ಹವಳ—ಅಪಾಯದಲ್ಲಿದೆ ಮತ್ತು ಸಾಯುತ್ತಿದೆ
ಸಾಗರವು ಉಷ್ಣವಲಯದಲ್ಲಿರುವಷ್ಟು ಪಾರದರ್ಶಕವಾಗಿ ಇನ್ನೆಲ್ಲಿಯೂ ಇರುವುದಿಲ್ಲ. ಸ್ಫಟಿಕದಂತೆ ಶುಭ್ರ. ನೀಲ ಸ್ಫಟಿಕ. 15 ಮೀಟರ್ಗಳಷ್ಟು ಕೆಳಗಿರುವ ಮರಳು ತಳವು ನಿಮಗೆ ಸ್ಪರ್ಶಿಸಸಾಧ್ಯವಿರುವಷ್ಟು ಹತ್ತಿರವಿದೆಯೆಂದು ಕಾಣುತ್ತದೆ! ಈಜು ರೆಕ್ಕೆಗಳನ್ನು ಧರಿಸಿ, ಒಂದು ಮೊಗವಾಡ ಹಾಕಿಕೊಳ್ಳಿ. ಆ ಬೆಚ್ಚನೆಯ ನೀರಿಗೆ ನೀವು ಇಳಿದು, ನೀರ್ಗುಳ್ಳೆಗಳು ನಿಮ್ಮ ದೃಷ್ಟಿಯನ್ನು ಒಂದು ಕ್ಷಣ ಮಬ್ಬಾಗಿಸುವಾಗ ನಿಮ್ಮ ಸ್ನಾರ್ಕೆಲ್ ಉಸಿರಾಟದ ಉಪಕರಣವನ್ನು ಸರಿಪಡಿಸಿಕೊಳ್ಳಿರಿ. ಆಮೇಲೆ ಕೆಳಗೆ ನೋಡಿರಿ. ಅಗೋ! ಆ ದೊಡ್ಡ ಕೆಂಪು ಮತ್ತು ನೀಲ ಬಣ್ಣದ ಪ್ಯಾರಟ್ ಮೀನು, ಹವಳವನ್ನು ಕಚ್ಚಿ, ತುಂಡುಗಳನ್ನು ಉಗಿಯುವುದನ್ನು ಮತ್ತು ಅವುಗಳು ಮರಳು ಮುಚ್ಚಿದ ತಳದ ಭಾಗವಾಗುವುದನ್ನು ನೋಡಿ. ಥಟ್ಟನೆ, ಉಷ್ಣವಲಯದ ಮೀನುಗಳ ಕೆಂಪು, ಹಳದಿ, ನೀಲ, ಕಿತ್ತಿಳೆ, ಕೆನ್ನೀಲಿ ಬಣ್ಣಗಳ ರಜತ ಮಳೆಬಿಲ್ಲೊಂದು ಮಿಂಚಿನಂತೆ ದಾಟಿಹೋಗುತ್ತದೆ. ಜೀವವು ಎಲ್ಲೆಡೆಗಳಲ್ಲಿಯೂ ಚಲಿಸುತ್ತಿದೆ. ನಿಮ್ಮ ಜ್ಞಾನೇಂದ್ರಿಯಗಳನ್ನು ಅದು ಭಾವಪರವಶಗೊಳಿಸುತ್ತದೆ.
