ರಬ್ಬರ್ ರಸ ಇಳಿಸುವಿಕೆ ನಿಮ್ಮ ಜೀವನವನ್ನು ಸ್ಪರ್ಶಿಸುವ ಒಂದು ಕೆಲಸ
ನೈಜೀರಿಯದ ಎಚ್ಚರ! ಸುದ್ದಿಗಾರರಿಂದ
ಬೆಳಗ್ಗೆ ಐದು ಗಂಟೆಗೆ, ನೈಜೀರಿಯದ ಮಳೆಕಾಡು ಕತ್ತಲಾಗಿಯೂ ತಂಪಾಗಿಯೂ ಇದೆ. ಕಾಡಿನ ಮಧ್ಯೆ ಒಂದು ಮಣ್ಣಿಟ್ಟಿಗೆಯ ಮನೆಯಲ್ಲಿ, ಜಾನ್ ಎಚ್ಚತ್ತುಕೊಂಡು ತನ್ನ ಬಟ್ಟೆಗಳನ್ನು ಧರಿಸಿಕೊಳ್ಳುತ್ತಾನೆ. ಬಳಿಕ ಅವನು ಒಂದು ಲಾಂದ್ರ, ಒಂದು ಪ್ಲ್ಯಾಸ್ಟಿಕ್ ತೊಟ್ಟಿ, ಮತ್ತು ಬಾಗಿದ ಅಲಗಿನ ಒಂದು ಸಣ್ಣ ಚಾಕು—ಇವುಗಳನ್ನು ಹಿಡಿದುಕೊಂಡು ರಾತ್ರಿಯೊಳಗೆ ಹೋಗಿಬಿಡುತ್ತಾನೆ. ಮುಂದಿನ ನಾಲ್ಕು ತಾಸುಗಳಲ್ಲಿ ಅವನು, ಪ್ರತಿಯೊಂದು ಮರದ ತೊಗಟೆಯಲ್ಲಿ ಕೆಳಬಗ್ಗಿದ ಕತ್ತಿ ಕೊಯ್ತಗಳನ್ನು ಮಾಡುತ್ತ, ಮರದಿಂದ ಮರಕ್ಕೆ ಹೋಗುತ್ತಾನೆ.
ನಿಮ್ಮ ಜೀವನವನ್ನು ಕೊನೆಗೆ ಸ್ಪರ್ಶಿಸಬಹುದಾದ ಸಂಭವಗಳ ದೀರ್ಘ ಶ್ರೇಣಿಯಲ್ಲಿ ಇದು ಪ್ರಥಮ ಸಂಭವ. ಅದು ಹೇಗೆ? ಏಕೆಂದರೆ ಜಾನ್ ಕೊಯ್ತ ಮಾಡುತ್ತಿರುವ ಮರಗಳು ರಬ್ಬರ್ ಮರಗಳು. ಮತ್ತು ಪೆನ್ಸಿಲ್ ಕಲೆಗಳನ್ನು ರಬ್ಮಾಡುವ (ಉಜ್ಜುವ) ಸಾಮರ್ಥ್ಯದ ಕಾರಣ ಹಾಗೆಂದು ಕರೆಯಲ್ಪಡುವ ರಬ್ಬರ್, ನಮ್ಮ ಅತಿ ಬೆಲೆಬಾಳುವ ಮತ್ತು ವ್ಯಾಪಕವಾಗಿ ಬಳಸಲಾಗುತ್ತಿರುವ ಸಂಪನ್ಮೂಲಗಳಲ್ಲಿ ಒಂದಾಗಿದೆ.
