ಒಂದು ವಿಶ್ವಗ್ರಾಮ, ಆದರೆ ಇನ್ನೂ ವಿಭಾಗಿತ
ನೈಜೀರಿಯದ ಎಚ್ಚರ! ಸುದ್ದಿಗಾರರಿಂದ
ಬಾಯಿಲ್ಲದ ಕಾರಣ, ತಿನ್ನಲೂ ಕುಡಿಯಲೂ ಸಾಧ್ಯವಿರದಿದ್ದ ಒಂದು ಜನಜಾತಿಯ ಕುರಿತಾದ ದಂತಕಥೆಗಳನ್ನು ನೀವೆಂದಾದರೂ ಕೇಳಿದ್ದುಂಟೊ? ಅವರು ಹೆಚ್ಚಾಗಿ ಸೇಬುಹಣ್ಣುಗಳನ್ನು ಆಘ್ರಾಣಿಸುವ ಮೂಲಕ ಬದುಕುತ್ತಿದ್ದರೆಂದು ಹೇಳಲಾಗುತ್ತಿತ್ತು. ಒಂದು ಕೆಟ್ಟ ವಾಸನೆಯು ಅವರನ್ನು ಕೊಲ್ಲುತ್ತಿತ್ತಂತೆ.
ವ್ಯಾಪಾರ ಮಾಡಲಿಕ್ಕಾಗಿ ಚಿನ್ನವಿದ್ದ ಪಶ್ಚಿಮ ಆಫ್ರಿಕದ ಜನರ ಕುರಿತೂ ದಂತಕಥೆಗಳಿದ್ದವು. ಆ ಸಮಯದ ಒಂದು ಪೋರ್ಚುಗೀಸ್ ಹಡಗಿನ ನಾಯಕನು ವರದಿಸಿದ್ದು: “[ಮಾಲಿ] ರಾಜ್ಯದ ಆಚೇಕಡೆ ಸುಮಾರು ಆರುನೂರು ಮೈಲು ಹರಿದಾರಿಯಲ್ಲಿ, ನಾಯಿಗಳ ಶಿರಗಳೂ ಹಲ್ಲುಗಳೂ ನಾಯಿಗಳಂತಹ ಬಾಲಗಳೂ ಉಳ್ಳ ನಿವಾಸಿಗಳ ಒಂದು ದೇಶವನ್ನು ಒಬ್ಬನು ಕಾಣುತ್ತಾನೆ. ಇವರು ಸಂಭಾಷಣೆಯನ್ನು ಮಾಡಲೊಲ್ಲದ ಕರಿಯರು, ಯಾಕಂದರೆ ಇವರು ಬೇರೆ ಮನುಷ್ಯರನ್ನು ನೋಡಲು ಇಷ್ಟಪಡುವುದಿಲ್ಲ.” ಅನೇಕ ವರ್ಷಗಳ ಹಿಂದೆ, ಸಂಚಾರ ಮತ್ತು ಕಂಡುಹಿಡಿತದ ಯುಗಕ್ಕೆ ಮುಂಚೆ ನಂಬಲ್ಪಡುತ್ತಿದ್ದ ಕೆಲವು ವಿಚಿತ್ರ ವಿಚಾರಗಳು ಅವುಗಳಾಗಿದ್ದವು.
