ಶಂಬುಕ ಜ್ವರ ಅದು ಬೇಗನೆ ನಿರ್ಮೂಲವಾಗಲಿದೆಯೆ?
ನೈಜೀರಿಯದ ಎಚ್ಚರ! ಸುದ್ದಿಗಾರರಿಂದ
ವೈದ್ಯಕೀಯ ಮತ್ತು ವಿಜ್ಞಾನ ಕ್ಷೇತ್ರಗಳಲ್ಲಿ ಆಗಿರುವ ದಿಗ್ಭ್ರಮೆಹಿಡಿಸುವ ವಿಕಸನಗಳ ಹೊರತೂ, ಮಾನವಕುಲವು ಅದರ ಪ್ರಾಕ್ತನ ಸಮಸ್ಯೆಗಳಲ್ಲಿ ಅನೇಕವನ್ನು ಬಗೆಹರಿಸಲು ಅಶಕ್ತವಾಗಿದೆ. ಶಂಬುಕ ಜ್ವರವನ್ನು ಅಂಕೆಗೆ ತರಲು ಮಾಡಿರುವ ಪ್ರಯತ್ನಗಳ ಕುರಿತೂ ಇದು ಸತ್ಯವಾಗಿದೆ.
ಈ ಕೆಲಸಕ್ಕಾಗಿ ಸಕಲ ಸಾಧನಗಳೂ ಲಭ್ಯವಿರುವಂತೆ ತೋರಿಬರುತ್ತದೆ. ಡಾಕ್ಟರರು ಅದರಲ್ಲಿ ಒಳಗೂಡಿರುವ ಪರೋಪಜೀವಿಯ ಜೀವನಚಕ್ರದ ಕುರಿತು ತಿಳಿದಿದ್ದಾರೆ. ಆ ರೋಗವು ಸುಲಭವಾಗಿ ನಿರ್ಣಯಿಸಲ್ಪಡುತ್ತದೆ. ಅದನ್ನು ಗುಣಪಡಿಸಲು ಪರಿಣಾಮಕಾರಿಯಾದ ಔಷಧಗಳು ದೊರೆಯುತ್ತವೆ. ಅದನ್ನು ತಡೆಹಿಡಿಯುವ ಪ್ರಯತ್ನವನ್ನು ಉತ್ತೇಜಿಸಲು ಸರಕಾರಿ ನೇತಾರರು ಉತ್ಸುಕರಾಗಿದ್ದಾರೆ. ಆದರೂ, ಆಫ್ರಿಕ, ಏಷಿಯ, ಕ್ಯಾರಿಬಿಯನ್, ಮಧ್ಯಪೂರ್ವ ಮತ್ತು ದಕ್ಷಿಣ ಅಮೆರಿಕದ ಕೋಟಿಗಟ್ಟಲೆ ಜನರನ್ನು ಪೀಡಿಸುವ ಈ ರೋಗವು ಇನ್ನೂ ನಿರ್ಮೂಲವಾಗಿಲ್ಲ.
ಶಂಬುಕ ಜ್ವರ (ಬಿಲ್ಹಾರ್ಸಿಆ್ಯಸಿಸ್ ಅಥವಾ ಶಿಸ್ಟಸೋಮಯಸಿಸ್ ಎಂದೂ ಕರೆಯಲ್ಪಡುತ್ತದೆ)ವು ಮನುಷ್ಯನನ್ನು ಸಾವಿರಾರು ವರ್ಷಗಳಿಂದ ಪೀಡಿಸಿದೆ. ಐಗುಪ್ತ ರಕ್ಷಿತಶವ (ಮಮಿ)ಗಳಲ್ಲಿ ಕಂಡುಬಂದ ಸುಣ್ಣಗಟ್ಟಿದ ಮೊಟ್ಟೆಗಳು, ಫರೋಹರ ದಿನಗಳಲ್ಲಿ ಈ ರೋಗವು ಐಗುಪ್ತ್ಯರಿಗೆ ತಟ್ಟಿತ್ತೆಂಬುದಕ್ಕೆ ಪುರಾವೆಯನ್ನೊದಗಿಸುತ್ತವೆ. ಮೂವತ್ತು ಶತಮಾನಗಳ ತರುವಾಯ, ಅದೇ ರೋಗವು ಈಜಿಪ್ಟನ್ನು ಪೀಡಿಸುತ್ತ ಮುಂದುವರಿದು, ಆ ದೇಶದ ಲಕ್ಷಗಟ್ಟಲೆ ನಿವಾಸಿಗಳ ಆರೋಗ್ಯವನ್ನು ದುರ್ಬಲಗೊಳಿಸುತ್ತದೆ. ನೈಲ್ ಮುಖಜಭೂಮಿಯ ಕೆಲವು ಹಳ್ಳಿಗಳಲ್ಲಿ, 10ರಲ್ಲಿ 9 ಮಂದಿಗೆ ಈ ಸೋಂಕು ತಗಲಿದೆ.
