‘ತೊದಲುಮಾತಿನವರ ನಾಲಿಗೆಯೂ ನುಡಿಯುವದು’
ಚೆಕೊಸ್ಲೊವಾಕಿಯ (ಈಗ ಚೆಕ್ ರಿಪಬ್ಲಿಕ್)ದಲ್ಲಿನ ಯೆಹೋವನ ಸಾಕ್ಷಿಗಳ ವಿಶೇಷ ಸಮ್ಮೇಳನ ದಿನವೊಂದರ ಅಪರಾಹ್ಣದ ಕಾರ್ಯಕ್ರಮವು ಅದಾಗಿತ್ತು. ಮತ್ತು ಬೈಬಲ್ ಉಪದೇಶವನ್ನು ಪಡೆದುಕೊಳ್ಳಲು ನೂರಾರು ಮಂದಿ ಒಟ್ಟುಗೂಡಿದ್ದರು. ನಾನು ನನ್ನ ಭಾಗವನ್ನು ಪುನರ್ವಿಮರ್ಶಿಸುತ್ತಾ ವೇದಿಕೆಯ ಹಿಂಭಾಗದಲ್ಲಿ ನಿಂತಿದ್ದೆ. ಅದು ಒಂದು ಪ್ರಮುಖ ಭಾಗವೇನೂ ಆಗಿರಲಿಲ್ಲ. ಇಬ್ಬರು ಯುವ ಸಾಕ್ಷಿಗಳು ಅನುಭವಗಳನ್ನು ಹೇಳಲಿದ್ದರು, ಮತ್ತು ಆ ಭಾಗಕ್ಕಾಗಿ ಕೇವಲ ಸಭಾಧ್ಯಕ್ಷನೋಪಾದಿ ನಾನು ಕಾರ್ಯನಿರ್ವಹಿಸಬೇಕಾಗಿತ್ತು. ಆ ಬೆಳಗ್ಗೆ ನನಗೆ ಆಂತರಿಕ ಒತ್ತಡದ ಅನಿಸಿಕೆ ಆಯಿತು, ಮತ್ತು ಈಗ ಅದು ಹೆಚ್ಚಾಗುತ್ತಾ ಇತ್ತು. ಅಕ್ಷರಾರ್ಥಕವಾಗಿ ನಿಸ್ಸತ್ವಗೊಳಿಸಲ್ಪಟ್ಟು, ವಿಪರೀತವಾಗಿ ಚಿಂತೆಗೊಂಡು, ಮಾತಾಡಲು ಅಶಕ್ತವಾದ ಅನಿಸಿಕೆಯು ನನಗಾಯಿತು.
ಇಂಥ ಒಂದು ಸನ್ನಿವೇಶದಲ್ಲಿ ಬಹುಮಟ್ಟಿಗೆ ಪ್ರತಿಯೊಬ್ಬರೂ ಪುಕ್ಕಲು ಸ್ವಭಾವದವರಾಗಿರುವರೆಂದು ನೀವು ಆಲೋಚಿಸಬಹುದು. ಆದರೆ ಇದು ಬರಿಯ ಪುಕ್ಕಲು ಸ್ವಭಾವಕ್ಕಿಂತಲೂ ಹೆಚ್ಚಿನ ವಿಷಯವಾಗಿತ್ತು. ಏಕೆಂದು ನಾನು ವಿವರಿಸುತ್ತೇನೆ.
ನನ್ನ ಮಾತಾಡುವಿಕೆಯ ಸಮಸ್ಯೆ
12 ವರ್ಷ ಪ್ರಾಯದಲ್ಲಿ, ನಾನು ಬಿದ್ದು, ನನ್ನ ತಲೆ, ಕತ್ತು, ಮತ್ತು ಬೆನ್ನೆಲುಬನ್ನು ಘಾಸಿಮಾಡಿಕೊಂಡೆ. ಅದಾದ ನಂತರ, ನಾನು ಆಗಾಗ್ಗೆ ತೊದಲುತ್ತಿದ್ದೆ ಅಥವಾ ವಿಶೇಷವಾಗಿ ಪಿ, ಕೆ, ಟಿ, ಡಿ, ಮತ್ತು ಎಮ್, ಅಕ್ಷರಗಳಿಂದ ಪ್ರಾರಂಭವಾಗುವ ಪದಗಳನ್ನು ರಚಿಸುವುದರಲ್ಲಿ ಕಷ್ಟವನ್ನು ಹೊಂದಿದ್ದೆ. ಕೆಲವೊಮ್ಮೆ ನನಗೆ ಮಾತಾಡಲು ಕೂಡ ಆಗುತ್ತಿರಲಿಲ್ಲ.
