ಸ್ವೀಕಾರಯೋಗ್ಯವಾದ ಪರಿಹಾರಗಳ ಅನ್ವೇಷಣೆಯಲ್ಲಿ
ಮಾಲಿನ್ಯವನ್ನು ಉಂಟುಮಾಡುವ ವಸ್ತುಗಳು ಮೋಟಾರು ವಾಹನಗಳು ಮಾತ್ರವೇ ಆಗಿರುವುದಿಲ್ಲ. ಖಾಸಗಿ ಮನೆವಾರ್ತೆಗಳು, ಕೈಗಾರಿಕೆಯ ಸ್ಥಾವರಗಳು, ಮತ್ತು ಶಕ್ತಿ ಸ್ಥಾವರಗಳು ಸಹ ಈ ಜವಾಬ್ದಾರಿಯನ್ನು ಹಂಚಿಕೊಳ್ಳಬೇಕು. ಆದರೂ, ಭೌಗೋಲಿಕ ಮಾಲಿನ್ಯವನ್ನು ಉಂಟುಮಾಡುವುದರಲ್ಲಿ ಮೋಟಾರು ವಾಹನಗಳು ವಹಿಸುವ ಪಾತ್ರವು ಪರಿಗಣನಾರ್ಹವಾದದ್ದಾಗಿದೆ.
ವಾಸ್ತವವಾಗಿ, 5000 ಡೇಸ್ ಟು ಸೇವ್ ದ ಪ್ಲ್ಯಾನೆಟ್ ಎಂಬ ಪುಸ್ತಕವು ಹೀಗೆ ಹೇಳುವ ಸಾಹಸಮಾಡುತ್ತದೆ: “ಈ ಎಲ್ಲಾ ವೆಚ್ಚಗಳ ಸಮರ್ಥನಾ ವಿಶ್ಲೇಷಣವನ್ನು, ವಿಶೇಷವಾಗಿ ಇಂಗಾಲದ ಡೈಆಕ್ಸೈಡನ್ನು ಹೊರಸೂಸುತ್ತಿರುವ ಮೂಲಕ ನಮ್ಮ ವಾತಾವರಣಕ್ಕೆ ತಗಲುವ ವೆಚ್ಚವನ್ನು ಒದಗಿಸಬೇಕಾಗಿರುವಲ್ಲಿ, ಆಗ ಬಹುಶಃ ಕಾರುಗಳು ಎಂದಿಗೂ ನಿರ್ಮಿಸಲ್ಪಡುವುದಿಲ್ಲ.” ಆದಾಗ್ಯೂ ಅದು ಒಪ್ಪಿಕೊಳ್ಳುವುದು: “ಆದರೆ ಅದು ಕಾರ್ ತಯಾರಕರಾಗಲಿ, ರಸ್ತೆ ನಿರ್ಮಾಣ ಉದ್ಯಮವಾಗಲಿ, ಸರಕಾರದ ನಿಯೋಗಗಳಾಗಲಿ, ಯಾರ ಜೀವಿತಗಳು ಖಾಸಗಿ ವಾಹನಸೌಕರ್ಯದ ಮೇಲೆ ಅತ್ಯಧಿಕವಾಗಿ ಅವಲಂಬಿಸುತ್ತವೆಯೋ ಆ ಸರ್ವಸಾಮಾನ್ಯ ಸಾರ್ವಜನಿಕರಾಗಲಿ, ಅವಲೋಕಿಸಲು ಸಿದ್ಧರಿರದ ಒಂದು ಆಯ್ಕೆಯಾಗಿದೆಯೆಂಬುದು ನಿಶ್ಚಯ.”
ಮನುಷ್ಯನನ್ನು ಚಂದ್ರನಲ್ಲಿಗೆ ಕಳುಹಿಸಿದಂತಹ ತಂತ್ರಜ್ಞಾನವು, ಮಾಲಿನ್ಯ-ಮುಕ್ತ ಕಾರನ್ನು ಉತ್ಪಾದಿಸಲು ಶಕ್ತವಾಗಿರಬಾರದೊ? ಮಾಡುವುದು ಎಂದಿಗೂ ಹೇಳುವಷ್ಟು ಸುಲಭವಾಗಿರುವುದಿಲ್ಲ, ಆದುದರಿಂದ ಮಾಲಿನ್ಯ-ಮುಕ್ತ ಕಾರನ್ನು ವಿಕಸಿಸುವುದಕ್ಕಿರುವ ವಿಘ್ನಗಳನ್ನು ಜಯಿಸುವ ವರೆಗೆ, ಸ್ವೀಕಾರಯೋಗ್ಯವಾದ ಇತರ ಪರಿಹಾರಗಳಿಗಾಗಿರುವ ಅನ್ವೇಷಣೆಯು ಮುಂದುವರಿಯುತ್ತದೆ.
