ಬೈಬಲಿನ ದೃಷ್ಟಿಕೋನ
ಸತ್ಯ ಕ್ರೈಸ್ತರು ದೈವಿಕ ಸಂರಕ್ಷಣೆಯನ್ನು ನಿರೀಕ್ಷಿಸಬಲ್ಲರೊ?
ಪ್ರಾರ್ಥನೆಯಾದ ಬಳಿಕ ಕ್ರೈಸ್ತರು, ಜೊತೆ ಆರಾಧಕರಿಗೆ ಪರಿಹಾರ ವಸ್ತುಗಳನ್ನು ಒದಗಿಸಲಿಕ್ಕಾಗಿ, ತಾವು ಕೊಲ್ಲಲ್ಪಡುವ ಸಂಭವನೀಯತೆಯಿದ್ದಂತಹ ಒಂದು ಯುದ್ಧಛಿದ್ರ ಕ್ಷೇತ್ರವನ್ನು ಒಂದು ಬೆಂಗಾವಲಿನಲ್ಲಿ ಪ್ರಯಾಣಿಸಿದರು. ಯುದ್ಧಮಾಡುತ್ತಿದ್ದ ಸೈನ್ಯಗಳ ಮಹದಾಶ್ಚರ್ಯಕ್ಕೆ, ಅವರು ಸುಗಮವಾಗಿ ಹಾದುಹೋದರು. ಅವರನ್ನು ದೇವರ ದೂತನು ಸಂರಕ್ಷಿಸಿದನೊ?
ಅನೇಕ ವರ್ಷಗಳಿಂದ ಶುಶ್ರೂಷಕರೋಪಾದಿ ಸೇವೆಸಲ್ಲಿಸಿದ್ದ ಒಬ್ಬ ಕ್ರೈಸ್ತ ದಂಪತಿಗಳು, ಮನೆಯಿಂದ ಮನೆಗೆ ಸೌವಾರ್ತಿಕ ಕೆಲಸವನ್ನು ಮಾಡುತ್ತಿದ್ದಂತಹ ಸ್ಥಳದಲ್ಲಿ, ವಿಮಾನವೊಂದು ನೆಲಕ್ಕೆ ಅಪ್ಪಳಿಸಿದಾಗ ಕೊಲ್ಲಲ್ಪಟ್ಟರು. ಆ ನಿರ್ದಿಷ್ಟ ಕ್ಷಣದಲ್ಲಿ, ದೇವರ ದೂತನು ಅವರನ್ನು ಅಥವಾ ವಿಮಾನವನ್ನು ಬೇರೆ ಯಾವುದೋ ಸ್ಥಳಕ್ಕೆ ಏಕೆ ನಿರ್ದೇಶಿಸಲಿಲ್ಲ?—ಅ. ಕೃತ್ಯಗಳು 8:26ನ್ನು ಹೋಲಿಸಿರಿ.
ಈ ಘಟನೆಗಳನ್ನು ತುಲನೆಮಾಡುತ್ತಾ, ನಾವು ಹೀಗೆ ಕೇಳಬಹುದು: ಅನೇಕವೇಳೆ ತೀರ ಅಪಾಯಕರ ಸನ್ನಿವೇಶಗಳಲ್ಲಿರುವ ಇತರರು ಬದುಕುಳಿಯುವಾಗ, ಕೆಲವು ಕ್ರೈಸ್ತರು ದೇವರ ಚಿತ್ತವನ್ನು ಮಾಡುತ್ತಿರುವಾಗಲೂ ಸಾಯುತ್ತಾರೆ ಏಕೆ? ವಿಶೇಷವಾಗಿ ಈ ಕಠಿನಕರವಾದ “ಕಡೇ ದಿವಸಗಳ”ಲ್ಲಿ, ಕ್ರೈಸ್ತರು ದೈವಿಕ ಸಂರಕ್ಷಣೆಯನ್ನು ನಿರೀಕ್ಷಿಸಬಲ್ಲರೊ?—2 ತಿಮೊಥೆಯ 3:1.
