ನಿಮ್ಮ ಜ್ಞಾಪಕಶಕ್ತಿಯನ್ನು ನೀವು ಉತ್ತಮಗೊಳಿಸಬಲ್ಲಿರಿ
“ನನಗೆ ತುಂಬ ಕಡಿಮೆ ಜ್ಞಾಪಕಶಕ್ತಿಯಿದೆ.” ನೀವು ಎಂದಾದರೂ ಅದನ್ನು ಹೇಳಿದ್ದುಂಟೊ? ಹೇಳಿರುವಲ್ಲಿ, ಹತಾಶರಾಗಬೇಡಿ. ಕೆಲವೊಂದು ಸರಳವಾದ ಸಹಾಯಕಾರಿ ಸೂಚನೆಗಳು ಮತ್ತು ಒಂದಿಷ್ಟು ಪ್ರಯತ್ನವು ಆಶ್ಚರ್ಯಕರ ಅಭಿವೃದ್ಧಿಯನ್ನು ತರಬಲ್ಲವು. ನಿಮ್ಮ ಮಿದುಳನ್ನು ಕಡಮೆಯಾಗಿ ಎಣಿಸಬೇಡಿ. ಅದರ ಸಾಮರ್ಥ್ಯಗಳು ವಿಸ್ಮಯಕರ.
ಮಿದುಳು ಅದರ ಅದ್ಭುತ ಕಾರ್ಯಗಳನ್ನು ಹೇಗೆ ನಡೆಸುತ್ತದೆ? ಇತ್ತೀಚಿನ ವರ್ಷಗಳಲ್ಲಿ, ಹಿಂದೆಂದಿಗಿಂತಲೂ ಅಧಿಕವಾಗಿ ಮಿದುಳು ಸೂಕ್ಷ್ಮವಾಗಿ ಪರಿಶೀಲಿಸಲ್ಪಟ್ಟಿದೆ. ಆದರೆ ಒಳನೋಟವು ಬೆಳೆಯುತ್ತಿರುವಂತೆ, ಮಿದುಳು ಅದು ಸಾಧಿಸುವ ವಿಷಯಗಳನ್ನು ನಿಜವಾಗಿಯೂ ಹೇಗೆ ಮಾಡುತ್ತದೆಂಬುದರ ಕುರಿತು ನಮಗೆ ಇನ್ನೂ ಬಹಳ ಸ್ವಲ್ಪವೇ ತಿಳಿದಿರುತ್ತದೆ.
ನಾವು ಕಲಿಯುವ ಮತ್ತು ಮಾಹಿತಿಯನ್ನು ಜ್ಞಾಪಕದಲ್ಲಿಟ್ಟುಕೊಳ್ಳುವ ವಿಧವು ಸ್ಪಷ್ಟವಾಗಿಲ್ಲವಾದರೂ, ಸಂಶೋಧಕರು ಈ ರಹಸ್ಯವನ್ನು ಅನಾವರಣಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಕಲಿಕೆ ಮತ್ತು ನೆನಪಿಡುವಿಕೆಯಲ್ಲಿ, ಮಿದುಳಿನಲ್ಲಿನ ಅಂದಾಜು ಮಾಡಲಾದ 1 ಸಾವಿರ ಕೋಟಿಯಿಂದ 10 ಸಾವಿರ ಕೋಟಿ ನರಕೋಶಗಳು ಒಳಗೊಂಡಿವೆ. ಆದರೆ ನರಕೋಶಗಳ ನಡುವೆ ಆ ಸಂಖ್ಯೆಯ ಕಡಿಮೆಪಕ್ಷ ಹತ್ತು ಸಾವಿರದಷ್ಟು ಜೋಡಣೆಗಳಿವೆ. ಒಂದು ಸಿದ್ಧಾಂತವು ಏನಾಗಿದೆಯೆಂದರೆ, ಆ ಜೋಡಣೆಗಳು, ಅಥವಾ ಸಿನ್ಯಾಪ್ಸಿಸ್, ಬಳಕೆಯ ಮೂಲಕ ಬಲಗೊಳಿಸಲ್ಪಟ್ಟಂತೆ, ಕಲಿಕೆಯು ಸಂಭವಿಸುತ್ತದೆ.
ನಾವು ವೃದ್ಧರಾದಂತೆ, ಮಾನಸಿಕ ಸಾಮರ್ಥ್ಯವು ಕ್ಷಯಿಸಬಹುದು; ನಮ್ಮ ಪ್ರತಿಕ್ರಿಯೆಗಳು ನಿಧಾನಗೊಳ್ಳಬಹುದು. ಮಿದುಳಿನ ಕೋಶಗಳು ಸ್ವತಃ ನವೀಕರಿಸಿಕೊಳ್ಳುವುದಿಲ್ಲ, ಮತ್ತು ವಯಸ್ಕರು ಸತತವಾಗಿ ಅವುಗಳಲ್ಲಿ ಕೆಲವನ್ನು ಕಳೆದುಕೊಳ್ಳುವುದು ವ್ಯಕ್ತವಾಗಿದೆ. ಆದರೆ ನಾವು ಎಷ್ಟರ ಮಟ್ಟಿಗೆ ನಮ್ಮ ಮಿದುಳುಗಳನ್ನು ಉಪಯೋಗಿಸುತ್ತೇವೊ, ಅಷ್ಟು ದೀರ್ಘ ಸಮಯದ ವರೆಗೆ ನಮ್ಮ ಮಾನಸಿಕ ಸಾಮರ್ಥ್ಯಗಳನ್ನು ನಾವು ಕಾಪಾಡಿಕೊಳ್ಳಬಹುದು.