ಮಲಿನಕಾರಕಗಳನ್ನು ಕಡಿತಗೊಳಿಸುವುದು
1960ಗಳಲ್ಲಿ ಅಮೆರಿಕವು, ಮಲಿನಕಾರಕಗಳ ಹೊರಸೂಸುವಿಕೆಯನ್ನು ನಿರ್ಬಂಧಿಸಲಿಕ್ಕಾಗಿ, ಮೋಟಾರು ವಾಹನಗಳ ಮೇಲಿನ ನಿಯಂತ್ರಣಗಳ ಅಳವಡಿಸುವಿಕೆಯನ್ನು ಅಗತ್ಯಪಡಿಸುವ ಶಾಸನವನ್ನು ವಿಧಿಸಿತು. ಅಂದಿನಿಂದ ಇತರ ದೇಶಗಳು ಹಾಗೂ ಸರಕಾರಗಳು ಅದನ್ನೇ ಮಾಡಿವೆ.
ಸೀಸರಹಿತ ಪೆಟ್ರೋಲಿನ ಉಪಯೋಗವನ್ನು ಅಗತ್ಯಪಡಿಸುವ ರಾಸಾಯನಿಕ ಪರಿವರ್ತಕಗಳು, ಹಾನಿಕರವಾದ ಮಲಿನಕಾರಕಗಳನ್ನು ಶೋಧಿಸಿ ಹೊರತೆಗೆಯಲಿಕ್ಕಾಗಿ ಈಗ ವ್ಯಾಪಕವಾಗಿ ಉಪಯೋಗಿಸಲ್ಪಡುತ್ತಿವೆ. 1976 ಮತ್ತು 1980ರ ನಡುವೆ, ಬಹುದೊಡ್ಡ ಸಂಖ್ಯೆಗಳಲ್ಲಿ ಮೋಟರಿಗರು ಸೀಸರಹಿತ ಅನಿಲವನ್ನು ಉಪಯೋಗಿಸಲಾರಂಭಿಸಿದ ಬಳಿಕ, ಅಮೆರಿಕದವರ ರಕ್ತದಲ್ಲಿನ ಸೀಸದ ಮಟ್ಟವು ಮೂರನೇ ಒಂದು ಭಾಗಕ್ಕೆ ಇಳಿಯಿತು. ಮತ್ತು ಹಾಗೆ ಇಳಿತಗೊಂಡದ್ದು ಒಳಿತಾಗಿತ್ತು, ಏಕೆಂದರೆ ಸೀಸದ ವಿಪರೀತ ಪ್ರಮಾಣವು ನರವ್ಯೂಹವನ್ನು ಬಾಧಿಸಿ, ಕಲಿಯುವ ಸಾಮರ್ಥ್ಯವನ್ನು ಕುಂಠಿತಗೊಳಿಸಬಲ್ಲದು. ಆದರೂ, ವಿಷಾದಕರವಾಗಿ, ವಿಕಾಸಹೊಂದಿರುವ ಲೋಕದ ಅನೇಕ ದೇಶಗಳಲ್ಲಿ ಸೀಸದ ಮಟ್ಟಗಳಲ್ಲಿನ ಇಳಿತವು ಸಂಭವಿಸಿರುವಾಗ, ಕಡಿಮೆ ವಿಕಾಸಹೊಂದಿರುವ ದೇಶಗಳಲ್ಲಿ ಇದು ಸಂಭವಿಸಿಲ್ಲ.
ರಾಸಾಯನಿಕ ಪರಿವರ್ತಕಗಳ ಸಾಫಲ್ಯವು ಪ್ರತಿಫಲದಾಯಕವಾಗಿದೆಯಾದರೂ, ಅವುಗಳ ಉಪಯೋಗವು ವಿವಾದಾಸ್ಪದವಾಗಿ ಉಳಿಯುತ್ತದೆ. ಇನ್ನುಮುಂದೆ ಸೀಸವು ಸೇರಿಸಲ್ಪಡದಿರುವುದರಿಂದ ಫಲಿಸಿದ ಕಾರ್ಯನಿರ್ವಹಣೆಯ ನಷ್ಟದ ಕಾರಣದಿಂದ, ಪೆಟ್ರೋಲಿನ ಹೈಡ್ರೋಕಾರ್ಬನ್ ಸಂಯೋಜನೆಯು ಬದಲಾಯಿಸಲ್ಪಟ್ಟಿತು. ಇದು ಯಾವುದರ ಹೊರಸೂಸುವಿಕೆಯ ಮಟ್ಟಗಳನ್ನು ರಾಸಾಯನಿಕ ಪರಿವರ್ತಕಗಳು ಕಡಿಮೆಮಾಡುವುದಿಲ್ಲವೋ, ಆ ಬೆನ್ಸೀನ್ ಮತ್ತು ಟಾಲೀನ್ನಂತಹ ಕ್ಯಾನ್ಸರ್ ಬರಿಸುವ ಇತರ ಪದಾರ್ಥಗಳ ಹೊರಸೂಸುವಿಕೆಗಳ ಹೆಚ್ಚಳದಲ್ಲಿ ಫಲಿಸಿದೆ.
