ಮೋಟಾರುಗಾಡಿಗಳಿಲ್ಲದ ಒಂದು ಲೋಕವೊ?
ಮೋಟಾರು ವಾಹನಗಳಿಲ್ಲದ ಒಂದು ಲೋಕವನ್ನು ನೀವು ಕಲ್ಪಿಸಿಕೊಳ್ಳಬಲ್ಲಿರೊ? ಅಥವಾ ಕಳೆದ ಶತಮಾನದಲ್ಲಿ ಮೋಟಾರುಗಾಡಿಗಳಷ್ಟು ಮೂಲಭೂತವಾಗಿ ಜನರ ಜೀವನಶೈಲಿಗಳನ್ನೂ ನಡತೆಯನ್ನೂ ಬದಲಾಯಿಸಿರುವ ಒಂದು ಶೋಧವನ್ನು ನೀವು ಹೆಸರಿಸಬಲ್ಲಿರೊ? ಮೋಟಾರುಗಾಡಿಗಳಿಲ್ಲದೆ, ಮೋಟೆಲ್ಗಳಾಗಲಿ, ವಾಹನಸ್ಥ-ವ್ಯವಹಾರದ ರೆಸ್ಟೊರೆಂಟ್ಗಳಾಗಲಿ, ವಾಹನಸ್ಥ-ವ್ಯವಹಾರದ ಚಲನಚಿತ್ರ ಮಂದಿರಗಳಾಗಲಿ ಇರುತ್ತಿರಲಿಲ್ಲ. ಹೆಚ್ಚು ಪ್ರಾಮುಖ್ಯವಾಗಿ, ಬಸ್ಸುಗಳು, ಟ್ಯಾಕ್ಸಿಗಳು, ಕಾರ್ಗಳು, ಅಥವಾ ಟ್ರಕ್ಕುಗಳಿಲ್ಲದೆ ನಾವು ಕೆಲಸಕ್ಕೆ ಹೇಗೆ ಹೋಗುತ್ತಿದ್ದೆವು? ಶಾಲೆಗೆ ಹೇಗೆ ಹೋಗುತ್ತಿದ್ದೆವು? ರೈತರು ಹಾಗೂ ತಯಾರಕರು ತಮ್ಮ ಸರಕುಗಳನ್ನು ಮಾರುಕಟ್ಟೆಗೆ ಹೇಗೆ ಕೊಂಡೊಯ್ಯುತ್ತಿದ್ದರು?
“ಅಮೆರಿಕದ ಪ್ರತಿ ಆರು ವ್ಯಾಪಾರಗಳಲ್ಲಿ ಒಂದು ವ್ಯಾಪಾರವು, ಮೋಟಾರು ವಾಹನಗಳ ತಯಾರಿಕೆ, ವಿತರಣೆ, ಸರ್ವಿಸ್ಮಾಡುವಿಕೆ, ಅಥವಾ ಉಪಯೋಗದ ಮೇಲೆ ಅವಲಂಬಿಸಿದೆ” ಎಂದು ದ ನ್ಯೂ ಎನ್ಸೈಕ್ಲೊಪೀಡಿಯ ಬ್ರಿಟ್ಯಾನಿಕ ಗಮನಿಸುತ್ತದೆ. ಅದು ಕೂಡಿಸುವುದು: “ಮೋಟಾರು ವಾಹನಗಳಿಗೆ ಸಂಬಂಧಿಸಿದ ಸಂಸ್ಥೆಗಳ ವಿಕ್ರಯಗಳು ಹಾಗೂ ಸಂದಾಯಗಳು, ಆ ದೇಶದ ಸಗಟು ವ್ಯಾಪಾರದ ಐದನೇ ಒಂದು ಭಾಗಕ್ಕಿಂತಲೂ ಹೆಚ್ಚನ್ನು ಹಾಗೂ ಅದರ ಚಿಲ್ಲರೆ ವ್ಯಾಪಾರದ ನಾಲ್ಕನೇ ಒಂದು ಭಾಗಕ್ಕಿಂತಲೂ ಹೆಚ್ಚನ್ನು ಪ್ರತಿನಿಧಿಸುತ್ತವೆ. ಇತರ ದೇಶಗಳಿಗಾದರೋ ಈ ಅನುಪಾತಗಳು ಕೊಂಚಮಟ್ಟಿಗೆ ಕಡಿಮೆಯಾಗಿವೆ, ಆದರೆ ಜಪಾನ್ ಹಾಗೂ ಪಾಶ್ಚಾತ್ಯ ಯೂರೋಪಿನ ದೇಶಗಳು ಅಮೆರಿಕದ ಮಟ್ಟವನ್ನು ತ್ವರಿತಗತಿಯಲ್ಲಿ ಸಮೀಪಿಸುತ್ತಿವೆ.”
