ಕಸಾವಾ ಎಲೆಗಳು ಕೋಟಿಗಟ್ಟಲೆ ಮಂದಿಗೆ ದಿನನಿತ್ಯದ ಆಹಾರ
ಸೆಂಟ್ರಲ್ ಆ್ಯಫ್ರಿಕನ್ ರಿಪಬ್ಲಿಕ್ನ ಎಚ್ಚರ! ಸುದ್ದಿಗಾರರಿಂದ
ಅದೆಲ್ಲವೂ ಸುಮಾರು 1600ನೆಯ ಇಸವಿಯಲ್ಲಿ, ಪೊರ್ಚುಗೀಸರು ದಕ್ಷಿಣ ಅಮೆರಿಕದಿಂದ ಆಫ್ರಿಕಕ್ಕೆ ಕಸಾವಾ ಅಥವಾ ಮಾನಿಆಕ್ ಅನ್ನು ತಂದಾಗ ಆರಂಭವಾಯಿತು. “ಮಾನಿಆಕ್” ಎಂಬ ಪದವು ಆ್ಯಮಸಾನ್ ಕಣಿವೆಯಲ್ಲಿನ ಬ್ರೆಸಿಲಿನ ಟುಪಿಯಾನ್ ಗೋತ್ರಗಳಿಂದ ಆರಂಭಿಸಿದ್ದರಿಂದ ಕಸಾವಾದ ನೆಲಸುನಾಡು ಬ್ರೆಸಿಲ್ ಎಂದು ನಂಬಲಾಗುತ್ತದೆ.
ಕಸಾವಾದ ಬೇರುಗಳು, ಆಫ್ರಿಕದ ಜನರಿಂದ ಉಚ್ಚವಾಗಿ ಗಣ್ಯಮಾಡಲ್ಪಟ್ಟಿವೆ, ಆದರೆ ಆ ಕಡು ಹಸಿರು ವರ್ಣದ ಎಲೆಗಳ ಕುರಿತಾಗಿ ಏನು? ಕೆಲವರು ಅವುಗಳನ್ನು ತೆರೆದಿರುವ ಗಾಯಗಳಿಗೆ ಮದ್ದಾಗಿ ಅಥವಾ ಸಿಡುಬು ರೋಗಕ್ಕೆ ಚಿಕಿತ್ಸೆನೀಡಲು ಉಪಯೋಗಿಸುತ್ತಾರೆ. ಆದಾಗಲೂ, ಸೆಂಟ್ರಲ್ ಆ್ಯಫ್ರಿಕನ್ ರಿಪಬ್ಲಿಕ್ ಮತ್ತು ಆಫ್ರಿಕದ ಇತರ ಹಲವಾರು ದೇಶಗಳಲ್ಲಿ ಕೋಟಿಗಟ್ಟಲೆ ಮಂದಿಗೆ, ಆ ಎಲೆಗಳು ದಿನನಿತ್ಯದ ಆಹಾರವಾಗಿವೆ, ಏಕೆಂದರೆ ಅವುಗಳನ್ನು ಒಂದು ರುಚಿಕರವಾದ ಊಟವನ್ನಾಗಿ ತಯಾರಿಸಸಾಧ್ಯವಿದೆ. ವಾಸ್ತವದಲ್ಲಿ, ವಾಚ್ ಟವರ್ನ ಹೊಸ ಮಿಷನೆರಿಗಳು ಇಲ್ಲಿ ಕಲಿಯುವ ಪ್ರಥಮ ಪದಗಳಲ್ಲಿ ಒಂದು, ಗುನ್ಸಾ ಆಗಿರುತ್ತದೆ. ಇದು ಕಸಾವಾ ಎಲೆಗಳಿಂದ ತಯಾರಿಸಲ್ಪಡುವ ಒಂದು ರುಚಿಕರವಾದ ತಿಳಿಸಾರು ಮತ್ತು ಸೆಂಟ್ರಲ್ ಆ್ಯಫ್ರಿಕನ್ ರಿಪಬ್ಲಿಕ್ನ ರಾಷ್ಟ್ರೀಯ ವಿಶೇಷ ಭಕ್ಷ್ಯ—ಸೆಂಟ್ರಲ್ ಆಫ್ರಿಕಕ್ಕೆ ಹೋಗುವ ಒಬ್ಬ ಸಂದರ್ಶಕನು ಖಂಡಿತವಾಗಿಯೂ ರುಚಿಸಿ ನೋಡಬೇಕಾದ ಒಂದು ಭಕ್ಷ್ಯ—ಆಗಿದೆ.
