ಬೈಬಲಿನ ದೃಷ್ಟಿಕೋನ
ನರ್ತಿಸುವುದು ಕ್ರೈಸ್ತರಿಗಾಗಿದೆಯೊ?
“ನಾನಿದನ್ನು ವೀಕ್ಷಿಸಲಾರೆ. ನಾನು ಹೊರಗೆಹೋಗಬೇಕಾಗಿದೆ” ಎಂದು ಒಬ್ಬ ಯುವ ಪುರುಷನು ತನ್ನ ಹೆಂಡತಿಗೆ ಪಿಸುಗುಟ್ಟಿ, ತನ್ನ ಆಸನದಿಂದೆದ್ದು, ರಾತ್ರಿಯ ತಂಗಾಳಿಯಲ್ಲಿ ಅಡ್ಡಾಡಲು ಕೋಣೆಯನ್ನು ಬಿಟ್ಟುಹೋದನು. ಅವನು ಪೇಚಾಟಕ್ಕೀಡಾಗಿದ್ದನು.
ಅವನೂ ಅವನ ಹೆಂಡತಿಯೂ, ಸ್ನೇಹಿತರಿಂದ ಒಂದು ಸಾಮಾಜಿಕ ಗೋಷ್ಠಿಗೆ ಆಮಂತ್ರಿಸಲ್ಪಟ್ಟಿದ್ದರು. ಆತಿಥೇಯರು, ಮೂವರು ಸ್ತ್ರೀಯರು ನರ್ತಿಸುವುದನ್ನು ಒಳಗೊಂಡಿದ್ದ ಒಂದು ನಾಟ್ಯಪ್ರದರ್ಶನವನ್ನು ತೋರಿಸಲು ನಿರ್ಧರಿಸಿದ್ದರು. ಸಭಿಕರಲ್ಲಿ ಉಳಿದವರು ಕದಲದೆ ಕುಳಿತಿರುವಂತೆ ತೋರಿತು. ಅವನು ವಿಪರೀತ ಸೂಕ್ಷ್ಮಸಂವೇದಿಯಾಗಿದ್ದನೊ? ನರ್ತಕಿಯರು ತಮ್ಮ ಆಂತರಿಕ ಭಾವಾವೇಶಗಳನ್ನು ಮಾತ್ರವೇ ವ್ಯಕ್ತಪಡಿಸುತ್ತಿದ್ದು, ನರ್ತನದ ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದರಲ್ಲವೇ? ಕ್ರೈಸ್ತ ದೃಷ್ಟಿಕೋನದಿಂದ ನಾವು ನರ್ತನವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸೋಣ.
ನರ್ತಿಸುವುದು ಸಂವಾದ ಮಾಡುವುದಾಗಿದೆ