ಇದು ಹವಳ ಕಾಡು. ಮರಳು ಮುಚ್ಚಿದ ತಳದಿಂದ ಅದು ಎದ್ದುಬಂದು ಸಾವಿರಾರು ಜೀವಂತ ತೋಳುಗಳನ್ನು ಚಾಚುತ್ತದೆ. ತುಸು ಮುಂದೆ, ಸಾರಂಗ ಶೃಂಗದ ಆರು ಮೀಟರುಗಳಿಗೂ ಹೆಚ್ಚು ಎತ್ತರ ಮತ್ತು ಸುಮಾರು ಅಷ್ಟೇ ಅಗಲವುಳ್ಳ ಒಂದು ಭವ್ಯವಾದ ಸಾಲಿದೆ. ಸುಮಾರು 23 ಮೀಟರುಗಳ ದೂರದಲ್ಲಿ ಸಾರಂಗ ಶೃಂಗಕ್ಕಿಂತ ಸಣ್ಣದಾದ, ಅವುಗಳ ತೆಳು ಕೊಂಬೆಗಳು ಕಾಡಿನಂತೆ ಆ ಸ್ಥಳವನ್ನು ಆವರಿಸಿರುವ ಹರಿಣಶೃಂಗ ಹವಳಗಳಿವೆ. ಈ ಹವಳಗಳನ್ನು ಎಷ್ಟು ಸಮಂಜಸವಾಗಿ ಹೆಸರಿಸಲಾಗಿದೆ; ಅವು ಕಾರ್ಯತಃ ಮೃಗದ ಕೊಂಬುಗಳಂತೆ ತೋರುತ್ತವೆ! ಮೀನು ಮತ್ತು ಇತರ ಕಡಲ ಜೀವಿಗಳು ಅವುಗಳ ಕೊಂಬೆಗಳಲ್ಲಿ ಆಹಾರ ಮತ್ತು ಆಶ್ರಯವನ್ನು ಕಂಡುಕೊಳ್ಳುತ್ತವೆ.
ಸಸ್ಯಗಳಿಂದ ಮಾಡಲ್ಪಟ್ಟಿದೆಯೆಂದು ಒಮ್ಮೆ ನೆನಸಲಾಗಿದ್ದ ಹವಳವು, ಪಾಲಿಪ್ ಹವಳಹುಳು ಸಮುದಾಯಗಳಿಂದ ಮಾಡಲ್ಪಡುವ ಸುಣ್ಣಕಲ್ಲು ರಚನೆಯಾಗಿದೆ ಎಂದು ಈಗ ತಿಳಿದುಬಂದಿದೆ. ಹೆಚ್ಚಿನ ಪಾಲಿಪ್ಗಳು ವ್ಯಾಸದಲ್ಲಿ 2.5 ಸೆಂಟಿಮೀಟರಿಗೂ ಕಡಮೆಯಾಗಿದ್ದು ಚಿಕ್ಕವಾಗಿವೆ. ಮೃದು ದೇಹದ ಹವಳ ಪಾಲಿಪ್ ತನ್ನನ್ನು ತನ್ನ ನೆರೆಯವನಿಗೆ ಲೋಳೆಯಿಂದಾವೃತವಾದ ಅಂಗಾಂಶದಿಂದ ಸಿಕ್ಕಿಸಿಕೊಳ್ಳುತ್ತದೆ. ಪಾಲಿಪ್ಗಳು ಅವುಗಳ ಅಸ್ಥಿಪಂಜರಗಳೊಳಗೆ ಹಿಮ್ಮೆಟ್ಟುವುದರಿಂದ ಹವಳವು ಹಗಲಿನಲ್ಲಿ ಕಲ್ಲಿನಂತೆ ಕಂಡುಬರುತ್ತದೆ. ಆದರೆ ರಾತ್ರಿಯಲ್ಲಿ ಅವುಗಳ ಚಾಚಿರುವ ಸ್ಪರ್ಶಾಂಗಗಳು ಮೆತ್ತಗೆ ತೂಗಾಡುವಾಗ ಅದು ರೂಪಾಂತರ ಹೊಂದಿ, ಆ ದಿಬ್ಬಕ್ಕೆ ಮೃದು ಮತ್ತು ಮಸುಕಾದ ತೋರಿಕೆಯನ್ನು ಕೊಡುತ್ತದೆ. ಪಾಲಿಪ್ಗಳು ಭಾಗಿಗಳಾಗಿರುವ ಆ ಕಲ್ಲಿನಂತಹ “ಮರ”ವು ಅವುಗಳ ಸಂಯುಕ್ತ ಅಸ್ತಿಪಂಜರವಾಗಿದ್ದು, ಕಡಲ ನೀರಿನಿಂದ ಕ್ಯಾಲ್ಸಿಯಮ್ ಕಾರ್ಬೊನೇಟ್ನ ಹೀರಿಕೆಯಿಂದ ಜೋಡಿಸಲ್ಪಟ್ಟದಾಗಿದೆ.