ಆಫ್ರಿಕದಲ್ಲಿ ಜೀವಿಸುತ್ತಿರುವ ಹೆಚ್ಚಿನ ಯೂರೋಪಿಯನರು ಈ ಎಲೆಗಳಿಂದ ತಯಾರಿಸಲ್ಪಟ್ಟ ಊಟವನ್ನು ಎಂದೂ ಮುಟ್ಟರು, ಏಕೆಂದರೆ ಅವರು ಅದನ್ನು, ವಿದೇಶಿಯರಿಗಲ್ಲ ಬದಲಾಗಿ ಸ್ಥಳೀಯರಿಗಾಗಿರುವ ಆಹಾರವಾಗಿ ಪರಿಗಣಿಸುತ್ತಾರೆ. ಆದರೆ ವಾಸ್ತವಾಂಶಗಳು ಏನಾಗಿವೆ? ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್, ಸಾಎರ್ ಮತ್ತು ಸೀಎರ ಲಿಯೋನ್ದಂತಹ ದೇಶಗಳಲ್ಲಿ, ಈ ಎಲೆಗಳು ಅನೇಕ ಕುಟುಂಬಗಳಿಗೆ ದಿನನಿತ್ಯದ ಮುಖ್ಯ ಆಹಾರವಾಗಿವೆ.
ಸೆಂಟ್ರಲ್ ಆ್ಯಫ್ರಿಕನ್ ರಿಪಬ್ಲಿಕ್ನ ಮೇಲಿಂದ ವಿಮಾನದಲ್ಲಿ ಹಾರಾಡುವಾಗ ಅಥವಾ ಅದರ ನಡುವೆ ಪ್ರಯಾಣಿಸುವಾಗ, ನೀವು ಒಂದು ಸುಂದರವಾದ ಹಸಿರು ದೇಶವನ್ನು—ಮರಗಳು, ಪೊದೆಗಳು, ಹುಲ್ಲುಗಾವಲುಗಳು ಮತ್ತು ನಡುವಿನ ಭಾಗದಲ್ಲಿ ಅವುಗಳ ವಿಚಿತ್ರವಾದ ಗಾಢ ಹಸಿರು ಎಲೆಗಳೊಂದಿಗೆ ಕಸಾವಾದ ಚಿಕ್ಕದಾದ ಗದ್ದೆಗಳನ್ನು—ನೋಡುತ್ತೀರಿ. ಪ್ರತಿಯೊಂದು ಚಿಕ್ಕ ಹಳ್ಳಿಯು ಕಸಾವಾದ ತುಂಡು ನೆಲಗಳಿಂದ ಸುತ್ತುವರಿಯಲ್ಪಟ್ಟಿದೆ. ಜನರು ಅದನ್ನು ತಮ್ಮ ಮನೆಗಳ ಬದಿಯಲ್ಲಿ ಬೆಳೆಸುತ್ತಾರೆ, ಮತ್ತು ರಾಜಧಾನಿಯಾದ, ಬಾಂಗುಯಿ, ಒಂದು ಮನೆ, ಅಥವಾ ಮುಖ್ಯ ರಸ್ತೆಯ ಬದಿಯಲ್ಲಿರುವ ತೀರ ಚಿಕ್ಕದಾದ ಸ್ಥಳಗಳು ಮತ್ತು ಭೂಮಿಯ ತುಕಡಿಗಳಲ್ಲಿ ನೀವು ಕಸಾವಾವನ್ನು ಕಂಡುಕೊಳ್ಳುವಿರಿ. ನಿಶ್ಚಯವಾಗಿ, ಅದು ಜಗತ್ತಿನ ಈ ಭಾಗದಲ್ಲಿ ಒಂದು ಪ್ರಾಮುಖ್ಯವಾದ ಆಹಾರ ವಸ್ತುವಾಗಿದೆ.