ಆ ಸಮಯದಲ್ಲಿ ಸಮಸ್ಯೆಯು ನನಗೆ ಅಷ್ಟೊಂದು ಹೆಚ್ಚಾಗಿ ತೊಂದರೆಯನ್ನು ಉಂಟುಮಾಡಲಿಲ್ಲ; ಅದು ಬರಿಯ ಒಂದು ಅನನುಕೂಲತೆಯಾಗಿ ತೋರಿತು. ಆದರೆ ವರ್ಷಗಳು ಗತಿಸಿದಂತೆ, ಯಾವುದೇ ವಿಧದ ಸಾರ್ವಜನಿಕ ಮಾತಾಡುವಿಕೆಯ ಕುರಿತು ನಿಜವಾದ ಭಯವನ್ನು ನಾನು ವಿಕಸಿಸಿಕೊಂಡೆ. ಒಮ್ಮೆ ಶಾಲೆಯಲ್ಲಿ ವರದಿಯೊಂದನ್ನು ನೀಡುತ್ತಿರುವಾಗ ನಾನು ಮೂರ್ಛೆಹೋದೆ. ಮತ್ತು ಕೆಲವೊಮ್ಮೆ ನಾನು ಶಾಪಿಂಗ್ ಮಾಡುತ್ತಿರುವಾಗ, ಮಾರಾಟಗಾರರು ನನಗೆ ಏನು ಬೇಕೆಂದು ಕೇಳುವಾಗ, ಅವರಿಗೆ ಉತ್ತರವನ್ನೀಯಲು ನನಗೆ ಸಾಧ್ಯವಾಗುತ್ತಿರಲಿಲ್ಲ. ನಾನು ಮಾತಾಡಲು ಒದ್ದಾಡುತ್ತಾ ನಿಂತಿದ್ದ ಹಾಗೆ, ಅವರ ಸಿಟ್ಟು ಹೆಚ್ಚುತ್ತಿತ್ತು: “ಬೇಗ ಹೇಳು. ದಿನ ಪೂರ್ತಿ ನನಗೆ ಕಾಯಲು ಸಾಧ್ಯವಿಲ್ಲ. ಬೇರೆ ಗಿರಾಕಿಗಳು ಕಾಯುತ್ತಿದ್ದಾರೆ.” ಫಲಸ್ವರೂಪವಾಗಿ, ನನಗೆ ಅಗತ್ಯವಿದ್ದ ವಸ್ತುಗಳನ್ನು ನಾನು ಖರೀದಿಸಲು ಸಾಧ್ಯವಾಗುತ್ತಿರಲಿಲ್ಲ.
ನನ್ನ ಶಾಲಾ ವರ್ಷಗಳು ಬಹಳ ಕಷ್ಟಕರವಾಗಿದ್ದವು. ನನಗೆ ವಾಚಿಕ ವರದಿಗಳಿರುತ್ತಿದ್ದಾಗ, ನನ್ನ ತೊದಲುವಿಕೆಯ ಕುರಿತು ಶಾಲಾ ಸಹಪಾಠಿಗಳು ಹಾಸ್ಯಮಾಡುತ್ತಿದ್ದರು. ಆದರೂ, ನಾನು ಪ್ರೌಢ ಶಾಲೆಯಿಂದ ಪದವಿಪ್ರಾಪ್ತಿಪಡೆದುಕೊಂಡೆ ಮತ್ತು 1979ರಲ್ಲಿ ಚೆಕೊಸ್ಲೊವಾಕಿಯದ ಪ್ರೇಗ್ನಲ್ಲಿನ ವಿಶ್ವವಿದ್ಯಾನಿಲಯವೊಂದರಲ್ಲಿ ಅಧ್ಯಯನ ಮಾಡಲು ಹೋದೆ. ಕ್ರೀಡಾಸ್ಪರ್ಧೆಯಲ್ಲಿ ನಾನು ಆನಂದಿಸಿದ ಕಾರಣ, ನಾನು ಒಬ್ಬ ವ್ಯಾಯಾಮ ಶಾಲೆಯ ಶಿಕ್ಷಕನಾಗಲು ಪಾಠವಿಷಯಗಳನ್ನು ತೆಗೆದುಕೊಂಡೆ. ಆದರೆ ನನ್ನ ಗುರಿಯನ್ನು ನಾನು ಹೇಗೆ ಸಾಧಿಸಸಾಧ್ಯ? ಶಂಕೆಗಳ ಹೊರತೂ, ನಾನು ಮುನ್ನುಗ್ಗಿದೆ.