ಮಾನವರು ಸಂವಾದ ಮಾಡುವ ವಿಧಗಳಲ್ಲಿ ಒಂದು, ಭಾವಾಭಿನಯಗಳ ಅಥವಾ ಚಲನೆಗಳ ಮೂಲಕವಾಗಿದೆ. ಉದಾಹರಣೆಗಾಗಿ, ವಿದೇಶವೊಂದರಲ್ಲಿರುವಾಗ, ತಾವು ಮುಗ್ಧವೆಂದು ಪರಿಗಣಿಸಿದ್ದ ಒಂದು ಚಲನೆಯು, ಅಲ್ಲಿ ಒಂದು ವಿಭಿನ್ನ ಅರ್ಥ—ಬಹುಶಃ ಅನಪೇಕ್ಷಿತವಾದ ಒಂದು ಅರ್ಥ—ವನ್ನು ಪಡೆದಿರುವುದನ್ನು ಕಾಣಲು ಅನೇಕ ಸಂದರ್ಶಕರು ಆಶ್ಚರ್ಯಪಟ್ಟಿದ್ದಾರೆ. ಸಾಲೊಮನ್ ಐಲೆಂಡ್ಸ್, ಮಲೇಷಿಯ, ಮತ್ತು ಪ್ಯಾಪುವ ನ್ಯೂ ಗಿನೀಯದ ಮಾಜಿ ಮಿಷನೆರಿಯೊಬ್ಬನು ಹೇಳಿಕೆ ನೀಡಿದ್ದು: “ಕೆಲವು ಕ್ಷೇತ್ರಗಳಲ್ಲಿ ಲೈಂಗಿಕ ಸೂಚ್ಯಾರ್ಥಗಳು ನಿರ್ದಿಷ್ಟವಾದ ದೈಹಿಕ ಚಲನೆಗಳೊಂದಿಗೆ ಸಂಬಂಧಿಸಿರುತ್ತವೆ. ದೃಷ್ಟಾಂತಕ್ಕಾಗಿ, ಸ್ತ್ರೀಯೊಬ್ಬಳು ನೆಲದ ಮೇಲೆ ಕುಳಿತಿರುವಾಗ, ಅವಳ ಕಾಲುಗಳ ಮೇಲಿನಿಂದ ಹೆಜ್ಜೆಯಿಡುವುದು ಪುರುಷನೊಬ್ಬನಿಗೆ ಅಸಂಗತವಾದುದಾಗಿ ಪರಿಗಣಿಸಲ್ಪಡುತ್ತದೆ. ತದ್ರೀತಿಯಲ್ಲಿ, ನೆಲದ ಮೇಲೆ ಕುಳಿತಿರುವ ಪುರುಷನೊಬ್ಬನ ಮುಂದೆ ನಡೆಯುವುದೂ ಸ್ತ್ರೀಯೊಬ್ಬಳಿಗೆ ಅಷ್ಟೇ ಅವಿಚಾರತೆಯಾಗಿದೆ. ಎರಡೂ ವಿದ್ಯಮಾನಗಳಲ್ಲಿ ಲೈಂಗಿಕ ಅರ್ಥಸೂಚನೆಗಳು ಆ ಕೂಡಲೆ ಗ್ರಹಿಸಲ್ಪಡುತ್ತವೆ.” ನಮಗೆ ಅದರ ಕುರಿತಾಗಿ ಅರಿವಿರಲಿ ಅಥವಾ ಇಲ್ಲದಿರಲಿ, ನಮ್ಮ ದೈಹಿಕ ಚಲನೆಗಳು ಅನಿಸಿಕೆಗಳನ್ನು ವ್ಯಕ್ತಪಡಿಸುತ್ತವೆ. ಆದುದರಿಂದ ಇತಿಹಾಸದಾದ್ಯಂತ, ನರ್ತಿಸುವುದು ಸಂವಾದ ಮಾಡುವಿಕೆಯ ಒಂದು ರೂಪವಾಗಿ ಉಪಯೋಗಿಸಲ್ಪಟ್ಟಿದೆ ಎಂಬುದನ್ನು ತಿಳಿಯುವುದು ನಮ್ಮನ್ನು ಆಶ್ಚರ್ಯಗೊಳಿಸಬಾರದು.
