ಆತನನ್ನು ಕಂಡುಕೊಳ್ಳುವಂತೆ ದೇವರು ನಮ್ಮನ್ನು ಅನುಮತಿಸಿದನು
ರಾಜ ದಾವೀದನು, ಆಧಿಪತ್ಯವನ್ನು ತನ್ನ ಮಗನಾದ ಸೊಲೊಮೋನನಿಗೆ ವಹಿಸಿಕೊಡಲು ಸಿದ್ಧನಾಗಿದ್ದಾಗ, ಅವನಿಗೆ ಈ ಸಲಹೆಯನ್ನು ನೀಡಿದನು: “ನಿನ್ನ ತಂದೆಯ ದೇವರನ್ನು ಅರಿತುಕೊಂಡು ಸಂಪೂರ್ಣಹೃದಯದಿಂದಲೂ ಮನಸ್ಸಂತೋಷದಿಂದಲೂ ಆತನನ್ನೇ ಸೇವಿಸು; ಯೆಹೋವನು ಎಲ್ಲಾ ಹೃದಯಗಳನ್ನು ವಿಚಾರಿಸುವವನೂ ಎಲ್ಲಾ ಮನಸ್ಸಂಕಲ್ಪಗಳನ್ನು ಬಲ್ಲವನೂ ಆಗಿರುತ್ತಾನಲ್ಲಾ. ನೀನು ಆತನನ್ನು ಹುಡುಕುವದಾದರೆ ಆತನು ನಿನಗೆ ಸಿಕ್ಕುವನು; ಆತನನ್ನು ಬಿಟ್ಟರೆ ನಿನ್ನನ್ನು ಶಾಶ್ವತವಾಗಿ ತಳ್ಳಿಬಿಡುವನು.”—1 ಪೂರ್ವಕಾಲವೃತ್ತಾಂತ 28:9.
ನಮ್ಮ ವಿಷಯದಲ್ಲಿ ಇದು ಸತ್ಯವಾಗಿರುವುದನ್ನು ನಾವು ಕಂಡುಕೊಂಡೆವು. ನಾವು ದೇವರಿಗಾಗಿ ಹುಡುಕಿದೆವು, ಮತ್ತು ಅನೇಕ ಸುಳ್ಳು ಮಾರ್ಗಗಳೊಳಗೆ ತಿರುಗಿಸಲ್ಪಟ್ಟ ನಂತರವೇ, ಆತನನ್ನು ನಿಶ್ಚಿತವಾಗಿ ಕಂಡುಕೊಂಡೆವು. ನಮ್ಮ ಯೋಚನೆಗಳ ಒಲವುಗಳು, ಎಷ್ಟು ಬಲವಾಗಿ ಆತನ ಮೇಲೆ ಮತ್ತು ಆತನ ಸೇವೆಯ ಮೇಲೆ ಕೇಂದ್ರೀಕೃತವಾಗಿದ್ದವೆಂಬುದನ್ನು ಯೆಹೋವನು ವಿವೇಚಿಸಿದನೆಂದು ನಾವು ನಂಬುತ್ತೇವೆ, ಮತ್ತು ತಾನು ನಮ್ಮಿಂದ ಕಂಡುಕೊಳ್ಳಲ್ಪಡುವಂತೆ ಆತನು ಅನುಮತಿಸಿದನು. ಅದು ಹೇಗೆ ಸಂಭವಿಸಿತೆಂಬುದನ್ನು ಮುಂದಿನ ವೃತ್ತಾಂತವು ತೋರಿಸುತ್ತದೆ.
ನಾವು ಅಮೆರಿಕದ ಫ್ಲಾರಿಡದಲ್ಲಿ ಬೆಳೆಯಿಸಲ್ಪಟ್ಟ ನಾಲ್ಕು ಸಹೋದರರಾಗಿದ್ದೆವು. ಕುಟುಂಬವನ್ನು ಬೆಂಬಲಿಸಲು, ನಮ್ಮ ತಂದೆಯವರು ಒಬ್ಬ ಅಡಿಗೆಯವರೋಪಾದಿ, ದೀರ್ಘವಾದ ಸರದಿ ಕಾಲಗಳು ಕೆಲಸಮಾಡಿದರು, ತಾಯಿಯು ಮನೆಯನ್ನು ನಡೆಸುವವರಾಗಿದ್ದರು, ಮತ್ತು ನಾವು ನಾಲ್ಕು ಮಂದಿ ಹುಡುಗರು, ಕುಟುಂಬದ ವರಮಾನಕ್ಕೆ ಕೂಡಿಸಬಹುದಾದ ಯಾವುದೇ ಕೆಲಸವನ್ನು—ಹುಲ್ಲನ್ನು ಕತ್ತರಿಸುವುದು, ವಾರ್ತಾಪತ್ರಿಕೆಗಳನ್ನು ವಿತರಿಸುವುದು—ಕಂಡುಕೊಂಡೆವು. ತಾಯಿ, ಕ್ಯಾತೊಲಿಕ್ ಧರ್ಮದವರಾಗಿದ್ದರು ಮತ್ತು ತಂದೆಯವರು ಬ್ಯಾಪ್ಟಿಸ್ಟ್ ಪಂಥದವರಾಗಿದ್ದರು. ನಾವೆಲ್ಲರೂ ದೇವರಲ್ಲಿ ಮತ್ತು ಬೈಬಲನ್ನು ನಂಬಿದೆವಾದರೂ, ಅದರ ಕುರಿತು ಏನನ್ನೂ ಮಾಡಲಿಲ್ಲ, ಮತ್ತು ನಾವು ಚರ್ಚಿಗೆ ವಿರಳವಾಗಿ ಹೋದೆವು. ಅದು, ಶಾಂತಿ, ಬೆಲ್ ಬಾಟಮ್ ಜೀನ್ಸ್, ಉದ್ದವಾದ ಕೂದಲು, ಮತ್ತು ರಾಕ್ ಸಂಗೀತವು ಬಹಳ ಜನಪ್ರಿಯವಾಗಿದ್ದ, ಆರಂಭಿಕ 70ಗಳ ಸಮಯದಲ್ಲಾಗಿತ್ತು. ಇದೆಲ್ಲವು ನಮ್ಮ ಜೀವಿತಗಳನ್ನು ಪ್ರಭಾವಿಸಿತು.
ನಮ್ಮಲ್ಲಿ ಇಬ್ಬರಾದ, ಸ್ಕಾಟ್ ಮತ್ತು ಸ್ಟೀವ್—ಅನುಕ್ರಮವಾಗಿ 24 ಮತ್ತು 17 ವರ್ಷ ಪ್ರಾಯದವರು—1982ರ ತನಕ, ಬೈಬಲಿನಲ್ಲಿ ಗಂಭೀರವಾದ ಆಸಕ್ತಿಯನ್ನು ತೆಗೆದುಕೊಂಡು, ಕ್ಷೀಣವಾಗುತ್ತಿರುವ ಲೋಕ ಪರಿಸ್ಥಿತಿಗಳ ಕುರಿತು ಹೆಚ್ಚಿನ ಚಿಂತೆಯನ್ನು ಬೆಳೆಸಿಕೊಳ್ಳಲಿಲ್ಲ. ಸ್ಕಾಟ್ಗೆ ತನ್ನ ಸ್ವಂತ ಕಟ್ಟಡದ ವ್ಯಾಪಾರವಿತ್ತು. ಅದು ಲಾಭಕರವಾಗಿದ್ದ ಕಾರಣ, ನಾವು ಒಟ್ಟಿಗೆ ಒಂದು ವಾಸಸ್ಥಳಕ್ಕೆ ಸ್ಥಳಾಂತರಿಸಿದೆವು. ನಾವು ಹಳೆಯದಾದ ಅದೇ ಮದ್ಯಪಾನ ದೃಶ್ಯ ಮತ್ತು ಆ ರೀತಿಯ ಜೀವನದಿಂದ ಬೇಸತ್ತು ಹೋಗಿದ್ದೆವು ಮತ್ತು ಬೇರೆಲ್ಲಿಯಾದರೂ ಹೆಚ್ಚು ಆಕರ್ಷಕವೂ ಮನೋಹರವೂ ಆದ ಜೀವನ ರೀತಿಯು ಇರಬೇಕೆಂಬ ಅರಿವು ನಮಗಿತ್ತು. ಆತ್ಮಿಕ ವಿಷಯಗಳಿಗಾಗಿ ನಮ್ಮಲ್ಲಿ ಹಸಿವು ಹುಟ್ಟಲಾರಂಭಿಸಿತು. ಕ್ರಮವಾಗಿ ನಮ್ಮ ಬೈಬಲುಗಳನ್ನು ಓದುವುದು, ದೇವರ ವಾಕ್ಯದ ಹೆಚ್ಚಿನ ಜ್ಞಾನ ಮತ್ತು ಒಳನೋಟವನ್ನು ಬಯಸುವಂತೆ ನಮಗೆ ಸಹಾಯ ಮಾಡಿತು.
