ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g96 11/8 ಪು. 28-29
  • ಜಗತ್ತನ್ನು ಗಮನಿಸುವುದು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜಗತ್ತನ್ನು ಗಮನಿಸುವುದು
  • ಎಚ್ಚರ!—1996
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಹೊಗೆಸೊಪ್ಪಿನ ಬಳಕೆ
  • ಯುವ ಜನರು ಮತ್ತು ಬಂದೂಕುಗಳು
  • ಕಡಲ ಪಕ್ಷಿಯ ರಕ್ಷಣೆಯೊ?
  • ಜಗತ್ತಿನ ಅತ್ಯಂತ ನಿಷ್ಕೃಷ್ಟ ಗಡಿಯಾರ
  • ಜಗತ್ತಿನ ಅತ್ಯಂತ ಎತ್ತರವಾದ ಕಟ್ಟಡಗಳು
  • ಟೈಪ್‌-ಸಿ ಹೆಪಟೈಟಿಸ್‌ ಮತ್ತು ರಕ್ತ
  • ನೀವು ಧೂಮಪಾನವನ್ನು ನಿಲ್ಲಿಸುವಾಗ
  • ಮೂರ್ಛೆರೋಗದೊಂದಿಗೆ ಸಂಬಂಧಹೊಂದಿರುವ ಟಿವಿ
  • ಜೇನು ನೊಣಗಳ ಜಾಡುಹಿಡಿಯುವುದು
  • ಕೊಲೆಗಡುಕನು ಗುರುತಿಸಲ್ಪಟ್ಟದ್ದು
  • ಏಷಿಯಾದ ಶಿಶು-ಲೈಂಗಿಕ ವ್ಯಾಪಾರ
  • ಆತ್ಮಹತ್ಯೆ—ಯುವ ಜನತೆಯನ್ನು ಕಾಡಿಸುತ್ತಿರುವ ಒಂದು ಪಿಡುಗು
    ಎಚ್ಚರ!—1998
  • ಜಗತ್ತನ್ನು ಗಮನಿಸುವುದು
    ಎಚ್ಚರ!—1997
ಎಚ್ಚರ!—1996
g96 11/8 ಪು. 28-29

ಜಗತ್ತನ್ನು ಗಮನಿಸುವುದು

ಹೊಗೆಸೊಪ್ಪಿನ ಬಳಕೆ

ಕೆಲವು ದೇಶಗಳಲ್ಲಿ ಹೊಗೆಸೊಪ್ಪಿನ ಬಳಕೆಯು ಗಮನಾರ್ಹವಾಗಿ ಇಳಿದಿರುವುದಾದರೂ, ಕಳೆದ ಎರಡು ದಶಕಗಳಲ್ಲಿ ಅಧಿಕಾಂಶ ರಾಷ್ಟ್ರಗಳು ಹೆಚ್ಚಳಗಳನ್ನು ತೋರಿಸಿವೆ. ಉದಾಹರಣೆಗಾಗಿ, ಚೀನಾ ದೇಶವು ಇನ್ನೂ ಜಗತ್ತಿನ ಅತ್ಯಂತ ದೊಡ್ಡ ಬಳಕೆದಾರವಾಗಿದ್ದು, 297 ಪ್ರತಿಶತ ಹೆಚ್ಚಳವನ್ನು ಹೊಂದಿತ್ತು. ಅಮೆರಿಕ ಮತ್ತು ಭಾರತಗಳು, ಹೊಗೆಸೊಪ್ಪಿನ ಬಳಕೆಯ ಎರಡನೆಯ ಮತ್ತು ಮೂರನೆಯ ಅತ್ಯುಚ್ಚ ಪ್ರಮಾಣವನ್ನು ಹೊಂದಿದ್ದು, ಪ್ರತಿಯೊಂದೂ 27 ಪ್ರತಿಶತ ಹಾಗೂ 50 ಪ್ರತಿಶತ ಹೆಚ್ಚಳಗಳನ್ನು ತೋರಿಸಿದವು. ದೊಡ್ಡ ಹೆಚ್ಚಳಗಳನ್ನು ಹೊಂದಿರುವ ಇನ್ನಿತರ ಕೆಲವು ದೇಶಗಳು ಯಾವುವೆಂದರೆ, ರುಆಂಡ 388 ಪ್ರತಿಶತ; ಗ್ರೀಸ್‌, 331 ಪ್ರತಿಶತ; ಉತ್ತರ ಕೊರಿಯ, 325 ಪ್ರತಿಶತ; ಟಾನ್ಸೇನಿಯ, 227 ಪ್ರತಿಶತ; ಹಾಂಗ್‌ ಕಾಂಗ್‌, 214 ಪ್ರತಿಶತ; ಇಂಡೊನೇಶಿಯ, 193 ಪ್ರತಿಶತ; ಸಿಂಗಾಪುರ, 186 ಪ್ರತಿಶತ; ಮತ್ತು ಟರ್ಕಿ, 185 ಪ್ರತಿಶತ. ಏಷಿಯಾವೀಕ್‌ನಲ್ಲಿ ಮುದ್ರಿಸಲ್ಪಟ್ಟ ಸಂಖ್ಯೆಗಳು, 1970 ಮತ್ತು 1993ರ ನಡುವಿನ ಬದಲಾವಣೆಯ ಪ್ರತಿಶತವನ್ನು ತೋರಿಸುತ್ತವೆ. ಪಟ್ಟಿಮಾಡಲ್ಪಟ್ಟ 138 ರಾಷ್ಟ್ರಗಳಲ್ಲಿ, ಹೊಗೆಸೊಪ್ಪಿನ ಬಳಕೆಯಲ್ಲಿ 26 ರಾಷ್ಟ್ರಗಳು ಮಾತ್ರವೇ ಇಳಿತಗಳನ್ನು ತೋರಿಸಿದವು.