ಒಂದು ಆಚರಣೆಯ ಆನಂದ ಮತ್ತು ಪುಷ್ಕಳತೆಯಿಂದ ಹಿಡಿದು, ಧಾರ್ಮಿಕ ಮತಾಚರಣೆ ಮತ್ತು ಸಂಪ್ರದಾಯದ ವರೆಗಿನ ಭಾವಾವೇಶಗಳ ಸಂಪೂರ್ಣ ಶ್ರೇಣಿಯನ್ನು ನರ್ತನದಲ್ಲಿ ವ್ಯಕ್ತಪಡಿಸಬಹುದು. (2 ಸಮುವೇಲ 6:14-17; ಕೀರ್ತನೆ 149:1, 3) ದ ನ್ಯೂ ಎನ್ಸೈಕ್ಲೊಪೀಡಿಯ ಬ್ರಿಟ್ಯಾನಿಕ ಹೇಳುವುದು: “ನರ್ತಿಸುವವನು ಸಭಿಕರೊಂದಿಗೆ ಎರಡು ವಿಭಿನ್ನ ವಿಧಗಳಲ್ಲಿ—ದೇಹ ಇಲ್ಲವೇ ಮುಖದ ಮೂಲಕ ಭಾವಾವೇಶವನ್ನು ಪ್ರವಹಿಸುವ ಮುಖಾಂತರವಾಗಿ ಅಥವಾ ಮೂಕಾಭಿನಯ ಮತ್ತು ಭಾವಾಭಿನಯದ ಜಟಿಲವಾದೊಂದು ಭಾಷೆಯ ಮುಖಾಂತರವಾಗಿ—ಸಂವಾದ ಮಾಡುತ್ತಾನೆ.” ಕೆಲವು ನರ್ತನಗಳಲ್ಲಿ ಸಂವಾದ ಮಾಡುವಿಕೆಯು ಬಹಳ ಸುಲಭವಾಗಿ ಅರ್ಥಮಾಡಿಕೊಳ್ಳುವಂತಹದ್ದಾಗಿ ತೋರಿಬರಬಹುದು. ಇನ್ನಿತರ ನರ್ತನ ರೂಪಗಳಲ್ಲಿ, ಆ ಭಾಷೆಯು ಜ್ಞಾನಿಗಳಾದ ಕೆಲವು ಜನರಿಂದ ಮಾತ್ರ ಅರ್ಥಮಾಡಿಕೊಳ್ಳಲ್ಪಡಬಹುದು. ಉದಾಹರಣೆಗಾಗಿ, ಶಾಸ್ತ್ರೀಯ ಬ್ಯಾಲೆಟ್ ನರ್ತನದಲ್ಲಿ, ಹೃದಯದ ಮೇಲೆ ಇಡಲ್ಪಡುವ ಕೈ ಪ್ರೀತಿಯನ್ನು ಸೂಚಿಸುತ್ತದೆ, ಆದರೆ ಎಡಗೈಯ ನಾಲ್ಕನೆಯ ಬೆರಳಿಗೆ ನಿರ್ದೇಶಿಸುವುದು ವಿವಾಹವನ್ನು ಸೂಚಿಸುತ್ತದೆ. ಚೀನಾದ ನಾಟಕಕಲೆಯಲ್ಲಿ, ವೃತ್ತಿವೊಂದರಲ್ಲಿ ನಡೆಯುವುದು ಒಂದು ಪ್ರಯಾಣವನ್ನು ಸೂಚಿಸುತ್ತದೆ, ಆದರೆ ಲಂಬವಾದ ಚಾವಟಿಯೊಂದನ್ನು ಹಿಡಿದುಕೊಂಡು ವೇದಿಕೆಯನ್ನು ವೃತ್ತಾಕಾರವಾಗಿ ಸುತ್ತುತ್ತಿರುವುದು, ಕುದುರೆ ಸವಾರಿ ಮಾಡುತ್ತಿರುವುದನ್ನು ಅರ್ಥೈಸುತ್ತದೆ; ವೇದಿಕೆಯ ಸುತ್ತಲೂ ಜೋತಾಡಿಸುವ ಕಪ್ಪು ಬಾವುಟವು ಬಿರುಗಾಳಿಯನ್ನು ಸೂಚಿಸುತ್ತಿರುವಾಗ, ತೆಳುನೀಲಿ ಬಣ್ಣದ ಬಾವುಟವು ಮಂದಮಾರುತವನ್ನು ಸೂಚಿಸುತ್ತದೆ. ಹೀಗೆ ನರ್ತನದಲ್ಲಿ ಚಲನೆಗಳು ಮತ್ತು ಭಾವಾಭಿನಯಗಳ ಮೂಲಕ ದೇಹವು ಸಂವಾದ ಮಾಡುತ್ತದೆ. ಆದರೆ ಸಂದೇಶವು ಯಾವಾಗಲೂ ಸರಿಯಾಗಿರುತ್ತದೊ?