ನಮ್ಮ ಮಾನಸಿಕ ಮನೋಭಾವವು ಮಿದುಳನ್ನು ಪ್ರಭಾವಿಸುತ್ತದೆ. ಒಂದು ಆಶಾವಾದಿಯಾದ, ಉಲ್ಲಾಸಕರ ಹೊರನೋಟವು ಮಿದುಳಿನ ಕ್ರಿಯೆಯನ್ನು ಯಾವುದೇ ಪ್ರಾಯದಲ್ಲಿ ಉತ್ತಮಗೊಳಿಸುತ್ತದೆ. ಒಂದಿಷ್ಟು ಒತ್ತಡವು ಪ್ರಯೋಜನಕಾರಿಯಾಗಿರಬಹುದು, ಆದರೆ ಅಸ್ಥಿಗತವಾದ, ಅತಿಯಾದ ಒತ್ತಡವು ಮಿದುಳಿನ ಕಾರ್ಯ ಸಮರ್ಥತೆಗೆ ತಡೆಯೊಡ್ಡುತ್ತದೆ. ಮಾನಸಿಕ ಒತ್ತಡವನ್ನು ಹಗುರಗೊಳಿಸಲು ಶಾರೀರಿಕ ವ್ಯಾಯಾಮವು ಸಹಾಯ ಮಾಡಬಲ್ಲದು.
ಈ ಮಾಹಿತಿಯು ಉತ್ತೇಜನದಾಯಕವಾಗಿದ್ದರೂ, ನಿಜತ್ವವು ಏನಾಗಿದೆಯೆಂದರೆ, ನಮ್ಮ ಪ್ರಾಯವು ಏನೇ ಆಗಿರಲಿ ನಾವು ಪ್ರಾಮುಖ್ಯವಾದ ವಿಷಯಗಳನ್ನು ಇನ್ನೂ ಮರೆತುಬಿಡಬಹುದು. ನಾವು ಉತ್ತಮಗೊಳ್ಳಬಲ್ಲೆವೊ? ಹೆಚ್ಚಿನವರಿಗೆ ತೊಂದರೆಯಿರುವ ಒಂದು ಕ್ಷೇತ್ರವು, ನಾವು ಸಂಧಿಸುವ ಜನರ ಹೆಸರುಗಳನ್ನು ನೆನಪಿನಲ್ಲಿಡುವುದೇ ಆಗಿದೆ.
ಜನರ ಹೆಸರುಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು
ಕೆಲವೊಂದು ಸರಳವಾದ ಸೂಚನೆಗಳು, ಹೆಸರುಗಳನ್ನು ಹೆಚ್ಚು ಉತ್ತಮವಾಗಿ ನೆನಪಿನಲ್ಲಿಟ್ಟುಕೊಳ್ಳಲು ನಿಮಗೆ ಬಹಳವಾಗಿ ಸಹಾಯ ಮಾಡಬಲ್ಲವು. ವ್ಯಕ್ತಿಯಲ್ಲಿ ಆಸಕ್ತಿಯನ್ನು ತೋರಿಸುವುದು ಸಹಾಯ ಮಾಡುತ್ತದೆ. ಒಬ್ಬ ವ್ಯಕ್ತಿಯ ಹೆಸರು ಅವನಿಗೆ ಪ್ರಾಮುಖ್ಯವಾದುದ್ದಾಗಿದೆ. ಅನೇಕ ವೇಳೆ ನಾವು ಹೆಸರನ್ನು ಪ್ರಥಮವಾಗಿ ಹೇಳಿದಾಗ ಸರಿಯಾಗಿ ಅರ್ಥಮಾಡಿಕೊಳ್ಳದ ಕಾರಣ, ನಮಗೆ ಅದನ್ನು ನೆನಪಿನಲ್ಲಿಟ್ಟುಕೊಳ್ಳಲು ಸಾಧ್ಯವಿರುವುದಿಲ್ಲ. ಆದುದರಿಂದ ಪರಿಚಯಿಸಲ್ಪಡುವಾಗ, ಹೆಸರನ್ನು ಸ್ಪಷ್ಟವಾಗಿ ತಿಳಿದುಕೊಳ್ಳಿರಿ. ಅಗತ್ಯವಿದ್ದರೆ ಅದನ್ನು ಪುನರಾವೃತ್ತಿಸುವಂತೆ ಅಥವಾ ಅದರ ಅಕ್ಷರ ಸಂಯೋಜನೆಯನ್ನೂ ಹೇಳುವಂತೆ ವ್ಯಕ್ತಿಯನ್ನು ಕೇಳಿಕೊಳ್ಳಿರಿ. ಅದನ್ನು ನಿಮ್ಮ ಸಂಭಾಷಣೆಯಲ್ಲಿ ಹಲವಾರು ಬಾರಿ ಉಪಯೋಗಿಸಿರಿ. ಬೀಳ್ಕೊಡುವಾಗ, ವ್ಯಕ್ತಿಯನ್ನು ಹೆಸರಿನಿಂದ ಸಂಬೋಧಿಸಿರಿ. ಈ ಕೆಲವು ಅಂಶಗಳು ಹೇಗೆ ಸಹಾಯ ಮಾಡುವವೆಂಬುದನ್ನು ನೋಡಿ ನೀವು ಆಶ್ಚರ್ಯಪಡುವಿರಿ.
ಹೆಸರುಗಳ ವಿಷಯದಲ್ಲಿ ನಿಮ್ಮ ಜ್ಞಾಪಕಶಕ್ತಿಯನ್ನು ಇನ್ನೂ ಮೇಲೆತ್ತಬಲ್ಲ ಮತ್ತೊಂದು ಸೂಚನೆಯು, ಒಬ್ಬ ವ್ಯಕ್ತಿಯ ಹೆಸರನ್ನು ನಿಮ್ಮ ಮನಸ್ಸಿನಲ್ಲಿ ನೀವು ಚಿತ್ರಿಸಸಾಧ್ಯವಿರುವ ಯಾವ ವಿಷಯದೊಂದಿಗಾದರೂ ಸಂಬಂಧಿಸುವುದೇ ಆಗಿದೆ. ಚಿತ್ರದೊಳಗೆ ನೀವು ಕ್ರಿಯೆಯನ್ನು ಹಾಕಬಲ್ಲಿರಾದರೆ, ಅದು ಹೆಚ್ಚು ಸಹಾಯಕಾರಿಯಾಗಿರುವುದು.
