ಆ ರೇಗಿಸುವ ನೊಣಗಳು ನೀವು ಎಣಿಸುವುದಕ್ಕಿಂತಲೂ ಹೆಚ್ಚು ಪ್ರಯೋಜನಕರವಾಗಿವೆಯೊ?
ನಮ್ಮಲ್ಲಿ ಅಧಿಕಾಂಶ ಮಂದಿ ನೊಣಗಳನ್ನು, ಅನಿಷ್ಟಕರವೂ ಅಥವಾ ಸಮಾಜಕ್ಕೆ ಪೂರ್ತಿ ಅಪಾಯಕರವೂ ಆದವುಗಳಾಗಿ ಪರಿಗಣಿಸುತ್ತೇವೆ. ಆದರೆ ನೊಣಗಳು ಕಾಟಕೊಡುವಂಥವುಗಳಾಗಿ ಇರಬಹುದಾದರೂ, ಅವು ನಾವು ಎಣಿಸುವುದಕ್ಕಿಂತಲೂ ಹೆಚ್ಚು ಪ್ರಯೋಜನಕರವಾಗಿವೆ ಎಂಬುದನ್ನು ಜೀವಶಾಸ್ತ್ರಜ್ಞರು ಕಂಡುಹಿಡಿಯುತ್ತಿದ್ದಾರೆ.
ಅನೇಕ ಜಾತಿಯ ಸೊಳ್ಳೆಗಳು, ತಮ್ಮ ಕೀಟ ಅವಲಂಬಿಗಳಿಗೆ ಮಕರಂದ ಹಾಗೂ ಪುಷ್ಪಪರಾಗವನ್ನು ನೀಡುವ ಫಾಸ್ಟ್-ಫೂಡ್ ಹೊರಗಂಡಿಗಳಂತಿರುವ ಹೂವುಗಳನ್ನು ಸಂದರ್ಶಿಸುವುದರಲ್ಲಿ ದಿನದ ಹೆಚ್ಚಿನ ಭಾಗವನ್ನು ಕಳೆಯುತ್ತವೆ. ಪುಷ್ಪಪರಾಗಗಳಿಂದ ಪೌಷ್ಠಿಕಾಂಶಗಳನ್ನು ಹೊರಸೆಳೆಯುವಂತಹ—ಸ್ವತಃ ತನ್ನಲ್ಲೇ ಪರಿಗಣನೀಯ ಸಾಧನೆಯನ್ನು ಮಾಡುವ—ಕೆಲವು ನೊಣಗಳು, ತಮ್ಮ ಮೊಟ್ಟೆಗಳನ್ನು ವಿಕಸಿಸಲು ಈ ಅಧಿಕ ಶಕ್ತಿಯ ಆಹಾರದ ಮೇಲೆ ಅವಲಂಬಿಸಿಕೊಂಡಿವೆ.
ಒಂದರ ನಂತರ ಇನ್ನೊಂದು ಹೂವನ್ನು ಸಂದರ್ಶಿಸುತ್ತಿರುವಾಗ, ನೊಣಗಳ ದೇಹಗಳಿಗೆ ತಾವಾಗಿಯೇ ಅಂಟಿಕೊಳ್ಳುವ, ಪುಷ್ಪಪರಾಗದ ಅಂಟುವ ಬೀಜಕೋಶಗಳನ್ನು ಅವುಗಳು ಅನಿವಾರ್ಯವಾಗಿ ಕೊಂಡೊಯ್ಯುತ್ತವೆ. ಜೀವಶಾಸ್ತ್ರಜ್ಞರಿಂದ ಜಾಗರೂಕವಾಗಿ ಪರೀಕ್ಷಿಸಲ್ಪಟ್ಟ ಒಂದು ನೊಣವು, ಅದರ ದೇಹದ ಮೇಲೆ 1,200 ಪುಷ್ಪಪರಾಗದ ಬೀಜಕೋಶಗಳನ್ನು ಹೊಂದಿತ್ತು! ನೊಣಗಳ ಪರಾಗಸ್ಪರ್ಶ ಪಾತ್ರದ ಕುರಿತಾಗಿ ಹೆಚ್ಚು ಸಂಶೋಧನೆಯು ನಡೆಸಲ್ಪಟ್ಟಂತೆ, ಕೆಲವು ಹೂವುಗಳು ತಮ್ಮ ಬದುಕಿ ಉಳಿಯುವಿಕೆಗಾಗಿ ಆ ನೊಣಗಳ ಮೇಲೆ ಅವಲಂಬಿಸಿಕೊಂಡಿರುತ್ತವೆ ಎಂದು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ.