ಸ್ವಲ್ಪ ಗುನ್ಸಾದ ರುಚಿ ನೋಡಿ
ಹೊಸ ಮಿಷನೆರಿಗಳು ಆಗಮಿಸಿದ ನಂತರ, ಸ್ವಲ್ಪ ಸಮಯದಲ್ಲೇ, ತಮ್ಮನ್ನು ಭೇಟಿನೀಡಿ ಸ್ವಲ್ಪ ಗುನ್ಸಾವನ್ನು ರುಚಿಸಿ ನೋಡಲು ತಮ್ಮ ಮಿತ್ರರಿಂದ ಆಮಂತ್ರಿಸಲ್ಪಡುತ್ತಾರೆ. ಇದು ಮಾನಿಆಕ್ ಎಲೆಗಳಿಂದ ತಯಾರಿಸಲ್ಪಟ್ಟಿರುವ ಸುಪ್ರಸಿದ್ಧ ಭಕ್ಷ್ಯವನ್ನು ಒಳಗೊಂಡಿರುವ ಒಂದು ಊಟವಾಗಿದೆ. ಸ್ಥಳೀಯ ಸ್ತ್ರೀಯರಿಗೆ ಅದನ್ನು ರುಚಿಕರವಾದ ರೀತಿಯಲ್ಲಿ ಮಾಡುವ ವಿಧವು ತಿಳಿದಿದೆ. ಪ್ರತಿಯೊಬ್ಬ ಸ್ತ್ರೀಯು ತನ್ನ ಸ್ವಂತ ಪಾಕವಿಧಾನವನ್ನು ಹೊಂದಿರುವಂತೆ ತೋರುತ್ತದೆ. ಚಿಕ್ಕ ಹುಡುಗಿಯರು ತಮ್ಮ ತಾಯಂದಿರಿಂದ ಅಡಿಗೆಯ ಕುರಿತಾಗಿ ಕಲಿಯುವ ಪ್ರಥಮ ವಿಷಯಗಳಲ್ಲಿ ಒಂದು, ಗುನ್ಸಾವನ್ನು ತಯಾರಿಸುವ ವಿಧ ಆಗಿದೆ.
ಅದು ಏನಾಗಿದೆ ಮತ್ತು ಅವರು ಅದನ್ನು ಹೇಗೆ ತಯಾರಿಸುತ್ತಾರೆ ಎಂಬುದನ್ನು ವಿವರಿಸಲು ಅವರು ಹೆಮ್ಮೆಪಡುತ್ತಾರೆ. ಈ ಸ್ಥಳೀಯ ಭಕ್ಷ್ಯದಲ್ಲಿ ನೀವು ಆಸಕ್ತಿಯನ್ನು ತೋರಿಸುವುದಾದರೆ ಸ್ತ್ರೀಯರು ಸಂತೋಷಪಡುತ್ತಾರೆ. ಕಸಾವಾ ಎಲೆಗಳು ದುಬಾರಿಯಲ್ಲ ಮತ್ತು ಹೇರಳವಾಗಿ ದೊರಕುತ್ತವೆ ಹಾಗೂ ನೀವು ಅವುಗಳನ್ನು ಮಳೆಗಾಲದಲ್ಲೂ ಶುಷ್ಕಋತುವಿನಲ್ಲೂ ಪಡೆಯಬಹುದೆಂದು ಅವರು ನಿಮಗೆ ಪ್ರಥಮವಾಗಿ ಹೇಳುವರು. ಆರ್ಥಿಕ ಬಿಕ್ಕಟ್ಟು