ಸಹಾಯವನ್ನು ಅರಸುವುದು
ನನ್ನ ಮಾತಿನ ತೊದಲುವಿಕೆಯಿಂದ ನನ್ನನ್ನು ಬಿಡುಗಡೆಗೊಳಿಸಿಕೊಳ್ಳಲು ಮಾರ್ಗವೊಂದು ಇರಲೇಬೇಕು. ಆದುದರಿಂದ ವಿಶ್ವವಿದ್ಯಾನಿಲಯದಿಂದ ಪದವಿಪ್ರಾಪ್ತಿಪಡೆದುಕೊಂಡ ಬಳಿಕ, ನಾನು ವೈದ್ಯಶಾಸ್ತ್ರದ ಸಹಾಯವನ್ನು ಪಡೆದುಕೊಳ್ಳಲು ದೃಢನಿಶ್ಚಯಮಾಡಿದೆ. ಮಾತಿನ ಸಮಸ್ಯೆಗಳ ಚಿಕಿತ್ಸೆಯಲ್ಲಿ ವೈಶಿಷ್ಟ್ಯವುಳ್ಳದ್ದಾಗಿರುವ, ಪ್ರೇಗ್ನಲ್ಲಿನ ಒಂದು ಚಿಕಿತ್ಸಾಲಯವನ್ನು ನಾನು ಹುಡುಕಿ ಕಂಡುಕೊಂಡೆ. ಪ್ರಥಮ ಸಲಹೆ ಕೇಳುವಿಕೆಯಲ್ಲಿ, ಒಬ್ಬ ನರ್ಸ್ ಥಟ್ಟನೆ ಹೇಳಿಬಿಟ್ಟದ್ದು: “ನಿನ್ನ ನರವ್ಯಾಧಿಯು ಅಸಾಮಾನ್ಯವಾದದ್ದು!” ತೊದಲುವಿಕೆಯು ಒಂದು ನರರೋಗ ಸ್ಥಿತಿಯಲ್ಲವೆಂದು ವಿಶೇಷಜ್ಞರು ಸಮ್ಮತಿಸುವುದಾದರೂ, ಆಕೆ ನನ್ನನ್ನು ನರರೋಗಿಯಾಗಿ ಪರಿಗಣಿಸಿದಳೆಂದು ಆಲೋಚಿಸುವುದು ನನಗೆ ನೋವನ್ನುಂಟುಮಾಡಿತು. ನಾನು ಒಂದು ಅಸಾಧಾರಣವಾದ ಸವಾಲನ್ನು ಎದುರಿಸಿದೆನೆಂದು ಗ್ರಹಿಸುವುದಕ್ಕೆ ಹೆಚ್ಚು ಸಮಯವು ತಗಲಲಿಲ್ಲ: ನಾನು 24 ವರ್ಷ ಪ್ರಾಯದ ಒಬ್ಬ ಯುವಕನಾಗಿದ್ದೆ, ಮತ್ತು ಇತರ ಎಲ್ಲ ರೋಗಿಗಳು ಮಕ್ಕಳಾಗಿದ್ದರು.
ಬೇಗನೆ ಮನಶ್ಶಾಸ್ತ್ರಜ್ಞರನ್ನು ಒಳಗೊಂಡು, ಇಡೀ ಸಿಬ್ಬಂದಿ ವರ್ಗವು ನನಗೆ ಸಹಾಯಮಾಡುವುದರಲ್ಲಿ ಒಳಗೂಡಿತು. ಅವರು ಪ್ರತಿಯೊಂದನ್ನೂ ಪ್ರಯತ್ನಿಸಿದರು. ಒಮ್ಮೆ, ಅವರು ಐದು ವಾರಗಳ ವರೆಗೆ ಯಾರೊಬ್ಬರೊಂದಿಗೂ ನಾನು ಮಾತಾಡುವುದನ್ನು ನಿಷೇಧಿಸಿದರು. ಮತ್ತೊಂದು ಸಮಯದಲ್ಲಿ, ಕೇವಲ ಒಂದೇ ಸ್ವರದಲ್ಲಿ ಮತ್ತು ಬ-ಹ-ಳ ನಿಧಾನವಾಗಿ ಮಾತಾಡಲು ಅವರು ನನಗೆ ಅನುಮತಿ ನೀಡಿದರು. ಈ ಪ್ರಯತ್ನವು ಸಹಾಯಮಾಡಿತಾದರೂ, ಅದು ನನಗೆ ಹಾವಾಡಿಗ ಎಂಬ ಅಡ್ಡಹೆಸರನ್ನು ಕೊಟ್ಟಿತು, ಏಕೆಂದರೆ ನನ್ನ ವರದಿಗಳ ಸಮಯದಲ್ಲಿ ಅನೇಕರು ನಿದ್ದೆಹೋದರು.
ಯೆಹೋವನ ಸಾಕ್ಷಿಗಳೊಂದಿಗೆ ಸಂಪರ್ಕ
1984ರಲ್ಲಿನ ಒಂದು ಬೇಸಗೆಯ ದಿನ, ಪೇಟೆಯಲ್ಲಿ ನಡೆಯುತ್ತಾ ಹೋಗುತ್ತಿರುವಾಗ, ಇಬ್ಬರು ಯುವ ಪುರುಷರು ನನ್ನನ್ನು ಸಮೀಪಿಸಿದರು. ಅವರ ಬಾಹ್ಯ ತೋರಿಕೆಯಲ್ಲ, ಬದಲಾಗಿ ಅವರು ಏನನ್ನು ಹೇಳಿದರೋ ಅದು ನನ್ನನ್ನು ಚಕಿತಗೊಳಿಸಿತು. ಮಾನವಕುಲದ ಸಕಲ ಸಮಸ್ಯೆಗಳನ್ನು ಅಂತ್ಯಗೊಳಿಸಲಿರುವ ಒಂದು ಸರಕಾರ—ಒಂದು ರಾಜ್ಯ—ದೇವರಲ್ಲಿದೆ ಎಂಬುದನ್ನು ಅವರು ಹೇಳಿದರು. ಅವರು ತಮ್ಮ ಫೋನ್ ನಂಬ್ರವನ್ನು ನನಗೆ ಕೊಟ್ಟರು ಮತ್ತು ಅನಂತರ ನಾನು ಅವರಿಗೆ ಫೋನ್ ಮಾಡಿದೆ.
ಆ ಸಮಯದಲ್ಲಿ ಚೆಕೊಸ್ಲೊವಾಕಿಯದಲ್ಲಿ ಯೆಹೋವನ ಸಾಕ್ಷಿಗಳು ಕಾನೂನುಬದ್ಧವಾದ ಧಾರ್ಮಿಕ ಸಂಸ್ಥೆಯೋಪಾದಿ ಗುರುತಿಸಲ್ಪಟ್ಟಿರಲಿಲ್ಲ. ಆದರೂ, ಸ್ವಲ್ಪ ಸಮಯದಲ್ಲೇ ನನ್ನ ಅಭಿರುಚಿಯು ಎಷ್ಟು ಹೆಚ್ಚು ಬೆಳೆಯಿತೆಂದರೆ, ನಾನು ಅವರ ಕೂಟಗಳಿಗೆ ಹಾಜರಾಗಲು ತೊಡಗಿದೆ. ಪರಸ್ಪರರಿಗಾಗಿ ಆ ಸಾಕ್ಷಿಗಳಿಗಿದ್ದ ಪ್ರೀತಿ ಮತ್ತು ಆಸ್ಥೆಯನ್ನು ನಾನು ಅನುಭವಿಸಸಾಧ್ಯವಿತ್ತು.
ಭರವಸೆಯೆಡೆಗೆ ದಾರಿ
ಯಾವುದು ಯೆಹೋವನ ಸಾಕ್ಷಿಗಳ ಪ್ರತಿಯೊಂದು ಸಭೆಯಲ್ಲಿ ಸಾಪ್ತಾಹಿಕವಾಗಿ ನಿರ್ವಹಿಸಲ್ಪಡುವ ಒಂದು ಶಾಲೆಯಾಗಿದೆಯೋ, ಆ ದೇವಪ್ರಭುತ್ವ ಶುಶ್ರೂಷಾ ಶಾಲೆಯೆಂದು ಕರೆಯಲ್ಪಡುವ ಶಾಲೆಯಿಂದ ನನ್ನ ಮಾತಿನ ಸಮಸ್ಯೆಗಾಗಿ ಸಹಾಯವು ಒದಗಿಬಂತು. ನಾನು ಹೆಸರನ್ನು ನಮೂದಿಸುವಂತೆ ಪ್ರಚೋದಿಸಲ್ಪಟ್ಟೆ ಮತ್ತು ನಾನು ನಮೂದಿಸಿದೆ. ಶಾಲಾ ಪಠ್ಯಪುಸ್ತಕಗಳಲ್ಲೊಂದಾದ ತಿಯೋಕ್ರ್ಯಾಟಿಕ್ ಮಿನಿಸ್ಟ್ರಿ ಸ್ಕೂಲ್ ಗೈಡ್ಬುಕ್ನಲ್ಲಿ ನೀಡಲ್ಪಟ್ಟ ಸಲಹೆಗಳನ್ನಾಧರಿಸಿ, ನಿರರ್ಗಳತೆ, ಉಚ್ಚಾರಣೆ, ಅರ್ಥ ಒತ್ತು, ಮತ್ತು ಸ್ವರ ಬದಲಾವಣೆ ಎಂಬಂಥ ಮಾತಾಡುವಿಕೆಯ ಗುಣಗಳ ವಿಷಯದ ಮೇಲೆ ನಾನು ಕಾರ್ಯಕೈಕೊಂಡೆ.a
ನನ್ನ ಪ್ರಥಮ ವಿಧ್ಯಾರ್ಥಿ ಭಾಷಣವಾದ ಬೈಬಲ್ ವಾಚನವು ನಗೆಗೀಡಾಗಿತ್ತು. ನಾನು ವಿಪರೀತವಾಗಿ ಹೆದರಿದ್ದೆ ಮತ್ತು ಇದು ನನಗೆ ಮನೆಗೆ ಹಿಂದಿರುಗಿಹೋಗಲು ಬಹಳ ಕಷ್ಟವನ್ನಾಗಿ ಮಾಡಿತು. ಒಂದು ಬಿಸಿಯಾದ ಶವರ್ನ ವಿಶ್ರಾಮದ ಪರಿಣಾಮಗಳಿಗಾಗಿ ನಾನು ಎಷ್ಟೊಂದು ಆಭಾರಿಯಾಗಿದ್ದೆ!