ಯುವ ಜನರು ಮತ್ತು ಬಂದೂಕುಗಳು

ಬಂದೂಕು ಹಾರಿಸುವಿಕೆಯಿಂದ ಸಂಭವಿಸುವ ಮರಣಗಳು, ಇನ್ನಿತರ ಗುಂಪುಗಳ ನಡುವಿಗಿಂತಲೂ ಅಮೆರಿಕದ 10ರಿಂದ 19ರ ಪ್ರಾಯದ ಯುವ ಜನರ ನಡುವೆ ಹೆಚ್ಚು ವೇಗವಾಗಿ ವೃದ್ಧಿಯಾಗುತ್ತಿವೆ ಎಂದು ಚಿಲ್ಡ್ರನ್ಸ್‌ ಡಿಫೆನ್ಸ್‌ ಫಂಡ್‌ನ ವರದಿಯೊಂದು ಹೇಳುತ್ತದೆ. ಬಂದೂಕುಗಳು ಈಗ ಮರಣಕ್ಕೆ ನಡಿಸುವ ಎರಡನೆಯ ಪ್ರಮುಖ ಕಾರಣವಾಗಿವೆ. ಅಪಘಾತಗಳು, ಬಹುಮಟ್ಟಿಗೆ ವಾಹನಸಂಬಂಧವಾದ ಅಪಘಾತಗಳು ಪ್ರಮುಖ ಕಾರಣವಾಗಿವೆ. 1993ರಲ್ಲಿ, ಅಮೆರಿಕದ 20ರ ಕೆಳಗಿನ ಪ್ರಾಯದ ಯುವ ಜನರಲ್ಲಿ, ಪ್ರತಿ 92 ನಿಮಿಷಗಳಿಗೆ ಒಬ್ಬನು ಬಂದೂಕು ಹಾರಿಸುವಿಕೆಯಿಂದ ಮೃತಪಟ್ಟನು—ಮುಂಚಿನ ವರ್ಷಕ್ಕಿಂತಲೂ 7 ಪ್ರತಿಶತ ವೃದ್ಧಿ. ತುಲನಾತ್ಮಕವಾಗಿ, ಎಲ್ಲಾ ವಯೋಮಿತಿಗಳಲ್ಲಿ, ವೃದ್ಧಿಯು ಕೇವಲ 4.8 ಪ್ರತಿಶತವಾಗಿತ್ತು. ಮಕ್ಕಳಿಂದ ಹಾಗೂ ಶಾಲೆಗಳಿಂದ ಬಂದೂಕುಗಳನ್ನು ದೂರವಿರಿಸಲಿಕ್ಕಾಗಿ ಸರಕಾರವು ಯಾವುದೇ ಕ್ರಮವನ್ನು ಕೈಕೊಂಡಿಲ್ಲವೆಂದು ಡಿಫೆನ್ಸ್‌ ಫಂಡ್‌ ದೋಷಾರೋಪಿಸಿತು. ಅಮೆರಿಕದ ನ್ಯಾಯಾಂಗ ಇಲಾಖೆಯ ಸಂಖ್ಯಾಸಂಗ್ರಹಣಗಳು, ಡಿಫೆನ್ಸ್‌ ಫಂಡ್‌ನ ದೋಷಾರೋಪಣೆಗೆ ಒಪ್ಪಿಗೆ ಸೂಚಿಸುವಂತೆ ತೋರುತ್ತವೆ. 1994ರಲ್ಲಿ 26,000ವನ್ನೂ ಮೀರಿ, ಕಳೆದ ದಶಕದಲ್ಲಿ ಚಿಕ್ಕಪ್ರಾಯದ ಕೊಲೆಗಾರರ ಸಂಖ್ಯೆಯು ಮೂರರಷ್ಟು ಅಧಿಕಗೊಂಡಿದೆ. ಅದೇ ಕಾಲಾವಧಿಯಲ್ಲಿ, ಬಂದೂಕುಗಳನ್ನು ತಮ್ಮ ಕೊಲೆಯ ಆಯುಧಗಳನ್ನಾಗಿ ಉಪಯೋಗಿಸುವವರ ಸಂಖ್ಯೆಯು ನಾಲ್ಕರಷ್ಟು ಹೆಚ್ಚಾಗಿದೆ, ಆದರೂ ಇನ್ನಿತರ ಆಯುಧಗಳನ್ನು ಉಪಯೋಗಿಸುವವರ ಸಂಖ್ಯೆಯು ಹಾಗೆಯೇ ಇದೆ. ಬಂದೂಕುಗಳ ಲಭ್ಯತೆಯಿಂದ ಮಾಡಲ್ಪಟ್ಟ ಹಾನಿಯನ್ನು ಈ ಸಂಖ್ಯೆಗಳು ಒತ್ತಿಹೇಳುತ್ತವೆ.

ಕಡಲ ಪಕ್ಷಿಯ ರಕ್ಷಣೆಯೊ?