ಆದಿತ್ಯವಾರಗಳಂದು, ನಾವು ವಿಭಿನ್ನ ಚರ್ಚುಗಳಿಗೆ ಹೋಗಲು ತೊಡಗಿದೆವು. ಫ್ಲಾರಿಡದ ಲೇಕ್ ವರ್ತ್ನಲ್ಲಿನ ನಮ್ಮ ಮನೆಯ ಹತ್ತಿರವಿದ್ದ ಚರ್ಚುಗಳಿಗೆ ಹೋದಾಗ, 25 ನಿಮಿಷಗಳ ವರೆಗೆ ಪಾದ್ರಿಯು ಹಣ ಕೊಡುವುದರ ಬಗ್ಗೆ ಮಾತಾಡುತ್ತಿದ್ದನು. “ಉದಾರವಾಗಿ ಕೊಡಿರಿ, ಬಹಳ ಉದಾರವಾಗಿ ಕೊಡಿರಿ,” ಎಂದು ಭಾಷಣಕರ್ತನ ವೇದಿಕೆಯ ಮೇಲೆ ಬಗ್ಗುತ್ತ, ಪಾದ್ರಿಯು ಹೇಳುತ್ತಿದ್ದನು. ಅವರು ಅನೇಕ ವೇಳೆ, ಹಣದ ತಟ್ಟೆಯನ್ನು ಒಂದು ಕೂಟದಲ್ಲಿ ಮೂರು ಬಾರಿ ಸಾಗಿಸಿದರು, ಇದು, ಅನೇಕರು ಹಣವಿಲ್ಲದೆ ಚರ್ಚಿನಿಂದ ಮರಳಿಹೋಗುವಂತೆ ಮಾಡಿತು. ನಾವು ಅನೇಕ ಚರ್ಚುಗಳಿಗೆ ಹೋದೆವು, ಅವರಲ್ಲಿಯೂ ಸಂಗ್ರಹಣದ ತಟ್ಟೆಗಳು ಸಾಗಿಸಲ್ಪಡುವುದನ್ನು ಮತ್ತು ಸಾಮಾಜಿಕ ಗೋಷ್ಠಿಗಳು ನಡೆಸಲ್ಪಡುವುದನ್ನು ಮಾತ್ರ ನಾವು ಕಂಡುಕೊಂಡೆವು.
ಯೆಹೋವನ ಸಾಕ್ಷಿಗಳ ಬಗ್ಗೆ ಎಚ್ಚರಿಸಲ್ಪಟ್ಟದ್ದು
ಯಾವ ವಿಷಯಗಳನ್ನು ನಾವು ಮೂಲಭೂತ ಬೈಬಲ್ ಬೋಧನೆಗಳೆಂದು ನೆನೆಸಿದೆವೊ, ಅವುಗಳಲ್ಲಿ ನಾವು ಶಿಕ್ಷಣ ಪಡೆದು ಅವುಗಳನ್ನು ಸ್ವೀಕರಿಸಿದೆವು ಏಕೆಂದರೆ ಶಿಕ್ಷಕರು ವೃತ್ತಿಪರ ದೇವತಾ ಶಾಸ್ತ್ರಜ್ಞರಾಗಿದ್ದರು. ತರಗತಿಗಳಲ್ಲಿ ಒಂದು, ಅಮೆರಿಕದಲ್ಲಿರುವ ಪಂಥಗಳ ಕುರಿತಾಗಿತ್ತು, ಮತ್ತು ಪಟ್ಟಿಯ ಅಗ್ರಸ್ಥಾನದಲ್ಲಿ ಯೆಹೋವನ ಸಾಕ್ಷಿಗಳಿದ್ದರು. ಅವರು ಯೇಸುವನ್ನು ನಂಬಲಿಲ್ಲವೆಂದು, ತಮ್ಮ ಸ್ವಂತ ಬೈಬಲ್ ಅವರಿಗಿತ್ತೆಂದು, ಅವರು ಸ್ವರ್ಗಕ್ಕೆ ಹೋಗುವುದಿಲ್ಲವೆಂದು, ಯಾವ ನರಕವೂ ಇರಲಿಲ್ಲವೆಂಬುದನ್ನು ಅವರು ನಂಬಿದರೆಂದು, ನಾವು ಎಚ್ಚರಿಸಲ್ಪಟ್ಟೆವು. ನಿಶ್ಚಯವಾಗಿಯೂ, ಇದೆಲ್ಲವು, ಸಾಕ್ಷಿಗಳು ತಪ್ಪಾಗಿದ್ದರೆಂದು ನಾವು ತೀರ್ಮಾನಿಸುವಂತೆ ಮಾಡಿತು.
ಇಷ್ಟರೊಳಗೆ ನಮ್ಮಲ್ಲಿ ಬಲವಾದ ಹುರುಪಿತ್ತು ಆದರೆ ನಿಷ್ಕೃಷ್ಟವಾದ ಜ್ಞಾನಕ್ಕನುಸಾರವಾಗಿರಲಿಲ್ಲ. (ರೋಮಾಪುರ 10:2) ಯೇಸು, ಮತ್ತಾಯ 28:19, 20ರಲ್ಲಿ ಏನು ಹೇಳಿದನೆಂಬುದು ನಮಗೆ ತಿಳಿದಿತ್ತು—ನಾವು ಸುವಾರ್ತೆಯನ್ನು ಸಾರಬೇಕು ಮತ್ತು ಶಿಷ್ಯರನ್ನು ಮಾಡಬೇಕು. ಆ ಸಮಯದಲ್ಲಿ ನಾವು, ಬೈಬಲ್ ಟೌನ್ ಎಂಬುದಾಗಿ ಕರೆಯಲ್ಪಟ್ಟ, 2,000 ಸದಸ್ಯರಿದ್ದ ಒಂದು ಚರ್ಚನ್ನು ಹಾಜರಾಗುತ್ತಿದ್ದೆವು, ಅಲ್ಲಿ ನಾವು, 17ರಿಂದ 30ರ ಪ್ರಾಯದೊಳಗಿನ ಸುಮಾರು 100 ಮಂದಿ ಯುವ ಜನರ ಒಂದು ಗುಂಪಿನ ಭಾಗವಾಗಿದ್ದೆವು. ಯಾವುದಾದರೊಂದು ಬಗೆಯ ಸಾರುವಿಕೆಯನ್ನು ಅವರಿಂದ ಮಾಡಿಸಲು ಸ್ಕಾಟ್ ಪ್ರಯತ್ನಿಸಿದನು—ಆದರೆ ಸಫಲನಾಗಲಿಲ್ಲ.
ಆದುದರಿಂದ ನಮ್ಮ ಸ್ವಂತ ಸಾರುವ ಕಾರ್ಯಾಚರಣೆಯನ್ನು ನಾವು ಪ್ರಾರಂಭಿಸಿದೆವು. ಹಳೆಯ ವಸ್ತುಗಳನ್ನು ಮಾರುವ ಸ್ಥಳಿಕ ಸಂತೆಯಲ್ಲಿ, ಒಂದು ವೇದಿಕೆಯನ್ನು ಸ್ಥಾಪಿಸಿ, ಕಿರುಹೊತ್ತಗೆಗಳನ್ನು ಮತ್ತು ಬೈಬಲುಗಳನ್ನು ನೀಡುವ ವಿಚಾರ ಸ್ಕಾಟ್ನ ಮನಸ್ಸಿಗೆ ಬಂತು. ಆದುದರಿಂದ ನಾವು ಅದನ್ನೇ ಮಾಡಿದೆವು. ನಾವು ಸ್ಥಳಿಕ “ಕ್ರೈಸ್ತ” ಪುಸ್ತಕ ಅಂಗಡಿಗೆ ಹೋಗಿ, ಕಿರುಹೊತ್ತಗೆಗಳು ಹಾಗೂ ಬೈಬಲುಗಳ ಒಂದು ದೊಡ್ಡ ಸರಬರಾಯಿಯನ್ನು ಕೊಂಡುಕೊಂಡು, ಹಳೆಯ ವಸ್ತುಗಳನ್ನು ಮಾರುವ ಸಂತೆಗೆ ಹೋಗಿ, ಎರಡು ನಿಲವುಗಳನ್ನು ಸ್ಥಾಪಿಸಿ, ಅವುಗಳ ಮೇಲೆ ಪ್ಲೈವುಡ್ನ ಒಂದು ದೊಡ್ಡ ಹಲಗೆಯನ್ನು ಇರಿಸಿ, ನಮ್ಮ ಕಿರುಹೊತ್ತಗೆಗಳು ಮತ್ತು ಬೈಬಲುಗಳನ್ನು ಅವುಗಳ ಮೇಲಿಟ್ಟು, “ವಾಕ್ಯವನ್ನು ಕೇಳುವವರು ಮಾತ್ರವೇ ಆಗಿರದೆ, ಅದರ ಪ್ರಕಾರ ಮಾಡುವವ”ರಾಗಲು ನಾವು ಪ್ರಯತ್ನಿಸಿದೆವು.—ಯಾಕೋಬ 1:22, NW.