ಆದಾಗ್ಯೂ, ಮೋಟಾರು ವಾಹನಗಳಿಲ್ಲದ ಒಂದು ಲೋಕವು, ಹೆಚ್ಚು ಉತ್ತಮವಾದ ಒಂದು ಸ್ಥಳವಾಗಿರುವುದೆಂದು ಕೆಲವು ಜನರು ಹೇಳುತ್ತಾರೆ. ಇದನ್ನು ಅವರು ಮೂಲತಃ ಎರಡು ಕಾರಣಗಳಿಗಾಗಿ ಹೇಳುತ್ತಾರೆ.
ಲೋಕವ್ಯಾಪಕವಾದ ಕಿಕ್ಕಿರಿತ
ವಾಹನ ನಿಲ್ಲಿಸುವ (ಪಾರ್ಕಿಂಗ್) ಒಂದು ಜಾಗಕ್ಕಾಗಿ ಹುಡುಕುತ್ತಾ, ನೀವು ಎಂದಾದರೂ ದೀರ್ಘ ಸಮಯದ ವರೆಗೆ ಬೀದಿಗಳ ಸುತ್ತಲೂ ವಾಹನನಡೆಸಿರುವಲ್ಲಿ, ಕಾರುಗಳು ಪ್ರಯೋಜನಕರವಾಗಿರುವುದಾದರೂ, ಜನನಿಬಿಡ ಕ್ಷೇತ್ರವೊಂದರಲ್ಲಿ ತೀರ ಹೆಚ್ಚು ಕಾರುಗಳಿರುವುದು ಪ್ರಯೋಜನಕರವಾಗಿಲ್ಲವೆಂಬುದನ್ನು ನಿಮಗೆ ಬೇರೆ ಯಾರೂ ಹೇಳುವ ಅಗತ್ಯವಿಲ್ಲ. ಅಥವಾ ನೀವೆಂದಾದರೂ ಅತಿ ಭಯಂಕರವಾದ ವಾಹನ ಸಂಚಾರ ಕಿಕ್ಕಿರಿತವೊಂದರಲ್ಲಿ ಸಿಕ್ಕಿಕೊಂಡಿರುವಲ್ಲಿ, ಚಲಿಸುವಂತೆ ವಿನ್ಯಾಸಿಸಲ್ಪಟ್ಟಿರುವ, ಆದರೆ ನಿಲುಗಡೆಯಲ್ಲಿರುವಂತೆ ಒತ್ತಾಯಿಸಲ್ಪಟ್ಟಿರುವ ವಾಹನವೊಂದರಲ್ಲಿ ಸಿಕ್ಕಿಕೊಳ್ಳುವುದು ಎಷ್ಟು ಆಶಾಭಂಗಗೊಳಿಸುವಂತಹದ್ದಾಗಿದೆ ಎಂಬುದು ನಿಮಗೆ ತಿಳಿದಿದೆ.
