ರೇಡಿಯೋ—ಜಗತ್ತನ್ನೇ ಬದಲಾಯಿಸಿದ ಒಂದು ಕಂಡುಹಿಡಿತ
ಇಟಲಿಯ ಎಚ್ಚರ! ಸುದ್ದಿಗಾರರಿಂದ
ಒಂದು ರೈಫ್ಲ್ ಗುಂಡು ಹೊಡೆತವು, ಇಟಲಿಯ ಗ್ರಾಮಪ್ರದೇಶದ ಮೌನವನ್ನು ಭೇದಿಸಿತು. ಆ ಸೂಚನೆಯು ಗೂಲ್ಯೆಲ್ಮೊ ಮಾರ್ಕೊನಿಗೆ, ತಾನು ಉಪಯೋಗಿಸುತ್ತಿದ್ದ ಅಪೂರ್ಣರೂಪದ ಸಲಕರಣೆಯು ಕೆಲಸ ಮಾಡಿತ್ತೆಂಬ ದೃಢೀಕರಣವನ್ನು ನೀಡಿತು. ಒಂದು ಟ್ರಾನ್ಸ್ಮೀಟರ್ನಿಂದ ಉತ್ಪಾದಿಸಲ್ಪಟ್ಟು, ಬಾಹ್ಯಾಕಾಶದೊಳಕ್ಕೆ ಹೊರಸೂಸಲ್ಪಟ್ಟ ವಿದ್ಯುತ್ಕಾಂತೀಯ ತರಂಗಗಳು, ಎರಡೂವರೆ ಕಿಲೊಮೀಟರ್ಗಳಷ್ಟು ದೂರದಲ್ಲಿ ಒಂದು ರಿಸೀವರ್ನಿಂದ ಸೆರೆಹಿಡಿಯಲ್ಪಟ್ಟಿದ್ದವು. ಅದು 1895ನೆಯ ಇಸವಿಯಾಗಿತ್ತು. ಆ ಸಮಯದಲ್ಲಿ ಈ ಸಲಕರಣೆಯ ಎಲ್ಲಾ ತೊಡರುಗಳನ್ನು ಯಾರೊಬ್ಬರೂ ಪೂರ್ಣವಾಗಿ ಗ್ರಹಿಸಿಕೊಳ್ಳಸಾಧ್ಯವಿಲ್ಲದಿದ್ದರೂ, ಆ ರೈಫ್ಲ್ ಗುಂಡು ಹೊಡೆತವು, ಅಂದಿನಿಂದ ನಮ್ಮ ಜಗತ್ತನ್ನು ಸಂಪೂರ್ಣವಾಗಿ ಬದಲಾಯಿಸಿರುವ ಒಂದು ತಾಂತ್ರಿಕತೆ—ರೇಡಿಯೋ ಸಂವಾದ—ಗಾಗಿ ಮಾರ್ಗವನ್ನು ತೆರೆಯಿತು.
ವಿದ್ಯುತ್ಕಾಂತೀಯ ತರಂಗಗಳ ಗುಣವು ಈಗಾಗಲೇ ಅನೇಕ ವಿಜ್ಞಾನಿಗಳಿಂದ ಅಭ್ಯಾಸಿಸಲ್ಪಟ್ಟಿತ್ತು. 1831ರಲ್ಲಿ, ವಿದ್ಯುಚ್ಛಕ್ತಿಯು ಒಂದು ಕಾಂತೀಯ ಕ್ಷೇತ್ರವನ್ನು ಉತ್ಪಾದಿಸಿ, ಮೊದಲ ವಿದ್ಯುತ್ ಪ್ರವಾಹ ಮಾರ್ಗದಿಂದ ಪ್ರತ್ಯೇಕವಾದ, ಆದರೆ ಅದರ ಸಮೀಪದಲ್ಲಿ ಇಡಲ್ಪಟ್ಟ ಎರಡನೆಯ ವಿದ್ಯುತ್ ಪ್ರವಾಹ ಮಾರ್ಗದಲ್ಲಿ ವಿದ್ಯುತ್ತನ್ನು ಉಂಟುಮಾಡಸಾಧ್ಯವಿದೆ ಎಂದು ಇಂಗ್ಲಿಷ್ ಭೌತಶಾಸ್ತ್ರಜ್ಞನಾದ ಮೈಕಲ್ ಫ್ಯಾರಡೆ ತೋರಿಸಿಕೊಟ್ಟನು. 1864ರಲ್ಲಿ, ಅಂತಹ ವಿದ್ಯುತ್ಕಾಂತೀಯ ಕ್ಷೇತ್ರಗಳಿಂದ ಉತ್ಪಾದಿಸಲ್ಪಟ್ಟ ಶಕ್ತಿಯು, ತರಂಗಗಳಲ್ಲಿ—ಒಂದು ಕೊಳದ ಮೇಲ್ಮೈಯ ಮೇಲಿನ ಕಿರುದೆರೆಗಳಂತೆ—ಹೊರಸೂಸಸಾಧ್ಯವಿದೆ, ಆದರೆ ಬೆಳಕಿನ ವೇಗದಲ್ಲಿ ಎಂದು ಸ್ಕಾಟಿಷ್ ಭೌತಶಾಸ್ತ್ರಜ್ಞನಾದ ಜೇಮ್ಸ್ ಮ್ಯಾಕ್ಸ್ವೆಲ್ ತಾತ್ವೀಕರಿಸಿದನು. ತದನಂತರ, ಜರ್ಮನ್ ಭೌತಶಾಸ್ತ್ರಜ್ಞನಾದ ಹೈನ್ರಿಕ್ ಹರ್ಟ್ಸ್ನು, ನ್ಯೂ ಸೀಲೆಂಡ್ನ ಅರ್ನೆಸ್ಟ್ ರದರ್ಫೋರ್ಡನು (ತದನಂತರ, ಲಾರ್ಡ್ ರದರ್ಫೋರ್ಡ್) ಮಾಡಿದಂತೆ, ವಿದ್ಯುತ್ಕಾಂತೀಯ ತರಂಗಗಳನ್ನು ಉತ್ಪಾದಿಸಿ, ತೀರ ಸಮೀಪದಿಂದ ಅವುಗಳನ್ನು ಪರಿಶೋಧಿಸುತ್ತಾ ಮ್ಯಾಕ್ಸ್ವೆಲ್ನ ಸಿದ್ಧಾಂತವನ್ನು ದೃಢೀಕರಿಸಿದನು. ಆದರೆ ಲಭ್ಯವಿದ್ದ ಸಲಕರಣೆಯನ್ನು ಹೊಂದಿಸಿಕೊಂಡು, ಪ್ರಗತಿಮಾಡುತ್ತಾ, ತಾನೇ ಸ್ವತಃ ಮಾಡಿದ್ದ ಪ್ರಾಕೃತ ವಾರ್ತಾಗ್ರಾಹಕ (ಆ್ಯಂಟೆನಾ)ವನ್ನು ಸೇರಿಸುತ್ತಾ, ಮಾರ್ಕೊನಿಯು ಗಮನಾರ್ಹವಾದ ಅಂತರಕ್ಕೆ ಒಂದು ಟೆಲಿಗ್ರಾಫಿಕ್ ಸಂಕೇತವನ್ನು ರವಾನಿಸಲು ಸಮರ್ಥನಾದನು. ನಿಸ್ತಂತು ಟೆಲಿಗ್ರಾಫಿಯು (ವೈರ್ಲೆಸ್ ಟೆಲಿಗ್ರಾಫಿ) ಪ್ರಗತಿಪಥದಲ್ಲಿತ್ತು!
1896ರಲ್ಲಿ, 21 ವರ್ಷ ವಯಸ್ಸಿನ ಮಾರ್ಕೊನಿಯು ಇಟಲಿಯಿಂದ ಇಂಗ್ಲೆಂಡಿಗೆ ಸ್ಥಳಾಂತರಿಸಿದನು, ಅಲ್ಲಿ ಅವನು ಜನರಲ್ ಪೋಸ್ಟ್ ಆಫೀಸಿನ ಪ್ರಮುಖ ಇಂಜಿನಿಯರನಾಗಿದ್ದ ವಿಲಿಯಮ್ ಪ್ರೀಸ್ಗೆ ಪರಿಚಯಿಸಲ್ಪಟ್ಟನು. ತಂತಿಯ ಮೂಲಕ ಸಂಪರ್ಕವನ್ನು ಸ್ಥಾಪಿಸಲು ಅಸಾಧ್ಯವಾಗಿದ್ದ ಸ್ಥಳಗಳ ನಡುವೆ, ಕಡಲ ಸಂಬಂಧವಾದ ಸಂವಾದಗಳಿಗೆ ಮಾರ್ಕೊನಿಯ ವ್ಯವಸ್ಥೆಯನ್ನು ಅಳವಡಿಸುವುದರಲ್ಲಿ ಪ್ರೀಸ್ ಆಸಕ್ತನಾಗಿದ್ದನು. ಅವನು ಮಾರ್ಕೊನಿಗೆ ತಂತ್ರಜ್ಞರ ಸಹಾಯವನ್ನು ಹಾಗೂ ಅವನ ಪ್ರಯೋಗಗಳಿಗಾಗಿ ಪ್ರಯೋಗಶಾಲೆಗಳ ಉಪಯೋಗವನ್ನು ಒದಗಿಸಿದನು. ಕೆಲವೇ ತಿಂಗಳುಗಳೊಳಗೆ, ಹತ್ತು ಕಿಲೊಮೀಟರುಗಳ ವ್ಯಾಪ್ತಿಗೆ ರವಾನಿಸಲ್ಪಟ್ಟ ಸಂಕೇತಗಳ ಶಕ್ತಿಯನ್ನು ಹೆಚ್ಚಿಸುವುದರಲ್ಲಿ ಮಾರ್ಕೊನಿಯು ಸಫಲನಾದನು. 1897ರಲ್ಲಿ, ನಿಸ್ತಂತು ಟೆಲಿಗ್ರಾಫಿಯನ್ನು ವಾಣಿಜ್ಯದ ಕಾರ್ಯಸಾಧ್ಯ ವ್ಯವಸ್ಥೆಯನ್ನಾಗಿ ರೂಪಾಂತರಿಸುವ ಗುರಿಯೊಂದಿಗೆ, ಮಾರ್ಕೊನಿಯು ವೈಅರ್ಲೆಸ್ ಟೆಲಿಗ್ರಾಫ್ ಆ್ಯಂಡ್ ಸಿಗ್ನಲ್ ಕಂಪನಿ, ಲಿಮಿಟೆಡ್ ಅನ್ನು ಸ್ಥಾಪಿಸಿದನು.