ಪ್ರತಿಯೊಂದು ವಾರವು ಗತಿಸಿದಂತೆ, ಹಳೆಯ ವಸ್ತುಗಳನ್ನು ಮಾರುವ ಸಂತೆಯ ಶುಶ್ರೂಷೆಗಳೆಂದು ಕರೆಯಲ್ಪಡುವ ಶುಶ್ರೂಷೆಗಳು ಬೆಳೆದವು. ನಾವು ಇಂಗ್ಲಿಷ್ ಹಾಗೂ ಸ್ಪ್ಯಾನಿಷ್ ಭಾಷೆಯ ಸಾಹಿತ್ಯವನ್ನು ನೀಡಿದೆವು. ಅಲ್ಲದೆ, ನಮ್ಮಲ್ಲಿ ಬೈಬಲುಗಳು, 30 ಬೇರೆ ಬೇರೆ ರೀತಿಯ ಕಿರುಹೊತ್ತಗೆಗಳು, ಮತ್ತು “ದೇವರು ನಿಮ್ಮನ್ನು ಪ್ರೀತಿಸುತ್ತಾನೆ,” ಎಂಬುದಾಗಿ ಹೇಳಿದ ಟೋಪಿಯ ಪಿನ್ಗಳೂ ಇದ್ದವು. ಸ್ವಲ್ಪ ಸಮಯದ ನಂತರ, ಟಿ ಶರ್ಟ್ಗಳ ಮೇಲೆ ಸಣ್ಣ ಬೈಬಲ್ ಸಂದೇಶಗಳನ್ನು—“ನಿಮ್ಮ ಬೈಬಲನ್ನು ನೀವು ಇಂದು ಓದಿದಿರೊ?,” “ನಾನು ಏಕೆ ಮುಗುಳು ನಗುತ್ತಿದ್ದೇನೆಂದು ನೀವು ಕುತೂಹಲ ಪಡುತ್ತೀರೊ? ನನ್ನ ಹೃದಯದಲ್ಲಿ ಯೇಸು ಇದ್ದಾನೆ,” ಮತ್ತು ಇಂತಹ ಅನೇಕ ಹೆಚ್ಚಿನ ಹೇಳಿಕೆಗಳನ್ನು ಮುದ್ರಿಸಲು, ಸ್ಕಾಟ್ ಒಂದು ಡೀಕ್ಯಾಲ್ (ಚಿತ್ರವನ್ನು ವರ್ಗಾಯಿಸುವ) ಯಂತ್ರವನ್ನು ಕೊಂಡುಕೊಂಡನು. ಒಂದು ಸಂದೇಶವು, ನಾಲ್ಕು ಕುದುರೆ ಸವಾರರ ಚಿತ್ರದೊಂದಿಗೆ “ಪ್ರಕಟನೆ” ಎಂಬುದಾಗಿ ಹೇಳಿತು.
ಆ ಟಿ ಶರ್ಟ್ಗಳನ್ನು ಎಲ್ಲೆಡೆಯೂ ಧರಿಸುವ ಮೂಲಕ, ನಾವು ಮೌನವಾದೊಂದು ಸಾಕ್ಷಿಯನ್ನು ಕೊಡುತ್ತಿದ್ದೇವೆಂದು ನಾವು ನೆನೆಸಿದೆವು. ಪ್ರತಿ ಶನಿವಾರ ಹಾಗೂ ಆದಿತ್ಯವಾರ, ಬೆಳಗ್ಗೆ 8ರಿಂದ ಮಧ್ಯಾಹ್ನ 1 ಗಂಟೆಯ ತನಕ, ನಮ್ಮ ಹಳೆಯ ವಸ್ತುಗಳನ್ನು ಮಾರುವ ಸಂತೆಯ ಶುಶ್ರೂಷೆಗಳ ಪುರಾವೆಯನ್ನು ಒಬ್ಬನು ನೋಡಬಹುದಿತ್ತು. ವಾಹನ ನಿಲ್ದಾಣ ಸ್ಥಳದ ಉದ್ದಕ್ಕೂ ನೀವು ನಡೆಯುತ್ತಿದ್ದರೆ, ಮತ್ತು ಕಾರುಗಳ ಮೇಲೆ ಕಿರುಹೊತ್ತಗೆಗಳನ್ನು ನೋಡಿದರೆ, ಆ ಕಿರುಹೊತ್ತಗೆಗಳನ್ನು ಅಲ್ಲಿ ಹಾಕಿದವರು ನಾವೇ. ಎಲ್ಲ ಸಾಹಿತ್ಯವು ದಾನದ ಆಧಾರದ ಮೇಲಿತ್ತಾದರೂ, ಸ್ವಲ್ಪ ಹಣವು ಮಾತ್ರ ದಾನವಾಗಿ ಬಂತು. ಒಂದು ವರ್ಷ, ನಾವು ಆ ವರ್ಷದ ವೆಚ್ಚಗಳನ್ನು ಕೂಡಿಸಿದೆವು, ಅವು 10,000 ಡಾಲರುಗಳಿಗಿಂತಲೂ ಹೆಚ್ಚಾಗಿದ್ದವು.
ಯೆಹೋವನ ಸಾಕ್ಷಿಗಳಲ್ಲಿ ಒಬ್ಬರನ್ನು ನಾವು ಸಂಧಿಸುತ್ತೇವೆ
ಒಂದು ಸಮಯ, ನಾವು ಬೊನೀಟಾ ಸ್ಪ್ರಿಂಗ್ಸ್ನ ತೀರಗಳಲ್ಲೊಂದರಲ್ಲಿ ಈಜುತ್ತಿದ್ದಾಗ, ವಯಸ್ಸಾದ ಒಬ್ಬ ಮನುಷ್ಯನು ನಮ್ಮನ್ನು ಸಮೀಪಿಸಿದನು, ಮತ್ತು ನಮ್ಮ ಟ್ರಕ್ಕಿನ ಮೇಲೆ ಡಿಕ್ಕಿತಡೆಯ ಸ್ಟಿಕ್ಕರ್ಗಳನ್ನು ತಾನು ನೋಡಿದೆನೆಂದು ಮತ್ತು ನಮ್ಮ ಟಿ ಶರ್ಟ್ಗಳನ್ನು ಗಮನಿಸಿದೆನೆಂದು ಹೇಳಿದನು. ಅವನು ಬೈಬಲಿನ ಕುರಿತು ಮಾತಾಡಲು ಮತ್ತು ಶಾಸ್ತ್ರಗಳಿಂದ ವಿವೇಚಿಸಲು ತೊಡಗಿದನು. ಅ. ಕೃತ್ಯಗಳು 2:31ರಲ್ಲಿನ ವಿಷಯವನ್ನು ಅವನು ಸೂಚಿಸಿ, ಹೀಗೆ ಕೇಳಿದನು: “ನರಕಾಗ್ನಿಯೊಂದು ಇರುವುದಾದರೆ, ಮತ್ತು ಕೆಟ್ಟ ಜನರು ಮಾತ್ರ ಅಲ್ಲಿಗೆ ಹೋಗುವುದಾದರೆ, ಯೇಸು ಅಲ್ಲಿದ್ದನೆಂದು ಬೈಬಲ್ ಏಕೆ ಹೇಳುತ್ತಿತ್ತು?” ಇತರ ಅನೇಕ ವಚನಗಳನ್ನು ಚರ್ಚಿಸುತ್ತಾ, ಅವನು ಮುಂದುವರಿಸಿದನು. ಅಂತಿಮವಾಗಿ, ಸ್ಕಾಟ್ ಹೇಳಿದ್ದು: “ನೀನು ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾಗಿರಲೇಬೇಕು.” ಅವನು ಉತ್ತರಿಸಿದ್ದು: “ಹೌದು, ನಾನೊಬ್ಬ ಯೆಹೋವನ ಸಾಕ್ಷಿ.” ಆಗ ಸ್ಕಾಟ್ ಹೇಳಿದ್ದು: “ನೀವು ಯೇಸುವನ್ನು ನಂಬದ ಜನರು.” ಮುಂದಿನ 20 ನಿಮಿಷಗಳ ತನಕ, ಸಾಕ್ಷಿಯು ಯೇಸುವಿನ ಕುರಿತು ಮಾತಾಡಿದನಾದರೂ, ಅದು ಹೇಗೊ ನಮ್ಮ ಮೇಲೆ ಯಾವ ಪರಿಣಾಮವನ್ನೂ ಉಂಟುಮಾಡಲಿಲ್ಲ.
