ಪರೋಪಜೀವಿಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಿ!
ಹಾಂಡುರಸ್ನಲ್ಲಿರುವ ಎಚ್ಚರ! ಸುದ್ದಿಗಾರರಿಂದ
ನಿದ್ರೆಯಿಂದ ಎಚ್ಚರವಾಗುತ್ತಲೇ ನಿಮಗೆ ಓಕರಿಕೆಯ ಅನಿಸಿಕೆಯಾಗುತ್ತದೆ. ನೀವು ಬೇಗನೆ ಬಳಲಿ ಹೋಗುತ್ತೀರಿ. ನಿಮ್ಮ ಹೊಟ್ಟೆ ಸ್ವಲ್ಪ ಉಬ್ಬಿರುವಂತೆ ತೋರುತ್ತದೆ. ಇದು ಗರ್ಭಧರಿಸಿರುವ ಸೂಚನೆಯಾಗಿರಬಹುದೇ? ಇರಲೂಬಹುದು. ಆದರೆ ಉಷ್ಣವಲಯದಲ್ಲಿ ಇಲ್ಲವೇ ಉಷ್ಣವಲಯದ ಅಂಚಿನಲ್ಲಿರುವ ಪ್ರದೇಶದಲ್ಲಿ ನೀವು ಜೀವಿಸುತ್ತಿರುವುದಾದರೆ, ಅದು ಯಾವುದೋ ಒಂದು ರೀತಿಯ ಕರುಳಿನ ಪರೋಪಜೀವಿಯ (ಜಂತುಹುಳುವಿನ) ಸಮಸ್ಯೆಯಾಗಿರಬಹುದು. ಕರುಳಿನ ಪರೋಪಜೀವಿಗಳು ಎಂದರೇನು ಮತ್ತು ಈ ಅನಪೇಕ್ಷಿತ ಅತಿಥಿಗಳಿಗೆ ಆತಿಥೇಯರಾಗಿ ಆಶ್ರಯವನ್ನು ನೀಡುತ್ತಿರಬಹುದೆಂಬುದನ್ನು ನೀವು ಹೇಗೆ ತಿಳಿದುಕೊಳ್ಳುವಿರಿ?
ಸರಳವಾಗಿ ಹೇಳುವುದಾದರೆ, ಪರೋಪಜೀವಿಯು ಒಂದು ಸಜೀವ ಪ್ರಾಣಿಯಾಗಿದ್ದು, ಅದು ಒಂದು ಜೀವಿಯ ಒಳಗೆ ಅಥವಾ ಮೇಲೆ ನೆಲಸಿ ತಾವಿದ್ದ ಕಡೆಯೇ ತಮ್ಮ ಆತಿಥೇಯ ಜೀವಿಯಿಂದ ಯಾವುದಾದರೂ ಒಂದು ರೀತಿಯ ಪ್ರಯೋಜನವನ್ನು ಪಡೆದುಕೊಳ್ಳುತ್ತದೆ. ಕರುಳಿನ ಎರಡು ರೀತಿಯ ಪರೋಪಜೀವಿಗಳು ಪ್ರೋಟಸೋವ ಏಕಾಣುಜೀವಿಗಳಾಗಿದ್ದು, ಅವುಗಳಲ್ಲಿ ಅಮೀಬಗಳು ಮತ್ತು ಹೆಲ್ಮಿಂತ್ ಹುಳುಗಳು ಅಥವಾ ಜಂತುಗಳು ಒಳಗೂಡಿವೆ. ಆತಿಥೇಯ ಜೀವಿಗಾಗುವ ಹಾನಿಯ ಪ್ರಮಾಣವು ಪರೋಪಜೀವಿಯ ವರ್ಗ ಮತ್ತು ಅವುಗಳ ಸಂಖ್ಯೆ ಹಾಗೂ ಆತಿಥೇಯ ಜೀವಿಯ ವಯಸ್ಸು ಮತ್ತು ಆರೋಗ್ಯದ ಮೇಲೆ ಅವಲಂಬಿಸಿರುತ್ತದೆ.
