ಔಷಧಗಳನ್ನು ಬುದ್ಧಿವಂತಿಕೆಯಿಂದ ಉಪಯೋಗಿಸಿರಿ
ನೈಜೀರಿಯದ ಎಚ್ಚರ! ಸುದ್ದಿಗಾರರಿಂದ
ಆಸ್ತ್ರೀಯು, ತನಗೆ ತಲೆನೋವು ಮತ್ತು ಹೊಟ್ಟೆಯಲ್ಲಿ ವೇದನೆಯಿತ್ತೆಂದು ಹೇಳಿದಳು. ವೈದ್ಯನು ಆಕೆಯೊಂದಿಗೆ ಸಂಕ್ಷಿಪ್ತವಾಗಿ ಮಾತಾಡಿದನು. ಅನಂತರ ಅವನು, ಮಲೇರಿಯ ರೋಗಕ್ಕಾಗಿ ಮೂರು ದಿನ ಅನುಕ್ರಮದ ಸೂಜಿಮದ್ದುಗಳನ್ನು, ತಲೆನೋವನ್ನು ನಿಲ್ಲಿಸಲು ಪ್ಯಾರಸಿಟಮಾಲ್ (ಆಸಿಟಮಿನೊಫೆನ್), ಯಾವುದು ಹೊಟ್ಟೆಯ ಹುಣ್ಣು ಆಗಿದ್ದಿರಬಹುದೊ ಅದನ್ನು ಶಮನಮಾಡಲು ಎರಡು ಮಾತ್ರೆಗಳು, ಆಕೆಯ ತಳಮಳಕ್ಕಾಗಿ ಶಾಮಕಗಳು ಮತ್ತು ಕೊನೆಯದಾಗಿ, ಮೇಲೆ ತಿಳಿಸಿದಂತಹ ಎಲ್ಲ ಔಷಧಗಳಿಗೆ ಕೂಡಿಸಿ, ಹಲವು ಜೀವಸ್ವತಗಳುಳ್ಳ ಮಾತ್ರೆಗಳ ಒಂದು ಅನುಕ್ರಮವನ್ನು ಸೂಚಿಸಿ ಬರೆದನು. ಖರ್ಚುಮಾಡಿದ ಹಣದ ಮೊತ್ತವು ಹೆಚ್ಚಾಗಿತ್ತು, ಆದರೆ ಆ ಸ್ತ್ರೀಯು ಆಕ್ಷೇಪಿಸಲಿಲ್ಲ. ಆಕೆ ಸಂತೋಷಗೊಂಡು, ತನ್ನ ಸಮಸ್ಯೆಗಳನ್ನು ಈ ಔಷಧಗಳು ಬಗೆಹರಿಸುವವು ಎಂಬ ಭರವಸೆಯಿಂದ ಅಲ್ಲಿಂದ ಹೊರಟುಹೋದಳು.
ಇಂತಹ ಪರ್ಯಾಲೋಚನೆಗಳು ಪಶ್ಚಿಮ ಆಫ್ರಿಕದಲ್ಲಿ ಅಸಾಮಾನ್ಯವಾಗಿರುವುದಿಲ್ಲ. ಅಲ್ಲಿಯ ಒಂದು ದೊಡ್ಡ ರಾಷ್ಟ್ರದ ಸಮೀಕ್ಷೆಯೊಂದು ತೋರಿಸಿದ್ದೇನೆಂದರೆ, ಸಾರ್ವಜನಿಕ ಆರೋಗ್ಯ ಕೇಂದ್ರಗಳಲ್ಲಿರುವ ಆರೋಗ್ಯಾರೈಕೆಯ ಕಾರ್ಮಿಕರು, ಪ್ರತಿಯೊಬ್ಬ ರೋಗಿಗೆ ಪ್ರತಿಯೊಂದು ಸಂದರ್ಶನದಲ್ಲಿ ಸರಾಸರಿಯಾಗಿ 3.8 ವಿಭಿನ್ನ ಔಷಧಗಳನ್ನು ಸೂಚಿಸಿ ಬರೆಯುತ್ತಾರೆ. ವಾಸ್ತವದಲ್ಲಿ ಹೆಚ್ಚಿನ ಜನರಿಗೆ, ಬಹಳಷ್ಟು ಔಷಧವನ್ನು ಸೂಚಿಸಿ ಬರೆಯುವವನೇ ಒಳ್ಳೆಯ ವೈದ್ಯನು.
ಪಶ್ಚಿಮ ಆಫ್ರಿಕದಲ್ಲಿನ ಆರೋಗ್ಯ ಸ್ಥಿತಿಯು ಹೇಗಿತ್ತು ಎಂಬುದನ್ನು ನೀವು ಪರಿಗಣಿಸುವಾಗ, ಔಷಧದಲ್ಲಿನ ಅವರ ಭರವಸೆಯನ್ನು ಗ್ರಹಿಸಿಕೊಳ್ಳಬಹುದು. ಮುಂಚಿನ ಸಮಯಗಳ ಕುರಿತು, 40ಕ್ಕಿಂತಲೂ ಹೆಚ್ಚು ವರ್ಷಗಳ ಹಿಂದೆ ಗ್ರಂಥಕರ್ತ ಜಾನ್ ಗನ್ಥರ್ ಬರೆದುದು: “ಈ ಸ್ಲೇವ್ ಕೋಸ್ಟ್ . . . ಕರಿಯರನ್ನು ಮಾತ್ರವಲ್ಲ; ಬಿಳಿಯರನ್ನೂ ಕೊಂದಿತು, ಮತ್ತು ಐತಿಹ್ಯಕ್ಕೆ ‘ಬಿಳಿ ಮನುಷ್ಯನ ಸಮಾಧಿ’ ಎಂಬುದಾಗಿ ವಿಧಿತವಾಗಿರುವ ಆಫ್ರಿಕದ ಭಾಗವಾಗಿದೆ. ಶತಮಾನಗಳಿಂದ ಗಿನಿ ಕೋಸ್ಟ್ನ ನಿರಾಕ್ಷೇಪ ಅರಸು ಸೊಳ್ಳೆಯಾಗಿತ್ತು. ಪೀತಜ್ವರ, ಕರಿ ಮಲೇರಿಯ, ಮಲೇರಿಯ, ಈ ಅರಸನ ಆಯ್ದ ಹಾಗೂ ಹಾನಿಕರ ಶಸ್ತ್ರಗಳಾಗಿದ್ದವು. ವೆಸ್ಟ್ ಕೋಸ್ಟ್ ಹವಾಮಾನದ ಕುಟಿಲ ಮಾರಕತೆಯು, ಗತಕಾಲದ ದಾಖಲೆಯ ವಿಷಯವಾಗಿರುವುದಿಲ್ಲ, ಬದಲಿಗೆ ಜೀವಂತ ನೆನಪಾಗಿದೆ. ಇತ್ತೀಚೆಗೆ ತಾನು ನೈಜೀರಿಯಕ್ಕೆ ನೇಮಿಸಲ್ಪಟ್ಟದ್ದನ್ನು ಕಂಡುಕೊಂಡ ಕಾನ್ಸಲಿನ ಅಧಿಕಾರಿಯೊಬ್ಬನು, ತನ್ನ ನಿವೃತ್ತಿ ವೇತನದ ಕುರಿತಾಗಿ ಕೇಳಿದ ವಿಷಯವನ್ನು ಒಂದು ಅಚ್ಚುಮೆಚ್ಚಿನ ಕಥೆಯು ವಿವರಿಸುತ್ತದೆ. ‘ನಿವೃತ್ತಿ ವೇತನವೊ?’ ಎಂಬುದಾಗಿ ನೆಲಸುನಾಡು ಆಫೀಸಿನಲ್ಲಿದ್ದ ಅವನ ಮುಖ್ಯಸ್ಥನು ಪ್ರತ್ಯುತ್ತರಿಸಿದನು. ‘ನನ್ನ ಪ್ರಿಯ ಸಂಗಡಿಗನೆ, ನೈಜೀರಿಯಕ್ಕೆ ಹೋಗುವ ಯಾರೊಬ್ಬನೂ ನಿವೃತ್ತನಾಗುವಷ್ಟು ದೀರ್ಘ ಸಮಯದ ವರೆಗೆ ಎಂದೂ ಜೀವಿಸುವುದಿಲ್ಲ.’”
ಸನ್ನಿವೇಶವು ಬದಲಾಗಿದೆ. ಇಂದು, ಕೇವಲ ಸೊಳ್ಳೆಗಳಿಂದ ಹರಡುವ ರೋಗಗಳನ್ನು ಮಾತ್ರವಲ್ಲ, ಅನೇಕ ಇತರ ರೋಗಗಳನ್ನು ಸಹ ಎದುರಿಸಲು ಔಷಧಗಳಿವೆ. ಲಸಿಕೆಗಳು ತಾವೇ ದಡಾರ, ನಾಯಿಕೆಮ್ಮು, ಧನುರ್ವಾಯು ಮತ್ತು ಗಳಚರ್ಮ ರೋಗಗಳಿಂದ ಆಗುವ ಮರಣದ ಪ್ರಮಾಣವನ್ನು ಎದ್ದುಕಾಣುವಂತಹ ರೀತಿಯಲ್ಲಿ ಕಡಮೆಗೊಳಿಸಿವೆ. ಲಸಿಕೆಗಳಿಂದಾಗಿ, ಸಿಡುಬು ರೋಗವನ್ನು ನಿರ್ಮೂಲಗೊಳಿಸಲಾಗಿದೆ. ಪೋಲಿಯೊ ಸಹ ಬೇಗನೆ ಗತಕಾಲದ ಒಂದು ರೋಗವಾಗಬಹುದು.
ಆಫ್ರಿಕದ ಅನೇಕ ಜನರಿಗೆ ಇಂದು ಔಷಧದ ಮೌಲ್ಯದಲ್ಲಿ ಅಗಾಧವಾದ ನಂಬಿಕೆಯಿರುವುದು ಆಶ್ಚರ್ಯಕರವೇನೂ ಅಲ್ಲ. ನಿಶ್ಚಯವಾಗಿಯೂ, ಇಂತಹ ನಂಬಿಕೆಯು ಪಶ್ಚಿಮ ಆಫ್ರಿಕಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ. ಅಮೆರಿಕದಲ್ಲಿ, ಪ್ರತಿವರ್ಷ ವೈದ್ಯರು 5,500 ಕೋಟಿಗಳಿಗಿಂತಲೂ ಹೆಚ್ಚಿನ ಔಷಧ ಸೂಚಿಗಳನ್ನು ಬರೆಯುತ್ತಾರೆ. ಫ್ರಾನ್ಸ್ನಲ್ಲಿ ಜನರು, ಸರಾಸರಿಯಾಗಿ ಪ್ರತಿವರ್ಷ ಗುಳಿಗೆಗಳ 50 ಡಬ್ಬಿಗಳನ್ನು ಖರೀದಿಸುತ್ತಾರೆ. ಮತ್ತು ಜಪಾನಿನಲ್ಲಿ, ಸರಾಸರಿ ವ್ಯಕ್ತಿಯೊಬ್ಬನು ವೈದ್ಯಕೀಯ ಔಷಧಗಳಿಗಾಗಿ ವರ್ಷಕ್ಕೆ 400 ಡಾಲರು (ಯು.ಎಸ್)ಗಳಿಗಿಂತಲೂ ಹೆಚ್ಚಿನ ಹಣವನ್ನು ವ್ಯಯಿಸುತ್ತಾನೆ.
ಪ್ರಯೋಜನಗಳಿಗೆ ಪ್ರತಿಯಾಗಿ ಗಂಡಾಂತರಗಳು
ಮಾನವಕುಲಕ್ಕೆ ಸಹಾಯ ಮಾಡಲು ಆಧುನಿಕ ಔಷಧಗಳು ಹೆಚ್ಚನ್ನು ಮಾಡಿವೆ. ಸರಿಯಾಗಿ ಉಪಯೋಗಿಸಲ್ಪಡುವಾಗ, ಅವು ಒಳ್ಳೆಯ ಆರೋಗ್ಯವನ್ನು ಪ್ರವರ್ಧಿಸುತ್ತವೆ, ಆದರೆ ತಪ್ಪಾದ ವಿಧದಲ್ಲಿ ಉಪಯೋಗಿಸಲ್ಪಡುವಾಗ, ಅವು ಹಾನಿಮಾಡಿ, ಕೊಂದುಹಾಕಬಲ್ಲವು ಸಹ. ಉದಾಹರಣೆಗೆ, ಅಮೆರಿಕದಲ್ಲಿ, ವೈದ್ಯಕೀಯ ಔಷಧಗಳಿಗೆ ಪ್ರತಿಕೂಲವಾದ ಪ್ರತಿಕ್ರಿಯೆಗಳಿಂದಾಗಿ ಪ್ರತಿವರ್ಷ ಸುಮಾರು 3,00,000 ಜನರು ಆಸ್ಪತ್ರೆಗೆ ಸೇರಿಸಲ್ಪಡುತ್ತಾರೆ, ಮತ್ತು 18,000 ಜನರು ಸಾಯುತ್ತಾರೆ.
