ಜಗತ್ತನ್ನು ಗಮನಿಸುವುದು
ಔಷಧಸೂಚಿ ಔಷಧಗಳು ದುರುಪಯೋಗಿಸಲ್ಪಡುವುದು
ಆಸ್ಟ್ರೇಲಿಯದ ವಿಕ್ಟೋರಿಯ ರಾಜ್ಯದಲ್ಲಿ, ಹೆರಾಲ್ಡ್ ಸನ್ ಎಂಬ ಮೆಲ್ಬರ್ನ್‌ನಿನ ವಾರ್ತಾಪತ್ರಿಕೆಯು ವರದಿಸುವುದೇನೆಂದರೆ, “ಆಸ್ಟ್ರೇಲಿಯದವರು ಔಷಧಗಳಿಗಾಗಿ ಒಂದು ವರ್ಷಕ್ಕೆ 300 ಕೋಟಿ ಡಾಲರುಗಳನ್ನು ಖರ್ಚುಮಾಡುತ್ತಾರೆ ಮತ್ತು ಔಷಧಸೂಚಿ ವೇದನಹಾರಿ (ಪೆಯ್‌ನ್ ಕಿಲ್ಲರ್ಸ್)ಗಳಿಗೆ ಅತ್ಯಧಿಕವಾಗಿ ವ್ಯಸನಿಗಳಾಗುತ್ತಿದ್ದಾರೆ.” ವಿಕ್ಟೋರಿಯದ ಆರೋಗ್ಯ ಸಚಿವರು ಎಚ್ಚರಿಸಿದ್ದೇನೆಂದರೆ, “ಔಷಧಸೂಚಿ ಔಷಧಗಳ ದುರ್ಬಳಕೆಯು, ಜನರ ಪೂರ್ಣ ಅರಿವಿಗೆ ಬಾರದೆಯೇ ಒಂದು ಸಮಸ್ಯೆಯಾಗಿ ಪರಿಣಮಿಸುತ್ತಿದೆ ಹಾಗೂ ಅದು ಆರೋಗ್ಯಕ್ಕೂ ಜೀವನ ಶೈಲಿಗೂ ನಿಷಿದ್ಧ ಔಷಧಗಳಷ್ಟೇ ವಿಷಕರವಾಗಿರಸಾಧ್ಯವಿದೆ.” ಈಗ ಹೆಚ್ಚೆಚ್ಚು ಜನರು, ಹಲವು ಬಗೆಯ ಔಷಧಸೂಚಿಗಳನ್ನು ಪಡೆದುಕೊಳ್ಳಲಿಕ್ಕಾಗಿ, ‘ವಿವಿಧ ವೈದ್ಯರನ್ನು ಸಂದರ್ಶಿಸುತ್ತಿದ್ದಾರೆ’ ಎಂಬ ವರದಿಯ ಕುರಿತಾಗಿಯೂ ಅವರು ಚಿಂತೆಯನ್ನು ವ್ಯಕ್ತಪಡಿಸಿದರು. ಕೆಲವು ಮಾತ್ರೆಗಳನ್ನು ಕೂಡಿಹಾಕಿ, ತದನಂತರ ಪುಡಿಮಾಡಿ, ರಕ್ತಪ್ರವಾಹದೊಳಕ್ಕೆ ಚುಚ್ಚುಮದ್ದಿನ ಮೂಲಕ ಒಳಹೊಗಿಸಲಾಗುತ್ತದೆ. ಒಂದು ಸಮೀಕ್ಷೆಗನುಸಾರ, ನ್ಯಾಯಸಮ್ಮತವಾದ ವೈದ್ಯಕೀಯ ಉಪಯೋಗಕ್ಕೆ ಹೊರತಾಗಿರುವ ಸಮಸ್ಯೆಗಳಿಗೆ ವೇದನಹಾರಿ ಔಷಧಗಳನ್ನು ತೆಗೆದುಕೊಳ್ಳುತ್ತಿರುವ ಜನರ ಪ್ರತಿಶತವು, 1993ರಲ್ಲಿ 3 ಪ್ರತಿಶತದಿಂದ, 1995ರಲ್ಲಿ 12 ಪ್ರತಿಶತಕ್ಕೆ ಏರಿತು.
