ಬಿತ್ತಿದ ಬೀಜ ಬೆಳೆಯಬೇಕಾದರೆ ಅದಕ್ಕೆ ನೀರೆರೆಯಬೇಕು
1. ಬೀಜ ಬಿತ್ತಿದ ನಂತರ ಏನು ಮಾಡಬೇಕು?
1 ಬಿತ್ತಿದ ಬೀಜ ಮೊಳಕೆಯೊಡೆಯಬೇಕಾದರೆ ಅದಕ್ಕೆ ನೀರೆರೆಯಬೇಕು. ನಮ್ಮ ಟೆರಿಟೊರಿಯಲ್ಲಿರುವ ಜನರ ಮನಸ್ಸಿನಲ್ಲಿ ಹಾಕಿರುವ ಸತ್ಯವೆಂಬ ಬೀಜದ ವಿಷಯದಲ್ಲೂ ಇದು ಸತ್ಯ. (1 ಕೊರಿಂ. 3:6) ನಾವು ಪುನರ್ಭೇಟಿಗಳನ್ನು ಮಾಡಿ ದೇವರ ವಾಕ್ಯವೆಂಬ ನೀರನ್ನು ಹೊಯ್ದರೆ ಮಾತ್ರ ಆ ಸಾಂಕೇತಿಕ ಬೀಜ ಬೇರೂರಿ, ಬೆಳೆದು, ಫಲವತ್ತಾಗುತ್ತದೆ.
2. ಪುನರ್ಭೇಟಿಗಾಗಿ ನಾವು ಹೇಗೆ ತಳಪಾಯ ಹಾಕಬಹುದು?
2 ಪ್ರಶ್ನೆ ಕೇಳಿ: ನೀವು ನಿರೂಪಣೆಯನ್ನು ತಯಾರಿಸುವಾಗ ಮನೆಯವನ ಆಸಕ್ತಿಯನ್ನು ಕೆರಳಿಸುವಂಥ ಒಂದು ಪ್ರಶ್ನೆಯ ಬಗ್ಗೆಯೂ ಯೋಚಿಸಬಹುದು. ನಿಮ್ಮ ಸಂಭಾಷಣೆಯ ಕೊನೆಯಲ್ಲಿ ಆ ಪ್ರಶ್ನೆಯನ್ನು ಕೇಳಿ, ಅದಕ್ಕೆ ಉತ್ತರ ಹೇಳಲು ಪುನರ್ಭೇಟಿಗಾಗಿ ಪಕ್ಕಾ ಏರ್ಪಾಡು ಮಾಡಿ. ಬೈಬಲ್ ಬೋಧಿಸುತ್ತದೆ ಪುಸ್ತಕದಿಂದಲೇ ಒಂದು ವಿಷಯವನ್ನು ಆರಿಸಿಕೊಂಡು ಪ್ರಶ್ನೆಯನ್ನು ಕೇಳುವುದಾದರೆ ಪುನರ್ಭೇಟಿಯಲ್ಲಿ ಬೈಬಲ್ ಅಧ್ಯಯನ ಹೇಗೆ ಮಾಡುವುದೆಂದು ತೋರಿಸಿಕೊಡಲು ಸಹಾಯಕರ ಎಂದು ಅನೇಕರು ನೆನಸುತ್ತಾರೆ.
3. ಆಸಕ್ತ ವ್ಯಕ್ತಿಯ ಕುರಿತ ಯಾವೆಲ್ಲ ಮಾಹಿತಿಯನ್ನು ಬರೆದಿಡಬಹುದು?