ಭೂಪ್ರದೇಶಕ್ಕೆ ಸಮೀಪವಿರುವ ಸಮುದ್ರದ ಬಳಿ ಒಂದು ಪ್ರಮುಖ ಎಣ್ಣೆ ಸ್ರವಿಸುವಿಕೆಯು ಸಂಭವಿಸುವಾಗ, ವನ್ಯಜೀವಿಗಳ ಮೇಲಿನ ಪರಿಣಾಮವು ದುರಂತಮಯವಾಗಿರಸಾಧ್ಯವಿದೆ. ಕೆಲವೊಮ್ಮೆ ಸ್ವಯಂ ಕೆಲಸಗಾರರ ಅನೇಕ ಸಿಬ್ಬಂದಿಗಳಿಂದ ಕೂಡಿದ ಸಂಸ್ಥೆಗಳು, ತಾವು ಮಾಡಲು ಸಾಧ್ಯವಿರುವುದನ್ನು ಮಾಡಲಿಕ್ಕಾಗಿ ತ್ವರಿತವಾಗಿ ಕ್ರಿಯೆಕೈಕೊಳ್ಳುತ್ತವೆ. ಪ್ರಮುಖ ಪ್ರಾಧಾನ್ಯಗಳಲ್ಲಿ ಒಂದು, ಎಣ್ಣೆಯಿಂದಾವೃತವಾದ ಕಡಲ ಪಕ್ಷಿಗಳನ್ನು ಸ್ವಚ್ಛಗೊಳಿಸುವುದೇ ಆಗಿದೆ. ಆದರೆ ಈ ಕ್ರಿಯೆಯು ಎಷ್ಟು ಪರಿಣಾಮಕರವೂ ಬಾಳುವಂತಹದ್ದೂ ಆಗಿದೆ? ಸ್ವಚ್ಛಗೊಳಿಸಲ್ಪಟ್ಟು, ತಮ್ಮ ಇರುನೆಲೆಗಳಿಗೆ ಹಿಂದಿರುಗುವ ಸಾವಿರಾರು ಕಡಲ ಪಕ್ಷಿಗಳಲ್ಲಿ ಅಧಿಕಾಂಶ ಪಕ್ಷಿಗಳು, ಹತ್ತು ದಿವಸಗಳೊಳಗೇ ಸಾಯುತ್ತವೆ ಎಂದು ಆಧುನಿಕ ಸಂಶೋಧನೆಯು ಸೂಚಿಸುತ್ತದೆ. ಏಕೆ? ಮಾನವ ನಿರ್ವಹಣೆಯ ಆಘಾತವಲ್ಲದೆ, ಆ ಪಕ್ಷಿಗಳು ತಮ್ಮ ದೇಹವನ್ನು ಕೊಕ್ಕಿನಿಂದ ಸವರಿ ಸರಿಮಾಡಿಕೊಳ್ಳಲು ಪ್ರಯತ್ನಿಸುತ್ತಿರುವಾಗ ಸ್ವಲ್ಪ ಎಣ್ಣೆಯನ್ನು ಹೊಟ್ಟೆಗೆ ಹೊಗಿಸಿಕೊಂಡಿರುತ್ತವೆ, ಮತ್ತು ಇದು ಕಟ್ಟಕಡೆಗೆ ಅವುಗಳನ್ನು ಕೊಲ್ಲುತ್ತದೆ. ಇದನ್ನು ನಿಷ್ಫಲಗೊಳಿಸಲಿಕ್ಕಾಗಿ, ಬ್ರಿಟನಿನಲ್ಲಿ ನಿರ್ವಹಣೆಮಾಡಲ್ಪಡುವ ಪಕ್ಷಿಗಳಿಗೆ, ಅವುಗಳು ವಿಷಪದಾರ್ಥಗಳನ್ನು ವಿರೇಚಿಸುವಂತೆ ಮಾಡುವ ಪ್ರಯತ್ನದಲ್ಲಿ, ಕೇಯೊಲಿನ್‌ (ಪಿಂಗಾಣಿ ಮಣ್ಣು), ಇದ್ದಲು, ಮತ್ತು ಗ್ಲೂಕೋಸ್‌ನ ಮಿಶ್ರಣವನ್ನು ತಿನ್ನಿಸಲಾಗುತ್ತದೆ. ಹಾಗಿದ್ದರೂ, ಕೆಲವೇ ಪಕ್ಷಿಗಳು ಸಂತಾನವೃದ್ಧಿ ಮಾಡುವಷ್ಟು ಸಮಯ ಜೀವಿಸುತ್ತವೆ, ಮತ್ತು ಈ ಸ್ವಚ್ಛಗೊಳಿಸುವಿಕೆಯನ್ನು “ಪ್ರಸಾಧಕ ಸಾಧನೆ”ಯ ಯಾವುದೋ ಒಂದು ವಿಷಯವಾಗಿ ವೀಕ್ಷಿಸಲ್ಪಡಲೇಬೇಕಾಗಿದೆ ಎಂದು, ಲಂಡನಿನ ದ ಸಂಡೇ ಟೈಮ್ಸ್‌ನಿಂದ ಉದ್ಧರಿಸಲ್ಪಟ್ಟ ಒಬ್ಬ ಜೀವಿಪರಿಸ್ಥಿತಿಶಾಸ್ತ್ರಜ್ಞನು ತೀರ್ಮಾನಿಸುತ್ತಾನೆ.

