ನಿಮ್ಮ ಸ್ವಂತ ಮೊಳಕೆಗಳನ್ನು ಬೆಳೆಸಿರಿ
ಹವಾಯಿಯ ಎಚ್ಚರ! ಸುದ್ದಿಗಾರರಿಂದ
ಕೆಲವೊಮ್ಮೆ ನೀವು, ನಿಮ್ಮ ಸ್ಥಳಿಕ ಮಾರುಕಟ್ಟೆಯಲ್ಲಿ, ತಾಜಾ, ಗರಿಗರಿಯಾದ ಹಾಗೂ ಪೌಷ್ಟಿಕಾಂಶವುಳ್ಳ ತರಕಾರಿಗಳಿಗಾಗಿ ವ್ಯರ್ಥವಾಗಿ ಹುಡುಕಾಟ ನಡೆಸುತ್ತೀರೊ? ಒಳ್ಳೇದು, ಇನ್ನುಮುಂದೆ ಹುಡುಕಾಟ ನಡೆಸದಿರಿ! ಕನಿಷ್ಠ ಪ್ರಮಾಣದ ಸಮಯ ಹಾಗೂ ಪ್ರಯತ್ನದಿಂದ, ನಿಮ್ಮ ಸ್ವಂತ ಮನೆಯಲ್ಲಿ ಅಥವಾ ವಾಸದ ಕಟ್ಟಡದಲ್ಲಿಯೇ ನೀವು ನಿಜವಾಗಿಯೂ ತರಕಾರಿಗಳನ್ನು ಬೆಳೆಸಬಲ್ಲಿರಿ. ಹೇಗೆ? ಮೊಳಕೆಗಳನ್ನು ಬೆಳೆಸುವ ಮೂಲಕವೇ!
ಮೊಳಕೆಗಳನ್ನು ಎಷ್ಟು ಸುಲಭವಾಗಿ ಬೆಳೆಸಸಾಧ್ಯವಿದೆಯೆಂದರೆ, ಒಂದು ಮಗು ಅದನ್ನು ಬೆಳೆಸಬಲ್ಲದು. ಅವುಗಳಿಗೆ ಸ್ವಲ್ಪ ಸ್ಥಳದ ಅಗತ್ಯವಿದೆ, ಅಗೆಯಬೇಕಾಗಿಲ್ಲ, ಕಳೆಕೀಳಬೇಕಾಗಿಲ್ಲ, ಜಟಿಲವಾದ ರಾಸಾಯನಿಕಗಳೊಂದಿಗೆ ಅನಾವಶ್ಯಕವಾಗಿ ಹೆಣಗಾಡಬೇಕಾಗಿಲ್ಲ. ಎಲ್ಲಕ್ಕಿಂತಲೂ ಮಿಗಿಲಾಗಿ, ನೀವು ನಿಮ್ಮ ಉತ್ಪಾದನೆಯನ್ನು, ಅದು ಬೆಳೆಯಲು ಆರಂಭಿಸಿದ ನಾಲ್ಕು ಅಥವಾ ಐದೇ ದಿವಸಗಳಲ್ಲಿ ತಿನ್ನಸಾಧ್ಯವಿದೆ! ಆದರೆ ಪ್ರಯೋಜನಗಳು ಆನುಕೂಲ್ಯವನ್ನು ಮೀರಿಹೋಗುತ್ತವೆ.