ಸಾವಿರಾರು ಉತ್ಪನ್ನಗಳು
ನಿಮ್ಮ ಜೀವನದಲ್ಲಿ ರಬ್ಬರ್ ವಹಿಸುವ ಪಾತ್ರದ ಕುರಿತು ತುಸು ಯೋಚಿಸಿರಿ. ನಿಮ್ಮ ಪಾದರಕ್ಷೆಗಳ ಅಟ್ಟೆಗಳು ಮತ್ತು ಹಿಮ್ಮಡಿಗಳು ರಬ್ಬರ್ನಿಂದ ಮಾಡಲ್ಪಟ್ಟಿರಬಹುದು. ನಿಮ್ಮ ಹಾಸುಗಂಬಳಿಯ ಹಿಂಪದರ ಮತ್ತು ಪೀಠೋಪಕರಣಗಳಲ್ಲಿ ಬುರುಗು (ಫೋಮ್) ರಬ್ಬರ್ ಇರಬಹುದು. ನಿಮ್ಮ ಬಟ್ಟೆಯಲ್ಲಿರುವ ಹಿಗ್ಗುದಾರವು ರಬ್ಬರಿನಿಂದ ಮಾಡಲ್ಪಟ್ಟಿರಬಹುದು. ಮಳೆಗರೆಯುತ್ತಿರುವಾಗ, ನೀವು ರಬ್ಬರಿನಿಂದ ಮಾಡಿದ ರೆಯ್ನ್ಕೋಟ್ ಮತ್ತು ಬೂಟ್ಸ್ಗಳನ್ನು ತೆಗೆದುಕೊಳ್ಳಲು ಕೈಚಾಚಬಹುದು. ಈಜಲು ಹೋಗುತ್ತಿದ್ದೀರೊ? ವೆಟ್ ಸೂಟ್ಗಳು, ದೊಡ್ಡ ಕನ್ನಡಕಗಳು ಮತ್ತು ಈಜುರೆಕ್ಕೆಗಳಲ್ಲಿ ರಬ್ಬರಿದೆ. ನೀವು ಈಜಲು ಬಯಸುವುದಿಲ್ಲವೊ? ರಬ್ಬರಿನ ತೆಪ್ಪದ ಮೇಲೆ ಕೇವಲ ತೇಲಾಡಲು ಅಥವಾ ರಬ್ಬರ್ ಕರೆ ಚೆಂಡಿನೊಂದಿಗೆ ಆಡಲು ನೀವು ಪ್ರಾಯಶಃ ಇಷ್ಟಪಡುತ್ತೀರಿ. ನಿಮ್ಮ ಮನೆಯಲ್ಲಿ ಅಲ್ಲಿಲ್ಲಿ ಪ್ರಾಯಶಃ ರಬ್ಬರ್ ಪಟ್ಟಿಗಳು, ಉಜ್ಜಿಹಾಕುವ ರಬ್ಬರ್ ಮತ್ತು ರಬ್ಬರ್ ಅಂಟು ಇದೆ. ನೀವು ಈ ರಾತ್ರಿ ಮಲಗುವಾಗ, ರಬ್ಬರ್ ಉತ್ಪನ್ನಗಳಿಂದ ಮಾಡಿರುವ ಹಾಸಿಗೆ ಮತ್ತು ತಲೆದಿಂಬಿನ ಮೇಲೆ ನಿದ್ರಿಸಬಹುದು. ನಿಮಗೆ ಚಳಿಯಾಗುವುದಾದರೆ, ರಬ್ಬರಿನಿಂದ ಮಾಡಿರುವ ಬಿಸಿನೀರ ಸೀಸೆಯನ್ನು ನೀವು ಅಪ್ಪಿಕೊಳ್ಳಬಹುದು.
ಈ ಎಲ್ಲ ವಿಷಯಗಳಲ್ಲದೆ, ಅನೇಕ ಉತ್ಪನ್ನಗಳು ರಬ್ಬರಿನ ಭಾಗ—ವಾಷರ್ ಉಂಗುರಗಳು, ಬೆಲ್ಟ್ ಪಟ್ಟಿಗಳು, ಗ್ಯಾಸ್ಕೆಟ್ ತೆಳುಹಾಳೆ, ನೀರ್ಕೊಳವಿಗಳು, ಉರುಳೆಗಳು ಅಥವಾ ವ್ಯಾಲ್ವ್ ಕವಾಟಗಳು—ಗಳಿಲ್ಲದೆ ಖಂಡಿತವಾಗಿಯೂ ಒಳ್ಳೆಯದಾಗಿ ಕೆಲಸ ಮಾಡಲಾರವು. ಉದಾಹರಣೆಗೆ, ಒಂದು ಕಾರಿನಲ್ಲಿ ಸಾಮಾನ್ಯವಾಗಿ ಸುಮಾರು 600 ರಬ್ಬರ್ ಭಾಗಗಳಿವೆ. ದ ವರ್ಲ್ಡ್ ಬುಕ್ ಎನ್ಸೈಕ್ಲೊಪೀಡಿಯಕ್ಕನುಸಾರ, ಒಟ್ಟಿನಲ್ಲಿ 40,000ದಿಂದ 50,000 ರಬ್ಬರ್ ಉತ್ಪನ್ನಗಳು ತಯಾರಿಸಲ್ಪಡುತ್ತವೆ.
