ಬೈಬಲಿನ ದೃಷ್ಟಿಕೋನ
ಯೂಎಫ್ಓಗಳು ದೇವರಿಂದ ಬರುವ ಸಂದೇಶವಾಹಕಗಳೊ?
ಇಪ್ಪತ್ತನೆಯ ಶತಮಾನವು ಕ್ರಮೇಣವಾಗಿ ಅಂತ್ಯಗೊಂಡಂತೆ ಮತ್ತು ಭೂಮಿಯ ಮೇಲಿನ ಪರಿಸ್ಥಿತಿಗಳು ಏಕಪ್ರಕಾರವಾಗಿ ಹದಗೆಟ್ಟಂತೆ, ಗುರುತಿಸಲ್ಪಟ್ಟಿರದ ಹಾರುವ ವಸ್ತುಗಳು [ಅನ್ಐಡೆಂಟಿಫೈಡ್ ಫ್ಲೈಯಿಂಗ್ ಆಬ್ಜೆಕ್ಟ್ಸ್] (ಯೂಎಫ್ಓಗಳು) ಮತ್ತು ಅವುಗಳ ಪ್ರಯಾಣಿಕರಾದ, ಭೂಬಾಹ್ಯ ಜೀವಿಗಳಲ್ಲಿ, ನಂಬಿಕೆಯು ಹರಡುತ್ತಾ ಮುಂದುವರಿಯುತ್ತದೆ. ಯೂಎಫ್ಓಗಳು ಕೇವಲ ಒಂದು ಕಲ್ಪನಾಕಥೆ, ಒಂದು ವಂಚನೆ, ಸಾರ್ವಜನಿಕರ ಮೋಸಹೋಗುವಿಕೆಯನ್ನು ನೋಡಿ ನಗಲು ಇಷ್ಟಪಡುವ ಜನರಿಂದ ನಡಸಲ್ಪಟ್ಟಿರುವ ಒಂದು ಕೀಟಲೆಯಮೋಸವಾಗಿದೆಯೊ?
ಯೂಎಫ್ಓಗಳನ್ನು ಅಥವಾ ಅವುಗಳ ಭೂಬಾಹ್ಯ ಪ್ರಯಾಣಿಕರನ್ನು ನೋಡಿದ್ದೇವೆಂದು ಹೇಳಿಕೊಳ್ಳುವವರು, ಸಹಜ ಸ್ಥಿತಿಯ, ಭರವಸಾರ್ಹ ಜನರೆಂದು ತೋರುವವರನ್ನು ಒಳಗೊಂಡಿರುತ್ತಾರೆ; ವಾಸ್ತವದಲ್ಲಿ, ಇತರ ಗ್ರಹಗಳಿಂದ ಬಂದಿರುವ ಈ ಸಂದರ್ಶಕರಲ್ಲಿ ನಂಬುವವರು, ಸುಶಿಕ್ಷಿತ ಪ್ರೊಫೆಸರುಗಳು ಮತ್ತು ವಿಜ್ಞಾನಿಗಳನ್ನು ಒಳಗೂಡುತ್ತಾರೆ. ಭೂಬಾಹ್ಯ ಜೀವಿಗಳು ಮಾನವರನ್ನು ಗಮನಿಸುತ್ತಿದ್ದಾರೆ ಮತ್ತು ಕೆಲವೊಮ್ಮೆ ಅವರೊಂದಿಗೆ ಸಂವಾದಿಸುತ್ತಿದ್ದಾರೆಂದು ಅವರು ಮನಗಾಣಿಸಲ್ಪಟ್ಟಿದ್ದಾರೆ. ಅಂತರಿಕ್ಷ ಸಂದರ್ಶಕರೊಂದಿಗೆ ತಾವು ಸಂಪರ್ಕವನ್ನು ಮಾಡಿದ್ದೇವೆಂದು ಹೇಳಿಕೊಳ್ಳುವ ಜನರಿಗೆ ನೆರವು ನೀಡಲು, ಭೂಬಾಹ್ಯ ಜೀವಿಗಳ ಬೆಂಬಲ ಗುಂಪುಗಳೆಂದು ಕರೆಯಲ್ಪಡುವ ಗುಂಪುಗಳು ಲಭ್ಯವಿವೆ.a
ಭೂಮಿಯ ಜೀವಜಾತಿಗಳ ಪಾರಾಗುವಿಕೆಗಾಗಿ ಭೂಬಾಹ್ಯ ಜೀವಿಗಳ ಯೋಜನೆ
ಎಲ್ಯನ್ಸ್ ಅಮಂಗ್ ಅಸ್ ಎಂಬ ಪುಸ್ತಕದಲ್ಲಿ, ರೂತ್ ಮಾಂಟ್ಗೊಮೆರಿ, ತಾವು ಮಾನವ ದೇಹಗಳಲ್ಲಿ ವಾಸಿಸುತ್ತಿರುವ ಭೂಬಾಹ್ಯ ಸಂದರ್ಶಕರೆಂದು ಮನಗಾಣಿಸಲ್ಪಟ್ಟಿರುವ ಬೆಳೆಯುತ್ತಿರುವ ಸಂಖ್ಯೆಯ ಜನರಲ್ಲಿ ಕೆಲವರ ಸಂದರ್ಶನ ಮಾಡುತ್ತಾರೆ. ಮಾನವೀಕರಿಸಲ್ಪಟ್ಟಿರುವ ಭೂಬಾಹ್ಯ ಜೀವಿಗಳೆಂದು ಹೇಳಿಕೊಳ್ಳುವವರಲ್ಲಿ ಕೆಲವರು ಮುಂತಿಳಿಸುವುದೇನಂದರೆ, ಇಸವಿ 2000ದಲ್ಲಿ “ದೇವದೂತರುಗಳ ಶ್ರೇಣಿಗಳು ಮತ್ತು ಅಧಿಪತಿಗಳು ತಯಾರಿಸುತ್ತಿದ್ದಿರುವ ಒಂದು ವಿಶ್ವ ಘಟನೆ” ಇರುವದು. ಭೂಬಾಹ್ಯ ಜೀವಿಗಳು, ಸಸ್ಯ ಮತ್ತು ಪ್ರಾಣಿ ಮಾದರಿಗಳನ್ನು ಸಂಗ್ರಹಿಸಿ ಸಂರಕ್ಷಿಸಲು ಯೂಎಫ್ಓಗಳನ್ನು ಉಪಯೋಗಿಸುತ್ತಿದ್ದಾರೆ ಅಥವಾ ಭೂಮಿಯ ಸನ್ನಿಹಿತವಾಗುತ್ತಿರುವ ಧ್ವಂಸದಿಂದ ಕೋಟ್ಯಂತರ ಮನುಷ್ಯರನ್ನು ದೂರ ವರ್ಗಾಯಿಸಲು ಯೂಎಫ್ಓಗಳು ರಕ್ಷಣಾ ನೌಕೆಗಳಾಗಿ ಉಪಯೋಗಿಸಲ್ಪಡುವವು ಎಂಬುದಾಗಿ ಕೆಲವು ಜನರು ನಂಬುತ್ತಾರೆ. ಆ ಮಹಾ ನಾಶನದ ನಂತರ, ಮನುಷ್ಯರು ಆತ್ಮಿಕ ಅರಿವಿನ “ಹೊಸ ಯುಗ ಮತ್ತು ಹೊಸ ವ್ಯವಸ್ಥೆ”ಯನ್ನು ಆರಂಭಿಸಲು ಹಿಂದಿರುಗಿಸಲ್ಪಡಲಿರುವರು. “ಅನ್ಯಲೋಕದ ಯುವಕರು” ಎಂದು ತಮ್ಮನ್ನು ಕರೆದುಕೊಳ್ಳುವ ಒಂದು ಗುಂಪಿನ ಒಬ್ಬ ಸದಸ್ಯನಾಗಿರುವ, ಅಮೆರಿಕದ ಕೊಲೊರಾಡೊದ ಒಬ್ಬ ಯುವ ಪುರುಷನು, ತುಂಬ ಗಂಭೀರತೆಯಿಂದ ಎಚ್ಚರ! ಪತ್ರಿಕೆಗೆ ಹೇಳಿದ್ದು: “ನನ್ನ ಸ್ನೇಹಿತರು ಮತ್ತು ನಾನು ನಮ್ಮ ಅನ್ಯಲೋಕದ ಪೂರ್ವಜರು ನಮ್ಮನ್ನು ಅಂತರಿಕ್ಷನೌಕೆಗಳಿಗೆ ವರ್ಗಾಯಿಸಲು ಕಾಯುತ್ತಿದ್ದೇವೆ.”
ಅವರು ಭೂಬಾಹ್ಯ ಜೀವಿಗಳೆಂದು ಪ್ರತಿಪಾದಿಸುವವರಲ್ಲಿ ಕೊಂಚ ಮಂದಿ ತಾವು ದೇವರಿಂದ ನಡಿಸಲ್ಪಟ್ಟಿದ್ದೇವೆಂದು ಹೇಳಿಕೊಳ್ಳುತ್ತಾರೆ, ಮತ್ತು ಇತರರು, ತಾವು ಮಾನವಜಾತಿಗೆ ಸಹಾಯಮಾಡುವುದರಲ್ಲಿ ಸಲಹೆಗಾಗಿ ಆತನೊಂದಿಗೆ ಸರಾಗವಾಗಿ ಮಾತಾಡುತ್ತೇವೆಂದು ಹೇಳಿಕೊಳ್ಳುತ್ತಾರೆ. ಬರಲಿರುವ ಲೋಕ ವಿಪ್ಲವದಿಂದ ಮಾನವಕುಲವನ್ನು ರಕ್ಷಿಸಲು ದೇವರು ಇತರ ಗ್ರಹಗಳಿಂದ ಬರುವ ಸಂದರ್ಶಕರನ್ನು ಉಪಯೋಗಿಸುತ್ತಿದ್ದಾನೊ?
ಮಾನವಕುಲದೊಂದಿಗಿನ ದೇವರ ಸಂವಾದಗಳು
ಮಾನವ ಇತಿಹಾಸದ ಪ್ರಾರಂಭದಲ್ಲಿ, ದೇವರು ಮನುಷ್ಯರೊಂದಿಗೆ ಸಂವಾದಿಸಿದನು. ಆದಾಮ ಮತ್ತು ಹವ್ವ, ನೋಹ, ಅಬ್ರಹಾಮ ಮತ್ತು ಇತರರೊಂದಿಗೆ ನಡಿಸಲ್ಪಟ್ಟ ದೈವಿಕ ಸಂಭಾಷಣೆಗಳನ್ನು ಬೈಬಲ್ ದಾಖಲೆಯು ವರ್ಣಿಸುತ್ತದೆ.b (ಆದಿಕಾಂಡ 3:8-10; 6:13; 15:1) ದೇವರ ಚಿತ್ತವನ್ನು ಸಂವಾದಿಸಲು ಮತ್ತು ಬೈಬಲನ್ನು ಉತ್ಪಾದಿಸಲು ಕನಸುಗಳು, ವಾಣಿಗಳು ಮತ್ತು ದರ್ಶನಗಳು ಉಪಯೋಗಿಸಲ್ಪಟ್ಟವು. ಆದಾಗಲೂ ಬೈಬಲ್ ಪೂರ್ಣಗೊಳಿಸಲ್ಪಟ್ಟ ನಂತರ, ಮಾನವಕುಲದೊಂದಿಗೆ ನೇರವಾದ ಸ್ವರ್ಗೀಯ ಸಂವಾದದ ಅಗತ್ಯವಿತ್ತೊ? ಇಲ್ಲ, ಯಾಕಂದರೆ ಪವಿತ್ರ ಶಾಸ್ತ್ರಗಳು ‘ದೇವರ ಪುರುಷನನ್ನು ಪೂರ್ತಿ ಸಮರ್ಥನಾಗಿ, ಪ್ರತಿಯೊಂದು ಸತ್ಕಾರ್ಯಕ್ಕೆ ಸಂಪೂರ್ಣವಾಗಿ ಸಜ್ಜಿತನಾಗಿರುವಂತೆ’ ಮಾಡುತ್ತವೆಯೆಂದು ಬೈಬಲ್ ತಿಳಿಸುತ್ತದೆ. (2 ತಿಮೊಥೆಯ 3:17, NW) ಬೈಬಲಿಗನುಸಾರ, ಈ ತೊಂದರೆಭರಿತ ಸಮಯಗಳಿಗಾಗಿ ಮಾರ್ಗದರ್ಶನವು ದೇವರ ಲಿಖಿತ ವಾಕ್ಯದಿಂದ ಬರಲಿದೆ. ಹಾಗಿದ್ದರೂ, ಒಬ್ಬ ಭೂಬಾಹ್ಯ ವದನಕನ ಮೂಲಕ ನಾವು ದೇವರಿಂದ ನೇರವಾಗಿ ಸಂವಾದ ಅಥವಾ ವಿಶೇಷ ಉಪದೇಶಗಳನ್ನು ಪಡೆಯುವೆವು ಎಂಬುದನ್ನು ನಂಬಲು ನಮಗೆ ಯಾವುದಾದರೂ ಕಾರಣವಿದೆಯೊ? ಇಲ್ಲ, ಯಾಕಂದರೆ ಅಪೊಸ್ತಲ ಪೌಲನು ಹೇಳಿದ್ದು: “ನಾವು ನಿಮಗೆ ಸಾರಿದ ಸುವಾರ್ತೆಗೆ ವಿರುದ್ಧವಾದದ್ದನ್ನು ನಾವೇ ಆಗಲಿ ಪರಲೋಕದಿಂದ ಬಂದ ದೇವದೂತನೇ ಆಗಲಿ ನಿಮಗೆ ಸಾರಿದರೆ ಶಾಪಗ್ರಸ್ತನಾಗಲಿ.”—ಗಲಾತ್ಯ 1:8.
ಭೂಮಿಯು ಬಲುಬೇಗನೆ ಪ್ರಧಾನವಾದ ವಿಪ್ಲವಾತ್ಮಕ ಬದಲಾವಣೆಗಳನ್ನು ಅನುಭವಿಸಲಿದೆಯೆಂಬ ಬೈಬಲ್ ಪ್ರವಾದನೆಗಳೊಂದಿಗೆ, ಭೂಬಾಹ್ಯ ಜೀವಿಗಳೆಂದು ಹೇಳಿಕೊಳ್ಳುವವರ ವಾದಗಳು ಸಮ್ಮತಿಸುತ್ತಿರುವಂತೆ ತೋರಿದರೂ, ಅವು ಸೃಷ್ಟಿಜೀವಿಗಳ ಮೇಲೆ ಆಧಾರಿಸುವ ಪಾರಾಗುವಿಕೆಯ ವಿಧಾನವನ್ನು ನೀಡುತ್ತವೆ. ಮನುಷ್ಯರು ಅನ್ಯಲೋಕದ ಅಂತರಿಕ್ಷನೌಕೆಯ ಕಲ್ಪಿತ ಭದ್ರತೆ ಅಥವಾ ಬೇರೆ ಯಾವುದೇ ಸ್ಥಳಕ್ಕೆ ಓಡಿಹೋಗುವಂತೆ ಬೈಬಲ್ ಉತ್ತೇಜಿಸುವುದಿಲ್ಲ. ಬದಲಾಗಿ, ದೇವರೊಂದಿಗೆ ಒಂದು ಸಮರ್ಪಿತ ಸಂಬಂಧದಲ್ಲಿ—ಯಾವ ಸಮರ್ಪಣೆಯು ನೀರಿನ ದೀಕ್ಷಾಸ್ನಾನದ ಮೂಲಕ ಸಾಂಕೇತಿಸಲ್ಪಡುತ್ತದೊ—ಅದರಲ್ಲಿ ಸಂರಕ್ಷಣೆಯನ್ನು ಹುಡುಕುವಂತೆ ಅದು ನಮಗೆ ಹೇಳುತ್ತದೆ. (1 ಪೇತ್ರ 3:21; ಕೀರ್ತನೆ 91:7ನ್ನು ಹೋಲಿಸಿರಿ; ಮತ್ತಾಯ 28:19, 20; ಯೋಹಾನ 17:3.) ಮತ್ತು ಯೇಸು ಹೇಳಿದ್ದೇನೆಂದರೆ, “ಕಡೇ ವರೆಗೂ ತಾಳುವವನು ರಕ್ಷಣೆಹೊಂದುವನು.”—ಮತ್ತಾಯ 24:13.
ಈ ವಚನಗಳು ಪಾರಾಗುವಿಕೆಗಾಗಿ ಆಶ್ರಯದ ಒಂದು ಐಹಿಕ ನಿವೇಶನದ ಬದಲಿಗೆ ದೇವರೊಂದಿಗಿನ ಒಂದು ಆತ್ಮಿಕ ಸಂಬಂಧವನ್ನು ಒತ್ತಿ ಹೇಳುವುದಿಲ್ಲವೊ? ಆದುದರಿಂದ, ಮಾನವಕುಲವು ಪಾರಾಗುವಂತೆ ಸಹಾಯ ಮಾಡುವ ಬದಲಿಗೆ, ‘ಮಾನವರಲ್ಲದ ಜೀವಿಗಳ’ ಕುರಿತಾದ ಕಥೆಗಳು, ಜನರ ಗಮನವನ್ನು ಅವರ ನಿತ್ಯ ಹಿತಕ್ಕಾಗಿ ದೇವರು ವಾಸ್ತವದಲ್ಲಿ ಅವಶ್ಯಪಡಿಸುವ ವಿಷಯದಿಂದ ದೂರ ತಿರುಗಿಸುತ್ತವೆ.