1950ರಲ್ಲಿ, ಪ್ರತಿ 4 ವ್ಯಕ್ತಿಗಳಿಗೆ 1 ಕಾರ್ ಇರುವ ಏಕಮಾತ್ರ ದೇಶವು ಅಮೆರಿಕವಾಗಿತ್ತು. 1974ರಷ್ಟಕ್ಕೆ, ಬೆಲ್ಜಿಯಮ್, ಫ್ರಾನ್ಸ್, ಜರ್ಮನಿ, ಗ್ರೇಟ್ ಬ್ರಿಟನ್, ಇಟಲಿ, ನೆದರ್ಲೆಂಡ್ಸ್, ಮತ್ತು ಸ್ವೀಡನ್ ದೇಶಗಳು ಅಮೆರಿಕದ ಮಟ್ಟವನ್ನು ತಲಪಿದ್ದವು. ಆದರೆ ಅಷ್ಟರಲ್ಲಿ ಅಮೆರಿಕದ ಸಂಖ್ಯೆಯು ಏರಿತ್ತು—ಬಹುಮಟ್ಟಿಗೆ ಪ್ರತಿ 2 ವ್ಯಕ್ತಿಗಳಿಗೆ 1 ಕಾರ್. ಈಗ ಜರ್ಮನಿ ಹಾಗೂ ಲುಕ್ಸೆಂಬರ್ಗ್ನಲ್ಲಿ ಪ್ರತಿ 2 ನಿವಾಸಿಗಳಿಗೆ ಸುಮಾರು 1 ಮೋಟಾರು ವಾಹನವಿದೆ. ಬೆಲ್ಜಿಯಮ್, ಫ್ರಾನ್ಸ್, ಗ್ರೇಟ್ ಬ್ರಿಟನ್, ಇಟಲಿ, ಮತ್ತು ನೆದರ್ಲೆಂಡ್ಸ್ ದೇಶಗಳು ತೀರ ಹಿಂದುಳಿದಿಲ್ಲ.
ಅಧಿಕಾಂಶ ದೊಡ್ಡ ನಗರಗಳು—ಲೋಕದಲ್ಲಿ ಅವುಗಳು ಎಲ್ಲಿಯೇ ಇರಲಿ—ಕಾರುಗಳಿಂದ ಎಷ್ಟು ಕಿಕ್ಕಿರಿದಿವೆಯೆಂದರೆ, ಅವು ಬೃಹತ್ ಪಾರ್ಕಿಂಗ್ ಕ್ಷೇತ್ರಗಳನ್ನು ಹೋಲುತ್ತವೆ. ಉದಾಹರಣೆಗಾಗಿ, ಭಾರತದಲ್ಲಿ, 1947ರಲ್ಲಿನ ಸ್ವಾತಂತ್ರ್ಯದ ಸಮಯದಲ್ಲಿ, ಅದರ ರಾಜಧಾನಿಯಾದ ನವದೆಹಲಿಯಲ್ಲಿ 11,000 ಕಾರುಗಳು ಮತ್ತು ಟ್ರಕ್ಕುಗಳಿದ್ದವು. 1993ರಷ್ಟಕ್ಕೆ ಆ ಸಂಖ್ಯೆಯು 22,00,000ವನ್ನೂ ಮೀರಿತು! ಬೃಹತ್ ಸಂಖ್ಯೆಯ ಏರಿಕೆ—ಆದರೆ ಟೈಮ್ ಪತ್ರಿಕೆಗನುಸಾರವಾಗಿ, “ಈ ಶತಮಾನದ ಅಂತ್ಯದಷ್ಟಕ್ಕೆ ಇಮ್ಮಡಿಯಾಗುವುದೆಂದು ನಿರೀಕ್ಷಿಸಲ್ಪಟ್ಟಿರುವ ಒಂದು ಸಂಖ್ಯೆಯಾಗಿದೆ.”