ಜನರು ಪರಸ್ಪರ ಸಂಪರ್ಕಕ್ಕೆ ಬರುತ್ತಾರೆ
ಇಂತಹ ಕಥೆಗಳು ಶತಮಾನಗಳ ತನಕ ಸತ್ಯವೆಂದು ನಂಬಲ್ಪಟ್ಟಿದ್ದವು. ಆದರೆ ಪರಿಶೋಧಕರು ಭೂಗ್ರಹವನ್ನು ಸಂಶೋಧಿಸುತ್ತಾ ಹೋದಂತೆ, ಬಾಯಿಲ್ಲದ ಸೇಬುಹಣ್ಣನ್ನು ಮೂಸುವವರಾಗಲಿ, ನಾಯಿಶಿರಗಳುಳ್ಳ ಯಾವ ಜನರಾಗಲಿ ಅವರಿಗೆ ಕಾಣಸಿಗಲಿಲ್ಲ. ನಮ್ಮ ಮೇರೆಗಳ ಆಚೆಕಡೆ ಜೀವಿಸುವ ಜನರ ಕುರಿತು ಇಂದು ಸ್ವಲ್ಪವೂ ರಹಸ್ಯವು ಉಳಿದಿಲ್ಲ. ಲೋಕವು ಒಂದು ವಿಶ್ವಗ್ರಾಮವಾಗಿ ಪರಿಣಿಮಿಸಿದೆ. ಟೆಲಿವಿಷನ್ ಪರದೇಶಗಳನ್ನು ಮತ್ತು ಜನರನ್ನು ನಮ್ಮ ವಾಸದ ಕೊಠಡಿಗಳಿಗೆ ತರುತ್ತದೆ. ವಿಮಾನ ಯಾನವು ಆ ಪರದೇಶಗಳನ್ನು ಕೆಲವೇ ತಾಸುಗಳೊಳಗೆ ಸಂದರ್ಶಿಸುವಂತೆ ಸಾಧ್ಯಮಾಡುತ್ತದೆ; ಪ್ರತಿ ವರ್ಷ ಕೋಟ್ಯಂತರ ಜನರು ಹಾಗೆ ಮಾಡುತ್ತಾರೆ. ಇತರರು ಆರ್ಥಿಕ ಅಥವಾ ರಾಜಕೀಯ ಕಾರಣಗಳಿಂದಾಗಿ ದೇಶಸಂಚಾರ ಮಾಡುತ್ತಿರುತ್ತಾರೆ. ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿಯ ಒಂದು ವರದಿಯು ಹೇಳುವುದು: “ಇತಿಹಾಸದಲ್ಲಿ ಎಂದಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ—ಮತ್ತು ಖಂಡಿತವಾಗಿ ಇದು ವೃದ್ಧಿಯಾಗಲಿದೆ—ಭೂಸುತ್ತಲಿರುವ ಜನರು ತಮ್ಮನ್ನು ಸ್ಥಳಾಂತರಿಸಿಕೊಂಡು, ಹೆಚ್ಚು ಉತ್ತಮ ಜೀವನದ ಅನ್ವೇಷಣೆಯಲ್ಲಿ ವಲಸೆಹೋಗುತ್ತಿದ್ದಾರೆ.” ಸುಮಾರು ಹತ್ತು ಕೋಟಿ ಜನರು ತಾವು ಜನಿಸಿದ್ದ ದೇಶದ ಹೊರಗೆ ಜೀವಿಸುತ್ತಾರೆ.
ಅಧಿಕಾಧಿಕವಾಗಿ ರಾಷ್ಟ್ರಗಳ ನಡುವೆ ಆರ್ಥಿಕ ಪರಸ್ಪರಾವಲಂಬನೆಯು ಅಸ್ತಿತ್ವದಲ್ಲಿದೆ. ಒಂದು ಭೌಗೋಲಿಕ ಸಂಪರ್ಕ ಜಾಲವು, ಒಂದು ದೈತ್ಯಾಕಾರದ ಕೇಂದ್ರೀಯ ನರವ್ಯೂಹದಂತೆ, ಭೂಮಿಯ ಪ್ರತಿಯೊಂದು ರಾಷ್ಟ್ರಕ್ಕೆ ಸಂಬಂಧ ಕಲ್ಪಿಸುತ್ತದೆ. ವಿಚಾರಗಳು, ಮಾಹಿತಿ, ಮತ್ತು ತಂತ್ರಜ್ಞಾನವು ವಿನಿಮಯವಾದ ಹಾಗೆ, ಸಂಸ್ಕೃತಿಗಳು ಐಕ್ಯಗೊಂಡು ಒಂದಕ್ಕೊಂದು ಹೊಂದಿಕೊಳ್ಳುತ್ತವೆ. ಇಡೀ ಜಗತ್ತಿನಲ್ಲೆಲ್ಲಾ ಜನರು ಎಂದಿಗಿಂತಲೂ ಹೆಚ್ಚಾಗಿ ಒಂದೇ ರೀತಿಯ ಉಡುಪನ್ನು ತೊಡುತ್ತಾರೆ. ಲೋಕದ ನಗರಗಳಲ್ಲಿ—ಪೋಲಿಸರು, ವೈಭೋಗ್ಯ ಹೋಟೆಲ್ಗಳು, ಸಾರಿಗೆ ವ್ಯವಸ್ಥೆ, ಅಂಗಡಿಗಳು, ಬ್ಯಾಂಕುಗಳು, ಮಾಲಿನ್ಯಕ್ಕೆ ಸದೃಶವಾದ ವೈಶಿಷ್ಟ್ಯಗಳಿವೆ. ಹೀಗೆ, ಲೋಕದ ಜನರು ಒಂದುಗೂಡುವಾಗ, ಕೆಲವರು ಯಾವುದನ್ನು ಉದಯವಾಗುತ್ತಿರುವ ವಿಶ್ವಸಂಸ್ಕೃತಿಯೆಂದು ವರ್ಣಿಸುತ್ತಾರೊ ಅದನ್ನು ನಾವು ಕಾಣುತ್ತೇವೆ.