ಒಂದು ವಿಷಯವೇನೆಂದರೆ, ಮೊಳಕೆಗಳು ಪೌಷ್ಟಿಕಾಂಶವುಳ್ಳವುಗಳಾಗಿವೆ—ಬಹುಶಃ ಸಾಮಾನ್ಯ ಬೀನ್ಸ್ ಅಥವಾ ಬೀಜಗಳಿಗಿಂತಲೂ ಹೆಚ್ಚು ಪೌಷ್ಟಿಕಾಂಶವನ್ನು ಹೊಂದಿವೆ. ಗೇ ಕೋರ್ಟರ್ರಿಂದ ಬರೆಯಲ್ಪಟ್ಟ, ಹುರುಳಿಮೊಳಕೆ ಪುಸ್ತಕ (ಇಂಗ್ಲಿಷ್)ವು ಹೇಳುವುದು: “ಬೀಜಗಳು ಮೊಳೆಯಲು ಆರಂಭವಾದಂತೆ, ಅವುಗಳ ವಿಟಮಿನ್ ಪ್ರಮಾಣವು ಸಹ ಬೆಳೆಯಲು ಆರಂಭವಾಗುತ್ತದೆ. ಪೆನ್ಸಿಲ್ವೇನಿಯದ ವಿಶ್ವವಿದ್ಯಾನಿಲಯದಲ್ಲಿ ನಡೆಸಲ್ಪಟ್ಟ ಒಂದು ಅಧ್ಯಯನದಲ್ಲಿ, ಸೋಯಾಬೀನ್ಸಿನ (100 ಗ್ರ್ಯಾಮ್ [ಸುಮಾರು 4 ಔನ್ಸ್ಗಳು]ಗಳಷ್ಟು ಬೀಜಗಳಿಗೆ) ಮೊದಲ ಚಿಗುರುಗಳಲ್ಲಿ, ಕೇವಲ 108 ಮಿಲಿಗ್ರಾಮ್ಗಳಷ್ಟು ವಿಟಮಿನ್ ಸಿ ಇತ್ತು. ಆದರೆ 72 ತಾಸುಗಳ ಬಳಿಕ, ವಿಟಮಿನ್ ಸಿ ಪ್ರಮಾಣವು 706 ಮಿಲಿಗ್ರಾಮ್ಗಳಿಗೆ ಏರಿತ್ತು!”
ಮೊಳಕೆಗಳಿಗೆ ಖರ್ಚು ಸಹ ಕಡಿಮೆ. ವಾಸ್ತವದಲ್ಲಿ, ನಿಮಗೆ ಅಗತ್ಯವಿರುವ ಎಲ್ಲ ಸಲಕರಣೆಯನ್ನು ನೀವು ಈಗಾಗಲೇ ಹೊಂದಿರಬಹುದು.
ಸಜ್ಜುಗೊಳಿಸುವುದು
ಮೊದಲಾಗಿ, ನಿಮಗೆ ಒಂದು ಪಾತ್ರೆ ಬೇಕಾಗುವುದು. ಒಂದು ದೊಡ್ಡ ಗಾಜಿನ ಅಥವಾ ಪ್ಲಾಸ್ಟಿಕ್ ಜಾಡಿ, ಒಂದು ಅಲೋಹದ ದುಂಡುಪಾತ್ರೆ, ಒಂದು ಗಾಜಿನ ಅಥವಾ ಪಿಂಗಾಣಿ ಬಟ್ಟಲು, ಅಥವಾ ಒಂದು ಆಳವಾದ ಪಾತ್ರೆ—ಈ ಮೇಲಿನವುಗಳಲ್ಲಿ ಯಾವುದಾದರೂ ಒಂದು ಪಾತ್ರೆ ಸಾಕು. ಆಳವಿಲ್ಲದ ಪಾತ್ರೆಯನ್ನು ಸಹ ಉಪಯೋಗಿಸಸಾಧ್ಯವಿದೆ—ಒಣಗಿಹೋಗುವುದರಿಂದ ತಡೆಯಲಿಕ್ಕಾಗಿ, ಒದ್ದೆಯಾಗಿರುವ ಚೀಸ್ಬಟ್ಟೆಯ ಎರಡು ಪದರಗಳ ನಡುವೆ ಅಥವಾ ಪೇಪರ್ ಟವೆಲ್ಗಳ ನಡುವೆ, ಬೀಜಗಳ ಒಂದು ಪದರವನ್ನು ಹರಡುವ ಮೂಲಕವೇ. ನೀವು ಯಾವುದೇ ಪಾತ್ರೆಯನ್ನು ಆರಿಸಿಕೊಳ್ಳುವುದಾದರೂ, ಅದು ಬೀಜಗಳು ಮೊಳಕೆಯೊಡೆದು, ಅವುಗಳ ಸುತ್ತಲೂ ಸ್ವಲ್ಪ ಗಾಳಿಯು ಪರಿಚಲಿಸುವಂತೆ ಸ್ಥಳಾವಕಾಶವನ್ನು ಮಾಡಿಕೊಡುವಷ್ಟು ದೊಡ್ಡದಿದೆಯೆಂಬುದನ್ನು ಖಚಿತಪಡಿಸಿಕೊಳ್ಳಿರಿ. ಆ್ಯಲ್ಫಾಲ್ಫಗಳಂತಹ ಚಿಕ್ಕ ಬೀಜಗಳಿಗೆ, ಗಾಜಿನ ಜಾಡಿಯು ಒಳ್ಳೆಯ ಫಲಿತಾಂಶವನ್ನು ನೀಡುತ್ತದೆಂಬುದನ್ನು ನಾನು ಕಂಡುಕೊಂಡಿದ್ದೇನೆ. ಹೆಸರುಕಾಳುಗಳಂತಹ ದೊಡ್ಡ ಬೀಜಗಳು, ಗುಂಡಾದ ಒಂದು ಪಾತ್ರೆ ಅಥವಾ ದುಂಡುಪಾತ್ರೆಯಲ್ಲಿ ಚೆನ್ನಾಗಿ ಬೆಳೆಯಬಹುದು. ಇದು ಅವುಗಳಿಗೆ ಅಗತ್ಯವಾದ ಹೆಚ್ಚಿನ ಸ್ಥಳವನ್ನು ಒದಗಿಸಿ, ಮೊಳಕೆಗಳು ಕೊಳೆಯುವುದರಿಂದ ಅಥವಾ ಹುಳಿಯಾಗುವುದರಿಂದ ಅವುಗಳನ್ನು ತಡೆಯುತ್ತದೆ.
ನಿಮ್ಮ ಪಾತ್ರೆಗೆ ಒಂದು ಮುಚ್ಚಳವೂ ಬೇಕಾಗಿದೆ. ಒಂದು ಪ್ಲಾಸ್ಟಿಕ್ ಹಾಳೆ, ಒಂದು ತುಂಡು ಚೀಸ್ಬಟ್ಟೆ, ಅಥವಾ ಹಳೆಯ ನೈಲಾನ್ ಕಾಲುಚೀಲವೂ ಸಾಕಾಗುತ್ತದೆ. ಇದನ್ನು ಪಾತ್ರೆಯ ಬಾಯಿಗೆ ಕಟ್ಟಲಿಕ್ಕಾಗಿ ಒಂದು ಬಲವಾದ ರಬ್ಬರ್ ಬ್ಯಾಂಡ್ ಅಥವಾ ದಾರದ ಅಗತ್ಯವಿದೆ. ಸಹಜವಾಗಿ, ಬೀಜಗಳನ್ನು ದಿನವೊಂದಕ್ಕೆ ಕಡಿಮೆಪಕ್ಷ ಎರಡಾವರ್ತಿ ಜಾಲಿಸಿ ತೊಳೆಯಬೇಕಾಗಿರುವುದರಿಂದ, ನಿಮಗೆ ನೀರು ಹಾಗೂ ಬಹುಶಃ ಆ ಪಾತ್ರೆಯನ್ನು ಬಸಿಯಲಿಕ್ಕಾಗಿ ಒಂದು ಜರಡಿಪಾತ್ರೆಯೂ ಬೇಕಾಗಿರುವುದು.
ಕೊನೆಯದಾಗಿ, ನಿಮಗೆ ಬೀಜಗಳು ಬೇಕಾಗಿವೆ. ಬಹುಮಟ್ಟಿಗೆ ತಿನ್ನತಕ್ಕ ಯಾವುದೇ ಬೀಜಕ್ಕೆ ಮೊಳಕೆಕಟ್ಟಸಾಧ್ಯವಿದೆ. (ಆದರೂ, ನಾನು ರಾಸಾಯನಿಕಗಳಿಂದ ಸಂಸ್ಕರಿಸಲ್ಪಟ್ಟಿರುವ ಬೀಜಗಳನ್ನು ಉಪಯೋಗಿಸದಿರುವಂತೆ ಜಾಗ್ರತೆ ವಹಿಸುತ್ತೇನೆ.) ಆರಂಭಿಸುವಾತನಿಗೆ, ಪ್ರಯತ್ನಿಸಿ ನೋಡಲು ಅತ್ಯುತ್ತಮವಾಗಿರುವ ಬೀಜಗಳು, ಹೆಸರುಕಾಳುಗಳು ಅಥವಾ ಆ್ಯಲ್ಫಾಲ್ಫ ಬೀಜಗಳಾಗಿವೆ. ಅವುಗಳನ್ನು ಮೊಳಕೆಕಟ್ಟುವುದು ಸುಲಭ ಮತ್ತು ಅವು ತುಂಬ ರುಚಿಯಾಗಿರುತ್ತವೆ! ಈಗ, ಅದನ್ನು ಹೇಗೆ ಮಾಡುವುದು ಎಂಬುದನ್ನು ನಾನು ನಿಮಗೆ ಹೇಳುತ್ತೇನೆ.
ನಿಮ್ಮ ಸ್ವಂತ ಮೊಳಕೆಗಳನ್ನು ಬೆಳೆಸುವುದು
ಮೊದಲನೆಯ ದಿನ: ಬೀಜಗಳನ್ನು ಅಥವಾ ಬೀನ್ಸನ್ನು ಸುಮಾರು ಎರಡು ಅಂಗುಲಗಳಷ್ಟು ಆವರಿಸುವ ತನಕ, ನಿಮ್ಮ ಪಾತ್ರೆಯನ್ನು ನೀರಿನಿಂದ ತುಂಬಿಸಿರಿ. ಬೀಜಗಳನ್ನು ಕಡಿಮೆಪಕ್ಷ ಎಂಟರಿಂದ ಹತ್ತು ತಾಸುಗಳ ವರೆಗೆ ನೆನೆಸಿಡಿರಿ. ನೀವು ಬೀಜಗಳನ್ನು ಮಲಗುವ ಸಮಯಕ್ಕೆ ಸ್ವಲ್ಪ ಮುಂಚಿತವಾಗಿ ನೆನೆಹಾಕಬಹುದು. ಚಳಿಯ ಹವೆಯಲ್ಲಿ, ಉಗುರುಬೆಚ್ಚಗಿನ ನೀರಿನಲ್ಲಿ ಬೀಜಗಳನ್ನು ನೆನೆಹಾಕಿರಿ. ಎಂಟರಿಂದ ಹತ್ತು ತಾಸುಗಳು ಕಳೆದ ಬಳಿಕ, ಆ ಬೀಜಗಳು ಉಬ್ಬಿ, ಸಿಪ್ಪೆಗಳು ತುಸುವೇ ಸೀಳುಬಿಟ್ಟಿರುತ್ತವೆ. ಅವು ಮೊಳಕೆಕಟ್ಟಲು ಸಿದ್ಧವಾಗಿವೆ.