ಉದಾಹರಣೆಗೆ, ವಿಶೇಷವಾಗಿ ಆಪ್ತನಾಗಿರದ ಒಬ್ಬ ಪರಿಚಿತನ ಪ್ರಥಮ ಹೆಸರಾದ ರಾಜ್ಕುಮಾರ್ ಅನ್ನು ಜ್ಞಾಪಕದಲ್ಲಿಟ್ಟುಕೊಳ್ಳುವುದು ಬಹುಶಃ ನಿಮಗೆ ಕಷ್ಟಕರವಾಗಿದೆ. ನೀವು ಈ ವ್ಯಕ್ತಿಯನ್ನು ನೋಡುವಾಗ, “ರಾಜ್ಕುಮಾರ್” ಎಂಬ ಪದದ ಅರ್ಥದ ಕುರಿತು ಯೋಚಿಸಸಾಧ್ಯವಿದೆ: “ಒಬ್ಬ ರಾಜನ ಕುಮಾರ.” ಈ ಮನುಷ್ಯನು ಪ್ರಾಚೀನ ಆಸ್ಥಾನಿಕರಿಂದ ಸುತ್ತುವರಿಯಲ್ಪಟ್ಟು, ಅರಮನೆಯಲ್ಲಿ ನಡೆದಾಡುತ್ತಿರುವುದನ್ನು ನೀವು ಚಿತ್ರಿಸಿಕೊಳ್ಳಸಾಧ್ಯವಿದೆ. ಬಹುಶಃ ಇದು ಕಾರ್ಯಸಾಧಕ; ರಾಜ್ಕುಮಾರ್ ಎಂಬ ಹೆಸರು ಥಟ್ಟನೆ ನಿಮ್ಮ ಮನಸ್ಸಿಗೆ ಬರುವುದು.
ಅನೇಕ ಹೆಸರುಗಳು ನಿಮಗೆ ಯಾವ ಅರ್ಥವನ್ನೂ ಕೊಡದಿರಬಹುದು, ಆದುದರಿಂದ ಆ ಹೆಸರನ್ನು ಹೋಲುವ ಒಂದು ಪದವನ್ನು ನೀವು ಬದಲಿಯಾಗಿಡುವ ಅಗತ್ಯವಿರುವುದು. ನಿಮ್ಮ ಬದಲಿ ಪದವು ಆ ಹೆಸರಿನ ಶಬ್ದಕ್ಕೆ ನಿಖರವಾಗಿ ಸರಿಹೊಂದದಿದ್ದರೆ ಚಿಂತೆಯಿಲ್ಲ. ಸಂಬಂಧದಿಂದಾಗಿ ನಿಮ್ಮ ಜ್ಞಾಪಕಶಕ್ತಿಯು ಆ ಹೆಸರನ್ನು ಜ್ಞಾಪಿಸಿಕೊಳ್ಳಲು ಹೆಚ್ಚು ಶಕ್ತವಾಗಿರುವುದು. ನಿಮ್ಮ ಸ್ವಂತ ಪದಗಳನ್ನು ಮತ್ತು ಚಿತ್ರಗಳನ್ನು ನೀವು ಸೃಷ್ಟಿಸಿಕೊಳ್ಳುವಾಗ, ಪರಿಣಾಮವು ಹೆಚ್ಚು ಪ್ರಬಲವಾಗಿರುತ್ತದೆ.
ದೃಷ್ಟಾಂತಕ್ಕೆ, ನೀವು ಶ್ರೀಮತಿ ರಾಣಿ ದೇಸಾಯಿ ಎಂಬವರಿಗೆ ಪರಿಚಯಿಸಲ್ಪಟ್ಟಿದ್ದೀರಿ. ನೀವು ದೇಸಾಯಿಗೆ ದೇಶಿ ಎಂಬುದನ್ನು ಬದಲಿಯಾಗಿಡಬಹುದು. ಸ್ಥಳಿಕವಾಗಿ ಆಳುವ ಒಬ್ಬ ರಾಣಿಯನ್ನು ನೀವು ಚಿತ್ರಿಸಿಕೊಳ್ಳುತ್ತೀರಿ.
ಒಂದಿಷ್ಟು ಸಮಯಕ್ಕಾಗಿ ನೀವು ಇದನ್ನು ಶ್ರದ್ಧಾಪೂರ್ವಕರಾಗಿ ಅಭ್ಯಾಸಮಾಡಬೇಕಾದರೂ, ಅದು ನಿಜವಾಗಿಯೂ ಕಾರ್ಯಸಾಧಕವು. ಈ ವಿಧಾನವನ್ನು ಹ್ಯಾರಿ ಲರಾನ್, ಹೌ ಟು ಡಿವೆಲೊಪ್ ಎ ಸೂಪರ್ ಪೌಅರ್ ಮೆಮೊರಿ ಎಂಬ ತನ್ನ ಪುಸ್ತಕದಲ್ಲಿ ವಿವರಿಸುತ್ತಾನೆ, ಮತ್ತು ಇದನ್ನು ಅವನು ಅನೇಕ ಸಾರ್ವಜನಿಕ ಸಂದರ್ಭಗಳಲ್ಲಿ ಉಪಯೋಗಿಸಿದ್ದಾನೆ. ಅವನು ಹೇಳುವುದು: “ಅನೇಕ ಬಾರಿ, ಹದಿನೈದು ಅಥವಾ ಕಡಿಮೆ ನಿಮಿಷಗಳಲ್ಲಿ ಒಂದೂ ಹೆಸರನ್ನು ಮರೆಯದೆ, ಒಂದು ನೂರರಿಂದ ಇನ್ನೂರು ಜನರನ್ನು ನಾನು ಸಂಧಿಸಬೇಕಾಗಿದೆ!”