ಶಂಬುಕ ಜ್ವರವು ನಿಯತವ್ಯಾಧಿಯಾಗಿರುವ 74 ಅಥವಾ ಅದಕ್ಕೂ ಹೆಚ್ಚು ದೇಶಗಳಲ್ಲಿ ಈಜಿಪ್ಟ್ ಕೇವಲ ಒಂದಾಗಿದೆ. ಲೋಕಾದ್ಯಂತ, ಲೋಕಾರೋಗ್ಯ ಸಂಸ್ಥೆ (ಡಬ್ಲ್ಯೂಏಚ್ಓ)ಯ ಸಂಖ್ಯಾನುಸಾರ, 20 ಕೋಟಿ ಜನರು ಆ ರೋಗ ಸೋಂಕಿತರಾಗಿದ್ದಾರೆ. ಎರಡು ಕೋಟಿ ಅಸ್ಥಿಗತ ರೋಗಿಗಳಲ್ಲಿ, ಪ್ರತಿ ವರ್ಷ ಸುಮಾರು 2,00,000 ಮಂದಿ ಸಾಯುತ್ತಾರೆ. ಉಷ್ಣವಲಯದ ಪರೋಪಜೀವಿಸಂಬಂಧವಾದ ರೋಗಗಳಲ್ಲಿ, ಶಂಬುಕ ಜ್ವರವು, ಅದು ಪೀಡಿಸುವ ಜನರ ಲೆಕ್ಕದಲ್ಲಿ ಮತ್ತು ಅದು ಮಾಡುವ ಸಾಮಾಜಿಕ ಹಾಗೂ ಆರ್ಥಿಕ ಹಾವಳಿಯಲ್ಲಿ, ಕೇವಲ ಮಲೇರಿಯಕ್ಕೆ ಎರಡನೆಯ ಸ್ಥಾನದಲ್ಲಿದೆ ಎಂದು ಹೇಳಲಾಗುತ್ತದೆ.
ಪರೋಪಜೀವಿಯ ಜೀವನ ಚಕ್ರ
ಶಂಬುಕ ಜ್ವರವನ್ನು ಗ್ರಹಿಸುವುದು ಮತ್ತು ಹೀಗೆ, ಅದನ್ನು ನಿರೋಧಿಸುವುದು ಮತ್ತು ಗುಣಮಾಡುವುದು ಹೇಗೆಂದು ತಿಳಿಯುವುದು ಎಂದರೆ ಅದನ್ನು ಉಂಟುಮಾಡುವ ಪರೋಪಜೀವಿಯನ್ನು ಅರ್ಥಮಾಡಿಕೊಳ್ಳುವುದೆಂದರ್ಥ. ಒಂದು ಮುಖ್ಯ ವಿಷಯವು ಇದು: ಸಂತತಿಯಿಂದ ಸಂತತಿಗೆ ಬದುಕಿ ಉಳಿದು ಏಳ್ಗೆಹೊಂದಬೇಕಾದರೆ, ಈ ಪರೋಪಜೀವಿಗೆ ಎರಡು ಆಶ್ರಯದಾತರು—ತಿಂದು, ಬೆಳೆಯಬಲ್ಲಂತಹ ಎರಡು ಜೀವಿಗಳು ಅಗತ್ಯ. ಒಂದು, ಮಾನವ ಜೀವಿಯಂತಹ ಸಸ್ತನಿ; ಇನ್ನೊಂದು, ಸಿಹಿನೀರಿನ ಬಸವನ ಹುಳು (ಶಂಬುಕ).