ಆ ಪ್ರಥಮ ಭಾಷಣದ ಅನಂತರ, ಶಾಲಾ ಮೇಲ್ವಿಚಾರಕರು ದಯಾಪರವಾಗಿ ನನಗೆ ವೈಯಕ್ತಿಕ ಗಮನವನ್ನು ನೀಡಿದರು. ಅವರು ನನಗೆ ಕೇವಲ ರಚನಾತ್ಮಕ ಸಲಹೆಯನ್ನು ನೀಡಿದರು ಮಾತ್ರವಲ್ಲ, ಅವರು ನನ್ನನ್ನು ಶ್ಲಾಘಿಸಿದರು. ಅದು ನನಗೆ ಪ್ರಯತ್ನಿಸುತ್ತಾ ಇರುವಂತೆ ಧೈರ್ಯವನ್ನು ಕೊಟ್ಟಿತು. ಅದಾದ ಸ್ವಲ್ಪ ಸಮಯದಲ್ಲೇ, 1987ರಲ್ಲಿ ನಾನು ಒಬ್ಬ ದೀಕ್ಷಾಸ್ನಾನಿತ ಸಾಕ್ಷಿಯಾದೆ. ಕೆಲವೊಂದು ತಿಂಗಳುಗಳ ಅನಂತರ, ನಾನು ಪ್ರೇಗ್ನಿಂದ ಸಡಾರ್ ನಾಡ್ ಸಾಸಾವೋ ಎಂಬ ಒಂದು ಶಾಂತವಾದ ಚಿಕ್ಕ ಪಟ್ಟಣಕ್ಕೆ ಸ್ಥಳಾಂತರಿಸಿದೆ. ಸ್ಥಳಿಕ ಸಾಕ್ಷಿಗಳ ಚಿಕ್ಕ ಗುಂಪು ನನ್ನನ್ನು ಆದರಣೀಯವಾಗಿ ಸ್ವಾಗತಿಸಿತು. ಅವರು ನನಗಿದ್ದ ಇನ್ನೂ ತಡೆದು ತಡೆದು ಮಾತಾಡುವ ಸಮಸ್ಯೆಯನ್ನೂ ಅಂಗೀಕರಿಸಿದರು ಮತ್ತು ಅದು ನನ್ನ ಸ್ವಗೌರವವನ್ನು ವರ್ಧಿಸಿತು.
ಕಟ್ಟಕಡೆಗೆ, ನಾನು ಒಂದು ಚಿಕ್ಕ ಬೈಬಲ್ ಅಭ್ಯಾಸ ಗುಂಪನ್ನು ನಿರ್ವಹಿಸಲು ಪ್ರಾರಂಭಿಸಿದೆ, ಮತ್ತು ಅನಂತರ ನಾನು ನನ್ನ ಪ್ರಥಮ ಸಾರ್ವಜನಿಕ ಬೈಬಲ್ ಭಾಷಣವನ್ನು ನೀಡಿದೆ. ಕಟ್ಟಕಡೆಗೆ, ಚೆಕೊಸ್ಲೊವಾಕಿಯದಲ್ಲಿನ ಸರಕಾರದ ಬದಲಾವಣೆಯ ಅನಂತರ, ನಾನು ಅಂಥ ಭಾಷಣಗಳನ್ನು ನೆರೆಹೊರೆಯ ಸಭೆಗಳಲ್ಲಿ ನೀಡಲಾರಂಭಿಸಿದೆ. ಅಪರಿಚಿತ ಪರಿಸರಗಳಲ್ಲಿ ನನ್ನ ಮಾತಾಡುವ ಸಮಸ್ಯೆಗಳು ಹಿಂದಿರುಗಿದವು. ಆದರೆ ನಾನು ಬಿಟ್ಟುಕೊಡಲಿಲ್ಲ.
ವಿಶೇಷ ಸವಾಲುಗಳನ್ನು ಎದುರಿಸಿನಿಲ್ಲುವುದು
ಒಂದು ದಿನ ಒಬ್ಬ ಕ್ರೈಸ್ತ ಹಿರಿಯನು ತನ್ನ ಕೆಲಸದ ಸ್ಥಳಕ್ಕೆ ನನ್ನನ್ನು ಆಮಂತ್ರಿಸಿದನು. ಅವನು ಹೇಳಿದ್ದು: “ಪೆಟರ್, ನಿನಗಾಗಿ ನನ್ನಲ್ಲಿ ಒಂದು ಒಳ್ಳೆಯ ವಾರ್ತೆಯಿದೆ!” ಮುಂಬರುತ್ತಿರುವ ಸರ್ಕಿಟ್ ಸಮ್ಮೇಳನದಲ್ಲಿ ನೀನು ಭಾಗವಹಿಸಬೇಕೆಂದು ನಾವು ಬಯಸುತ್ತೇವೆ.” ನನಗೆ ಮೂರ್ಛೆಹೋಗುವಂತಾಗಿ, ಕುಳಿತುಕೊಳ್ಳಬೇಕಾಯಿತು. ನನ್ನ ಸ್ನೇಹಿತನ ನಿರಾಶೆಗೆ, ನಾನು ಆ ನೀಡುವಿಕೆಯನ್ನು ನಿರಾಕರಿಸಿದೆ.