ನರ್ತಿಸುವುದು—ಯೋಗ್ಯ ಮತ್ತು ಅಯೋಗ್ಯ
ನರ್ತಿಸುವುದು, ಮನೋರಂಜನೆ ಮತ್ತು ವ್ಯಾಯಾಮದ ಒಂದು ಆನಂದದಾಯಕ ರೂಪವಾಗಿರಸಾಧ್ಯವಿದೆ. ಜೀವಿಸುತ್ತಿರುವುದರ ಕುರಿತಾದ ಶುದ್ಧ ಸಂತೋಷ ಅಥವಾ ಯೆಹೋವನ ಒಳ್ಳೆಯತನದ ಗಣ್ಯತೆಯ ಕುರಿತಾದ ಆನಂದದಾಯಕ ಶಾರೀರಿಕ ಪ್ರತಿಕ್ರಿಯೆಯನ್ನು ತೋರಿಸುತ್ತಾ, ಅದು ನೈತಿಕವಾಗಿ ಶುದ್ಧವೂ ವ್ಯಕ್ತವೂ ಆದ ಅಭಿವ್ಯಕ್ತಿಯಾಗಿರಬಲ್ಲದು. (ವಿಮೋಚನಕಾಂಡ 15:20; ನ್ಯಾಯಸ್ಥಾಪಕರು 11:34) ಕೆಲವು ಗುಂಪು ನರ್ತನಗಳು ಹಾಗೂ ಜನಪದ ನರ್ತನಗಳು ಆನಂದದಾಯಕವಾಗಿರಸಾಧ್ಯವಿದೆ. ದುಂದುಗಾರ ಮಗನ ಕುರಿತಾದ ತನ್ನ ದೃಷ್ಟಾಂತದಲ್ಲಿ ಯೇಸು, ಉತ್ಸವಗಳ ಭಾಗದೋಪಾದಿ, ನರ್ತಿಸುವವರ ಒಂದು ಸಂಘಕ್ಕೆ—ಬಾಡಿಗೆಗಾಗಿ ಕರೆಸಿದ್ದ ಒಂದು ನರ್ತನ ತಂಡವೆಂಬುದು ಸುವ್ಯಕ್ತ—ಸಹ ನಿರ್ದೇಶಿಸಿದನು. (ಲೂಕ 15:25) ಆದುದರಿಂದ, ಬೈಬಲು ವಾಸ್ತವವಾಗಿಯೇ ನರ್ತಿಸುವುದನ್ನು ಖಂಡಿಸುವುದಿಲ್ಲ ಎಂಬುದು ಸ್ಪಷ್ಟ. ಹಾಗಿದ್ದರೂ, ಕೆಟ್ಟ ಆಲೋಚನೆಗಳು ಮತ್ತು ಬಯಕೆಗಳ ಪ್ರಚೋದಿಸುವಿಕೆಯ ವಿರುದ್ಧವಾಗಿ ಅದು ಎಚ್ಚರಿಕೆಯನ್ನು ಕೊಡುತ್ತದೆ ಎಂಬುದು ನಿಶ್ಚಯ. ಇದು ನರ್ತಿಸುವಿಕೆಯ ನಿರ್ದಿಷ್ಟ ವಿಧಗಳು ಅಸಭ್ಯವೂ, ಒಬ್ಬನ ಆತ್ಮಿಕತೆಗೆ ಅಪಾಯಕರವೂ ಆಗಿರಬಹುದೆಂಬುದರ ಸಂಬಂಧವಾಗಿದೆ. (ಕೊಲೊಸ್ಸೆ 3:5) ಪುರಾತನ ಕಾಲಗಳಿಂದಲೂ ನರ್ತಿಸುವಿಕೆಯು ಕೆಲವೊಂದು ಸಂದರ್ಭಗಳಲ್ಲಿ ಪ್ರಣಯಸಂಬಂಧವಾದುದಾಗಿದೆ ಮತ್ತು ಹಾನಿಕರವಾದ ಉದ್ದೇಶಗಳಿಗಾಗಿ ಉಪಯೋಗಿಸಲ್ಪಟ್ಟಿದೆ.—ಮತ್ತಾಯ 14:3-11ನ್ನು ಹೋಲಿಸಿರಿ.