ನಡೆಯುವುದು ಇದೇ. ಆ ಪರೋಪಜೀವಿಯು ಸೋಂಕಿರುವ ಒಬ್ಬ ವ್ಯಕ್ತಿಯು, ಒಂದು ಕೆರೆ, ಸರೋವರ, ತೋಡು ಅಥವಾ ನದಿಯ ನೀರಿನಲ್ಲಿ ಮೂತ್ರ ಅಥವಾ ಮಲವಿಸರ್ಜಿಸುವಾಗ, ಅವನು ಆ ಪರೋಪಜೀವಿಯ ಮೊಟ್ಟೆಗಳನ್ನು—ಸಾಧಾರಣ ಒಂದು ದಿನಕ್ಕೆ ಹತ್ತು ಲಕ್ಷದಷ್ಟು—ಬಿಡುಗಡೆ ಮಾಡುತ್ತಾನೆ. ಸೂಕ್ಷ್ಮದರ್ಶಕದ ಸಹಾಯವಿಲ್ಲದೆ ನೋಡಲು ಈ ಮೊಟ್ಟೆಗಳು ತೀರ ಚಿಕ್ಕದಾಗಿವೆ. ಈ ಮೊಟ್ಟೆಗಳು ನೀರನ್ನು ಸಂಪರ್ಕಿಸಿದಾಗ, ಅವು ಒಡೆದು ಪರೋಪಜೀವಿಗಳನ್ನು ಬಿಡುಗಡೆಮಾಡುತ್ತವೆ. ತಮ್ಮ ದೇಹಗಳಲ್ಲಿರುವ ಸೂಕ್ಷ್ಮ ಕೂದಲುಗಳನ್ನು ಉಪಯೋಗಿಸಿ ಆ ಪರೋಪಜೀವಿಗಳು ಈಜುತ್ತ ಸಿಹಿನೀರಿನ ಒಂದು ಬಸವನ ಹುಳುವನ್ನು ಹತ್ತಿ ಭೇದಿಸುತ್ತವೆ. ಆ ಶಂಬುಕದೊಳಗೆ ಅವು ಮುಂದಿನ ನಾಲ್ಕರಿಂದ ಹಿಡಿದು ಏಳು ವಾರಗಳಲ್ಲಿ, ಸಂತಾನಾಭಿವೃದ್ಧಿ ಹೊಂದುತ್ತವೆ.
ಅವು ಬಸವನ ಹುಳುವನ್ನು ಬಿಟ್ಟು ಅಗಲುವಾಗ, ಒಬ್ಬ ಮಾನವನನ್ನು ಅಥವಾ ಒಂದು ಸಸ್ತನಿಯನ್ನು ಕಂಡುಹಿಡಿದು ಪ್ರವೇಶಿಸಲು ಅವುಗಳಿಗೆ ಕೇವಲ 48 ತಾಸುಗಳಿವೆ. ಅನ್ಯಥಾ, ಅವು ಸಾಯುತ್ತವೆ. ನೀರಿನೊಳಗೆ ಬಂದಿರುವ ಅಂತಹ ಒಬ್ಬ ಆಶ್ರಯದಾತನನ್ನು ಅವು ತಲುಪಿದಾಗ, ಆ ಪರೋಪಜೀವಿಯು ಆಶ್ರಯದಾತನ ಚರ್ಮವನ್ನು ಕೊರೆದು ರಕ್ತಪ್ರವಾಹವನ್ನು ಪ್ರವೇಶಿಸುತ್ತವೆ. ಇದು ಆ ವ್ಯಕ್ತಿಗೆ, ಒಂದು ಆಕ್ರಮಣ ನಡೆದದೆಯೆಂಬುದಕ್ಕೆ ಅನೇಕ ವೇಳೆ ಯಾವ ಸೂಚನೆಯನ್ನು ಕೊಡದಿದ್ದರೂ, ತುಸು ತುರಿಕೆಯನ್ನು ಉಂಟುಮಾಡಬಹುದು. ರಕ್ತಪ್ರವಾಹದೊಳಗೆ, ಆ ಪರೋಪಜೀವಿಯು ಪ್ರಯಾಣಿಸುತ್ತ, ಪರೋಪಜೀವಿಯ ಜಾತಿಗನುಸಾರ, ಮೂತ್ರಕೋಶದ ಅಥವಾ ಕರುಳುಗಳ ರಕ್ತನಾಳಗಳೊಳಗೆ ಪ್ರವೇಶಿಸುತ್ತವೆ. ಕೆಲವೇ ವಾರಗಳೊಳಗೆ, ಆ ಪರೋಪಜೀವಿಗಳು ಬೆಳೆದ ಗಂಡು ಮತ್ತು ಹೆಣ್ಣು ಹುಳಗಳಾಗಿ 25 ಮಿಲಿಮೀಟರುಗಳಷ್ಟು ಉದ್ದ ಬೆಳೆಯುತ್ತವೆ. ಕೂಡಿದ ಬಳಿಕ, ಹೆಣ್ಣು ಹುಳು ಆಶ್ರಯದಾತನ ರಕ್ತಪ್ರವಾಹದೊಳಗೆ ಮೊಟ್ಟೆಗಳನ್ನು ಬಿಡುಗಡೆಮಾಡಿ, ಹೀಗೆ ಜೀವನಚಕ್ರವನ್ನು ಪೂರ್ತಿಗೊಳಿಸುತ್ತದೆ.
ಮೊಟ್ಟೆಗಳಲ್ಲಿ ಸುಮಾರು ಅರ್ಧಾಂಶ, ಆಶ್ರಯದಾತನ ದೇಹವನ್ನು (ಕರುಳಿನ ಶಂಬುಕ ಜ್ವರದಲ್ಲಿ) ಮಲದಲ್ಲಿ ಅಥವಾ (ಮೂತ್ರಸಂಬಂಧದ ಶಂಬುಕ ಜ್ವರದಲ್ಲಿ) ಮೂತ್ರದಲ್ಲಿ ಬಿಟ್ಟುಹೋಗುತ್ತದೆ. ಮೊಟ್ಟೆಗಳಲ್ಲಿ ಉಳಿದದ್ದು, ದೇಹದಲ್ಲಿಯೇ ಉಳಿದು ಪ್ರಮುಖ ಅಂಗಭಾಗಗಳಿಗೆ ಹಾನಿಮಾಡುತ್ತದೆ. ರೋಗವು ಪ್ರಗತಿಗೊಳ್ಳುವಾಗ, ಆ ಬಲಿಪಶುವಿಗೆ ಜ್ವರ ಬರಬಹುದು, ಕಿಬ್ಬೊಟ್ಟೆಯು ಊದಿಕೊಳ್ಳಬಹುದು ಮತ್ತು ಆಂತರಿಕ ರಕ್ತಸ್ರಾವವಾಗಬಹುದು. ಅಂತಿಮವಾಗಿ ಆ ರೋಗವು ಮೂತ್ರಕೋಶದ ಕ್ಯಾನ್ಸರ್ ಅಥವಾ ಪಿತ್ತಜನಕಾಂಗ ಅಥವಾ ಮೂತ್ರಪಿಂಡಗಳ ವೈಫಲ್ಯಕ್ಕೆ ನಡೆಸಬಲ್ಲದು. ಕೆಲವು ಬಲಿಪಶುಗಳು ಬರಡಾಗುತ್ತಾರೆ ಅಥವಾ ಪಾರ್ಶ್ವವಾಯು ಪೀಡಿತರಾಗುತ್ತಾರೆ. ಇತರರು ಸಾಯುತ್ತಾರೆ.
ಪರಿಹಾರಗಳು ಮತ್ತು ಸಮಸ್ಯೆಗಳು
ಈ ರೋಗವು ಹರಡುವುದನ್ನು ತಡೆಗಟ್ಟಲು, ಕಡಮೆಪಕ್ಷ ನಾಲ್ಕು ವಿಷಯಗಳನ್ನಾದರೂ ಮಾಡಸಾಧ್ಯವಿದೆ. ಈ ಕ್ರಮಗಳಲ್ಲಿ ಯಾವುದೇ ಒಂದು ಕ್ರಮವನ್ನು ಸಾರ್ವತ್ರಿಕವಾಗಿ ಅನ್ವಯಿಸುವಲ್ಲಿ, ರೋಗವು ನಿರ್ಮೂಲಗೊಳ್ಳುವುದು.
ಪ್ರಥಮ ಸೂಕ್ತ ಕ್ರಮವು ಜಲಮೂಲಗಳಲ್ಲಿರುವ ಶಂಬುಕಗಳನ್ನು ತೆಗೆದುಹಾಕುವುದೇ. ಶಂಬುಕಗಳು ಆ ಪರೋಪಜೀವಿಯ ಬೆಳವಣಿಗೆಗೆ ಅತ್ಯಾವಶ್ಯಕ. ಶಂಬುಕಗಳಿಲ್ಲದಿರುವಲ್ಲಿ ಶಂಬುಕ ಜ್ವರವೂ ಇಲ್ಲ.
ಶಂಬುಕಗಳನ್ನು ಕೊಲ್ಲುವಷ್ಟು, ಆದರೆ ಪರಿಸರವನ್ನು ಮಲಿನಗೊಳಿಸದಿರುವಷ್ಟು ಬಲಾಢ್ಯವಾದ ಒಂದು ವಿಷವನ್ನು ಉತ್ಪನ್ನಮಾಡುವುದರ ವಿಷಯದಲ್ಲಿ ಮುಖ್ಯ ಪ್ರಯತ್ನವು ನಡೆದಿದೆ. 1960ಗಳಲ್ಲಿ ಮತ್ತು 1970ಗಳಲ್ಲಿ ಮಾಡಿದ, ಶಂಬುಕ ನಿವಾರಣೆಯ ಪ್ರಯತ್ನಗಳು ನೀರಿನ ಮಹಾ ವಿಸ್ತಾರಗಳಲ್ಲಿ ಸಕಲ ಜೀವವನ್ನೂ ನಾಶಮಾಡುವುದರಲ್ಲಿ ಸಫಲಗೊಂಡವು. ಈಜಿಪ್ಟ್ನ ಟೇಓಡೋರ್ ಬಿಲ್ಹಾರ್ಸ್ ರೀಸರ್ಚ್ ಇನ್ಸ್ಟಿಟ್ಯೂಟ್ನಲ್ಲಿ, ಇತರ ಜೀವರೂಪಗಳಿಗೆ ಹಾನಿಮಾಡದ ಒಂದು ಮೃದ್ವಂಗಿ ನಾಶಕ (ಶಂಬುಕ ಹತ್ಯಾಕಾರಿ)ವನ್ನು ಕಂಡುಹಿಡಿಯಲು ಪ್ರಯತ್ನಗಳು ನಡೆದಿವೆ. ಆ ಸಂಘದ ಅಧ್ಯಕ್ಷ, ಡಾ. ಆಲಿ ಸೇನ್ ಎಲ್ ಆಬ್ದೀನ್, ಅಂತಹ ಒಂದು ನಾಶಕದ ಕುರಿತು ಗಮನಿಸುವುದು: “ಇದನ್ನು ಬೆಳೆಗಳನ್ನು ಬೆಳೆಸಲು ಬಳಸುವ, ಜನರು ಮತ್ತು ಪ್ರಾಣಿಗಳು ಕುಡಿಯುವ, ಮತ್ತು ಮೀನು ಜೀವಿಸುವ ನೀರಿಗೆ—ಇವುಗಳಲ್ಲಿ ಯಾವುದಕ್ಕೂ ಹಾನಿಯಾಗುವುದಿಲ್ಲವೆಂದು ನಮಗೆ ಪೂರ್ತಿ ಖಚಿತವಾಗುವಂತೆ—ಎಸೆಯಲಾಗುವುದು.”
ದ್ವಿತೀಯ ಸೂಕ್ತ ಕ್ರಮವು ಮಾನವರಲ್ಲಿರುವ ಪರೋಪಜೀವಿಗಳನ್ನು ಕೊಲ್ಲುವುದೇ. 1970ಗಳ ಮಧ್ಯಭಾಗದ ತನಕ, ಚಿಕಿತ್ಸೆಯಲ್ಲಿ ಅನೇಕ ಪಕ್ಕ ಪರಿಣಾಮಗಳನ್ನೂ ತೊಡಕುಗಳನ್ನೂ ಉಂಟುಮಾಡಿದ ಔಷಧಗಳು ಒಳಗೂಡಿದ್ದವು. ಅನೇಕ ವೇಳೆ, ಚಿಕಿತ್ಸೆಯಲ್ಲಿ ವೇದನಾಭರಿತ ಇಂಜೆಕ್ಷನ್ಗಳು ಸೇರಿದ್ದವು. ರೋಗಕ್ಕಿಂತ ಚಿಕಿತ್ಸೆ ಕೆಡುಕೆಂದು ಕೆಲವರು ಗೊಣಗಿದರು! ಅಂದಿನಿಂದ, ಶಂಬುಕ ಜ್ವರದ ಚಿಕಿತ್ಸೆಗೆ ಪರಿಣಾಮಕಾರಿಯಾಗಿರುವ ಪ್ರೇಸಿಕ್ವಾಂಟೆಲ್ನಂತಹ ಔಷಧಗಳನ್ನು ವಿಕಸಿಸಲಾಗಿದೆ ಮತ್ತು ಇವನ್ನು ಬಾಯಿಯ ಮೂಲಕ ಸೇವಿಸಸಾಧ್ಯವಿದೆ.
ಈ ಔಷಧಗಳು ಆಫ್ರಿಕ ಮತ್ತು ದಕ್ಷಿಣ ಅಮೆರಿಕದ ಕ್ಷೇತ್ರ ಯೋಜನೆಗಳಲ್ಲಿ ಯಶಸ್ವಿ ಹೊಂದಿರುವುದಾದರೂ, ಅನೇಕ ದೇಶಗಳಿಗಿರುವ ಒಂದು ದೊಡ್ಡ ಸಮಸ್ಯೆಯು ತಗಲುವ ಖರ್ಚಾಗಿದೆ. ಡಬ್ಲ್ಯೂಏಚ್ಓ 1991ರಲ್ಲಿ ಪ್ರಲಾಪಿಸಿದ್ದು: “ನಿಯತ ವ್ಯಾಧಿಯಿರುವ ದೇಶಗಳು ದೊಡ್ಡ ಪ್ರಮಾಣದ [ಶಂಬುಕ ಜ್ವರ] ನಿಯಂತ್ರಣ ಕಾರ್ಯಕ್ರಮಗಳನ್ನು ಮುಂದುವರಿಸಲು, ಚಿಕಿತ್ಸೆಯ ದುಬಾರಿ ವೆಚ್ಚದ ಕಾರಣ ಅಶಕ್ತವಾಗಿವೆ; ಔಷಧದ ಭದ್ರನಾಣ್ಯದ ಖರ್ಚೇ, ಸಾಮಾನ್ಯವಾಗಿ, ಆಫ್ರಿಕದ ಹೆಚ್ಚಿನ ಆರೋಗ್ಯ ಸಚಿವಾಲಯಗಳ ತಲಾ ಆಯವ್ಯಯಕ್ಕಿಂತ ಹೆಚ್ಚಾಗಿದೆ.”
ರೋಗಿಗೆ ಔಷಧವನ್ನು ಯಾವ ಖರ್ಚೂ ಇಲ್ಲದೆ ದೊರಕಿಸುವಲ್ಲಿಯೂ, ಅನೇಕ ಜನರು ಚಿಕಿತ್ಸೆಗಾಗಿ ಹೋಗುವುದಿಲ್ಲ. ಏಕೆ? ಆ ರೋಗದಿಂದ ಬರುವ ಮರಣ ಪ್ರಮಾಣವು ಸಾಪೇಕ್ಷವಾಗಿ ಕಮ್ಮಿಯಾಗಿರುವುದು ಒಂದು ಕಾರಣವಾಗಿರುವುದರಿಂದ ಕೆಲವು ಜನರು ಇದೊಂದು ಗಂಭೀರವಾದ ಸಮಸ್ಯೆಯೆಂದೆಣಿಸುವುದಿಲ್ಲ. ಇನ್ನೊಂದು ಕಾರಣವು, ಈ ರೋಗದ ಲಕ್ಷಣಗಳನ್ನು ಜನರು ಯಾವಾಗಲೂ ಗುರುತಿಸದಿರುವುದೇ. ಆಫ್ರಿಕದ ಕೆಲವು ಭಾಗಗಳಲ್ಲಿ, ಮೂತ್ರದಲ್ಲಿ ರಕ್ತವಿರುವುದು (ಈ ರೋಗದ ಒಂದು ಪ್ರಧಾನ ಲಕ್ಷಣ) ಎಷ್ಟು ಸಾಮಾನ್ಯವೆಂದರೆ, ಅದು ಪ್ರೌಢತೆಗೆ ಬೆಳೆಯುವುದರ ಸಾಮಾನ್ಯ ಭಾಗವೆಂದೆಣಿಸಲ್ಪಡುತ್ತದೆ.