ಜನರು ವಿಭಾಗವಾಗಿ ಉಳಿಯುವ ಕಾರಣ
ಆದರೆ ಜನರು ಮತ್ತು ಸಂಸ್ಕೃತಿಗಳು ಪರಸ್ಪರ ಬೆರೆತುಕೊಳ್ಳುವಾಗಲೂ, ಎಲ್ಲರೂ ಒಬ್ಬರನ್ನೊಬ್ಬರು ಸಹೋದರರಂತೆ ಕಾಣುವುದಿಲ್ಲ ಎಂಬುದು ಸ್ಪಷ್ಟ. “ಪ್ರತಿಯೊಬ್ಬನೂ ಪರದೇಶಿಯನ್ನು ದೂರುವುದಕ್ಕೆ ತ್ವರೆಪಡುತ್ತಾನೆ,” ಎಂದು ಸುಮಾರು 2,000 ವರ್ಷಗಳ ಹಿಂದೆ ಒಬ್ಬ ಗ್ರೀಕ್ ನಾಟಕಕಾರನು ಬರೆದನು. ವಿಷಾದಕರವಾಗಿ, ಅದೇ ಇಂದು ನಿಜವಾಗಿದೆ. ಮತಾಂಧತೆ, ವಿದೇಶಿಗಳ ದ್ವೇಷ, “ಕುಲಸಂಬಂಧವಾದ ಶುದ್ಧೀಕರಣ,” ಜಾತೀಯ ಕಲಹ, ಧಾರ್ಮಿಕ ದಂಗೆಗಳು, ಅಯೋಧರ ಸಂಹಾರ, ಹತ್ಯಾಕ್ಷೇತ್ರಗಳು, ಬಲಾತ್ಕಾರಸಂಭೋಗ ಶಿಬಿರಗಳು, ಚಿತ್ರಹಿಂಸೆ, ಅಥವಾ ಸಾಮೂಹಿಕ ಕೊಲೆಗಳ ಕುರಿತಾಗಿ ವಾರ್ತಾಪತ್ರದ ವರದಿಗಳಲ್ಲಿ ಪುರಾವೆಯನ್ನು ಸುಲಭವಾಗಿ ಕಾಣಸಾಧ್ಯವಿದೆ.
ಕುಲಸಂಬಂಧವಾದ ಘರ್ಷಣೆಗಳ ಪಥವನ್ನು ಬದಲಾಯಿಸಲು ನಮ್ಮಲ್ಲಿ ಹೆಚ್ಚಿನವರು ಸ್ವಲ್ಪ ಅಥವಾ ಏನನ್ನೂ ಮಾಡಲಾರೆವು ಎಂಬುದು ನಿಶ್ಚಯ. ಅವುಗಳಿಂದ ನಾವು ನೇರವಾಗಿ ಬಾಧಿಸಲ್ಪಡದಿರಲೂಬಹುದು. ಆದರೂ, ನಮ್ಮಲ್ಲಿ ಹೆಚ್ಚಿನವರಿಗೆ, ನಾವು ಸಂಪರ್ಕಕ್ಕೆ ಬರುವ ಪರದೇಶಿ—ನೆರೆಯವರು, ಸಹೋದ್ಯೋಗಿಗಳು, ಅಥವಾ ಸಹಪಾಠಿಗಳು—ಗಳೊಂದಿಗಿನ ಸಂವಾದದ ಕೊರತೆಯಿಂದಲೆ ಸಮಸ್ಯೆಗಳು ಬರುತ್ತವೆ.