1900ರಲ್ಲಿ, ಒಮ್ಮೆ ಅಸಾಧ್ಯವಾದದ್ದಾಗಿ ಪರಿಗಣಿಸಲ್ಪಟ್ಟಿದ್ದ, ಭೂಮಿಯ ವಕ್ರ ಪರಿಮಾಣವನ್ನು ರೇಡಿಯೋ ತರಂಗಗಳಿಂದ ಆಕ್ರಮಿಸುವ ಸಂಗತಿಯನ್ನು ಪ್ರದರ್ಶಿಸುತ್ತಾ, ದಕ್ಷಿಣ ಇಂಗ್ಲೆಂಡಿನಲ್ಲಿ ಕಾರ್ನ್ವಾಲ್ ಮತ್ತು ಐಲ್ ಆಫ್ ವೈಟ್ನ ನಡುವೆ, ಒಂದು 300 ಕಿಲೊಮೀಟರ್ಗಳ ರೇಡಿಯೋಟೆಲಿಗ್ರಾಫಿಕ್ ಸಂಪರ್ಕವು ಏರ್ಪಡಿಸಲ್ಪಟ್ಟಿತು. ವಿದ್ಯುತ್ಕಾಂತೀಯ ತರಂಗಗಳು ನೇರವಾದ ಸಾಲುಗಳಲ್ಲಿ ಪ್ರಯಾಣಿಸುವುದರಿಂದ, ಬಾನಂಚಿನ ಆಚೆ ಸಂಕೇತಗಳನ್ನು ಪಡೆದುಕೊಳ್ಳುವುದು ಸಾಧ್ಯವಿಲ್ಲವೆಂದು ಅಭಿಪ್ರಯಿಸಲ್ಪಟ್ಟಿತ್ತು.a ಆಗ ರೇಡಿಯೋಗಳಿಗಾಗಿ ಪ್ರಥಮ ಪ್ರಮುಖವಾದ ಆರ್ಡರ್ಗಳು ಬರಲಾರಂಭಿಸಿದವು. ಬ್ರಿಟಿಷ್ ನೌಕಾಧಿಪತ್ಯವು, 26 ಹಡಗುಗಳಲ್ಲಿ ರೇಡಿಯೋ ಸೆಟ್ಗಳ ಅಳವಡಿಸುವಿಕೆಯನ್ನು, ಹಾಗೂ ಆರು ಲ್ಯಾಂಡ್ ಸ್ಟೇಷನ್ಗಳ ನಿರ್ಮಾಣ ಹಾಗೂ ದುರಸ್ತಾಗಿಡುವಿಕೆಯನ್ನು ಆದೇಶಿಸಿತು. ಹಿಂಬಾಲಿಸಿದ ವರ್ಷದಲ್ಲಿ, ಮಾರ್ಸ್ ಸಂಕೇತ ಭಾಷೆಯಲ್ಲಿ ಎಸ್ ಎಂಬ ಅಕ್ಷರವನ್ನು ಸೂಚಿಸಿದ ಮೂರು ಚುಕ್ಕೆಗಳ ಅಸ್ಪಷ್ಟವಾದ ಸಂಕೇತದೊಂದಿಗೆ, ಅಟ್ಲ್ಯಾಂಟಿಕ್ ಅನ್ನು ದಾಟುವುದರಲ್ಲಿ ಮಾರ್ಕೊನಿ ಸಫಲನಾದನು. ಕಂಡುಹಿಡಿತದ ಭವಿಷ್ಯತ್ತು ಖಾತ್ರಿಪಡಿಸಲ್ಪಟ್ಟಿತು.