ಪಟ್ಟಿಗಳನ್ನು ಜ್ಞಾಪಕದಲ್ಲಿಡುವ ವಿಧ
ಸಂಬಂಧಪಡದ ವಸ್ತುಗಳ ಒಂದು ಪಟ್ಟಿಯನ್ನು ಜ್ಞಾಪಕದಲ್ಲಿಡುವ ನಿಮ್ಮ ಸಾಮರ್ಥ್ಯವನ್ನು ನೀವು ಹೇಗೆ ಉತ್ತಮಗೊಳಿಸಬಲ್ಲಿರಿ? ಸರಳವಾದೊಂದು ವಿಧಾನವು ಸಂಬಂಧಕ ವ್ಯವಸ್ಥೆ (ಲಿಂಕ್ ಸಿಸ್ಟಮ್)ಯೆಂದು ಕರೆಯಲಾಗಿದೆ. ಅದು ಕೆಲಸಮಾಡುವುದು ಹೀಗೆ: ಪಟ್ಟಿಯಲ್ಲಿರುವ ಪ್ರತಿಯೊಂದು ವಸ್ತುವಿಗೆ ಒಂದು ದೃಷ್ಟಿಸಂಬಂಧಿತ ಚಿತ್ರವನ್ನು ನೀವು ರೂಪಿಸುತ್ತೀರಿ ಮತ್ತು ಅನಂತರ ಮೊದಲನೆಯ ವಸ್ತುವಿಗಾಗಿರುವ ಚಿತ್ರವನ್ನು ಎರಡನೆಯ ವಸ್ತುವಿಗಾಗಿರುವ ಚಿತ್ರದೊಂದಿಗೆ ಸಂಬಂಧಿಸುತ್ತೀರಿ, ಅನಂತರ ಎರಡನೆಯ ಹಾಗೂ ಮೂರನೆಯ ವಸ್ತುಗಳ ನಡುವೆ ಅದನ್ನೇ ಮಾಡಿರಿ, ಮತ್ತು ಇತ್ಯಾದಿ.
ಉದಾಹರಣೆಗೆ, ಸೂಪರ್ಮಾರ್ಕೆಟ್ನಿಂದ ನೀವು ಐದು ವಸ್ತುಗಳನ್ನು ತರಬೇಕಾಗಿದೆ: ಹಾಲು, ಬ್ರೆಡ್ಡು, ವಿದ್ಯುದ್ದೀಪ, ಈರುಳ್ಳಿ, ಮತ್ತು ಐಸ್ಕ್ರೀಮ್. ಹಾಲನ್ನು ಬ್ರೆಡ್ಡಿಗೆ ಸಂಬಂಧಿಸುವ ಮೂಲಕ ಆರಂಭಿಸಿರಿ. ಹಾಲನ್ನು ಬ್ರೆಡ್ಡಿನಿಂದ ಹೊಯ್ಯುವುದನ್ನು ಕಲ್ಪಿಸಿಕೊಳ್ಳಿ. ಚಿತ್ರವು ಬಹಳ ಹಾಸ್ಯಾಸ್ಪದವಾಗಿರಬಹುದಾದರೂ, ಅದು ನಿಮ್ಮ ಜ್ಞಾಪಕಶಕ್ತಿಯಲ್ಲಿ ವಸ್ತುಗಳನ್ನು ಅಚ್ಚೊತ್ತಲು ಸಹಾಯ ಮಾಡುವುದು. ಮತ್ತೂ ಹಾಲನ್ನು ಹೊಯ್ಯುವುದರಲ್ಲಿ ನಿಮ್ಮನ್ನು ಒಳಗೊಳ್ಳುವ ಮಾನಸಿಕ ದೃಶ್ಯದೊಳಗೆ ಕ್ರಿಯೆಯನ್ನು ತರಲು ಪ್ರಯತ್ನಿಸಿರಿ.
ಹಾಲನ್ನು ಬ್ರೆಡ್ಡಿನೊಂದಿಗೆ ಸಂಬಂಧಿಸಿದ ನಂತರ, ಮುಂದಿನ ವಸ್ತು, ವಿದ್ಯುದ್ದೀಪದ ಕಡೆಗೆ ಸಾಗಿರಿ. ಬ್ರೆಡ್ಡನ್ನು ವಿದ್ಯುತ್ತಿನ ಗುಳಿಯೊಳಗೆ ಹಾಕಲು ನೀವು ಪ್ರಯತ್ನಿಸುತ್ತಿರುವುದನ್ನು ಚಿತ್ರಿಸಿಕೊಳ್ಳುವ ಮೂಲಕ, ನೀವು ವಿದ್ಯುದ್ದೀಪಕ್ಕೆ ಬ್ರೆಡ್ಡನ್ನು ಸಂಬಂಧಿಸಬಹುದು. ಒಂದು ದೊಡ್ಡ ವಿದ್ಯುದ್ದೀಪವನ್ನು ನೀವು ಸುಲಿಯುತ್ತಿರುವುದನ್ನೂ ಮತ್ತು ಹಾಗೆ ಮಾಡುವಾಗ ಅಳುತ್ತಿರುವುದನ್ನೂ ಚಿತ್ರಿಸಿಕೊಳ್ಳುವ ಮೂಲಕ, ವಿದ್ಯುದ್ದೀಪವನ್ನು ಈರುಳ್ಳಿಗೆ ಸಂಬಂಧಿಸಿರಿ. ನಿಶ್ಚಯವಾಗಿ, ಸಂಬಂಧವನ್ನು ನೀವೇ ಕಲ್ಪಿಸಿಕೊಂಡರೆ ಅದು ಉತ್ತಮವಾಗಿರುವುದು. ಕೊನೆಯ ವಸ್ತುಗಳಾದ ಈರುಳ್ಳಿ ಮತ್ತು ಐಸ್ಕ್ರೀಮ್ನ ನಡುವೆ ಒಂದು ಸಂಬಂಧವನ್ನು ನೀವು ರೂಪಿಸಬಲ್ಲಿರೊ? ಬಹುಶಃ ನೀವು ಈರುಳ್ಳಿ ಐಸ್ಕ್ರೀಮನ್ನು ತಿನ್ನುವುದನ್ನು ಕಲ್ಪಿಸಿಕೊಳ್ಳಸಾಧ್ಯವಿದೆ!
ಪಟ್ಟಿಯನ್ನು ನೀವು ಜ್ಞಾಪಿಸಿಕೊಳ್ಳಬಲ್ಲಿರೊ ಎಂದು ನೋಡಿರಿ. ಆಮೇಲೆ ನಿಮ್ಮ ಸ್ವಂತ ಪಟ್ಟಿಯೊಂದಿಗೆ ನಿಮ್ಮ ಜ್ಞಾಪಕಶಕ್ತಿಯನ್ನು ಪರೀಕ್ಷಿಸಿರಿ. ಅದನ್ನು ನೀವು ಇಷ್ಟಪಡುವಷ್ಟು ದೀರ್ಘವಾಗಿ ಮಾಡಿರಿ. ಸಂಬಂಧವನ್ನು ಹೆಚ್ಚು ಸ್ಮರಣೀಯವಾಗಿ ಮಾಡಲು, ನೀವು ಅದನ್ನು ವಿನೋದಕರವಾಗಿ ಅಥವಾ ಹಾಸ್ಯಾಸ್ಪದವಾಗಿಯೂ ಇಲ್ಲವೆ ಪ್ರಮಾಣ ಮೀರಿಯೂ ಮಾಡಸಾಧ್ಯವಿದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿರಿ. ಚಿತ್ರದೊಳಗೆ ಕ್ರಿಯೆಯನ್ನು ಹಾಕಲು ಪ್ರಯತ್ನಿಸಿರಿ, ಮತ್ತು ಒಂದು ವಸ್ತುವಿಗಾಗಿ ಮತ್ತೊಂದನ್ನು ಬದಲಿಮಾಡಿರಿ.
ಈ ವಿಧಾನವು, ಪಟ್ಟಿಯನ್ನು ಕೇವಲ ಕಂಠಪಾಠ ಮಾಡುವುದಕ್ಕಿಂತ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತದೆ ಎಂದು ಕೆಲವರು ಆಕ್ಷೇಪಿಸಬಹುದು. ಆದರೆ, ಈ ವಿಧಾನವನ್ನು ಬಳಸುವುದಕ್ಕಿಂತ ವಿವರಿಸಲು ಹೆಚ್ಚು ಸಮಯ ತಗಲುತ್ತದೆ. ಒಮ್ಮೆ ನಿಮಗೆ ಒಂದಿಷ್ಟು ಅಭ್ಯಾಸವಾದರೆ, ನೀವು ಸಂಬಂಧಗಳನ್ನು ಬೇಗನೆ ರೂಪಿಸಿಕೊಳ್ಳುವಿರಿ ಮತ್ತು ನಿಮ್ಮ ಮರುಜ್ಞಾಪನವು ಅಷ್ಟೇ ಅಲ್ಲದೆ ಕಲಿಕೆಯ ವೇಗವು, ಸಂಬಂಧಕ ವ್ಯವಸ್ಥೆಯಂತಹ ಒಂದು ವ್ಯವಸ್ಥೆಯಿಲ್ಲದೆ ಕಲಿಯಲು ನೀವು ಪ್ರಯತ್ನಿಸುವುದಕ್ಕಿಂತ ಹೆಚ್ಚು ಉತ್ತಮವಾಗಿರುವುದು. ಒಂದು ವ್ಯವಸ್ಥೆಯನ್ನು ಉಪಯೋಗಿಸದೆ, ಗೊತ್ತುಗುರಿಯಿಲ್ಲದ 15 ವಸ್ತುಗಳ ಒಂದು ಪಟ್ಟಿಯನ್ನು ನೆನಪಿನಲ್ಲಿಟ್ಟುಕೊಳ್ಳುವಂತೆ 15 ವ್ಯಕ್ತಿಗಳು ಕೇಳಿಕೊಳ್ಳಲ್ಪಟ್ಟಾಗ, ಅವರ ಸರಾಸರಿ ಗುಣಾಂಕವು 8.5 ಆಗಿತ್ತು. ಮತ್ತೊಂದು ಪಟ್ಟಿಯಲ್ಲಿ ದೃಷ್ಟಿಸಂಬಂಧಿತ ಸಂಬಂಧಗಳನ್ನು ಸಂಬಂಧಿಸುವ ವ್ಯವಸ್ಥೆಯನ್ನು ಉಪಯೋಗಿಸುತ್ತಾ, ಅದೇ ಗುಂಪು 14.3ರ ಸರಾಸರಿ ಗುಣಾಂಕವನ್ನು ಪಡೆಯಿತು. ನೀವು ಶಾಪಿಂಗ್ ಮಾಡಲು ಹೋಗುವಾಗ ಈ ವಸ್ತುಗಳ ಲಿಖಿತ ಪಟ್ಟಿಯನ್ನು ನಿಮ್ಮೊಂದಿಗೆ ತೆಗೆದುಕೊಂಡು ಹೋಗಲು ನೆನಪಿನಲ್ಲಿಟ್ಟುಕೊಳ್ಳುವುದಾದರೆ, ಅದು ನಿಮಗೆ 15ರ ಗುಣಾಂಕವನ್ನು, ಅಂದರೆ 100 ಪ್ರತಿಶತವನ್ನು ಕೊಡುವುದು ನಿಶ್ಚಯ!