ಈ ಮಧ್ಯೆ, ಪಶ್ಚಿಮ ಯೂರೋಪಿನಲ್ಲಿರುವುದಕ್ಕಿಂತ ತಲಾ ಒಬ್ಬನಿಗೆ ಕಾಲಂಶ ಮಾತ್ರ ಮೋಟಾರುಗಾಡಿಗಳಿರುವ ಪೂರ್ವ ಯೂರೋಪಿನಲ್ಲಿ, ಸುಮಾರು 40 ಕೋಟಿ ಭಾವೀ ಗಿರಾಕಿಗಳಿದ್ದಾರೆ. ಕೆಲವೊಂದು ವರ್ಷಗಳೊಳಗೆ, ಇಷ್ಟರವರೆಗೆ ತನ್ನ 40 ಕೋಟಿ ಸೈಕಲ್ಗಳಿಗೆ ಪ್ರಸಿದ್ಧವಾಗಿರುವ ಚೀನಾದಲ್ಲಿನ ಪರಿಸ್ಥಿತಿಯು ಬದಲಾವಣೆಗೊಂಡಿರುವುದು. 1994ರಲ್ಲಿ ವರದಿಮಾಡಲ್ಪಟ್ಟಂತೆ, “ಚೀನಾದ ಸರಕಾರವು, ಮೋಟಾರುಗಾಡಿ ಉತ್ಪಾದನೆಯಲ್ಲಿ ತೀವ್ರಗತಿಯ ಏರಿಕೆಗಾಗಿ ಯೋಜನೆಗಳನ್ನು ಹಾಕುತ್ತಿದೆ.” ಅದು ಈ ಶತಮಾನದ ಅಂತ್ಯದಷ್ಟಕ್ಕೆ, ವಾರ್ಷಿಕವಾಗಿ 13 ಲಕ್ಷ ಕಾರುಗಳಿಂದ 30 ಲಕ್ಷ ಕಾರುಗಳಿಗೆ ಹೆಚ್ಚಲಿದೆ.
ಮಾಲಿನ್ಯದ ಬೆದರಿಕೆ
“ಬ್ರಿಟನ್ನಲ್ಲಿ ಸ್ವಚ್ಛವಾದ ಗಾಳಿಯು ದೊರಕುತ್ತಿಲ್ಲ” ಎಂದು ಅಕ್ಟೋಬರ್ 28, 1994ರ ದ ಡೈಲಿ ಟೆಲಿಗ್ರಾಫ್ ಹೇಳಿತು. ಇದು ಅತಿಶಯಿಸಿ ಹೇಳಲ್ಪಟ್ಟಿರಬಹುದಾದರೂ, ಚಿಂತೆಯನ್ನುಂಟುಮಾಡಲು ಸಾಕಷ್ಟು ಸತ್ಯವಾಗಿದೆ. ಈಸ್ಟ್ ಆ್ಯಂಗ್ಲಿಯ ವಿಶ್ವವಿದ್ಯಾನಿಲಯದ ಪ್ರೊಫೆಸರರಾದ ಸ್ಟೂಅರ್ಟ್ ಪೆನ್ಕೆಟ್ ಎಚ್ಚರಿಸಿದ್ದು: “ಮೋಟಾರು ಕಾರುಗಳು, ನಮ್ಮ ಇಡೀ ಪ್ರಾಕೃತ ವಾಯುಮಂಡಲದ ಸಂಯೋಜನೆಯನ್ನೇ ಮಾರ್ಪಡಿಸುತ್ತಿವೆ.”