ವಾರಾಂತ್ಯಗಳಲ್ಲಿ ನಾವು ಹಳೆಯ ವಸ್ತುಗಳನ್ನು ಮಾರುವ ಸಂತೆಯ ಶುಶ್ರೂಷೆಗಳನ್ನು ಮುಂದುವರಿಸಿದೆವು. ನಮ್ಮಲ್ಲಿ ಸತ್ಯವಿದೆ ಮತ್ತು ನಾವು ಸರಿಯಾದ ವಿಷಯವನ್ನು ಮಾಡುತ್ತಿದ್ದೇವೆಂದು ಸದಾ ನಂಬುತ್ತಾ, ಇದನ್ನು ನಾವು ಮೂರು ವರ್ಷಗಳ ಕಾಲ ಮಾಡುತ್ತಿದ್ದೆವು. ನಾವು ಚರ್ಚುಗಳನ್ನು—ಪ್ರತಿ ಆದಿತ್ಯವಾರ ರಾತ್ರಿ ಒಂದನ್ನು—ಇನ್ನೂ ಸಂದರ್ಶಿಸುತ್ತಿದ್ದೆವು, ಮತ್ತು ನಾವು ಹಾಜರಾದ ಯಾವುದೇ ಚರ್ಚಿನಿಂದ ಎಂದೂ ತೃಪ್ತರಾಗಿರಲಿಲ್ಲ. ಸಂದರ್ಶಿಸಬೇಕಾದ ಚರ್ಚುಗಳು ಇನ್ನಿರದೆ ಹೋದಾಗ, ಒಂದು ರಾತ್ರಿ, “ಯೆಹೋವನ ಸಾಕ್ಷಿಗಳ ಚರ್ಚುಗಳಲ್ಲಿ”—ಹಾಗೆಂದು ನಾವು ಅದನ್ನು ಕರೆದೆವು—ಒಂದಕ್ಕೆ ಹೋಗುವ ನಿರ್ಣಯವನ್ನು ನಾವು ಮಾಡಿದೆವು. ನಾವು ಅವರಿಗೆ ಯೇಸುವಿನ ಕುರಿತು ಸಾರಬೇಕೆಂದಿದ್ದೆವು. ಟೆಲಿಫೋನ್ ಡೈರೆಕ್ಟರಿಯಲ್ಲಿ ನಾವು ವಿಳಾಸವನ್ನು ಕಂಡುಕೊಂಡೆವು ಮತ್ತು ಒಂದು ಆದಿತ್ಯವಾರ ಸಂಜೆ ಅಲ್ಲಿಗೆ ಹೋದೆವು. ಇತರ ಎಲ್ಲ ಚರ್ಚುಗಳಂತೆ ಆದಿತ್ಯವಾರ ಸಂಜೆ ಅವರಿಗೆ ಕೂಟವೊಂದು ಇರಲಿಲ್ಲವೆಂದು ತಿಳಿದು, ಅವರು ನಿಜವಾಗಿಯೂ ಯೇಸುವನ್ನು ನಂಬಲಿಲ್ಲವೆಂದು ನಾವು ತೀಮಾರ್ನಿಸಿದೆವು. ಕೂಟದ ಸಮಯಗಳನ್ನು ತೋರಿಸಿದ ಗುರುತುಹಲಗೆಯ ಮೇಲೆ, ಸೋಮವಾರ ರಾತ್ರಿಯ ಪುಸ್ತಕ ಅಭ್ಯಾಸವನ್ನು ನಾವು ನೋಡಿದೆವು. ಆದಕಾರಣ, ನಾವು ನಮ್ಮ ಬೈಬಲುಗಳೊಂದಿಗೆ ಹಾಗೂ ನಮ್ಮ ಟಿ ಶರ್ಟ್ಗಳನ್ನು ಧರಿಸಿಕೊಂಡು ಹಿಂದಿರುಗಿದೆವು. ಟಿ ಶರ್ಟ್ಗಳಲ್ಲಿ ಯಾವುದನ್ನು ಧರಿಸಬೇಕೆಂದು—ಯಾವುದು ಒಳ್ಳೆಯ ಸಾಕ್ಷಿಯಾಗಿರುವುದೆಂದು—ನಿರ್ಧರಿಸಲು ಕೆಲವು ನಿಮಿಷಗಳನ್ನು ತೆಗೆದುಕೊಂಡ ಜ್ಞಾಪಕ ನಮಗಿದೆ. ಸ್ವಲ್ಪ ಮುಂಚಿತವಾಗಿ ನಾವು ಅಲ್ಲಿ ತಲಪಿದೆವು, ಮತ್ತು ಕೆಲವು ಸಹೋದರರು ನಮ್ಮನ್ನು ಸಮೀಪಿಸಿದರು. ಅವರು ಅನುರಾಗವುಳ್ಳವರೂ ಸ್ನೇಹಪರರೂ ಆಗಿದ್ದರು. ನೇರವಾಗಿ ನಾವು ಪ್ರಕಟನೆಯ ಕುರಿತಾದ ಒಂದು ಆಳವಾದ ಚರ್ಚೆಯನ್ನು ಆರಂಭಿಸಿದೆವು. ಕೂಟಕ್ಕಾಗಿ ಉಳಿಯುವಂತೆ ಅವರು ನಮ್ಮನ್ನು ಕೇಳಿಕೊಂಡರು. ನಮಗೆ ಆರಾಧನೆಯಲ್ಲಿ ಐಕ್ಯರು ಎಂಬ ಪುಸ್ತಕವನ್ನು ಕೊಟ್ಟರು, ಆ ಕಾರಣ ನಾವು ಕುಳಿತುಕೊಂಡೆವು.a ಒಬ್ಬ ಸಹೋದರನು ಅಭ್ಯಾಸವನ್ನು ಪ್ರಾರ್ಥನೆಯೊಂದಿಗೆ ಆರಂಭಿಸಿದನು.
ನಾವು ಅತ್ಯಾಸಕ್ತಿಯಿಂದ ಕೇಳಿದೆವು. ಸಮಾಪ್ತಿಯಲ್ಲಿ ಅವನು ಹೇಳಿದ್ದು: “ಯೇಸುವಿನ ಹೆಸರಿನಲ್ಲಿ. ಆಮೆನ್.” ನಾವು ಅತ್ಯಾಶ್ಚರ್ಯದಿಂದ ಒಬ್ಬರನ್ನೊಬ್ಬರು ನೋಡಿಕೊಂಡೆವು. “ನಾವು ಸರಿಯಾಗಿ ಆಲಿಸಿದೆವೊ? ಅವನು ಯೇಸುವಿನ ಹೆಸರಿನಲ್ಲಿ ಪ್ರಾರ್ಥಿಸಿದನು!” ಆ ಸಮಯದಲ್ಲಿ ನಮ್ಮ ಕಣ್ಣುಗಳು ತೆರೆಯಲ್ಪಟ್ಟು, ದಟ್ಟವಾದ ಪೊರೆಗಳು ಕಳಚಿ ಬಿದ್ದಂತಿತ್ತು. ನಮ್ಮ ಹೃದಯಗಳು ಸರಿಯಾಗಿದ್ದಲ್ಲಿ, ಇದು ಆಲಿಸುವ ಸಮಯವಾಗಿತ್ತು. ಎಲ್ಲರು, ಆರಾಧನೆಯಲ್ಲಿ ಐಕ್ಯರು ಪುಸ್ತಕದ 21ನೆಯ ಅಧ್ಯಾಯಕ್ಕೆ ತಿರುಗಿಸುವಂತೆ ಸಹೋದರನು ಕೇಳಿಕೊಂಡನು, ಅದು ಯೇಸುವಿನ ಕುರಿತಾಗಿ ಮತ್ತು ಲೋಕದ ಯಾವುದೇ ಭಾಗವಾಗಿರದ ವಿಷಯದ ಕುರಿತಾಗಿತ್ತು. ಉಪಸ್ಥಿತರಾಗಿರಲು ಉತ್ತಮವಾದ ಬೇರೊಂದು ಅಧ್ಯಯನವು ಇರಲಿಲ್ಲ. ಅದು ಯೇಸುವಿನ ಜೀವನ ಹಾಗೂ ಶುಶ್ರೂಷೆ, ಕಡೇ ದಿವಸಗಳು, ಮತ್ತು ತಾಟಸ್ಥ್ಯದ ಕುರಿತಾಗಿತ್ತು. ನಮಗೆ ಪರಿಚಯವಿರದ ಅನೇಕ ವಿಷಯಗಳ ಕುರಿತು, ಎಳೆಯ ಮಕ್ಕಳು ಹೇಳಿಕೆ ನೀಡುವುದನ್ನು ನಾವು ಕೇಳಿದೆವು. ಮತ್ತು ಪುನಃ, ಕೂಟದ ಸಮಾಪ್ತಿಯಲ್ಲಿ ಸಹೋದರನು ಯೇಸುವಿನ ಹೆಸರಿನಲ್ಲಿ ಪ್ರಾರ್ಥಿಸಿದನು!
ನಾವು ಆತ್ಮಿಕವಾಗಿ ಉಣಿಸಲ್ಪಡುತ್ತೇವೆ
ನಾವು ಸಭಾಗೃಹದೊಳಗೆ, ಸತ್ಯಕ್ಕಾಗಿ ಬಾಯಾರಿದವರಾಗಿ ಹೋಗಿದ್ದೆವು, ಮತ್ತು ಸತ್ಯವು ನಮ್ಮಿಂದ ಎಂದೂ ಬಹಳ ದೂರವಿರಲಿಲ್ಲ. ನಾವು ಆತ್ಮಿಕವಾಗಿ ಉಣಿಸಲ್ಪಟ್ಟಿದ್ದೆವೆಂಬ ಅರಿವಿನೊಂದಿಗೆ ಹಿಂದಿರುಗಿದೆವು, ಮತ್ತು ಎಂದೂ ಇನ್ನೊಮ್ಮೆ ಒಂದು ಚರ್ಚಿನೊಳಗೆ ಕಾಲಿರಿಸಲಿಲ್ಲ. ಮುಂದಿನ ರಾತ್ರಿ, ದೋಬಿ ಖಾನೆಯಲ್ಲಿ ನಮ್ಮ ಬಟ್ಟೆಗಳನ್ನು ಒಗೆಯುತ್ತಿರುವಾಗ, ಸೋಡಾ ಯಂತ್ರದ ಪಕ್ಕದಲ್ಲಿ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ಒಂದು ದೊಡ್ಡ ಮೊತ್ತ—ಕಡಿಮೆ ಪಕ್ಷ 150 ಪತ್ರಿಕೆಗಳನ್ನು ಗಮನಿಸಿದೆವು. ಹಿಂದೆಂದೂ ಅವುಗಳನ್ನು ನಾವು ಓದುತ್ತಿರಲಿಲ್ಲ, ಆದರೆ ಈಗ, ಅನೇಕ ವಿಷಯಗಳಲ್ಲಿ ಆಸಕ್ತರಾಗಿದ್ದ ಕಾರಣ, ಅವುಗಳನ್ನು ನಮ್ಮೊಂದಿಗೆ ತೆಗೆದುಕೊಂಡು ಹೋದೆವು.
