ಸಂವಾದವನ್ನು ತಡೆಗಟ್ಟುವ ಅಡ್ಡಗೋಡೆಗಳು
ರಾಬರ್ಟ್ ಪಶ್ಚಿಮ ಆಫ್ರಿಕದ ಸೀಯರ ಲೀಯೋನ್ನಲ್ಲಿ ಜೀವಿಸುವ ಒಬ್ಬ ವಾಚ್ ಟವರ್ ಮಿಷನೆರಿ. ಆ ದೇಶಕ್ಕೆ ಅವನ ಆಗಮನವಾದ ಸ್ವಲ್ಪದರಲ್ಲೇ ಒಂದು ದಿನ, ಅವನು ರಸ್ತೆಯಲ್ಲಿ ನಡೆಯುತ್ತಿದ್ದಾಗ, “ಬಿಳಿಯ! ಬಿಳಿಯ!” ಎಂಬುದಾಗಿ ಸ್ಥಳಿಕ ಮಕ್ಕಳು ರಾಗವೆಳೆದು ಕರೆಯುವುದನ್ನು ಅವನು ಗಮನಿಸಿದನು. ಕರಿಯ ಅಮೆರಿಕನ್ ಆಗಿದ್ದ ರಾಬರ್ಟ್, ಒಬ್ಬ ಬಿಳಿಯ ಮನುಷ್ಯನಿಗಾಗಿ ಸುತ್ತಲೂ ನೋಡಿದನು, ಆದರೆ ಬೇರೆ ಯಾರೂ ಅಲ್ಲಿರಲಿಲ್ಲ. ಆ ಮಕ್ಕಳು ತನ್ನನ್ನು ಸಂಬೋಧಿಸಿ ಕೂಗುತ್ತಿದ್ದರೆಂಬುದು ಅನಂತರ ಅವನಿಗೆ ಗೊತ್ತಾಯಿತು!
ಆ ರಾಗದಲ್ಲಿ ಯಾವ ದುರುದ್ದೇಶವೂ ಇರಲಿಲ್ಲ. ರಾಬರ್ಟನು ತಮ್ಮ ಸ್ವಂತ ಸಂಸ್ಕೃತಿಗಿಂತ ಭಿನ್ನವಾದ ಒಂದು ಸಂಸ್ಕೃತಿಯಿಂದ ಬಂದವನೆಂಬ ತಮ್ಮ ಅರಿವನ್ನು ಅವರು ವ್ಯಕ್ತಪಡಿಸುತ್ತಿದ್ದರು ಅಷ್ಟೆ. ಆ ಭಿನ್ನತೆಯನ್ನು ವ್ಯಕ್ತಪಡಿಸಲು ಅವರು ನೆನಸಸಾಧ್ಯವಿದ್ದ ಉತ್ತಮ ವಿಧಾನವು ರಾಬರ್ಟನನ್ನು ಬಿಳಿಯನೆಂದು ಕರೆಯುವುದಾಗಿತ್ತು.
ನಾವು ಯಾರಾಗಿದ್ದೇವೆ ಎಂಬುದನ್ನು ಸಂಸ್ಕೃತಿಯು ಪ್ರಭಾವಿಸುವ ವಿಧ
ಸಂಸ್ಕೃತಿಯು ಸವಿಸ್ತಾರವಾಗಿ, “ಹಂಚಿಕೊಂಡಿರುವ ಅನೇಕ ವಿಚಾರಗಳು, . . . ಪದ್ಧತಿಗಳು, ನಂಬಿಕೆಗಳು, ಮತ್ತು ಒಂದು ಜೀವನ ಮಾರ್ಗಕ್ಕೆ ವೈಶಿಷ್ಟ್ಯಕೊಡುವ ಜ್ಞಾನ”ವಾಗಿ ಅರ್ಥವಿವರಿಸಲ್ಪಟ್ಟಿದೆ. ನೇರವಾದ ಕಲಿಸುವಿಕೆಯ ಮೂಲಕ ನಾವು ಅನೇಕ ಸಾಂಸ್ಕೃತಿಕ ಮೌಲ್ಯಗಳನ್ನು ಕಲಿಯುತ್ತೇವೆ, ಆದರೆ ನಮಗೆ ಗೊತ್ತಿಲ್ಲದೆಯೇ ನಾವು ಹೆಚ್ಚನ್ನು ಪ್ರಜ್ಞಾರಹಿತವಾಗಿಯೂ ಹೀರಿಕೊಳ್ಳುತ್ತೇವೆ. ಸಂಶೋಧಕನೊಬ್ಬನು ಹೇಳಿದ್ದು: “[ಒಂದು ಮಗು]ವಿನ ಜನನದ ಕ್ಷಣದಿಂದಲೇ, ಅವನು ಯಾವ ಪದ್ಧತಿಗಳೊಳಗೆ ಜನಿಸುತ್ತಾನೋ, ಅವು ಅವನ ಅನುಭವವನ್ನು ಮತ್ತು ವರ್ತನೆಯನ್ನು ರೂಪಿಸುತ್ತವೆ. ಅವನಿಗೆ ಮಾತನಾಡಸಾಧ್ಯವಾಗುವುದರೊಳಗೆ, ಅವನು ತನ್ನ ಸಂಸ್ಕೃತಿಯ ಪುಟ್ಟ ಉತ್ಪನ್ನವಾಗಿರುತ್ತಾನೆ. ಮತ್ತು ಅವನು ಬೆಳೆದು ದೊಡ್ಡವನಾಗಿ ಸಂಸ್ಕೃತಿಯ ಚಟುವಟಿಕೆಗಳಲ್ಲಿ ಭಾಗವಹಿಸಲು ಶಕ್ತನಾಗುವ ಸಮಯದಷ್ಟಕ್ಕೆ, ಅದರ ಹವ್ಯಾಸಗಳು ಅವನ ಸ್ವಂತ ಹವ್ಯಾಸಗಳು, ಅದರ ನಂಬಿಕೆಗಳು ಅವನ ಸ್ವಂತ ನಂಬಿಕೆಗಳು, ಅದರ ಅಸಾಧ್ಯತೆಗಳು ಅವನ ಸ್ವಂತ ಅಸಾಧ್ಯತೆಗಳಾಗಿ ಪರಿಣಮಿಸಿರುತ್ತವೆ.”
ಅನೇಕ ರೀತಿಗಳಲ್ಲಿ ಸಂಸ್ಕೃತಿಯು ಜೀವಿತವನ್ನು ನಮಗೆ ಹೆಚ್ಚು ಸುಲಭವನ್ನಾಗಿ ಮಾಡುತ್ತದೆ. ಮಕ್ಕಳಾಗಿರುವಾಗ, ನಮ್ಮ ಹೆತ್ತವರನ್ನು ಮೆಚ್ಚಿಸುವುದು ಹೇಗೆಂಬುದನ್ನು ನಾವು ಬೇಗನೆ ಕಲಿತುಕೊಳ್ಳುತ್ತೇವೆ. ನಮ್ಮ ಸಮಾಜದಲ್ಲಿ ಯಾವುದು ಸ್ವೀಕರಣೀಯ ಮತ್ತು ಯಾವುದು ಅಲ್ಲವೆಂಬುದನ್ನು ತಿಳಿದಿರುವುದು, ಹೇಗೆ ವರ್ತಿಸಬೇಕು, ಏನನ್ನು ಧರಿಸಬೇಕು, ಮತ್ತು ಇತರರೊಂದಿಗೆ ಹೇಗೆ ಸಂಬಂಧಕಲ್ಪಿಸಿಕೊಳ್ಳಬೇಕು ಎಂಬುದರ ಕುರಿತಾದ ನಿರ್ಣಯಗಳನ್ನು ಮಾಡುವುದರಲ್ಲಿ ನಮ್ಮನ್ನು ಮಾರ್ಗದರ್ಶಿಸುತ್ತದೆ.
ನಾವು ವ್ಯಕ್ತಿಗಳೋಪಾದಿ ಏನಾಗಿದ್ದೇವೊ ಅದು ಕೇವಲ ನಮ್ಮ ಸಾಂಸ್ಕೃತಿಕ ಹಿನ್ನೆಲೆಯ ಮೇಲೆ ಆತುಕೊಳ್ಳುವುದಿಲ್ಲ, ನಿಶ್ಚಯ. ಪ್ರತಿಯೊಂದು ಸಂಸ್ಕೃತಿಯೊಳಗಿನ ಜನರಲ್ಲಿ ವೈವಿಧ್ಯಗಳಿವೆ. ನಾವು ಯಾರಾಗಿದ್ದೇವೆಂಬುದು ತಳಿಶಾಸ್ತ್ರದಿಂದ, ಜೀವಿತದಲ್ಲಿನ ನಮ್ಮ ಅನುಭವಗಳಿಂದ, ಮತ್ತು ಇತರ ಅನೇಕಾನೇಕ ಕಾರಣಾಂಶಗಳಿಂದ ಸಹ ನಿರ್ಣಯಿಸಲ್ಪಡುತ್ತದೆ. ಆದಾಗ್ಯೂ, ನಮ್ಮ ಸಂಸ್ಕೃತಿಯು, ನಾವು ನಮ್ಮ ಸುತ್ತಲಿನ ಲೋಕವನ್ನು ಪರಿಗಣಿಸುವ ವಿಧಾನವನ್ನು ಪ್ರಭಾವಿಸುತ್ತದೆ.