ಉದಾಹರಣೆಗೆ, ಹೆಣ್ಣು ದುಂಡುಹುಳುವಿಗೆ ಒಂದು ದಿನಕ್ಕೆ 2,00,000 ಮೊಟ್ಟೆಗಳನ್ನಿಡುವ ಸಾಮರ್ಥ್ಯವಿದೆ. ಹೀಗಿದ್ದರೂ, ಮೊಟ್ಟೆಗಳು ಮರಿಗಳಾಗಬೇಕಾದರೆ ಅವು ಮಣ್ಣಿನಲ್ಲಿ ಕಾವಿಗೊಳಗಾಗಬೇಕು. ಒಬ್ಬ ವ್ಯಕ್ತಿಯು ಹೊಂದಿರಬಹುದಾದ ದುಂಡುಹುಳುಗಳ ಸಂಖ್ಯೆಯು ಅವನು ಸೇವಿಸಿರುವ ತತ್ತಿಗಳು ಅಥವಾ ಮರಿಹುಳುಗಳ ಮೇಲೆ ಅವಲಂಬಿಸಿರುತ್ತದೆ. ಅನೇಕರು ತಮಗರಿವಿಲ್ಲದೇ ಕೆಲವೊಂದು ದುಂಡುಹುಳುಗಳಿಗಾದರೂ ಆತಿಥೇಯರಾಗಿ ಆಶ್ರಯ ನೀಡುತ್ತಾರೆ. ಆದರೆ ಹೆಚ್ಚಿನ ಸಂಖ್ಯೆಯ ದುಂಡುಹುಳುಗಳು ಕರುಳಿನಲ್ಲಿ ತೀವ್ರ ಅಡಚಣೆಯನ್ನು ಉಂಟುಮಾಡಬಲ್ಲವು.
ಕರುಳಿನ ಜಂತುರೋಗಗಳಿಗೆ ಕೆಲವು ಸಾಮಾನ್ಯ ರೋಗಲಕ್ಷಣಗಳು ಯಾವುವೆಂದರೆ, ಕಿಬ್ಬೊಟ್ಟೆಯ ನೋವು, ಓಕರಿಕೆ, ಹಸಿವೆ ಇಲ್ಲದಿರುವಿಕೆ, ಕಿಬ್ಬೊಟ್ಟೆಯ ಊತ, ಆಯಾಸ, ಮತ್ತು ಅಸ್ಥಿಗತ ಅಜೀರ್ಣ, ಭೇದಿ, ಇಲ್ಲವೆ ಮಲಬದ್ಧತೆಗಳಾಗಿವೆ. ತೂಕದಲ್ಲಿ ಇಳಿತ, ವಿಶ್ರಾಂತಿಯಿಲ್ಲದ ನಿದ್ರೆ, ಮೈತುರಿಕೆ, ಉಸಿರಾಟದ ತೊಂದರೆ ಮತ್ತು ಜ್ವರವು ಸಹ ಪರೋಪಜೀವಿಗಳ ಅಸ್ತಿತ್ವದ ಸೂಚನೆಗಳಾಗಿವೆ. ಹೌದು, ಈ ರೋಗಲಕ್ಷಣಗಳು ಇನ್ನಿತರ ಅನೇಕ ರೋಗಗಳಿಗೂ ಸೂಚನೆಯಾಗಿರಬಹುದು. ಆದರೆ ಹಲವಾರು ಮಲ ಪರೀಕ್ಷೆಗಳನ್ನು ಮಾಡುವ ಮೂಲಕ ಪರೋಪಜೀವಿಗಳ ಇರುವಿಕೆಯನ್ನು ಪತ್ತೆಮಾಡಬಹುದಾಗಿದೆ.
ಸೂಕ್ತವಾದ ಪರೀಕ್ಷೆಯು ಹೆಚ್ಚು ಆವಶ್ಯಕವಾಗಿದೆ. ಉದಾಹರಣೆಗೆ, ಒಂದುವೇಳೆ ದುಂಡುಹುಳುಗಳು ಮತ್ತು ಬೇರೆ ರೀತಿಯ ಜಂತುಗಳು ಇರುವುದಾದರೆ, ಮೊದಲು ದುಂಡುಹುಳುವಿಗೆ ಚಿಕಿತ್ಸೆ ನೀಡಬೇಕಾಗಿದೆ. ಏಕೆ? ಏಕೆಂದರೆ ಕೆಲವು ಔಷಧಿಗಳು ಜಂತುಗಳನ್ನು ನಿರ್ಮೂಲನ ಮಾಡದೆ ಅವುಗಳನ್ನು ಕೇವಲ ಕೆರಳಿಸಿ ಅವು ಶರೀರದ ಇತರ ಅವಯವಗಳಿಗೆ ವಲಸೆಹೋಗಲು ದಾರಿಮಾಡಿಕೊಡುತ್ತಾ ಗಂಭೀರವಾದ ಹಾನಿಯನ್ನು ಉಂಟುಮಾಡಬಲ್ಲವು.
ರೋಗ ನಿವಾರಣೆಗಿಂತ ತಡೆಗಟ್ಟುವುದೇ ಮೇಲು
ಪರೋಪಜೀವಿಗಳನ್ನು ತೊಲಗಿಸುವುದರಲ್ಲಿ ಔಷಧ ಚಿಕಿತ್ಸೆಯು ಪರಿಣಾಮಕಾರಿಯಾಗಿ ರುಜುವಾಗಿದೆಯಾದರೂ, ಅವುಗಳಿಂದ ಸೋಂಕಿತರಾಗದಂತೆ ಮೊದಲೇ ಎಚ್ಚರವಹಿಸುವುದು ಹೆಚ್ಚು ಉತ್ತಮ. ಹಾಗಾದರೆ ಪರೋಪಜೀವಿಗಳಿಂದ ನಿಮ್ಮನ್ನು ಹೇಗೆ ರಕ್ಷಿಸಿಕೊಳ್ಳಬಲ್ಲಿರಿ?
ನೈರ್ಮಲ್ಯತೆ ಒಂದು ಅತ್ಯುತ್ತಮ ರಕ್ಷಣೆಯಾಗಿದೆ. ಮಲವಿಸರ್ಜಿತಗಳನ್ನು ಹಾಗೇ ಬಯಲಲ್ಲಿ ಗಾಳಿಗೆ ಬಿಡಬಾರದು. ನೀರಿರುವ ಮೂಲಗಳಿಂದ ಶೌಚಾಲಯಗಳು ಆದಷ್ಟು ದೂರದಲ್ಲಿರುವುದು ಸುರಕ್ಷಿತ. ಮಾನವ ಮಲವನ್ನು ಗೊಬ್ಬರವಾಗಿ ಉಪಯೋಗಿಸಬಾರದು. ಯೋಗ್ಯ ಆರೋಗ್ಯ ಸೂತ್ರಗಳು ಸಹ ಪ್ರಾಮುಖ್ಯವಾಗಿವೆ. ಅಷ್ಟು ಮಾತ್ರವಲ್ಲದೆ, ಮಕ್ಕಳು ಹೊಲಸು ಪದಾರ್ಥಗಳನ್ನು ತಿನ್ನುವಂತೆ ಬಿಡಬೇಡಿ. ಒಂದು ಮಗುವಿನಲ್ಲಿ ಪರೋಪಜೀವಿಯು ಇದೆಯೆಂದು ಕಂಡುಬರುವಲ್ಲಿ ಇಡೀ ಪರಿವಾರವು ತಪಾಸಣೆಯನ್ನು ಮಾಡಿಸಿಕೊಳ್ಳುವುದು ಒಳ್ಳೆಯದು.