ಆ ನಿರಾಕರಣೆಯು ನನ್ನ ಬೆನ್ನುಹತ್ತಿತು. ಅದನ್ನು ನನ್ನ ಮನಸ್ಸಿನಿಂದ ಹೊರಹಾಕಲು ನನಗೆ ಅಸಾಧ್ಯವಾಯಿತು. ಕ್ರೈಸ್ತ ಕೂಟಗಳ ಅವಧಿಯಲ್ಲಿ ದೇವರಲ್ಲಿ ಭರವಸೆಯನ್ನಿಡುವ ಉಲ್ಲೇಖವು ಮಾಡಲ್ಪಟ್ಟಾಗಲೆಲ್ಲಾ, ಆ ನಿರಾಕರಣೆಯು ವೇದನೆಯೊಂದಿಗೆ ಜ್ಞಾಪಕಕ್ಕೆ ಬಂತು. ಕೆಲವೊಮ್ಮೆ ಕೂಟಗಳಲ್ಲಿ, ಕೇವಲ 300 ಪುರುಷರೊಂದಿಗೆ ಇಡೀ ಮಿದ್ಯಾನ್ಯ ಸೇನಾಪಡೆಯನ್ನು ದೇವರ ಮಾರ್ಗದರ್ಶನದ ಮೂಲಕ ಎದುರಿಸಿದ ಗಿದ್ಯೋನನ ವಿಷಯವಾಗಿ ಹೇಳಲಾಗುತ್ತಿತ್ತು. (ನ್ಯಾಯಸ್ಥಾಪಕರು 7:1-25) ನಿಜವಾಗಿಯೂ ತನ್ನ ದೇವರಾದ ಯೆಹೋವನಲ್ಲಿ ಭರವಸೆಯನ್ನಿಟ್ಟ ಒಬ್ಬ ಮನುಷ್ಯನು ಅವನಾಗಿದ್ದನು! ಆ ನೇಮಕವನ್ನು ನಿರಾಕರಿಸುವಾಗ ಗಿದ್ಯೋನನ ಉದಾಹರಣೆಯನ್ನು ನಾನು ಅನುಸರಿಸಿದ್ದೆನೋ? ಪ್ರಾಮಾಣಿಕವಾಗಿ, ನಾನು ಅನುಸರಿಸಿದ್ದೆನೆಂದು ಹೇಳಲು ನನಗೆ ಸಾಧ್ಯವಾಗಲಿಲ್ಲ. ನಾನು ಲಜ್ಜಿತನಾದೆ.
ಆದರೂ, ನನ್ನ ಕ್ರೈಸ್ತ ಸಹೋದರರು ನನ್ನನ್ನು ಬಿಟ್ಟುಕೊಡಲು ನಿರಾಕರಿಸಿದರು. ಅವರು ನನಗೆ ಮತ್ತೊಂದು ಅವಕಾಶವನ್ನು ನೀಡಿದರು. ವಿಶೇಷ ಸಮ್ಮೇಳನ ದಿನವೊಂದರ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕಾಗಿ ನಾನು ಆಮಂತ್ರಿಸಲ್ಪಟ್ಟೆ. ಈ ಬಾರಿ ನಾನು ಒಪ್ಪಿಕೊಂಡೆ. ನಾನು ಈ ಸುಯೋಗಕ್ಕಾಗಿ ಕೃತಜ್ಞತಾಭಾವವುಳ್ಳವನಾಗಿದ್ದರೂ, ಅಕೃತ್ರಿಮವಾಗಿ, ಜನರಿಂದ ತುಂಬಿದ ಒಂದು ಹಾಲ್ ಅನ್ನು ಸಂಬೋಧಿಸುವ ಆಲೋಚನೆಯೇ ನನ್ನನ್ನು ನಿಶ್ಚೇಷ್ಟಗೊಳಿಸಿತು. ಯೆಹೋವನಲ್ಲಿನ ನನ್ನ ಭರವಸೆಯನ್ನು ವೃದ್ಧಿಸುವುದರಲ್ಲಿ ನಾನು ನಿಜವಾಗಿಯೂ ಕೆಲಸಮಾಡಬೇಕಿತ್ತು. ಆದರೆ ಹೇಗೆ?
ಆತನಲ್ಲಿ ಇತರ ಸಾಕ್ಷಿಗಳಿಗಿದ್ದ ನಂಬಿಕೆ ಮತ್ತು ಭರವಸೆಯನ್ನು ಅತಿ ನಿಕಟವಾಗಿ ಪರಿಗಣಿಸುವ ಮೂಲಕವೇ. ಹಾಗೆ ಮಾಡುವುದು ನನ್ನನ್ನು ಬಲಗೊಳಿಸಿತು. ಸ್ನೇಹಿತನೊಬ್ಬನ ಮಗಳಾದ, ಆರು ವರ್ಷ ಪ್ರಾಯದ ವೆರುಂಕಾಳಿಂದ ಬಂದ ಒಂದು ಪತ್ರವು ಸಹ ನನಗೆ ಒಂದು ಉತ್ತಮ ಮಾದರಿಯೋಪಾದಿ ಕಾರ್ಯವೆಸಗಿತು. ಅವಳು ಬರೆದುದು: “ಸೆಪ್ಟೆಂಬರ್ ತಿಂಗಳಿನಲ್ಲಿ ನಾನು ಶಾಲೆಗೆ ಹೋಗುತ್ತೇನೆ. ರಾಷ್ಟ್ರ ಗೀತೆಯ ಕುರಿತಾಗಿ ಹೇಗಿರುವುದೋ ಅದನ್ನು ನಾನು ಅರಿಯೆ. ಯೆಹೋವನು ಇಸ್ರಾಯೇಲಿಗಾಗಿ ಹೋರಾಡಿದಂತೆ, ಆತನು ನನಗಾಗಿ ಹೋರಾಡುವನೆಂದು ನಾನು ನಂಬುತ್ತೇನೆ.”
