ಹವಳ ದಿಬ್ಬಗಳನ್ನು ಕಾಪಾಡಲು ಏನು ಮಾಡಸಾಧ್ಯವಿದೆ?
ಲೋಕದ ಸುತ್ತಲಿನ ಅನೇಕ ವಿಜ್ಞಾನಿಗಳು, ಭೌಗೋಳಿಕ ಕಾವೇರುವಿಕೆ ಮಾನವಕುಲವನ್ನು ಬಾಧಿಸುತ್ತಿದೆಯೆಂದೂ ವರ್ಧಿಷ್ಣು ದೇಶಗಳು ಕೈಗಾರಿಕೆಯ ವಿಕಸನದಲ್ಲಿ ಮುಂದೊತ್ತುವಾಗ ಅದು ಕೆಡುತ್ತ ಹೋಗುವುದೆಂದೂ ನಂಬುತ್ತಾರೆ. ವಾರ್ಷಿಕವಾಗಿ ಸುಮಾರು 300 ಕೋಟಿ ಮೆಟ್ರಿಕ್ ಟನ್ನು ಕಾರ್ಬನ್ ಡೈಆಕ್ಸೈಡ್ (ಸೀಓ2) ಅನ್ನು ಇದ್ದಲು, ಎಣ್ಣೆ ಮತ್ತು ಮರದಂತಹ ಇಂಧನಗಳನ್ನು ಶಕ್ತಿಗಾಗಿ ಸುಡುವ ಮೂಲಕ ಮತ್ತು ಕಾಡು ಕಡಿದು ಸುಡುವ ಮೂಲಕ ಭೂವಾತಾವರಣಕ್ಕೆ ಹೊರಚಿಮ್ಮಲಾಗುತ್ತದೆ. ಕೆಲವು ವಿಜ್ಞಾನಿಗಳಿಗನುಸಾರ, ಇಂಧನ ದಹನದ ಅನಿಲಗಳಿಂದಾಗುವ, ಸಸ್ಯಾಗಾರ ಪರಿಣಾಮವೆಂದೆನ್ನಿಸಿಕೊಳ್ಳುವ ವಿಷಯವು, ಮುಂದಿನ ಶತಮಾನದ ಮಧ್ಯದಷ್ಟರೊಳಗೆ ವಾತಾವರಣವನ್ನು 3ರಿಂದ 8 ಡಿಗ್ರಿ ಫ್ಯಾರನ್ಹೈಟ್ನಷ್ಟು ಕಾವೇರಿಸುವ ಬೆದರಿಕೆಯನ್ನು ಕೊಡುತ್ತದೆ. ಈ ಹೆಚ್ಚಿಕೆಯು ಹವಳಗಳಿಗೂ ದಿಬ್ಬ ಸಮುದಾಯಗಳಿಗೂ ಮಾರಕವಾಗಿರುವುದು.
ಆದರೆ ಹವಳ ದಿಬ್ಬಗಳ ಮರಣವು ಭೂಜೀವವನ್ನೂ ಪ್ರತಿಕೂಲವಾಗಿ ಪ್ರಭಾವಿಸುವುದು. ನ್ಯಾಚುರಲ್ ಹಿಸ್ಟರಿ ಪತ್ರಿಕೆ ಅವಲೋಕಿಸಿದ್ದು: “ಆದರೂ, ಸಸ್ಯಾಗಾರ ದೃಶ್ಯವಿವರದಲ್ಲಿ ಹವಳ ದಿಬ್ಬಗಳೇ ಪ್ರಮುಖ ಪಾತ್ರಧಾರಿಗಳಾಗಿರುತ್ತವೆ ಮತ್ತು ಸಸ್ಯಾಗಾರಾನಿಲಗಳನ್ನು ಕಡಮೆ ಮಾಡುವುದರಲ್ಲಿ ಉಷ್ಣವಲಯದ ಮಳೆಕಾಡುಗಳಷ್ಟೇ ಪ್ರಾಮುಖ್ಯವಾಗಿರಬಹುದು. ತಮ್ಮ ಅಸ್ಥಿಪಂಜರಗಳಿಗಾಗಿ ಕಾಲ್ಸಿಯಮ್ ಕಾರ್ಬೊನೇಟನ್ನು ಶೇಖರಿಸಿಡುವಾಗ, ಹವಳಗಳು ಸಾಗರಗಳಿಂದ ದೊಡ್ಡ ಪ್ರಮಾಣದಲ್ಲಿ ಸೀಓ2 ಅನ್ನು ತೆಗೆಯುತ್ತವೆ. ಸೋಅಸ್ಯಾನ್ತೆಲ [ಹವಳದ ಸಹಜೀವಿ ಪಾಚಿ] ಇಲ್ಲದಿರುವಲ್ಲಿ, ಹವಳಗಳು ಜೀವದ್ರವ್ಯೀಕರಿಸುವ ಕಾರ್ಬನ್ ಡೈಆಕ್ಸೈಡ್ ಪ್ರಮಾಣವು ತೀರ ಕಡಮೆಯಾಗಿರುತ್ತದೆ. ಹಾಸ್ಯವ್ಯಂಗ್ಯವಾಗಿ, ಈ ಸಮುದ್ರಗತ ಪರಿಸರ ಸ್ಥಿತಿಗಾಗುವ ಹಾನಿಯು ಅದರ ಮರಣವನ್ನು ತ್ವರೆಗೊಳಿಸುವ ಕಾರ್ಯವಿಧಾನವನ್ನೇ ವರ್ಧಿಸಬಲ್ಲದು.”