ಉದಾಹರಣೆಗೆ ನಮ್ಮ ಸಂಸ್ಕೃತಿಯು, ನಾವು ಮಾತನಾಡುವ ಭಾಷೆಯನ್ನು ಮಾತ್ರವಲ್ಲ ಅದನ್ನು ಆಡುವ ರೀತಿಯನ್ನೂ ನಿರ್ಣಯಿಸುತ್ತದೆ. ಮಧ್ಯಪೂರ್ವದ ಕೆಲವು ಭಾಗಗಳಲ್ಲಿ, ಜನರು ತಮ್ಮನ್ನು ಅನೇಕ ಮಾತುಗಳಲ್ಲಿ, ಪುನರುಕ್ತಿ ಮತ್ತು ರೂಪಕಾಲಂಕಾರವನ್ನು ಬಳಸುತ್ತಾ, ಜಾಣ್ಮೆಯಿಂದ ವ್ಯಕ್ತಪಡಿಸುವ ಸಾಮರ್ಥ್ಯವನ್ನು ಮೌಲ್ಯವೆಂದೆಣಿಸುತ್ತಾರೆ. ವ್ಯತಿರಿಕ್ತವಾಗಿ, ದೂರ ಪೂರ್ವದ ಕೆಲವು ದೇಶಗಳ ಜನರು ಬಾಯಿಮಾತಿನ ಸಂವಾದವನ್ನು ಕನಿಷ್ಠತಮವಾಗಿಡುತ್ತಾರೆ. ಒಂದು ಜಪಾನಿ ಗಾದೆಯು ಈ ನೋಟವನ್ನು ಪ್ರತಿಬಿಂಬಿಸುತ್ತದೆ: “ನಿನ್ನ ಬಾಯಿಂದಲೇ ನೀನು ನಶಿಸಿಹೋಗುವಿ.”
ನಾವು ಸಮಯವನ್ನು ಹೇಗೆ ವೀಕ್ಷಿಸುತ್ತೇವೆಂಬುದನ್ನು ನಮ್ಮ ಸಂಸ್ಕೃತಿಯು ನಿರ್ಣಯಿಸುತ್ತದೆ. ಸ್ವಿಟ್ಸರ್ಲೆಂಡ್ನಲ್ಲಿ ಒಂದು ಕಾರ್ಯನಿಶ್ಚಯಕ್ಕೆ ನೀವು ಹತ್ತು ನಿಮಿಷಗಳಷ್ಟು ವಿಳಂಬಮಾಡುವುದಾದರೆ, ನಿಮ್ಮಿಂದ ಕ್ಷಮೆಯಾಚನೆಯನ್ನು ಅಪೇಕ್ಷಿಸಲಾಗುತ್ತದೆ. ಬೇರೆ ದೇಶಗಳಲ್ಲಿ ನೀವು ಒಂದು ಅಥವಾ ಎರಡು ತಾಸು ವಿಳಂಬವಾಗಿಯೂ ಬರಸಾಧ್ಯವಿದೆ, ಮತ್ತು ಯಾವ ಕ್ಷಮಾಯಾಚನೆಯನ್ನೂ ಅಪೇಕ್ಷಿಸಲಾಗುವುದಿಲ್ಲ.