ಇಂಗಾಲದ ಮಾನಾಕ್ಸೈಡ್ ಮಾಲಿನ್ಯದ ಅಧಿಕ ಸಾಂದ್ರೀಕರಣವು, “ದೇಹವನ್ನು ಆಮ್ಲಜನಕದಿಂದ ವಂಚಿಸುತ್ತದೆ, ಗ್ರಹಣಶಕ್ತಿಯನ್ನೂ ಆಲೋಚನಾಶಕ್ತಿಯನ್ನೂ ದುರ್ಬಲಗೊಳಿಸುತ್ತದೆ, ಪ್ರಚೋದನಾಶಕ್ತಿಯನ್ನು ನಿಧಾನಗೊಳಿಸಿ, ಅರೆನಿದ್ರಾವಸ್ಥೆಯನ್ನು ಉಂಟುಮಾಡುತ್ತದೆ” ಎಂದು 5000 ಡೇಸ್ ಟು ಸೇವ್ ದ ಪ್ಲ್ಯಾನೆಟ್ ಎಂಬ ಪುಸ್ತಕವು ಹೇಳುತ್ತದೆ. ಮತ್ತು ಲೋಕಾರೋಗ್ಯ ಸಂಸ್ಥೆಯು ಹೇಳುವುದು: “ಯೂರೋಪ್ ಮತ್ತು ಉತ್ತರ ಅಮೆರಿಕದಲ್ಲಿನ ಎಲ್ಲಾ ನಗರ ನಿವಾಸಿಗಳಲ್ಲಿ ಸರಿಸುಮಾರಾಗಿ ಅರ್ಧದಷ್ಟು ಮಂದಿ, ಅಸ್ವೀಕಾರಯೋಗ್ಯವಾಗಿ ಇಂಗಾಲದ ಮಾನಾಕ್ಸೈಡ್ನ ಅಧಿಕ ಮಟ್ಟಗಳಿಗೆ ಒಡ್ಡಲ್ಪಡುತ್ತಾರೆ.”
ಕೆಲವು ಸ್ಥಳಗಳಲ್ಲಿ ಮೋಟಾರುಗಾಡಿಗಳ ಹೊರಸೂಸುವಿಕೆಗಳು, ವಾರ್ಷಿಕವಾಗಿ ಪರಿಸರೀಯ ಹಾನಿಯಲ್ಲಿ ನೂರಾರು ಕೋಟಿಗಳಷ್ಟು ಡಾಲರುಗಳ ವೆಚ್ಚವನ್ನುಂಟುಮಾಡುವುದರೊಂದಿಗೆ, ಅನೇಕ ಜನರನ್ನು ಕೊಲ್ಲುತ್ತವೆ ಎಂದು ಅಂದಾಜುಮಾಡಲಾಗಿದೆ. ಕಾರ್ನಿಂದ ಉಂಟುಮಾಡಲ್ಪಟ್ಟ ವಾಯು ಮಾಲಿನ್ಯದಿಂದಾಗಿ, ವಾರ್ಷಿಕವಾಗಿ ಬ್ರಿಟನಿನ ಸುಮಾರು 11,000 ನಿವಾಸಿಗಳು ಸಾಯುತ್ತಾರೆಂದು, ಜುಲೈ, 1995ರಲ್ಲಿನ ಟೆಲಿವಿಷನ್ ವಾರ್ತಾ ವರದಿಯೊಂದು ಹೇಳಿತು.
1995ರಲ್ಲಿ, ವಿಶ್ವಸಂಸ್ಥೆಯ ವಾತಾವರಣ ಸಮ್ಮೇಳನವು ಬರ್ಲಿನ್ನಲ್ಲಿ ನಡೆಸಲ್ಪಟ್ಟಿತು. ಯಾವುದೋ ಒಂದು ವಿಷಯವನ್ನು ಮಾಡುವ ಅಗತ್ಯವಿದೆ ಎಂದು 116 ದೇಶಗಳಿಂದ ಬಂದ ಪ್ರತಿನಿಧಿಗಳು ಒಪ್ಪಿಕೊಂಡರು. ಆದರೆ ಅನೇಕರಿಗೆ ನಿರಾಶೆಯಾಗುವಂತೆ, ನಿರ್ದಿಷ್ಟ ಗುರಿಗಳನ್ನು ದತ್ತುಸ್ವೀಕರಿಸುವ ಹಾಗೂ ನಿಶ್ಚಿತ ನಿಯಮಗಳನ್ನು ಸ್ಥಾಪಿಸುವ ಅಥವಾ ಕರಾರುವಾಕಾದ ಕಾರ್ಯಕ್ರಮಗಳನ್ನು ರೇಖಿಸುವ ಕೆಲಸವು ಮುಂದೂಡಲ್ಪಟ್ಟಿತು.