ಯಂತ್ರಕಲಾಶಾಸ್ತ್ರದ ವಿಕಸನ
ಆರಂಭದಲ್ಲಿ, ನಿಸ್ತಂತು ಟೆಲಿಗ್ರಾಫಿಯು ಮಾತುಗಳನ್ನಾಗಲಿ ಸಂಗೀತವನ್ನಾಗಲಿ ರವಾನಿಸಲು ಅಸಮರ್ಥವಾಗಿತ್ತು, ಆದರೆ ಕೇವಲ ಮಾರ್ಸ್ ಸಂಕೇತ ಭಾಷೆಯನ್ನು ರವಾನಿಸಲು ಸಮರ್ಥವಾಗಿತ್ತು. ಆದರೂ, 1904ರಲ್ಲಿ ಸ್ವರದ ರವಾನೆ ಮತ್ತು ಗ್ರಹಣವನ್ನು ಸಾಧ್ಯಮಾಡಿದ, ಡಯೋಡ್—ಪ್ರಥಮ ವಿದ್ಯುದಂಶ ಪ್ರಸಾರಕ ನಿರ್ವಾಯು ನಳಿಕೆ—ನ ಆಗಮನದಿಂದ ಪ್ರಗತಿಯು ಮಾಡಲ್ಪಟ್ಟಿತು. ಇದು ನಿಸ್ತಂತು ಟೆಲಿಗ್ರಾಫಿಯನ್ನು, ಇಂದು ನಮಗೆ ತಿಳಿದಿರುವ ರೇಡಿಯೋ ಆಗಿ ರೂಪಾಂತರಿಸಿತು.
1906ರಲ್ಲಿ, ಅಮೆರಿಕದಲ್ಲಿ, ರೆಜಿನಾಲ್ಡ್ ಫೆಸೆಂಡನ್ ಸಂಗೀತವನ್ನು ಪ್ರಸಾರಮಾಡಿದನು, ಅದು 80 ಕಿಲೊಮೀಟರ್ಗಳಷ್ಟು ದೂರದಲ್ಲಿದ್ದ ಹಡಗುಗಳಿಂದ ಸೆರೆಹಿಡಿಯಲ್ಪಟ್ಟಿತು. 1910ರಲ್ಲಿ ಲೀ ಡಿ ಫಾರೆಸ್ಟ್, ನ್ಯೂ ಯಾರ್ಕ್ನಲ್ಲಿನ ರೇಡಿಯೋ ವಿಲಾಸಿಗಳ ಪ್ರಯೋಜನಾರ್ಥವಾಗಿ, ಇಟಲಿಯ ಪ್ರಖ್ಯಾತ ತಾರಸ್ವರದ ವಾದಕನಾದ ಎನ್ರಿಕೊ ಕರುಸೊನಿಂದ ಕೊಡಲ್ಟಟ್ಟ ಗಾನಗೋಷ್ಠಿಯ ನೇರ ರವಾನೆಯನ್ನು ಪ್ರದರ್ಶಿಸಿದನು. ಒಂದು ವರ್ಷಕ್ಕೆ ಮೊದಲು, ಪ್ರಪ್ರಥಮ ಬಾರಿಗೆ, ಫ್ರಾನ್ಸ್ನ ಪ್ಯಾರಿಸ್ನಲ್ಲಿರುವ ಐಫಲ್ ಟವರ್ನಿಂದ, ಗಡಿಯಾರಗಳನ್ನು ಕರಾರುವಾಕಾಗಿ ನಡೆಯುವಂತೆ ಸರಿಹೊಂದಿಸುವ ಸಂಕೇತಗಳು ರವಾನಿಸಲ್ಪಟ್ಟಿದ್ದವು. ಅದೇ ವರ್ಷ, 1909ರಲ್ಲಿ, ಅಟ್ಲ್ಯಾಂಟಿಕ್ ಮಹಾಸಾಗರದಲ್ಲಿ ಪರಸ್ಪರ ಡಿಕ್ಕಿಹೊಡೆದಿದ್ದ ಫ್ಲಾರಿಡ ಮತ್ತು ರಿಪಬ್ಲಿಕ್ ಎಂಬ ಸ್ಟೀಮರ್ಗಳಿಂದ, ಮೊತ್ತ ಮೊದಲಾಗಿ ರೇಡಿಯೋದಿಂದ ನೆರವು ನೀಡಲ್ಪಟ್ಟ ಪಾರಾಗಿ ಉಳಿದವರ ರಕ್ಷಣೆಯು ಸಂಭವಿಸಿತು. ಮೂರು ವರ್ಷಗಳ ನಂತರ, ರೇಡಿಯೋದಿಂದ ಕಳುಹಿಸಲ್ಪಟ್ಟ ನಿಸ್ತಂತು ವಾರ್ತಾ ಸಂಜ್ಞೆ (ಎಸ್ಓಎಸ್)ಯ ಫಲವಾಗಿ, ಟೈಟಾನಿಕ್ ವಿಪತ್ತಿನಲ್ಲಿ ಪಾರಾಗಿ ಉಳಿದ 700ಕ್ಕಿಂತಲೂ ಹೆಚ್ಚು ಮಂದಿ ಸಹ ಕಾಪಾಡಲ್ಪಟ್ಟರು.