ಪ್ರತಿಯೊಂದು ವಿಧದ ಹವಳ ಸಮುದಾಯವು ತನ್ನದೇ ಆದ ಅಪೂರ್ವ ಅಸ್ಥಿಪಂಜರದಂತಹ ಆಕೃತಿಯನ್ನು ರಚಿಸುತ್ತದೆ. ಲೋಕಾದ್ಯಂತವಾಗಿ, ದಿಗ್ಭ್ರಮೆ ಹಿಡಿಸುವ ಆಕಾರ, ಗಾತ್ರ ಮತ್ತು ಬಣ್ಣಗಳಿರುವ 350ಕ್ಕೂ ಹೆಚ್ಚು ವಿವಿಧ ನಮೂನೆಗಳ ಹವಳಗಳಿವೆ. ಅವುಗಳ ಸಾಮಾನ್ಯ ಹೆಸರುಗಳು ಭೂವಸ್ತುಗಳನ್ನು—ಮರ, ಕಂಬ, ಮೇಜು, ಅಥವಾ ಕೊಡೆ ಹವಳ—ಅಥವಾ ಸಸ್ಯಗಳನ್ನು—ಕಾರ್ನೇಷನ್, ಲೆಟಿಸ್, ಸ್ಟ್ರಾಬೆರಿ ಅಥವಾ ನಾಯಿಕೊಡೆ ಹವಳವನ್ನು ನೆನಪಿಸುತ್ತವೆ. ಆ ದೊಡ್ಡ ಮಿದುಳು ಹವಳವನ್ನು ನೋಡುತ್ತೀರೊ? ಅದು ತನ್ನ ಹೆಸರನ್ನು ಹೇಗೆ ಪಡೆಯಿತೆಂದು ನೋಡುವುದು ಸುಲಭ!
ಈ ನೀರೊಳಗಣ ಕಾಡು, ಸೂಕ್ಷ್ಮದರ್ಶಕೀಯ ಸಸ್ಯ ಮತ್ತು ಪ್ರಾಣಿಗಳಿಂದ ಹಿಡಿದು, ರೇ ಮೀನು, ಷಾರ್ಕ್ ಮೀನು, ದೊಡ್ಡ ಮೋರೇ ಹಾವುಮೀನು ಮತ್ತು ಕಡಲಾಮೆಗಳ ವರೆಗೆ ಜೀವಭರಿತವಾಗಿದೆ. ನೀವು ಹಿಂದೆಂದೂ ಕೇಳಿದ್ದಿರದ ಕೆಲವು ಮೀನುಗಳು ಇಲ್ಲಿವೆ—ಉಜ್ವಲ ಹಳದಿ ಬಣ್ಣದ ಕ್ಲೌನ್ ಮೀನು, ಕೆನ್ನೀಲಿ ಬಣ್ಣದ ಬೋ ಗ್ರೆಗರಿಗಳು, ಕಪ್ಪು ಬಿಳಿ ಮೋರಿಷ್ ಐಡಲ್ಗಳು, ಕಿತ್ತಿಳೆ ಬಣ್ಣದ ಟ್ರಂಪೆಟ್ ಮೀನು, ಕರಿನೀಲಿ ಸರ್ಜನ್ ಮೀನು, ನೀಲಿ ಹ್ಯಾಮ್ಲೆಟ್ಗಳು, ಅಥವಾ ಕಂದು ಮತ್ತು ಹಳದಿಗಂದು ಲಯನ್ ಮೀನು. ಮತ್ತು ಬಾರ್ಬರ್ಷಾಪ್ ಸಿಗಡಿ, ಪೆಯಿಂಟೆಡ್ ಏಡಿಗಳು ಅಥವಾ ಸ್ಕಾರ್ಲೆಟ್ ಹಾಕ್ ಮೀನುಗಳ ವಿಷಯವೊ? ಎಲ್ಲ ಬಣ್ಣಗಳು, ಎಲ್ಲ ಗಾತ್ರಗಳು, ಎಲ್ಲ ಆಕಾರಗಳು ಇಲ್ಲಿವೆ. ಕೆಲವು ಸುಂದರ, ಇನ್ನು ಕೆಲವು ವಿಲಕ್ಷಣವಾದರೂ ಎಲ್ಲವೂ ಹೃದಯಂಗಮವಾಗಿವೆ. ಅಲ್ಲಿ ನೋಡಿ, ಆ ಕಂಬ ಹವಳದ ಹಿಂದುಗಡೆ ಒಂದು ಆಕ್ಟಪಸ್ (ಅಷ್ಟಪಾದಿಯು) ಅಡಗಿಕೊಂಡಿದೆ! ಅದು