ರಬ್ಬರನ್ನು ಅಷ್ಟು ಉಪಯುಕ್ತವಾಗಿ ಮಾಡುವುದು ಯಾವುದು? ಅದು ದೀರ್ಘ ಬಾಳಿಕೆಯದ್ದೂ, ಕಾವುನಿರೋಧಕವೂ, ಸ್ಥಿತಿಸ್ಥಾಪಕ ಗುಣದ್ದೂ, ಜಲನಿರೋಧಕವೂ, ಗಾಳಿ ತೂರದ್ದೂ, ವಿದ್ಯುಡ್ಡಕ್ಕೆ ಲೀನಕಾರಿಯೂ ಆಗಿದೆ. ಟಯರನ್ನು—ಸೈಕಲಿನ ಇಲ್ಲವೆ ಮೋಟಾರು ವಾಹನದ ಇಲ್ಲವೆ ವಿಮಾನದ ಟಯರನ್ನು—ಗಮನಕ್ಕೆ ತಂದುಕೊಳ್ಳಿರಿ. ಅದು ರಬ್ಬರಿನದ್ದಾದ ಕಾರಣ, ರಸ್ತೆಯೊಂದಿಗಿನ ಸತತ ಸಂಪರ್ಕದಿಂದಾಗಿ ಬೇಗನೆ ಸವೆಯುವುದೂ ಇಲ್ಲ, ಅದರ ಸತತ ಘರ್ಷಣೆಯಿಂದಾಗಿ ಸುಟ್ಟುಹೋಗುವುದೂ ಇಲ್ಲ. ನೀರಿನ ಹೊಂಡಗಳಿರುವ ರಸ್ತೆಗಳಲ್ಲಿ ವಾಹನ ನಡೆಸುವಾಗ, ಟಯರ್ ನೆನೆದು ಹೋಗಿ ಕೊಳೆಯುವುದೆಂದು ನೀವು ಭಯಪಡುವ ಅವಶ್ಯವಿಲ್ಲ; ಅದು ತಿಂದುಹೋಗುವುದೂ ಇಲ್ಲ. ನೀರು ಟಯರಿನೊಳಗೆ ಹೋಗುವುದನ್ನು ರಬ್ಬರ್ ತಡೆಯುತ್ತದೆ ಮಾತ್ರವಲ್ಲ, ಅದು ಒಳಗಿರುವ ಒತ್ತಡಕ್ಕೊಳಗಾಗಿರುವ ಗಾಳಿಯನ್ನು ಹೊರಬರುವುದರಿಂದ ತಡೆಯುತ್ತದೆ. ಇದಲ್ಲದೆ, ನೀವು ಮುಂದೆ ಸರಿಯುವಾಗ, ನಿಮ್ಮ ಟಯರುಗಳಲ್ಲಿರುವ ಆಘಾತ ಲೀನಕಾರಿ ಸ್ವಭಾವವು ರಸ್ತೆಯಲ್ಲಿರುವ ಉಬ್ಬುಗಳಿಂದ ನಿಮಗೆ ರಕ್ಷಣೆಕೊಡಲು ಸಹಾಯಮಾಡುತ್ತದೆ. ನಿಜವಾಗಿಯೂ, ರಬ್ಬರ್ ಇಲ್ಲದೆ, ತಯಾರಕರಿಗೆ ಒಂದು ಟಯರನ್ನು ತಯಾರಿಸುವುದು ಕಷ್ಟಕರವಾಗಿರುವುದು.
ಹಾಗಾದರೆ, ಜಾನ್ನಂತಹ ರಬ್ಬರ್ ರಸ ಇಳಿಸುವವರು, ನಮ್ಮ ಜೀವನವನ್ನು ಸಕಾರಾತ್ಮಕವಾಗಿ ಸ್ಪರ್ಶಿಸುವ ಒಂದು ಬೆಲೆಬಾಳುವ ಸೇವೆಯನ್ನು ಒದಗಿಸುತ್ತಾರೆಂಬುದನ್ನು ನೀವು ಪ್ರಾಯಶಃ ಒಪ್ಪುವಿರಿ. ಆದರೆ ಎಲ್ಲ ರಬ್ಬರ್, ಮರಗಳಿಂದ ಬರುವುದಿಲ್ಲ ನಿಶ್ಚಯ. ರಾಸಾಯನಿಕಗಳಿಂದ ಉತ್ಪಾದಿಸಲ್ಪಡುವ ಕೃತಕ ರಬ್ಬರ್, ಉದ್ಯಮದಲ್ಲಿ ದೊಡ್ಡ ಪಾಲನ್ನು ತೆಗೆದುಕೊಳ್ಳುತ್ತದೆ. ಎರಡು ವಿಧಗಳ ರಬ್ಬರಿನಲ್ಲಿಯೂ ಅದರದರ ಸಾಮರ್ಥ್ಯಗಳೂ ಬಲಹೀನತೆಗಳೂ ಇವೆ. ಅನೇಕ ಉತ್ಪನ್ನಗಳು ಎರಡನ್ನೂ ಉಪಯೋಗಿಸಬಲ್ಲವು, ಮತ್ತು ಆಯ್ಕೆಯು ಅನೇಕ ವೇಳೆ ಪ್ರಚಲಿತ ಬೆಲೆಯಿಂದ ನಿರ್ಧರಿಸಲ್ಪಡುತ್ತದೆ. ಇತರ ಉತ್ಪನ್ನಗಳು ಕೃತಕ ಮತ್ತು ನೈಸರ್ಗಿಕ ರಬ್ಬರಿನ ಮಿಶ್ರಣವನ್ನು ಬಳಸುತ್ತವೆ. ಹೆಚ್ಚಿನ ಮೋಟಾರು ವಾಹನ ಟಯರ್ಗಳಲ್ಲಿ ನೈಸರ್ಗಿಕ ರಬ್ಬರಿಗಿಂತ ಹೆಚ್ಚು ಕೃತಕ ರಬ್ಬರ್ ಸೇರಿದೆ. ಆದರೂ, ಕೃತಕ ರಬ್ಬರು ಕಾವು ಜಾಸ್ತಿಯಾಗುವಿಕೆಗೆ ಕಡಮೆ ನಿರೋಧಕವಾಗಿರುವುದರಿಂದ, ರೇಸಿಂಗ್ ಕಾರುಗಳು, ಟ್ರಕ್ಕುಗಳು, ಬಸ್ಸುಗಳು ಮತ್ತು ವಿಮಾನಗಳ ಟಯರುಗಳಲ್ಲಿ, ನೈಸರ್ಗಿಕ ರಬ್ಬರಿನ ಹೆಚ್ಚಿನ ಪ್ರಮಾಣವನ್ನು ಬಳಸಲಾಗುತ್ತದೆ.
ಮರದಿಂದ ರಸ ಇಳಿಸುವಿಕೆ
ರಬ್ಬರ್ ಮರಗಳು ಭೂಮಧ್ಯ ರೇಖೆಯ ಹತ್ತಿರದ ಬಿಸಿಯಾದ, ಒದ್ದೆ ಹವಾಮಾನಗಳಲ್ಲಿ ಅತಿ ಒಳ್ಳೆಯದಾಗಿ ಬೆಳೆಯುತ್ತವೆ. ಲೋಕದ ಹೆಚ್ಚಿನ ನೈಸರ್ಗಿಕ ರಬ್ಬರು, ಆಗ್ನೇಯ ಏಷಿಯದಿಂದ, ವಿಶೇಷವಾಗಿ ಮಲೇಷಿಯ ಮತ್ತು ಇಂಡೊನೇಷಿಯದ ತೋಪುಗಳಿಂದ ಬರುತ್ತದೆ. ಉಳಿದದ್ದು ದಕ್ಷಿಣ ಅಮೆರಿಕ ಹಾಗೂ ಪಶ್ಚಿಮ ಮತ್ತು ಮಧ್ಯ ಆಫ್ರಿಕದಿಂದ ಬರುತ್ತದೆ.