1916ರಷ್ಟು ಆದಿಯಲ್ಲಿ, ಪ್ರತಿಯೊಂದು ಮನೆಯಲ್ಲಿ ಒಂದು ರೇಡಿಯೋವನ್ನು ಹೊಂದಿರುವ ಸಾಧ್ಯತೆಯನ್ನು ಮುಂಚಿತ್ರಿಸಿಕೊಳ್ಳಲಾಯಿತು. ವಿದ್ಯುದಂಶ ಪ್ರಸಾರಕಗಳ ಉಪಯೋಗವು, ವಾಣಿಜ್ಯ ರೇಡಿಯೋದ ವ್ಯಾಪಕವಾದ ವಿಕಸನಕ್ಕಾಗಿ ಮಾರ್ಗವನ್ನು ಸಿದ್ಧಪಡಿಸುತ್ತಾ, ಪರಿಣಾಮಕಾರಕವಾದ, ಕಡಿಮೆ ಬೆಲೆಯ ರಿಸೀವರ್ಗಳ ಉತ್ಪಾದನೆಯನ್ನು ಸಾಧ್ಯಮಾಡಿತು. ಆ ಉತ್ಕರ್ಷವು ಅಮೆರಿಕದಲ್ಲಿ ಮೊದಲು ಸಂಭವಿಸಿತು, ಅಲ್ಲಿ 1921ರ ಅಂತ್ಯದಷ್ಟಕ್ಕೆ 8 ರೇಡಿಯೋ ಸ್ಟೇಷನುಗಳಿದ್ದವು ಮತ್ತು ನವೆಂಬರ್ 1, 1922ರಷ್ಟಕ್ಕೆ 564 ಸ್ಟೇಷನುಗಳಿಗೆ ಪರವಾನೆ ನೀಡಲ್ಪಟ್ಟಿತ್ತು! ಅನೇಕ ಮನೆಗಳಲ್ಲಿ, ವಿದ್ಯುತ್ ಬೆಳಕಿನ ವ್ಯವಸ್ಥೆಯ ಹೊರತಾಗಿ, ವಿದ್ಯುಚ್ಛಕ್ತಿ ಸರಬರಾಯಿಗೆ ಸಂಪರ್ಕ ಸ್ಥಾಪಿಸಲ್ಪಟ್ಟ ಮೊದಲ ಸಾಧನವು ರೇಡಿಯೋ ಆಗಿತ್ತು.
ಕ್ರಮವಾದ ವಾಣಿಜ್ಯ ರವಾನೆಯು ಆರಂಭವಾದ ಎರಡು ವರ್ಷಗಳೊಳಗೆ, ತಮ್ಮ ಸಂದೇಶವನ್ನು ಪ್ರಸಾರಮಾಡಲಿಕ್ಕಾಗಿ ಬೈಬಲ್ ವಿದ್ಯಾರ್ಥಿಗಳು—ಹೀಗೆಂದು ಯೆಹೋವನ ಸಾಕ್ಷಿಗಳು ಆಗ ಪ್ರಸಿದ್ಧರಾಗಿದ್ದರು—ಸಹ ರೇಡಿಯೋವನ್ನು ಉಪಯೋಗಿಸುತ್ತಿದ್ದರು. 1922ರಲ್ಲಿ, ಆಗ ವಾಚ್ ಟವರ್ ಸೊಸೈಟಿಯ ಅಧ್ಯಕ್ಷರಾಗಿದ್ದ ಜೆ. ಎಫ್. ರದರ್ಫೋರ್ಡರು, ಕ್ಯಾಲಿಫೋರ್ನಿಯದಲ್ಲಿ ತಮ್ಮ ಪ್ರಥಮ ರೇಡಿಯೋ ಭಾಷಣವನ್ನು ನೀಡಿದರು. ಎರಡು ವರ್ಷಗಳ ತರುವಾಯ, ವಾಚ್ ಟವರ್ ಸೊಸೈಟಿಯಿಂದ ನಿರ್ಮಿಸಲ್ಪಟ್ಟು, ಒಡೆತನಪಡೆದಿದ್ದ ಒಂದು ರೇಡಿಯೋ ಸ್ಟೇಷನ್, ಡಬ್ಲ್ಯೂಬಿಬಿಆರ್, ನ್ಯೂ ಯಾರ್ಕ್ನ ಸ್ಟೇಟನ್ ಐಲೆಂಡ್ನಿಂದ ಪ್ರಸಾರಮಾಡಲು ಆರಂಭಿಸಿತು. ಕಾಲಕ್ರಮೇಣ, ಬೈಬಲ್ ಕಾರ್ಯಕ್ರಮಗಳನ್ನು ಪ್ರಸಾರಮಾಡಲಿಕ್ಕಾಗಿ ಸೊಸೈಟಿಯು ಲೋಕವ್ಯಾಪಕವಾದ ನೆಟ್ವರ್ಕ್ಗಳನ್ನು ವ್ಯವಸ್ಥಾಪಿಸಿತು. 1933ರಷ್ಟಕ್ಕೆ 408 ಸ್ಟೇಷನುಗಳ ಪರಮಾಂಕವು, ದೇವರ ರಾಜ್ಯದ ಸಂದೇಶವನ್ನು ಕೊಂಡೊಯ್ಯುತ್ತಿದ್ದವು.—ಮತ್ತಾಯ 24:14.