ಲೇಖನಗಳಲ್ಲಿ ಒಂದು ಹೀಗೆ ಕೇಳಿತು, “ನೀವು ತ್ರಯೈಕ್ಯದಲ್ಲಿ ನಂಬುತ್ತೀರೊ?” ಮತ್ತೊಂದು, “ನಿಜವಾಗಿಯೂ ಒಂದು ನರಕವಿದೆಯೊ?” ಒಂದು ಎಚ್ಚರ! ಪತ್ರಿಕೆಯಲ್ಲಿ, ಮೂರ್ತಿಗಳ ಕುರಿತಾದ ಒಂದು ಲೇಖನವಿತ್ತು. ಆ ರಾತ್ರಿ, ತ್ರಯೈಕ್ಯದ ಕುರಿತಾಗಿದ್ದ ಪತ್ರಿಕೆಯನ್ನು ಸ್ಟೀವ್ ಓದಿ, ಬಹಳಷ್ಟು ಸಂಶೋಧನೆಯನ್ನು ಮಾಡಿ, ಎಲ್ಲ ವಚನಗಳನ್ನು ತೆಗೆದುನೋಡಿ, ತಾನು ಕಲಿತಿದ್ದ ವಿಷಯದ ಕಾರಣ, ಸ್ಕಾಟ್ನನ್ನು ರಾತ್ರಿ 12:30ಕ್ಕೆ ಎಬ್ಬಿಸಿದನು. ಮರುದಿನ, ಬುಧವಾರ, ಕೆಲಸದ ನಂತರ, ಸ್ಟೀವ್ ನರಕದ ಕುರಿತಾದ ಲೇಖನವನ್ನು ಓದಿದನು. ಅದು ಯೋಹಾನ 11:11ರ ಮೇಲೆ ವಿವೇಚನೆ ಮಾಡಿತು, ಅಲ್ಲಿ, ಲಾಜರನು ಮಲಗಿದ್ದನೆಂದು ಯೇಸು ಹೇಳಿದ ವಿಷಯವಿದೆ. ಸ್ಟೀವ್, ಸ್ಕಾಟ್ನನ್ನು ನೋಡಿದಾಗ, ಅವನು ಹೇಳಿದ್ದು: “ನರಕಾಗ್ನಿಯೊಂದಿದೆ ಎಂದು ನನ್ನ ಬೈಬಲ್ ಕಲಿಸುವುದಿಲ್ಲ.” ಮೂರ್ತಿಗಳು ಮತ್ತು ವಿಭಿನ್ನ ರೂಪದ ಶಿಲುಬೆಗಳ ಕುರಿತಾದ ಎಚ್ಚರ! ಪತ್ರಿಕೆಯನ್ನು ಓದಿದ ಮೇಲೆ, ನಮ್ಮಲ್ಲಿದ್ದ ಮೂರ್ತಿಗಳನ್ನು ಮತ್ತು ಶಿಲುಬೆಗಳನ್ನು ನಾವು ಒಂದು ಕಸದ ಟ್ರಕ್ಕಿನೊಳಗೆ ಬಿಸಾಡಿ, ಅವು ಕೊಂಡೊಯ್ಯಲ್ಪಡುವಾಗ ವೀಕ್ಷಿಸಿದೆವು. ನಾವು ಪರಸ್ಪರ ನೋಡಿ, ತೃಪ್ತಿಯನ್ನು ಸೂಚಿಸುತ್ತಾ, ಮುಗುಳು ನಕ್ಕೆವು. ವಿಶೇಷವಾದ ಯಾವುದನ್ನೊ—ಸತ್ಯವನ್ನು—ನಾವು ಕಂಡುಕೊಂಡಿದ್ದೆವೆಂದು ನಮಗೆ ಗೊತ್ತಿತ್ತು.
ಒಂದು ದಿನದ ತರುವಾಯ, ಎರಡು ಪೆಟ್ಟಿಗೆಗಳು ಬಂದು ತಲಪಿದವು. ಅವುಗಳಲ್ಲಿ, ನೀವು ಪಶ್ಚಾತ್ತಾಪ ಪಡದಿದ್ದಲ್ಲಿ, ನರಕಕ್ಕೆ ಹೋಗುವಿರಿ ಎಂಬುದಾಗಿ ಹೇಳಿದ 5,000 ಕಿರುಹೊತ್ತಗೆಗಳಿದ್ದವು. ಇವುಗಳಲ್ಲಿ ಹೆಚ್ಚಿನ ಕಿರುಹೊತ್ತಗೆಗಳು ಬೈಬಲಿನ ಬೋಧನೆಗನುಸಾರ ಸರಿಯಾಗಿರಲಿಲ್ಲವೆಂದು ನಮಗೆ ಈಗ ಗೊತ್ತಿತ್ತು. ಸ್ವಲ್ಪ ಗಲಿಬಿಲಿಗೊಂಡು, ನಾವು ಪುನಃ ಸೋಮವಾರ ರಾತ್ರಿಯ ಪುಸ್ತಕ ಅಭ್ಯಾಸಕ್ಕೆ ಹಾಜರಾದೆವು ಮತ್ತು ನಮ್ಮ ಕಿರುಹೊತ್ತಗೆಗಳಲ್ಲಿ ಹೆಚ್ಚಿನವುಗಳನ್ನು ತಂದೆವು. ನಾವು ಕೇಳಿದ್ದು, “ಈ ಕಿರುಹೊತ್ತಗೆಯು ಸರಿಯಾಗಿದೆಯೊ?” ಒಂದು ರಾತ್ರಿ, ನಾವು ಅವುಗಳಲ್ಲಿ ಎಲ್ಲವನ್ನು ಪರೀಕ್ಷಿಸಿದೆವು. ಬೇಗನೆ, ಕಿರುಹೊತ್ತಗೆಗಳ ಒಂದು ರಾಶಿಯು ನೆಲದ ಮೇಲಿತ್ತು; ಅವುಗಳಲ್ಲಿ ಒಂದೂ ಬೈಬಲಿನ ಬೋಧನೆಯೊಂದಿಗೆ ಒಮ್ಮತದಲ್ಲಿರುವ ಪುರಾವೆಯನ್ನು ಕೊಡಲಿಲ್ಲ. ಅವುಗಳಲ್ಲಿ ಎಲ್ಲವನ್ನು ತೊಲಗಿಸಿಬಿಟ್ಟೆವು. ನಮ್ಮ ಹೊಸದಾಗಿ ಕಂಡುಕೊಳ್ಳಲ್ಪಟ್ಟ ನಂಬಿಕೆಯು, ನಮ್ಮ ಜೀವಿತಗಳ ಮತ್ತು ನಾವು ಯಾರಿಗೆ ಸಾರಿದೆವೊ ಅವರ ಜೀವಿತಗಳ ಅರ್ಥದಲ್ಲಿತ್ತೆಂದು ನಮಗೆ ತಿಳಿದಿತ್ತು. ಯಾವುದೇ ಅಡಚಣೆಯಿಲ್ಲದೆ ಬೈಬಲನ್ನು ಅಭ್ಯಸಿಸುವ ಸಲುವಾಗಿ ನಾವು ದೂರ ಹೋಗಬಯಸಿದೆವು.
ನಾವು ಅಲಾಸ್ಕಕ್ಕೆ ಸ್ಥಳಾಂತರಿಸಿದೆವು. ಅಲ್ಲಿ, ನಮ್ಮ ಪ್ರಥಮ ಕೂಟದಲ್ಲಿ, ನಮ್ಮೊಂದಿಗೆ ಪ್ರತಿದಿನ ಅಭ್ಯಸಿಸುವಿರೊ ಎಂದು ನಾವು ಒಬ್ಬ ಹಿರಿಯರನ್ನು ಕೇಳಿದೆವು. ಹಾಜರಿದ್ದವರೆಲ್ಲರು ನಮ್ಮ ವಿನಂತಿಯನ್ನು ಕೇಳಿಸಿಕೊಂಡರೆಂದು ನನಗೆ ಅನಿಸುತ್ತದೆ. ನಾವು ಉತ್ತಮ ಪ್ರಗತಿಯನ್ನು ಮಾಡಿದೆವು, ಸದಾ ಜೀವಿಸಬಲ್ಲಿರಿ ಪುಸ್ತಕವನ್ನು ಮುಗಿಸಿದೆವು ಮತ್ತು ಎರಡು ದಿನದ ಸಮ್ಮೇಳನಗಳಲ್ಲೊಂದರಲ್ಲಿ ದೀಕ್ಷಾಸ್ನಾನ ಪಡೆದುಕೊಳ್ಳಲು ಬಯಸಿದೆವು.* ಆದರೆ ನಾವು ಸ್ವಲ್ಪ ಸಮಯಕ್ಕಾಗಿ ಕಾಯಬೇಕಿತ್ತು. ನಮ್ಮ ಗುರಿಯು ಪಯನೀಯರ್ ಸೇವೆ ಮಾಡುವುದಾಗಿತ್ತು. ಅನಿರೀಕ್ಷಿತವಾಗಿ ನಮ್ಮ ತಂದೆಯು ಅಸ್ವಸ್ಥರಾದರು, ಮತ್ತು ಸಹಾಯ ಮಾಡಲು ನಾವು ಫ್ಲಾರಿಡಕ್ಕೆ ಹಿಂದಿರುಗಬೇಕಿತ್ತು.