ತಾನೇ ಒಡೆದಿದ್ದ ಚಿಪ್ಪುಮೀನನ್ನು ತಿನ್ನುತ್ತಿದೆ. ಭೂಕಾಡುಗಳಲ್ಲಿರುವಂತೆಯೇ, ಈ ಕಡಲ ಪರಿಸರದ ರಚನೆಯಲ್ಲಿ ಎಲ್ಲವೂ ಅದರ ವೈವಿಧ್ಯದ ಮೇಲೆ ಹೊಂದಿಕೊಂಡಿರುವ, ಮಹತ್ತರವಾದ ಜೀವ ವಿವಿಧತೆಯು ಅನ್ಯೋನ್ಯವಾಗಿ ಹೆಣೆದುಕೊಂಡಿದೆ. ಹವಳದ ಪುನರುತ್ಪತ್ತಿ ಚಕ್ರ ಮತ್ತು ಹೊಸ ದಿಬ್ಬ ಸಮುದಾಯಗಳನ್ನು ರಚಿಸಲಿಕ್ಕಾಗಿ ಸಾಗರದ ಹೊನಲಲ್ಲಿ ಪಯಣಿಸಲು ಅದಕ್ಕಿರುವ ಸಾಮರ್ಥ್ಯವನ್ನು ಜೂನ್ 8, 1991ರ ಅವೇಕ್! ಸಂಚಿಕೆಯಲ್ಲಿ ವಿವರಿಸಲಾಗಿದೆ.
ಹವಳ ದಿಬ್ಬಗಳು ಭೂಮಿಯ ಮೇಲಿರುವ ಅತಿ ದೊಡ್ಡ ಜೀವಶಾಸ್ತ್ರೀಯ ರಚನೆಗಳನ್ನು ರೂಪಿಸುತ್ತವೆ. ಇವುಗಳಲ್ಲಿ ಒಂದಾದ, ಆಸ್ಟ್ರೇಲಿಯದ ಈಶಾನ್ಯ ತೀರದಾಚೆಗಿರುವ ಗ್ರೇಟ್ ಬ್ಯಾರಿಯರ್ ರೀಫ್, 2,010 ಕಿಲೊಮೀಟರ್ಗಳ ವರೆಗೆ ಚಾಚಿ, ಇಂಗ್ಲೆಂಡ್ ಮತ್ತು ಸ್ಕಾಟ್ಲೆಂಡ್ ಇವೆರಡನ್ನೂ ಸೇರಿಸಿದರೆ ಆಗುವ ಗಾತ್ರದಷ್ಟು ಪ್ರದೇಶವನ್ನು ಆವರಿಸುತ್ತದೆ. ಒಂದು ಹವಳವು ಅನೇಕ ಟನ್ನುಗಳಷ್ಟು ತೂಕದ್ದಾಗಿರಬಲ್ಲದು, ಮತ್ತು ಸಾಗರ ತಳದಿಂದ ಒಂಬತ್ತು ಮೀಟರುಗಳಷ್ಟು ಮೇಲೇರಬಲ್ಲದು. ಹವಳ ದಿಬ್ಬಗಳು ಆಳ ಕಡಮೆಯಾದ ಉಷ್ಣವಲಯದ ನೀರುಗಳಲ್ಲೆಲ್ಲ, 60 ಮೀಟರ್ಗಳಷ್ಟು ಆಳದಲ್ಲಿ ಬೆಳೆಯುತ್ತವೆ. ಅವುಗಳಿಗೆ ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿರುವ ಲಕ್ಷಣಗಳಿರುವುದರಿಂದ, ಹವಳದ ಒಂದು ತುಂಡನ್ನು ಪರೀಕ್ಷಿಸುವ ಮೂಲಕ, ಅದು ಬೆಳೆದಿರುವ ಸಾಗರ ಮತ್ತು ಸ್ಥಳವನ್ನೂ ಪರಿಣತರು ಹೇಳಬಲ್ಲರು. ಹವಳ ದಿಬ್ಬಗಳ ಬೆಳವಣಿಗೆಗೆ ಅಗತ್ಯವಿರುವಂತಹದ್ದು ನೀರಿನಲ್ಲಿ ಸೀಮಿತವಾದ ಪೋಷಕ ಪದಾರ್ಥಗಳಿರುವ ಪರಿಸರವಾಗಿದೆ. ಅವುಗಳ ಆಸುಪಾಸಿನಲ್ಲಿ ಸಾಗರವು ಅಸಾಮಾನ್ಯವಾಗಿ ಸ್ವಚ್ಛವಾಗಿರುವುದು ಏಕೆಂದು ಇದು ವಿವರಿಸುತ್ತದೆ. ಹವಳಕ್ಕೆ ಪೋಷಣೆಯು ಪಾಲಿಪ್ನ ಪಾರದರ್ಶಕ ದೇಹದಲ್ಲಿ ಜೀವಿಸುವ ಸಮುದ್ರಪಾಚಿ (ವೈಜ್ಞಾನಿಕವಾಗಿ ಸೋಅಸ್ಯಾನ್ತೆಲ ಎಂದು ಕರೆಯಲ್ಪಡುತ್ತದೆ)ಯಿಂದಲೂ ಹವಳದ ಸ್ಪರ್ಶಾಂಗಗಳಿಂದ ಹಿಡಿಯಲ್ಪಡುವ ಸೂಕ್ಷ್ಮದರ್ಶಕೀಯ ಜೀವಿಗಳಿಂದಲೂ ಒದಗಿಸಲ್ಪಡುತ್ತದೆ. ಇದರ ಅಂತ್ಯ ಪರಿಣಾಮವು, ಸಾವಿರಾರು ಸಮುದ್ರ ಜೀವಜಾತಿಗಳಿಗೆ, ಅನ್ಯಥಾ ಆಶ್ರಯರಹಿತ ಸಾಗರಗಳಲ್ಲಿ ಮನೆಯಾಗಿರುವ ಹವಳ ದಿಬ್ಬವೇ.
ಹವಳ ದಿಬ್ಬಗಳು ಎಲ್ಲ ಸಮುದ್ರ ಪರಿಸರ ಸ್ಥಿತಿಗಳಲ್ಲಿ ಜೀವಶಾಸ್ತ್ರೀಯವಾಗಿ ಅತಿ ಹೆಚ್ಚು ಉತ್ಪಾದಕವೂ ಆಗಿವೆ. ಯು.ಎಸ್.ನ್ಯೂಸ್ ಆ್ಯಂಡ್ ವರ್ಲ್ಡ್ ರಿಪೋರ್ಟ್ ಅದನ್ನು ಹೀಗೆ ವರ್ಣಿಸಿತು: “ದಿಬ್ಬಗಳು ಉಷ್ಣವಲಯದ ಮಳೆಕಾಡುಗಳ ಸಾಮುದ್ರಿಕ ಸಮಾನಾರ್ಥಗಳಾಗಿದ್ದು ವಿಫುಲವಾದ ಜೀವರೀತಿಗಳಿಂದ ತುಂಬಿವೆ: ತರಂಗಿತ ಕಡಲ ಬೀಸಣಿಗೆಗಳು ಮತ್ತು ಕಡಲ ಚಾವಟಿಗಳು, ಗರಿಯಂತಿರುವ ಕ್ರೈನಾಯ್ಡ್ಗಳು, ನೀಯಾನ್ ಛಾಯೆಯ ಮೀನು ಮತ್ತು ಸ್ಪಂಜುಗಳು, ಸಿಗಡಿಗಳು, ಏಡಿಗಳು ಮತ್ತು ನಕ್ಷತ್ರ ಮೀನು ಹಾಗೂ ಭಯೋತ್ಪಾದಕ ಷಾರ್ಕ್ಗಳು ಮತ್ತು ಬೃಹದಾಕಾರದ ಮೋರೇ ಹಾವುಮೀನುಗಳು. ಇವೆಲ್ಲವೂ ವಸತಿಗಾಗಿ ಹವಳದ ಮುಂದುವರಿಯುತ್ತಿರುವ ಉತ್ಪಾದನೆಯ ಮೇಲೆ ಹೊಂದಿಕೊಂಡಿವೆ.” ಹವಳ ದಿಬ್ಬಗಳು, ರಭಸದಿಂದ ಒಡೆಯುವ ಅಲೆಗಳು ಮತ್ತು ಕಡಲಕರೆಗಳ ಮಧ್ಯೆ ಅಡ್ಡಗಟ್ಟನ್ನು ಒದಗಿಸುವ ಮೂಲಕ ಮತ್ತು ಸಾವಿರಾರು ಉಷ್ಣವಲಯದ ದ್ವೀಪಗಳಿಗೆ ಅಸ್ತಿವಾರವನ್ನು ಹಾಕುವ ಮೂಲಕ ಜಮೀನಿನ ಮೇಲೆಯೂ ಜೀವವನ್ನು ಬೆಂಬಲಿಸುತ್ತವೆ.