ದಹನದಿಂದ ಬಿಡುಗಡೆಹೊಂದುವ ಇತರ ಅನಿಲಗಳು ಸಸ್ಯಾಗಾರ ಪರಿಣಾಮಕ್ಕೆ ಹೆಚ್ಚನ್ನು ಕೂಡಿಸುತ್ತವೆಂದು ಕೆಲವು ವಿಜ್ಞಾನಿಗಳು ನಂಬುತ್ತಾರೆ. ಇವುಗಳಲ್ಲಿ ಒಂದು ನೈಟ್ರಸ್ ಆಕ್ಸೈಡ್, ಇನ್ನೊಂದು ಕ್ಲೋರೋಫ್ಲುಅರೊಕಾರ್ಬನ್ (ಸೀಎಫ್ಸೀ)ಗಳು. ವಾಸ್ತವವಾಗಿ, ಪ್ರತಿಯೊಂದು ಸೀಎಫ್ಸೀ ಕಣವು ಕಾವನ್ನು ಹಿಡಿದಿಡುವುದರಲ್ಲಿ ಸೀಓ2ರ ಕಣಕ್ಕಿಂತ 20,000 ಪಟ್ಟು ಹೆಚ್ಚು ಪರಿಣಾಮಕಾರಿಯಾಗಿದೆ. ಹಾನಿಕರವಾದ ನೀಲಲೋಹಿತಾತೀತ ಕಿರಣಗಳಿಂದ ಭೂಮಿಯ ಮೇಲಿರುವ ಜೀವವನ್ನು ಕಾಪಾಡುವ ಓಸೋನ್ ಪದರವನ್ನು ತೆಳ್ಳಗಾಗಿಸಲು ಮುಖ್ಯ ಕಾರಣವು ಸೀಎಫ್ಸೀ ಎಂದೂ ಕಂಡುಹಿಡಿಯಲಾಗಿದೆ. ಉತ್ತರ ಧ್ರುವ ಮತ್ತು ದಕ್ಷಿಣ ಧ್ರುವಗಳಲ್ಲಿರುವ ಓಸೋನ್, ರಂಧ್ರಗಳನ್ನು ಆಗಿಸುವಷ್ಟು ತೆಳ್ಳಗಾಗಿದೆ. ಅದು ಹವಳಗಳಿಗಿರುವ ಇನ್ನೂ ಹೆಚ್ಚಿನ ದುರ್ವಾರ್ತೆ. ಬೆಚ್ಚಗಿನ ನೀರಿನಿಂದ ಆಗಲೇ ಒತ್ತಡಕ್ಕೊಳಗಾಗಿರುವ ಚಿಕ್ಕ ಪ್ರಮಾಣದ ಹವಳ ದಿಬ್ಬಗಳನ್ನು ನೀಲಲೋಹಿತಾತೀತ ಬೆಳಕಿನ ಚಿಕ್ಕ ಪ್ರಮಾಣದ ಅಭಿವೃದ್ಧಿಗಳಿಗೆ ಒಡ್ಡಿದ ಪ್ರಯೋಗಗಳು ಬಿಳಿಚಾಗುವಿಕೆಯನ್ನು ಉದ್ರೇಕಿಸಿದವು. ಸೈಎಂಟಿಫಿಕ್ ಅಮೆರಿಕನ್ ಪತ್ರಿಕೆಯು ವಿಷಾದಕರವಾಗಿ ಅವಲೋಕಿಸಿದ್ದು: “ಕ್ಲೋರೋಫ್ಲುಅರೊಕಾರ್ಬನ್ ಹೊರಸೂಸುವಿಕೆಗಳು ಇಂದು ನಿಂತರೂ ಊರ್ಧ್ವ ವಾಯುಮಂಡಲ ಸ್ತರದ ಓಸೋನ್ನ ನಾಶನವನ್ನು ಉಂಟುಮಾಡುವ ರಾಸಾಯನಿಕ ಪ್ರತಿಕ್ರಿಯೆಗಳು ಕಡಮೆ ಪಕ್ಷ ಒಂದು ಶತಮಾನವಾದರೂ ಮುಂದುವರಿಯುವುವು. ಇದಕ್ಕೆ ಕಾರಣವು ಸರಳ: ಆ ಕ್ಲೋರೋಫ್ಲುಅರೊಕಾರ್ಬನ್ಗಳು ವಾತಾವರಣದಲ್ಲಿ ಅಷ್ಟು ಕಾಲ ಉಳಿಯುತ್ತವೆ ಮತ್ತು, ಹೊರಸೂಸುವಿಕೆಗಳು ನಿಂತು ದೀರ್ಘಕಾಲವಾದ ಮೇಲೆಯೂ ಕೆಳ ವಾಯುಮಂಡಲ ಪದರದ ಅನಿಲಾಶಯದಿಂದ ಊರ್ಧ್ವ ವಾಯುಮಂಡಲಕ್ಕೆ ಹರಡುತ್ತ ಮುಂದುವರಿಯುತ್ತವೆ.”
ವೈಯಕ್ತಿಕ ಮಟ್ಟದಲ್ಲಿ, ಸಾಗರಗಳನ್ನು ಮತ್ತು ಕರಾವಳಿ ಪ್ರದೇಶಗಳನ್ನು ಕಸ ಮತ್ತು ಮಲಿನಕಾರಕ ಪದಾರ್ಥಗಳಿಂದ ಮಲಿನಗೊಳಿಸದಿರುವ ಮೂಲಕ ವ್ಯಕ್ತಿಗಳು ಹೊಣೆಗಾರರಾಗಿ ವರ್ತಿಸಸಾಧ್ಯವಿದೆ. ನೀವೊಂದು ದಿಬ್ಬಕ್ಕೆ ಭೇಟಿಕೊಡುವುದಾದರೆ, ಹವಳವನ್ನು ಮುಟ್ಟಬಾರದು ಅಥವಾ ಅದರ ಮೇಲೆ ನಿಲ್ಲಬಾರದೆಂಬ ಮಾಹಿತಿಗಳನ್ನು ಅನುಸರಿಸಿರಿ. ಹವಳ ಸ್ಮರಣಿಕೆಗಳನ್ನು ತೆಗೆದುಕೊಳ್ಳಬೇಡಿರಿ ಅಥವಾ ಖರೀದಿಸಬೇಡಿರಿ. ಉಷ್ಣವಲಯದ ದಿಬ್ಬಗಳ ಹತ್ತಿರ ನೀವು ದೋಣಿವಿಹಾರ ಮಾಡುತ್ತಿರುವುದಾದರೆ, ಮರಳಿನ ತಳಕ್ಕೆ ಲಂಗರಿಳಿಸಿರಿ ಅಥವಾ ಸಮುದ್ರಾಧಿಕಾರಿಗಳು ಒದಗಿಸುವ ತೇಲು ಸ್ಥಾಯಿ ಲಂಗರುಗಳನ್ನು ಬಳಸಿರಿ. ವೇಗವಾಗಿ ಚಲಾಯಿಸಬೇಡಿರಿ ಅಥವಾ ನಿಮ್ಮ ದೋಣಿಯ ಪ್ರೊಪೆಲರ್ ಮೂಲಕ ತಳವನ್ನು ಮಥಿಸಬೇಡಿರಿ. ದೋಣಿಯ ರೊಚ್ಚೆಯನ್ನು ಸಾಗರಕ್ಕೆ ಬಸಿಯಬೇಡಿರಿ; ಅದನ್ನು ತೆಗೆದುಕೊಳ್ಳುವ ಹಡಗುಕಟ್ಟೆಗಳನ್ನು ಮತ್ತು ಮರೀನಗಳನ್ನು ಹುಡುಕಿರಿ. ಲೂಈ ಕೀ ನ್ಯಾಷನಲ್ ಮರೀನ್ ಸ್ಯಾಂಕ್ಟ್ಯುಅರಿ (ಫ್ಲಾರಿಡ, ಅಮೆರಿಕ)ಯ ಮ್ಯಾನೆಜರ್, ಬಿಲ್ ಕಾಸಿ ಗಮನಿಸಿದ್ದು: “ಈ ಅಸಮತೂಕವನ್ನು ಆಗಿಸುವ ಸಮಸ್ಯೆಯನ್ನು ಮನುಷ್ಯನೇ ಪ್ರಾಯಶಃ ಸೃಷ್ಟಿಸುತ್ತಿದ್ದಾನೆ. ನಾವು ಭೌಗೋಲಿಕವಾಗಿ ಅದರ ಕುರಿತು ಜಾಗೃತರಾಗಲೇ ಬೇಕು. ಒಂದು ಪ್ರಧಾನ ಪರಿಸರ ಸ್ಥಿತಿಯನ್ನು ಕಳೆದುಕೊಳ್ಳುವ ಬೆದರಿಕೆಯ ಸಂಬಂಧದ ಸಾರ್ವಜನಿಕ ಪ್ರಜ್ಞೆಯನ್ನು ನಾವು ಹೆಚ್ಚಿಸಬೇಕು. ಆಗ ಒಂದು ವೇಳೆ ನಾವು ವಿಷಯಗಳನ್ನು ಬದಲಾಯಿಸಸಾಧ್ಯವಿದೆ.”
ಪ್ರಾದೇಶಿಕ ಮಟ್ಟದಲ್ಲಿ, ಹವಳ ದಿಬ್ಬಗಳನ್ನು ಕಾಪಾಡಲು ಕಾನೂನುಗಳು ಅಂಗೀಕರಿಸಲ್ಪಟ್ಟು ಜಾರಿಗೆ ತರಲ್ಪಡುತ್ತಿವೆ. ತನ್ನ ದಿಬ್ಬಗಳಿಗೆ ಹಾನಿಮಾಡುವ ಹಡಗುಗಳ ಮಾಲೀಕರ ಮೇಲೆ ಫ್ಲಾರಿಡ ರಾಜ್ಯವು ದಾವೆ ಹೂಡುತ್ತದೆ. ಒಂದು ಸಾಮಾನು ಹಡಗು ನೆಲ ಹತ್ತಿ ಕೆಲವು ಎಕ್ರೆಗಳಷ್ಟು ಹವಳವನ್ನು ಉತ್ತುಹಾಕಿದಾಗ ಅದರ ಮಾಲೀಕರು 60 ಲಕ್ಷ ಡಾಲರುಗಳ ದಂಡ ಕೊಟ್ಟರು. ಆ ಹಣದ ಒಂದು ಅಂಶವನ್ನು ಆ ಕಡಲ ಬೀಡನ್ನು ಪುನಸ್ಸ್ಥಾಪಿಸಲು ಉಪಯೋಗಿಸಲಾಯಿತು. ಪ್ರಸ್ತುತ, ವಿಶೇಷ ಅಂಟುಪದಾರ್ಥಗಳನ್ನು ಉಪಯೋಗಿಸಿ, 1994ರಲ್ಲಿ ಒಂದು ಹಡಗಿನಿಂದಾಗಿ ಹಾನಿಗೊಂಡ ಹವಳವನ್ನು ಪುನಃ ಅಂಟಿಸಲು ಜೀವಶಾಸ್ತ್ರಜ್ಞರು ಪ್ರಯತ್ನಿಸುತ್ತಿದ್ದಾರೆ. ಫ್ಲಾರಿಡದ ಒಂದು ದಿಬ್ಬಕ್ಕೆ ಒಂದು ಕಂಪನಿಯ ಸಾಮಾನು ಹಡಗುಗಳಲ್ಲೊಂದು