ಜಗತ್ತಿನ ಅತ್ಯಂತ ನಿಷ್ಕೃಷ್ಟ ಗಡಿಯಾರ

ಇಂಗ್ಲೆಂಡಿನಲ್ಲಿ, ಸಮಯದ ಅಂಗೀಕೃತವಾದ ಅಂತಾರಾಷ್ಟ್ರೀಯ ಮಟ್ಟವನ್ನು ನಿರ್ಧರಿಸಲಿಕ್ಕಾಗಿ ಉಪಯೋಗಿಸಲ್ಪಡುವ ಪರಮಾಣು ಗಡಿಯಾರಗಳಿಗಿಂತಲೂ ಒಂದು ಸಾವಿರ ಬಾರಿಗಳಷ್ಟು ಹೆಚ್ಚು ನಿಷ್ಕೃಷ್ಟವಾಗಿರುವ ಒಂದು ಗಡಿಯಾರವು, ಪಾಶ್ಚಾತ್ಯ ಆಸ್ಟ್ರೇಲಿಯದ ಪರ್ತ್‌ನಲ್ಲಿನ ವಿಜ್ಞಾನಿಗಳಿಂದ ವಿಕಸಿಸಲ್ಪಟ್ಟಿದೆ. ಇಂದ್ರನೀಲ (ಸ್ಯಾಫೈರ್‌) ಗಡಿಯಾರವೆಂದು ಪ್ರಸಿದ್ಧವಾಗಿರುವ ಇದರ ಬೆಲೆ ಸುಮಾರು 2,00,000 ಡಾಲರುಗಳಷ್ಟಾಗಿದ್ದು, ಈಗಾಗಲೇ ಅನೇಕ ಗಡಿಯಾರಗಳು ನಿರ್ಮಿಸಲ್ಪಟ್ಟಿವೆ. ಅದು ಒಂದು ಕ್ಷಣಿಕ ಫೆಮ್ಟೊಸೆಕೆಂಡ್‌, ಅಂದರೆ ಒಂದು ಸೆಕೆಂಡಿನ 1,00,00,00,00,00,00,000 ಅಂಶವನ್ನೂ ಅಳೆಯಬಲ್ಲದು! ಅದರಿಂದ ಯಾವ ಉಪಯೋಗವಿದೆ? ಐನ್‌ಸ್ಟೀನ್‌ನ ಸಾಪೇಕ್ಷತ್ವದ ಸಾಮಾನ್ಯ ತತ್ವಕ್ಕನುಸಾರ, ಒಬ್ಬನು ಭೂಮಿಯಿಂದ ಎಷ್ಟು ಎತ್ತರಕ್ಕಿರುತ್ತಾನೋ ಅಷ್ಟು ಹೆಚ್ಚು ವೇಗವಾಗಿ ಸಮಯವು ಸರಿಯುತ್ತದೆ. “ಸುಮಾರು ಒಂದು ಮೀಟರಿನ—ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ನಿಮ್ಮ ಪಾದ ಮತ್ತು ನಿಮ್ಮ ತಲೆಯ ನಡುವಿನ ಅಂತರ—ಎತ್ತರದಲ್ಲಿ ವೇಗದಲ್ಲಿನ ವ್ಯತ್ಯಾಸವನ್ನು ಅಳೆಯುವುದೇ ನಮ್ಮ ಗುರಿಯಾಗಿದೆ” ಎಂದು, ಈ ಗಡಿಯಾರವನ್ನು ವಿಕಸಿಸುವ ಕೆಲಸದಲ್ಲಿ ಕಾರ್ಯನಡಿಸಿದ ಭೌತವಿಜ್ಞಾನಿಯಾದ ಡೇವಿಡ್‌ ಬ್ಲೈರ್‌ ಹೇಳಿದರು. ಆದರೂ, ಆ ಗಡಿಯಾರದ ಸ್ಥಿರತೆಯು, ಒಮ್ಮೆಗೆ ಕೇವಲ ಐದು ನಿಮಿಷಗಳ ವರೆಗೆ ಉಳಿಯುತ್ತದೆ.

ಜಗತ್ತಿನ ಅತ್ಯಂತ ಎತ್ತರವಾದ ಕಟ್ಟಡಗಳು

ಒಂದು ಶತಮಾನದಲ್ಲಿ ಪ್ರಪ್ರಥಮ ಬಾರಿಗೆ, ಜಗತ್ತಿನ ಅತ್ಯಂತ ಎತ್ತರವಾದ ಕಟ್ಟಡವನ್ನು ಅಮೆರಿಕದಲ್ಲಿ ಕಂಡುಕೊಳ್ಳಲಾಗುತ್ತಿಲ್ಲ. ಎತ್ತರವಾದ ಕಟ್ಟಡಗಳು ಮತ್ತು ಪೌರ ಇರುನೆಲೆಯ ಸಮಿತಿ, ಗಗನಚುಂಬಿ ಭವನಗಳ ಅಂತಾರಾಷ್ಟ್ರೀಯ ನ್ಯಾಯವಿಮರ್ಶಕವು, ಮಲೇಶಿಯದ ಕೋಲ ಲಾಂರ್ಪುನಲ್ಲಿರುವ ಪೆಟ್ರೊನಾಸ್‌ ಟ್ವಿನ್‌ ಟವರ್ಸ್‌ಗೆ ಆ ಬಿರುದನ್ನು ಕೊಟ್ಟಿದೆ. ಈ ಹಿಂದೆ ದಾಖಲೆ ಪಡೆದುಕೊಂಡಿದ್ದ, ಶಿಕಾಗೊದಲ್ಲಿನ ಸೀಯರ್ಸ್‌ ಟವರ್‌ ಅನ್ನು ಅದರ ಟೆಲಿವಿಷನ್‌ ಗೋಪುರಗಳನ್ನು ಒಳಗೂಡಿಸುವಲ್ಲಿ, ಅದು ಇನ್ನೂ ಅತ್ಯಂತ ಎತ್ತರವಾದ ಕಟ್ಟಡವಾಗಿದೆ. ಆದರೂ, ಆ ಗೋಪುರಗಳು ಈ ಕಟ್ಟಡದ ವಾಸ್ತುಶಿಲ್ಪದ ಕೃತಿಗೆ ಪೂರಕಗಳಾಗಿಲ್ಲವೆಂದು ಆ ಸಮಿತಿಯು ನಿರ್ಧರಿಸಿತು. ಏಷಿಯಾದಲ್ಲಿನ ವಿಭಿನ್ನ ದೇಶಗಳಲ್ಲಿ ಎತ್ತರವಾದ ಕಟ್ಟಡಗಳ ನಿರ್ಮಾಣವು, ಆ ಕ್ಷೇತ್ರದಲ್ಲಿನ ವಿಸ್ಮಯಗೊಳಿಸುವ ಆರ್ಥಿಕ ಬೆಳವಣಿಗೆಯ ಒಂದು ಸಂಕೇತದೋಪಾದಿ ಬೆಂಬಲಿಗರಿಂದ ವೀಕ್ಷಿಸಲ್ಪಟ್ಟಿದೆ. ವಾಸ್ತವದಲ್ಲಿ, ಪೆಟ್ರೊನಾಸ್‌ ಟ್ವಿನ್‌ ಟವರ್ಸ್‌ ತಮ್ಮ ಪ್ರತಿಷ್ಠೆಯ ಬಿರುದನ್ನು ಕಟ್ಟಕಡೆಗೆ ಕಳೆದುಕೊಳ್ಳಲಿವೆ; ಈ ದಶಕದ ಅಂತ್ಯದಷ್ಟಕ್ಕೆ ಚೀನಾದ ಶಾಂಘಾಯ್‌ಯಲ್ಲಿ ಪೂರ್ಣಗೊಳಿಸಲ್ಪಡಲು ಯೋಜಿಸಲ್ಪಟ್ಟಿರುವ ವರ್ಲ್ಡ್‌ ಫೈನಾನ್ಷಿಯಲ್‌ ಸೆಂಟರ್‌ಗೆ ಅವು ಸಲ್ಲಲಿವೆ.