ಆರೋಗ್ಯಕರವಾದ ಹವಳವು, ಪಾರದರ್ಶಕ ಹವಳ ಪಾಲಿಪ್ನ ಆಶ್ರಯದಲ್ಲಿ ವಾಸಿಸುವ ಸಮುದ್ರಪಾಚಿಯ ನಮೂನೆಯ ಮೇಲೆ ಹೊಂದಿಕೊಂಡು, ಕಂದು, ಹಸಿರು, ಕೆಂಪು, ನೀಲಿ ಅಥವಾ ಹಳದಿ ಬಣ್ಣದ್ದಾಗಿರುತ್ತದೆ. ಆ ಸೂಕ್ಷ್ಮದರ್ಶಕೀಯ ಪಾಚಿ ಸಸ್ಯಗಳು ತಮ್ಮ ಪ್ರಾಣಿ ಸಹಜೀವಿಗಳ ಮೂಲಕ ಹೊಳೆಯುವ ಸೂರ್ಯಬೆಳಕನ್ನು ಬಳಸಿ, ಪಾಲಿಪ್ನ ಕಾರ್ಬನ್ ಡೈಆಕ್ಸೈಡ್ ಸೇರಿರುವ ನಿಷ್ಪ್ರಯೋಜಕ ಪದಾರ್ಥಗಳನ್ನು ತಮ್ಮ ಪೋಷಣೆಗಾಗಿ ಹೀರಿಕೊಳ್ಳುತ್ತವೆ. ಸರದಿಯಾಗಿ, ದ್ಯುತಿಸಂಶ್ಲೇಷಣೆಯ ಮೂಲಕ ಆ ಪಾಚಿಯು ಹವಳ ಅಂಗಾಂಶಗಳಿಗೆ ಆಮ್ಲಜನಕ, ಆಹಾರ ಮತ್ತು ಶಕ್ತಿಯನ್ನೊದಗಿಸುತ್ತದೆ. ಪಾಚಿಯೊಂದಿಗಿನ ಈ ಪಾಲುದಾರಿಕೆಯು, ಹವಳವು ಆ ಉಷ್ಣವಲಯದ ಪೋಷಣೆನ್ಯೂನ ನೀರುಗಳಲ್ಲಿ ವೇಗವಾಗಿ ಬೆಳೆದು ಬದುಕಿ ಉಳಿಯುವಂತೆ ಅನುಮತಿಸುತ್ತದೆ. ಇವೆರಡೂ ಸಸ್ಯ ಮತ್ತು ಪ್ರಾಣಿ ಜಗತ್ತನ್ನು ಉಪಯುಕ್ತವಾಗಿ ಬಳಸಿಕೊಳ್ಳುತ್ತವೆ. ಎಂತಹ ಕೌಶಲದ ಮತ್ತು ವಿವೇಕಯುತವಾದ ವಿನ್ಯಾಸ!
ಬಿಳಿಚಿಸಲ್ಪಟ್ಟ ಜೀವರಹಿತ ಅಸ್ಥಿಪಂಜರಗಳು
ಕೆಳಗಡೆ ಅಷ್ಟೊಂದು ಚಟುವಟಿಕೆ ಇರುವುದರಲ್ಲಿ ಆಶ್ಚರ್ಯವಿಲ್ಲ! ಆದರೆ ಅದೇನು? ಬಿಳಿಚಿಸಲ್ಪಟ್ಟ ಜೀವರಹಿತ ಅಸ್ಥಿಪಂಜರಗಳು. ಕೊಂಬೆಗಳು ಮುರಿದು ಉದುರುತ್ತಿವೆ. ಕೆಲವು ಆಗಲೇ ಶಿಥಿಲವಾಗಿವೆ. ಹವಳಕಾಡಿನ ಈ ಭಾಗವು ಸತ್ತಿದೆ ಅಥವಾ ಸಾಯುತ್ತಿದೆ. ಮೀನುಗಳಿಲ್ಲ. ಸಿಗಡಿಯಿಲ್ಲ. ಏಡಿಯಿಲ್ಲ. ಏನೂ ಇಲ್ಲ. ಇದೊಂದು ನೀರಕೆಳಗಣ ಮರುಭೂಮಿ. ನೀವು ಅವಿಶ್ವಾಸದಿಂದ ದಿಟ್ಟಿಸಿ ನೋಡುತ್ತೀರಿ. ಎಂತಹ ಧಕ್ಕೆಯಿದು! ನಿಮ್ಮ ಮನೋಹರ ಅನುಭವವು ಧ್ವಂಸಗೊಳ್ಳುತ್ತದೆ. ನೀವು ದೋಣಿಗೆ ಹಿಂದಿರುಗಿದಾಗಲೂ ಬಾಧಿಸುವ ಪ್ರಶ್ನೆಗಳು ಉಳಿಯುತ್ತವೆ. ಈ ವಿನಾಶವನ್ನು ಯಾವುದು ಮಾಡಿರಬಹುದು? ಅಪಘಾತವೊ? ರೋಗವೊ? ನೈಸರ್ಗಿಕ ಕಾರಣಗಳೊ? ನಿಮಗೆ ಉತ್ತರಗಳು ಬೇಕು.
ಕಲ್ಲಿನಂತಹ ಹವಳವು ಗಡುಸಾಗಿ ಕಂಡುಬರುತ್ತದಾದರೂ ಅದು ತೀರ ಭಿದುರವಾಗಿದೆ. ಮಾನವ ಸ್ಪರ್ಶವು ಹಾನಿಮಾಡಸಾಧ್ಯವಿರುವುದರಿಂದ ವಿವೇಕವುಳ್ಳ ಮುಳುಗಾಳುಗಳು ಅದನ್ನು ಮುಟ್ಟುವುದರಿಂದ ದೂರವಿರುತ್ತಾರೆ ಮತ್ತು ಜಾಗ್ರತೆಯ ದೋಣಿವಿಹಾರಿಗಳು ಅದರಲ್ಲಿ ಲಂಗರಿಳಿಸುವುದನ್ನು ತಪ್ಪಿಸುತ್ತಾರೆ. ಹವಳಗಳಿಗಿರುವ ಬೇರೆ ಅಪಾಯಗಳು, ರಾಸಾಯನಿಕ ಮಾಲಿನ್ಯ, ಎಣ್ಣೆ ಸುರಿತಗಳು, ಚರಂಡಿಯ ಹೊಲಸು, ಮರಕಡಿತ, ಹೊಲದ ಮಲಿನ ನೀರು, ಹೂಳೆತ್ತುವಿಕೆ, ಮಡ್ಡಿ ಮತ್ತು ಸಿಹಿನೀರು ಅಂತಸ್ಸರಣ—ಇವೇ. ದೋಣಿ ಅಡಿಗಟ್ಟುಗಳ ನೇರವಾದ ಸಂಘಟ್ಟನೆ ತೀರ ಅನಾಹುತವನ್ನುಂಟುಮಾಡುತ್ತವೆ. ಮತ್ತು ಶಾಖ ವೈಪರೀತ್ಯಗಳು