3 ಟಿಪ್ಪಣಿ ಬರೆದಿಟ್ಟುಕೊಳ್ಳಿ: ಮನೆಯವನ ಬಳಿ ಮಾತಾಡಿ ಮುಗಿಸಿದ ಕೂಡಲೇ ಟಿಪ್ಪಣಿಯನ್ನು ಬರೆದಿಡಲು ಸಮಯ ಮಾಡಿಕೊಳ್ಳಿ. ಆ ವ್ಯಕ್ತಿಯ ಹೆಸರು, ವಿಳಾಸವನ್ನು ಬರೆದಿಟ್ಟುಕೊಳ್ಳಿ. ಅವನೊಂದಿಗೆ ಮಾತಾಡಿದ ಸಮಯ, ದಿನಾಂಕ, ಮಾತಾಡಿದ ವಿಷಯ, ನೀಡಿದ ಪ್ರಕಾಶನ ಯಾವುದು ಎನ್ನುವುದನ್ನೂ ಬರೆದಿಟ್ಟುಕೊಳ್ಳಬಹುದು. ಮನೆಯವನು ತನ್ನ ಧರ್ಮದ ಬಗ್ಗೆ ಏನಾದರೂ ಹೇಳಿದನಾ? ಆತನು ಕುಟುಂಬಸ್ಥನಾ? ತನ್ನ ಇಷ್ಟಾನಿಷ್ಟಾ ಹಾಗೂ ಚಿಂತೆಗಳ ಬಗ್ಗೆ ತಿಳಿಸಿದನಾ? ಈ ಎಲ್ಲಾ ಮಾಹಿತಿಗಳನ್ನು ಬರೆದಿಡುವಲ್ಲಿ ಪುನರ್ಭೇಟಿಯಲ್ಲಿ ಅವನಿಗೆ ಇಷ್ಟವಾಗುವಂಥ ರೀತಿಯಲ್ಲಿ ಸಂಭಾಷಣೆ ಆರಂಭಿಸಲು ಸಹಾಯಕರ. ನೀವು ಪುನಃ ಯಾವಾಗ ಭೇಟಿಯಾಗುವುದಾಗಿ ತಿಳಿಸಿದ್ದೀರಿ ಹಾಗೂ ಯಾವ ಪ್ರಶ್ನೆಗೆ ಉತ್ತರ ಕೊಡಬೇಕಾಗಿದೆ ಎಂಬುದನ್ನೂ ಬರೆದಿಡಿ.
4. ಪುನರ್ಭೇಟಿ ಮಾಡುವಾಗ ನಾವು ಪಟ್ಟುಸಡಿಲಿಸಬಾರದು ಏಕೆ?
4 ಪಟ್ಟುಸಡಿಲಿಸಬೇಡಿ: ಒಬ್ಬ ವ್ಯಕ್ತಿಯ ಹೃದಯದಲ್ಲಿ “ಬಿತ್ತಲ್ಪಟ್ಟಿರುವ ವಾಕ್ಯವನ್ನು” ತೆಗೆದುಬಿಡಲು ಸೈತಾನನು ಪ್ರಯತ್ನಿಸುತ್ತಲೇ ಇರುತ್ತಾನೆ. (ಮಾರ್ಕ 4:14, 15) ಹಾಗಾಗಿ, ನೀವು ಪುನರ್ಭೇಟಿ ಮಾಡಿದಾಗ ಒಂದುವೇಳೆ ಆಸಕ್ತ ವ್ಯಕ್ತಿ ಮನೆಯಲ್ಲಿ ಇರದಿದ್ದಲ್ಲಿ ಪ್ರಯತ್ನ ಬಿಡಬೇಡಿ. ನೀವು ಅವರ ಮನೆಯ ಬಾಗಿಲಿನಲ್ಲಿ ಒಂದು ಚಿಕ್ಕ ಪತ್ರವನ್ನು ಇಡಸಾಧ್ಯವೋ? ಒಬ್ಬಾಕೆ ಪಯನೀಯರ್ ಒಬ್ಬ ಸ್ತ್ರೀಯೊಂದಿಗೆ ಬೈಬಲ್ ಅಧ್ಯಯನ ಆರಂಭಿಸಿದ್ದಳು. ಪುನರ್ಭೇಟಿ ಮಾಡಿದಾಗ ಅವಳು ಮನೆಯಲ್ಲಿ ಇರಲಿಲ್ಲ. ಹಾಗಾಗಿ ಸಹೋದರಿ ಅವಳಿಗೆ ಒಂದು ಪತ್ರವನ್ನು ಕಳುಹಿಸಿದಳು. ಮತ್ತೊಮ್ಮೆ ಭೇಟಿಮಾಡಿದಾಗ ಆ ಮನೆಯವಳು ಸಿಕ್ಕಿದಳು. ಸಹೋದರಿ ವೈಯಕ್ತಿಕ ಆಸಕ್ತಿ ತೋರಿಸಿ ಕಳುಹಿಸಿದ ಪತ್ರಕ್ಕಾಗಿ ಅವಳು ತುಂಬ ಸಂತೋಷ ವ್ಯಕ್ತಪಡಿಸಿದಳು. ನಾವು ಸತ್ಯವೆಂಬ ಬೀಜಕ್ಕೆ ನೀರೆರೆಯುವುದಾದರೆ ಆ ಬೀಜ ಮೊಳಕೆಯೊಡೆದು, ಪ್ರೌಢತೆಗೆ ಬೆಳೆದು “ಮೂವತ್ತರಷ್ಟು ಅರುವತ್ತರಷ್ಟು ನೂರರಷ್ಟು ಫಲ” ಕೊಡುವುದನ್ನು ನೋಡುವ ಆನಂದ ನಮ್ಮದಾಗುತ್ತದೆ.—ಮಾರ್ಕ 4:20.