ದೈವಿಕ ಸಂರಕ್ಷಣೆಯ ಉದ್ದೇಶ
ತನ್ನ ಜನರನ್ನು ಆಶೀರ್ವದಿಸಲು ಹಾಗೂ ಸಂರಕ್ಷಿಸಲು ಯೆಹೋವ ದೇವರು ವಾಗ್ದಾನಮಾಡಿದ್ದಾನೆ. (ವಿಮೋಚನಕಾಂಡ 19:3-6; ಯೆಶಾಯ 54:17) ಪ್ರಥಮ ಶತಮಾನದಲ್ಲಿ, ಕ್ರೈಸ್ತ ಸಭೆಯು ತನ್ನ ಶೈಶವಾವಸ್ಥೆಯಲ್ಲಿದ್ದಾಗ ಆತನು ಪ್ರಮುಖವಾಗಿ ಹೀಗೆ ಮಾಡಿದನು. ಎಲ್ಲಾ ರೀತಿಯ ಅದ್ಭುತಕಾರ್ಯಗಳು ಸಮೃದ್ಧವಾಗಿದ್ದವು. ಸಾವಿರಾರು ಜನರಿಗೆ ಉಣಿಸಲಿಕ್ಕಾಗಿ ಯೇಸುವು ಆಹಾರವನ್ನು ಬಹಳವಾಗಿ ಹೆಚ್ಚಿಸಿದನು; ಅವನೂ ಅವನು ಶಿಷ್ಯರೂ ಎಲ್ಲಾ ವಿಧದ ರೋಗವನ್ನೂ ದೌರ್ಬಲ್ಯವನ್ನೂ ವಾಸಿಮಾಡಿದರು, ದೆವ್ವಹಿಡಿದವರಿಂದ ಅತಿಮಾನುಷ ಆತ್ಮಗಳನ್ನು ಹೊರಡಿಸಿಬಿಟ್ಟರು, ಮತ್ತು ಮೃತರನ್ನೂ ಎಬ್ಬಿಸಿದರು. ದೈವಿಕ ನಿರ್ದೇಶನದ ಕೆಳಗೆ ಅನನುಭವಿಯಾದ ಸಭೆಯು ಬೆಳೆದು, ಸ್ಥಿರವಾಗಿ ಸ್ಥಾಪಿತವಾಯಿತು. ಆದರೂ, ದೇವರ ಸ್ಪಷ್ಟ ಬೆಂಬಲದ ಹೊರತಾಗಿಯೂ, ಯಾವುದನ್ನು ಅಕಾಲ ಮರಣವೆಂದು ಕರೆಯಬಹುದೋ ಅದನ್ನು ಅನೇಕ ನಂಬಿಗಸ್ತ ಕ್ರೈಸ್ತರು ಅನುಭವಿಸಿದರು.—ಕೀರ್ತನೆ 90:10ನ್ನು ಹೋಲಿಸಿರಿ.
ಜೆಬದಾಯನ ಮಕ್ಕಳಾದ ಯಾಕೋಬ ಮತ್ತು ಯೋಹಾನರ ವಿದ್ಯಮಾನಗಳನ್ನು ಪರಿಗಣಿಸಿರಿ. ಅವರು ಪೇತ್ರನೊಂದಿಗೆ ಅಪೊಸ್ತಲರೋಪಾದಿ ಆರಿಸಿಕೊಳ್ಳಲ್ಪಟ್ಟವರಾಗಿದ್ದು, ಕ್ರಿಸ್ತನ ಅತ್ಯಂತ ಆಪ್ತ ಸ್ನೇಹಿತರಲ್ಲಿ ಸೇರಿದವರಾಗಿದ್ದರು.a ಆದರೆ ಸಾ.ಶ. 44ನೆಯ ವರ್ಷದಲ್ಲಿ ಯಾಕೋಬನು ಧರ್ಮಬಲಿಯಾದನು, ಆದರೆ ಅವನ ಸಹೋದರನಾದ ಯೋಹಾನನು ಪ್ರಥಮ ಶತಮಾನದ ಅಂತ್ಯದ ವರೆಗೆ ಜೀವಿಸಿದನು. ಇಬ್ಬರೂ ದೇವರ ಚಿತ್ತವನ್ನು ಮಾಡುತ್ತಿದ್ದರೆಂಬುದು ಸ್ಪಷ್ಟ. ಯೋಹಾನನು ಜೀವಿಸಿದ್ದಾಗ್ಯೂ, ಯಾಕೋಬನು ಸಾಯುವಂತೆ ಏಕೆ ಅನುಮತಿಸಲ್ಪಟ್ಟನು?