ಇದಲ್ಲದೆ, ರಾಸಾಯನಿಕ ಪರಿವರ್ತಕಗಳು ಪ್ಲ್ಯಾಟಿನಮ್ನ ಉಪಯೋಗವನ್ನು ಅಗತ್ಯಪಡಿಸುತ್ತವೆ. ಬ್ರಿಟನ್ನ ಇಂಪೀರಿಯಲ್ ಕಾಲೇಜಿನ ಪ್ರೊಫೆಸರರಾದ ಇಯನ್ ಟಾರ್ನ್ಟನ್ಗನುಸಾರ, ಅವುಗಳ ಅಡ್ಡತೊಡಕುಗಳಲ್ಲಿ ಒಂದು, ರಸ್ತೆಯಬದಿಯ ಧೂಳಿನಲ್ಲಿ ಶೇಖರವಾಗುವ ಪ್ಲ್ಯಾಟಿನಮ್ನಲ್ಲಿನ ಹೆಚ್ಚಳವೇ. “ಆಹಾರ ಸರಪಣಿಯನ್ನು ಪ್ರವೇಶಿಸಸಾಧ್ಯವಿರುವ ಪ್ಲ್ಯಾಟಿನಮ್ನ ದ್ರಾವ್ಯ ರೂಪಗಳ” ಸಂಭವನೀಯತೆಯ ಕುರಿತಾಗಿ ಅವರು ಎಚ್ಚರಿಕೆ ನೀಡಿದರು.
“ಉತ್ತರ ಅಮೆರಿಕ, ಜಪಾನ್, ದಕ್ಷಿಣ ಕೊರಿಯ ಮತ್ತು ಯೂರೋಪಿನ ಅನೇಕ ದೇಶಗಳಲ್ಲಿ ರಾಸಾಯನಿಕ ಪರಿವರ್ತಕಗಳ” ಯಾವುದೇ ಸಾಫಲ್ಯದ ಹೊರತಾಗಿ, “ಲೋಕದಾದ್ಯಂತವಾಗಿ ಇರುವ ಕಾರುಗಳ ಸಂಖ್ಯೆಗಳಲ್ಲಿನ ಅಧಿಕ ಪ್ರಮಾಣದ ಬೆಳವಣಿಗೆಯು, ವಾಯುವಿನ ಗುಣಮಟ್ಟಕ್ಕಾಗಿರುವ ಪ್ರಯೋಜನಗಳನ್ನು ಸಂಪೂರ್ಣವಾಗಿ ತೊಡೆದುಹಾಕಿದೆ” ಎಂದು 5000 ಡೇಸ್ ಟು ಸೇವ್ ದ ಪ್ಲ್ಯಾನೆಟ್ ಎಂಬ ಪುಸ್ತಕವು ಯಥಾವತ್ತಾಗಿ ಒಪ್ಪಿಕೊಳ್ಳುತ್ತದೆ.
ನಿಧಾನಗೊಳಿಸುವುದು
ಕಾರಿನ ಹೊರಸೂಸುವಿಕೆಗಳನ್ನು ಕಡಿಮೆಮಾಡುವ ಮತ್ತೊಂದು ವಿಧಾನವು, ಬಹಳ ನಿಧಾನವಾಗಿ ವಾಹನವನ್ನು ನಡೆಸುವುದಾಗಿದೆ. ಆದರೆ ಅಮೆರಿಕದಲ್ಲಿ, ಕೆಲವು ರಾಜ್ಯಗಳು ಇತ್ತೀಚೆಗೆ ವೇಗದ ಪರಿಮಿತಿಯನ್ನು ಹೆಚ್ಚಿಸಿವೆ. ಜರ್ಮನಿಯಲ್ಲಿ ನಿರ್ಬಂಧಗಳನ್ನು ಹೇರುವುದು ಜನಪ್ರಿಯವಾಗಿರುವುದಿಲ್ಲ. ಭಾರಿ ಸಂಖ್ಯೆಯ ವಾಹನಚಾಲಕರು ವಿರೋಧಿಸುವವರಾಗಿರುವಂತೆಯೇ, ಯಾರ ಮಾರಾಟದ ಚಳಕವು ಒಂದು ತಾಸಿಗೆ 150 ಕಿಲೊಮೀಟರ್ಗಳಿಗಿಂತಲೂ ಹೆಚ್ಚಿನ ವೇಗಗಳಲ್ಲಿ ಪ್ರಯಾಣಿಸುವುದನ್ನು ಸುಲಭವಾಗಿಯೇ ಅನುಮತಿಸುವ ಪ್ರಬಲವಾದ ಮೋಟಾರುಗಳನ್ನು ನಿರ್ಮಿಸುವ ಸಾಮರ್ಥ್ಯವಾಗಿರುತ್ತದೋ, ಆ ಕಾರ್ ತಯಾರಕರೂ ವಿರೋಧಿಸುವವರಾಗಿದ್ದಾರೆ. ಹಾಗಿದ್ದರೂ, ಈಗ ಹೆಚ್ಚೆಚ್ಚು ಜರ್ಮನರು ವೇಗದ ನಿರ್ಬಂಧಗಳನ್ನು ಅಂಗೀಕರಿಸಲು ಸಿದ್ಧಮನಸ್ಕರಾಗಿರುವಂತೆ ತೋರುತ್ತದೆ—ಕೇವಲ ಪರಿಸರೀಯ ಕಾರಣಗಳಿಗಾಗಿ ಅಲ್ಲ, ಬದಲಾಗಿ ಸುರಕ್ಷೆಯ ಕಾರಣಕ್ಕಾಗಿಯೂ.