ನಮ್ಮ ಸಂಸ್ಕೃತಿಯು ನಮಗೆ ಮೌಲ್ಯಗಳನ್ನೂ ಕಲಿಸುತ್ತದೆ. ಯಾರಾದರೂ ನಿಮಗೆ ಹೀಗಂದರೆ ನಿಮಗೆ ಹೇಗೆನಿಸುವುದೆಂದು ಯೋಚಿಸಿರಿ: “ನೀವು ತುಂಬ ಬೊಜ್ಜು ಬೆಳೆಸಿಕೊಳ್ಳುತ್ತಿದ್ದೀರಿ. ನೀವು ನಿಜವಾಗಿ ದಪ್ಪವಾಗುತ್ತಾ ಇದ್ದೀರಿ!” ದೃಢಕಾಯವು ಮೌಲ್ಯವೆಂದೆಣಿಸಲ್ಪಡುವ ಒಂದು ಆಫ್ರಿಕನ್ ಸಂಸ್ಕೃತಿಯಲ್ಲಿ ನೀವು ಬೆಳೆದಿರುವುದಾದರೆ, ನೀವು ಆ ಮಾತಿನಿಂದ ಸಂತೋಷಪಡುವ ಸಂಭವನೀಯತೆ ಇದೆ. ಆದರೆ ತೆಳ್ಳನೆಯ ಮೈಕಟ್ಟು ಅತಿಯಾಗಿ ಮಾನ್ಯಮಾಡಲ್ಪಡುವ ಒಂದು ಪಾಶ್ಚಿಮಾತ್ಯ ಸಂಸ್ಕೃತಿಯಲ್ಲಿ ನೀವು ಬೆಳೆಸಲ್ಪಟ್ಟಿದ್ದಲ್ಲಿ, ಆ ಬಿಚ್ಚುಮಾತಿನ ಹೇಳಿಕೆಯು ನಿಮಗೆ ಅಸಮಾಧಾನವನ್ನುಂಟುಮಾಡೀತು.
‘ನಮ್ಮ ರೀತಿಯೆ ಅತ್ಯುತ್ತಮ!’
ವಿಭಿನ್ನ ಸಂಸ್ಕೃತಿಗಳ ಜನರ ನಡುವಣ ಸಂವಾದಕ್ಕೆ ಬಹಳವಾಗಿ ತಡೆಗಟ್ಟಾಗಿರುವುದು ಯಾವುದೆಂದರೆ, ಎಲ್ಲೆಡೆಯಲ್ಲೂ ಜನರು ತಮ್ಮ ಸಂಸ್ಕೃತಿಯನ್ನು ಮಿಗಿಲೆಂದು ಭಾವಿಸುವ ಪ್ರವೃತ್ತಿಯೇ. ನಮ್ಮ ನಂಬಿಕೆಗಳು, ಮೌಲ್ಯಗಳು, ಸಂಪ್ರದಾಯಗಳು, ಉಡುಪಿನ ಶೈಲಿ, ಮತ್ತು ಸೌಂದರ್ಯದ ಕುರಿತಾದ ವಿಚಾರಗಳು ಬೇರೆ ಯಾವುದೇ ಅನ್ಯಮಾರ್ಗಕ್ಕಿಂತ ಹೆಚ್ಚು ಸರಿಯಾದವೂ, ಯೋಗ್ಯವೂ, ಉತ್ತಮವೂ ಆಗಿವೆಯೆಂದು ನಮ್ಮಲ್ಲಿ ಹೆಚ್ಚಿನವರು ಎಣಿಸುತ್ತೇವೆ. ಇತರ ಸಂಸ್ಕೃತಿಗಳನ್ನು ನಮ್ಮ ಸ್ವಂತ ಗುಂಪಿನ ಮೌಲ್ಯಗಳಿಗೆ ಅನುಸಾರವಾಗಿ ತೀರ್ಮಾನಿಸುವ ಪ್ರವೃತ್ತಿಯೂ ನಮಗಿದೆ. ಅಂತಹ ಯೋಚನೆಯನ್ನು ಸ್ವಕುಲಾಭಿಮಾನವೆಂದು ಕರೆಯಲಾಗುತ್ತದೆ. ದ ನ್ಯೂ ಎನ್ಸೈಕ್ಲೊಪೀಡಿಯ ಬ್ರಿಟ್ಯಾನಿಕ ಅವಲೋಕಿಸುವುದು: “ಸ್ವಕುಲಾಭಿಮಾನವು . . . ಬಹುಮಟ್ಟಿಗೆ ಸಾರ್ವತ್ರಿಕವೆಂದೇ ಹೇಳಬಹುದು. ಬಹುಮಟ್ಟಿಗೆ ಲೋಕದ ಎಲ್ಲ ಸಂಸ್ಕೃತಿಗಳ ಸದಸ್ಯರು ತಮ್ಮ ಸ್ವಂತ ಜೀವನ ರೀತಿಯನ್ನು, ತಮ್ಮ ಅತಿ ಆಪ್ತ ಸಂಬಂಧದ ನೆರೆಯವರದಕ್ಕಿಂತಲೂ ಹೆಚ್ಚು ಶ್ರೇಷ್ಠವಾದದ್ದಾಗಿ ಪರಿಗಣಿಸುತ್ತಾರೆ.”