ಹಾಗಿದ್ದರೂ, ಅನೇಕ ರಾಷ್ಟ್ರಗಳಲ್ಲಿ ರೇಡಿಯೋ, ಸರಕಾರದ ಏಕಸ್ವಾಮ್ಯವಾಗಿ ಪರಿಣಮಿಸಿತು. ಇಟಲಿಯಲ್ಲಿ, ಮುಸಲೋನಿಯ ಸರಕಾರವು ರೇಡಿಯೋವನ್ನು ರಾಜಕೀಯ ಪ್ರಚಾರಕಾರ್ಯದ ಒಂದು ಉಪಕರಣವಾಗಿ ಅವಲೋಕಿಸಿ, ಅದರ ನಾಗರಿಕರು ವಿದೇಶೀಯ ಪ್ರಸರಣಗಳಿಗೆ ಕಿವಿಗೊಡುವುದನ್ನು ನಿಷೇಧಿಸಿತು. ರೇಡಿಯೋದ ಹೇರಳವಾದ ಶಕ್ತಿಯು 1938ರಲ್ಲಿ ವ್ಯಾಪಕವಾಗಿ ಪ್ರದರ್ಶಿಸಲ್ಪಟ್ಟಿತು. ಅಮೆರಿಕದಲ್ಲಿನ ವಿಜ್ಞಾನ ಕಾಲ್ಪನಿಕ ಕಥೆಯ ಪ್ರಸರಣದ ಸಮಯದಲ್ಲಿ, ಆರ್ಸನ್ ವೆಲ್ಸ್, ಸಾಮಾನ್ಯ ಜನರ ನಡುವೆ ಅತಿ ಭೀತಿಯನ್ನುಂಟುಮಾಡಿದನು, ಅವರಲ್ಲಿ ಕೆಲವರು, ಮಾರ್ಷ್ನ್ರು ನ್ಯೂ ಜರ್ಸಿಯಲ್ಲಿ ಬಂದು ನೆಲೆಸಿದ್ದರೆಂದೂ ಮತ್ತು ತಮ್ಮನ್ನು ವಿರೋಧಿಸುವವರೆಲ್ಲರನ್ನು ಕೊಲ್ಲಲಿಕ್ಕಾಗಿ ವಂಚನಾತ್ಮಕವಾದ “ಕಾವಿನ ಕಿರಣ”ವನ್ನು ಉಪಯೋಗಿಸುತ್ತಿದ್ದರೆಂದೂ ಆಲೋಚಿಸಿದರು!
ರೇಡಿಯೋದ ಒಂದು ನೂರು ವರ್ಷಗಳು
1954ರಲ್ಲಿ ಇಟಲಿಯ ಜನರ ಅಚ್ಚುಮೆಚ್ಚಿನ ಕಾಲಕ್ಷೇಪವು, ರೇಡಿಯೋವನ್ನು ಆಲಿಸುವುದಾಗಿತ್ತು. ಟೆಲಿವಿಷನಿನ ಸಾಫಲ್ಯದ ಹೊರತಾಗಿಯೂ, ರೇಡಿಯೋ ಈಗಲೂ ತುಂಬ ಜನಪ್ರಿಯವಾಗಿದೆ. ಅಧಿಕಾಂಶ ಯೂರೋಪಿಯನ್ ದೇಶಗಳಲ್ಲಿ, ಜನಸಂಖ್ಯೆಯ 50ರಿಂದ 70 ಪ್ರತಿಶತ ಜನರು, ಮಾಹಿತಿಗಾಗಿ ಅಥವಾ ಮನೋರಂಜನೆಗಾಗಿ ರೇಡಿಯೋವನ್ನು ಆಲಿಸುತ್ತಾರೆ. ಅಮೆರಿಕದಲ್ಲಿ, 95 ಪ್ರತಿಶತ ವಾಹನಗಳಲ್ಲಿ, 80 ಪ್ರತಿಶತ ಮಲಗುವ ಕೋಣೆಗಳಲ್ಲಿ, ಮತ್ತು 50 ಪ್ರತಿಶತಕ್ಕಿಂತಲೂ ಹೆಚ್ಚಿನ ಅಡಿಗೆಮನೆಗಳಲ್ಲಿ ರೇಡಿಯೋ ಇದೆ ಎಂದು ಅಂದಾಜುಮಾಡಲ್ಪಟ್ಟಿದೆ.