ಕೆಲವು ದೇಶಗಳಲ್ಲಿ ಮಾಲಿನ್ಯವು ಅಸ್ವೀಕಾರಯೋಗ್ಯ ಮಟ್ಟಗಳನ್ನು ತಲಪುವಾಗ, ವಾಹನಚಾಲಕರು ನಿಧಾನಗೊಳಿಸುವಂತೆ ಅಥವಾ ವಾಹನ ನಡೆಸುವುದನ್ನೇ ಪೂರ್ತಿಯಾಗಿ ನಿಲ್ಲಿಸುವಂತೆ ಅಗತ್ಯಪಡಿಸಲ್ಪಡುತ್ತಾರೆ. ಓಸೋನ್ ಮಟ್ಟಗಳು ತೀರ ಹೆಚ್ಚಾದಲ್ಲಿ, ವೇಗದ ಪರಿಮಿತಿಗಳ ಒಳಪಡಿಸುವಿಕೆಗೆ 80 ಪ್ರತಿಶತ ಜರ್ಮನರು ಒಪ್ಪಿಕೊಳ್ಳುವರೆಂದು, 1995ರ ಮತಸಂಖ್ಯೆಯೊಂದು ಪ್ರಕಟಪಡಿಸಿತು. ಆ್ಯಥೆನ್ಸ್ ಮತ್ತು ರೋಮನ್ನು ಒಳಗೊಂಡು, ಲೋಕವ್ಯಾಪಕವಾಗಿರುವ ಅನೇಕ ನಗರಗಳು, ನಿರ್ದಿಷ್ಟ ಪರಿಸ್ಥಿತಿಗಳ ಕೆಳಗೆ ವಾಹನಗಳನ್ನು ನಡೆಸುವುದನ್ನು ನಿರ್ಬಂಧಿಸಲು ಈಗಾಗಲೇ ಸೂಕ್ತಕ್ರಮಗಳನ್ನು ಕೈಕೊಂಡಿವೆ. ಇತರ ದೇಶಗಳು ಹಾಗೆ ಮಾಡುವುದನ್ನೇ ಪರಿಗಣಿಸುತ್ತಿವೆ.
ಸೈಕಲ್ಗಳನ್ನು ಉಪಯೋಗಿಸುವುದು
ವಾಹನ ಸಂಚಾರವನ್ನು ಕಡಿಮೆಮಾಡಲಿಕ್ಕಾಗಿ ಕೆಲವು ನಗರಗಳು, ಬಸ್ಸಿನ ಪ್ರಯಾಣಕ್ಕಾಗಿ ರಿಯಾಯಿತಿ ದರಗಳನ್ನು ಜಾರಿಗೆತಂದಿವೆ. ಬೇರೆ ನಗರಗಳು, ತಮ್ಮ ಕಾರುಗಳನ್ನು ಲಭ್ಯವಿರುವ ಕ್ಷೇತ್ರಗಳಲ್ಲಿ ನಿಲ್ಲಿಸಲಿಕ್ಕಾಗಿ ಚಿಕ್ಕ ಸಂಭಾವನೆಯನ್ನು ಸಲ್ಲಿಸುವ ವಾಹನಚಾಲಕರಿಗಾಗಿ ಉಚಿತ ಬಸ್ ಸೌಕರ್ಯವನ್ನು ಒದಗಿಸುತ್ತವೆ. ಇತರ ನಗರಗಳು ಈ ರೀತಿಯ ವಾಹನಸೌಕರ್ಯಗಳನ್ನು ತ್ವರಿತಗೊಳಿಸಲಿಕ್ಕಾಗಿ, ಬಸ್ಸುಗಳು ಹಾಗೂ ಟ್ಯಾಕ್ಸಿಗಳಿಗಾಗಿ ಮಾತ್ರವೇ ಕಿರಿದಾದ ರಸ್ತೆಗಳನ್ನು ಮೀಸಲಾಗಿಟ್ಟಿವೆ.