ನಾವು ಆತ್ಮಿಕ ಪಕ್ವತೆಯ ಕಡೆಗೆ ಪ್ರಗತಿ ಮಾಡುತ್ತೇವೆ
ಫ್ಲಾರಿಡದಲ್ಲಿ, ನಾವು ಉತ್ತಮ ಪ್ರಗತಿಯನ್ನು ಮಾಡಿದೆವು, ಆರಾಧನೆಯಲ್ಲಿ ಐಕ್ಯರು ಪುಸ್ತಕವನ್ನು ಮುಗಿಸಿದೆವು, ಮತ್ತು ತದನಂತರ 1987ರಲ್ಲಿ ದೀಕ್ಷಾಸ್ನಾನ ಪಡೆದೆವು. ನಾವು ಪ್ರಥಮವಾಗಿ ಆರಂಭಿಸಿದ ಸಮಯದಿಂದ 11 ತಿಂಗಳುಗಳು ಕಳೆದಿದ್ದವು. ಒಡನೆಯೆ, ನಾವು ಆರು ತಿಂಗಳುಗಳಿಗಾಗಿ ಆಕ್ಸಿಲಿಯರಿ ಪಯನೀಯರರಾದೆವು, ಮತ್ತು ಅನಂತರ ಕ್ರಮದ ಪಯನೀಯರರಾದೆವು. ಕೇವಲ ಒಂದುವರೆ ವರ್ಷದ ತರುವಾಯ, ನಾವಿಬ್ಬರೂ ಶುಶ್ರೂಷಾ ಸೇವಕರಾಗಿ ನೇಮಿಸಲ್ಪಟ್ಟೆವು. ದೀಕ್ಷಾಸ್ನಾನದ ಎರಡು ವರ್ಷಗಳ ತರುವಾಯ, ನಾವು ಬ್ರೂಕ್ಲಿನ್ ಬೆತೆಲ್ನಲ್ಲಿ ಸೇವೆ ಮಾಡುವವರಾದೆವು. ಅಲ್ಲಿ ಸ್ಕಾಟ್ ಇಂದಿಗೂ ಸೇವೆ ಮಾಡುತ್ತಿದ್ದಾನೆ ಮತ್ತು ಎರಡು ವರ್ಷಗಳಿಂದ ಚೈನೀಸ್ ಭಾಷೆಯನ್ನು ಕಲಿಯುತ್ತಿದ್ದಾನೆ. ಸ್ಟೀವ್ ಈಗ, ರಷ್ಯದ ಮಾಸ್ಕೊವಿನಲ್ಲಿ, ಒಬ್ಬ ಕ್ರಮದ ಪಯನೀಯರನೋಪಾದಿ ಸೇವೆ ಸಲ್ಲಿಸುತ್ತಿದ್ದಾನೆ. ನಾವಿಬ್ಬರೂ ಸತ್ಯವನ್ನು ಮತ್ತು ಅದಕ್ಕಾಗಿ ಮಾಡಿದ ಅನ್ವೇಷಣೆಯನ್ನು ಜ್ಞಾನೋಕ್ತಿ 2:1-5ರಲ್ಲಿ ಅದನ್ನು ವರ್ಣಿಸಲ್ಪಟ್ಟಂತೆಯೇ ಕಂಡುಕೊಂಡೆವು: “ಕಂದಾ, ನನ್ನ ಮಾತುಗಳನ್ನು ಅಂಗೀಕರಿಸಿ ನನ್ನ ವಿಧಿಗಳನ್ನು ನಿಧಿಯಂತೆ ಕಾಪಾಡಿಕೋ, ನಿನ್ನ ಕಿವಿಯನ್ನು ಜ್ಞಾನದ ಕಡೆಗೂ ಹೃದಯವನ್ನು ವಿವೇಕದ ಕಡೆಗೂ ತಿರುಗಿಸು; ಬುದ್ಧಿಗಾಗಿ ಮೊರೆಯಿಟ್ಟು ವಿವೇಕಕ್ಕಾಗಿ ಕೂಗಿಕೊಂಡು ಅದನ್ನು ಬೆಳ್ಳಿಯಂತೆಯೂ ನಿಕ್ಷೇಪದಂತೆಯೂ ಹುಡುಕು; ಆಗ ನೀನು ಯೆಹೋವನ ಭಯವನ್ನು ಅರಿತು ದೈವಜ್ಞಾನವನ್ನು ಪಡೆದುಕೊಳ್ಳುವಿ.”
ಸ್ಟೀವ್ ಮಾಸ್ಕೊವಿನಲ್ಲಿ ನೆಲೆಸಿದ ವಿಧ
ಹೆಚ್ಚಿನ ಒಂದು ಭಾಷೆಯನ್ನು ಅರಿತಿರುವುದು, ಸಾರುವ ಕೆಲಸವನ್ನು ಅಧಿಕ ಅಭಿರುಚಿದಾಯಕವಾದದ್ದಾಗಿ ಮಾಡುವ ನ್ಯೂ ಯಾರ್ಕ್ ನಗರದಲ್ಲಿ ಜೀವಿಸುತ್ತಾ, ಬಹುಶಃ ಯೆಹೋವನು ಬೇಗನೆ ರಷ್ಯಾಕ್ಕೆ ಬಾಗಿಲನ್ನು ತೆರೆಯುವನೆಂದು ಯೋಚಿಸುತ್ತಾ, ನಾನು ರಷ್ಯನ್ ಭಾಷೆಯನ್ನು ಕಲಿಯಲು ನಿರ್ಧರಿಸಿದೆ. ಆ ಸಮಯದಲ್ಲಿ, ಬ್ರೂಕ್ಲಿನ್ ಬೆತೆಲ್ನಲ್ಲಿ ಸೇವೆ ಮಾಡುತ್ತಾ, ರಷ್ಯನ್ ಪುಸ್ತಕ ಅಭ್ಯಾಸವನ್ನು ನಾನು ಹಾಜರಾಗತೊಡಗಿದೆ. ಶುಕ್ರವಾರಗಳಂದು ಕೂಡಿಬಂದ ಏಕಮಾತ್ರ ರಷ್ಯನ್ ಪುಸ್ತಕ ಅಭ್ಯಾಸದ ಗುಂಪು ಅಲ್ಲಿತ್ತು. ಸಮಯವು ಗತಿಸಿದಂತೆ, ರಷ್ಯನ್ ಗುಂಪಿನಲ್ಲಿ ಹೆಚ್ಚು ಒಳಗೊಳ್ಳಲು ನಾನು ತೊಡಗಿದೆ. ಸಾರುವ ಚಟುವಟಿಕೆಯಲ್ಲಿ ನಾನು ಅವರ ಜೊತೆಸೇರಿದೆ—ಅದು ರಷ್ಯನರ ಹೃದಯೋಲ್ಲಾಸದ ಕಾರಣ ಬಹಳ ಆನಂದದಾಯಕವಾಗಿತ್ತು. ರಷ್ಯನ್ ಗುಂಪಿಗೆ ವರ್ಗಾಯಿಸುವಂತೆ ಕೇಳಿಕೊಳ್ಳುತ್ತಾ, ನಾನು ಸೇವಾ ವಿಭಾಗಕ್ಕೆ ಪತ್ರ ಬರೆದೆ. ಅವರು ಇದಕ್ಕೆ ಒಪ್ಪಿದಾಗ, ನಾನು ಸಂತೋಷಪಟ್ಟೆ.
ಒಂದು ದಿನ, ಬೆತೆಲ್ನ ಬೆಳಗ್ಗಿನ ಆರಾಧನೆಯ ಸಮಯದಲ್ಲಿ, ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯ ಅಧ್ಯಕ್ಷರಾದ, ಮಿಲ್ಟನ್ ಜಿ. ಹೆನ್ಶೆಲ್, ವಿಶೇಷವಾದೊಂದು ವರದಿಯಿರುವುದೆಂದು ಕುಟುಂಬಕ್ಕೆ ಹೇಳಿದರು. ಯೆಹೋವನ ಸಾಕ್ಷಿಗಳು ರಷ್ಯದಲ್ಲಿ ಈಗ ನ್ಯಾಯಸಮ್ಮತವಾದ ಮನ್ನಣೆಯನ್ನು ಪಡೆದಿದ್ದರೆಂದು ಮತ್ತು ಈಗ ನಮ್ಮ ಸಹೋದರರು ಆರಾಧನಾ ಸ್ವಾತಂತ್ರ್ಯವನ್ನು ಅನುಭವಿಸುವರೆಂದು ಅವರು ನಂತರ ಪ್ರಕಟಿಸಿದರು. ಅಂತಹ ಅದ್ಭುತಕರವಾದ ವಾರ್ತೆಗಳನ್ನು ಕೇಳಿ, ಆ ಬೆಳಗ್ಗೆ ನಮಗಾದ ಆನಂದವನ್ನು ಬೆತೆಲ್ನಲ್ಲಿದ್ದ ಯಾರೂ ಮರೆಯಲಾರರೆಂದು ನನಗನಿಸುತ್ತದೆ. ಆ ವಿಶಾಲವಾದ ಹೊಸ ಟೆರಿಟೊರಿಯ ಭಾಗವಾಗಿರಲು ಶಕ್ತರಾಗಿರುವುದು, ಒಂದು ಮಹಾ ಸುಯೋಗವಾಗಿರುವುದೆಂದು ಆ ಕ್ಷಣದಲ್ಲಿ ನಾನು ನೆನೆಸಿದೆ.