ಮಾಡಿದ ಹಾನಿಗಾಗಿ 32 ಲಕ್ಷ ಡಾಲರುಗಳ ಮತ್ತೊಂದು ದಂಡವನ್ನು ವಸೂಲು ಮಾಡಲಾಯಿತು. ಬೇರೆ ದೇಶಗಳು ತದ್ರೀತಿಯ ಶಿಕ್ಷೆ ದೊರೆಯುವ ನಿಯಮಗಳನ್ನು ಮಾಡುತ್ತಿವೆ. ಕ್ಯಾರಿಬಿಯನ್ನ ಕೇಮನ್ ಐಲೆಂಡ್ಸ್ನಂತಹ ಜನಪ್ರಿಯ ಮುಳುಗು ನಿವೇಶನಗಳಲ್ಲಿ ಮುಳುಗನ್ನು ಅನುಮತಿಸುವ ಪರಿಮಿತ ಕ್ಷೇತ್ರಗಳಿವೆ. ಅಲ್ಲಿನ ಚಟುವಟಿಕೆಗಳನ್ನು ನಿಯಂತ್ರಿಸಲು, ಆಸ್ಟ್ರೇಲಿಯವು ಅದರ ಗ್ರೇಟ್ ಬ್ಯಾರಿಯರ್ ರೀಫ್ ಮರೀನ್ ಪಾರ್ಕನ್ನು ನಿರ್ಮಿಸಿತು. ಆದರೂ ಎಲ್ಲರೂ ನೋಡಿರುವಂತೆ, ಹೆಚ್ಚು ಮುಳುಗಾಳುಗಳಿರುವಲ್ಲಿ ದಿಬ್ಬಗಳಿಗೆ ಹೆಚ್ಚು ಹಾನಿಯಾಗುತ್ತದೆ.
ಎಲ್ಲ ರಾಷ್ಟ್ರಗಳು ಹೋರಾಟದಲ್ಲಿ ಸೇರುವುವೊ?
ಭೌಗೋಳಿಕ ಮಟ್ಟದಲ್ಲಿ, ಗಾಬರಿಗೊಂಡಿರುವ ವಿಜ್ಞಾನಿಗಳು ಮತ್ತು ನಾಯಕರು, ಪರಿಹಾರವು ಒಂದು ರಾಷ್ಟ್ರಕ್ಕೆ ಅಥವಾ ರಾಷ್ಟ್ರಗಳ ಒಂದು ಗುಂಪಿಗೂ ಮೀರಿದೆಯೆಂದು ತೀರ್ಮಾನಿಸುತ್ತಾರೆ. ಮಾಲಿನ್ಯವು ಸುತ್ತುತ್ತಿರುವ ಗಾಳಿ ಮತ್ತು ನೀರಿನ ಹೊನಲುಗಳ ಮೂಲಕ ಭೂಗೋಳದ ಸುತ್ತಲೂ ಒಯ್ಯಲ್ಪಟ್ಟು, ದಿಬ್ಬಗಳನ್ನು ಸಂಘಟ್ಟಿಸುತ್ತದೆ. ಒಂದೊಂದಾಗಿರುವ ರಾಷ್ಟ್ರಗಳಿಗೆ ತಮ್ಮ ಪ್ರಾದೇಶಿಕ ನೀರುಗಳಾಚೆಗೆ ಅಧಿಕಾರವಿಲ್ಲ. ಆ ನೀರುಗಳಾಚೆಗೆ ಎಸೆದ ಮಲಿನಕಾರಿ ವಸ್ತುಗಳು ಕೊನೆಗೆ ತೀರಗಳಿಗೆ ಬಂದು ಬೀಳುತ್ತವೆ. ಒಂದು ಐಕಮತ್ಯದ ಭೌಗೋಳಿಕ ಪ್ರಯತ್ನ ಮತ್ತು ಪರಿಹಾರವು ಅಗತ್ಯ.