ಎರಡನೆಯ ದಿನ: ಬೆಳಗಿನ ಸಮಯದಲ್ಲಿ, ಮುಚ್ಚಳವನ್ನು ಭದ್ರಪಡಿಸಿ, ಆ ಪಾತ್ರೆಯಿಂದ ನೀರನ್ನು ಬಸಿದುತೆಗೆಯಿರಿ. (ಆ ನೀರಿನಲ್ಲಿ ವಿಟಮಿನ್ಗಳಿರುವುದರಿಂದ, ಸಾಮಾನ್ಯವಾಗಿ ನಾನು ಅದನ್ನು ಕುಡಿಯುತ್ತೇನೆ ಅಥವಾ ನನ್ನ ಗಿಡಗಳಿಗೆ ನೀರು ಹಾಕಲಿಕ್ಕಾಗಿ ಉಪಯೋಗಿಸುತ್ತೇನೆ.) ಈಗ, ಆ ಪಾತ್ರೆಯಲ್ಲಿ ಪುನಃ ನೀರನ್ನು ತುಂಬಿಸಿರಿ. ಆ ಪಾತ್ರೆಯನ್ನು ಕೆಲವು ಬಾರಿ ಕುಲುಕಾಡಿಸಿ, ಅದನ್ನು ತಲೆಕೆಳಗಾಗಿ ಬಗ್ಗಿಸಿರಿ. ಇದರಿಂದ ಹೆಚ್ಚಿನ ನೀರು ಬಸಿಯಲ್ಪಡುತ್ತದೆ. ಪುನಃ ಪುನಃ ಆ ಪಾತ್ರೆಗೆ ನೀರು ತುಂಬಿಸಿ, ಒಟ್ಟಿಗೆ ಮೂರು ಬಾರಿ ಆ ಬೀಜಗಳನ್ನು ಜಾಲಿಸಿ ತೊಳೆದು, ಬಸಿಯಿರಿ. ನೆನೆಹಾಕಿದ ಬೀಜಗಳನ್ನು ನೀವು ಆಳವಾಗಿರದ ಒಂದು ತಟ್ಟೆಗೆ ವರ್ಗಾಯಿಸಿರುವಲ್ಲಿ, ನಿಧಾನವಾಗಿ ನೀರನ್ನು ಚೀಸ್ಬಟ್ಟೆಯ ಮೇಲೆ ಸುರಿಯಿರಿ, ಮತ್ತು ಆ ಪಾತ್ರೆಯನ್ನು ಓರೆಯಾಗಿ ಬಗ್ಗಿಸುವ ಮೂಲಕ ನೀರನ್ನು ಬಸಿಯಿರಿ. ತದನಂತರ, ಆ ಬೀಜಗಳನ್ನು ದಿನವೊಂದಕ್ಕೆ ಎರಡಾವರ್ತಿ ಸಂಪೂರ್ಣವಾಗಿ ಜಾಲಿಸಿ ತೊಳೆಯಲಿಕ್ಕಾಗಿ, ಜಾಲಿಸಿ ತೊಳೆಯುವ ಕಾರ್ಯವಿಧಾನವನ್ನು ಪುನಃ ಪುನರಾವರ್ತಿಸಿರಿ.
ಮೂರನೆಯ ದಿನ: ಇಷ್ಟರೊಳಗೆ, ನಿಮ್ಮ ಬೀಜಗಳು ಮೊಳಕೆಯೊಡೆಯುವುದನ್ನು ನೋಡಲು ನೀವು ಶಕ್ತರಾಗಿರುತ್ತೀರಿ. ಅವುಗಳನ್ನು ದಿನವೊಂದಕ್ಕೆ ಎರಡಾವರ್ತಿ ಜಾಲಿಸಿ ತೊಳೆಯುವುದನ್ನು ಮುಂದುವರಿಸಿರಿ.