ಟೈಪ್‌-ಸಿ ಹೆಪಟೈಟಿಸ್‌ ಮತ್ತು ರಕ್ತ

ಫ್ರೆಂಚ್‌ ನ್ಯಾಷನಲ್‌ ನೆಟ್‌ವರ್ಕ್‌ ಆಫ್‌ ಪಬ್ಲಿಕ್‌ ಹೆಲ್ತ್‌ನಿಂದ ಬಂದ ಒಂದು ವರದಿಯು, “ಫ್ರಾನ್ಸ್‌ನಲ್ಲಿ 5,00,000 ಮತ್ತು 6,00,000ರ ನಡುವಿನ ಜನರು ಹೆಪಟೈಟಿಸ್‌-ಸಿ ವೈರಸ್‌ನಿಂದ ಸೋಂಕಿತರಾಗಿದ್ದಾರೆ” ಎಂದು ನಿರ್ಣಯಿಸುತ್ತದೆ. ಲ ಮಾಂಡ್‌ ಎಂಬ ಪ್ಯಾರಿಸ್‌ ವಾರ್ತಾಪತ್ರಿಕೆಗನುಸಾರ, ಟೈಪ್‌-ಸಿ ಹೆಪಟೈಟಿಸ್‌ ವೈರಸ್‌ನ ಸೋಂಕುಗಳಲ್ಲಿ 60 ಪ್ರತಿಶತ ಸೋಂಕುಗಳು, ರಕ್ತಪೂರಣದಿಂದ ಅಥವಾ ಅಭಿಧಮನಿಯ ಒಳಗಿನ ಅಮಲೌಷಧ ಉಪಯೋಗದಿಂದಾಗಿವೆ. ಇದಕ್ಕೆ ಕೂಡಿಸಿ, ಅನೌಚಿತ್ಯವಾಗಿ ಕ್ರಿಮಿಶುದ್ಧಿಮಾಡಲ್ಪಟ್ಟ ಸಲಕರಣೆಯಿಂದ ಕೊಡಲ್ಪಟ್ಟ ವೈದ್ಯಕೀಯ ಚಿಕಿತ್ಸೆಯ ಸಮಯದಲ್ಲಿ ಕೆಲವು ಜನರು ಕಲುಷಿತಗೊಳಿಸಲ್ಪಟ್ಟಿದ್ದಾರೆ. ಟೈಪ್‌-ಸಿ ಹೆಪಟೈಟಿಸ್‌, ಸಿರೋಸಿಸ್‌ ಅಥವಾ ಪಿತ್ತಜನಕಾಂಗದ ಕ್ಯಾನ್ಸರ್‌ಗೆ ಮುನ್ನಡಿಸಬಲ್ಲದು.

ನೀವು ಧೂಮಪಾನವನ್ನು ನಿಲ್ಲಿಸುವಾಗ

ವ್ಯಕ್ತಿಯೊಬ್ಬನು ಧೂಮಪಾನವನ್ನು ನಿಲ್ಲಿಸಿಬಿಟ್ಟ ನಂತರ 20 ನಿಮಿಷಗಳೊಳಗೆ, ದೇಹವು ಪ್ರಯೋಜನಕರವಾದ ಬದಲಾವಣೆಗಳನ್ನು ಮಾಡಲು ಆರಂಭಿಸುತ್ತದೆ. ಒಬ್ಬ ಧೂಮಪಾನಿಯು ಧೂಮಪಾನವನ್ನು ನಿಲ್ಲಿಸಿಬಿಟ್ಟ ನಂತರ, ನಿರ್ದಿಷ್ಟ ಸಮಯಗಳಲ್ಲಿ ಸಂಭವಿಸುವ ಪ್ರಯೋಜನಕರವಾದ ಬದಲಾವಣೆಗಳ ಈ ಮುಂದಿನ ಪಟ್ಟಿಯನ್ನು ರೀಡರ್ಸ್‌ ಡೈಜೆಸ್ಟ್‌ ಪ್ರಕಾಶಿಸಿತು. ಇಪ್ಪತ್ತು ನಿಮಿಷಗಳ ನಂತರ: ರಕ್ತದೊತ್ತಡ ಮತ್ತು ನಾಡಿಯ ಮಿಡಿತದ ಪ್ರಮಾಣವು ಸಹಜ ಸ್ಥಿತಿಗೆ ಇಳಿಯುತ್ತದೆ; ಕೈಗಳು ಮತ್ತು ಪಾದಗಳ ಉಷ್ಣತೆಯು ಸಹಜ ಸ್ಥಿತಿಗೆ ಏರುತ್ತದೆ. ಎಂಟು ತಾಸುಗಳ ನಂತರ: ರಕ್ತದಲ್ಲಿನ ಕಾರ್ಬನ್‌ ಮಾನಾಕ್ಸೈಡ್‌ ಮಟ್ಟವು ಸಹಜ ಸ್ಥಿತಿಗೆ ಇಳಿಯುತ್ತದೆ; ರಕ್ತದಲ್ಲಿನ ಆಮ್ಲಜನಕದ ಮಟ್ಟವು ಸಹಜ ಸ್ಥಿತಿಗೆ ಏರುತ್ತದೆ. ಇಪ್ಪತ್ನಾಲ್ಕು ತಾಸುಗಳ ನಂತರ: ಹೃದಯಾಘಾತದ ಸಂಭವನೀಯತೆಯು ಕಡಿಮೆಯಾಗುತ್ತದೆ. ನಲ್ವತ್ತೆಂಟು ತಾಸುಗಳ ನಂತರ: ನರತುದಿಗಳು ಪುನಃ ಬೆಳೆಯಲಾರಂಭಿಸುತ್ತವೆ; ರುಚಿನೋಡುವ ಹಾಗೂ ಆಘ್ರಾಣಿಸುವ ಸಾಮರ್ಥ್ಯವು ವರ್ಧಿಸುತ್ತದೆ; ನಡೆಯುವುದು ಹೆಚ್ಚು ಸುಲಭವಾಗುತ್ತದೆ. ಎರಡು ವಾರಗಳಿಂದ ಮೂರು ತಿಂಗಳುಗಳ ನಂತರ: ರಕ್ತಪರಿಚಲನೆಯು ಉತ್ತಮಗೊಳ್ಳುತ್ತದೆ; ಶ್ವಾಸಕೋಶದ ಕಾರ್ಯನಿರ್ವಹಣೆಯು 30 ಪ್ರತಿಶತದಷ್ಟು ಅಧಿಕಗೊಳ್ಳುತ್ತದೆ. ಒಂದರಿಂದ ಒಂಬತ್ತು ತಿಂಗಳುಗಳ ನಂತರ: ಕೆಮ್ಮು, ಸೈನಸ್‌ ಕಟ್ಟಿರುವಿಕೆ, ಆಯಾಸ, ಮತ್ತು ಉಸಿರಿನ ಕಡಿತವು ಕಡಿಮೆಯಾಗುತ್ತದೆ; ಶ್ವಾಸಕೋಶದ ಲೋಮಾಂಗವು ಪುನಃ ಬೆಳೆಯುತ್ತದೆ. ಒಂದು ವರ್ಷದ ನಂತರ: ಪರಿಧಮನಿಯ ಹೃದ್ರೋಗದ ಅಪಾಯವು, ಒಬ್ಬ ಧೂಮಪಾನಿಗಾಗುವ ಅಪಾಯಕ್ಕಿಂತ ಐವತ್ತು ಪ್ರತಿಶತ ಕಡಿಮೆಯಾಗುತ್ತದೆ.

ಮೂರ್ಛೆರೋಗದೊಂದಿಗೆ ಸಂಬಂಧಹೊಂದಿರುವ ಟಿವಿ

ಭಾರತದೊಳಗೆ ಉಪಗ್ರಹ (ಸ್ಯಾಟೆಲೈಟ್‌) ಟಿವಿಯ ಪ್ರವೇಶವು, ಒಂದು ದಿನಕ್ಕೆ 24 ತಾಸುಗಳ ವರೆಗೆ ವೀಕ್ಷಣವನ್ನು ಒದಗಿಸುತ್ತಾ, ಮಕ್ಕಳಲ್ಲಿ ನರರೋಗಸಂಬಂಧವಾದ ಸಮಸ್ಯೆಗಳ ಹೆಚ್ಚಳಕ್ಕೆ ಮುನ್ನಡೆಸುತ್ತಿದೆ. ಆಲ್‌ ಇಂಡಿಯ ನ್ಯೂರಾಲೊಜಿ ಅಪ್‌ಡೇಟ್‌—1996 ಸಮ್ಮೇಳನದಲ್ಲಿ ಪ್ರಮುಖ ನರರೋಗಶಾಸ್ತ್ರಜ್ಞರಿಂದ ಈ ಪ್ರತಿಪಾದನೆಯು ಮಾಡಲ್ಪಟ್ಟಿತು. ಅಮೃತಸರದ ವೈದ್ಯಕೀಯ ಕಾಲೇಜಿನ ನರರೋಗಶಾಸ್ತ್ರ ಇಲಾಖೆಯ ಮುಖ್ಯಸ್ಥರಾದ ಡಾ. ಅಶೋಕ್‌ ಉಪ್ಪಾಳ್‌ ಹೇಳಿದ್ದು: “ಈಗ ಮಕ್ಕಳು ದೀರ್ಘ ತಾಸುಗಳ ವರೆಗೆ ಟೆಲಿವಿಷನಿನ ಮೇಲೆ ತಮ್ಮ ದೃಷ್ಟಿಯನ್ನು ನೆಟ್ಟಿದ್ದಾರೆ, ಇದು ನರರೋಗಶಾಸ್ತ್ರಜ್ಞರು ‘ಛಾಯಾಚಿತ್ರ ಪ್ರಚೋದಕವಾದ ಸಂವೇದನಾತ್ಮಕ ಮೂರ್ಛೆರೋಗ ಅಥವಾ ಟೆಲಿವಿಷನ್‌-ಪ್ರೇರಕ ಮೂರ್ಛೆರೋಗ’ ಎಂದು ಯಾವುದನ್ನು ಹೆಸರಿಸುತ್ತಾರೋ ಆ ಸ್ಥಿತಿಗೆ ನಡೆಸುತ್ತದೆ.” ತಮ್ಮ ಮಕ್ಕಳ ಟೆಲಿವಿಷನ್‌ ವೀಕ್ಷಣೆಯನ್ನು ಮಿತಗೊಳಿಸುವಂತೆ ಅಥವಾ ವೀಕ್ಷಣೆಯ ದೀರ್ಘ ಕಾಲಾವಧಿಗಳಲ್ಲಿ, ಅವರಿಗೆ ಕ್ರಮವಾದ ಮಧ್ಯಂತರ ವಿರಾಮಗಳನ್ನು ಕೊಡುವಂತೆ ಡಾ. ಉಪ್ಪಾಳ್‌ ಹೆತ್ತವರಿಗೆ ಸಲಹೆ ನೀಡಿದರು.