ಔಷಧಗಳನ್ನು ಬುದ್ಧಿವಂತಿಕೆಯಿಂದ ಉಪಯೋಗಿಸಲು, ಗಂಡಾಂತರದ ಒಂದು ಅಂಶವು ಸದಾ ಇರುತ್ತದೆ ಎಂಬುದನ್ನು ಗುರುತಿಸುವುದು ಪ್ರಾಮುಖ್ಯವಾಗಿದೆ. ಯಾವುದೇ ಔಷಧವು, ಆ್ಯಸ್ಪಿರಿನ್ ಸಹ, ಹಾನಿಕಾರಕ ಪಕ್ಕ ಪರಿಣಾಮಗಳನ್ನು ಉಂಟುಮಾಡಬಲ್ಲದು. ಹಲವಾರು ಔಷಧಗಳನ್ನು ಏಕಕಾಲಿಕವಾಗಿ ನೀವು ತೆಗೆದುಕೊಳ್ಳುವುದಾದರೆ ಪಕ್ಕ ಪರಿಣಾಮಗಳ ಸಂಭವನೀಯತೆಯು ಹೆಚ್ಚಾಗಿರುತ್ತದೆ. ನಿಮ್ಮ ದೇಹದಲ್ಲಿ ಒಂದು ಔಷಧವು ಹೇಗೆ ಕೆಲಸಮಾಡುತ್ತದೆ ಎಂಬುದನ್ನು ಆಹಾರ ಮತ್ತು ಪಾನೀಯವು ಸಹ ಪ್ರಭಾವಿಸುತ್ತದೆ ಮತ್ತು ಅವು ಅದರ ಪರಿಣಾಮವನ್ನು ತೀವ್ರಗೊಳಿಸಬಲ್ಲವು ಇಲ್ಲವೆ ನಿಷ್ಪರಿಣಾಮಗೊಳಿಸಬಲ್ಲವು.
ಇತರ ಗಂಡಾಂತರಗಳೂ ಇವೆ. ನಿರ್ದಿಷ್ಟವಾದೊಂದು ಔಷಧಕ್ಕೆ ನಿಮ್ಮಲ್ಲಿ ಅಲರ್ಜಿಗೆ ಸಂಬಂಧಿಸಿದ ಪ್ರತಿಕ್ರಿಯೆ ಇರಬಹುದು. ಸೂಚಿಸಿ ಬರೆದಿರುವಂತೆ—ಸರಿಯಾದ ಸಮಯಾವಧಿಗಾಗಿ ಸರಿಯಾದ ಪ್ರಮಾಣ—ನೀವು ಔಷಧಗಳನ್ನು ತೆಗೆದುಕೊಳ್ಳದಿದ್ದರೆ, ಅವು ಬಹುಶಃ ನಿಮಗೆ ಸಹಾಯಮಾಡಲಾರವು, ಮತ್ತು ನಿಮಗೆ ಹಾನಿಯನ್ನೂ ಉಂಟುಮಾಡಬಲ್ಲವು. ನಿಮ್ಮ ವೈದ್ಯನು ತಪ್ಪಾದ ಔಷಧ ಅಥವಾ ಅನಾವಶ್ಯಕವಾದ ಔಷಧಗಳನ್ನು ಸೂಚಿಸಿ ಬರೆಯುವುದಾದರೂ ಇದೇ ಪರಿಣಾಮವು ಸಂಭವಿಸಬಹುದು. ಅವಧಿ ತೀರಿಹೋದ, ಕೀಳ್ಮಟ್ಟದ, ಅಥವಾ ಖೋಟಾ ಔಷಧಗಳನ್ನು ತೆಗೆದುಕೊಳ್ಳುವುದಾದರೂ ನೀವು ಹಾನಿಯ ಗಂಡಾಂತರಕ್ಕೆ ಈಡಾಗುತ್ತೀರಿ.
ಗಂಡಾಂತರಗಳನ್ನು ಕಡಿಮೆಗೊಳಿಸಲು, ನೀವು ತೆಗೆದುಕೊಳ್ಳುವ ಯಾವುದೇ ಔಷಧದ ಕುರಿತು ಸಾಧ್ಯವಿದ್ದಷ್ಟು ಹೆಚ್ಚಿನ ವಿಷಯವು ನಿಮಗೆ ತಿಳಿದಿರಬೇಕು. ನಿಜಾಂಶಗಳನ್ನು ತಿಳಿದುಕೊಳ್ಳುವ ಮೂಲಕ ನೀವು ಬಹಳವಾಗಿ ಪ್ರಯೋಜನಪಡೆಯಬಲ್ಲಿರಿ.
ಪ್ರತಿಜೀವಕಗಳು—ಸಾಮರ್ಥ್ಯಗಳು ಹಾಗೂ ಬಲಹೀನತೆಗಳು
ಸುಮಾರು 50 ವರ್ಷಗಳ ಹಿಂದೆ ಅವುಗಳ ವಿಕಸನದಂದಿನಿಂದ, ಪ್ರತಿಜೀವಕಗಳು ಕೋಟ್ಯಂತರ ಜನರ ಜೀವಗಳನ್ನು ರಕ್ಷಿಸಿವೆ. ಅವು ಕುಷ್ಠ ರೋಗ, ಕ್ಷಯ ರೋಗ, ಶ್ವಾಸಕೋಶದ ಉರಿಯೂತ, ಕೆಂಜ್ವರ, ಮತ್ತು ಸಿಫಿಲಿಸ್ನಂತಹ ಭಯಂಕರ ರೋಗಗಳನ್ನು ನಿಗ್ರಹಿಸಿವೆ. ಇತರ ಸೋಂಕುಗಳ ಗುಣಪಡಿಸುವಿಕೆಯಲ್ಲಿಯೂ ಅವು ಪ್ರಾಮುಖ್ಯವಾದ ಪಾತ್ರವನ್ನು ವಹಿಸುತ್ತವೆ.
ಅಮೆರಿಕದಲ್ಲಿರುವ ಟಫ್ಟ್ಸ್ ವಿಶ್ವವಿದ್ಯಾನಿಲಯ ವೈದ್ಯಕೀಯ ಶಾಲೆಯಲ್ಲಿ, ಔಷಧದ ಪ್ರೊಫೆಸರ್ ಡಾ. ಸ್ಟೂವರ್ಟ್ ಲಿವಿ ಹೇಳಿದ್ದು: “[ಪ್ರತಿಜೀವಕಗಳು] ಔಷಧದಲ್ಲಿ ಮಹತ್ತರವಾದ ಬದಲಾವಣೆಗಳನ್ನುಂಟುಮಾಡಿವೆ. ಅವು ವೈದ್ಯಕೀಯ ಇತಿಹಾಸವನ್ನು ಹೆಚ್ಚಿನ ಮಟ್ಟದಲ್ಲಿ ಬದಲಾಯಿಸಿರುವ ಏಕೈಕ ನಿಯೋಗಿಯಾಗಿವೆ.” ಮತ್ತೊಬ್ಬ ವೈದ್ಯಕೀಯ ಅಧಿಕಾರಿಯು ಹೇಳುವುದು: “ಅವು, ಯಾವುದರ ಮೇಲೆ ಆಧುನಿಕ ಔಷಧವು ನಿರ್ಮಿಸಲ್ಪಟ್ಟಿದೆಯೊ ಆ ಮೂಲೆಗಲ್ಲಾಗಿವೆ.”
ಹಾಗಿದ್ದರೂ, ನಿಮ್ಮ ವೈದ್ಯನ ಬಳಿಗೆ ಅವಸರದಿಂದ ಹೋಗಿ, ಪ್ರತಿಜೀವಕಗಳ ಸರಬರಾಯಿಗಾಗಿ ಕೇಳಿಕೊಳ್ಳುವ ಮೊದಲು, ಅವುಗಳ ನಕಾರಾತ್ಮಕ ವಿಷಯಾಂಶಗಳನ್ನು ಪರಿಗಣಿಸಿರಿ. ಪ್ರತಿಜೀವಕಗಳು ಅನುಚಿತವಾಗಿ ಉಪಯೋಗಿಸಲ್ಪಟ್ಟಾಗ, ಒಳಿತಿಗಿಂತಲೂ ನಿಮಗೆ ಹೆಚ್ಚಿನ ಹಾನಿಯನ್ನು ಮಾಡಬಲ್ಲವು. ಇದು ಏಕೆಂದರೆ, ಪ್ರತಿಜೀವಕಗಳು ದೇಹದಲ್ಲಿರುವ ಏಕಾಣುಜೀವಿಗಳನ್ನು ಆಕ್ರಮಿಸಿ, ನಾಶಮಾಡುವ ಮೂಲಕ ಕೆಲಸಮಾಡುತ್ತವೆ. ಆದರೆ ಅವು ಯಾವಾಗಲೂ ಎಲ್ಲ ಹಾನಿಕರ ಏಕಾಣುಜೀವಿಗಳನ್ನು ನಾಶಮಾಡುವುದಿಲ್ಲ; ನಿರ್ದಿಷ್ಟ ವಿಧಗಳ ಏಕಾಣುಜೀವಿಗಳು ಆಕ್ರಮಣವನ್ನು ತಡೆದುನಿಲ್ಲುತ್ತವೆ. ಈ ಪ್ರತಿರೋಧಕ ವಿಧಗಳು ಪಾರಾಗಿ ಉಳಿಯುತ್ತವೆ ಮಾತ್ರವಲ್ಲ, ಸಂತಾನವೃದ್ಧಿಯಾಗಿ, ವ್ಯಕ್ತಿಯಿಂದ ವ್ಯಕ್ತಿಗೆ ಸಾಗುತ್ತವೆ.
ಉದಾಹರಣೆಗೆ, ಪೆನಿಸಿಲಿನ್ ಒಂದು ಸಮಯದಲ್ಲಿ ಸೋಂಕನ್ನು ಗುಣಪಡಿಸುವುದರಲ್ಲಿ ಬಹಳಷ್ಟು ಪರಿಣಾಮಕಾರಿಯಾಗಿತ್ತು. ಈಗ ಏಕಾಣುಜೀವಿಗಳ ಹೆಚ್ಚುತ್ತಿರುವ ಪ್ರತಿರೋಧಕ ವಿಧಗಳಿಂದಾಗಿ ಭಾಗಶಃ, ಔಷಧದ ಕಂಪನಿಗಳು ನೂರಾರು ವಿಭಿನ್ನ ಪ್ರಕಾರಗಳ ಪೆನಿಸಿಲಿನ್ನ ಮಾರಾಟಮಾಡುತ್ತವೆ.
ಸಮಸ್ಯೆಗಳನ್ನು ದೂರವಿರಿಸಲು ನೀವು ಏನು ಮಾಡಬಲ್ಲಿರಿ? ನಿಮಗೆ ನಿಜವಾಗಿಯೂ ಪ್ರತಿಜೀವಕಗಳ ಅಗತ್ಯವಿರುವುದಾದರೆ, ಅವು ಒಬ್ಬ ಅರ್ಹನಾದ ವೈದ್ಯನಿಂದ ಸೂಚಿಸಿ ಬರೆಯಲ್ಪಟ್ಟಿವೆ ಮತ್ತು ಒಂದು ನ್ಯಾಯಸಮ್ಮತವಾದ ಮೂಲದಿಂದ ಪಡೆದುಕೊಳ್ಳಲ್ಪಟ್ಟಿವೆ ಎಂಬುದನ್ನು ಖಚಿತಪಡಿಸಿಕೊಳ್ಳಿರಿ. ಬೇಗನೆ ಪ್ರತಿಜೀವಕಗಳನ್ನು ಸೂಚಿಸಿ ಬರೆಯುವಂತೆ ನಿಮ್ಮ ವೈದ್ಯನ ಮೇಲೆ ಒತ್ತಡವನ್ನು ಹಾಕದಿರಿ—ನಿಮ್ಮ ಕಾಯಿಲೆಗೆ ವಿಧಿಸಲ್ಪಟ್ಟಂತಹ ಪ್ರತಿಜೀವಕವು ಸರಿಯಾದ ಪ್ರತಿಜೀವಕವೆಂಬುದನ್ನು ಖಚಿತಪಡಿಸಿಕೊಳ್ಳಲು, ನೀವು ಪ್ರಯೋಗಾಲಯದ ಪರೀಕ್ಷೆಗಳಿಗೆ ಒಳಗಾಗುವಂತೆ ಅವನು ಅಥವಾ ಅವಳು ಬಯಸಬಹುದು.
ಸರಿಯಾದ ಸಮಯಾವಧಿಯ ವರೆಗೆ ಸರಿಯಾದ ಪ್ರಮಾಣವನ್ನು ತೆಗೆದುಕೊಳ್ಳುವುದೂ ನಿಮಗೆ ಪ್ರಾಮುಖ್ಯವಾದದ್ದಾಗಿದೆ. ಅದು ಪೂರ್ತಿಗೊಳ್ಳುವ ಮೊದಲೇ ನಿಮಗೆ ಗುಣವೆನಿಸಿದರೂ, ಪ್ರತಿಜೀವಕಗಳ ಸಂಪೂರ್ಣ ಅನುಕ್ರಮವನ್ನು ನೀವು ತೆಗೆದುಕೊಳ್ಳಬೇಕು.
ಮಾತ್ರೆಗಳಿಗಿಂತ ಸೂಜಿಮದ್ದುಗಳು ಉತ್ತಮವೊ?
“ನನಗೊಂದು ಸೂಜಿಮದ್ದು ಬೇಕು!” ಈ ಮಾತುಗಳು ವರ್ಧಿಷ್ಣು ದೇಶಗಳಲ್ಲಿರುವ ಅನೇಕ ಆರೋಗ್ಯ ಕಾರ್ಮಿಕರಿಂದ ಕೇಳಲ್ಪಡುತ್ತವೆ. ಇಂತಹ ಒಂದು ವಿನಂತಿಗಾಗಿರುವ ಆಧಾರವು, ಔಷಧವು ನೇರವಾಗಿ ರಕ್ತದ ಪ್ರವಾಹದೊಳಗೆ ಹೊಗಿಸಲ್ಪಟ್ಟು, ಮಾತ್ರೆಗಳು ಅಥವಾ ಗುಳಿಗೆಗಳು ಒದಗಿಸುವುದಕ್ಕಿಂತ ಹೆಚ್ಚು ಶಕ್ತಿಶಾಲಿಯಾದ ಪರಿಹಾರವನ್ನು ಇದು ಒದಗಿಸುತ್ತದೆ ಎಂಬ ನಂಬಿಕೆಯೇ. ಕೆಲವು ದೇಶಗಳಲ್ಲಿ, ಮಾರುಕಟ್ಟೆಗಳಲ್ಲಿ ಅನುಮತಿಯಿಲ್ಲದ ‘ಸೂಜಿಮದ್ದು ವೈದ್ಯರನ್ನು’ ಕಾಣುವುದು ಸಾಮಾನ್ಯ.
ಸೂಜಿಮದ್ದುಗಳಲ್ಲಿ, ಗುಳಿಗೆಗಳು ಹಾಗೂ ಮಾತ್ರೆಗಳಲ್ಲಿರದ ಗಂಡಾಂತರಗಳಿವೆ. ಸೂಜಿಯು ಶುದ್ಧವಾಗಿರದಿದ್ದಲ್ಲಿ, ರೋಗಿಯು ಯಕೃತ್ತಿನ ಊತ, ಧನುರ್ವಾಯು, ಮತ್ತು ಏಯ್ಡ್ಸ್ನಿಂದಲೂ ಸೋಂಕಿತಗೊಳ್ಳಸಾಧ್ಯವಿದೆ. ಹೊಲಸಾದ ಸೂಜಿಯು ವೇದನಾಮಯವಾದ ಒಳಕುರುವನ್ನೂ ಉಂಟುಮಾಡಬಲ್ಲದು. ಸೂಜಿಮದ್ದು ಅನರ್ಹನಾದ ಒಬ್ಬ ವ್ಯಕ್ತಿಯಿಂದ ಕೊಡಲ್ಪಡುವಲ್ಲಿ, ಅಪಾಯಗಳು ಹೆಚ್ಚುತ್ತವೆ.
ನಿಮಗೆ ನಿಜವಾಗಿಯೂ ಒಂದು ಸೂಜಿಮದ್ದಿನ ಅಗತ್ಯ ಇರುವುದಾದರೆ, ವೈದ್ಯಕೀಯವಾಗಿ ಅರ್ಹನಾಗಿರುವ ಯಾರಾದರೊಬ್ಬನಿಂದ ಅದು ಕೊಡಲ್ಪಡುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಿರಿ. ನಿಮ್ಮ ಸಂರಕ್ಷಣೆಗಾಗಿ, ಸೂಜಿ ಮತ್ತು ಸಿರಿಂಜ್ ಎರಡೂ ಕ್ರಿಮಿಗಳಿಲ್ಲದಂತೆ ಸಂಸ್ಕರಿಸಲ್ಪಟ್ಟಿವೆ ಎಂಬುದನ್ನು ಯಾವಾಗಲೂ ಖಚಿತಪಡಿಸಿಕೊಳ್ಳಿರಿ.