ಸರ್ವಶಕ್ತನಾದ ದೇವರಿಗೆ, ಯಾಕೋಬನ ಜೀವವನ್ನು ಕಾಪಾಡುವ ಸಾಮರ್ಥ್ಯವು ಖಂಡಿತವಾಗಿಯೂ ಇತ್ತು. ವಾಸ್ತವವಾಗಿ, ಯಾಕೋಬನ ಧರ್ಮಬಲಿಯಾದ ಸ್ವಲ್ಪಸಮಯಾವಧಿಯ ಬಳಿಕ, ಪೇತ್ರನು ಯೆಹೋವನ ದೂತನಿಂದ ಮರಣದಿಂದ ರಕ್ಷಿಸಲ್ಪಟ್ಟನು. ದೇವದೂತನು ಯಾಕೋಬನನ್ನು ಏಕೆ ಉಳಿಸಲಿಲ್ಲ?—ಅ. ಕೃತ್ಯಗಳು 12:1-11.
ದೇವರ ಉದ್ದೇಶದ ಪೂರ್ಣಗೊಳಿಸುವಿಕೆಯಲ್ಲಿ ಉಪಯೋಗಿಸಲ್ಪಟ್ಟದ್ದು
ದೈವಿಕ ಸಂರಕ್ಷಣೆಯು ಏಕೆ ಕೊಡಲ್ಪಟ್ಟಿದೆ ಎಂಬುದನ್ನು ಅರ್ಥಮಾಡಿಕೊಳ್ಳಲಿಕ್ಕಾಗಿ, ವ್ಯಕ್ತಿಗಳಿಗೆ ಕೇವಲ ಹೆಚ್ಚು ದೀರ್ಘಕಾಲ ಜೀವಿಸುವಂತೆ ಶಕ್ತರನ್ನಾಗಿ ಮಾಡಲಿಕ್ಕಾಗಿ ಅಲ್ಲ, ಬದಲಾಗಿ ಇನ್ನೂ ಹೆಚ್ಚು ಪ್ರಮುಖವಾದ ವಿಷಯವನ್ನು, ದೇವರ ಉದ್ದೇಶದ ಪೂರ್ಣಗೊಳಿಸುವಿಕೆಯನ್ನು ಸಂರಕ್ಷಿಸಲಿಕ್ಕಾಗಿ ಇದು ಕೊಡಲ್ಪಡುತ್ತದೆಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಉದಾಹರಣೆಗಾಗಿ, ಆ ಉದ್ದೇಶವನ್ನು ನೆರವೇರಿಸುವುದರೊಂದಿಗೆ ಕ್ರೈಸ್ತ ಸಭೆಯು ನಿಕಟವಾಗಿ ಸಂಬಂಧಿಸಿದ್ದುದರಿಂದ, ಒಟ್ಟಿನಲ್ಲಿ ಅದರ ಪಾರಾಗುವಿಕೆಯ ಖಾತ್ರಿಯು ಕೊಡಲ್ಪಟ್ಟಿದೆ. ಆದರೂ, ತಮ್ಮ ನಂಬಿಕೆಯ ಕಾರಣದಿಂದಾಗಿ, ತನ್ನ ಶಿಷ್ಯರು ವ್ಯಕ್ತಿಗಳೋಪಾದಿ ಮರಣವನ್ನು ಎದುರಿಸಸಾಧ್ಯವಿದೆಯೆಂಬುದಾಗಿ ಯೇಸುವು ಸರಳವಾಗಿ ಹೇಳಿದನು. ಯೇಸು ಇದನ್ನು ಹೇಳಿದ ಬಳಿಕ, ಅದ್ಭುತಕರವಾದ ಬಿಡುಗಡೆಯನ್ನಲ್ಲ, ಬದಲಾಗಿ ‘ಕಡೇ ವರೆಗೆ ತಾಳ್ಮೆ’ಯಿಂದಿರುವುದನ್ನು ಒತ್ತಿಹೇಳಿದನು. (ಮತ್ತಾಯ 24:9, 13) ಇತರರು ಸಂರಕ್ಷಿಸಲ್ಪಡದಿರುವಾಗ, ಕೆಲವು ವ್ಯಕ್ತಿಗಳು ಸಂರಕ್ಷಿಸಲ್ಪಟ್ಟಿರುವ ವಾಸ್ತವಾಂಶವು, ದೇವರು ಪಕ್ಷಪಾತಿಯಾಗಿದ್ದಾನೆಂಬುದನ್ನು ಸೂಚಿಸುವುದಿಲ್ಲ. ತನ್ನ ಉದ್ದೇಶವನ್ನು ನೆರವೇರಿಸಲಿಕ್ಕಾಗಿ, ಕೇವಲ ಅತ್ಯುತ್ತಮವಾದ ಸ್ಥಾನದಲ್ಲಿದ್ದ ವ್ಯಕ್ತಿಯನ್ನು ದೇವರು ಉಪಯೋಗಿಸಿದನು; ಇದು ಅಂತಿಮವಾಗಿ ಸರ್ವ ಮಾನವಕುಲಕ್ಕೆ ಪ್ರಯೋಜಕವಾಗಿರುವುದು.
ದೇವರ ಸೇವೆಯಲ್ಲಿ ಅಕಾಲ ಮರಣವು ಒಂದು ನಿಜವಾದ ಸಾಧ್ಯತೆಯಾಗಿರುವುದರಿಂದ, ದೇವರನ್ನು ಆರಾಧಿಸಿದ ಕಾರಣಕ್ಕಾಗಿ ಮರಣಶಿಕ್ಷೆ ವಿಧಿಸಲ್ಪಟ್ಟಿದ್ದ ಆ ಮೂವರು ನಂಬಿಗಸ್ತ ಇಬ್ರಿಯರೋಪಾದಿ, ಕ್ರೈಸ್ತರು ಅದೇ ರೀತಿಯ ಸಮತೂಕದ ಮನೋಭಾವವನ್ನು ಹೊಂದಿರತಕ್ಕದ್ದು. ಅವರು ಬಾಬೆಲಿನ ಅರಸನಿಗೆ ಹೇಳಿದ್ದು: “ಅರಸೇ, ನಾವು ಸೇವಿಸುವ ದೇವರಿಗೆ ಚಿತ್ತವಿದ್ದರೆ ಆತನು ಧಗಧಗನೆ ಉರಿಯುವ ಆವಿಗೆಯೊಳಗಿಂದ ನಮ್ಮನ್ನು ಬಿಡಿಸಬಲ್ಲನು; ಹೇಗೂ ನಿನ್ನ ಕೈಯಿಂದ ನಮ್ಮನ್ನು ಬಿಡಿಸುವನು. ಚಿತ್ತವಿಲ್ಲದಿದ್ದರೂ ರಾಜನೇ, ಇದು ನಿನಗೆ ತಿಳಿದಿರಲಿ, ನಾವು ನಿನ್ನ ದೇವರುಗಳನ್ನು ಸೇವಿಸುವದಿಲ್ಲ, ನೀನು ನಿಲ್ಲಿಸಿದ ಬಂಗಾರದ ಪ್ರತಿಮೆಯನ್ನು ಪೂಜಿಸುವದಿಲ್ಲ.”—ದಾನಿಯೇಲ 3:17, 18.