ನೀವು ಓದುವುದನ್ನು ನೆನಪಿನಲ್ಲಿಟ್ಟುಕೊಳ್ಳುವುದು
ಹೇರಳವಾದ ಮಾಹಿತಿಯ ಈ ಯುಗದಲ್ಲಿ, ನಮ್ಮಲ್ಲಿ ಹೆಚ್ಚಿನವರಿಗೆ ಸಹಾಯದ ಅಗತ್ಯವಿರುವ ಮತ್ತೊಂದು ಕ್ಷೇತ್ರವು, ಪರಿಣಾಮಕಾರಿಯಾಗಿ ಅಭ್ಯಸಿಸುವ ಕ್ಷೇತ್ರವಾಗಿದೆ. ಅಭ್ಯಾಸವು, ಶಾಲೆಯಲ್ಲಿ, ವ್ಯಾಪಾರದಲ್ಲಿ, ವೈಯಕ್ತಿಕ ಅಭಿವೃದ್ಧಿಗಾಗಿ, ಮತ್ತು ಬಹಿರಂಗ ಮಾತಾಡುವಿಕೆಗಾಗಿ ತಯಾರಿಯಲ್ಲಿ ಅತ್ಯಾವಶ್ಯಕವಾಗಿದೆ. ಜೊತೆಗೆ, ಕ್ರೈಸ್ತನೊಬ್ಬನು ವೈಯಕ್ತಿಕ ಬೈಬಲ್ ಅಧ್ಯಯನಕ್ಕಾಗಿ ಸಮಯವನ್ನು ಬದಿಗಿಡಬೇಕು.—ಯೋಹಾನ 17:3.
‘ಆದರೆ ನನಗೆ ನಾನು ಅಭ್ಯಾಸಮಾಡಿರುವುದನ್ನು ನೆನಪಿನಲ್ಲಿಟ್ಟುಕೊಳ್ಳುವುದರಲ್ಲಿ ತೊಂದರೆಯಿದೆ,’ ಎಂದು ನೀವು ಹೇಳಬಹುದು. ಏನು ಮಾಡಸಾಧ್ಯವಿದೆ? ಅಭ್ಯಾಸಕ್ಕೆ ಮೀಸಲಿಟ್ಟ ಸಮಯದಿಂದ ಅತಿ ಹೆಚ್ಚಿನ ಪ್ರಯೋಜನವನ್ನು ಗಳಿಸಲು ಕಲಿಯುವುದು, ನೀವು ಓದುವುದನ್ನು ಜ್ಞಾಪಕದಲ್ಲಿಟ್ಟುಕೊಳ್ಳಲು ನಿಮಗೆ ಸಹಾಯ ಮಾಡಬಲ್ಲದು. ಕೆಲವೊಂದು ಸೂಚನೆಗಳು ಇಲ್ಲಿವೆ.
ನೀವು ಅಭ್ಯಾಸಮಾಡುವಾಗ, ವೈಯಕ್ತಿಕ ಸಂಘಟನೆಯು ಪ್ರಾಮುಖ್ಯವಾಗಿದೆ. ಪುಸ್ತಕಗಳನ್ನು, ಬರೆಯುವ ಸಾಮಗ್ರಿಗಳನ್ನು ಮತ್ತು ಹಾಳೆಯನ್ನು ಕೈಗೆ ಎಟುಕುವಂತೆ ಇಟ್ಟುಕೊಳ್ಳಿರಿ. ಕಡಿಮೆ ಅಪಕರ್ಷಣೆಗಳು ಮತ್ತು ಯೋಗ್ಯವಾದ ಬೆಳಕಿನೊಂದಿಗೆ, ಹಿತವಾದ ಕ್ಷೇತ್ರದಲ್ಲಿ ಅಭ್ಯಸಿಸಲು ಪ್ರಯತ್ನಿಸಿರಿ. ರೇಡಿಯೊ ಮತ್ತು ಟೆಲಿವಿಷನ್ ಅನ್ನು ಬಂದ್ ಮಾಡಿಬಿಡಿ.
ಅಭ್ಯಾಸಕ್ಕೆ ನಿಯಮಿತವಾದ ಸಮಯವನ್ನಿಡಿರಿ. ಕೆಲವರಿಗೆ, ಪ್ರತಿದಿನ ಅಲ್ಪಾವಧಿಗಳಲ್ಲಿ ಅಭ್ಯಸಿಸುವುದು, ಒಂದು ಅಭ್ಯಾಸಕಾಲಕ್ಕೆ ಬಹಳಷ್ಟು ಸಮಯವನ್ನು ಉಪಯೋಗಿಸುವುದಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿರಬಹುದು. ನಿಮ್ಮ ಸಮಯವನ್ನು ಭಾಗಗಳಾಗಿ ವಿಂಗಡಿಸುವುದು ಒಳ್ಳೆಯದು. ಮಧ್ಯೆ ನಿಲ್ಲಿಸದೆ ಎರಡು ತಾಸುಗಳ ವರೆಗೆ ಅಭ್ಯಸಿಸುವ ಬದಲಿಗೆ, ನಡುವೆ ಒಂದಿಷ್ಟು ನಿಮಿಷಗಳ ಅಲ್ಪವಿರಾಮಗಳೊಂದಿಗೆ, ಸಮಯವನ್ನು 25ರಿಂದ 40 ನಿಮಿಷಗಳ ಭಾಗಗಳಾಗಿ ವಿಂಗಡಿಸುವುದು ಉತ್ತಮವಾಗಿರಬಹುದು. ಇದು ಮರುಜ್ಞಾಪನದ ಉಚ್ಚ ಪ್ರಮಾಣಕ್ಕೆ ನೆರವು ನೀಡುತ್ತದೆ ಎಂದು ಸಂಶೋಧನೆಯು ತೋರಿಸಿದೆ.