ಖರೀದಿಸುವ ಚಟ
ಐರ್ಲೆಂಡಿನಲ್ಲಿ, ಆಂತರಿಕ ನಿರ್ಬಂಧಾತ್ಮಕ ಖರೀದಿಸುವಿಕೆಯು, “ಈಗ ಒಂದು ಚಟದೋಪಾದಿ ಪರಿಗಣಿಸಲ್ಪಡುತ್ತಿದ್ದು, ಮದ್ಯಪಾನ, ಅಮಲೌಷಧ, ಜೂಜಾಟ ಮತ್ತು ಆಹಾರ ಕಾಯಿಲೆಗಳೊಂದಿಗೆ, ವೃತ್ತಿಪರ ಸಹಾಯವು ಅಗತ್ಯವಾಗಿರುವ ಗಂಭೀರವಾದ ಭಾವನಾತ್ಮಕ ಹಾಗೂ ಮಾನಸಿಕ ಗೀಳಾಗಿ ಸೇರುತ್ತದೆ” ಎಂದು ದಿ ಐರಿಷ್ ಟೈಮ್ಸ್ ಹೇಳುತ್ತದೆ. ಈ ಗೀಳಿಗೆ ಒಳಗಾದವರು, ತಮಗೆ ಅನಗತ್ಯವಾದ ವಸ್ತುಗಳನ್ನು ಖರೀದಿಸುತ್ತಾ, ದೊಡ್ಡ ಮೊತ್ತದ ಹಣವನ್ನು ವ್ಯಯಿಸಬಹುದು. ಆ ವರದಿಯು ವಿವರಿಸುವುದು: “ಬಟ್ಟೆಗಳನ್ನು ಖರೀದಿಸುವ ಸಾಹಸದ ಭಾವೋದ್ರೇಕವು, ದೇಹದಲ್ಲಿ ಡೊಪಮೈನ್ ಹಾಗೂ ಸೆರಟೋನಿನ್ ಸ್ರವಣಗಳನ್ನು ಸ್ರವಿಸುವಂತೆ ಪ್ರಚೋದಿಸುತ್ತದೆ; ನಂತರ ಇದು ಸ್ವಹಿತದ ಒಂದು ಪರಿಜ್ಞಾನವನ್ನು ಉಂಟುಮಾಡುತ್ತದೆ.” ಅಮಲೌಷಧ ವ್ಯಸನಿಯಂತೆ, ಆಂತರಿಕ ನಿರ್ಬಂಧದ ಖರೀದಿಸುವಿಕೆಯನ್ನು ಮಾಡುವ ವ್ಯಕ್ತಿಗೆ, ಮತ್ತೇರುವಿಕೆಗಳನ್ನು ಸಂಪಾದಿಸುವುದು ಹೆಚ್ಚೆಚ್ಚು ಕಷ್ಟಕರವಾಗಿ ಪರಿಣಮಿಸುತ್ತದೆ.