ಟೆಲಿವಿಷನಿನ ಈ ಶಕದಲ್ಲಿಯೂ, ರೇಡಿಯೋದ ಜನಪ್ರಿಯತೆಗಾಗಿರುವ ಕಾರಣಗಳಲ್ಲಿ ಒಂದು, ಅದನ್ನು ಒಯ್ಯಲು ಸುಲಭವಾಗಿರುವುದೇ. ಇದಲ್ಲದೆ, ಒಂದು ಸಮೀಕ್ಷೆಗನುಸಾರ, “ಟೆಲಿವಿಷನ್ಗಿಂತಲೂ ಬಹಳ ಉತ್ಕೃಷ್ಟವಾದ ಭಾವನಾತ್ಮಕ ಹಾಗೂ ಕಾಲ್ಪನಿಕ ಒಳಗೂಡಿಸುವಿಕೆಯ ಶಕ್ತಿ”ಯು ರೇಡಿಯೋಗಿದೆ.
1995ರ ಸಮಯದಲ್ಲಿ, ಇಟಲಿಯಲ್ಲಿ ಮಾರ್ಕೊನಿಯ ಪ್ರಯೋಗದ ಶತವಾರ್ಷಿಕೋತ್ಸವಕ್ಕಾಗಿರುವ ಆಚರಣೆಗಳು, ರೇಡಿಯೋದಿಂದ ಮಾಡಲ್ಪಟ್ಟ ಪ್ರಗತಿಯ ಮೇಲೆ ಪ್ರತಿಫಲಿಸಲಿಕ್ಕಾಗಿ ಸಂದರ್ಭವನ್ನು ಒದಗಿಸಿದವು. ಮೊದಲ ಪ್ರಾಕೃತ ಉಪಕರಣಗಳನ್ನು ಇಂದಿನ ಮುಂದುವರಿದ ವ್ಯವಸ್ಥೆಗಳಾಗಿ ಮಾರ್ಪಡಿಸುವುದರಲ್ಲಿ, ಅನೇಕ ವಿಜ್ಞಾನಿಗಳು ಸಹಾಯಗಳನ್ನು ನೀಡಿದ್ದಾರೆ. ಈಗ, ಅಂಕೀಯ ಆಡಿಯೋ ಪ್ರಸಾರಮಾಡುವಿಕೆಯ—ಇದು ಸಂಕೇತದ ಸಂಖ್ಯಾಸೂಚಕ ಕ್ರೋಡೀಕರಣದ ಒಂದು ವ್ಯವಸ್ಥೆಯಾಗಿದೆ—ಫಲವಾಗಿ, ಅತ್ಯುತ್ತಮವಾದ ಧ್ವನಿ ಗುಣಮಟ್ಟವು ಖಾತ್ರಿಪಡಿಸಲ್ಪಟ್ಟಿದೆ. ಆದರೆ ರೇಡಿಯೋದ ಪ್ರತಿ ದಿನದ ಅಸಂಖ್ಯಾತ ಉಪಯೋಗಗಳಿಗೆ ಕೂಡಿಸಿ, ಆ ಕಂಡುಹಿಡಿತವು, ಟಿವಿ, ರೆಡಾರ್, ಮತ್ತು ಇನ್ನಿತರ ವಿವಿಧ ತಾಂತ್ರಿಕತೆಗಳಿಗಾಗಿ ಆರಂಭದ ಬಿಂದುವಾಗಿತ್ತು.
ಉದಾಹರಣೆಗಾಗಿ, ರೇಡಿಯೋ ಖಗೋಳ ವಿಜ್ಞಾನವು, ಆಕಾಶಸ್ಥಕಾಯಗಳಿಂದ ಹೊರಸೂಸಲ್ಪಡುವ ರೇಡಿಯೋ ತರಂಗಗಳ ಗ್ರಹಣ ಮತ್ತು ವಿಶ್ಲೇಷಣದ ಮೇಲೆ ಆಧಾರಿತವಾಗಿದೆ. ರೇಡಿಯೋ ಇಲ್ಲದೆ, ಬಾಹ್ಯಾಕಾಶ ತಾಂತ್ರಿಕತೆಯ ಅಭಿವೃದ್ಧಿಯು ಅಸಾಧ್ಯವಾಗಿರುತ್ತಿತ್ತು. ಎಲ್ಲಾ ಉಪಗ್ರಹಗಳ ಉಪಯೋಗಗಳು—ಟೆಲಿವಿಷನ್, ಟೆಲಿಫೋನ್, ದತ್ತಾಂಶ ಸಂಗ್ರಹಣೆ—ರೇಡಿಯೋ ತರಂಗಗಳ ಉಪಯೋಗದ ಮೇಲೆ ಆಧಾರಿತವಾಗಿವೆ. ಟ್ರ್ಯಾನ್ಸಿಸ್ಟರ್ಗಳನ್ನು ಮೈಕ್ರೊಚಿಪ್ಗಳಾಗಿ ಮಾಡಿರುವ ಯಂತ್ರಕಲಾಶಾಸ್ತ್ರದ ಅಭಿವೃದ್ಧಿಯು, ಮೊದಲು ಪಾಕೆಟ್ ಕ್ಯಾಲ್ಕ್ಯುಲೇಟರ್ಗಳು ಮತ್ತು ಕಂಪ್ಯೂಟರ್ಗಳಿಗೆ ಮತ್ತು ತದನಂತರ ಅಂತಾರಾಷ್ಟ್ರೀಯ ಮಾಹಿತಿ ನೆಟ್ವರ್ಕ್ಗಳಿಗೆ ಮುನ್ನಡಿಸಿತು.