ಈ ಸಮಸ್ಯೆಯನ್ನು ಎದುರಿಸುವುದರ ನವೀನ ವಿಧಾನವೊಂದು ಇತ್ತೀಚೆಗೆ ದಿ ಯೂರೋಪಿಯನ್ನಲ್ಲಿ ಗಮನಿಸಲ್ಪಟ್ಟಿತು: “1960ಗಳ ಕೊನೆ ಭಾಗದಲ್ಲಿ ನೆದರ್ಲೆಂಡ್ಸ್ನಲ್ಲಿನ ಒಂದು ಕಾರ್ಯಾಚರಣೆಯಿಂದ ಪ್ರೇರಿತರಾಗಿ, ವ್ಯಾವಹಾರಿಕರಾದ ಡೆನ್ಮಾರ್ಕ್ ದೇಶದವರು, ನಾಲ್ಕು ಚಕ್ರಗಳುಳ್ಳ ವಾಹನಗಳಿಗೆ ಬದಲಾಗಿ ದ್ವಿಚಕ್ರ ವಾಹನಗಳನ್ನು ಉಪಯೋಗಿಸುವಂತೆ ಜನರನ್ನು ಒತ್ತಾಯಿಸುತ್ತಾ, ವಾಯು ಮಾಲಿನ್ಯವನ್ನು ಹಾಗೂ ವಾಹನ ಸಂಚಾರದ ನಿಬಿಡತೆಯನ್ನು ಕಡಿಮೆಗೊಳಿಸಲು ಒಂದು ಯೋಜನೆಯನ್ನು ಮುಂದಿಟ್ಟಿದ್ದಾರೆ.” ಕೂಪನ್ಹೆಗನ್ನ ಬೀದಿಗಳುದ್ದಕ್ಕೂ ಬೇರೆ ಬೇರೆ ಸ್ಥಳಗಳಲ್ಲಿ ಸೈಕಲ್ಗಳು ಇಡಲ್ಪಟ್ಟಿವೆ. ಒಂದು ಸಲಕರಣೆಯೊಳಗೆ ನಾಣ್ಯವೊಂದನ್ನು ಹಾಕುವುದು, ಒಂದು ಸೈಕಲನ್ನು ಉಪಯೋಗಿಸುವುದಕ್ಕಾಗಿ ಬಿಟ್ಟುಕೊಡುತ್ತದೆ. ತದನಂತರ ಅನುಕೂಲಕರವಾದ ಸ್ಥಳವೊಂದಕ್ಕೆ ಸೈಕಲು ಹಿಂದಿರುಗಿಸಲ್ಪಟ್ಟಾಗ, ಠೇವಣಿಮಾಡಲ್ಪಟ್ಟ ಹಣವನ್ನು ಪುನಃ ಹಿಂದಿರುಗಿಪಡೆಯಸಾಧ್ಯವಿದೆ. ಈ ಯೋಜನೆಯು ಪ್ರಾಯೋಗಿಕವಾದದ್ದಾಗಿ ರುಜುವಾಗುವುದೋ ಅಥವಾ ಜನಪ್ರಿಯವಾಗುವುದೋ ಎಂಬುದನ್ನು ಕಾಲವೇ ತಿಳಿಯಪಡಿಸುವುದು.
ಕಾರ್ಗಳಿಗೆ ಬದಲಾಗಿ ಸೈಕಲ್ಗಳ ಉಪಯೋಗವನ್ನು ಉತ್ತೇಜಿಸಲಿಕ್ಕಾಗಿ, ಜರ್ಮನಿನ ಕೆಲವು ನಗರಗಳು ಸೈಕಲ್ಸವಾರಿಮಾಡುವವರಿಗೆ, ಮೋಟಾರುಗಾಡಿಗಳ ವಿರುದ್ಧ ದಿಕ್ಕಿನಿಂದ ವನ್-ವೇ ಬೀದಿಗಳ ಮೂಲಕ ಹೋಗುವಂತೆ ಅನುಮತಿಸುತ್ತವೆ! ನಗರದಲ್ಲಿನ ಎಲ್ಲಾ ಸಂಚಾರಗಳಲ್ಲಿ ಸುಮಾರು ಮೂರನೇ ಒಂದು ಭಾಗದಷ್ಟು ಸಂಚಾರಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಎಲ್ಲಾ ಸಂಚಾರಗಳಲ್ಲಿ ಮೂರನೇ ಒಂದು ಭಾಗಕ್ಕಿಂತ ಹೆಚ್ಚಿನ ಸಂಚಾರಗಳು, ಮೂರು ಕಿಲೊಮೀಟರ್ಗಳಿಗಿಂತಲೂ ಬಹಳ ಕಡಿಮೆಯಾಗಿರುವುದರಿಂದ, ಅನೇಕ ನಾಗರಿಕರು ಈ ಚಿಕ್ಕ ಸಂಚಾರಗಳನ್ನು ಸುಲಭವಾಗಿಯೇ ನಡೆಯುವ ಮೂಲಕ ಇಲ್ಲವೇ ಸೈಕಲಿನ ಮೂಲಕ ಸಂಚರಿಸಬಲ್ಲರು. ಇದು ಮಾಲಿನ್ಯವನ್ನು ಕಡಿಮೆಗೊಳಿಸಲು ಸಹಾಯ ಮಾಡುವುದು; ಅದೇ ಸಮಯದಲ್ಲಿ ಸೈಕಲ್ಸವಾರಿಮಾಡುವವರು ಅಗತ್ಯವಿರುವ ವ್ಯಾಯಾಮವನ್ನು ಪಡೆದುಕೊಳ್ಳುತ್ತಿರುವರು.