ತನ್ನ ಉದ್ದೇಶದ ಪೂರ್ಣಗೊಳಿಸುವಿಕೆಯಲ್ಲಿ ಪೇತ್ರ ಮತ್ತು ಯೋಹಾನರು ಪ್ರಮುಖ ಪಾತ್ರವನ್ನು ವಹಿಸಿಕೊಂಡ ಕಾರಣದಿಂದ, ಯೆಹೋವನು ಅವರ ಜೀವಗಳನ್ನು ರಕ್ಷಿಸಿದನು. ಪ್ರೇರಿತವಾದ ಎರಡು ಬೈಬಲ್ ಪುಸ್ತಕಗಳನ್ನು ಬರೆಯುವುದನ್ನು ಒಳಗೊಂಡಿದ್ದ ಕುರಿಪಾಲನಾ ಕೆಲಸವನ್ನು ಮಾಡುವ ಮೂಲಕ, ಸಭೆಯನ್ನು “ದೃಢಪಡಿಸ”ಲಿಕ್ಕಾಗಿ ಪೇತ್ರನು ಉಪಯೋಗಿಸಲ್ಪಟ್ಟನು. (ಲೂಕ 22:32) ಯೋಹಾನನು ಐದು ಪುಸ್ತಕಗಳನ್ನು ಬರೆದನು ಮತ್ತು ಆದಿ ಸಭೆಯಲ್ಲಿ ಒಂದು ‘ಸ್ತಂಭ’ವಾಗಿದ್ದನು.—ಗಲಾತ್ಯ 2:9; ಯೋಹಾನ 21:15-23.
ಯಾವಾಗ ಮತ್ತು ಯಾವ ವಿಧದಲ್ಲಿ ತಾನು ತನ್ನ ಸೇವಕರ ಜೀವಿತಗಳಲ್ಲಿ ಹಸ್ತಕ್ಷೇಪಮಾಡುವೆನೆಂಬುದನ್ನು, ಯೆಹೋವನು ಹೇಗೆ ನಿರ್ಣಯಿಸುತ್ತಾನೆಂದು ಮುಂತಿಳಿಸುವುದು ಅಸಾಧ್ಯವಾಗಿದೆ. “ವಿಷಯಗಳ ವ್ಯವಸ್ಥೆಯ ಸಮಾಪ್ತಿಯ ವರೆಗೆ ಎಲ್ಲಾ ದಿವಸಗಳ”ಲ್ಲಿಯೂ ತನ್ನ ಹಿಂಬಾಲಕರೊಂದಿಗೆ ಇರುವೆನೆಂದು ಕ್ರಿಸ್ತನು ವಾಗ್ದಾನಿಸಿದ್ದನೆಂಬುದು, ನಿಶ್ಚಯಾತ್ಮಕವಾಗಿ ಹೇಳಸಾಧ್ಯವಿರುವ ವಿಷಯವಾಗಿದೆ. (ಮತ್ತಾಯ 28:20, NW) ವಿಶೇಷವಾಗಿ, ಸಾರುವ ಕಾರ್ಯವನ್ನು ದೇವದೂತರ ನಿರ್ದೇಶನದಿಂದ ನಡೆಸುವ ಮೂಲಕ ಅವನು ‘ನಮ್ಮೊಂದಿಗೆ ಇರು’ವನು. (ಮತ್ತಾಯ 13:36-43; ಪ್ರಕಟನೆ 14:6) ಸಾಮಾನ್ಯವಾದ ಈ ಸೂಚಕಗಳ ಹೊರತಾಗಿ, ದೈವಿಕ ಸಹಾಯವು ಹೇಗೆ ಪ್ರದರ್ಶಿಸಲ್ಪಡುವುದು ಅಥವಾ ದೈವಿಕ ಸಂರಕ್ಷಣೆಯನ್ನು ಯಾರು ಪಡೆದುಕೊಳ್ಳಬಹುದು ಎಂಬ ವಿಷಯಗಳನ್ನು ನಾವು ನಿಖರವಾಗಿ ಎದುರುನೋಡಸಾಧ್ಯವಿಲ್ಲ. ತನಗೆ ದೇವರ ಸಂರಕ್ಷಣೆ ಮತ್ತು ಮಾರ್ಗದರ್ಶನವಿತ್ತೆಂದು ಒಬ್ಬ ಕ್ರೈಸ್ತನು ಭಾವಿಸುವುದಾದರೆ ಆಗೇನು? ಇದನ್ನು ನಿರ್ಣಯಾತ್ಮಕವಾಗಿ ರುಜುಪಡಿಸಲು ಅಥವಾ ರುಜುಪಡಿಸದಿರಲು ಅಸಾಧ್ಯವಾಗಿರುವುದರಿಂದ, ಅಂಥ ಒಬ್ಬ ವ್ಯಕ್ತಿಯ ಪ್ರಾಮಾಣಿಕ ಪ್ರತಿಪಾದನೆಗಳನ್ನು ಯಾರೊಬ್ಬನೂ ತೀರ್ಪುಮಾಡಬಾರದು.
ದೇವರು ನಿರ್ದಯನಾಗಿದ್ದಾನೊ?
ದೇವರು ಕ್ರೈಸ್ತರ ಮರಣವನ್ನು ಅನುಮತಿಸುತ್ತಾನೆಂಬ ಸಂಗತಿಯು, ಆತನು ಹೇಗೂ ನಿರ್ದಯನಾಗಿದ್ದಾನೆಂಬುದನ್ನು ತೋರಿಸುತ್ತದೊ? ಖಂಡಿತವಾಗಿಯೂ ಇಲ್ಲ. (ಪ್ರಸಂಗಿ 9:11) ನಮ್ಮ ಜೀವವನ್ನು ಕೇವಲ ಕೆಲವು ವರ್ಷಗಳ ವರೆಗೆ ಅಥವಾ ಕೆಲವು ದಶಕಗಳ ವರೆಗಲ್ಲ, ಬದಲಾಗಿ ನಿತ್ಯಕಾಲಕ್ಕೂ ರಕ್ಷಿಸಲಿಕ್ಕಾಗಿ ಯೆಹೋವನು ಕಾರ್ಯನಡಿಸುತ್ತಿದ್ದಾನೆ. ಆತನ ಶ್ರೇಷ್ಠ ದೃಷ್ಟಿಕೋನದಿಂದ, ತನ್ನನ್ನು ಪ್ರೀತಿಸುವ ಅಥವಾ ತನ್ನ ಕಡೆಗೆ ಬರುವ ಪ್ರತಿಯೊಬ್ಬ ವ್ಯಕ್ತಿಯ ನಿತ್ಯವಾದ ಕ್ಷೇಮಕ್ಕಾಗಿ, ಆತನು ಘಟನೆಗಳನ್ನು ನಡೆಸುತ್ತಾನೆ. (ಮತ್ತಾಯ 18:14ನ್ನು ಹೋಲಿಸಿರಿ.) ಆತನ ವಾಗ್ದಾನದ ನೆರವೇರಿಕೆಯು, ಈ ವಿಷಯಗಳ ವ್ಯವಸ್ಥೆಯಲ್ಲಿ ನಾವು ಅನುಭವಿಸಿರುವ ಯಾವುದೇ ಸಂಗತಿಯ—ಮರಣದ ವಿಷಯದಲ್ಲಿ ಸಹ—ಸಂಪೂರ್ಣವಾದ ತೆಗೆದುಹಾಕುವಿಕೆಯನ್ನು ಅರ್ಥೈಸುವುದು. ಯೆಹೋವನ ವ್ಯವಹರಿಸುವಿಕೆಗಳು ಎಷ್ಟು ಗಹನವೂ ಪರಿಪೂರ್ಣವಾದವುಗಳೂ ಆಗಿವೆಯೆಂದರೆ, ಅಪೊಸ್ತಲ ಪೌಲನು ಹೀಗೆ ಉದ್ಗರಿಸುವಂತೆ ಪ್ರೇರಿಸಲ್ಪಟ್ಟನು: “ಆಹಾ, ದೇವರ ಐಶ್ವರ್ಯವೂ ಜ್ಞಾನವು ವಿವೇಕವೂ ಎಷ್ಟೋ ಅಗಾಧ! ಆತನ ತೀರ್ಮಾನಗಳು ಪರಿಶೋಧನೆಗೆ ಎಷ್ಟೋ ಅಗಮ್ಯ!”—ರೋಮಾಪುರ 11:33.