ಒಳ್ಳೆಯದು, ಅವು ವಿಶೇಷ ಸಮ್ಮೇಳನ ದಿನದ ಅಪರಾಹ್ಣ ಕಾರ್ಯಕ್ರಮಕ್ಕೆ ನಡೆಸಿದ—ಆರಂಭದಲ್ಲಿ ನಾನು ಮಾತಾಡಿದ ವಿಷಯ—ಘಟನೆಗಳಲ್ಲಿ ಕೇವಲ ಕೆಲವಾಗಿದ್ದವು. ನಾನು ತೀವ್ರತೆಯಿಂದ ಪ್ರಾರ್ಥಿಸಿದೆ. ನಾನು ಈ ದೊಡ್ಡ ಶ್ರೋತೃವರ್ಗದ ಮುಂದೆ ದೇವರ ಮಹಾ ಹೆಸರನ್ನು ಸ್ತುತಿಸಲಿಕ್ಕಿದ್ದುದರಿಂದ, ಈಗ ನಾನು ನನ್ನ ಮಾತಿನ ನಿರರ್ಗಳತೆಯ ಕುರಿತಾಗಿ ಅಷ್ಟೊಂದು ಹೆಚ್ಚು ಚಿಂತಿತನಾಗಿರಲಿಲ್ಲ.
ಹೀಗೆ ನೂರಾರು ಜನರನ್ನು ಎದುರಿಸುತ್ತಾ ನನ್ನ ಮುಂದೆ ಇಡಲ್ಪಟ್ಟಿದ್ದ ಮೈಕ್ರೋಫೋನಿನೊಂದಿಗೆ ನಾನು ಅಲ್ಲಿ ನಿಂತೆ. ಅನಂತರ ಸಂದೇಶವಾಹಕನಿಗಿಂತ ಸಂದೇಶವು ಹೆಚ್ಚು ಪ್ರಾಮುಖ್ಯವಾದದ್ದಾಗಿದೆ ಎಂಬುದನ್ನು ಮನಗಾಣುತ್ತಾ, ನಾನು ದೀರ್ಘವಾದ ಉಸಿರು ತೆಗೆದುಕೊಂಡು, ಪ್ರಾರಂಭಿಸಿದೆ. ತರುವಾಯ, ನನಗೆ ವಿಷಯಗಳನ್ನು ತೂಗಿನೋಡಲು ಸಮಯವಿತ್ತು. ನಾನು ಹೆದರಿದ್ದೆನೋ? ನಿಶ್ಚಯವಾಗಿಯೂ, ಮತ್ತು ಕೆಲವು ಬಾರಿ ನಾನು ತೊದಲಿದೆ ಕೂಡ. ಆದರೂ ದೇವರ ಬೆಂಬಲವಿಲ್ಲದೆ ನಾನು ಮಾತಾಡಲಿಕ್ಕೆ ಶಕ್ತನಾಗಿರುತ್ತಿರಲಿಲ್ಲ ಎಂಬುದು ನನಗೆ ಗೊತ್ತಿತ್ತು.
ಬಳಿಕ ಒಮ್ಮೆ ಒಬ್ಬ ಕ್ರೈಸ್ತ ಸಹೋದರನು ನನಗೆ ಹೇಳಿದ್ದ ಯಾವುದೋ ವಿಷಯವನ್ನು ನಾನು ಮನಸ್ಸಿನಲ್ಲೇ ಆಲೋಚಿಸಲು ತೊಡಗಿದೆ: “ನಿನಗೆ ತೊದಲುವ ಸಮಸ್ಯೆಯಿರುವುದಕ್ಕಾಗಿ ಉಲ್ಲಾಸಿತನಾಗಿರು.” ಅವನು ಆ ಹೇಳಿಕೆಯನ್ನು ಮಾಡಿದ ಸಮಯದಲ್ಲಿ, ನಾನು ನಿಜವಾಗಿಯೂ ಆಶ್ಚರ್ಯಚಕಿತನಾಗಿದ್ದೆ. ಅಂಥ ಒಂದು ವಿಷಯವನ್ನು ಅವನು ಹೇಗೆ ಹೇಳಸಾಧ್ಯ? ಹಿಂದಿರುಗಿ ನೋಡುವಾಗ, ಅವನು ಏನನ್ನು ಅರ್ಥೈಸಿದನೆಂದು ನನಗೆ ಈಗ ಗೊತ್ತಾಗುತ್ತದೆ. ನನಗಿರುವ ವಾಕ್ ಸಮಸ್ಯೆಯು ನನ್ನ ಮೇಲೆ ಆತುಕೊಳ್ಳುವುದಕ್ಕಿಂತ, ದೇವರ ಮೇಲೆ ಆತುಕೊಳ್ಳುವಂತೆ ನನಗೆ ಸಹಾಯಮಾಡಿದೆ.