ಮತ್ತು ಹಣದ ಉಬ್ಬರದ ಸಮಯಗಳಲ್ಲಿ, ಕಸಾವಾ ಎಲೆಗಳು ಕುಟುಂಬವನ್ನು ಉಣಿಸುವುದರಲ್ಲಿ ಒಂದು ಪ್ರಾಮುಖ್ಯ ಪಾತ್ರವನ್ನು ವಹಿಸುತ್ತವೆ. ಮತ್ತು ಆಫ್ರಿಕದ ಕುಟುಂಬಗಳು ಅನೇಕ ವೇಳೆ ದೊಡ್ಡದಾಗಿರುತ್ತವೆ ಎಂಬುದನ್ನು ದಯವಿಟ್ಟು ನೆನಪಿನಲ್ಲಿಡಿರಿ. ಉಣಿಸಲು ಅನೇಕ ಬಾಯಿಗಳು ಮತ್ತು ತುಂಬಿಸಲು ಅನೇಕ ಹೊಟ್ಟೆಗಳಿವೆ. ಗುನ್ಸಾದ ತಯಾರಿಕೆಯು ಹಲವಾರು ತಾಸುಗಳನ್ನು ತೆಗೆದುಕೊಳ್ಳುತ್ತದೆ. ಅವು ತಿನ್ನಲ್ಪಡುವ ಮುಂಚೆ ಎಲೆಗಳ ಕಹಿಯಾದ ಸ್ವಾದವು ತೆಗೆಯಲ್ಪಡಬೇಕು. ಅವುಗಳನ್ನು ಸಾಂಪ್ರದಾಯಿಕವಾದ ತಯಾರಿಕೆಯಿಂದ ನಿರ್ವಿಷಗೊಳಿಸಲಾಗುತ್ತದೆ, ಇದು ಅರೆಯುವಿಕೆ ಮತ್ತು ಸತತವಾದ ಕುದಿಸುವಿಕೆಯನ್ನು ಒಳಗೂಡಿಸುತ್ತದೆ.
ಗುನ್ಸಾವನ್ನು ತಯಾರಿಸುವುದರಲ್ಲಿ ಆಫ್ರಿಕದ ಸ್ತ್ರೀಯರು ಉಪಯೋಗಿಸಲು ಇಷ್ಟಪಡುವ ಎಣ್ಣೆಯು ತಾಳೆಎಣ್ಣೆಯಾಗಿದೆ. ಸ್ಥಳಿಕವಾಗಿ ಮಾಡಲ್ಪಟ್ಟ ಗಾಢ ಕೆಂಪು ಬಣ್ಣದ ತಾಳೆಎಣ್ಣೆಯು ಅತ್ಯಾವಶ್ಯಕ. ಸ್ಪಲ್ಪ ನೆಲಗಡಲೆಯ ಬೆಣ್ಣೆ ಮತ್ತು ಪ್ರಾಯಶಃ ಸ್ವಲ್ಪ ನೀರುಳ್ಳಿ ಹಾಗೂ ಬೆಳ್ಳುಳ್ಳಿಯೊಂದಿಗೆ ಗುನ್ಸಾ, ಕುಟುಂಬವೊಂದಕ್ಕೆ ಒಂದು ದಿನನಿತ್ಯದ ಊಟವಾಗಿದೆ. ಆದರೆ ನೀವು ಅತಿಥಿಗಳನ್ನು ನಿರೀಕ್ಷಿಸುತ್ತಿರುವಲ್ಲಿ ಆಗೇನು? ಆಗ ಗುನ್ಸಾ ವಿಶೇಷವಾದದ್ದಾಗಿರಬೇಕು, ಅವರು ನೆನಪಿಡುವ ಒಂದು ವಿಷಯವಾಗಿರಬೇಕು. ಆದುದರಿಂದ ಅತಿಥೇಯಳು ತನ್ನ ಅಚ್ಚುಮೆಚ್ಚಿನ ಸಾಮಗ್ರಿಯನ್ನು—ಹೊಗೆಯಾಡಿಸಿರುವ ಮೀನು ಅಥವಾ ದನದ ಮಾಂಸದ ಹೊಗೆಯಾಡಿಸಿರುವ ತುಂಡುಗಳು—ಹಾಗೂ ತಾಜಾ, ಮನೆಯಲ್ಲಿ ತಯಾರಿಸಲ್ಪಟ್ಟ ನೆಲಗಡಲೆ ಬೆಣ್ಣೆಯ ದೊಡ್ಡ ಮೊತ್ತದೊಂದಿಗೆ ತುಂಬ ಬೆಳ್ಳುಳ್ಳಿ ಮತ್ತು ನೀರುಳ್ಳಿಗಳನ್ನು ಕೂಡಿಸುವಳು. ಇವೆಲ್ಲವನ್ನು ಒಂದು ದೊಡ್ಡ ಮಡಕೆಯೊಳಗೆ ಹಾಕಲಾಗುತ್ತದೆ. ಉಳಿದ ವಿಧಾನವು ತಾಳ್ಮೆ ಮತ್ತು ತುಂಬ ಕುದಿಸುವಿಕೆಯನ್ನು ಒಳಗೂಡಿಸುತ್ತದೆ.
ಇಂದು ನಮ್ಮ ಅತಿಥೇಯಳು ಗುನ್ಸಾವನ್ನು ಅನ್ನದೊಂದಿಗೆ ಬಡಿಸುವಳು. ಅನ್ನದ ರಾಶಿಯ ಮೇಲೆ ಒಂದು ಅಥವಾ ಎರಡು ಸೌಟುಗಳ ಬಿಸಿಯಾದ ಗುನ್ಸಾ ಸುರಿಯಲ್ಪಟ್ಟಿರುವುದು ಆಫ್ರಿಕದವರಿಗೆ ಮತ್ತು ಅನೇಕ ವಿದೇಶೀಯರಿಗೂ ಆನಂದಕರವಾದ ಒಂದು ವಿಷಯವಾಗಿದೆ. ಸ್ವಲ್ಪ ಖಾರದ ಕರಿಮೆಣಸನ್ನು ಸೇರಿಸಿರಿ, ಮತ್ತು ಈಗ ನಿಮಗೆ ಗುನ್ಸಾ ಏನು ಎಂದು ತಿಳಿದಿದೆ. ಊಟದೊಂದಿಗೆ ಒಂದು ಲೋಟ ದ್ರಾಕ್ಷಾರಸವನ್ನು ಕುಡಿದರೆ, ಅದು ಸ್ವಾದವನ್ನು ಪೂರ್ಣವಾಗಿ ಆನಂದಿಸುವಂತೆ ನಿಮ್ಮನ್ನು ಶಕ್ತರನ್ನಾಗಿ ಮಾಡುವುದು.
ಸ್ವಲ್ಪ ಗೂಕ್ಯಾಸಾ ಅಥವಾ ಕಾಂಡಾವನ್ನು ತಿಂದು ನೋಡುತ್ತೀರೊ?