ರಷ್ಯಾದ ಕ್ರಾಸ್ನಡಾರ್ನಲ್ಲಿ ಜೀವಿಸುವ, ವಲಾಡ್ಯ ಎಂಬ ಒಬ್ಬ ರಷ್ಯನ್ ಸಹೋದರನೊಂದಿಗೆ ಪತ್ರವ್ಯವಹಾರ ಮಾಡಲು ನಾನು ತೊಡಗಿದೆ. ರಷ್ಯವನ್ನು ಸಂದರ್ಶಿಸುವಂತೆ ಅವನು ನನ್ನನ್ನು ಆಮಂತ್ರಿಸಿದನು. ಆದುದರಿಂದ, ಜೂನ್ 1992ರಲ್ಲಿ ನನ್ನ ಸಾಮಾನುಗಳನ್ನು ಕಟ್ಟಿಕೊಂಡು, ನಾನು ಮಾಸ್ಕೊವಿಗೆ ಹೋಗುವ ದಾರಿಯಲ್ಲಿದ್ದೆ. ತಲಪಿದಾಗ, ವಿಮಾನ ನಿಲ್ದಾಣದಲ್ಲಿ ಸಹೋದರ ವಲಾಡ್ಯ ಕಾದುಕೊಂಡಿರುವುದನ್ನು ನೋಡಿ ನಾನು ಬಹಳ ಆನಂದಪಟ್ಟೆ. 45 ವರ್ಷಗಳಿಂದ ಸತ್ಯದಲ್ಲಿರುವ ಸಹೋದರ ಸ್ಟೆಫಾನ್ ಲವಿನ್ಸ್ಕೀಯೊಂದಿಗೆ ನಾನು ತಂಗಿದೆ. ಮಾಸ್ಕೊವಿನಲ್ಲಿ ನಾನು ಭೇಟಿಯಾದ ಪ್ರಥಮ ಸಾಕ್ಷಿ ಅವರಾಗಿದ್ದರು, ಮತ್ತು ಸತ್ಯಕ್ಕಾಗಿ ಅವರ ನಿಲುವಿನ ಕಾರಣ, ಅವರು ಸೆರೆಮನೆಯಲ್ಲಿ ಅನೇಕ ವರ್ಷಗಳನ್ನು ಕಳೆದಿದ್ದರು. ಆ ಸಹೋದರರ ಅತಿಥಿಸತ್ಕಾರವು ನಿಜವಾಗಿಯೂ ಅದ್ಭುತಕರವಾಗಿತ್ತು.
ಹೀಗೆ ನಾನು ಅಲ್ಲಿ, ಮಾಸ್ಕೊವಿನಲ್ಲಿ, ಭಾಷೆಯ ಕುರಿತು ಹೆಚ್ಚನ್ನು ತಿಳಿಯದೆ ನೆಲೆಸಿದ್ದೆ. ಆ ಸಮಯದಲ್ಲಿ, ನಾಲ್ಕು ಸಭೆಗಳು ಮಾತ್ರ ಇದ್ದವು, ಮತ್ತು ನಮಗೆ ಎಲ್ಲರ ಪರಿಚಯವಿರುವಂತೆ ತೋರಿತು. ಆ ಸಮಯದಿಂದ, ತಪ್ಪು ತಿದ್ದುವಿಕೆಗಳ ಮೂಲಕ, ನನ್ನ ವೀಸಗಳನ್ನು ವಿಸ್ತರಿಸಲು ನನಗೆ ಸಾಧ್ಯವಾಗಿದೆ. ನನ್ನ ವೆಚ್ಚಗಳನ್ನು ಪೂರೈಸಲು ಆಗಿಂದಾಗ್ಗೆ ಕೆಲಸಮಾಡಲು ನಾನು ಶಕ್ತನಾಗಿದ್ದೇನೆ. ಕೂಟಗಳಲ್ಲಿ ಸಂವಾದ ಮಾಡುವಷ್ಟು ಮತ್ತು ಆತ್ಮಿಕವಾಗಿ ಉಣಿಸಲ್ಪಡುವಷ್ಟು ರಷ್ಯನ್ ಭಾಷೆಯನ್ನು ಕಲಿಯುವುದು, ನನಗಿದ್ದ ಅತಿ ದೊಡ್ಡ ತೊಂದರೆಯಾಗಿತ್ತು. ಭಾಷೆಯೊಂದಿಗಿನ ಪ್ರಗತಿಯು ನಿಧಾನವಾಗಿ ಬಂದಿತು, ಮತ್ತು ನಿಶ್ಚಯವಾಗಿ, ನಾನಿನ್ನೂ ಅದರ ಸಂಬಂಧದಲ್ಲಿ ಕೆಲಸಮಾಡುತ್ತಿದ್ದೇನೆ.
ಅನೇಕ ಅಧಿವೇಶನಗಳನ್ನು ಹಾಜರಾಗುವ ಮತ್ತು ವಿಸ್ಮಯಕರ ಬೆಳವಣಿಗೆ ಹಾಗೂ ಅತಿಹೆಚ್ಚಿನ ಸಂಖ್ಯೆಯ ಜನರು ದೀಕ್ಷಾಸ್ನಾನ ಪಡೆದುಕೊಳ್ಳುವುದನ್ನು ನೋಡುವ ಸುಯೋಗವು ನನಗಿತ್ತು. ಇಲ್ಲಿನ ನಮ್ಮ ಸಹೋದರರ ಶುದ್ಧವಾದ ಹುರುಪನ್ನು ನೋಡುವುದು, ಮಹತ್ತರವಾಗಿ ನಂಬಿಕೆಯನ್ನು ಬಲಪಡಿಸುವ ಒಂದು ಅನುಭವವಾಗಿ ಪರಿಣಮಿಸಿದೆ. ಬೇರೆ ಯಾವುದೇ ವಿಷಯಕ್ಕೂ ನಾನು ಅದನ್ನು ವಿನಿಮಯ ಮಾಡಲಾರೆ. ನಾನು ಬಂದಾಗ ಕೇವಲ ಅಭ್ಯಾಸ ಮಾಡುತ್ತಿದ್ದ ಅಥವಾ ಆಗ ತಾನೇ ದೀಕ್ಷಾಸ್ನಾನ ಪಡೆದಿದ್ದ, ನಾನು ಭೇಟಿಯಾದ ಅನೇಕ ಸಹೋದರ ಸಹೋದರಿಯರು, ಈಗ ಪೂರ್ಣ ಸಮಯದ ಪಯನೀಯರರು ಅಥವಾ ಶುಶ್ರೂಷಾ ಸೇವಕರೋಪಾದಿ ಸೇವೆ ಮಾಡುತ್ತಿದ್ದಾರೆ, ಅಥವಾ ರಷ್ಯಾದ ಸೆಂಟ್ ಪೀಟರ್ಸ್ಬರ್ಗ್ನ ಬಳಿ, ಸೋಲ್ನೆಚ್ನಾಯಾದಲ್ಲಿ ಬೆತೆಲಿಗರೋಪಾದಿ ಸೇವೆ ಸಲ್ಲಿಸುತ್ತಿದ್ದಾರೆ.