ಹಿಂದೆ 1990ರಲ್ಲಿ, 5000 ಡೇಸ್ ಟು ಸೇವ್ ದ ಪ್ಲ್ಯಾನೆಟ್ ಎಂಬ ಪುಸ್ತಕವು ಹೇಳಿದ ವಿಷಯಗಳ ಪರಿಗಣನೆಯಲ್ಲಿ, ಈ ಪ್ರಗತಿಯ ಕೊರತೆಯು ಬಹುಶಃ ನಿರೀಕ್ಷಿಸಲ್ಪಟ್ಟಿತ್ತು. ಅದು ಸೂಚಿಸಿದ್ದೇನಂದರೆ, “ಪರಿಸರೀಯ ವಿನಾಶವನ್ನು ಎದುರಿಸಲಿಕ್ಕಾಗಿರುವ ಸೂಕ್ತಕ್ರಮಗಳು, ಆರ್ಥಿಕ ಪರಿಸ್ಥಿತಿಯ ಕಾರ್ಯಾವಳಿಗಳಲ್ಲಿ ಹಸ್ತಕ್ಷೇಪಮಾಡದಿರುವುದಾದರೆ ಮಾತ್ರ ಅವುಗಳು ಸ್ವೀಕಾರಯೋಗ್ಯವಾಗಿವೆ, ಎಂದು ಆಧುನಿಕ ಕೈಗಾರಿಕೆಯ ಸಮಾಜದಲ್ಲಿನ ರಾಜಕೀಯ ಹಾಗೂ ಆರ್ಥಿಕ ಬಲದ ಸ್ವರೂಪವು ನಿರ್ಧರಿಸುತ್ತದೆ.”
ಹೀಗೆ, “ವಾಯುಮಂಡಲದಲ್ಲಿ ಇಂಗಾಲದ ಡೈಆಕ್ಸೈಡ್ ಮತ್ತು ಇತರ ಸಸ್ಯಾಗಾರದ ಅನಿಲಗಳ ವೃದ್ಧಿಯು, ಕ್ರಮೇಣವಾಗಿ ಭೂಗೋಳವನ್ನು ಕಾವುಗೊಳಿಸುವ ಸಂಭವನೀಯತೆಯಿದೆ. ಅನೇಕ ವಿಜ್ಞಾನಿಗಳಿಗನುಸಾರವಾಗಿ, ಫಲಿತಾಂಶವು ಬರಗಳು, ಮಂಜುಗಡ್ಡೆಯ ಕರಗುವಿಕೆಗಳು, ಸಮುದ್ರ ಮಟ್ಟಗಳ ಏರುವಿಕೆ, ತೀರಪ್ರದೇಶದ ಜಲಪ್ರವಾಹ, ಹೆಚ್ಚು ಪ್ರಚಂಡವಾದ ಬಿರುಗಾಳಿಗಳು ಮತ್ತು ವಾತಾವರಣಸಂಬಂಧವಾದ ಇತರ ವಿಪತ್ತುಗಳಾಗಿರಸಾಧ್ಯವಿದೆ” ಎಂದು ಟೈಮ್ ಪತ್ರಿಕೆಯು ಇತ್ತೀಚೆಗೆ ಈ ಕುರಿತಾಗಿ ಎಚ್ಚರಿಕೆ ನೀಡಿತು.
ಮಾಲಿನ್ಯದ ಸಮಸ್ಯೆಯ ಗಂಭೀರತೆಯು, ಯಾವುದೋ ಒಂದು ವಿಷಯವನ್ನು ಮಾಡಲೇಬೇಕೆಂದು ತಗಾದೆಮಾಡುತ್ತದೆ. ಆದರೆ ಮಾಡುವುದೇನು?