ಮೂರನೆಯ ಸೂಕ್ತ ಕ್ರಮವು ಜಲವ್ಯವಸ್ಥೆಗಳಿಂದ ಮೊಟ್ಟೆಗಳನ್ನು ಪ್ರತ್ಯೇಕವಾಗಿಸುವುದೇ. ಸ್ಥಳಿಕ ತೊರೆಗಳು ಮತ್ತು ಕೆರೆಗಳನ್ನು ಮಲಿನಗೊಳಿಸುವುದನ್ನು ತಡೆಗಟ್ಟಲು ಪಾಯಿಖಾನೆಗಳನ್ನು ಕಟ್ಟುವುದಾದರೆ ಮತ್ತು ಅವುಗಳನ್ನು ಪ್ರತಿಯೊಬ್ಬನು ಉಪಯೋಗಿಸುವುದಾದರೆ, ಶಂಬುಕ ಜ್ವರವು ಹಿಡಿಯುವ ಅಪಾಯವನ್ನು ಕಡಮೆ ಮಾಡಸಾಧ್ಯವಿದೆ.
ನಲ್ಲಿ ನೀರಿನ ಸರಬರಾಯಿ ಮತ್ತು ಪಾಯಿಖಾನೆಗಳು ಕಟ್ಟಲ್ಪಟ್ಟಾಗ, ಭೌಗೋಲಿಕ ಅಧ್ಯಯನಗಳು ಆ ರೋಗದಲ್ಲಿ ಗಮನಾರ್ಹವಾದ ಅವನತಿಯನ್ನು ತೋರಿಸಿದರೂ, ಈ ಏರ್ಪಾಡುಗಳು ವ್ಯಾಧಿ ನಿರೋಧದ ಖಾತರಿಯನ್ನು ಕೊಡುವುದಿಲ್ಲ. ಶಂಬುಕ ಜ್ವರವನ್ನು 20ಕ್ಕೂ ಹೆಚ್ಚು ವರ್ಷಗಳಲ್ಲಿ ಸಂಶೋಧಿಸಿದ ಆ್ಯಲನ್ ಫೆನ್ವಿಕ್ ಎಂಬ ವಿಜ್ಞಾನಿಯು ಅವಲೋಕಿಸಿದ್ದು: “ಚಕ್ರವನ್ನು ಮುಂದುವರಿಸಲು ಕಾಲುವೆಯಲ್ಲಿ ಕೇವಲ ಒಬ್ಬ ವ್ಯಕ್ತಿಯ ಮಲವಿಸರ್ಜನೆಯು ಸಾಕು.” ಸೋರುವ ಚರಂಡಿಯ ಪೈಪುಗಳು ಸೋಂಕಿರುವ ಮಲವನ್ನು ಜಲಮೂಲಗಳಿಗೆ ಸುರಿಸುವ ಅಪಾಯವೂ ಇದೆ.
ನಾಲ್ಕನೆಯ ಸೂಕ್ತ ಕ್ರಮವು ಆ ಪರೋಪಜೀವಿಯಿಂದ ಮಲಿನಗೊಂಡಿರುವ ನೀರಿನಿಂದ ಜನರನ್ನು ದೂರವಿರಿಸುವುದೇ. ಇದೂ ಕಾಣುವಷ್ಟು ಸುಲಭವಲ್ಲ. ಅನೇಕ ದೇಶಗಳಲ್ಲಿ, ಕುಡಿಯುವ ನೀರನ್ನು ಒದಗಿಸುವ ಸರೋವರಗಳು, ತೊರೆಗಳು ಮತ್ತು ನದಿಗಳು, ಸ್ನಾನ, ಬೆಳೆಯ ನೀರಾವರಿ ಮತ್ತು ಬಟ್ಟೆ ಒಗೆಯುವಿಕೆಗೂ ಉಪಯೋಗಿಸಲ್ಪಡುತ್ತವೆ. ಬೆಸ್ತರು ದಿನಾಲೂ ಜಲಸಂಪರ್ಕ ಮಾಡುತ್ತಾರೆ. ಮತ್ತು ಉಷ್ಣವಲಯದ ತೀಕ್ಷ್ಣ ಕಾವಿನಲ್ಲಿ, ಮಕ್ಕಳಿಗೆ ನೀರಿನ ಕೆರೆಯು ತಡೆಯಲಾಗದಷ್ಟು ಆಕರ್ಷಕವಾದ ಈಜುಕೊಳವಾಗಿರಬಲ್ಲದು.