ನಾನು ಹಾಜರಾಗುವ ಸಭೆಯಲ್ಲಿ ಪ್ರತಿ ಆದಿತ್ಯವಾರ, 530 ಜನರು ನೆರೆದು ಬರುತ್ತಾರೆ, ಮತ್ತು ಪ್ರತಿ ತಿಂಗಳು ನಮ್ಮಲ್ಲಿ ಸರಾಸರಿ 12 ಹೊಸ ಅಸ್ನಾತ ಪ್ರಚಾರಕರಿರುತ್ತಾರೆ. ನಮ್ಮ ಸಭೆಯ ಕೊನೆಯ ಎಣಿಕೆಯು, 380 ಪ್ರಚಾರಕರು, 3 ಹಿರಿಯರು, ಮತ್ತು 7 ಶುಶ್ರೂಷಾ ಸೇವಕರು ಆಗಿತ್ತು. ನಮ್ಮ ಸಭೆಯು 486ಕ್ಕಿಂತಲೂ ಹೆಚ್ಚಿನ ಮನೆ ಬೈಬಲ್ ಅಧ್ಯಯನಗಳನ್ನು ವರದಿಸುತ್ತಿದೆ. ಫೆಬ್ರವರಿ 1995ರಲ್ಲಿ, ಒಂದು ಸೇವಾ ಭಾಷಣವನ್ನು ನೀಡಲು, ನಮ್ಮ 29 ಪುಸ್ತಕ ಅಭ್ಯಾಸಗಳನ್ನು ಸಂದರ್ಶಿಸುವ ಸುಯೋಗವು ನನಗಿತ್ತು. ವಾರಕ್ಕೆ ನಾಲ್ಕು ಗುಂಪುಗಳನ್ನು ನಾನು ಸಂದರ್ಶಿಸಿದೆ. ಪ್ರತಿ ಅಧಿವೇಶನದ ಮೊದಲು, ದೀಕ್ಷಾಸ್ನಾನದ ಅಭ್ಯರ್ಥಿಗಳಿಗಾಗಿರುವ ಪ್ರಶ್ನೆಗಳೊಂದಿಗೆ ಸಹ ನಾವು ಬಹಳ ಕಾರ್ಯಮಗ್ನರಾಗಿರುತ್ತೇವೆ. ಮೇ 1995ರಲ್ಲಿ, ನಮಗೆ ವಿಶೇಷ ಸಮ್ಮೇಳನ ದಿನವಿತ್ತು—ಅಲ್ಲಿ ನಮ್ಮ ಸಭೆಯಿಂದ 30 ಜನರು ದೀಕ್ಷಾಸ್ನಾನ ಪಡೆದುಕೊಂಡರು. ಒಟ್ಟಿನಲ್ಲಿ 607 ಜನರು ದೀಕ್ಷಾಸ್ನಾನ ಪಡೆದುಕೊಂಡರು, ಸುಮಾರು 10,000 ಜನರು ಉಪಸ್ಥಿತರಿದ್ದರು. ಬೇಸಿಗೆಯ ಜಿಲ್ಲಾ ಅಧಿವೇಶನದಲ್ಲಿ, ದೀಕ್ಷಾಸ್ನಾನ ಪಡೆದ 877 ಜನರಲ್ಲಿ, 24 ಜನರು ನಮ್ಮ ಸಭೆಯವರಾಗಿದ್ದರು! ನಮ್ಮ ಸಭೆಯಲ್ಲಿ 13 ಪಯನೀಯರರು ಮತ್ತು 3 ವಿಶೇಷ ಪಯನೀಯರರು ಇದ್ದಾರೆ. ಒಟ್ಟಿಗೆ ಅವರು 110 ಅಧ್ಯಯನಗಳನ್ನು ವರದಿಸುತ್ತಿದ್ದಾರೆ! ಸದ್ಯದಲ್ಲಿ, ನಮ್ಮ ಸಭೆಯಲ್ಲಿ 132 ಅಸ್ನಾತ ಪ್ರಚಾರಕರಿದ್ದಾರೆ.
1995ರಲ್ಲಿ, ನಮ್ಮ ಜ್ಞಾಪಕದಿನಕ್ಕೆ, 1,012 ಜನರು ಹಾಜರಿದ್ದರು! ಸಂಸ್ಥೆಯು ಈಗ ತಾನೇ, ಮಾಟೀಷ್ ಎಂಬ ಒಬ್ಬ ಪೋಲಿಷ್ ಸಹೋದರನನ್ನು ನಮ್ಮ ಸಭೆಗೆ ಕಳುಹಿಸಿದೆ. ಅವನು ಶುಶ್ರೂಷಾ ತರಬೇತಿ ಶಾಲೆಯಿಂದ ಪದವಿ ಪಡೆದನು ಮತ್ತು ಮಹಾ ಸಹಾಯದ ಅರ್ಥದಲ್ಲಿರುವನು. ನಮ್ಮಲ್ಲಿ ಈಗ ಮೂವರು ಹಿರಿಯರಿದ್ದಾರೆ. ಆದುದರಿಂದ ಹೆಚ್ಚಿನ ಒಂದು ಸಭೆಯು ರಚಿಸಲ್ಪಡುವುದು ಮತ್ತು ನಮ್ಮ ಟೆರಿಟೊರಿಯು—ಹತ್ತು ಲಕ್ಷ ಜನಸಂಖ್ಯೆಗೆ ಹತ್ತಿರ—ಎರಡಾಗಿ ವಿಭಜಿತಗೊಳ್ಳುವುದು. ಎರಡು ಸಭೆಗಳಲ್ಲಿ ಪ್ರತಿಯೊಂದಕ್ಕೆ, ಸುಮಾರು 200 ಪ್ರಚಾರಕರಿರುವರು. ಒಂದು ಸಭೆಗೆ ಇಬ್ಬರು ಹಿರಿಯರಿರುವರು, ಮತ್ತು ಇನ್ನೊಂದಕ್ಕೆ ಒಬ್ಬನೇ ಹಿರಿಯನಿರುವನು. ಮತ್ತೊಂದು ಸಮ್ಮೇಳನವು ಬರುತ್ತಿದೆ, ಆದುದರಿಂದ ದೀಕ್ಷಾಸ್ನಾನಕ್ಕಾಗಿ ಆಗ ಸಿದ್ಧರಾಗಲಿರುವ 44 ಮಂದಿಯೊಂದಿಗೆ ಪ್ರಶ್ನೆಗಳನ್ನು ಚರ್ಚಿಸುತ್ತಿದ್ದೇವೆ. ನಂಬಲು ಕಷ್ಟಕರವಾಗಿ ಧ್ವನಿಸುತ್ತದೆ! ನಿಶ್ಚಯವಾಗಿಯೂ ಒಂದು ಆತ್ಮಿಕ ಪ್ರಮೋದವನ! ಅದು ವಿಸ್ಮಯಕರವಾಗಿದೆ! ಅದು ನಿಜವಾಗಿಯೂ ಕೆಲಸದಲ್ಲಿ ತೊಡಗಿರುವ ಯೆಹೋವನ ಹಸ್ತವಾಗಿದೆ. ಆತನ ರಥವು ಈ ಸಮಯದಲ್ಲಿ ರಷ್ಯದ ಉದ್ದಕ್ಕೂ ತೀವ್ರಗತಿಯಲ್ಲಿ ಚಲಿಸುತ್ತಿರುವಂತೆ ತೋರುತ್ತದೆ. ಅಕ್ಟೋಬರ್ 1995ರ ತನಕ, ಮಾಸ್ಕೊವಿನಲ್ಲಿ ಸುಮಾರು 40 ಸಭೆಗಳಿವೆ. ಸಾಕಷ್ಟು ಹಿರಿಯರಿರುವುದಾದರೆ, ಅದು ಸುಲಭವಾಗಿ ಇಮ್ಮಡಿಯಾಗಬಲ್ಲದು.
ನಮ್ಮ ಹಳೆಯ ವಸ್ತುಗಳನ್ನು ಮಾರುವ ಸಂತೆಯ ಶುಶ್ರೂಷೆಗಳು, ಬಹಳ ಹಿಂದಿನ ವಿಷಯಗಳು. ಸ್ಕಾಟ್ ಬ್ರೂಕ್ಲಿನ್ ಬೆತೆಲ್ನಲ್ಲಿದ್ದಾನೆ, ಸ್ಟೀವ್ ಮಾಸ್ಕೊವಿನ ಸಭೆಗಳಲ್ಲೊಂದರಲ್ಲಿ ಒಬ್ಬ ಹಿರಿಯನಾಗಿ ಸೇವೆ ಸಲ್ಲಿಸುತ್ತಿದ್ದಾನೆ—ದೇವರು ತನ್ನನ್ನು ನಮ್ಮಿಂದ ಕಂಡುಕೊಳ್ಳಲ್ಪಡುವಂತೆ ಅನುಮತಿಸಿದಕ್ಕಾಗಿ ನಾವಿಬ್ಬರೂ ಬಹಳ ಕೃತಜ್ಞರು. ಲಕ್ಷಾಂತರ ಜನರು ಆತನನ್ನು ಇನ್ನೂ ಹುಡುಕುವರೆಂದು ಮತ್ತು ದೇವರು ತನ್ನನ್ನು ಅವರಿಂದ ಕಂಡುಕೊಳ್ಳಲ್ಪಡುವಂತೆ ಅನುಮತಿಸುವನೆಂದು ನಾವು ಪ್ರಾರ್ಥಿಸುತ್ತೇವೆ.—ಸ್ಕಾಟ್ ಮತ್ತು ಸ್ಟೀವ್ ಡೇವಿಸ್ ಹೇಳಿದಂತೆ.
[ಪಾದಟಿಪ್ಪಣಿ]
a ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿತ.
[ಪುಟ 29 ರಲ್ಲಿರುವ ಚಿತ್ರ]
ಸ್ಕಾಟ್
[ಪುಟ 20 ರಲ್ಲಿರುವ ಚಿತ್ರ]
ಸ್ಟೀವ್
[ಪುಟ 32 ರಲ್ಲಿರುವ ಚಿತ್ರ]
ಪ್ರತಿ ಆದಿತ್ಯವಾರ, ಮಾಸ್ಕೊವಿನ ಒಂದು ಸಭೆಯಲ್ಲಿ 530ಕ್ಕಿಂತಲೂ ಹೆಚ್ಚಿನ ಜನರ ಉಪಸ್ಥಿತಿಯಿರುತ್ತದೆ