ಪಾರಾಗುವಿಕೆಗಾಗಿರುವ ದೇವರ ಮಾಧ್ಯಮದಿಂದ ಮಾನವಕುಲವನ್ನು ಸೆಳೆಯಲು ಪ್ರಯತ್ನಿಸಿದರೂ, ದೇವರನ್ನು ಪ್ರತಿನಿಧಿಸುತ್ತಿರುವುದಾಗಿ ಹೇಳಿಕೊಳ್ಳುವವರು ಯಾರಾಗಿರಬಹುದು? ರಿಪೋರ್ಟ್ ಆನ್ ಕಮ್ಯೂನ್ಯನ್ ಎಂಬ ತನ್ನ ಪುಸ್ತಕದಲ್ಲಿ ಎಡ್ ಕಾನ್ರೈ ತಿಳಿಸುವುದೇನಂದರೆ, “ಮನಶ್ಶಾಸ್ತ್ರದ ಮತ್ತು ಸಾಮಾಜಿಕ ವಿಜ್ಞಾನಗಳಲ್ಲಿ ತರಬೇತಿಯುಳ್ಳ ಗಂಭೀರರಾಗಿರುವ ಯೂಎಫ್ಓಲಾಜಿಸ್ಟ್ಗಳು [ಯೂಎಫ್ಓಗಳನ್ನು ಅಧ್ಯಯನಿಸುವವರು]” “‘ಮಲಗುವಕೋಣೆಯ ಸಂದರ್ಶಕರು,’ ಭೂತಗಳು, ಪ್ರೇತಗಳು, ಪಿಶಾಚದರ್ಶನಗಳು, ಧಾರ್ಮಿಕ ದರ್ಶನಗಳು ಮತ್ತು ಯಾವುದನ್ನು ದೆವ್ವಗಳೆಂದು ಎಣಿಸಲಾಗಿವೆಯೊ” ಅವುಗಳ ತುಲನಾತ್ಮಕ ಅಧ್ಯಯನಗಳನ್ನು ಒಳಗೂಡಿಸುತ್ತಾರೆ. ಅನೇಕ ಯೂಎಫ್ಓಲಾಜಿಸ್ಟ್ಗಳು ಮತ್ತು ಮಾನವ ರೂಪದಲ್ಲಿರುವ ಭೂಬಾಹ್ಯ ಜೀವಿಗಳೆಂದು ಹೇಳಿಕೊಳ್ಳುವವರು, ಪ್ರಯಾಣಿಸಲು ಅಂತರಿಕ್ಷನೌಕೆಗಳನ್ನು ಬಳಸುವುದು ಹೆಚ್ಚಾಗಿ ಅನಾವಶ್ಯಕವೆಂದು ಹೇಳುತ್ತಾರೆ. ಈ ಜೀವಿಗಳು ಅಂತರಿಕ್ಷನೌಕೆಯಲ್ಲಿ ಆಗಮಿಸದೇ ಅದೃಶ್ಯವಾಗಿ ಪ್ರಯಾಣಿಸಬಲ್ಲರು ಮತ್ತು ಭೂಮಿಯ ಮೇಲೆ ಎಲ್ಲೇ ಆದರೂ ಮಾನವ ದೇಹವನ್ನು ಧರಿಸಬಲ್ಲರೆಂದು ಅವರು ಹೇಳುತ್ತಾರೆ.