“ಉದಯೋನ್ಮುಖ ಟಿವಿ ವೀಕ್ಷಕರ ಒಂದು ದೊಡ್ಡ ಸೇನೆ”
ಇಟಲಿಯಲ್ಲಿರುವ 21,000 ಕುಟುಂಬಗಳ ಒಂದು ಸಮೀಕ್ಷೆಯು, ಇಟಲಿಯ ಮಕ್ಕಳಲ್ಲಿ ಅಧಿಕಾಂಶ ಮಂದಿ ಟಿವಿ ಅವಲಂಬಿತರಾಗಿದ್ದಾರೆಂಬುದನ್ನು ಪ್ರಕಟಪಡಿಸಿದೆ. “ಉದಯೋನ್ಮುಖ ಟಿವಿ ವೀಕ್ಷಕರ ಒಂದು ದೊಡ್ಡ ಸೇನೆ”ಯು, ಜೀವಿತದ ಮೊದಲ ವರ್ಷದಲ್ಲೇ ರಿಮೋಟ್ ಕಂಟ್ರೋಲನ್ನು ಉಪಯೋಗಿಸುವುದಕ್ಕೆ ಒಗ್ಗಿಕೊಂಡಿದೆ ಎಂದು, ಲಾ ರೆಪಾಬ್ಲೀಕಾ ಎಂಬ ವಾರ್ತಾಪತ್ರಿಕೆಯು ಗಮನಿಸಿತು. ಇಟಲಿಯ ಮೂರರಿಂದ ಹತ್ತು ವರ್ಷ ಪ್ರಾಯದ ನಡುವಣ ಮಕ್ಕಳಲ್ಲಿ, 40 ಲಕ್ಷಕ್ಕಿಂತಲೂ ಹೆಚ್ಚಿನ ಮಕ್ಕಳು, ದಿನವೊಂದಕ್ಕೆ ಎರಡೂವರೆ ತಾಸುಗಳಿಗೂ ಹೆಚ್ಚು ಸಮಯ, ಬಹುಮಟ್ಟಿಗೆ ಮೈಮರೆತವರಾಗಿಯೇ ಟಿವಿಯನ್ನು ವೀಕ್ಷಿಸುತ್ತಾರೆ. ಆರರಿಂದ ಎಂಟು ತಿಂಗಳುಗಳ ಪ್ರಾಯದಷ್ಟು ಚಿಕ್ಕ ವಯಸ್ಸಿನ ಅನೇಕ ಮಕ್ಕಳು, ಈಗಾಗಲೇ ಕಟ್ಟಾಸೆಯ ಟಿವಿ ವೀಕ್ಷಕರಾಗಿದ್ದಾರೆ ಎಂಬ ವಾಸ್ತವಾಂಶದ ಕುರಿತಾಗಿ ಮಾನಸಿಕ ಆರೋಗ್ಯ ಪರಿಣತರು ಚಿಂತಿತರಾಗಿದ್ದಾರೆ.
ಪಾದದ ಸಮಸ್ಯೆಗಳು
ಜರ್ಮನಿಯಲ್ಲಿರುವ ಫೆಡರಲ್ ಅಸೋಸಿಯೇಷನ್ ಆಫ್ ಫಿಸಿಷಿಯನ್ಸ್ ಆರೋಗ್ಯ ಸೇವಾ ಇಲಾಖೆಯಿಂದ ಮಾಡಲ್ಪಟ್ಟ ಅಂದಾಜುಗಳಿಗನುಸಾರ, ಆ ದೇಶದ ನಾಗರಿಕರಲ್ಲಿ ಅರ್ಧದಷ್ಟು ಮಂದಿಗೆ ಪಾದಗಳ ತೊಂದರೆಯಿದೆ. “ಅನೇಕ ಜನರು ತಮ್ಮ ಪಾದಗಳ ಜಾಗ್ರತೆ ಮಾಡುವುದನ್ನು ಅಲಕ್ಷಿಸುತ್ತಾರೆ ಅಥವಾ ತೀರ ಬಿಗಿಯಾಗಿರುವ ಇಲ್ಲದಿದ್ದರೆ ತಮ್ಮ ಆರೋಗ್ಯಕ್ಕೆ ಅಪಾಯಕರವಾಗಿರುವ ಪಾದರಕ್ಷೆಗಳನ್ನು ಹಾಕಿಕೊಳ್ಳುವ ಮೂಲಕ ಅವುಗಳ ದುರ್ಬಳಕೆಮಾಡುತ್ತಾರೆ” ಎಂದು ನಾಸೌಇಷಿ ನಾಯೆ ಪ್ರೆಸೆ ಎಂಬ ವಾರ್ತಾಪತ್ರಿಕೆಯು ವರದಿಸುತ್ತದೆ. ಕ್ರಮವಾಗಿ ಎತ್ತರ ಹಿಮ್ಮಡಿಗಳುಳ್ಳ ಅಥವಾ ಸರಿಯಾಗಿ ಹೊಂದಿಕೊಳ್ಳದ ಪಾದರಕ್ಷೆಗಳನ್ನು ಹಾಕಿಕೊಳ್ಳುವುದರಿಂದ, ಮೊಣಕಾಲುಗಳು, ಸೊಂಟ, ಅಥವಾ ಬೆನ್ನಿನಲ್ಲಿ ನೋವು ಉಂಟಾಗಸಾಧ್ಯವಿದೆ. ಕಾಲಿನ ಹುಳುಕಡ್ಡಿ ಮತ್ತು ಶಿಲೀಂಧ್ರ ರೋಗದಂತಹ ದುರ್ಮಾಂಸದಿಂದ ಉಂಟಾಗುವ ರೋಗಗಳು ಸಹ ಹೆಚ್ಚು ವ್ಯಾಪಕವಾಗಿ ಹಬ್ಬುತ್ತಾ ಇವೆ. ಫೆಡರಲ್ ಅಸೋಸಿಯೇಷನ್ ಆಫ್ ಫಿಸಿಷಿಯನ್ಸ್ ಶಿಫಾರಸ್ಸು ಮಾಡುವ ಒಂದು ತಡೆಗಟ್ಟುವ ಕ್ರಮವಿಧಾನವು, “ಕಾಲ್ಬೆರಳುಗಳಿಂದ ಸೋಪನ್ನೆಲ್ಲಾ ತೊಳೆದುತೆಗೆದು, ಅವುಗಳ ಮಧ್ಯೆ ಜಾಗ್ರತೆಯಿಂದ ಚೆನ್ನಾಗಿ ಒರೆಸಿ ಒಣಗಿಸುವುದೇ ಆಗಿದೆ.”
ಮಹಿಳೆಯರು ಹಾಗೂ ಆತ್ಮಹತ್ಯೆ
“ಪ್ರತಿ ವರ್ಷ ಬ್ರಿಟನಿನಲ್ಲಿ 4,500 ಆತ್ಮಹತ್ಯೆಗಳು ಸಂಭವಿಸುತ್ತವೆ: ಪ್ರತಿ ಮಹಿಳೆಗೆ ಐವರು ಪುರುಷರಂತೆ” ಎಂದು ಲಂಡನಿನ ದ ಟೈಮ್ಸ್ ವರದಿಸುತ್ತದೆ. ಆದರೆ 15ರಿಂದ 24ರ ನಡುವಣ ವರ್ಷ ಪ್ರಾಯದ ಯುವ ಸ್ತ್ರೀಯರಲ್ಲಿ ಆತ್ಮಹತ್ಯೆಯ ಸಂಖ್ಯೆಯು, ಕಳೆದ ನಾಲ್ಕು ವರ್ಷಗಳಲ್ಲಿ ಮಹತ್ತರವಾಗಿ ಅಧಿಕಗೊಂಡಿದೆ. ಸೌತ್‌ಆ್ಯಮ್ಟನ್‌ನ ವಿಶ್ವವಿದ್ಯಾನಿಲಯದಲ್ಲಿನ ಪ್ರೊಫೆಸರರೊಬ್ಬರು, ಸಾಧ್ಯವಿರುವ ಕಾರಣಗಳಲ್ಲಿ ಒಂದನ್ನು ವಿವರಿಸಿದರು: “ಯುವ ಸ್ತ್ರೀಯರು ತಮ್ಮ ಉದ್ಯೋಗಗಳಲ್ಲಿ ಸ್ಪರ್ಧಾಳುಗಳಾಗಿರಲು