ನಮ್ಮ ವಿರೋಧಿಯಾದ ಪಿಶಾಚನಾದ ಸೈತಾನನು, ನರ್ತನ ಚಲನೆಗಳು ಮತ್ತು ಅಯೋಗ್ಯ ಆಲೋಚನೆಗಳ ಸಂಯೋಗವು ತನ್ನ ಕೈಗಳಲ್ಲಿರುವ ಪ್ರಬಲವಾದ ಒಂದು ಆಯುಧವೆಂದು ತಿಳಿದಿದ್ದಾನೆ. (ಯಾಕೋಬ 1:14, 15ನ್ನು ಹೋಲಿಸಿರಿ.) ಚಲನೆಯಲ್ಲಿ ದೇಹದ ಸಂವೇದನೀಯ ಸೆಳೆತದ ಕುರಿತು ಮತ್ತು ಅದು ಪ್ರಣಯಸಂಬಂಧವಾದ ಆಲೋಚನೆಗಳನ್ನು ಹೇಗೆ ಪ್ರಚೋದಿಸಬಲ್ಲದೆಂಬುದರ ಕುರಿತು ಅವನಿಗೆ ಚೆನ್ನಾಗಿ ಅರಿವಿದೆ. ಸೈತಾನನು, ನಮ್ಮ “ಮನಸ್ಸು ಕ್ರಿಸ್ತನ ವಿಷಯದಲ್ಲಿರಬೇಕಾದ ಯಥಾರ್ಥತ್ವವನ್ನೂ ಪಾತಿವ್ರತ್ಯವನ್ನೂ ಬಿಟ್ಟು ಕೆಟ್ಟು”ಹೋಗುವಂತೆ ಮಾಡಲಿಕ್ಕಾಗಿ, ನಮ್ಮನ್ನು ವಂಚಿಸಲು ನಿರ್ಧರಿಸಿದ್ದಾನೆಂದು ಅಪೊಸ್ತಲ ಪೌಲನು ಎಚ್ಚರಿಸಿದನು. (2 ಕೊರಿಂಥ 11:3) ಅಸಭ್ಯವಾದ ನರ್ತಿಸುವಿಕೆಯನ್ನು ಆಚರಿಸುವ ಮೂಲಕ ಅಥವಾ ಅದರಲ್ಲಿ ನಾವು ಭಾಗವಹಿಸುವ ಮೂಲಕ, ನಮ್ಮ ಮನಸ್ಸುಗಳನ್ನು ಅನೈತಿಕ ಆಲೋಚನೆಗೆ ಸಿಕ್ಕಿಸಲು ಅನುಮತಿಸುವುದಾದರೆ, ಪಿಶಾಚನು ಎಷ್ಟು ಸಂತೋಷಗೊಳ್ಳುವನೆಂಬುದನ್ನು ಊಹಿಸಿಕೊಳ್ಳಿರಿ. ನಮ್ಮ ಅನಿಯಂತ್ರಿತ ಬಯಕೆಗಳ ಹಿಡಿತವನ್ನು ಸಡಿಲಿಸಿಬಿಟ್ಟಿರುವಲ್ಲಿ ಮತ್ತು ಅಯೋಗ್ಯ ನಡವಳಿಕೆಯ ವೇದನಾಭರಿತ ಪರಿಣಾಮದಲ್ಲಿ ತೊಡರಿಸಿಕೊಂಡವರಾಗಿ ಪರಿಣಮಿಸುವಲ್ಲಿ ಅವನು ಇನ್ನೂ ಹೆಚ್ಚು ಹರ್ಷಭರಿತನಾಗುವನು. ಆ ಉದ್ದೇಶದಿಂದಲೇ ಅವನು ಗತಕಾಲದಲ್ಲಿ ಚಲನೆ ಮತ್ತು ನರ್ತನವನ್ನು ಉಪಯೋಗಿಸಿದ್ದಾನೆ.—ವಿಮೋಚನಕಾಂಡ 32:6, 17-19ನ್ನು ಹೋಲಿಸಿರಿ.