ಪುನರ್ವಿನ್ಯಾಸಿಸುವುದು
ಮಾಲಿನ್ಯ-ಮುಕ್ತ ಮೋಟಾರುಗಾಡಿಗಳನ್ನು ವಿನ್ಯಾಸಿಸುವ ಕೆಲಸವು ಮುಂದುವರಿಯುತ್ತಿದೆ. ಬ್ಯಾಟರಿಗಳಿಂದ ನಡೆಯುವ ಇಲೆಕ್ಟ್ರಿಕ್ ಕಾರುಗಳು ಉತ್ಪಾದಿಸಲ್ಪಟ್ಟಿವೆ, ಆದರೆ ವೇಗ ಹಾಗೂ ಕಾರ್ಯನಡಿಸುವ ಸಮಯದ ವಿಷಯದಲ್ಲಿ ಅವು ಪರಿಮಿತಗೊಳಿಸಲ್ಪಟ್ಟಿವೆ. ಸೌರಶಕ್ತಿಚಾಲಿತ ಕಾರುಗಳ ವಿಷಯದಲ್ಲಿಯೂ ಇದು ನಿಜ.
ವಿಚಾರಣೆಮಾಡಲ್ಪಡುತ್ತಿರುವ ಇನ್ನೊಂದು ಸಂಭವನೀಯತೆಯು, ಹೈಡ್ರೊಜನ್ (ಜಲಜನಕ) ಅನ್ನು ಇಂಧನವಾಗಿ ಉಪಯೋಗಿಸುವುದಾಗಿದೆ. ಜಲಜನಕವು ಬಹುಮಟ್ಟಿಗೆ ಮಲಿನಕಾರಕಗಳ ಯಾವ ಹೊರಸೂಸುವಿಕೆಯಿಲ್ಲದೇ ದಹಿಸುತ್ತದಾದರೂ, ಅದರ ವೆಚ್ಚವು ನಿಷೇಧಾತ್ಮಕವಾಗಿದೆ.
ಮೋಟಾರುಗಾಡಿಯನ್ನು ಮತ್ತೆ ಕಂಡುಹಿಡಿಯುವುದಕ್ಕಾಗಿರುವ ಒಂದು ಅಗತ್ಯವನ್ನು ಗುರುತಿಸುತ್ತಾ, ಭವಿಷ್ಯತ್ತಿನ ಕಾರನ್ನು ವಿನ್ಯಾಸಿಸುವುದರಲ್ಲಿ, ಸರಕಾರ ಹಾಗೂ ಅಮೆರಿಕದ ಮೋಟಾರುಗಾಡಿಗಳ ಕೈಗಾರಿಕೆಯು ಸಹಕರಿಸುವುದೆಂದು, 1993ರಲ್ಲಿ ಅಮೆರಿಕದ ರಾಷ್ಟ್ರಾಧ್ಯಕ್ಷರಾದ ಕ್ಲಿಂಟ್ನ್ ಪ್ರಕಟಿಸಿದರು. ಅವರು ಹೇಳಿದ್ದು: “ನಮ್ಮ ರಾಷ್ಟ್ರದ ಯಾವುದೇ ತಾಂತ್ರಿಕ ಸಾಹಸವು ಎಂದೂ ಪ್ರಯತ್ನಮಾಡಿರದಷ್ಟು ಮಹತ್ವಾಕಾಂಕ್ಷೆಯುಳ್ಳ ತಾಂತ್ರಿಕ ಸಾಹಸವನ್ನು ಉಡಾಯಿಸಲು ನಾವು ಪ್ರಯತ್ನಿಸಲಿದ್ದೇವೆ.” ಅವರು ಯಾವುದರ ಕುರಿತಾಗಿ ಮಾತಾಡಿದರೋ ಆ, “21ನೆಯ ಶತಮಾನಕ್ಕೆ ಪರಿಪೂರ್ಣವಾಗಿ ಕಾರ್ಯಸಾಧಕವಾದ ಹಾಗೂ ಜೀವಿಪರಿಸ್ಥಿತಿಶಾಸ್ತ್ರಕ್ಕನುಗುಣವಾಗಿ ಅನುಕೂಲಕರವಾದ ವಾಹನವನ್ನು ನಿರ್ಮಿಸುವುದು” ಸಾಧ್ಯವೊ ಇಲ್ಲವೊ ಎಂಬುದು ಇನ್ನೂ ಅನಿಶ್ಚಿತವಾಗಿದೆ. ಯೋಜನೆಗಳು, ಒಂದು ದಶಕದೊಳಗೆ ಮೂಲರೂಪದ ವಾಹನವೊಂದನ್ನು ಉತ್ಪಾದಿಸುವ ಉದ್ದೇಶವನ್ನು ಹೊಂದಿವೆಯಾದರೂ, ವಿಪರೀತ ವೆಚ್ಚದಲ್ಲಿ.