ಜೇನು ನೊಣಗಳ ಜಾಡುಹಿಡಿಯುವುದು

ಕೇವಲ 16 ಮಿಲಿಮೀಟರ್‌ಗಳಷ್ಟು ಎತ್ತರವಿರುವ, ಜಗತ್ತಿನ ಅತ್ಯಂತ ಚಿಕ್ಕ ರೆಡಾರ್‌ ಆ್ಯಂಟೆನಾಗಳು, ಕೆಲವು ಬ್ರಿಟಿಷ್‌ ನೊಣಗಳ ಬೆನ್ನುಗಳಿಗೆ ಅಂಟಿಸಲ್ಪಟ್ಟಿವೆ. ನೊಣಗಳ ಜಾಡನ್ನು ಹಿಡಿಯುವಂತೆ ಅನುಮತಿಸುವ ಸಾಧನಗಳೇ ಆ್ಯಂಟೆನಾಗಳಾಗಿವೆ. ಈ ಪ್ರಯೋಗವು, ಕೀಟಗಳ ಹಾರಾಟ ವಿಧಾನಗಳನ್ನು ನೋಡಿಕೊಳ್ಳಲಿಕ್ಕಾಗಿ ಕಟ್ಟಕಡೆಗೆ ಆಫ್ರಿಕನ್‌ ಟ್ಸೆಟ್ಸಿ ನೊಣಗಳಿಗೆ ಸಿಕ್ಕಿಸಲ್ಪಡಲಿರುವ ಇನ್ನೂ ಹೆಚ್ಚು ಚಿಕ್ಕ ಆ್ಯಂಟೆನಾಗಳನ್ನು ವಿಕಸಿಸಲು ನಡೆಸುವವೆಂದು ನಿರೀಕ್ಷಿಸಲಾಗಿದೆ. ಈ ನೊಣಗಳು ರವಾನಿಸುವ ನಿದ್ರಾವಾತರೋಗದ ನಿಯಂತ್ರಣವನ್ನು ಇದು ಉತ್ತಮಗೊಳಿಸಸಾಧ್ಯವಿದೆ. ಆ್ಯಂಟೆನಾಗಳು ತಮಗೆ ಬೇಕಾದ ಎಲ್ಲಾ ಶಕ್ತಿಯನ್ನು, ಬರುತ್ತಿರುವ ಜಾಡುಹಿಡಿಯುವ ಸಂಕೇತಗಳಿಂದ ಪಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿರುವುದರಿಂದ, ಇವುಗಳಿಗೆ ಶಕ್ತಿಯನ್ನು ಸಂಚಯಿಸಲಿಕ್ಕಾಗಿ ಬ್ಯಾಟರಿಗಳ ಆವಶ್ಯಕತೆಯಿರುವುದಿಲ್ಲ. ಈ ಮೇಲೆ ಪ್ರಸ್ತಾಪಿಸಲ್ಪಟ್ಟ ಪ್ರಯೋಜನಗಳಿಗೆ ಕೂಡಿಸಿ, ಜೇನುಗೂಡುಗಳನ್ನು ಹೆಚ್ಚು ಪರಿಣಾಮಕರವಾಗಿ ಕಂಡುಹಿಡಿಯುವ ಉದ್ದೇಶದಿಂದ, ವಿಜ್ಞಾನಿಗಳು ಈ ನೊಣಗಳ ಹವ್ಯಾಸಗಳ ಕುರಿತಾಗಿರುವ ತಮ್ಮ ಜ್ಞಾನವನ್ನು ಉತ್ತಮಗೊಳಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ.

ಕೊಲೆಗಡುಕನು ಗುರುತಿಸಲ್ಪಟ್ಟದ್ದು

ಮೆಕ್ಸಿಕೊದ ಸ್ತ್ರೀಯರಲ್ಲಿ ಕೆಲವೇ ಮಂದಿ ಹೊಗೆಸೊಪ್ಪನ್ನು ಸೇವಿಸುತ್ತಾರಾದರೂ, 40ಕ್ಕಿಂತಲೂ ಹೆಚ್ಚು ಪ್ರಾಯದ ಅನೇಕರು, ಸಾಮಾನ್ಯವಾಗಿ ಧೂಮಪಾನದೊಂದಿಗೆ ಸಂಬಂಧಿಸಿರುವ ಶ್ವಾಸಕೋಶದ ರೋಗಗಳಿಂದ ಕಷ್ಟಾನುಭವಿಸುತ್ತಾರೆ ಎಂಬುದಾಗಿ ಹೆಲ್ತ್‌ ಇಂಟರ್‌ಅಮೆರಿಕ ಎಂಬ ವಾರ್ತಾಪತ್ರವು ವರದಿಸುತ್ತದೆ. ಕಾರಣವೇನು? “ಕಟ್ಟಿಗೆ ಒಲೆಗಳಲ್ಲಿ ಅಡಿಗೆಮಾಡುವುದೇ” ಎಂದು ಇತ್ತೀಚೆಗೆ ಸಂಶೋಧಕರು ಹೇಳಿದರು. ಔಷಧದ ಪ್ರೊಫೆಸರರಾದ ಪೀಟರ್‌ ಪಾರೇಗನುಸಾರ, ಈ ಸಮಸ್ಯೆಗೆ ಕಡಿಮೆ ಗಮನವು ಕೊಡಲ್ಪಟ್ಟಿತು, ಏಕೆಂದರೆ “ಕಟ್ಟಿಗೆ ಹೊಗೆಯು ಅನೇಕವೇಳೆ ಒಂದು ಪ್ರಮುಖವಾದ ಆರೋಗ್ಯಾಪಾಯವಾಗಿ ಗುರುತಿಸಲ್ಪಡುವುದಿಲ್ಲ. ಈ ಸಮಸ್ಯೆಯ ನಿಜ ಮೂಲವು ಕಟ್ಟಿಗೆ ಹೊಗೆಗೆ ವಿಪರೀತವಾಗಿ ಒಡ್ಡಿಕೊಳ್ಳುವುದಾಗಿರುವಾಗ, ಮರಣವು ಸಾಮಾನ್ಯವಾಗಿ ಹೃದಯ ಸ್ತಂಭನವೆಂಬುದಾಗಿ ರೋಗನಿರ್ಣಯ ಮಾಡಲ್ಪಡುತ್ತದೆ.” ಲೋಕವ್ಯಾಪಕವಾಗಿ 40 ಕೋಟಿ ಜನರು—ನ್ಯೂನ ವಾಯುಸಂಚಾರಕ ಕಂಡಿಯಿರುವ ಚಿಕ್ಕ ಕಟ್ಟಡಗಳಲ್ಲಿ ಕಟ್ಟಿಗೆ ಒಲೆಗಳನ್ನು ಉಪಯೋಗಿಸುವ ಅಧಿಕಾಂಶ ಸ್ತ್ರೀಯರು—ಅಪಾಯದಲ್ಲಿದ್ದಾರೆ ಎಂದು ಲೋಕಾರೋಗ್ಯ ಸಂಸ್ಥೆಯು ಅಂದಾಜುಮಾಡುತ್ತದೆ. ಹೊಗೆ ಕೊಳವೆಗಳನ್ನು ಕಟ್ಟುವುದು ಸಹಾಯಕರವಾಗಿರುವುದಾದರೂ, ಡಾ. ಪಾರೇಗನುಸಾರ, “ಶತಮಾನಗಳಿಂದ ಜೀವಿಸಿರುವ ಜನರ ಜೀವನ ರೀತಿಗಳನ್ನು ಬದಲಾಯಿಸುವಂತೆ ಅವರಿಗೆ ಮನಗಾಣಿಸುವುದೇ ಅತ್ಯಂತ ದೊಡ್ಡ ಪಂಥಾಹ್ವಾನವಾಗಿದೆ.”