ಇನ್ನೂರು ವರ್ಷಗಳ ಹಿಂದೆ, ಆಂಗ್ಲ ಕುಲೀನನೊಬ್ಬನು ಅದನ್ನು ಮುಚ್ಚುಮರೆಯಿಲ್ಲದೆ ಹೀಗೆ ಹೇಳಿಬಿಟ್ಟನು: “ನಾನು ನೋಡುವ [ವಿಷಯದಿಂದ] ಪರದೇಶಿಗಳೆಲ್ಲರು ಮೂರ್ಖರೇ ಸರಿ.” ಈ ಮಾತುಗಳು ಯಾವುದರಲ್ಲಿ ಕಂಡುಬರುತ್ತವೋ ಆ ಉದ್ಧರಣೆಗಳ ಪುಸ್ತಕದ ಸಂಪಾದಕನು ಬರೆದುದು: “[ಇದು] ಬಹುಮಟ್ಟಿಗೆ ಒಂದು ಸಾರ್ವತ್ರಿಕ ಭಾವನಾತ್ಮಕ ನುಡಿಯೆಂಬುದು ಖಂಡಿತ.”
ಇತರ ಸಂಸ್ಕೃತಿಗಳ ಜನರ ಕಡೆಗೆ ಸಹಿಷ್ಣುತೆಯಿಲ್ಲದ ಉದಾಹರಣೆಗಳು ಅಪಾರ. ಈ ಕೆಳಗಿನ ಉದ್ಧರಣೆಯು ಮೂಲತಃ 1930ಗಳ ಒಬ್ಬ ಜರ್ಮನ್ ಕಾದಂಬರಿಕಾರನಿಂದ ಬರೆಯಲ್ಪಟ್ಟಿತಾದರೂ, ನಾಸಿ ನಾಯಕನಾದ ಹರ್ಮಾನ್ ಗೋರಿಂಗ್ಗೆ ಅದು ಆಗಿಂದಾಗ್ಗೆ ಅಧ್ಯಾರೋಪಿಸಲ್ಪಡುತ್ತದೆ: “ಸಂಸ್ಕೃತಿ ಎಂಬ ಶಬ್ದವನ್ನು ಕೇಳುತ್ತಲೆ, ನಾನು ನನ್ನ ಪಿಸ್ತೂಲನ್ನು ಕೈಗೆತ್ತಿಕೊಳ್ಳುತ್ತೇನೆ.”
ಪ್ರಬಲವಾದ ಸ್ವಕುಲಾಭಿಮಾನ ವೀಕ್ಷಣೆಗಳು ಬೇಧಭಾವಕ್ಕೂ ನಡಿಸಬಲ್ಲವು, ಸರದಿಯಲ್ಲಿ, ಅವು ಹಗೆತನಕ್ಕೆ ಮತ್ತು ಜಗಳಕ್ಕೆ ನಡಿಸಬಹುದು. ರಿಚರ್ಡ್ ಗೋಲ್ಡ್ಸ್ಟನ್, ರುಆಂಡ ಮತ್ತು ಮಾಜಿ ಯುಗೊಸ್ಲಾವಿಯದಲ್ಲಿ, ಯುದ್ಧ ಪಾತಕಗಳನ್ನು ಪತ್ತೆಹಚ್ಚುತ್ತಿರುವ ಅಂತಾರಾಷ್ಟ್ರೀಯ ಕ್ರಿಮಿನಲ್ ಟ್ರಿಬ್ಯೂನಲ್ನ ಫಿರ್ಯಾದಿಯಾಗಿರುತ್ತಾರೆ. ಎರಡೂ ಕದನಗಳಲ್ಲಿ ನಡೆಸಲ್ಪಟ್ಟ ಅಮಾನುಷ ಕೃತ್ಯಗಳ ಕುರಿತು ಅವರಂದದ್ದು: “ಈ ತರಹದ ವಿಷಯವು ಎಲ್ಲಿಯೂ ಸಂಭವಿಸಬಲ್ಲದು. ಇಲ್ಲಿ ವಿಶಿಷ್ಟ ತೆರದ ಸಂಸ್ಕೃತಿಗಳೂ ಇತಿಹಾಸಗಳೂ ಉಳ್ಳ ಎರಡು ಪ್ರತ್ಯೇಕ ದೇಶಗಳಿವೆ, ಆದರೂ ನೆರೆಯವನಿಂದ ನೆರೆಯವನ ವಿರುದ್ಧವಾಗಿ ತದ್ರೀತಿಯ ಅತ್ಯಾಚಾರಗಳು ನಡೆಸಲ್ಪಡುತ್ತವೆ. ಈ ರೀತಿಯ ಕ್ರೂರ, ಕುಲಸಂಬಂಧವಾದ ಅಥವಾ ಧರ್ಮಸಂಬಂಧವಾದ ಯುದ್ಧವು, ಹಿಂಸಾತ್ಮಕ ಸ್ಥಿತಿಗೆ ಒಯ್ಯಲ್ಪಟ್ಟಿರುವ ಬೇಧಭಾವವೇ. ಹಿಂಸೆಗೆ ಬಲಿಯಾದವರನ್ನು ಮಾನವತ್ವರಹಿತರಾಗಿ ಅಥವಾ ದೆವ್ವಪೀಡಿತರಾಗಿ ಮಾಡಲೇಬೇಕು. ಒಮ್ಮೆ ಇದು ಮಾಡಲ್ಪಡುವಲ್ಲಿ, ಅದು ಸಾಮಾನ್ಯ ಜನರನ್ನು ಅಂತಹ ಭೀಕರ ಸಂಗತಿಗಳನ್ನು ಮಾಡು[ವುದರಿಂದ] ಸಹಜವಾಗಿ ತಡೆಯುವ ನೈತಿಕ ನಿರ್ಬಂಧಗಳಿಂದ ಮುಕ್ತಗೊಳಿಸುತ್ತದೆ.”
ನಮ್ಮ ಹೊರನೋಟವನ್ನು ವಿಶಾಲಗೊಳಿಸುವುದು
ಸಾಮಾನ್ಯವಾಗಿ ನಾವು ನಮ್ಮ ಸ್ನೇಹಿತರನ್ನಾಗಿ ಆರಿಸಿಕೊಳ್ಳುವ ಜನರು, ನಮ್ಮ ಮನೋಭಾವನೆಗಳು ಮತ್ತು ಮೌಲ್ಯಗಳಲ್ಲಿ ಪಾಲಿಗರಾಗುವ, ಹೆಚ್ಚಾಗಿ ನಮ್ಮಂತೆಯೇ ಇರುವ ಜನರಾಗಿರುತ್ತಾರೆ. ನಾವು ಅವರನ್ನು ನಂಬುತ್ತೇವೆ ಮತ್ತು ಅರ್ಥಮಾಡಿಕೊಳ್ಳುತ್ತೇವೆ. ಅವರ ಸಹವಾಸದಲ್ಲಿ ನಾವು ಹಾಯಾಗಿರುತ್ತೇವೆ. ಇನ್ನೊಬ್ಬ ವ್ಯಕ್ತಿಯ ವರ್ತನೆಯನ್ನು ವಿಚಿತ್ರವೂ ಅಸಹಜವೂ ಆಗಿ ನಾವು ಕಾಣುವಲ್ಲಿ, ನಮ್ಮ ಸ್ನೇಹಿತರೂ ಪ್ರಾಯಶಃ ನಮ್ಮೊಂದಿಗೆ ಸಮ್ಮತಿಸುವರು ಯಾಕಂದರೆ ನಮ್ಮ ಸ್ನೇಹಿತರು ನಮ್ಮ ಪಕ್ಷಪಾತಗಳಲ್ಲಿ ಪಾಲಿಗರು.
ಹಾಗಾದರೆ, ಸಾಂಸ್ಕೃತಿಕ ಹಿನ್ನೆಲೆಯ ಕಾರಣದಿಂದ ನಮಗಿಂತ ಭಿನ್ನರಾಗಿರುವ ಇತರರೊಂದಿಗೆ ಸಂವಾದಮಾಡುವ ಮೂಲಕ ನಾವೇನನ್ನು ಗಳಿಸಿಕೊಳ್ಳಬಲ್ಲೆವು? ಒಂದು ವಿಷಯವೇನಂದರೆ, ಇತರರು ತಾವು ಮಾಡುವಂತೆ ಯೋಚಿಸುವುದೂ ಕ್ರಿಯೆಗೈಯುವುದೂ ಏಕೆಂದು ತಿಳಿದುಕೊಳ್ಳಲು, ಒಳ್ಳೆಯ ಸಂವಾದವು ನಮಗೆ ಸಹಾಯಮಾಡುವುದು. ಪಶ್ಚಿಮ ಆಫ್ರಿಕದವನಾದ ಕುನ್ಲೆ ಹೇಳುವುದು: “ಆಫ್ರಿಕದಲ್ಲಿನ ಹೆಚ್ಚಿನ ಮಕ್ಕಳು ಊಟಮಾಡುವಾಗ ಮಾತನಾಡುವುದರಿಂದ ಬಲವಾಗಿ ನಿರುತ್ತೇಜಿಸಲ್ಪಡುತ್ತಾರೆ. ಆದರೆ ಕೆಲವು ಯೂರೋಪಿಯನ್ ದೇಶಗಳಲ್ಲಿ, ಊಟದ ಸಮಯಗಳಲ್ಲಿ ಸಂಭಾಷಣೆಯು ಉತ್ತೇಜಿಸಲ್ಪಡುತ್ತದೆ. ಯೂರೋಪಿನವನೊಬ್ಬನು ಆಫ್ರಿಕದವನೊಂದಿಗೆ ಒಂದು ಊಟದಲ್ಲಿ ಪಾಲುಗಾರನಾಗುವಾಗ ಏನಾಗುತ್ತದೆ? ಆಫ್ರಿಕದವನು ತನ್ನ ಊಟದ ಕುರಿತಾಗಿ ಮೌನವಾಗಿ ಮರುಗುತ್ತಿರುವಂತೆ ಯಾಕೆ ಕಾಣುತ್ತಾನೆಂದು ಯೂರೋಪಿನವನು ಕುತೂಹಲಪಡುತ್ತಾನೆ. ಆ ಮಧ್ಯೆ, ಈ ಯೂರೋಪಿನವನು ಯಾಕೆ ಹಕ್ಕಿಯಂತೆ ಚಿಲಿಪಿಲಿಗುಟ್ಟುತ್ತಾ ಇದ್ದಾನೆಂದು ಆಫ್ರಿಕದವನು ಯೋಚಿಸುತ್ತಾನೆ!” ಸ್ಪಷ್ಟವಾಗಿ, ಅಂತಹ ಸನ್ನಿವೇಶಗಳಲ್ಲಿ, ಒಬ್ಬರು ಇನ್ನೊಬ್ಬರ ಸಾಂಸ್ಕೃತಿಕ ಹಿನ್ನೆಲೆಯನ್ನು ಪರಸ್ಪರ ತಿಳಿದುಕೊಳ್ಳುವುದು, ಸಾಮಾಜಿಕ ಪೂರ್ವಕಲ್ಪಿತ ಅಭಿಪ್ರಾಯವನ್ನು ತೆಗೆದುಹಾಕಲು ಹೆಚ್ಚನ್ನು ಮಾಡಬಲ್ಲದು.
ಬೇರೆ ಸಂಸ್ಕೃತಿಗಳ ಜನರ ಪರಿಚಯವು ನಮಗೆ ಆದ ಹಾಗೆ, ನಾವು ಇತರರ ಕುರಿತಾದ ನಮ್ಮ ತಿಳಿವಳಿಕೆಯನ್ನು ಪ್ರಗತಿಗೊಳಿಸುತ್ತೇವೆ ಮಾತ್ರವಲ್ಲ, ನಮ್ಮನ್ನು ಸಹ ಹೆಚ್ಚು ಒಳ್ಳೇದಾಗಿ ತಿಳಿದುಕೊಳ್ಳುತ್ತೇವೆ. ಒಬ್ಬ ಮನುಷ್ಯಶಾಸ್ತ್ರಜ್ಞನು ಬರೆದುದು: “ಸಮುದ್ರದಾಳದಲ್ಲಿ ಜೀವಿಸುವ ಜೀವಿಯೊಬ್ಬನು ಜಲವನ್ನು ಪತ್ತೆಹಚ್ಚಲು ಹೋಗುವುದು ಅತ್ಯಂತ ಅಸಂಭವನೀಯ. ಆದರೆ ಯಾವುದೊ ಒಂದು ಅಪಘಾತವು ಅವನನ್ನು ಮೇಲ್ಮೈಗೆ ತಂದು ಗಾಳಿಯ ಪರಿಚಯಮಾಡಿಸುವಾಗ ಮಾತ್ರ ಅವನಿಗೆ ನೀರಿನ ಅಸ್ತಿತ್ವದ ಅರಿವಾಗುವುದು. . . . ಒಬ್ಬನ ಸ್ವಂತ ಸಮಾಜದ ಸಂಸ್ಕೃತಿಯನ್ನು ಪೂರ್ಣವಾಗಿ ಕಾಣುವ ಸಾಮರ್ಥ್ಯವನ್ನು . . . ಎಂದಾದರೂ ಗಳಿಸುವುದಾದರೆ, ಅತಿ ವಿರಳವಾಗಿ ಗಳಿಸುವ ತುಸು ಮಟ್ಟದ ವಸ್ತುನಿಷ್ಠೆಯನ್ನು ಅವಶ್ಯಪಡಿಸುತ್ತದೆ.” ಆದರೂ, ಇತರ ಸಂಸ್ಕೃತಿಗಳಿಗೆ ನಮ್ಮನ್ನು ಬಯಲುಪಡಿಸುವ ಮೂಲಕ ಗಾಳಿಗೆ ಪರಿಚಯಪಡಿಸಲ್ಪಟ್ಟ ಆ ಸಮುದ್ರ ವಾಸಿಯಂತೆ ನಾವಿದ್ದೇವೆ; ನಾವು ಜೀವಿಸುವ ಸಾಂಸ್ಕೃತಿಕ “ನೀರುಗಳ” ಅರಿವು ನಮಗಾಗುತ್ತದೆ. ಲೇಖಕ ಥಾಮಸ್ ಆ್ಯಬರ್ಕ್ರಾಂಬಿ ಈ ವಿಷಯವನ್ನು ಚೆನ್ನಾಗಿ ವ್ಯಕ್ತಪಡಿಸಿದನು: “ಒಂದು ವಿದೇಶೀ ಸಂಸ್ಕೃತಿಯ ಆಕರ್ಷಣೆಯನ್ನು ಎಂದೂ ಅನುಭವಿಸದ ವ್ಯಕ್ತಿಯೊಬ್ಬನು ತನ್ನ ಸ್ವಂತ ಸಂಸ್ಕೃತಿಯ ನಿರ್ಬಂಧಕ ಪ್ರಭಾವಗಳನ್ನು ಗ್ರಹಿಸಿಕೊಳ್ಳಲಾರನು.”
ಸಾರಾಂಶದಲ್ಲಿ, ಬೇರೆ ಸಂಸ್ಕೃತಿಗಳ ಗಣ್ಯಮಾಡುವಿಕೆಯು, ನಮ್ಮ ಹೊರನೋಟವನ್ನು ವಿಶಾಲಗೊಳಿಸಿ ನಮ್ಮ ಜೀವನವನ್ನು ಸಮೃದ್ಧಗೊಳಿಸಬಲ್ಲದು, ಈ ಮೂಲಕ ನಾವು ನಮ್ಮನ್ನೂ ಇತರರನ್ನೂ ಹೆಚ್ಚು ಉತ್ತಮವಾಗಿ ತಿಳಿದುಕೊಳ್ಳುತ್ತೇವೆ. ಸಾಂಸ್ಕೃತಿಕ ಪರಂಪರೆ ಮತ್ತು ಸ್ವಕುಲಾಭಿಮಾನ ಆಲೋಚನೆಗಳು ಸಂವಾದದ ವಿರುದ್ಧ ಅಡ್ಡಗೋಡೆಗಳಾಗಿರಸಾಧ್ಯವಿದ್ದರೂ, ಅವು ಹಾಗಿರಬೇಕೆಂದಿಲ್ಲ. ಆ ಗೋಡೆಗಳನ್ನು ಭೇದಿಸಸಾಧ್ಯವಿದೆ.
[ಪುಟ 7 ರಲ್ಲಿರುವ ಸಂಕ್ಷಿಪ್ತ ವಿವರಣೆ]
“ಬಹುಮಟ್ಟಿಗೆ ಲೋಕದ ಎಲ್ಲ ಸಂಸ್ಕೃತಿಗಳ ಸದಸ್ಯರು ತಮ್ಮ ಸ್ವಂತ ಜೀವನ ರೀತಿಯನ್ನು, ತಮ್ಮ ಅತಿ ಆಪ್ತ ಸಂಬಂಧದ ನೆರೆಯವರದಕ್ಕಿಂತಲೂ ಹೆಚ್ಚು ಶ್ರೇಷ್ಠವಾದದ್ದಾಗಿ ಪರಿಗಣಿಸುತ್ತಾರೆ.—”ದ ನ್ಯೂ ಎನ್ಸೈಕ್ಲೊಪೀಡಿಯ ಬ್ರಿಟ್ಯಾನಿಕ
[ಪುಟ 8 ರಲ್ಲಿರುವ ಚಿತ್ರ]
ಇತರ ಸಂಸ್ಕೃತಿಗಳ ಒಳ್ಳೇ ವಿಷಯಗಳಲ್ಲಿ ಆನಂದಿಸಲು ನಾವು ಕಲಿಯಬಲ್ಲೆವು
[ಪುಟ 7 ರಲ್ಲಿರುವ ಚಿತ್ರ ಕೃಪೆ]
Globe: Mountain High Maps® Copyright © 1995 Digital Wisdom, Inc.