ಕೆಲವು ಕಾರ್ ತಯಾರಕರು, ಪೆಟ್ರೋಲ್ ಮತ್ತು ವಿದ್ಯುಚ್ಛಕ್ತಿಯ ಸಂಯೋಜನೆಯಿಂದ ಕಾರ್ಯನಡಿಸುವ ಕಾರ್ ಮಾದರಿಗಳನ್ನು ತಯಾರಿಸುವುದನ್ನು ಮುಂದುವರಿಸುತ್ತಿದ್ದಾರೆ. ಈಗಾಗಲೇ ಜರ್ಮನಿಯಲ್ಲಿ, ಒಂದು ತಾಸಿಗೆ ನಿಂತಿರುವ ಸ್ಥಳದಿಂದ 100 ಕಿಲೊಮೀಟರ್ಗಳ ವರೆಗೆ, 180ರ ಅತ್ಯಂತ ವೇಗಕ್ಕೆ ಪ್ರಗತಿಮಾಡುತ್ತಾ, ಒಂಬತ್ತು ಸೆಕೆಂಡುಗಳೊಳಗೆ ವೇಗೋತ್ಕರ್ಷಿಸುವ ಸಾಮರ್ಥ್ಯವನ್ನು ಹೊಂದಿರುವ ಇಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರ್, ಅತ್ಯಧಿಕ ಬೆಲೆಯಲ್ಲಿ ದೊರೆಯುತ್ತಿದೆ. ಆದರೆ 200 ಕಿಲೊಮೀಟರ್ಗಳ ಬಳಿಕ, ಅದರ ಬ್ಯಾಟರಿಗಳ ದಾಸ್ತಾನು ಮುಗಿದುಹೋಗಿ, ಅವುಗಳನ್ನು ಪುನಃ ಚಾರ್ಜ್ಮಾಡುವ ವರೆಗೆ, ಕಡಿಮೆಪಕ್ಷ ಮೂರು ತಾಸುಗಳ ತನಕ ಅದು ನಿಂತುಹೋಗುತ್ತದೆ. ಸಂಶೋಧನೆಯು ಮುಂದುವರಿಯುತ್ತದೆ, ಮತ್ತು ಇನ್ನೂ ಹೆಚ್ಚಿನ ಪ್ರಗತಿಯು ನಿರೀಕ್ಷಿಸಲ್ಪಟ್ಟಿದೆ.
ಸಮಸ್ಯೆಯ ಕೇವಲ ಒಂದು ಭಾಗ
ವಿಷಕರವಾದ ಹೊರಸೂಸುವಿಕೆಗಳನ್ನು ಹೇಗೆ ತೊಲಗಿಸುವುದೆಂಬುದು, ಸಮಸ್ಯೆಯ ಕೇವಲ ಒಂದು ಭಾಗವಾಗಿದೆ. ಕಾರುಗಳು ಶಬ್ದ ಮಾಲಿನ್ಯವನ್ನು ಸಹ ಉಂಟುಮಾಡಬಲ್ಲವು; ಇದು ಕಿಕ್ಕಿರಿದ ರಸ್ತೆಯೊಂದರ ಸಮೀಪದಲ್ಲಿ ವಾಸಿಸುತ್ತಿರುವ ಯಾರಿಗಾದರೂ ಚೆನ್ನಾಗಿ ತಿಳಿದಿರುವ ಒಂದು ವಿಷಯವಾಗಿದೆ. ಸತತವಾದ ವಾಹನ ಸಂಚಾರದ ಶಬ್ದವು ಆರೋಗ್ಯವನ್ನು ಪ್ರತಿಕೂಲವಾಗಿ ಬಾಧಿಸಸಾಧ್ಯವಿರುವುದರಿಂದ, ಇದು ಕೂಡ ಪರಿಹರಿಸುವ ಅಗತ್ಯವಿರುವ ಸಮಸ್ಯೆಯ ಒಂದು ಪ್ರಾಥಮಿಕ ಭಾಗವಾಗಿದೆ.
ನೈಸರ್ಗಿಕ ಸೌಂದರ್ಯವುಳ್ಳಂತಹ ಅನೇಕ ಗ್ರಾಮಪ್ರದೇಶಗಳು, ಅಂದಗೆಟ್ಟ ವ್ಯಾಪಾರ ಸ್ಥಳಗಳು ಹಾಗೂ ಹೆದ್ದಾರಿಗಳ ಅಂಚಿನಲ್ಲಿರುವ ಜಾಹೀರಾತು ಹಲಗೆಗಳ ಜೊತೆಗೆ, ಮೈಲಿಗಳುದ್ದಕ್ಕೂ ಇರುವ ವಿಕಾರವಾದ ಹೆದ್ದಾರಿಗಳಿಂದ ಮುಬ್ಬುಗವಿಸಲ್ಪಟ್ಟಿವೆಯೆಂದು ನಿಸರ್ಗ ಪ್ರಿಯರು ಸಹ ಸೂಚಿಸುವರು. ಆದರೆ ಕಾರುಗಳ ಸಂಖ್ಯೆಯು ಹೆಚ್ಚಿದಂತೆ, ಹೆಚ್ಚು ರಸ್ತೆಗಳಿಗಾಗಿರುವ ಅಗತ್ಯವೂ ಹೆಚ್ಚುತ್ತದೆ.