ಹವಳಕ್ಕೆ ಹಾನಿಮಾಡಿ ಅದನ್ನು ಕೊಲ್ಲಬಲ್ಲವು. ಒತ್ತಡವು ಉಂಟಾಗುವಾಗ, ಹವಳವು ತನ್ನ ಪಾಚಿಯನ್ನು ದಪ್ಪ ಮೋಡಗಳೋಪಾದಿ ಹೊರತಳ್ಳುತ್ತದೆ ಮತ್ತು ಮೀನು ಬೇಗನೆ ಅದನ್ನು ತಿಂದುಬಿಡುತ್ತದೆ. ಈ ಒತ್ತಡದ ಪರಿಸ್ಥಿತಿಗಳು ವಾರಗಟ್ಟಲೆ ಅಥವಾ ತಿಂಗಳುಗಟ್ಟಲೆ ಪಟ್ಟುಹಿಡಿಯುವುದಾದರೆ, ಬಿಳಿಚಾಗುವಿಕೆ ಸಂಭವಿಸುತ್ತದೆ ಮತ್ತು ಹವಳವು ಸಾಯುತ್ತದೆ. ಮತ್ತು ಹವಳವು ಸಾಯುವಾಗ ದಿಬ್ಬ ಪರಿಸರವೂ ಸಾಯುತ್ತದೆ. ಜೀವ ಪರಿಸರವು ಬಿಚ್ಚಿ, ಕಾಣದೆ ಹೋಗುತ್ತದೆ.
ಎಲ್ಲ ಉಷ್ಣವಲಯದ ಸಾಗರಗಳಲ್ಲಿ ಬಿಳಿಚಾಗುವಿಕೆಯು ಬಹುವ್ಯಾಪಕವಾಗಿ ಪರಿಣಮಿಸಿದೆ. ಇದರ ಪರಿಣಾಮವಾಗಿ, ಲೋಕವ್ಯಾಪಕವಾಗಿ ಸಮುದ್ರ ವಿಜ್ಞಾನ ಸಮಾಜದಲ್ಲಿ ಅಪಾಯದ ಭೀತಿಯಿದೆ. ದೊಡ್ಡ ಪ್ರಮಾಣದ ಬಿಳಿಚಾಗುವಿಕೆಯು ಸಂಭವಿಸುವಾಗ, ಆಗುವ ಹಾನಿ ವಿಪರ್ಯಯಗೊಳಿಸಲಾಗದ್ದಾಗಿರುತ್ತದೆ. ಹವಳ ಬಿಳಿಚಾಗುವಿಕೆಯ ವ್ಯಾಪ್ತಿ ಮತ್ತು ಅದರ ಅನಂತರದ ಮರಣ—ಇವುಗಳು ಲೋಕದ ಉಷ್ಣವಲಯದ ಸಮುದ್ರಗಳಲ್ಲೆಲ್ಲ ಇತ್ತೀಚಿನ ವರ್ಷಗಳಲ್ಲಿ ಏನು ಸಂಭವಿಸಿದೆಯೊ ಅದರಿಂದ ಲೋಕದ ಗಮನಕ್ಕೆ ವೇದನಾಮಯವಾಗಿ ತರಲ್ಪಟ್ಟಿವೆ. ಹವಳಗಳ ನಿಯತಕಾಲಿಕ ಮತ್ತು ಸ್ಥಳಿಕವಾದ ಬಿಳಿಚಾಗುವಿಕೆಯು ಅನೇಕ ವರ್ಷಗಳಿಂದ ಆಗಿದೆಯಾದರೂ, ಪ್ರಚಲಿತ ತಲೆದೋರುವಿಕೆಗಳು ತೀವ್ರತೆಯಲ್ಲಿ ಅಭೂತಪೂರ್ವವಾಗಿವೆ ಮತ್ತು ಹರವಿನಲ್ಲಿ ಭೂವ್ಯಾಪಕವಾಗಿವೆ. ಹೆಚ್ಚಿನ ಜಾತಿಯ ಜೀವಂತ ಹವಳಗಳ ಮೇಲೆ, ದಿಬ್ಬ ಪರಿಸರಗಳ ಕುಸಿತವನ್ನುಂಟುಮಾಡುತ್ತಾ, ಭೂವ್ಯಾಪಕವಾಗಿ ಏನೋ ಆಕ್ರಮಣಮಾಡುತ್ತಿದೆ.