ಸೈತಾನನು ಮತ್ತು ಅವನ ದೆವ್ವಗಳು ಮಾನವಕುಲವನ್ನು ತಪ್ಪಾದ ಮಾರ್ಗದಲ್ಲಿ ನಡೆಸಲು ಆಸಕ್ತರಾಗಿದ್ದಾರೆಂದು ಬೈಬಲ್ ಎಚ್ಚರಿಸುತ್ತದೆ. ಆಕರ್ಷಕವಾದ, ಆದರೆ ಸುಳ್ಳಾದ ಪರಿಹಾರಗಳನ್ನು ನೀಡಲು ಅವರು ಮಾನವಕುಲದ ಹತಾಶೆ ಮತ್ತು ನಿರೀಕ್ಷಾಹೀನತೆಯ ಲಾಭವನ್ನು ಪಡೆದುಕೊಳ್ಳುತ್ತಾರೆ. (2 ಕೊರಿಂಥ 11:14) ಆದುದರಿಂದ, ಬೈಬಲಿನ ಈ ಎಚ್ಚರಿಕೆಯು: “ಮುಂದಣ ದಿನಗಳಲ್ಲಿ ಕೆಲವರು ವಂಚಿಸುವ ಆತ್ಮಗಳ ನುಡಿಗಳಿಗೂ ದೆವ್ವಗಳ ಬೋಧನೆಗಳಿಗೂ ಲಕ್ಷ್ಯಕೊಟ್ಟು ಕ್ರಿಸ್ತನಂಬಿಕೆಯಿಂದ ಭ್ರಷ್ಟರಾಗುವ”ರು.—1 ತಿಮೊಥೆಯ 4:1.
ತದ್ರೀತಿಯಲ್ಲಿ ಇಂದು, ಅಂತಹ ಜೀವಿಗಳು ಯಾವುದೇ ರೂಪವನ್ನು ತೆಗೆದುಕೊಳ್ಳಲಿ, ಅವುಗಳಿಂದ ಯಾವುದೇ ಊಹಾತ್ಮಕ ಭೇಟಿಗಳು ಮತ್ತು ಪ್ರಯೋಜನಕರವೆಂದು ತೋರುವ ನಿರ್ದೇಶನವು ತಿರಸ್ಕರಿಸಲ್ಪಡಬೇಕು. ದೇವರ ವಾಕ್ಯಕ್ಕಿಂತ ಹೆಚ್ಚಾಗಿ ಈ “ಭೂಬಾಹ್ಯ ಜೀವಿಗಳ” ಬುದ್ಧಿವಾದವನ್ನು ಹಿಂಬಾಲಿಸುವವರು ನಿಶ್ಚಯವಾಗಿಯೂ ದಾರಿತಪ್ಪಿಸಲ್ಪಡುವರು—ಈ ಕಷ್ಟಕರವಾದ ಸಮಯಗಳಲ್ಲಿ ಮಾಡಲು ಒಂದು ಘೋರವಾದ ತಪ್ಪು.
[ಅಧ್ಯಯನ ಪ್ರಶ್ನೆಗಳು]
a ಯೂಎಫ್ಓಗಳು ಮತ್ತು ಭೂಬಾಹ್ಯ ಜೀವಿತದ ಕುರಿತಾದ ಒಂದು ಚರ್ಚೆಗಾಗಿ, 1990, ಎಪ್ರಿಲ್ 8ರ ಮತ್ತು 1990, ನವೆಂಬರ್ 8ರ ಎಚ್ಚರ! (ಇಂಗ್ಲಿಷ್) ಪತ್ರಿಕೆಯ ಸಂಚಿಕೆಗಳನ್ನು ನೋಡಿರಿ.
b ಯಾವುದನ್ನು ಕೆಲವರು ಒಂದು ಯೂಎಫ್ಓ ಎಂದು ಅರ್ಥವಿವರಿಸಿದ್ದಾರೊ ಅದನ್ನು ಬೈಬಲ್ ಲೇಖಕನಾದ ಯೆಹೆಜ್ಕೇಲನು ನೋಡಿದನು. (ಯೆಹೆಜ್ಕೇಲ, ಅಧ್ಯಾಯ 1) ಆದಾಗಲೂ, ಇದು ಯೆಹೆಜ್ಕೇಲನು ಮತ್ತು ಇತರ ಪ್ರವಾದಿಗಳಿಂದ ವರ್ಣಿಸಲ್ಪಟ್ಟಿರುವ ಅನೇಕ ಸಾಂಕೇತಿಕ ದರ್ಶನಗಳಲ್ಲಿ ಒಂದಾಗಿತ್ತು, ಆಧುನಿಕ ಸಮಯಗಳಲ್ಲಿ ಹೇಳಿಕೊಳ್ಳಲ್ಪಡುವಂತೆ ಒಂದು ವಾಸ್ತವವಾದ ದೈಹಿಕ ವೀಕ್ಷಣೆಯಾಗಿರಲಿಲ್ಲ.