ತಮ್ಮ ಒಡೆಯರ ಸೇವೆಯಲ್ಲಿ ವರ್ಷಗಟ್ಟಲೆ ಮಾಲಿನ್ಯವನ್ನುಂಟುಮಾಡಿದ ಬಳಿಕ, ಕೆಲವು ಮೋಟಾರುಗಾಡಿಗಳು, “ಮರಣದ ಬಳಿಕ”ವೂ ಮಾಲಿನ್ಯವನ್ನುಂಟುಮಾಡುವ ರೀತಿಗಳನ್ನು ಮುಂದುವರಿಸುತ್ತವೆ. ಜನರಿಂದ ತೊರೆಯಲ್ಪಟ್ಟ ಕಾರುಗಳು, ಕಣ್ಣಿಗೆ ಅಸಹ್ಯವಾದ ವಸ್ತುಗಳಾಗಿ ಮಾತ್ರವೇ ಇರುವುದರಿಂದ, ಅವುಗಳು ಅನುಚಿತವಾಗಿ ಗ್ರಾಮಪ್ರದೇಶಗಳನ್ನು ಅಸ್ತವ್ಯಸ್ತಗೊಳಿಸುವುದನ್ನು ನಿಲ್ಲಿಸಲಿಕ್ಕಾಗಿ, ಕೆಲವು ಸ್ಥಳಗಳಲ್ಲಿ ಶಾಸನವನ್ನು ವಿಧಿಸಬೇಕಾದಂತಹ ಒಂದು ಸಮಸ್ಯೆಯಾಗಿ ಪರಿಣಮಿಸಿವೆ. ಪುನರಾವರ್ತಿಸಲು ಸುಲಭವಾಗಿರುವ ವಸ್ತುಗಳಿಂದ ಮಾಡಲ್ಪಟ್ಟಿರುವ ಆದರ್ಶಪ್ರಾಯವಾದ ಮೋಟಾರುಗಾಡಿಯು ಎಂದಾದರೂ ನಿರ್ಮಿಸಲ್ಪಡುವುದೋ? ಅಂತಹ ಒಂದು ವಾಹನವು ಎಲ್ಲಿಯೂ ದೃಷ್ಟಿಗೋಚರವಾಗಿಲ್ಲ.
“ಅಧಿಕಾಂಶ ಜರ್ಮನರು ಪರಿಸರದ ಕುರಿತಾಗಿ ಬಹಳ ಚಿಂತಿತರಾಗಿರುವುದಾದರೂ, ಕೆಲವರು ಮಾತ್ರ ಅದಕ್ಕನುಸಾರವಾಗಿ ಕ್ರಿಯೆಗೈಯುತ್ತಾರೆ” ಎಂದು ಇತ್ತೀಚೆಗಿನ ವಾರ್ತಾಪತ್ರವೊಂದು ಗಮನಿಸುತ್ತದೆ. ಸರಕಾರಿ ಅಧಿಕಾರಿಯೊಬ್ಬನು ಹೀಗೆ ಹೇಳುತ್ತಿರುವುದಾಗಿ ಉದ್ಧರಿಸಲ್ಪಟ್ಟಿದೆ: “ಯಾರೂ ತನ್ನ ಕುರಿತಾಗಿ ತಪ್ಪಿತಸ್ಥನೆಂದು ಭಾವಿಸಿಕೊಳ್ಳುವುದಿಲ್ಲ, ಅಥವಾ ಹೊಣೆಗಾರನಾಗಿ ಹಿಡಿಯಲ್ಪಡಲು ಯಾರೊಬ್ಬನೂ ಇಷ್ಟಪಡುತ್ತಿಲ್ಲ.” ಹೌದು, “ಸ್ವತಃ ತಮ್ಮನ್ನು ಪ್ರೀತಿಸಿಕೊಳ್ಳುವವರು” ಮತ್ತು “ಯಾವ ಕರಾರಿಗೂ ಒಪ್ಪದವರು” ಆಗಿರುವ ಜನರಿಂದ ನಿರ್ದೇಶಿಸಲ್ಪಟ್ಟಿರುವ ಲೋಕವೊಂದರಲ್ಲಿ, ಸಮಸ್ಯೆಗಳು ಪರಿಹರಿಸಲು ಕಷ್ಟಕರವಾದವುಗಳಾಗಿವೆ.—2 ತಿಮೊಥೆಯ 3:1-3, NW.
ಇನ್ನೂ, ಸ್ವೀಕಾರಯೋಗ್ಯವಾದ ಪರಿಹಾರಗಳಿಗಾಗಿರುವ ಅನ್ವೇಷಣೆಯು ಮುಂದುವರಿಯುತ್ತದೆ. ಮಾಲಿನ್ಯ ಮತ್ತು ಮೋಟಾರುಗಾಡಿಗಳಿಗೆ ಆದರ್ಶಪ್ರಾಯವಾದ ಪರಿಹಾರವನ್ನು ಎಂದಾದರೂ ಕಂಡುಕೊಳ್ಳಸಾಧ್ಯವಿದೆಯೊ?
[ಪುಟ 8 ರಲ್ಲಿರುವ ಚಿತ್ರ]
ನಾವು ಸಾರ್ವಜನಿಕ ವಾಹನಸೌಕರ್ಯವನ್ನು ಉಪಯೋಗಿಸುವ ಮೂಲಕ, ಕಾರನ್ನು ಹಂಚಿಕೊಳ್ಳುವ ಏರ್ಪಾಡು, ಅಥವಾ ಸೈಕಲ್ಸವಾರಿಮಾಡುವ ಮೂಲಕ ಮಾಲಿನ್ಯವನ್ನು ಕಡಿಮೆಗೊಳಿಸಸಾಧ್ಯವಿದೆಯೊ?