ಯೋಗ್ಯ ಅಥವಾ ಅಯೋಗ್ಯ—ನಿರ್ಧರಿಸುವ ವಿಧ
ಆದಕಾರಣ, ನರ್ತನವು ಗುಂಪುಗಳಿಂದ, ದಂಪತಿಗಳಿಂದ, ಅಥವಾ ಒಬ್ಬನೇ ಒಬ್ಬ ವ್ಯಕ್ತಿಯಿಂದ ಮಾಡಲ್ಪಡಲಿ, ಚಲನೆಗಳು ನಿಮ್ಮೊಳಗೆ ಅಶುದ್ಧ ಆಲೋಚನೆಗಳನ್ನು ಉದ್ರೇಕಿಸುವಲ್ಲಿ, ಆಗ ಇತರರಿಗೆ ಅದು ಹಾನಿಕರವಾಗಿಲ್ಲದಿರಬಹುದಾದರೂ ಆ ನರ್ತನವು ನಿಮಗೆ ಹಾನಿಕರವಾಗಿದೆ.
ಅನೇಕ ಆಧುನಿಕ ನರ್ತನಗಳಲ್ಲಿ, ಸಹಭಾಗಿಗಳು ಒಬ್ಬರನ್ನೊಬ್ಬರು ಸ್ಪರ್ಶಿಸುವುದೂ ಇಲ್ಲವೆಂಬುದನ್ನು ಕೆಲವರು ಗಮನಿಸಿದ್ದಾರೆ. ಆದರೂ, ಸ್ಪರ್ಶಿಸುವುದು ನಿಜವಾಗಿಯೂ ವಾದಾಸ್ಪದವಾದ ವಿಷಯವಾಗಿದೆಯೊ? ಬ್ರಿಟ್ಯಾನಿಕ ಹೀಗೆ ಹೇಳುವ ಮೂಲಕ ವಿಷಯವನ್ನು ಮುಕ್ತಾಯಗೊಳಿಸುತ್ತದೆ: “ಅಂತಿಮ ಫಲಿತಾಂಶವು ಒಂದೇ ಆಗಿದೆ—ನರ್ತನಾ ಚಟುವಟಿಕೆಯಲ್ಲಿ ಶಾರೀರಿಕ ಸುಖಾನುಭವ ಮತ್ತು ಸಹಭಾಗಿಯು ಆಲಿಂಗಿಸಲಿ ಅಥವಾ ಅರೆಪ್ರಜ್ಞಾವಸ್ಥೆಯಲ್ಲಿ ಗಮನಿಸಲಿ, ಸಹಭಾಗಿಯೊಬ್ಬನ ಲೈಂಗಿಕ ಪ್ರಜ್ಞೆಯೇ.” ವಿವಾಹದ ಬಂಧಗಳ ಹೊರಗೆ “ಸಹಭಾಗಿಯೊಬ್ಬನ ಲೈಂಗಿಕ ಪ್ರಜ್ಞೆ”ಯು ವಿವೇಕಯುತವಾದದ್ದಾಗಿದೆಯೊ? “ಪರಸ್ತ್ರೀಯನ್ನು ನೋಡಿ ಮೋಹಿಸುವ ಪ್ರತಿ ಮನುಷ್ಯನು ಆಗಲೇ ತನ್ನ ಮನಸ್ಸಿನಲ್ಲಿ ಆಕೆಯ ಕೂಡ ವ್ಯಭಿಚಾರ ಮಾಡಿದವನಾದನು” ಎಂಬ ಯೇಸುವಿನ ಹೇಳಿಕೆಗನುಗುಣವಾಗಿ ಇದು ವಿವೇಕಯುತವಾಗಿಲ್ಲ.—ಮತ್ತಾಯ 5:28.