ಭವಿಷ್ಯತ್ತಿಗೆ ಏನು ನಿರೀಕ್ಷೆ?
ಯಥಾರ್ಥರಾದ ಜನರು ಮತ್ತು ಸಂಸ್ಥೆಗಳು ಶಂಬುಕ ಜ್ವರದೊಂದಿಗೆ ಹೋರಾಡಲು ಶ್ರದ್ಧಾಪೂರ್ವಕವಾಗಿ ಕೆಲಸಮಾಡುತ್ತಿರುವುದರಲ್ಲಿ ಮತ್ತು ಮಹತ್ತಾದ ಪ್ರಗತಿಯು ಮಾಡಲ್ಪಟ್ಟಿದೆಯೆಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಅದರ ವಿರುದ್ಧ ಒಂದು ಲಸಿಕೆಯನ್ನು ತಯಾರಿಸಲು ಸಹ ಸಂಶೋಧಕರು ಕೆಲಸಮಾಡುತ್ತಿದ್ದಾರೆ.
ಆದರೂ ಈ ರೋಗವನ್ನು ನಿರ್ಮೂಲಗೊಳಿಸುವ ಪ್ರತೀಕ್ಷೆಗಳು ದೂರದಲ್ಲಿರುವಂತೆ ತೋರಿಬರುತ್ತವೆ. ಡಾ. ಎಮ್. ಲಾರೀವ್ಯರ್, ಫ್ರೆಂಚ್ ಮೆಡಿಕಲ್ ಪತ್ರಿಕೆಯಾದ ರವ್ಯೂ ಡ್ಯೂ ಪ್ರಾಟೆಸೀಯದಲ್ಲಿ ಹೇಳುವುದು: “ಸಾಫಲ್ಯಗಳಿದ್ದರೂ . . . ರೋಗವು ಕಾಣೆಯಾಗದೆ ಹೋಗುವುದೇನೂ ಕಂಡುಬರುವುದಿಲ್ಲ.” ನಿರೋಧ ಮತ್ತು ಚಿಕಿತ್ಸೆಗಳು ಒಬ್ಬೊಬ್ಬರಿಗೆ ವಾಸ್ತವಿಕವಾಗಿದ್ದರೂ, ಶಂಬುಕ ಜ್ವರದ ಸಮಸ್ಯೆಗಿರುವ ಸಾರ್ವತ್ರಿಕ ಪರಿಹಾರವು, ದೇವರ ನೂತನ ಲೋಕವು ಇಲ್ಲಿ ಸ್ಥಾಪಿತವಾಗುವ ವರೆಗೆ ಕಂಡುಹಿಡಿಯಲ್ಪಡಲಿಕ್ಕಿಲ್ಲ. ಅಲ್ಲಿ “ಯಾವ ನಿವಾಸಿಯೂ ತಾನು ಅಸ್ವಸ್ಥನು ಎಂದು ಹೇಳನು” ಎಂದು ಬೈಬಲು ವಾಗ್ದಾನಿಸುತ್ತದೆ.—ಯೆಶಾಯ 33:24.
[ಪುಟ 26 ರಲ್ಲಿರುವ ಚಿತ್ರ]
ಮಾನವರು ಮಲಿನಗೊಂಡಿರುವ ನೀರನ್ನು ಪ್ರವೇಶಿಸುವಾಗ, ಶಂಬುಕ ಜ್ವರವನ್ನು ಉಂಟುಮಾಡುವ ಪರೋಪಜೀವಿಗಳಿಂದ ಅವರು ಸೋಂಕಿತರಾಗಸಾಧ್ಯವಿದೆ