡಿತನ ಪ್ರಥಮ ಹೆಜ್ಜೆಯಾಗಿದೆ.—ಜ್ಞಾನೋಕ್ತಿ 17:17.
• ಹೋಲಿಕೆಗಳನ್ನು ಮಾಡಬೇಡಿರಿ. ಪೀಡಿತರಲ್ಲದವರಿಂದ ಅನುಭವಿಸಲ್ಪಡದಂತಹ ತಡೆಯಲಾಗದ ಪ್ರಚೋದನೆಗಳನ್ನು ಓಸೀಡೀ ಉತ್ಪಾದಿಸುತ್ತದೆ. ಆದುದರಿಂದ, ನೀವು ನಿಮ್ಮ ಮನಸ್ಸಿನ ಆವೇಗಗಳೊಂದಿಗೆ ಹೇಗೆ ನಿಭಾಯಿಸುತ್ತೀರೆಂಬುದನ್ನು ಹೇಳುವುದು ಸಾಮಾನ್ಯವಾಗಿ ಅಪ್ರಭಾವಕಾರಿಯಾಗಿದೆ.—ಜ್ಞಾನೋಕ್ತಿ 18:13ನ್ನು ಹೋಲಿಸಿರಿ.
• ವಾಸ್ತವಿಕವಾದ ಲಕ್ಷ್ಯಗಳನ್ನು ಇಟ್ಟು, ಅವುಗಳನ್ನು ಪೂರೈಸುವಂತೆ ಪೀಡಿತನಿಗೆ ಸಹಾಯ ಮಾಡಿರಿ. ಒಂದು ರೋಗಲಕ್ಷಣವನ್ನು ಆರಿಸಿಕೊಳ್ಳಿರಿ ಮತ್ತು ಅದನ್ನು ಜಯಿಸಲು ಲಕ್ಷ್ಯಗಳ ಒಂದು ಸರಣಿಯನ್ನು ರೂಪಿಸಿರಿ. ತಲಪಲು ತೀರ ಕಷ್ಟಕರವಾಗಿರದ ಲಕ್ಷ್ಯದೊಂದಿಗೆ ಆರಂಭಿಸಿರಿ. ಉದಾಹರಣೆಗೆ ಒಂದು ಲಕ್ಷ್ಯವು, ನಿರ್ದಿಷ್ಟಪಡಿಸಲಾದ ಸಮಯಾವಧಿಗಿಂತ ಹೆಚ್ಚು ಸಮಯ ವೃಷ್ಟಿಸ್ನಾನ ಮಾಡದೆ ಇರುವಂತಹದ್ದಾಗಿರಬಹುದು.
• ಅಭಿವೃದ್ಧಿಗಾಗಿ ಪ್ರಶಂಸೆಯನ್ನು ನೀಡಿರಿ. ಶ್ಲಾಘನೆಯು ಸರಿಯಾದ ವರ್ತನೆಯನ್ನು ಬಲಪಡಿಸುತ್ತದೆ. ಪ್ರಗತಿಯ ಪ್ರತಿಯೊಂದು ಹೆಜ್ಜೆ—ಅದು ಎಷ್ಟೇ ಚಿಕ್ಕದಾಗಿರಲಿ—ಮಹತ್ವದ್ದಾಗಿದೆ.—ಜ್ಞಾನೋಕ್ತಿ 12:25.
ಒಬ್ಬ ಓಸೀಡೀ ಪೀಡಿತನೊಂದಿಗೆ ಜೀವಿಸುವುದು, ಕುಟುಂಬ ಸದಸ್ಯರನ್ನು ಭಾವನಾತ್ಮಕವಾಗಿ ಬರಿದಾಗಿಸುವಂತಹದ್ದಾಗಿರಬಲ್ಲದು. ಆದುದರಿಂದ, ಮಿತ್ರರು ತಮಗೆ ಸಾಧ್ಯವಾದ ಯಾವುದೇ ಪ್ರಾಯೋಗಿಕ ವಿಧಗಳಲ್ಲಿ ಅರ್ಥಮಾಡಿಕೊಳ್ಳುವವರೂ ಬೆಂಬಲ ನೀಡುವವರೂ ಆಗಿರಬೇಕು.—ಜ್ಞಾನೋಕ್ತಿ 18:24ಬಿ.
[ಪುಟ 32 ರಲ್ಲಿರುವ ಚಿತ್ರಗಳು]
ಅತಿರೇಕದ ತೊಳೆಯುವಿಕೆ ಮತ್ತು ಪರಿಶೀಲನೆ—ಓಸೀಡೀಯ ಎರಡು ರೋಗಲಕ್ಷಣಗಳು