ವಿಭಿನ್ನ ಕುಲಸಂಬಂಧ ಗುಂಪುಗಳ ಜನರಿಗೆ ಒಬ್ಬರನ್ನೊಬ್ಬರು ನಂಬಲು ಅಥವಾ ಮಾನ್ಯಮಾಡಲು ಅಷ್ಟೊಂದು ಸಲ ಕಷ್ಟವಾಗುವುದು ವಿಚಿತ್ರವಾಗಿ ಕಾಣುವುದಿಲ್ಲವೊ? ಎಷ್ಟೆಂದರೂ, ನಮ್ಮ ಭೂಗ್ರಹವು ಪ್ರಚಂಡವಾದ ವೈಚಿತ್ರ್ಯ, ಅನಂತವಾದ ವೈವಿಧ್ಯವುಳ್ಳದ್ದಾಗಿರುತ್ತದಲ್ಲಾ. ನಮ್ಮಲ್ಲಿ ಹೆಚ್ಚಿನವರು ಸಮೃದ್ಧವಾದ ವೈವಿಧ್ಯಮಯ ಆಹಾರ, ಸಂಗೀತ, ಮತ್ತು ಬಣ್ಣ ಹಾಗೂ ಅನೇಕ ಜಾತಿಯ ಸಸ್ಯಗಳು, ಪಕ್ಷಿಗಳು, ಮತ್ತು ಪ್ರಾಣಿಗಳನ್ನು ಗಣ್ಯಮಾಡುತ್ತೇವೆ. ಆದರೆ ವೈವಿಧ್ಯಕ್ಕಾಗಿರುವ ನಮ್ಮ ಗಣ್ಯತೆಯು, ನಾವು ಮಾಡುವಂತಹದ್ದೆ ರೀತಿಯಲ್ಲಿ ಯೋಚಿಸದ ಮತ್ತು ಮಾಡದ ಜನರನ್ನು ಯಾವಾಗಲೂ ಒಳಗೊಳ್ಳುವುದಿಲ್ಲ.
ಜನರಲ್ಲಿನ ವೈವಿಧ್ಯದ ಸಕಾರಾತ್ಮಕ ವಿಷಯಾಂಶಗಳನ್ನು ನೋಡುವ ಬದಲಿಗೆ, ಭಿನ್ನತೆಗಳ ಮೇಲೆ ಕೇಂದ್ರೀಕರಿಸಿ, ಅವುಗಳನ್ನು ಜಗಳದ ತಳಪಾಯವಾಗಿ ಉಪಯೋಗಿಸುವ ಪ್ರವೃತ್ತಿ ಅನೇಕರಿಗಿದೆ. ಇದು ಹಾಗೇಕೆ? ಯಾರ ಸಂಸ್ಕೃತಿಯು ನಮ್ಮ ಸ್ವಂತ ಸಂಸ್ಕೃತಿಗಿಂತ ಭಿನ್ನವಾಗಿರುತ್ತದೋ, ಅವರೊಂದಿಗೆ ಸಂವಾದಮಾಡಲು ಪ್ರಯತ್ನಿಸುವುದರಲ್ಲಿ ಯಾವ ಪ್ರಯೋಜನವಿದೆ? ಸಂವಾದಕ್ಕಿರುವ ಅಡ್ಡಗೋಡೆಗಳನ್ನು ಕೆಡವಿಹಾಕಿ, ಸಂವಾದದ ತೆರಪನ್ನು ನಾವು ಹೇಗೆ ಪರಿಹರಿಸೇವು? ಮುಂದಿನ ಲೇಖನಗಳು ಆ ಪ್ರಶ್ನೆಗಳನ್ನು ಉತ್ತರಿಸಲು ಪ್ರಯತ್ನಮಾಡುವವು.