ನಿಮ್ಮ ಅಭ್ಯಾಸದ ಅವಧಿಯಲ್ಲಿ ನೀವು ಯಾವ ವಿಷಯವನ್ನು ಆವರಿಸಲು ಬಯಸುತ್ತೀರೆಂಬುದನ್ನು ನಿರ್ಧರಿಸಿರಿ. ಇದು ಚಿತ್ತೈಕಾಗ್ರತೆಗೆ ನೆರವು ನೀಡುತ್ತದೆ. ಒಂದು ಪುಸ್ತಕವನ್ನು ಆರಂಭಿಸುವ ಮೊದಲು, ಅದರ ಪೂರ್ವವೀಕ್ಷಣೆ ಮಾಡಲು ಕೆಲವೊಂದು ನಿಮಿಷಗಳನ್ನು ತೆಗೆದುಕೊಳ್ಳಿ. ಶೀರ್ಷಿಕೆಯನ್ನು ಅವಲೋಕಿಸಿರಿ. ಪುಸ್ತಕವನ್ನು ಸಾರಾಂಶಿಸುವ ಪರಿವಿಡಿಯನ್ನು ಪರೀಕ್ಷಿಸಿರಿ. ಅನಂತರ ಮುನ್ನುಡಿ ಅಥವಾ ಪೀಠಿಕೆಯನ್ನು ಓದಿರಿ. ಇಲ್ಲಿ ಲೇಖಕನ ಗುರಿ ಮತ್ತು ದೃಷ್ಟಿಕೋನವು ತಿಳಿಸಲ್ಪಟ್ಟಿರಬಹುದು.
ಅಧ್ಯಾಯವೊಂದನ್ನು ಓದಲು ಆರಂಭಿಸುವ ಮೊದಲು, ಅದರ ಪೂರ್ವವೀಕ್ಷಣೆ ಮಾಡಿರಿ. ಉಪಶೀರ್ಷಿಕೆಗಳು, ದೃಷ್ಟಾಂತಗಳು, ರೇಖಾಪಟಗಳು, ಸಾರಾಂಶಗಳು ಮತ್ತು ಆರಂಭದ ಹಾಗೂ ಸಮಾಪ್ತಿಯ ಪ್ಯಾರಗ್ರಾಫ್ಗಳನ್ನು ಅವಲೋಕಿಸಿರಿ. ಪ್ರತಿಯೊಂದು ಪ್ಯಾರಗ್ರಾಫ್ನ ಪ್ರಥಮ ವಾಕ್ಯದ ಮೇಲೆ ಕಣ್ಣೋಡಿಸಿರಿ. ಈ ವಾಕ್ಯಗಳು ಅನೇಕ ವೇಳೆ ಪ್ರಧಾನ ವಾದಗಳನ್ನೊಳಗೊಂಡಿರುತ್ತವೆ. ಸಾಮಾನ್ಯ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳಿ. ನಿಮ್ಮನ್ನೇ ಪ್ರಶ್ನಿಸಿಕೊಳ್ಳಿ: ‘ಬರಹಗಾರನು ಏನನ್ನು ರುಜುಪಡಿಸಲು ಉದ್ದೇಶಿಸಿದನು? ಈ ವಿಷಯದಿಂದ ನಾನು ಏನನ್ನು ಪಡೆಯಬಲ್ಲೆ? ಪ್ರಧಾನ ವಾದವಿವಾದಗಳಾವುವು?’
ಚಿತ್ತೈಕಾಗ್ರತೆಯು ಪ್ರಾಮುಖ್ಯವಾಗಿದೆ. ನೀವು ಸಂಪೂರ್ಣವಾಗಿ ಒಳಗೊಳ್ಳಬೇಕು. ರಹಸ್ಯವೇನೆಂದರೆ, ನಿಮ್ಮ ಅಭ್ಯಾಸದ ಸಮಯವನ್ನು ಸಾಧ್ಯವಾದಷ್ಟು ಸ್ವಾರಸ್ಯಕರವಾದದ್ದಾಗಿ ಮಾಡುವುದಾಗಿದೆ. ಮಾಹಿತಿಯ ಪ್ರಾಯೋಗಿಕ ಅಂಶಗಳನ್ನು ಪರಿಗಣಿಸುವ ಮೂಲಕ ಉತ್ಸಾಹವನ್ನು ಕೆರಳಿಸಿರಿ. ಚಿತ್ರಿಸಿಕೊಳ್ಳಿ. ನೀವು ಓದುತ್ತಿರುವ ವಿಷಯಕ್ಕೆ ಅದು ತಕ್ಕದಾಗಿದ್ದರೆ, ಆಘ್ರಾಣ, ಆಸ್ವಾದನೆ, ಮತ್ತು ಸ್ಪರ್ಶವನ್ನು ಊಹಿಸಿಕೊಳ್ಳುವ ಮೂಲಕ ಜ್ಞಾನೇಂದ್ರಿಯಗಳನ್ನು ಉಪಯೋಗಿಸಿರಿ.
ವಿಷಯದ ಅರ್ಥವನ್ನು ನೀವು ಒಮ್ಮೆ ಗ್ರಹಿಸಿದರೆ, ನೀವು ಟಿಪ್ಪಣಿಗಳನ್ನು ತೆಗೆದುಕೊಳ್ಳಲು ಸಿದ್ಧರಾಗಿದ್ದೀರಿ. ಪರಿಣಾಮಕಾರಿ ಟಿಪ್ಪಣಿ ತೆಗೆದುಕೊಳ್ಳುವಿಕೆಯು, ನಿಮ್ಮ ತಿಳಿವಳಿಕೆಯನ್ನು ಮತ್ತು ಮಾಹಿತಿಯ ಮರುಜ್ಞಾಪನವನ್ನು ಕ್ಷಿಪ್ರಗೊಳಿಸಬಲ್ಲದು. ಟಿಪ್ಪಣಿಗಳು ಪೂರ್ಣ ವಾಕ್ಯಗಳಾಗಿರುವ ಅಗತ್ಯವಿಲ್ಲ, ಬದಲಿಗೆ ಮುಖ್ಯ ವಿಚಾರಗಳನ್ನು ನೀವು ಜ್ಞಾಪಿಸಿಕೊಳ್ಳಲು ಸಹಾಯ ಮಾಡುವ ಮುಖ್ಯ ಪದಗಳು ಅಥವಾ ಪದಗುಚ್ಛಗಳಾಗಿರಬೇಕು.