ದೇವರ ಪ್ರೀತಿಯಿಂದ ನಮ್ಮನ್ನು ಯಾವುದೂ ಬೇರ್ಪಡಿಸಲು ಸಾಧ್ಯವಿಲ್ಲದ್ದರಿಂದ, ಪ್ರತಿಯೊಬ್ಬ ಕ್ರೈಸ್ತನು ಕೇಳಿಕೊಳ್ಳಬೇಕಾದ ಪ್ರಶ್ನೆಯು, ‘ನನಗೆ ದೈವಿಕ ಸಂರಕ್ಷಣೆಯಿದೆಯೊ?’ ಎಂಬುದಲ್ಲ, ಬದಲಾಗಿ ‘ನನಗೆ ಯೆಹೋವನ ಆಶೀರ್ವಾದವಿದೆಯೊ?’ ಎಂಬುದಾಗಿದೆ. ಆತನ ಆಶೀವಾರ್ದವಿರುವಲ್ಲಿ, ಈ ವಿಷಯಗಳ ವ್ಯವಸ್ಥೆಯಲ್ಲಿ ನಮಗೆ ಏನೇ ಸಂಭವಿಸುವುದಾದರೂ, ಆತನು ನಮಗೆ ನಿತ್ಯ ಜೀವವನ್ನು ಕೊಡುವನು. ಪರಿಪೂರ್ಣ ಜೀವಿತದ ನಿತ್ಯತೆಯೊಂದಿಗಿನ ಹೋಲಿಕೆಯಲ್ಲಿ, ಈ ವ್ಯವಸ್ಥೆಯಲ್ಲಿನ ಯಾವುದೇ ಕಷ್ಟಾನುಭವವು—ಮರಣ ಸಹ—‘ಕ್ಷಣಮಾತ್ರವೂ ಹಗುರವೂ’ ಆಗಿರುವಂತೆ ಭಾಸವಾಗುವುದು.—2 ಕೊರಿಂಥ 4:17.
[ಪಾದಟಿಪ್ಪಣಿ]
a ಪೇತ್ರ, ಯಾಕೋಬ, ಮತ್ತು ಯೋಹಾನರು, ಯೇಸುವಿನ ರೂಪಾಂತರವನ್ನೂ (ಮಾರ್ಕ 9:2) ಯಾಯೀರನ ಮಗಳ ಪುನರುತ್ಥಾನವನ್ನೂ (ಮಾರ್ಕ 5:22-24, 35-42) ಕಣ್ಣಾರೆಕಂಡರು; ಗೆತ್ಸೇಮನೆ ತೋಟದಲ್ಲಿ, ಯೇಸುವಿನ ವೈಯಕ್ತಿಕ ಪರೀಕ್ಷೆಯ ಸಮಯದಲ್ಲಿ ಅವರು ಸಮೀಪದಲ್ಲಿದ್ದರು (ಮಾರ್ಕ 14:32-42); ಮತ್ತು ಅಂದ್ರೆಯನೊಂದಿಗೆ, ಯೆರೂಸಲೇಮಿನ ನಾಶನ, ಅವನ ಭವಿಷ್ಯತ್ತಿನ ಸಾನ್ನಿಧ್ಯ, ಹಾಗೂ ವಿಷಯಗಳ ವ್ಯವಸ್ಥೆಯ ಸಮಾಪ್ತಿಯ ಕುರಿತಾಗಿ ಅವರು ಯೇಸುವನ್ನು ಪ್ರಶ್ನಿಸಿದರು.—ಮತ್ತಾಯ 24:3; ಮಾರ್ಕ 13:1-3.