ನರ್ತಿಸಬೇಕೊ ನರ್ತಿಸಬಾರದೊ ಎಂಬುದನ್ನು ನಿರ್ಧರಿಸುವುದು ನಿಮ್ಮ ಆಯ್ಕೆಯಾಗಿದೆ. ಈ ಕೆಳಗಿನ ಪ್ರಶ್ನೆಗಳ ಮೇಲೆ ಪುನರಾಲೋಚಿಸುವುದು, ವಿವೇಕಪೂರ್ಣವಾದ ನಿರ್ಧಾರವನ್ನು ಮಾಡುವಂತೆ ನಿಮಗೆ ಸಹಾಯ ಮಾಡಬಹುದು. ಈ ನರ್ತನದ ಉದ್ದೇಶವೇನು? ಅದರ ಪ್ರಖ್ಯಾತಿ ಏನಾಗಿದೆ? ನರ್ತನ ಚಲನೆಗಳು ಏನನ್ನು ಒತ್ತಿಹೇಳುತ್ತವೆ? ಅವು ಯಾವ ಆಲೋಚನೆಗಳು ಮತ್ತು ಭಾವಾವೇಶಗಳನ್ನು ನನ್ನಲ್ಲಿ ಉದ್ರೇಕಿಸುತ್ತವೆ? ನನ್ನ ಸಹಭಾಗಿಯಲ್ಲಿ ಅಥವಾ ವೀಕ್ಷಿಸುತ್ತಿರುವವರಲ್ಲಿ ಅವು ಯಾವ ಬಯಕೆಗಳನ್ನು ಪ್ರಚೋದಿಸುತ್ತವೆ? ನಿಶ್ಚಯವಾಗಿ, ಇತರರು ಏನೇ ಮಾಡಲಿ, ನಮ್ಮ ಪೀಠಿಕೆಯಲ್ಲಿ ಯುವ ಗಂಡನು ಮಾಡಿದಂತೆ, ಒಬ್ಬನ ಮನಸ್ಸಾಕ್ಷಿಗನುಸಾರ ಒಬ್ಬನು ಪ್ರತಿಕ್ರಿಯಿಸಬೇಕು.
ನಾವು ಸೌಂದರ್ಯ, ತಾಳ, ಲಾಲಿತ್ಯದ ವರದಾನಗಳಲ್ಲಿ ಆನಂದಿಸುವಂತೆ ಸೃಷ್ಟಿಕರ್ತನು ಬಯಸುತ್ತಾನೆಂದು ಬೈಬಲು ಸೂಚಿಸುತ್ತದೆ. ಹೌದು, ಅವುಗಳಲ್ಲಿ ಆನಂದಿಸಿರಿ, ಆದರೆ ನೀವು ನರ್ತಿಸುವಾಗ ನಿಮ್ಮ ದೇಹವು ಸಂವಾದ ಮಾಡುತ್ತದೆಂಬುದನ್ನು ಮನಸ್ಸಿನಲ್ಲಿಡಿರಿ. ಫಿಲಿಪ್ಪಿ 4:8ರಲ್ಲಿ ಕೊಡಲ್ಪಟ್ಟಿರುವ ಪೌಲನ ಮಾರ್ಗದರ್ಶನಗಳನ್ನು ಜ್ಞಾಪಕದಲ್ಲಿಡಿರಿ: “ಯಾವಾವದು ಸತ್ಯವೂ ಮಾನ್ಯವೂ ನ್ಯಾಯವೂ ಶುದ್ಧವೂ ಪ್ರೀತಿಕರವೂ ಮನೋಹರವೂ ಆಗಿದೆಯೋ, ಯಾವದು ಸದ್ಗುಣವಾಗಿದೆಯೋ, ಯಾವದು ಕೀರ್ತಿಗೆ ಯೋಗ್ಯವೋ, ಅವೆಲ್ಲವುಗಳನ್ನೂ ಲಕ್ಷ್ಯಕ್ಕೆ ತಂದುಕೊಳ್ಳಿರಿ.”
[ಪುಟ 38 ರಲ್ಲಿರುವ ಚಿತ್ರ ಕೃಪೆ]
Picture Fund/Courtesy, Museum of Fine Arts, Boston