ಆ ವಿಶೇಷ ಸಮ್ಮೇಳನ ದಿನದ ಅಪರಾಹ್ಣದಿಂದ ಕೆಲವೊಂದು ವರ್ಷಗಳು ಗತಿಸಿವೆ. ಈ ವರ್ಷಗಳಲ್ಲಿ ದೊಡ್ಡ ಶ್ರೋತೃವರ್ಗದ ಮುಂದೆ ಮಾತಾಡುವುದನ್ನು ಒಳಗೊಂಡು ಇತರ ಸುಯೋಗಗಳು ನನಗೆ ಒದಗಿಬಂದಿವೆ. ಸಡಾರ್ ನಾಡ್ ಸಾಸಾವೋನಲ್ಲಿ ನಾನು ಒಬ್ಬ ಕ್ರೈಸ್ತ ಹಿರಿಯನೋಪಾದಿ ಮತ್ತು ಯೆಹೋವನ ಸಾಕ್ಷಿಗಳ ಪೂರ್ಣ ಸಮಯದ ಶುಶ್ರೂಷಕರು ಕರೆಯಲ್ಪಡುವಂತೆ, ಒಬ್ಬ ಪಯನೀಯರನೋಪಾದಿಯೂ ನೇಮಿಸಲ್ಪಟ್ಟೆ. ಕಲ್ಪಿಸಿಕೊಳ್ಳಿರಿ! ನಮ್ಮ ಕ್ರೈಸ್ತ ಕೂಟಗಳಲ್ಲಿ ಸಾಪ್ತಾಹಿಕ ಕಲಿಸುವಿಕೆಗೆ ವ್ಯಯಿಸಿದ ಸಮಯವನ್ನು ಹೊರತುಪಡಿಸಿ, ಪ್ರತಿ ತಿಂಗಳು ಇತರರೊಂದಿಗೆ ದೇವರ ರಾಜ್ಯದ ಕುರಿತಾಗಿ ಮಾತಾಡುತ್ತಾ ಒಂದು ನೂರಕ್ಕೂ ಹೆಚ್ಚು ತಾಸುಗಳನ್ನು ನಾನು ವ್ಯಯಿಸಿದೆ. ಮತ್ತು ಈಗ ಪ್ರತಿ ವಾರ ವಿಭಿನ್ನ ಸಭೆಗೆ ಭಾಷಣಗಳನ್ನು ಕೊಡುತ್ತಾ, ನಾನು ಒಬ್ಬ ಸರ್ಕಿಟ್ ಮೇಲ್ವಿಚಾರಕನೋಪಾದಿ ಸೇವೆ ಸಲ್ಲಿಸುತ್ತೇನೆ.
ಯೆಶಾಯನ ಬೈಬಲ್ ಪುಸ್ತಕದಲ್ಲಿ ಈ ನಿರ್ದಿಷ್ಟ ಪ್ರವಾದನೆಯನ್ನು ನಾನು ಓದುವಾಗಲೆಲ್ಲಾ ನನ್ನ ಹೃದಯವು ಗಣ್ಯತೆಯಿಂದ ಕೇವಲ ಹಿಗ್ಗುತ್ತದೆ: “ತೊದಲುಮಾತಿನವರ ನಾಲಿಗೆಯೂ ಸ್ಪಷ್ಟ ವಿಷಯಗಳನ್ನು ಮಾತಾಡುವುದರಲ್ಲಿ ಶೀಘ್ರವಾಗಿರುವುದು.” (ಯೆಶಾಯ 32:4, NW; ವಿಮೋಚನಕಾಂಡ 4:12) ತನ್ನ ಗೌರವ, ಸ್ತುತಿ, ಮತ್ತು ಮಹಿಮೆಗಾಗಿ ‘ಸ್ಪಷ್ಟ ವಿಷಯಗಳನ್ನು ಮಾತಾಡುವಂತೆ’ ನನಗೆ ಸಹಾಯಮಾಡುತ್ತಾ, ಯೆಹೋವನು ನಿಶ್ಚಯವಾಗಿಯೂ ನನ್ನೊಂದಿಗಿದ್ದಾನೆಂಬುದನ್ನು ರುಜುಪಡಿಸಿದ್ದಾನೆ. ನಮ್ಮ ಅತ್ಯಂತ ಕರುಣಾಭರಿತ ದೇವರನ್ನು ಸ್ತುತಿಸಲು ಶಕ್ತನಾಗಿರುವುದಕ್ಕೆ ನಾನು ಅತ್ಯಂತ ಸಂತೃಪ್ತನೂ ಸಂತೋಷಿತನೂ ಆಗಿದ್ದೇನೆ.—ಪೆಟರ್ ಕುಂಟ್ಸ್ ಅವರಿಂದ ಹೇಳಲ್ಪಟ್ಟಂತೆ.
[ಪಾದಟಿಪ್ಪಣಿ]
a ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿತ.