ನಿಮ್ಮ ಜೀವನವನ್ನು ಈಗಲೇ ನಿಯಂತ್ರಣದಲ್ಲಿಟ್ಟುಕೊಳ್ಳಿರಿ!
ಮಾನವ ವರ್ತನೆ ಮತ್ತು ಪ್ರಚೋದನೆಯ ಕುರಿತಾದ ವೈಜ್ಞಾನಿಕ ಸಂಶೋಧನೆಯು, ಅನೇಕ ವಿಧಗಳಲ್ಲಿ ನಮಗೆ ಪ್ರಯೋಜನ ತಂದಿದೆ. ಒಂದು ಕಾಯಿಲೆಯ ಕುರಿತಾದ ಹೆಚ್ಚು ಸಂಪೂರ್ಣವಾದ ತಿಳಿವಳಿಕೆಯಿರುವುದರಿಂದ ಅದನ್ನು ನಿಭಾಯಿಸುವಂತೆ ನಾವು ಬಹುಶಃ ಸಹಾಯಿಸಲ್ಪಟ್ಟಿದ್ದೇವೆ. ಅದೇ ಸಮಯದಲ್ಲಿ, ಭಾವೋದ್ರೇಕಕರವಾದ ಸಿದ್ಧಾಂತಗಳು—ವಿಶೇಷವಾಗಿ ದೃಢವಾಗಿ ಸ್ಥಾಪಿಸಲ್ಪಟ್ಟ ಮೂಲತತ್ವಗಳನ್ನು ವಿರೋಧಿಸುವಂತೆ ತೋರುವ ಸಿದ್ಧಾಂತಗಳ ಸಂಬಂಧದಲ್ಲಿ ಮುಂಜಾಗ್ರತೆಯುಳ್ಳವರಾಗಿರುವುದು ವಿವೇಕಯುತವು.
ಆನುವಂಶಿಕತೆ ಹಾಗೂ ವರ್ತನೆಯ ವಿಷಯವಾಗಿ, ಈ ಪ್ರಶ್ನೆಗಳು ಏಳುತ್ತವೆ: ನಾವು ನಮ್ಮ ಜವಾಬ್ದಾರಿಗಳನ್ನು ತ್ಯಜಿಸಿಬಿಟ್ಟು, ನಮ್ಮ ಕ್ರಿಯೆಗಳಿಗೆ ಯಾವ ಆರೋಪವನ್ನೂ ಸ್ವೀಕರಿಸದಿರಲು ಸಾಧ್ಯವೊ? ಯಾವುದೇ ಅನೌಚಿತ್ಯ ಅಥವಾ ತಪ್ಪುಮಾಡುವಿಕೆಗಾಗಿರುವ ಶಿಕ್ಷೆಯಿಂದ ಬಿಡಿಸಿಕೊಳ್ಳಲು ಅಥವಾ ಬೇರೆ ಯಾರನ್ನಾದರೂ ಇಲ್ಲವೆ ಬೇರೆ ಯಾವುದೊ ವಿಷಯವನ್ನಾದರೂ ಆರೋಪಿಸುತ್ತಾ, ಹೀಗೆ ಈ “ನಾನಲ್ಲ” ಸಂತತಿಯಲ್ಲಿನ ವೃದ್ಧಿಯಾಗುತ್ತಿರುವ ಸಂಖ್ಯೆಗಳನ್ನು ನಾವು ಸೇರಬಲ್ಲೆವೊ? ಖಂಡಿತವಾಗಿಯೂ ಇಲ್ಲ. ಹೆಚ್ಚಿನ ಜನರು ಜೀವಿತದಲ್ಲಿನ ಯಾವುದೇ ಸಫಲತೆಗಳಿಗಾಗಿ ಸ್ವಇಚ್ಛೆಯಿಂದ ಪ್ರಶಸ್ತಿಯನ್ನು ತೆಗೆದುಕೊಳ್ಳುತ್ತಾರೆ, ಹಾಗಾದರೆ ತದ್ರೀತಿಯಲ್ಲಿ ತಮ್ಮ ತಪ್ಪುಗಳಿಗಾಗಿ ಹೊಣೆಗಾರಿಕೆಯನ್ನು ಸ್ವೀಕರಿಸಿಕೊಳ್ಳಲು ಅವರು ಏಕೆ ಇಷ್ಟಪಡುವುದಿಲ್ಲ?
ಆದಕಾರಣ, ಯಾರು ಅಥವಾ ಯಾವುದು ನಮ್ಮ ಜೀವಿತಗಳನ್ನು ಇಂದು ನಿಯಂತ್ರಿಸುತ್ತದೆ ಎಂಬುದರ ಕುರಿತು, ದೇವರ ವಾಕ್ಯವಾದ ಪವಿತ್ರ ಬೈಬಲಿಗೆ ಏನು ಹೇಳಲಿಕ್ಕಿದೆ? ಎಂದು ನಾವು ಕೇಳಬಹುದು.
ಬೈಬಲಿನ ನೋಟವು ಏನಾಗಿದೆ?
ನಾವು ಗ್ರಹಿಸಬೇಕಾದ ಮೊದಲನೆಯ ವಿಷಯವೇನೆಂದರೆ, ನಾವೆಲ್ಲರೂ ನಮ್ಮ ಮೂಲ ಹೆತ್ತವರಾದ ಆದಾಮಹವ್ವರಿಂದ ಪಿತ್ರಾರ್ಜಿತವಾಗಿ ಪಡೆದ ಪಾಪದಲ್ಲಿ ಜನಿಸಿರುತ್ತೇವೆ. (ಕೀರ್ತನೆ 51:5) ಹೆಚ್ಚಿನದ್ದಾಗಿ, “ಕಡೇ ದಿವಸಗಳು” ಎಂಬುದಾಗಿ ಕರೆಯಲ್ಪಡುವ ಒಂದು ವಿಶೇಷ ಸಮಯದಲ್ಲಿ ನಾವು ಜೀವಿಸುತ್ತಾ ಇದ್ದೇವೆ. ಈ ಸಮಯದಲ್ಲಿ ಜನರು “ನಿಭಾಯಿಸಲು ಕಠಿನವಾದ ಸಮಯಗಳ”ನ್ನು ಅನುಭವಿಸುತ್ತಾರೆ. (2 ತಿಮೊಥೆಯ 3:1, NW) ಸಾಮಾನ್ಯವಾಗಿ ಹೇಳುವುದಾದರೆ, ನಮ್ಮ ಪೂರ್ವಜರಿಗಿಂತಲೂ ನಮ್ಮ ಜೀವಿತಗಳ ಮೇಲೆ ಹಿತಕರವಾದ ನಿಯಂತ್ರಣವನ್ನು ಪ್ರಯೋಗಿಸುವುದರಲ್ಲಿ ನಾವು ಹೆಚ್ಚು ಸಮಸ್ಯೆಗಳನ್ನು ಎದುರಿಸುತ್ತೇವೆ ಎಂಬುದನ್ನು ಇದು ಸೂಚಿಸುತ್ತದೆ.
ಆದರೂ, ಸಕಲ ಮಾನವರೂ, ತಮ್ಮ ಸ್ವಂತ ವೈಯಕ್ತಿಕ ಆಯ್ಕೆಗಳನ್ನು ಮಾಡಬಲ್ಲ ಸ್ವತಂತ್ರ ನೈತಿಕ ಕಾರ್ಯಸ್ಥರಾಗಿದ್ದಾರೆ. ಅಷ್ಟರ ಮಟ್ಟಿಗೆ ಅವರು ತಮ್ಮ ಜೀವಿತಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಂಡವರಾಗಿದ್ದಾರೆ. ಇದು ಆರಂಭದ ಸಮಯಗಳಿಂದಲೂ ಹಾಗೆಯೇ ಇದೆ ಮತ್ತು ಇಸ್ರಾಯೇಲಿನ ರಾಷ್ಟ್ರಕ್ಕೆ ಯೆಹೋಶುವನು ನುಡಿದ ಮಾತುಗಳಲ್ಲಿ ಇದನ್ನು ನೋಡಸಾಧ್ಯವಿದೆ: “ಯಾರನ್ನು ಸೇವಿಸಬೇಕೆಂದಿದ್ದೀರಿ? ಈ ಹೊತ್ತೇ ಆರಿಸಿಕೊಳ್ಳಿರಿ.”—ಯೆಹೋಶುವ 24:15.
ಪಿಶಾಚನಾದ ಸೈತಾನನು ಪರಲೋಕದಿಂದ ದೊಬ್ಬಲ್ಪಟ್ಟಿದ್ದಾನೆ ಮತ್ತು ಈಗ, ಯಾವುದೇ ಸಮಯಕ್ಕಿಂತಲೂ ಹೆಚ್ಚಾಗಿ, ಇಡೀ ಮಾನವಕುಲದ ಮೇಲೆ ಕೆಟ್ಟತನಕ್ಕೆ ಬಲವಾದ ಪ್ರಭಾವವನ್ನು ಬೀರುತ್ತಾನೆಂದು ಬೈಬಲು ಅಂಗೀಕರಿಸುತ್ತದೆ. ಅಪೊಸ್ತಲ ಯೋಹಾನನ ದಿನಗಳಲ್ಲೂ ಇಡೀ ಲೋಕವು ದುಷ್ಟನ ಅಧಿಕಾರದಲ್ಲಿ ಬಿದ್ದಿತ್ತೆಂದು ಸಹ ಅದು ನಮಗೆ ಹೇಳುತ್ತದೆ. (1 ಯೋಹಾನ 5:19; ಪ್ರಕಟನೆ 12:9, 12) ಹಾಗಿದ್ದರೂ, ಸರ್ವಶಕ್ತನಾದ ದೇವರು ನಮ್ಮ ಪ್ರತಿಯೊಂದು ಕ್ರಿಯೆಯನ್ನು ನಿಯಂತ್ರಿಸದೆ ಅಥವಾ ಆತನೊಬ್ಬನಿಗೆ ಮಾತ್ರ ತಿಳಿದಿರುವ ಒಂದು ಅಂತ್ಯಕ್ಕೆ ನಮ್ಮನ್ನು ಪೂರ್ವನಿರ್ಣಯಿಸದಿರುವಂತೆಯೇ, ನಾವು ನಮ್ಮ ಪ್ರತಿಯೊಂದು ತಪ್ಪು ಅಥವಾ ಅಸಾಫಲ್ಯಗಳಿಗೆ ನೇರವಾಗಿ ಸೈತಾನನ ಮೇಲೆ ಆರೋಪವನ್ನು ಹೊರಿಸಬಾರದು. ಸರಿದೂಗಿಸುವ ಶಾಸ್ತ್ರೀಯ ಸತ್ಯವು ಏನೆಂದರೆ, “ಪ್ರತಿಯೊಬ್ಬನೂ ತನ್ನಲ್ಲಿರುವ ಆಶಾಪಾಶದಿಂದ ಎಳೆಯಲ್ಪಟ್ಟು ಮರುಳುಗೊಂಡವನಾಗಿ ಪ್ರೇರೇಪಿಸಲ್ಪಡುತ್ತಾನೆ. ಆ ಮೇಲೆ ಆಶೆಯು ಬಸುರಾಗಿ ಪಾಪವನ್ನು ಹೆರುತ್ತದೆ.” (ಯಾಕೋಬ 1:14, 15) ಅಪೊಸ್ತಲ ಪೌಲನು ಈ ಪ್ರೇರಿತ ಮಾತುಗಳನ್ನು ಬರೆದನು: “ಮೋಸಹೋಗಬೇಡಿರಿ; ದೇವರು ತಿರಸ್ಕಾರ ಸಹಿಸುವವನಲ್ಲ. ಮನುಷ್ಯನು ತಾನು ಏನು ಬಿತ್ತುತ್ತಾನೋ ಅದನ್ನೇ ಕೊಯ್ಯಬೇಕು.”—ಗಲಾತ್ಯ 6:7.
ಆದುದರಿಂದ ಯೆಹೋವ ದೇವರು ನಮ್ಮನ್ನು, ನಮ್ಮ ಕ್ರಿಯೆಗಳಿಗೆ ವೈಯಕ್ತಿಕವಾಗಿ ಹೊಣೆಗಾರರನ್ನಾಗಿ ಪರಿಗಣಿಸುತ್ತಾನೆ. ನಮ್ಮ ಆನುವಂಶೀಯ ರಚನೆ ಹಾಗೂ ಪಿತ್ರಾರ್ಜಿತವಾಗಿ ಪಡೆದ ಅಪರಿಪೂರ್ಣತೆಗಳಿಂದಾಗಿ ಸ್ವತಃ ಕ್ಷಮಿಸಿಕೊಳ್ಳಲು ಪ್ರಯತ್ನಿಸದಿರುವಂತೆ ನಾವು ಜಾಗರೂಕರಾಗಿರಬೇಕು. ದೇವರು ಗತಕಾಲದ ಸೊದೋಮ್ ಮತ್ತು ಗೊಮೋರದ ಹಿಂಸಾತ್ಮಕ, ಸಲಿಂಗಿ ಕಾಮಿ ಸಮುದಾಯದವರನ್ನು ತಮ್ಮ ಭ್ರಷ್ಟ ಕ್ರಿಯೆಗಳಿಗಾಗಿ ಹೊಣೆಗಾರರನ್ನಾಗಿ ಎಣಿಸಿದನು. ಸ್ಪಷ್ಟವಾಗಿಯೇ, ಆ ನಿವಾಸಿಗಳನ್ನು ಆತನು ಕನಿಕರ ಯೋಗ್ಯ, ಯಾವುದೊ ಅಂಗೀಕೃತ ಆನುವಂಶೀಯ ದೋಷದ ಕಾರಣದಿಂದಾಗಿ ದುಷ್ಟರಾಗಿರುವ ಹೊರತು ಅನ್ಯಮಾರ್ಗವಿರದ ಅದೃಷ್ಟಹೀನ ಜೀವಿಗಳೆಂದು ಪರಿಗಣಿಸಲಿಲ್ಲ. ತದ್ರೀತಿಯಲ್ಲಿ, ನೋಹನ ದಿನಗಳಲ್ಲಿ ಜೀವಿಸುತ್ತಿದ್ದ ಜನರ ಸುತ್ತಲೂ ಬಹಳಷ್ಟು ದುಷ್ಟ ಪ್ರಭಾವಗಳಿದ್ದವು; ಆದರೂ, ಬೇಗನೆ ಸಂಭವಿಸಲಿಕ್ಕಿದ್ದ ಜಲಪ್ರಳಯವನ್ನು ಅವರು ಪಾರಾಗಬೇಕಿದ್ದರೆ, ಅವರೊಂದು ಆಯ್ಕೆ—ಒಂದು ವೈಯಕ್ತಿಕ ನಿರ್ಣಯ—ಯನ್ನು ಮಾಡಬೇಕಿತ್ತು. ಕೊಂಚ ಜನರು ಸರಿಯಾದ ಆಯ್ಕೆಯನ್ನು ಮಾಡಿದರು. ಹೆಚ್ಚಿನ ಜನರು ಸರಿಯಾದ ಆಯ್ಕೆಯನ್ನು ಮಾಡಲಿಲ್ಲ.
ದೇವರ ಅನುಗ್ರಹವನ್ನು ನಾವು ಪಡೆದುಕೊಳ್ಳಬೇಕಾದಲ್ಲಿ, ವೈಯಕ್ತಿಕ ನಿಯಂತ್ರಣವು ಆವಶ್ಯಕವೆಂಬುದನ್ನು ಹೀಬ್ರು ಪ್ರವಾದಿಯಾದ ಯೆಹೆಜ್ಕೇಲನು ದೃಢಪಡಿಸುತ್ತಾನೆ: “ನೀನು ದುಷ್ಟನನ್ನು ಎಚ್ಚರಿಸಿದರೂ ಅವನು ತನ್ನ ದುಷ್ಟತನವನ್ನೂ ದುರ್ಮಾರ್ಗವನ್ನೂ ಬಿಡದೆಹೋದರೆ ತನ್ನ ಅಪರಾಧದಿಂದ ಸಾಯುವನು; ನೀನೋ ನಿನ್ನ ಪ್ರಾಣವನ್ನು ಉಳಿಸಿಕೊಂಡಿರುವಿ.”—ಯೆಹೆಜ್ಕೇಲ 3:19.
ಲಭ್ಯವಿರುವ ಅತ್ಯುತ್ತಮ ಸಹಾಯ
ನಿಶ್ಚಯವಾಗಿಯೂ, ನಮ್ಮ ಪ್ರತಿದಿನದ ಜೀವಿತದಲ್ಲಿ ವೈಯಕ್ತಿಕ ನಿಯಂತ್ರಣವನ್ನು ಪ್ರಯೋಗಿಸಲು ನಮಗೆಲ್ಲರಿಗೆ ಸಹಾಯವು ಬೇಕಾಗಿದೆ, ಮತ್ತು ನಮ್ಮಲ್ಲಿ ಅನೇಕರಿಗೆ, ಇದು ನಿಜವಾಗಿಯೂ ಒಂದು ಪಂಥಾಹ್ವಾನವಾಗಿದೆ. ಆದರೆ ನಾವು ಹತಾಶರಾಗಬೇಕಿಲ್ಲ. ಪಿತ್ರಾರ್ಜಿತವಾಗಿ ಪಡೆದುಕೊಂಡಿರುವ ನಮ್ಮ ಪಾಪಪೂರ್ಣ ಒಲವುಗಳು ದೇವರಿಗೆ ಸ್ವೀಕಾರಾರ್ಹವಾಗಿರದಿದ್ದರೂ, ನಾವು ನಮ್ಮ ವರ್ತನೆಯನ್ನು ಬದಲಾಯಿಸಲು ಬಯಸುವಲ್ಲಿ, ಲಭ್ಯವಿರುವ ಅತ್ಯುತ್ತಮ ಸಹಾಯವನ್ನು—ತನ್ನ ಪವಿತ್ರಾತ್ಮ ಹಾಗೂ ತನ್ನ ಪ್ರೇರಿತ ಸತ್ಯವನ್ನು—ಆತನು ಒದಗಿಸುವನು. ನಮ್ಮಲ್ಲಿರಬಹುದಾದ ಯಾವುದೇ ಆನುವಂಶೀಯ ಮನೋಭಾವ ಮತ್ತು ನಮ್ಮನ್ನು ಬಾಧಿಸಬಹುದಾದ ಯಾವುದೇ ಬಾಹ್ಯ ಪ್ರಭಾವಗಳ ಹೊರತೂ, ನಾವು “ಪೂರ್ವಸ್ವಭಾವವನ್ನು ಅದರ ಕೃತ್ಯಗಳ ಕೂಡ ತೆಗೆದಿಟ್ಟು ನೂತನಸ್ವಭಾವವನ್ನು [ಸ್ವತಃ] ಧರಿಸಿ”ಕೊಳ್ಳಬಲ್ಲೆವು. “ಈ ಸ್ವಭಾವವು ಅದನ್ನು ಸೃಷ್ಟಿಸಿದಾತನ ಹೋಲಿಕೆಯ ಮೇರೆಗೆ ದಿನೇ ದಿನೇ ನೂತನವಾಗುತ್ತಾ ಪೂರ್ಣಜ್ಞಾನವನ್ನು ಉಂಟುಮಾಡುತ್ತದೆ.”—ಕೊಲೊಸ್ಸೆ 3:9, 10.
ಕೊರಿಂಥ ಸಭೆಯಲ್ಲಿದ್ದ ಅನೇಕ ಕ್ರೈಸ್ತರು ತಮ್ಮ ವರ್ತನೆಯಲ್ಲಿ ಎದ್ದುಕಾಣುವಂತಹ ಬದಲಾವಣೆಗಳನ್ನು ಮಾಡಿದರು. ಪ್ರೇರಿತ ದಾಖಲೆಯು ನಮಗೆ ಹೇಳುವುದು: “ಮೋಸಹೋಗಬೇಡಿರಿ, ಜಾರರು ವಿಗ್ರಹಾರಾಧಕರು ವ್ಯಭಿಚಾರಿಗಳು ವಿಟರು ಪುರುಷಗಾಮಿಗಳು ಕಳ್ಳರು ಲೋಭಿಗಳು ಕುಡಿಕರು ಬೈಯುವವರು ಸುಲುಕೊಳ್ಳುವವರು ಇವರೊಳಗೆ ಒಬ್ಬರಾದರೂ ದೇವರ ರಾಜ್ಯಕ್ಕೆ ಬಾಧ್ಯರಾಗುವದಿಲ್ಲ. ನಿಮ್ಮಲ್ಲಿ ಕೆಲವರು ಅಂಥವರಾಗಿದ್ದಿರಿ; ಆದರೂ ಕರ್ತನಾದ ಯೇಸು ಕ್ರಿಸ್ತನ ಹೆಸರಿನಲ್ಲಿಯೂ ನಮ್ಮ ದೇವರ ಆತ್ಮದಲ್ಲಿಯೂ ತೊಳೆದುಕೊಂಡಿರಿ, ದೇವಜನರಾದಿರಿ, ನೀತಿವಂತರೆಂಬ ನಿರ್ಣಯವನ್ನು ಹೊಂದಿದಿರಿ.”—1 ಕೊರಿಂಥ 6:9-11.
ಆದುದರಿಂದ ನಾವು ನಮ್ಮ ಅಪರಿಪೂರ್ಣತೆಗಳೊಂದಿಗೆ ಹೆಣಗಾಡುತ್ತಿರುವಲ್ಲಿ, ನಾವು ಅವುಗಳಿಗೆ ಅಧೀನರಾಗದಿರೋಣ. ಅನೇಕ ಆಧುನಿಕ ದಿನದ ಕ್ರೈಸ್ತರು ಯೆಹೋವನ ಸಹಾಯದಿಂದ, ತಾವು ‘ದೇವರ ಚಿತ್ತಕ್ಕನುಸಾರವಾದದ್ದು, ಅಂದರೆ ಉತ್ತಮವಾದದ್ದೂ ಮೆಚ್ಚಿಕೆಯಾದದ್ದೂ ದೋಷವಿಲ್ಲದ್ದೂ ಯಾವ ಯಾವದೆಂದು ವಿವೇಚಿಸಿ ತಿಳುಕೊಳ್ಳಲು’ ಶಕ್ತರಾಗಿದ್ದೇವೆಂಬುದನ್ನು ರುಜುಪಡಿಸಿದ್ದಾರೆ. ಅವರು, ಯಾವಾವ ವಿಷಯಗಳು ಸತ್ಯವೂ, ಮಾನ್ಯವೂ, ನ್ಯಾಯವೂ, ಶುದ್ಧವೂ, ಪ್ರೀತಿಕರವೂ, ಮನೋಹರವೂ, ಸ್ತುತಿಯೋಗ್ಯವೂ ಆಗಿವೆಯೊ, ಅವುಗಳ ಮೇಲೆ ತಮ್ಮ ಮನಸ್ಸುಗಳನ್ನಿಡುತ್ತಾರೆ; ಮತ್ತು ಅವರು “ಈ ವಿಷಯಗಳನ್ನು ಪರಿಗಣಿಸುತ್ತಾ ಇರುವುದನ್ನು ಮುಂದುವರಿಸುತ್ತಾರೆ.” ಅವರು ಗಟ್ಟಿಯಾದ ಆತ್ಮಿಕ ಆಹಾರವನ್ನು ತೆಗೆದುಕೊಳ್ಳುತ್ತಾರೆ ಮತ್ತು ಅದರ ಉಪಯೋಗದ ಮೂಲಕ, ಸರಿ ಹಾಗೂ ತಪ್ಪುಗಳ—ಇವೆರಡರ—ವ್ಯತ್ಯಾಸ ತೋರಿಸಲು ತಮ್ಮ ಗ್ರಹಣಶಕ್ತಿಗಳನ್ನು ತರಬೇತಿಗೊಳಿಸಿಕೊಂಡಿದ್ದಾರೆ.—ರೋಮಾಪುರ 12:2; ಫಿಲಿಪ್ಪಿ 4:8, NW; ಇಬ್ರಿಯ 5:14.
ಆಧುನಿಕ ದಿನದ ಕ್ರೈಸ್ತರ ಹೋರಾಟಗಳು, ಅವರ ತಾತ್ಕಾಲಿಕ ಅಪಜಯಗಳು, ಮತ್ತು ದೇವರ ಪವಿತ್ರಾತ್ಮದ ಸಹಾಯದಿಂದ ಅವರು ಪಡೆದುಕೊಂಡ ಕಟ್ಟಕಡೆಗಿನ ಯಶಸ್ಸಿನ ಕುರಿತಾಗಿ ತಿಳಿದುಕೊಳ್ಳುವುದು ಹುರಿದುಂಬಿಸುವಂತಹದ್ದಾಗಿದೆ. ನಮ್ಮ ವರ್ತನೆಯನ್ನು ಬದಲಾಯಿಸುವುದು ಅನೇಕ ವೇಳೆ ಹೃದಯ ಮತ್ತು ಅದರ ಬಯಕೆಯನ್ನು ಒಳಗೊಳ್ಳುತ್ತದೆಂದು ದೇವರು ನಮಗೆ ಆಶ್ವಾಸನೆ ನೀಡುತ್ತಾನೆ: “ಜ್ಞಾನವು ನಿನ್ನ ಹೃದಯದೊಳಗೆ ಪ್ರವೇಶಿಸುವದು, ತಿಳುವಳಿಕೆಯು ನಿನ್ನ ಆತ್ಮಕ್ಕೆ ಅಂದವಾಗಿರುವದು. ಬುದ್ಧಿಯು ನಿನಗೆ ಕಾವಲಾಗಿರುವದು, ವಿವೇಕವು ನಿನ್ನನ್ನು ಕಾಪಾಡುವದು; ಇದರಿಂದ ನೀನು ದುರ್ಮಾರ್ಗದಿಂದಲೂ ಕೆಟ್ಟ ಮಾತನಾಡುವವರಿಂದಲೂ ತಪ್ಪಿಸಿಕೊಳ್ಳುವಿ.”—ಜ್ಞಾನೋಕ್ತಿ 2:10-12.
ಆದುದರಿಂದ, ನೀವು ನಿತ್ಯ ಜೀವವನ್ನು ನಿಮ್ಮ ಗುರಿಯನ್ನಾಗಿ ಮಾಡಲು ಬಯಸುವಲ್ಲಿ—ಈ ದುಷ್ಟ ಲೋಕದ ತೊಂದರೆಗಳಿಲ್ಲದ ಹಾಗೂ ದುರ್ಬಲಗೊಳಿಸುವ ಅಪರಿಪೂರ್ಣತೆಗಳಿಂದ ಮುಕ್ತವಾದ ಜೀವನ—ನಿಮ್ಮ ಜೀವಿತವನ್ನು ಈಗಲೇ ನಿಯಂತ್ರಣದಲ್ಲಿಟ್ಟುಕೊಳ್ಳುವ ವಿಷಯದಲ್ಲಿ ‘ಸ್ವತಃ ಹೆಣಗಾಡಿರಿ’ ಮತ್ತು ಸ್ವರ್ಗೀಯ ವಿವೇಕದಿಂದ ಮಾರ್ಗದರ್ಶಿಸಲ್ಪಡಿರಿ. (ಲೂಕ 13:24) ನೀವು ಆತ್ಮನಿಯಂತ್ರಣದ ಫಲವನ್ನು ಉತ್ಪಾದಿಸಶಕ್ತರಾಗುವಂತೆ, ಯೆಹೋವನ ಪವಿತ್ರಾತ್ಮದ ಸಹಾಯದ ಪ್ರಯೋಜನವನ್ನು ಸ್ವತಃ ಪಡೆದುಕೊಳ್ಳಿರಿ. ನಿಮ್ಮ ಜೀವನವನ್ನು ದೇವರ ನಿಯಮಗಳಿಗೆ ಹೊಂದಿಕೆಯಲ್ಲಿ ತರುವುದನ್ನು ನಿಮ್ಮ ಹೃದಯದ ಬಯಕೆಯನ್ನಾಗಿ ಮಾಡಿಕೊಂಡು, ಈ ಬುದ್ಧಿವಾದಕ್ಕೆ ಕಿವಿಗೊಡಿರಿ: “ನಿನ್ನ ಹೃದಯವನ್ನು ಬಹು ಜಾಗರೂಕತೆಯಿಂದ ಕಾಪಾಡಿಕೋ; ಅದರೊಳಗಿಂದ ಜೀವಧಾರೆಗಳು ಹೊರಡುವವು.” (ಜ್ಞಾನೋಕ್ತಿ 4:23) ದೇವರ ಹೊಸ ಲೋಕದಲ್ಲಿ—ಎಲ್ಲಿ ಯೆಹೋವ ದೇವರು ಯೇಸು ಕ್ರಿಸ್ತನ ಪ್ರಾಯಶ್ಚಿತ್ತ ಯಜ್ಞದಲ್ಲಿನ ನಂಬಿಕೆಯ ಆಧಾರದ ಮೇಲೆ ಎಲ್ಲ ಆನುವಂಶೀಯ ನ್ಯೂನತೆಗಳನ್ನು ಸರಿಪಡಿಸುವನೊ, ಅಲ್ಲಿ—“ವಾಸ್ತವವಾದ ಜೀವವನ್ನು” ಪಡೆದುಕೊಳ್ಳುವುದು, ಈ ಲೋಕದಲ್ಲಿ ನಿಮ್ಮ ಜೀವನವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ನೀವು ಮಾಡುವ ಸಕಲ ಪ್ರಯತ್ನಗಳಿಗೆ ಯೋಗ್ಯವಾಗಿದೆ!—1 ತಿಮೊಥೆಯ 6:19; ಯೋಹಾನ 3:16.
[ಪುಟ 0 ರಲ್ಲಿರುವ ಚಿತ್ರ]
ಬೈಬಲನ್ನು ಅಭ್ಯಸಿಸುವುದು, ಆಳವಾಗಿ ಬೇರೂರಿರುವ ಬಲಹೀನತೆಗಳನ್ನು ಜಯಿಸಲು ನಮಗೆ ಬಲವನ್ನು ಕೊಡಬಲ್ಲದು
[ಪುಟ 0 ರಲ್ಲಿರುವ ಚಿತ್ರ]
ಬೈಬಲ್ ಅಧ್ಯಯನವು, ನಾವು ದೇವರ ನೈತಿಕ ಮಟ್ಟಗಳಿಗೆ ನಿಷ್ಠಾವಂತರಾಗಿರುವಂತೆ ಸಹಾಯಮಾಡಬಲ್ಲದು