ಭೂಮಿಯ ಯಾವುದೇ ಅಭಿಮುಖದಲ್ಲಿರುವ ಎರಡು ಬಿಂದುಗಳಿಗೆ, ಅಥವಾ ಬಹುಮಟ್ಟಿಗೆ ಯಾವುದೇ ಎರಡು ಬಿಂದುಗಳಿಗೆ ಸಂಪರ್ಕ ಸ್ಥಾಪಿಸಲು ಸಮರ್ಥವಾಗಿರುವ ಮೊಬೈಲ್ ಟೆಲಿಫೋನ್ಗಳು, ಈಗಾಗಲೇ ನಿಜತ್ವಗಳಾಗಿವೆ. ಅಂಗೈ ಅಗಲದ ನಿಸ್ತಂತು ರಿಸೀವರ್ಗಳ—ಟಿವಿ, ಟೆಲಿಫೋನ್, ಕಂಪ್ಯೂಟರ್, ಮತ್ತು ಫ್ಯಾಕ್ಸ್ನ ಒಂದು ಕೂಡಿಸುವಿಕೆ—ಆಗಮನವೇ ಈಗಿನ ಪ್ರತೀಕ್ಷೆಯಾಗಿದೆ. ಈ ರಿಸೀವರ್ಗಳು ನೂರಾರು ವಿಡಿಯೋ, ಆಡಿಯೋ ಮತ್ತು ಟೆಕ್ಸ್ಟ್ ಚ್ಯಾನಲ್ಗಳನ್ನು ತರಂಗಮಾನಕ್ಕೆ ಅಳವಡಿಸಲು ಸಮರ್ಥವಾಗಿದ್ದು, ಅದನ್ನು ಉಪಯೋಗಿಸುವವರಿಗೆ, ಇತರರೊಂದಿಗೆ ಇಲೆಕ್ಟ್ರಾನಿಕ್ ಮೆಯ್ಲ್ ಅನ್ನು ವಿನಿಮಯಮಾಡಿಕೊಳ್ಳಲು ಅನುಮತಿಸುವವು.
ಈ ಕ್ಷೇತ್ರಕ್ಕಾಗಿ ಭವಿಷ್ಯತ್ತು ಏನನ್ನು ಕಾದಿರಿಸಿದೆ ಎಂಬುದರ ಕುರಿತು ಒಬ್ಬನು ನಿಶ್ಚಿತನಾಗಿರಸಾಧ್ಯವಿಲ್ಲ. ಆದರೆ ರೇಡಿಯೋ ತಾಂತ್ರಿಕತೆಯು ಮುಂದುವರಿಯುತ್ತಾ ಹೋಗುತ್ತದೆ, ಆದುದರಿಂದ ಗಮನಾರ್ಹವಾದ ಇತರ ಅಭಿವೃದ್ಧಿಗಳು ಬರುವುದು ಸಂಭವನೀಯ.
[ಪಾದಟಿಪ್ಪಣಿ]
a ಆ ವಿಚಾರಣೀಯ ವಿಷಯದ ವಿವರಣೆಯು 1902ರಲ್ಲಿ ಬಂತು, ಆಗ ಭೌತಶಾಸ್ತ್ರಜ್ಞರಾದ ಆರ್ಥರ್ ಕೆನಲಿ ಮತ್ತು ಆಲಿವರ್ ಹೆವಿಸೈಡರು, ವಿದ್ಯುತ್ಕಾಂತೀಯ ತರಂಗಗಳನ್ನು ಪ್ರತಿಫಲಿಸಿದ ವಾಯುಮಂಡಲದ ಒಂದು ಪದರವಾದ ಅಯಾನುಮಂಡಲದ ಅಸ್ತಿತ್ವದ ಕುರಿತಾಗಿ ತಾತ್ವೀಕರಿಸಿದರು.
[ಪುಟ 38 ರಲ್ಲಿರುವ ಸಂಕ್ಷಿಪ್ತ ವಿವರಣೆ]
ಟೆಲಿವಿಷನಿನ ಸಾಫಲ್ಯದ ಹೊರತಾಗಿಯೂ, ರೇಡಿಯೋ ಇನ್ನೂ ತುಂಬ ಜನಪ್ರಿಯವಾಗಿದೆ
[Picture Credit Lines on page 25]
Top left and right, bottom left: “MUSEO della RADIO e della TELEVISIONE” RAI--TORINO; bottom right: NASA photo