ಒಂದು ಜೇನುಹುಳು ಯಾವಾಗ ಜೇನುಹುಳು ಆಗಿರುವುದಿಲ್ಲ?
ಪ್ರತಿ ದಿನ ನೂರಾರು ಹೂವುಗಳಿಗೆ ಭೇಟಿಕೊಟ್ಟು, ಮಕರಂದವನ್ನು ಜೇನುಗೂಡಿಗೆ ಸಾಗಿಸುತ್ತಾ, ಜೇನುಹುಳುಗಳು ಕಾರ್ಯಮಗ್ನ ಜೀವಿತಗಳನ್ನು ನಡೆಸುತ್ತವೆ. ವಸಂತಕಾಲ ಬರುವಾಗ, ಗಂಡು ಜೇನುಹುಳುಗಳು ಒಂದು ಸಂಗಾತಿಗಾಗಿ ಹುಡುಕುತ್ತವೆ. ಇದಕ್ಕಾಗಿ ಅವು ದೃಷ್ಟಿ ಮತ್ತು ವಾಸನೆಯ ಮೇಲೆ ಅವಲಂಬಿಸುತ್ತವೆ. ಆದರೆ ಸಮೀಪದೃಷ್ಟಿದೋಷವುಳ್ಳ ಜೇನುಹುಳುವಿನ ಗಮನವನ್ನು ಒಂದು ಆರ್ಕಿಡ್ ಹೂವು ಕೂಡ ಬಯಸುತ್ತದೆ.
ದಕ್ಷಿಣ ಯೂರೋಪ್ನಲ್ಲಿ, ಯಾವುದರ ಫಲವತ್ತಾಗುವಿಕೆಯು, ಹೆಣ್ಣು ಜೇನುಹುಳುಗಳನ್ನು ಅನುಕರಿಸುವುದರ ಮೇಲೆ ಅವಲಂಬಿಸುತ್ತದೊ ಅಂತಹ ಹಲವಾರು ಕಾಡು ಆರ್ಕಿಡ್ಗಳು ಇವೆ. ಈ ಆರ್ಕಿಡ್ಗಳು ಜೊತೆ ಆರ್ಕಿಡ್ಗಳಿಗೆ ಪರಾಗದ “ಪಾರ್ಸೆಲ್ಗಳನ್ನು” ಕಳುಹಿಸಬೇಕಾಗಿದೆ. ಜೇನುಹುಳುಗಳು ಆದರ್ಶ ವಾಹಕಗಳಾಗಿವೆ. ಆದರೆ ಆರ್ಕಿಡ್ಗಳಿಗೆ, ಜೇನುಹುಳುಗಳನ್ನು ಆಕರ್ಷಿಸುವ ರುಚಿಕರವಾದ ಮಕರಂದ ಇಲ್ಲದಿರುವುದರಿಂದ, ಒಂದರ್ಥದಲ್ಲಿ ಹೇಳುವುದಾದರೆ ಆರ್ಕಿಡ್ಗಳು ತಂತ್ರವನ್ನು ಬಳಸಬೇಕು. ಮತ್ತು ಆ ತಂತ್ರವೇನೆಂದರೆ, ಆ ಹೂವು ಎಷ್ಟು ಚೆನ್ನಾಗಿ ಒಂದು ಹೆಣ್ಣು ಜೇನುಹುಳುವಿನಂತೆ ತೋರುತ್ತದೆ ಮತ್ತು ವಾಸನೆ ಬೀರುತ್ತದೆಂದರೆ, ಆ ಗಂಡು ಜೇನುಹುಳು ಅದರೊಂದಿಗೆ ಕೂಡಲು ಪ್ರಯತ್ನಿಸುತ್ತದೆ! ಈ ಆರ್ಕಿಡ್ಗಳ ಪ್ರತಿಯೊಂದು ಜಾತಿಗೆ ಅದರ ಸ್ವಂತ ಸೋಗು ಮತ್ತು ಸುವಾಸನೆಯಿದೆ.
ಆದರೆ ಆ ಗಂಡು ಜೇನುಹುಳು ತನ್ನ ತಪ್ಪನ್ನು ಗ್ರಹಿಸುವ ಸಮಯದಷ್ಟಕ್ಕೆ, ಆರ್ಕಿಡ್ ಅದರ ದೇಹದ ಮೇಲೆ ಪರಾಗದ ಅಂಟುಅಂಟಿನ ಪ್ಯಾಕೆಟನ್ನು ಇಟ್ಟಿರುತ್ತದೆ. ಅನಂತರ ಆ ಜೇನುಹುಳು ಹಾರಿಹೋಗುತ್ತದೆ. ಆದರೆ ಅದು ಪುನಃ ಇನ್ನೊಂದು ಆರ್ಕಿಡ್ನಿಂದ ಮೋಸಗೊಳಿಸಲ್ಪಡುತ್ತದೆ ಮತ್ತು ಆ ಆರ್ಕಿಡ್ ಆ ಪರಾಗವನ್ನು ಪಡೆದುಕೊಳ್ಳುತ್ತದೆ. ಅಂತಹ ಹಲವಾರು ವಂಚನೆಗಳ ನಂತರ, ಈ ಆರ್ಕಿಡ್ಗಳನ್ನು ನಂಬಬಾರದೆಂದು ಆ ಜೇನುಹುಳುವಿಗೆ ತಿಳಿದುಬರುತ್ತದೆ. ಅಷ್ಟರೊಳಗೆ, ಅದು ಆ ಹೂವುಗಳಲ್ಲಿ ಕೆಲವಕ್ಕೆ ಬಹುಶಃ ಪರಾಗಧಾನ ಮಾಡಿರಬಹುದು.
ಆಲೋಚನೆಮಾಡದಂತಹ ಈ ಆರ್ಕಿಡ್ಗಳು, ಜೇನುಹುಳುಗಳನ್ನು ಮೋಸಗೊಳಿಸಲಿಕ್ಕಾಗಿ ಬೇಕಾಗಿರುವ ಸರಿಯಾದ ವಾಸನೆ ಮತ್ತು ತೋರಿಕೆಯನ್ನು ಹೇಗೆ ಪಡೆಯುತ್ತವೆ? ಅಂತಹ ಗಮನಾರ್ಹ ಯಂತ್ರರಚನೆಗಳು ಒಬ್ಬ ಬುದ್ಧಿವಂತ ವಿನ್ಯಾಸಕನ ಪುರಾವೆಯನ್ನು ಕೊಡುತ್ತವೆ. ಆತನ ಸೃಷ್ಟಿಯು ಅಚ್ಚರಿಗೊಳಿಸದೆ ಮತ್ತು ಆಕರ್ಷಿಸದೆ ಇರುವುದಿಲ್ಲ.