ನಾಲ್ಕನೆಯ ದಿನ: ನೀವು ಮೊಳಕೆಗಳನ್ನು ತಿನ್ನಲು ಆರಂಭಿಸಸಾಧ್ಯವಿದೆ! ನೀವು ಹೆಸರುಕಾಳಿನ ಮೊಳಕೆಗಳನ್ನು ಇನ್ನೂ ಹೆಚ್ಚು ಉದ್ದವಾಗಿ ಬೆಳೆಯುವಂತೆ ಬಿಡಸಾಧ್ಯವಿದೆ. ಏಕೆಂದರೆ ಅವುಗಳಲ್ಲಿ ಕಹಿ ರುಚಿಯು ಉಂಟಾಗುವುದಿಲ್ಲ. ಆ ಮೊಳಕೆಗಳನ್ನು ದಿನಕ್ಕೆ ಎರಡಾವರ್ತಿ ಜಾಲಿಸಿ ತೊಳೆಯುತ್ತಾ ಇದ್ದೀರೆಂಬುದನ್ನು ಖಚಿತಪಡಿಸಿಕೊಳ್ಳಿರಿ. ನಿಮ್ಮ ಮೊಳಕೆಗಳನ್ನು ನೀವು ಸುಮಾರು ಒಂದು ತಾಸಿನ ವರೆಗೆ ಬಿಸಿಲಿನಲ್ಲಿ ಇಟ್ಟು, ನಂತರ ಅವುಗಳನ್ನು ಶೀತಕದಲ್ಲಿಡಸಾಧ್ಯವಿದೆ. ಆ ಚಿಕ್ಕ ಎಲೆಗಳಿಗೆ ಸುಂದರವಾದ ಹಸಿರು ಛಾಯೆಯು ಬರುತ್ತದೆ—ಇದು ತುಂಬ ರುಚಿಕಾರಕ!
ಯಶಸ್ಸಿನ ಅನುಭವವುಳ್ಳವರಾಗಿದ್ದು, ಈಗ ನೀವು ಬೇರೆ ರೀತಿಯ ಕಾಳುಗಳು ಹಾಗೂ ಬೀಜಗಳೊಂದಿಗೆ ಪ್ರಯೋಗ ನಡೆಸಲು ಬಯಸಬಹುದು. ಪ್ರತಿಯೊಂದು ಮೊಳಕೆಯು ರುಚಿಯಲ್ಲಿ ಮತ್ತು ಅವುಗಳ ಮೊಳಕೆಯೊಡೆಯುವ ಸಮಯದಲ್ಲಿಯೂ ಸ್ವಲ್ಪ ಭಿನ್ನತೆಯಿರುತ್ತದೆ. ಉದಾಹರಣೆಗಾಗಿ, ಸಿಪ್ಪೆಸುಲಿದಿರುವ ಸೂರ್ಯಕಾಂತಿ ಹೂವಿನ ಬೀಜಗಳನ್ನು ಮೊಳೆಯಿಸಲು ನೀವು ಪ್ರಯತ್ನಿಸಬಹುದು. ಈ ಮೊಳಕೆಗಳನ್ನು ಎರಡೇ ದಿನಗಳಲ್ಲಿ, ಅವು ಕೇವಲ ಅರ್ಧ ಇಂಚು ಉದ್ದವಾಗಿರುವಾಗಲೇ ತಿಂದರೆ ಅತ್ಯುತ್ತಮ. ಅವು ಇನ್ನಷ್ಟು ಉದ್ದಕ್ಕೆ ಬೆಳೆಯುವುದಾದರೆ, ಅವುಗಳಿಗೆ ಕಹಿ ರುಚಿ ಬರಬಹುದು.