ಮರವು ಸುಮಾರು ಆರು ವರ್ಷ ವಯಸ್ಸಿನದ್ದಾಗುವ ತನಕ ಜಾನ್ ಅದರ ರಸವನ್ನು ಇಳಿಸುವುದಿಲ್ಲ. ಆ ಬಳಿಕ, ಆ ಮರವು ಮುಂದಿನ 25ರಿಂದ 30 ವರ್ಷಗಳಲ್ಲಿ ರಬ್ಬರನ್ನು ಉತ್ಪಾದಿಸಿ, ಸುಮಾರು 20 ಮೀಟರ್ಗಳಷ್ಟು ಎತ್ತರಕ್ಕೆ ಬೆಳೆಯುವುದು. ರಬ್ಬರ್ ಮರವು ಉತ್ಪಾದಿಸುವುದರಿಂದ “ನಿವೃತ್ತಿ” ಹೊಂದಿದಾಗ, ಅದು 40 ಮೀಟರ್ಗಳಷ್ಟು ಎತ್ತರಕ್ಕೆ ಬೆಳೆಯುತ್ತ ಮುಂದುವರಿದು, 100 ವರ್ಷಗಳ ಅಥವಾ ಅದಕ್ಕಿಂತ ಹೆಚ್ಚು ವರ್ಷಗಳ ಮುಪ್ಪಿನ ವರೆಗೆ ಜೀವಿಸಬಹುದು.
ಮರದಿಂದ ನೇರವಾಗಿ ಬರುವ ರಬ್ಬರ್, ಕಾರಿನ ಟಯರಿನಂತಲ್ಲ, ಬದಲಾಗಿ ಹೆಚ್ಚಾಗಿ ಹಾಲಿನಂತೆ ತೋರುತ್ತದೆ. ಲೇಟೆಕ್ಸ್ (ಕಚ್ಚಾ ರಬ್ಬರ್) ಎಂದು ಕರೆಯಲ್ಪಡುವ ಈ ಹಾಲಿನಂತಹ ಪದಾರ್ಥದಲ್ಲಿ ರಬ್ಬರಿನ ಸೂಕ್ಷ್ಮ ಕಣಗಳಿವೆ. ಲೇಟೆಕ್ಸ್ನ ಸುಮಾರು 35 ಪ್ರತಿಶತ ರಬ್ಬರಾಗಿದೆ. ಉಳಿದದ್ದು ಹೆಚ್ಚಾಗಿ ನೀರೇ.
ಲೇಟೆಕ್ಸ್ ರಸ ಇಳಿಸಲು, ಜಾನ್ ತೊಗಟೆಯಲ್ಲಿ ಓರೆಯಾದ ಕೊಯ್ತವನ್ನು ಮಾಡುತ್ತಾನೆ. ಈ ಕೊಯ್ತವು ಮರದ ಸುತ್ತಲೂ ಅರ್ಧಕ್ಕೆ ವಿಸ್ತರಿಸುತ್ತದೆ. ಅವನು ಕೊಯ್ತವನ್ನು ತೀರ ಆಳವಾಗಿ ಮಾಡದಿರಲು ಜಾಗರೂಕನಾಗಿರುತ್ತಾನೆ, ಏಕೆಂದರೆ ಅದು ಮರಕ್ಕೆ ಹಾನಿ ಮಾಡೀತು. ಕೊಯ್ತ ಮಾಡಿದ ಮೇಲೆ, ಒಡನೆ ಲೇಟೆಕ್ಸ್ ಹರಿಯಲು ಆರಂಭಗೊಳ್ಳುತ್ತದೆ; ಅದು ಕೊಯ್ತವು ಮಾಡಿದ ತೋಡಿನುದ್ದಕ್ಕೂ ಹರಿದು, ಜಾನ್ ಮರಕ್ಕೆ ಸಿಕ್ಕಿಸಿರುವ ಬಿದಿರಿನ ಪಾತ್ರೆಯೊಳಗೆ ಬರಿದಾಗುತ್ತದೆ. ಆ ಹರಿವು ಎರಡೊ ಮೂರೊ ತಾಸುಗಳ ತನಕ ಹರಿಯುವುದನ್ನು ಮುಂದುವರಿಸುತ್ತದೆ; ಬಳಿಕ ಅದು ನಿಲ್ಲುತ್ತದೆ.
ಒಂದೊ ಎರಡೊ ದಿನಗಳ ಬಳಿಕ, ಜಾನ್ ಇನ್ನೊಮ್ಮೆ ಮರದ ರಸ ಇಳಿಸುವಾಗ, ಅವನು ಮೊದಲನೆಯದ್ದರ ತುಸು ಕೆಳಗೆ ಇನ್ನೊಂದು ಕೊಯ್ತವನ್ನು ಮಾಡುವನು. ಮುಂದಿನ ಸಲ ಅವನು ಅದರ ಕೆಳಗೆ ಕೊಯ್ತವನ್ನು ಮಾಡುವನು. ಕೊನೆಗೆ, ಮರದ ತೊಗಟೆಯಿಂದ ಒಂದು ಬಿಲ್ಲೆಯನ್ನು ಕಡಿಯಲಾಗುತ್ತದೆ. ಈಗ ಜಾನ್ ಆ ಮರದ ಇನ್ನೊಂದು ಭಾಗದಿಂದ ರಸ ಇಳಿಸಲು ತೊಡಗುವನು; ಭಾವೀ ಸಮಯದಲ್ಲಿ ರಸ ಇಳಿಸುವುದಕ್ಕಾಗಿ ಆ ಬಿಲ್ಲೆಯು ಪೂರ್ತಿಯಾಗಿ ವಾಸಿಯಾಗುವಂತೆ ಬಿಡುವನು.
ಜಾನ್, ಆ ನಿಶ್ಶಬ್ದವಾದ ವನದಲ್ಲಿ ಒಂಟಿಯಾಗಿ ಚಲಿಸುತ್ತ, ಮರಗಳು ಲೇಟೆಕ್ಸನ್ನು ಹರಿಸುವಂತೆ ಕೊಯ್ಯುತ್ತ, ಬೇಗನೆ ಕೆಲಸ ಮಾಡುತ್ತಾನೆ. ತರುವಾಯ, ಅವನು ಪ್ರತಿಯೊಂದು ಮರಕ್ಕೆ ಪುನರ್ಭೇಟಿಮಾಡಿ, ಶೇಖರವಾಗಿರುವ ಲೇಟೆಕ್ಸನ್ನು ತನ್ನ ತೊಟ್ಟಿಯಲ್ಲಿ ಸಂಗ್ರಹಿಸುತ್ತಾನೆ. ಅನಂತರ, ಜಾನ್ ಲೇಟೆಕ್ಸಿಗೆ ಫಾರ್ಮಿಕ್ ಆ್ಯಸಿಡ್ ಮತ್ತು ನೀರನ್ನು ಸೇರಿಸುತ್ತಾನೆ. ಸಿರ್ಕವು ಹಾಲನ್ನು ಹೇಗೆ ಗರಣೆಯಾಗಿಸುತ್ತದೊ ಹಾಗೆಯೇ ಇದೂ ಹೆಪ್ಪುಗಟ್ಟಿಸುತ್ತದೆ. ಆಮೇಲೆ ಜಾನ್, ಲೇಟೆಕ್ಸ್ನ ತೊಟ್ಟಿಯನ್ನು ತನ್ನ ತಲೆಯ ಮೇಲೆ ಹೊತ್ತುಕೊಂಡು ಮುಖ್ಯ ಬೀದಿಗೆ ಬರುತ್ತಾನೆ; ಅಲ್ಲಿ ಹತ್ತಿರದ ರಬ್ಬರ್ ಪರಿವರ್ತನಾ ಕಾರ್ಖಾನೆಯ ಟ್ರಕ್ಕೊಂದು ಅದನ್ನು ಸಂಗ್ರಹಿಸುತ್ತದೆ.