ಖೋಟಾ ಔಷಧಗಳು
ಲೋಕಾರೋಗ್ಯ ಸಂಸ್ಥೆ (ಡಬ್ಲ್ಯೂಏಚ್ಓ)ಗನುಸಾರ, ಪ್ರತಿವರ್ಷ ಸುಮಾರು 17,000 ಕೋಟಿ ಡಾಲರು (ಯು.ಎಸ್)ಗಳನ್ನು ಒಳತರುತ್ತಾ, ಭೌಗೋಲಿಕ ಔಷಧವಸ್ತುಗಳ ಉದ್ಯಮವು ದೊಡ್ಡ ವ್ಯಾಪಾರವಾಗಿದೆ. ಈ ಸನ್ನಿವೇಶದಿಂದ ಸ್ವಪ್ರಯೋಜನವನ್ನು ಪಡೆದುಕೊಳ್ಳಲು ಆತುರರಾಗಿರುತ್ತಾ, ನೀತಿನಿಷ್ಠೆಗಳಿಲ್ಲದ ಜನರು ಕೃತಕ ಔಷಧವನ್ನು ಉತ್ಪಾದಿಸಿದ್ದಾರೆ. ಕೃತಕ ಔಷಧಗಳು ನಿಜವಾದ ಔಷಧಗಳಂತೆಯೇ ತೋರುತ್ತವೆ—ಅವುಗಳ ಹೆಸರುಪಟ್ಟಿಗಳೂ ಪ್ಯಾಕೆಜ್ಗಳೂ ನಿಜವಾದವುಗಳೆಂದು ತೋರುತ್ತವೆ—ಆದರೆ ಅವು ಅಯೋಗ್ಯವಾಗಿವೆ.
ಖೋಟಾ ಔಷಧಗಳು ಎಲ್ಲೆಡೆಯೂ ಇರುವಾಗ, ಅವು ವಿಶೇಷವಾಗಿ ವರ್ಧಿಷ್ಣು ಲೋಕದಲ್ಲಿ ಸಾಮಾನ್ಯವಾಗಿವೆ, ಮತ್ತು ಅವು ದುರಂತಕರ ಪರಿಣಾಮಗಳನ್ನು ತರುತ್ತವೆ. ನೈಜೀರಿಯದಲ್ಲಿ, ಔದ್ಯೋಗಿಕ ದ್ರಾವಕವನ್ನೊಳಗೊಂಡ ವೇದನಹಾರಿ ಸಿರಪ್ ಅನ್ನು ನುಂಗಿದ ಬಳಿಕ, ಮೂತ್ರ ಪಿಂಡದ ವಿಫಲತೆಯಿಂದ 109 ಮಕ್ಕಳು ಸತ್ತುಹೋದರು. ಮೆಕ್ಸಿಕೊದಲ್ಲಿ, ಸುಟ್ಟು ಗಾಯಗೊಂಡ ಬಲಿಪಶುಗಳು, ಗರಗಸದ ಪುಡಿ, ಕಾಫಿ, ಮತ್ತು ಹೊಲಸನ್ನೊಳಗೊಂಡ ಊಹಿತ ಪರಿಹಾರಕಗಳಿಂದ ಉದ್ರೇಕಕಾರಿ ಚರ್ಮದ ಸೋಂಕುಗಳನ್ನು ಅನುಭವಿಸಿದರು. ಬರ್ಮಾದಲ್ಲಿ, ಅನೇಕ ಹಳ್ಳಿಗರು ಮಲೇರಿಯ ಜ್ವರದ ವಿರುದ್ಧ ಹೋರಾಡದಿದ್ದ ಒಂದು ಖೋಟಾ ಔಷಧವನ್ನು ತೆಗೆದುಕೊಂಡದ್ದರ ಪರಿಣಾಮವಾಗಿ ಮಲೇರಿಯದಿಂದ ಸತ್ತಿದ್ದಿರಬಹುದು. ಡಬ್ಲ್ಯೂಏಚ್ಓ ತಿಳಿಸುವುದು, “ಗಂಡಾಂತರವನ್ನು ಹೆಚ್ಚಾಗಿ ಎದುರಿಸುವವರು ಪುನಃ ಒಮ್ಮೆ ಅತಿ ಬಡವರಾಗಿರುವ ಜನರೇ. ಒಂದು ಗೌರವಾನಿತ್ವ ಕಂಪನಿಯಿಂದ ಉತ್ಪಾದಿಸಲ್ಪಟ್ಟ ಒಂದು ಕಾರ್ಯಸಾಧಕ ಔಷಧವೆಂದು ತೋರುವ ವಸ್ತುವನ್ನು ಅವರು ಖರೀದಿಸುವಾಗ, ಅದು ಒಳ್ಳೆಯ ವ್ಯಾಪಾರವೆಂದು ಅವರು ಕೆಲವೊಮ್ಮೆ ಯೋಚಿಸುತ್ತಾರೆ.”
ಖೋಟಾ ಔಷಧಗಳಿಂದ ನೀವು ನಿಮ್ಮನ್ನು ಹೇಗೆ ರಕ್ಷಿಸಿಕೊಳ್ಳಸಾಧ್ಯವಿದೆ? ನೀವು ಖರೀದಿಸುವಂತಹದ್ದು ಆಸ್ಪತ್ರೆಯ ಔಷಧದಂಗಡಿಯಂತಹ ಒಂದು ಪ್ರಖ್ಯಾತ ಮೂಲದಿಂದಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿರಿ. ರಸ್ತೆಯ ತಿರುಗುವ್ಯಾಪಾರಿಗಳಿಂದ ಖರೀದಿಸಬೇಡಿರಿ. ನೈಜೀರಿಯದ ಬೆನಿನ್ ನಗರದಲ್ಲಿನ ಒಂದು ಔಷಧದಂಗಡಿಯವನು ಎಚ್ಚರಿಸುವುದು: “ರಸ್ತೆಯ ತಿರುಗುವ್ಯಾಪಾರಿಗಳಿಗೆ, ಔಷಧಗಳನ್ನು ಮಾರುವುದು ಕೇವಲ ಒಂದು ವ್ಯಾಪಾರವಾಗಿದೆ. ಅವರು ಔಷಧಗಳನ್ನು, ಮಿಠಾಯಿಗಳು ಅಥವಾ ಬಿಸ್ಕತ್ತುಗಳೊ ಎಂಬಂತೆ ಹಂಚುತ್ತಾರೆ. ಅವರು ಮಾರಾಟಮಾಡುವ ಔಷಧಗಳು ಅನೇಕ ವೇಳೆ ಅವಧಿ ತೀರಿದವುಗಳು ಇಲ್ಲವೆ ಖೋಟಾ ಔಷಧಗಳಾಗಿರುತ್ತವೆ. ಅವರು ಮಾರಾಟಮಾಡುತ್ತಿರುವ ಔಷಧಗಳ ಕುರಿತು ಈ ಜನರಿಗೆ ಏನೂ ಗೊತ್ತಿರುವುದಿಲ್ಲ.”