ಬಯಸುತ್ತಾರೆ ಮತ್ತು ಅದೇ ಸಮಯದಲ್ಲಿ ಕುಟುಂಬದ ಜವಾಬ್ದಾರಿಯನ್ನೂ ವಹಿಸಿಕೊಳ್ಳುತ್ತಾರೆ. ಯುವಪ್ರಾಯದ ಮಧ್ಯಮ ವರ್ಗದ ಅಮ್ಮಂದಿರು [ತಾಯಂದಿರು], ತಮ್ಮ ಉದ್ಯೋಗಗಳನ್ನು ಬಿಡದೆ ಮುಂದುವರಿಸಲಿಕ್ಕಾಗಿ, ಶಿಶುರಕ್ಷಕರನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ. ತದನಂತರ ಅವರು ದುಃಖಿಸುತ್ತಾರೆ ಮತ್ತು ದೋಷಿಭಾವವನ್ನು ತಾಳುತ್ತಾರೆ. ಅವರ ದೇಹಗಳು ಅವರಿಗೆ ಅಮ್ಮಂದಿರಾಗಿರುವಂತೆ ಹೇಳುತ್ತಿವೆ ಹಾಗೂ ಅವರ ಮನಸ್ಸುಗಳು ಅವರಿಗೆ ಹೊರಗೆಹೋಗಿ ಅನ್ನಸಂಪಾದಕರಾಗುವಂತೆ ಹೇಳುತ್ತಿವೆ.” ಈ ಎಲ್ಲಾ ಉದ್ವೇಗಗಳು ಹಾಗೂ ಒತ್ತಡಗಳ ಕೂಡಿಕೆಯು ಹೆಚ್ಚಿನ ತಾಯಂದಿರನ್ನು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮುನ್ನಡಿಸುತ್ತಿರಬಹುದೆಂದು ಆ ಪ್ರೊಫೆಸರರು ನಂಬುತ್ತಾರೆ.
ಏಡ್ಸ್‌ನ “ಭೌಗೋಳಿಕ ಉಗಮಸ್ಥಾನ”
ಭಾರತ ದೇಶವು, “ಹಳಿತಪ್ಪಿಹೋಗಿ ರಭಸವಾಗಿ ಸುಂಟರಗಾಳಿಯೊಳಗೆ ಬಿದ್ದುಹೋಗುವ ಒಂದು ಎಕ್ಸ್‌ಪ್ರೆಸ್ ಟ್ರೇನಿನಂತಿದೆ” ಮತ್ತು ತ್ವರಿತಗತಿಯಲ್ಲಿ “ಮಾನವಕುಲದ ಮೇಲೆ ಎಂದಾದರೂ ಬಂದಿರುವ ಅತ್ಯಂತ ಘೋರ ಉಪದ್ರವಗಳಲ್ಲಿ ಒಂದರ ಭೌಗೋಳಿಕ ಉಗಮಸ್ಥಾನವಾಗಿ” ಪರಿಣಮಿಸುತ್ತಿದೆ ಎಂದು, ಲಂಡನಿನಲ್ಲಿ ಥೇಮ್ಸ್ ವ್ಯಾಲಿ ವಿಶ್ವವಿದ್ಯಾನಿಲಯದಿಂದ ನಡೆಸಲ್ಪಟ್ಟ ಒಂದು ಹೊಸ ಅಧ್ಯಯನವು ಹೇಳುತ್ತದೆ. ತದ್ರೀತಿಯಲ್ಲಿ, ವಿಶ್ವಸಂಸ್ಥೆಯ ಏಡ್ಸ್ ಕಾರ್ಯಕ್ರಮದ ಮುಖ್ಯಸ್ಥರಾದ ಡಾ. ಪೀಟರ್ ಪ್ಜಾ ಅವರು, ಏಡ್ಸ್‌ನ ಕುರಿತಾದ 11ನೆಯ ಅಂತಾರಾಷ್ಟ್ರೀಯ ಕೂಟದಲ್ಲಿ ಹೇಳಿದ್ದೇನೆಂದರೆ, ಏಡ್ಸ್ ವೈರಸ್‌ನಿಂದ ಸೋಂಕಿತರಾದ ಅತ್ಯಂತ ದೊಡ್ಡ ಸಂಖ್ಯೆಯ ಜನರನ್ನು—ಅದರ 95 ಕೋಟಿ ಜನಸಂಖ್ಯೆಯಲ್ಲಿ 30 ಲಕ್ಷಗಳಿಗಿಂತಲೂ ಹೆಚ್ಚು ಮಂದಿ—ಹೊಂದಿರುವ ರಾಷ್ಟ್ರವಾಗಿ ಭಾರತವು ಅನಿರೀಕ್ಷಿತವಾಗಿ ಕಾಣಿಸಿಕೊಂಡಿದೆ. ಇಂಡಿಯನ್ ಎಕ್ಸ್‌ಪ್ರೆಸ್ ವಾರ್ತಾಪತ್ರಿಕೆಗನುಸಾರ, ಭಾರತದಲ್ಲಿ ಲೈಂಗಿಕವಾಗಿ ಸಕ್ರಿಯರಾಗಿರುವ 22.3 ಕೋಟಿಗಿಂತಲೂ ಹೆಚ್ಚಿನ ಪುರುಷರಲ್ಲಿ 10 ಪ್ರತಿಶತ ಪುರುಷರು ವೇಶ್ಯೆಯರನ್ನು ಕ್ರಮವಾಗಿ ಭೇಟಿಮಾಡುತ್ತಾರೆ ಎಂದು ಅಧ್ಯಯನವೊಂದು ಅಂದಾಜುಮಾಡುತ್ತದೆ. ದೊಡ್ಡ ನಗರ ಕ್ಷೇತ್ರಗಳಲ್ಲಿ ಕೆಲಸಮಾಡುತ್ತಿದ್ದು, ಏಡ್ಸ್‌ನಿಂದ ಸೋಂಕಿತರಾಗಿದ್ದಾರೆಂದು ಕಂಡುಕೊಳ್ಳಲ್ಪಟ್ಟಿರುವ ವೇಶ್ಯೆಯರು, ಸಾಮಾನ್ಯವಾಗಿ ತಮ್ಮ ಸ್ವಗ್ರಾಮಗಳಿಗೆ ಹಿಂದೆ ಕಳುಹಿಸಲ್ಪಡುತ್ತಾರೆ. ಅಲ್ಲಿ ಆ ರೋಗದ ಕುರಿತಾದ ಅಜ್ಞಾನದಿಂದ ಹಾಗೂ ನಗರಗಳಲ್ಲಿರುವುದಕ್ಕಿಂತಲೂ ಹೆಚ್ಚು ನ್ಯೂನವಾದ ವೈದ್ಯಕೀಯ ಸೌಕರ್ಯಗಳಿರುವುದರಿಂದ, ಅವು ಈ ರೋಗದ ಹಬ್ಬುವಿಕೆಯ ತೀವ್ರಗತಿಯ ವೇಗೋತ್ಕರ್ಷವನ್ನು ಉಂಟುಮಾಡುತ್ತಿವೆ. 2000 ವರ್ಷದಷ್ಟಕ್ಕೆ, ಭಾರತದಲ್ಲಿ ಏಚ್‌ಐವಿ-ಪಾಸಿಟಿವ್ ಇರುವ ಜನರು, 50 ಲಕ್ಷದಿಂದ 80 ಲಕ್ಷದಷ್ಟು ಇರುವರು ಮತ್ತು ಕಡಿಮೆಪಕ್ಷ 10 ಲಕ್ಷ ಪೂರ್ಣಪೀಡಿತ ಏಡ್ಸ್ ರೋಗಿಗಳಿರುವರು ಎಂದು ಅಂದಾಜುಮಾಡಲಾಗಿದೆ.