ಈಗ ಜಾನ್ ಸ್ನಾನ, ಊಟ ಮತ್ತು ವಿಶ್ರಾಂತಿಗಾಗಿ ಮನೆಗೆ ಹಿಂದಿರುಗುತ್ತಾನೆ. ಅಪರಾಹ್ಣಾಂತ್ಯದಲ್ಲಿ, ಅವನು ಪುನಃ ಮನೆ ಬಿಟ್ಟುಹೋಗುವಾಗ, ಅವನು ಅಚ್ಚುಕಟ್ಟಾದ ಉಡುಪು ಧರಿಸಿ, ಕೈಯಲ್ಲಿ ಬ್ರೀಫ್ಕೇಸ್ ಅನ್ನು ಹಿಡಿದಿರುತ್ತಾನೆ. ಈ ಸಮಯದಲ್ಲಾದರೊ, ಅವನು ಹೋಗುತ್ತಿರುವುದು ಮರದಿಂದ ಮರಕ್ಕಲ್ಲ, ಮನೆಯಿಂದ ಮನೆಗೆ. ಕ್ರಮದ ಪಯನೀಯರ್ ಶುಶ್ರೂಷಕನಾದ ಜಾನ್ಗೆ, ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ಪೂರ್ತಿ ಭಾಗವಿದೆ.
ಜಾನ್ ಆ ದಿನದ ತನ್ನ ಪ್ರಥಮ ಬೈಬಲ್ ಅಧ್ಯಯನವನ್ನು ನಡೆಸುತ್ತಿರುವಾಗ, ಅವನು ಶೇಖರಿಸಿದ್ದ ಲೇಟೆಕ್ಸ್ ಪರಿವರ್ತನಾ ಕಾರ್ಖಾನೆಗೆ ಮುಟ್ಟಿರುವುದು. ಅಲ್ಲಿ ರಬ್ಬರನ್ನು ನೀರಿನಿಂದ ಪ್ರತ್ಯೇಕಿಸಿ, ಒಣಗಿಸಿ, ರವಾನಿಸಲಿಕ್ಕಾಗಿ ಮೂಟೆಗಳಾಗಿ ಅಡಚಲಾಗುವುದು. ಬೇಗನೆ ಅದು ಇಂಗ್ಲೆಂಡಿಗೊ, ಜಪಾನಿಗೊ, ಅಮೆರಿಕಕ್ಕೊ ಹೋಗಲು ಸಿದ್ಧವಾಗಿರುವುದು. ಜಗದ್ವ್ಯಾಪಕವಾದ ನೈಸರ್ಗಿಕ ರಬ್ಬರ್ ಉದ್ಯಮವು, ಪ್ರತಿ ವರ್ಷ ಐವತ್ತು ಲಕ್ಷ ಟನ್ನುಗಳಿಗಿಂತಲೂ ಹೆಚ್ಚು ರಬ್ಬರನ್ನು ಉತ್ಪಾದಿಸುತ್ತದೆ. ಅದು ಅಸಂಭವವಾಗಿರುವುದಾದರೂ, ನಿಮ್ಮ ಮುಂದಿನ ಪಾದರಕ್ಷೆಗಳ ಜೊತೆಯ ಅಟ್ಟೆಗಳು, ಜಾನ್ ರಸ ಇಳಿಸಿದ ಮರದಿಂದ ಬರುವ ಸಂಭಾವ್ಯತೆ ಇದೆ.
[ಪುಟ 23 ರಲ್ಲಿರುವ ಚಿತ್ರ]
ರಬ್ಬರ್ ಮರಗಳಿಂದ ರಸ ಇಳಿಸುತ್ತಿರುವ ತನ್ನ ಕೆಲಸದಲ್ಲಿ ಮಗ್ನನಾಗಿರುವ ಜಾನ್
[ಪುಟ 25 ರಲ್ಲಿರುವ ಚಿತ್ರ]
ಜಾನ್ ಕ್ರೈಸ್ತ ಶುಶ್ರೂಷೆಯಲ್ಲಿ ಭಾಗವಹಿಸುತ್ತಾನೆ