ಬಡತನದ ಸಮಸ್ಯೆ
ವ್ಯಕ್ತಿಯೊಬ್ಬನು ಪಡೆಯುವಂತಹ ವೈದ್ಯಕೀಯ ಚಿಕಿತ್ಸೆಯು ಅನೇಕ ವೇಳೆ ಅವನಲ್ಲಿರುವ ಹಣದ ಮೊತ್ತದಿಂದ ನಿರ್ಧರಿಸಲ್ಪಡುತ್ತದೆ. ಬೆಲೆಗಳನ್ನು ಕಡಿಮೆಗೊಳಿಸಲು ಮತ್ತು ಸಮಯವನ್ನು ಉಳಿಸಲು, ವರ್ಧಿಷ್ಣು ದೇಶಗಳಲ್ಲಿರುವ ಜನರು ವೈದ್ಯನನ್ನು ನಿರ್ಲಕ್ಷಿಸಿ, ಕಾನೂನಿನಿಂದ ಒಂದು ಔಷಧ ಸೂಚಿಯನ್ನು ಕೇಳಿಕೊಳ್ಳುವ ಔಷಧಗಳನ್ನು ಖರೀದಿಸಲು ನೇರವಾಗಿ ಔಷಧದಂಗಡಿಗೆ ಹೋಗುತ್ತಾರೆ. ಈ ಮೊದಲು ಆ ಔಷಧವನ್ನು ಅವರು ಉಪಯೋಗಿಸಿದ್ದರಿಂದ ಇಲ್ಲವೆ ಮಿತ್ರರು ಅದನ್ನು ಶಿಫಾರಸ್ಸು ಮಾಡುವುದರಿಂದ, ತಮ್ಮ ಕಾಯಿಲೆಗೆ ತಮಗೇನು ಬೇಕೆಂದು ಅವರಿಗೆ ಗೊತ್ತಿದೆ. ಆದರೆ ಅವರಿಗೆ ಬೇಕಾದದ್ದು ಅವರಿಗೆ ಅಗತ್ಯವಾಗಿರುವ ಔಷಧವಾಗಿರಲಿಕ್ಕಿಲ್ಲ.
ಇತರ ವಿಧಗಳಲ್ಲೂ ಬೆಲೆಗಳನ್ನು ಕಡಿಮೆಗೊಳಿಸಲು ಜನರು ಪ್ರಯತ್ನಿಸುತ್ತಾರೆ. ವೈದ್ಯನೊಬ್ಬನು ಒಂದು ಪ್ರಯೋಗಾಲಯ ಪರೀಕ್ಷೆ ನಡಿಸಿ, ನಿರ್ದಿಷ್ಟವಾದ ಔಷಧವನ್ನು ಸೂಚಿಸಿ ಬರೆಯುತ್ತಾನೆ. ರೋಗಿಯು ಔಷಧ ಸೂಚಿಯನ್ನು ಔಷಧದಂಗಡಿಗೆ ಒಯ್ಯುತ್ತಾನೆ, ಆದರೆ ಬೆಲೆಯು ಹೆಚ್ಚಾಗಿರುವುದನ್ನು ಕಂಡುಕೊಳ್ಳುತ್ತಾನೆ. ಆದುದರಿಂದ ಹೆಚ್ಚಿನ ಹಣಕ್ಕಾಗಿ ಹುಡುಕುವ ಬದಲು, ಜನರು ಅನೇಕ ವೇಳೆ ಅಗ್ಗವಾದ ಒಂದು ಔಷಧವನ್ನು ಖರೀದಿಸುವರು ಇಲ್ಲವೆ ವಿಧಿಸಲ್ಪಟ್ಟ ಔಷಧಗಳಲ್ಲಿ ಕೆಲವನ್ನು ಮಾತ್ರ ಖರೀದಿಸುವರು.
ನಿಮಗೆ ನಿಜವಾಗಿಯೂ ಔಷಧದ ಅಗತ್ಯವಿದೆಯೊ?
ನಿಮಗೆ ನಿಜವಾಗಿಯೂ ಔಷಧದ ಅಗತ್ಯವಿರುವಲ್ಲಿ, ನೀವು ತೆಗೆದುಕೊಳ್ಳುತ್ತಿರುವ ಔಷಧದ ಕುರಿತು ಕಂಡುಹಿಡಿಯಿರಿ. ಸೂಚಿಸಿ ಬರೆಯಲ್ಪಟ್ಟ ಔಷಧದ ಕುರಿತು ವೈದ್ಯನಲ್ಲಿ ಅಥವಾ ಔಷಧದಂಗಡಿಯವನಲ್ಲಿ ಪ್ರಶ್ನೆಗಳನ್ನು ಕೇಳಲು ಸಂಕೋಚಪಡಬೇಡಿರಿ. ತಿಳಿದುಕೊಳ್ಳುವ ಹಕ್ಕು ನಿಮಗಿದೆ. ಎಷ್ಟೆಂದರೂ, ನಿಮ್ಮ ದೇಹವೇ ಕಷ್ಟಾನುಭವಿಸಬಹುದು.
ನಿಮ್ಮ ಔಷಧವನ್ನು ನೀವು ಸರಿಯಾಗಿ ಉಪಯೋಗಿಸದಿದ್ದಲ್ಲಿ, ನೀವು ಸ್ವಸ್ಥರಾಗದಿರಬಹುದು. ಎಷ್ಟನ್ನು ತೆಗೆದುಕೊಳ್ಳಬೇಕು, ಯಾವಾಗ ತೆಗೆದುಕೊಳ್ಳಬೇಕು, ಮತ್ತು ಎಷ್ಟು ಸಮಯದ ವರೆಗೆ ತೆಗೆದುಕೊಳ್ಳಬೇಕೆಂಬುದನ್ನು ನೀವು ತಿಳಿದುಕೊಳ್ಳಬೇಕು. ಮತ್ತು ಅದನ್ನು ತೆಗೆದುಕೊಳ್ಳುವಾಗ ಯಾವ ಆಹಾರಗಳನ್ನು, ಪಾನೀಯಗಳನ್ನು, ಮತ್ತು ಇತರ ಔಷಧಗಳನ್ನು ಇಲ್ಲವೆ ಚಟುವಟಿಕೆಗಳನ್ನು ತೊರೆಯಬೇಕೆಂಬುದನ್ನೂ ನೀವು ತಿಳಿದಿರಬೇಕು. ಮತ್ತು ಸಂಭಾವ್ಯ ಪಕ್ಕ ಪರಿಣಾಮಗಳ ಕುರಿತು ಮತ್ತು ಅವು ಸಂಭವಿಸುವಲ್ಲಿ ಏನು ಮಾಡಬೇಕೆಂಬುದರ ಕುರಿತು ನೀವು ಅರಿವುಳ್ಳವರಾಗಿರುವ ಅಗತ್ಯವಿದೆ.
ಪ್ರತಿಯೊಂದು ವೈದ್ಯಕೀಯ ಸಮಸ್ಯೆಗೆ ಔಷಧಗಳು ಉತ್ತರವನ್ನು ಒದಗಿಸುವುದಿಲ್ಲವೆಂಬುದನ್ನೂ ಮನಸ್ಸಿನಲ್ಲಿಡಿರಿ. ನಿಮಗೆ ಔಷಧಗಳ ಅಗತ್ಯವೇ ಇಲ್ಲದಿರಬಹುದು. ಡಬ್ಲ್ಯೂಏಚ್ಓನ ಒಂದು ಪ್ರಕಾಶನವಾದ ವರ್ಲ್ಡ್ ಹೆಲ್ತ್ ಪತ್ರಿಕೆಯು ಹೇಳುವುದು: “ಅಗತ್ಯವಿದ್ದಾಗ ಮಾತ್ರ ಔಷಧವನ್ನು ಉಪಯೋಗಿಸಿರಿ. ವ್ಯಕ್ತಿಯೊಬ್ಬನು ಗುಣಹೊಂದುವಂತೆ ಸಹಾಯಮಾಡಲು, ವಿಶ್ರಾಮ, ಒಳ್ಳೆಯ ಆಹಾರ ಮತ್ತು ಕುಡಿಯಲು ಬಹಳಷ್ಟು ಪಾನೀಯವು ಅನೇಕ ವೇಳೆ ಸಾಕಾಗಿರುತ್ತದೆ.”
[ಪುಟ 23 ರಲ್ಲಿರುವ ಚೌಕ/ಚಿತ್ರಗಳು]
ಸುಮಾರು 2,000 ವರ್ಷಗಳ ಹಿಂದೆ ಒಬ್ಬ ರೋಮನ್ ಕವಿಯು ಹೀಗೆ ಬರೆದನು: “ಒಂದು ಸಾವಿರ ಕಾಯಿಲೆಗಳಿಗೆ ಒಂದು ಸಾವಿರ ಚಿಕಿತ್ಸೆಗಳು ಬೇಕಾಗಿವೆ.” ಇಂದು ಆ ಕವಿಯು ಹೀಗೆ ಬರೆಯುತ್ತಿದ್ದಿರಬಹುದು, ‘ಒಂದು ಸಾವಿರ ಕಾಯಿಲೆಗಳಿಗೆ ಒಂದು ಸಾವಿರ ಗುಳಿಗೆಗಳು ಬೇಕಾಗಿವೆ!’ ನಿಶ್ಚಯವಾಗಿಯೂ, ಬಹುಮಟ್ಟಿಗೆ ಪ್ರತಿಯೊಂದು ಕಾಯಿಲೆಗೆ—ವಾಸ್ತವವಾದ ಇಲ್ಲವೆ ಊಹಿತ—ಒಂದು ಗುಳಿಗೆ ಇರುವಂತೆ ತೋರುತ್ತದೆ. ವಿಶ್ವ ಬ್ಯಾಂಕಿಗನುಸಾರ, ಲೋಕವ್ಯಾಪಕವಾಗಿ 5,000ಕ್ಕಿಂತಲೂ ಹೆಚ್ಚಿನ ಸಕ್ರಿಯ ಪದಾರ್ಥಗಳಿಂದ ತಯಾರಿಸಲ್ಪಟ್ಟ ಸುಮಾರು 1,00,000 ಪ್ರಕಾರದ ಔಷಧಗಳಿವೆ.
[ಪುಟ 24 ರಲ್ಲಿರುವ ಚೌಕ/ಚಿತ್ರಗಳು]
ಔಷಧದ ವಿವೇಕಯುತವಾದ ಉಪಯೋಗ
1. ಅವಧಿ ತೀರಿದ ಔಷಧಗಳನ್ನು ಉಪಯೋಗಿಸಬೇಡಿರಿ.
2. ಪ್ರಖ್ಯಾತ ಮೂಲದಿಂದ ಖರೀದಿಸಿರಿ. ರಸ್ತೆಯ ತಿರುಗುವ್ಯಾಪಾರಿಗಳಿಂದ ಖರೀದಿಸಬೇಡಿರಿ.
3. ಉಪದೇಶಗಳನ್ನು ನೀವು ತಿಳಿದುಕೊಂಡಿದ್ದೀರಿ ಮತ್ತು ಅನುಸರಿಸುವಿರಿ ಎಂಬುದನ್ನು ಖಚಿತಪಡಿಸಿಕೊಳ್ಳಿರಿ.
4. ಇನ್ನೊಬ್ಬ ವ್ಯಕ್ತಿಗೆ ಸೂಚಿಸಿ ಬರೆಯಲ್ಪಟ್ಟ ಔಷಧಗಳನ್ನು ಉಪಯೋಗಿಸಬೇಡಿರಿ.
5. ಸೂಜಿಮದ್ದುಗಳು ಬೇಕೆಂಬುದಾಗಿ ಪಟ್ಟುಹಿಡಿಯಬೇಡಿರಿ. ಬಾಯಿಯ ಮೂಲಕ ತೆಗೆದುಕೊಳ್ಳಲ್ಪಡುವ ಔಷಧಗಳು ಅನೇಕ ವೇಳೆ ಅಷ್ಟೇ ಉತ್ತಮವಾಗಿ ಕಾರ್ಯಮಾಡುತ್ತವೆ.
6. ಔಷಧಗಳನ್ನು ಒಂದು ತಂಪಾದ ಸ್ಥಳದಲ್ಲಿ, ಮಕ್ಕಳಿಗೆ ಸಿಗದಂತೆ ಇಡಿರಿ.