ಉತ್ತರ ಅಮೆರಿಕದ ಕೊಲೊರ್ಯಾಡೊನಲ್ಲಿ ನಡೆಸಲ್ಪಟ್ಟ ಪ್ರಯೋಗಗಳ ಸರಣಿಯನ್ನು, ನೈಸರ್ಗಿಕ ಇತಿಹಾಸ (ಇಂಗ್ಲಿಷ್) ಎಂಬ ಪತ್ರಿಕೆಯು ವರ್ಣಿಸುತ್ತದೆ. ಮನೆಗೆ ಪದೇ ಪದೇ ಬರುವ ನೊಣಗಳನ್ನು ಹೋಲುವ ಕಾಮ್ನ್ ಮಸ್ಕಾಯಿಡ್ ನೊಣಗಳನ್ನು, ಸುಲಭವಾಗಿ ಗುರುತಿಸಸಾಧ್ಯವಾಗುವಂತೆ ಅವುಗಳಿಗೆ ಉಜ್ವಲವಾದ ಬಣ್ಣಗಳನ್ನು ಎರಚಲಾಯಿತು. ಅವುಗಳ ದೈನಂದಿನ ಚಟುವಟಿಕೆಯನ್ನು ಎಚ್ಚರಿಕೆಯಿಂದ ಗಮನಿಸಿದ ಬಳಿಕ, ಕೆಲವು ವನಪುಷ್ಪಗಳಿಗೆ ಜೇನುನೊಣಗಳಿಗಿಂತಲೂ ಈ ನೊಣಗಳು ಹೆಚ್ಚು ಪ್ರಮುಖ ಪರಾಗಸ್ಪರ್ಶಿಗಳಾಗಿದ್ದವು ಮತ್ತು ಜೇನುನೊಣಗಳಿಗಿಂತಲೂ ಅವು ಇನ್ನೂ ಹೆಚ್ಚು ದೂರಕ್ಕೆ ವ್ಯಾಪಿಸಿದ್ದವು ಎಂಬುದನ್ನು ಕಂಡುಹಿಡಿಯಲು ಸಂಶೋಧಕರು ಆಶ್ಚರ್ಯಗೊಂಡಿದ್ದರು.
ನೊಣದ ಕೆಲಸವು ಎಷ್ಟು ಪ್ರಾಮುಖ್ಯವಾದದ್ದಾಗಿದೆ? ಕೆಲವು ಹೂವುಗಳು ಬಲೆಯಿಂದ ಆವರಿಸಲ್ಪಟ್ಟಿದ್ದವು, ಇದರಿಂದಾಗಿ ಅವು ಕೀಟಗಳಿಂದ ಸಂದರ್ಶಿಸಲ್ಪಡುವುದು ಅಸಾಧ್ಯವಾಗಿತ್ತು. ನೊಣಗಳಿಂದ ಪರಾಗಸ್ಪರ್ಶಗೊಂಡಿದ್ದ, ಸಮೀಪದಲ್ಲಿದ್ದ ಫಲಭರಿತ ಹೂವುಗಳಿಗೆ ತೀರ ವ್ಯತಿರಿಕ್ತವಾಗಿ, ಈ ಹೂವುಗಳು ಬೀಜಗಳನ್ನು ಉತ್ಪಾದಿಸಲೇ ಇಲ್ಲ. ಬಹುಮಟ್ಟಿಗೆ ಕೆಲವು ಹೂವುಗಳು ಜೇನುನೊಣಗಳಿಂದ ಪರಾಗಸ್ಪರ್ಶಗೊಳಿಸಲ್ಪಟ್ಟಿದ್ದಾಗ್ಯೂ, ಕಾಡು ನಾರುಸಸ್ಯ ಅಥವಾ ಕಾಡು ಜಿರೇನಿಯಮ್ ಸಸ್ಯದಂತಹ ಇತರ ಜಾತಿಗಳ ವಿದ್ಯಮಾನದಲ್ಲಿ, ಕೆಲವು ಮಟ್ಟಗಳಲ್ಲಿ ಈ ಕೆಲಸದ 90ಕ್ಕಿಂತಲೂ ಹೆಚ್ಚಿನ ಪ್ರತಿಶತವನ್ನು ನೊಣಗಳು ನಡೆಸಿದವು.
ಸಂಶೋಧಕರಲ್ಲಿ ಇಬ್ಬರಾದ, ಕ್ಯಾರಲ್ ಕರ್ನ್ಸ್ ಮತ್ತು ಡೇವಿಡ್ ಈನೋವುಯಿಯವರ ಅಂತಿಮ ನಿರ್ಧಾರವು ಏನಾಗಿತ್ತು? “ಆದುದರಿಂದ, ಕೊಲೊರ್ಯಾಡೊ ರಾಕೀಸ್ನಲ್ಲಿರುವ ಅನೇಕ ವನಪುಷ್ಪಗಳಿಗೆ, ನೊಣಗಳು, ಜೇನುನೊಣಗಳು, ಚಿಟ್ಟೆಗಳು, ಮತ್ತು ಹಮಿಂಗ್ಬರ್ಡ್ (ಝೇಂಕಾರದ ಹಕ್ಕಿ)ಗಳನ್ನು ಮೀರಿಸುತ್ತವೆ . . . ಅಧಿಕಾಂಶ ಜನರು ಸ್ವಲ್ಪಮಟ್ಟಿಗೆ ವಿಕರ್ಷಕವಾಗಿ ಕಂಡುಕೊಳ್ಳುವಂತಹ ಈ ಕೀಟಗಳಿಲ್ಲದೆ, ಅಷ್ಟೊಂದು ಆನಂದಕರವಾದದ್ದಾಗಿರುವ ಆ್ಯಲ್ಪೈನ್ ಹುಲ್ಲುಗಾವಲನ್ನು ಸಂದರ್ಶಿಸುವಂತೆ ಮಾಡುವ ವನಪುಷ್ಪಗಳಲ್ಲಿ ಅನೇಕ ಹೂವುಗಳು ಪರಾಗಸ್ಪರ್ಶಗೊಂಡು ಬೆಳೆಯಲು ವಿಫಲವಾಗುತ್ತಿದ್ದವು.” ನೊಣಗಳು ಪ್ರಯೋಜನಕರವಾಗಿವೆ ಎಂಬುದರಲ್ಲಿ ಸಂದೇಹವಿಲ್ಲ!