ಮಾಹಿತಿಯನ್ನು ಅರ್ಥಮಾಡಿಕೊಳ್ಳುವುದು, ನೀವು ಭವಿಷ್ಯದಲ್ಲಿ ಅದೆಲ್ಲವನ್ನು ಮರುಜ್ಞಾಪಿಸಿಕೊಳ್ಳಲು ಶಕ್ತರಾಗಿರುವಿರೆಂಬುದನ್ನು ಅಗತ್ಯವಾಗಿ ಅರ್ಥೈಸುವುದಿಲ್ಲ. ವಾಸ್ತವವಾಗಿ, ಕಲಿಕೆಯ 24 ತಾಸುಗಳೊಳಗೆ, ಕಡಿಮೆಪಕ್ಷ ತಾತ್ಕಾಲಿಕವಾಗಿಯಾದರೂ, 80 ಪ್ರತಿಶತದಷ್ಟು ಮಾಹಿತಿಯು ಮರೆಯಲ್ಪಡಬಹುದು. ಅದು ನಿರುತ್ಸಾಹಕರವಾಗಿ ತೋರುವುದಾದರೂ, ವಿಷಯವನ್ನು ಪುನರ್ವಿಮರ್ಶಿಸುವ ಮೂಲಕ ಆ 80 ಪ್ರತಿಶತದ ಸ್ವಲ್ಪ ಭಾಗವನ್ನು ಅಥವಾ ಹೆಚ್ಚನ್ನು ಪುನಃ ಪಡೆಯಸಾಧ್ಯವಿದೆ. ಪ್ರತಿಯೊಂದು ಅಭ್ಯಾಸಕಾಲದ ನಂತರ, ಕೆಲವೊಂದು ನಿಮಿಷಗಳಿಗಾಗಿ ಪುನರ್ವಿಮರ್ಶಿಸಿರಿ. ಸಾಧ್ಯವಿದ್ದಲ್ಲಿ, ಒಂದು ದಿನದ ನಂತರ, ಆಮೇಲೆ ಒಂದು ವಾರದ ನಂತರ, ಆಮೇಲೆ ಒಂದು ತಿಂಗಳಿನ ನಂತರ ಪುನರ್ವಿಮರ್ಶಿಸಿರಿ. ಈ ವಿಷಯಾಂಶಗಳ ಅನ್ವಯವು ನಿಮ್ಮ ಅಮೂಲ್ಯವಾದ ಅಭ್ಯಾಸ ಸಮಯದ ಅತಿ ಹೆಚ್ಚಿನ ಪ್ರಯೋಜನ ಪಡೆಯುವುದರಲ್ಲಿ ಮತ್ತು ನೀವು ಓದಿರುವುದನ್ನು ಜ್ಞಾಪಕದಲ್ಲಿಟ್ಟುಕೊಳ್ಳುವುದರಲ್ಲಿ ನಿಮಗೆ ಸಹಾಯ ಮಾಡಬಹುದು.
ಆದುದರಿಂದ, ನಿಮ್ಮ ಮಿದುಳನ್ನು ಕಡಿಮೆಯಾಗಿ ಎಣಿಸಬೇಡಿರಿ. ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳುವ ನಿಮ್ಮ ಸಾಮರ್ಥ್ಯವು ಉತ್ತಮಗೊಳಿಸಲ್ಪಡಸಾಧ್ಯವಿದೆ. ಒಬ್ಬ ವಿಜ್ಞಾನಿಯು ಮಿದುಳನ್ನು, “ನಮ್ಮ ವಿಶ್ವದಲ್ಲಿ ನಾವು ಇಲ್ಲಿಯ ವರೆಗೆ ಕಂಡುಹಿಡಿದಿರುವ ಅತ್ಯಂತ ಸಂಕೀರ್ಣವಾದ ವಿಷಯ”ವೆಂದು ಸೂಚಿಸಿ ಹೇಳಿದ್ದಾರೆ. ಅದು ಅದರ ಸೃಷ್ಟಿಕರ್ತನಾದ ಯೆಹೋವನ ಭಯಭಕ್ತಿ ಹುಟ್ಟಿಸುವ ವಿವೇಕ ಮತ್ತು ಶಕ್ತಿಗೆ ಒಂದು ಕಾಣಿಕೆಯಾಗಿದೆ.—ಕೀರ್ತನೆ 139:14.
[Diagram on page 26]
ಪಟ್ಟಿಗಳನ್ನು ನೆನಪಿನಲ್ಲಿಡಲು, ಸಂಬಂಧಕ ವ್ಯವಸ್ಥೆಯನ್ನು ಉಪಯೋಗಿಸಿರಿ: ಪ್ರತಿಯೊಂದು ವಸ್ತುವಿಗಾಗಿ ಒಂದು ದೃಷ್ಟಿಸಂಬಂಧಿತ ಚಿತ್ರವನ್ನು ರೂಪಿಸಿಕೊಳ್ಳಿರಿ. ಅನಂತರ ಮೊದಲನೆಯ ಚಿತ್ರವನ್ನು ಎರಡನೆಯ ಚಿತ್ರದೊಂದಿಗೆ ಸಂಬಂಧಿಸಿರಿ ಮತ್ತು ಹಾಗೆ ಮುಂದುವರಿಸಿರಿ
ಶಾಪಿಂಗ್ ಪಟ್ಟಿ:
1. ಹಾಲು 1 ಮತ್ತು 2 ಸಂಬಂಧಿಸಲ್ಪಟ್ಟದ್ದು
2. ಬ್ರೆಡ್ಡು 2 ಮತ್ತು 3 ಸಂಬಂಧಿಸಲ್ಪಟ್ಟದ್ದು
3. ವಿದ್ಯುದ್ದೀಪ 3 ಮತ್ತು 4 ಸಂಬಂಧಿಸಲ್ಪಟ್ಟದ್ದು
4. ಈರುಳ್ಳಿ 4 ಮತ್ತು 5 ಸಂಬಂಧಿಸಲ್ಪಟ್ಟದ್ದು
5. ಐಸ್ಕ್ರೀಮ್