ಲೋಕದ ಅನೇಕ ಯಥಾರ್ಥರೂ ಸಮರ್ಥರೂ ಆದ ಜನರು ಭೂಮಿಯ ಭಯಚಕಿತಗೊಳಿಸುವ ಹವಳ ನಿಧಿಗಳನ್ನು ಕಾಪಾಡಲು ಹೋರಾಡುತ್ತ ಮುಂದುವರಿಯುವುದು ನಿಸ್ಸಂಶಯ. ಭೂಪರಿಸರಕ್ಕೆ ಪ್ರತಿಕ್ರಿಯೆ ತೋರಿಸುವ ಮತ್ತು ಅದನ್ನು ಪರಾಮರಿಸುವ ಒಂದು ಲೋಕ ಸರಕಾರವು ಸ್ಪಷ್ಟವಾಗಿ ಮತ್ತು ಅತ್ಯವಶ್ಯವಾಗಿ ಬೇಕಾಗಿದೆ. ಸಂತೋಷಕರವಾಗಿ, ಭೌಗೋಳಿಕ ಪರಿಸರವನ್ನು ಸೃಷ್ಟಿಕರ್ತನು ತಾನೇ ರಕ್ಷಿಸುವನು. ದೇವರು ಪ್ರಥಮ ಮಾನವರನ್ನು ಮಾಡಿದಾಗ ಅವರು, “ಸಮುದ್ರದ ಮೀನುಗಳ [ಮತ್ತು ಸಮಸ್ತ ಜಲಜೀವಿಗಳ] ಮೇಲೆಯೂ . . . ದೊರೆತನಮಾಡಲಿ,” ಎಂದು ಹೇಳಿದನು. (ಆದಿಕಾಂಡ 1:26) ದೇವರು ಜಲಜೀವಿಗಳನ್ನು ದುರುಪಯೋಗಿಸಿದ್ದೂ ಇಲ್ಲ, ಶೋಷಿಸಿದ್ದೂ ಇಲ್ಲವಾದ ಕಾರಣ, ಮಾನವಕುಲಕ್ಕಿದ್ದ ಆತನ ಆಜ್ಞೆಯು, ಮನುಷ್ಯನು ಭೌಗೋಳಿಕ ಪರಿಸರದ ಜಾಗ್ರತೆ ವಹಿಸಬೇಕೆಂದು ಅರ್ಥೈಸಿದ್ದಿರಬೇಕು. ಬೈಬಲು ಮುಂತಿಳಿಸುವುದು: “ಆದರೆ ನಾವು ದೇವರ ವಾಗ್ದಾನವನ್ನು ನಂಬಿ ನೂತನಾಕಾಶಮಂಡಲ [ದೇವರ ಸ್ವರ್ಗೀಯ ರಾಜ್ಯ]ವನ್ನೂ ನೂತನಭೂಮಂಡಲವನ್ನೂ ಎದುರುನೋಡುತ್ತಾ ಇದ್ದೇವೆ; ಅವುಗಳಲ್ಲಿ ನೀತಿಯು ವಾಸವಾಗಿರುವದು.” (2 ಪೇತ್ರ 3:13) ಸಮೀಪ ಭವಿಷ್ಯತ್ತಿನಲ್ಲಿ ಆ ಸ್ವರ್ಗೀಯ ಸರಕಾರವು ಈ ಮಲಿನಗೊಂಡಿರುವ ಭೂಮಿಯನ್ನು, ಅದರ ಸಾಗರಗಳನ್ನು ಸೇರಿಸಿ, ಪೂರ್ತಿಯಾಗಿ ಸ್ವಚ್ಫಗೊಳಿಸುವುದು. ಆಗ, ದೇವರ ರಾಜ್ಯದ ಪ್ರಜೆಗಳು ಸುಂದರ ಸಾಗರಗಳನ್ನೂ ಮತ್ತು ಅವುಗಳ ಜಲವಾಸಿಗಳನ್ನೂ ಪೂರ್ತಿಯಾಗಿ ಪರಾಮರಿಸಿ ಆನಂದಿಸುವರು.
[This Pictures on page 18 is not vernacular printed magazine]
ಹಿನ್ನೆಲೆ: ಫಿಜಿಯ ಬಳಿ, ಶಾಂತ ಸಾಗರದಲ್ಲಿನ ಒಂದು ಸುಂದರವಾದ ಹವಳ ದಿಬ್ಬ
ಒಳ ಸೇರಿಕೆಗಳು: 1. ಒಂದು ಕ್ಲೌನ್ ಮೀನಿನ ಜಲಗತ ಸಮೀಪಚಿತ್ರ, 2. ಒಂದು ಮೇಜಿನಂತೆ ತೋರುವ ಹವಳ, 3. ಹವಳದಲ್ಲಿ ಶುಚಿಮಾಡುತ್ತಿರುವ ಸಿಗಡಿ
[ಕೃಪೆ]
Page 18 background: Fiji Visitors Bureau