ಏಷಿಯಾದ ಶಿಶು-ಲೈಂಗಿಕ ವ್ಯಾಪಾರ

ಏಷಿಯಾದಲ್ಲಿ, 17 ಮತ್ತು ಅದಕ್ಕಿಂತಲೂ ಕಡಿಮೆ ಪ್ರಾಯದ ಹತ್ತು ಲಕ್ಷಕ್ಕಿಂತಲೂ ಹೆಚ್ಚಿನ ಹುಡುಗಹುಡುಗಿಯರು ವೇಶ್ಯಾವೃತ್ತಿಯಲ್ಲಿ ಒಳಗೂಡಿದ್ದಾರೆಂದು, ಸರಕಾರಗಳು ಹಾಗೂ ಸಾಮಾಜಿಕ ಕಾರ್ಮಿಕರು ಅಂದಾಜುಮಾಡುತ್ತಾರೆ ಎಂದು ದ ನ್ಯೂ ಯಾರ್ಕ್‌ ಟೈಮ್ಸ್‌ ಹೇಳುತ್ತದೆ. ನಿಖರವಾದ ಸಂಖ್ಯೆಗಳು ಅವಿದಿತವಾಗಿರುವಾಗ, ಇನ್ನೂ ಪ್ರೌಢಾವಸ್ಥೆಯನ್ನು ಪ್ರವೇಶಿಸಿರದ ಮಕ್ಕಳನ್ನು, ಕ್ಯಾಂಬೋಡಿಯ, ಚೀನಾ, ಟೈವಾನ್‌, ಥಾಯ್‌ಲೆಂಡ್‌, ಫಿಲಿಪ್ಪೀನ್ಸ್‌, ಮತ್ತು ಭಾರತಗಳಂತಹ ದೇಶಗಳ ವೇಶ್ಯಾಗೃಹಗಳಲ್ಲಿ ಕಂಡುಕೊಳ್ಳಸಾಧ್ಯವಿದೆ. ಇಷ್ಟು ಎಳೆಯ ಪ್ರಾಯದವರಾಗಿರುವ ಮಕ್ಕಳನ್ನು ಏಕೆ ಆರಿಸಿಕೊಳ್ಳಲಾಗುತ್ತದೆ? ಒಂದು ಕಾರಣವು ಏಯ್ಡ್ಸ್‌ನ ಭಯವಾಗಿದೆ. “ಏಷಿಯಾದ ಆದ್ಯಂತವಾಗಿ ಇರುವ ಜನರು, ಹೆಚ್ಚೆಚ್ಚು ಎಳೆಯ ಪ್ರಾಯದ ಮಕ್ಕಳ ಕಡೆಗೆ ತಿರುಗುತ್ತಿದ್ದಾರೆ, ಇದು ಭಾಗಶಃ ಏಯ್ಡ್ಸ್‌ ರೋಗವನ್ನು ಉಂಟುಮಾಡುವ ವೈರಸ್‌, ಏಚ್‌.ಐ.ವಿ.ಯಿಂದ ಅವರು ಸೋಂಕಿತರಾಗುವ ಸಂಭವನೀಯತೆಯು ಕಡಿಮೆಯೆಂದು ಅಭಿಪ್ರಯಿಸುವ ಕಾರಣದಿಂದಲೇ” ಎಂದು ಟೈಮ್ಸ್‌ ಹೇಳುತ್ತದೆ. ಆದರೂ, ಈ ದೇಶಗಳಲ್ಲಿರುವ ವೇಶ್ಯೆಯರ ನಡುವೆ ಏಯ್ಡ್ಸ್‌ ವೈರಸ್‌ ತೀವ್ರಗತಿಯಲ್ಲಿ ಹಬ್ಬುತ್ತಿದೆ, ಇದು ಭಾಗಶಃ ವೇಶ್ಯೆಯರು ಒಂದು ದೇಶದಿಂದ ಮತ್ತೊಂದು ದೇಶಕ್ಕೆ ವಿಕ್ರಯಿಸಲ್ಪಟ್ಟು, ತೆಗೆದುಕೊಳ್ಳಲ್ಪಡುವ ಕಾರಣದಿಂದ ಮತ್ತು ಭಾಗಶಃ ಲೈಂಗಿಕ ಪ್ರವಾಸಗಳಲ್ಲಿರುವ ಗ್ರಾಹಕರು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪ್ರಯಾಣಿಸುವ ಕಾರಣದಿಂದಲೇ. ಕೆಲವು ಮಕ್ಕಳು ವೇಶ್ಯಾವೃತ್ತಿಯಲ್ಲಿನ ಉಪಯೋಗಕ್ಕಾಗಿ ಮೋಸದಿಂದ ಕರೆದೊಯ್ಯಲ್ಪಟ್ಟಿರುವಾಗ, ಇತರರು ಪ್ರಾಪಂಚಿಕ ಲಾಭಕ್ಕಾಗಿ ತಮ್ಮ ಹೆತ್ತವರಿಂದಲೇ ವಿಕ್ರಯಿಸಲ್ಪಟ್ಟಿದ್ದಾರೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