ದೇಶದ ಪೂರ್ವದಿಂದ ಪಶ್ಚಿಮಕ್ಕೆ ಪ್ರಯಾಣಿಸುತ್ತಾ, ಜನರು ಗುನ್ಸಾವನ್ನು ವಿವಿಧ ರೀತಿಗಳಲ್ಲಿ ತಯಾರಿಸುತ್ತಾರೆಂದು ನೀವು ಕಂಡುಕೊಳ್ಳುವಿರಿ. ಮತ್ತು ಗೂಕ್ಯಾಸಾದ ಕುರಿತಾಗಿ ಏನು? ಚಳಿಯಾದ ಒಂದು ಮಳೆಗಾಲದ ದಿನದಂದು, ತೋಟ ಅಥವಾ ಗದ್ದೆಯಲ್ಲಿರುವ ಎಲ್ಲದರೊಂದಿಗೆ ಬೇಯಿಸಲ್ಪಡುವ ಒಂದು ಎಸರು ಅಥವಾ ತಿಳಿಸಾರು ಆಗಿರುವ ಗೂಕ್ಯಾಸಾ, ನಿಮಗೆ ತಕ್ಕದಾದ ಸಂಗತಿಯಾಗಿರಬಹುದು. ತಾಳೆಎಣ್ಣೆ, ಬಾಳೆಹಣ್ಣುಗಳು, ನೆಲಗಡಲೆಗಳು, ಮರಗೆಣಸುಗಳು, ಜೋಳ (ಮೇಸ್), ಮತ್ತು ನಿಶ್ಚಯವಾಗಿಯೂ ಕೆಲವು ಕಸಾವಾ ಎಲೆಗಳು ಎಲ್ಲವೂ ಜೊತೆಯಾಗಿ ಬೇಯಿಸಲ್ಪಡುತ್ತವೆ, ಆದರೆ ಯಾವುದೇ ಉಪ್ಪು—ಒಂದೇ ಒಂದು ಉಪ್ಪಿನ ಕಣವನ್ನು—ಸೇರಿಸಲಾಗುವುದಿಲ್ಲ. ಅದೇ ಗುಟ್ಟು ಆಗಿದೆ! ಮುಗಿಸಲ್ಪಟ್ಟ ಭಕ್ಷ್ಯವು ರಸವತ್ತಾದದ್ದೂ ಪುಷ್ಟಿಕರವೂ ಆಗಿರುತ್ತದೆ. ಮತ್ತು ನೀವು ಒಂದು ದೀರ್ಘವಾದ ಪ್ರಯಾಣದಲ್ಲಿ ಹೋಗುತ್ತಿರುವಲ್ಲಿ, ಸ್ವಲ್ಪ ಕಾಂಡಾವನ್ನು ತೆಗೆದುಕೊಂಡು ಹೋಗಿರಿ. ಇದು ಹೊಗೆಯಾಡಿಸಲ್ಪಟ್ಟ ಮೀನು ಅಥವಾ ಮಾಂಸದೊಂದಿಗೆ ಪುಡಿ ಮಾಡಲ್ಪಟ್ಟ ಕಸಾವಾ ಎಲೆಗಳಿಂದ ತಯಾರಿಸಲಾಗಿದೆ. ಈ ಮಿಶ್ರಣವನ್ನು ಎಲೆಗಳಲ್ಲಿ ಸುತ್ತಿ ಹಲವಾರು ತಾಸುಗಳ ವರೆಗೆ, ಅದು ಗಟ್ಟಿ ಮತ್ತು ಒಣಗುವ ತನಕ ಬೆಂಕಿಯ ಮೇಲೆ ಹೊಗೆಯಾಡಿಸುವ ಮೂಲಕ ಕಾಂಡಾವನ್ನು ತಯಾರಿಸಲಾಗುತ್ತದೆ. ಅದನ್ನು ಹಲವಾರು ದಿನಗಳ ವರೆಗೆ ಇಡಬಹುದು ಮತ್ತು ಒಂದು ತುಂಡು ಬ್ರೆಡ್ಡಿನೊಂದಿಗೆ ಆನಂದಿಸಲ್ಪಡಸಾಧ್ಯವಿದೆ. ಅದು ಪಯಣಿಗರಿಗಾಗಿ ಸೂಕ್ತವಾಗಿದೆ.
ನೀವು ಎಂದಾದರೂ ಆಫ್ರಿಕಕ್ಕೆ ಭೇಟಿ ನೀಡುವಲ್ಲಿ, ಕಸಾವಾಕ್ಕಾಗಿ ಏಕೆ ಕೇಳಬಾರದು? ಅದನ್ನು ರುಚಿಸಿ ನೋಡಿ ಮತ್ತು ಅದನ್ನು ಆನಂದಿಸುವ ಕೋಟಿಗಟ್ಟಲೆ ಮಂದಿಯೊಂದಿಗೆ ಜೊತೆಗೂಡಿರಿ!