ಮೊಳಕೆಗಳನ್ನು ಬಡಿಸುವ ವಿಧ
ಅಧಿಕಾಂಶ ಮೊಳಕೆಗಳನ್ನು, ಸ್ಯಾಲಡ್ಗಳಲ್ಲಿ, ಸ್ಯಾಂಡ್ವಿಚ್ಗಳಲ್ಲಿ, ಅಥವಾ ಬೀನ್ಸ್ ಹಾಗೂ ಬೀಜಗಳನ್ನು ಉಪಯೋಗಿಸಲಾಗುವ ಯಾವುದೇ ಅಡಿಗೆಯಲ್ಲಿ, ಹಸಿಯಾಗಿಯೇ ತಿನ್ನಸಾಧ್ಯವಿದೆ. ಆದರೂ, ಬೀನ್ ಮೊಳಕೆಗಳನ್ನು, ನೀವು ಅವುಗಳನ್ನು ತಿನ್ನುವುದಕ್ಕೆ ಮೊದಲು 10ರಿಂದ 15 ನಿಮಿಷಗಳ ವರೆಗೆ ಆವಿಯಲ್ಲಿ ಬೇಯಿಸಸಾಧ್ಯವಿದೆ. ಅಥವಾ ಸ್ವಲ್ಪ ಎಣ್ಣೆ, ಬೆಳ್ಳುಳ್ಳಿ, ಹಾಗೂ ಉಪ್ಪಿನೊಂದಿಗೆ ನೀವು ಅವುಗಳನ್ನು ಹುರಿಯಸಾಧ್ಯವಿದೆ. ಇದು ತುಂಬ ರುಚಿಕರವಾದ ತಿಂಡಿಯಾಗಿರುತ್ತದೆ! ಗೋಧಿ ಹಾಗೂ ರೈ (ಒಂದು ಬಗೆಯ ಧಾನ್ಯ) ಕಾಳಿನ ಮೊಳಕೆಗಳು ತುಂಬ ಸಿಹಿಯಾಗಿರುತ್ತವೆ ಮತ್ತು ಬ್ರೆಡ್ಗಳು ಹಾಗೂ ಮಫಿನ್ಗಳಿಗೆ ಹಾಕಿದರೆ ಒಳ್ಳೆಯ ಸೇರಿಕೆಯಿರುತ್ತದೆ.
ಹೀಗೆ, ಮೊಳಕೆಗಳನ್ನು ಬೆಳೆಸುವುದು ಒಂದು ಆರೋಗ್ಯಕರವಾದ ಹಾಗೂ ಕಡಿಮೆ ಖರ್ಚಿನ ಹವ್ಯಾಸವಾಗಿದೆ. ಮೊಳಕೆಗಳನ್ನು ಬೆಳೆಸುವುದನ್ನು ನೀವು ರೋಮಾಂಚಕವಾದದ್ದಾಗಿಯೂ ಪ್ರತಿಫಲದಾಯಕವಾಗಿಯೂ ಕಂಡುಕೊಳ್ಳಬಹುದೆಂಬುದು ಖಂಡಿತ. ಎಷ್ಟೆಂದರೂ ಅದರ ಯಶಸ್ಸಿನ ಮಟ್ಟವು ಅತ್ಯುನ್ನತ ಹಾಗೂ ಫಲಿತಾಂಶಗಳು ರುಚಿಕರ!—ದತ್ತಲೇಖನ.
[ಪುಟ 28 ರಲ್ಲಿರುವ ಚಿತ್ರ ಕೃಪೆ]
ಜಪಾನೀಯ ಸ್ಟೆನ್ಸಿಲ್ ವಿನ್ಯಾಸಗಳು
[ಪುಟ 29 ರಲ್ಲಿರುವ ಚಿತ್ರ]
ಮೊದಲನೆಯ ದಿನ: ಬೀಜಗಳನ್ನು ಒಟ್ಟುಗೂಡಿಸಿ, ಎಂಟರಿಂದ ಹತ್ತು ತಾಸುಗಳ ವರೆಗೆ ನೀರಿನಲ್ಲಿ ನೆನೆಹಾಕಿರಿ
[ಪುಟ 20 ರಲ್ಲಿರುವ ಚಿತ್ರ]
ಎರಡನೆಯ ಹಾಗೂ ಮೂರನೆಯ ದಿನಗಳು: ದಿನವೊಂದಕ್ಕೆ ಎರಡಾವರ್ತಿ ಬೀಜಗಳನ್ನು ಚೆನ್ನಾಗಿ ಜಾಲಿಸಿ ತೊಳೆಯಿರಿ
[ಪುಟ 20 ರಲ್ಲಿರುವ ಚಿತ್ರ]
ನಾಲ್ಕನೆಯ ದಿನ: ಮೊಳಕೆಗಳು (ಮಗ್ಗುಲಿಂದ, ಚೀಸ್ಬಟ್ಟೆಯ ಮೇಲೆ ಕಾಣಬಹುದಾಗಿದೆ) ತಿನ್ನಲಿಕ್ಕಾಗಿ ಸಿದ್ಧವಾಗಿವೆ!