ಆಹಾರ ಪದಾರ್ಥಗಳನ್ನು ಖರೀದಿಸುವಾಗ ಮತ್ತು ಅಡಿಗೆ ಮಾಡುವಾಗ ಜಾಗ್ರತೆಯನ್ನು ವಹಿಸಬೇಕು. ಒಳ್ಳೆಯ ನೈರ್ಮಲ್ಯ ವ್ಯವಸ್ಥೆಗಾಗಿ ಹೆಸರುವಾಸಿಯಾಗಿರುವ ಸ್ಥಳಗಳಲ್ಲಿ ಬೆಳೆಸುವ ಆಹಾರ ಪದಾರ್ಥಗಳನ್ನು ಖರೀದಿಸಲು ಪ್ರಯತ್ನಿಸಿ. ಮಾಂಸದ ಮಧ್ಯಭಾಗವನ್ನು ಚೆನ್ನಾಗಿ ಬೇಯಿಸಿರಿ. ಹಸಿ ಮಾಂಸವನ್ನು ಎಂದೂ ತಿನ್ನಬೇಡಿ. ಹಸಿ ತರಕಾರಿಗಳು ಮತ್ತು ಹಣ್ಣುಹಂಪಲುಗಳನ್ನು ಮೊದಲು ಚೆನ್ನಾಗಿ ತೊಳೆಯಿರಿ. ಒಮ್ಮೆ ಬಳಸಿದ ನೀರು ಕಲುಷಿತಗೊಂಡಿರಬಹುದಾದ್ದರಿಂದ ಅದನ್ನು ಮತ್ತೊಮ್ಮೆ ಉಪಯೋಗಿಸದಂತೆ ಎಚ್ಚರವಹಿಸಿ.
ಕುಡಿಯುವ ನೀರನ್ನು ಚೆನ್ನಾಗಿ ಕುದಿಸಬೇಕು. ನೀರು ತಣ್ಣಗಾದ ನಂತರ ಆಮ್ಲಜನಕವನ್ನು ಪೂರ್ವಸ್ಥಿತಿಗೆ ತರಲು ಅದನ್ನು ಗಾಳಿಗೊಡ್ಡಬಹುದು. ಅಧಿಕಾಂಶ ಮನೆಗಳಲ್ಲಿರುವ ಫಿಲ್ಟರುಗಳು ಎಲ್ಲಾ ಪರೋಪಜೀವಿಗಳನ್ನು ತೊಲಗಿಸಲು ಸಾಮರ್ಥ್ಯವಾಗಿರುವುದಿಲ್ಲ. ವ್ಯಾಪಾರಕ್ಕಾಗಿ ಸೀಸೆಯಲ್ಲಿ ತುಂಬಿಸಿಟ್ಟಿರುವ ನೀರಿನ ಶುದ್ಧತೆಯು, ಕಾರ್ಖಾನೆಯಲ್ಲಿ ಅದನ್ನು ಶುಚಿಗೊಳಿಸುವ ಕಾರ್ಯಗತಿಯಲ್ಲಿ ಆರೋಗ್ಯ ನಿಯಮಗಳಿಗಾಗಿ ತೆಗೆದುಕೊಂಡಿರುವ ಮುನ್ನೆಚ್ಚರಿಕೆಯ ಮೇಲೆ ಅವಲಂಬಿಸಿರುತ್ತದೆ.
ಪ್ರಯಾಣ ಮಾಡುವಾಗ ಇಲ್ಲವೇ ಹೊರಗಿನ ಸ್ಥಳಗಳಲ್ಲಿ ಊಟಮಾಡುವಾಗ ಇನ್ನೂ ಹೆಚ್ಚಿನ ಮುನ್ನೆಚ್ಚರಿಕೆಗಳು ಅಗತ್ಯವಿದೆ. ಸೀಸೆಯಲ್ಲಿ ಮತ್ತು ಕಾರ್ಟನ್ (ರಟ್ಟು ಪೆಟ್ಟಿಗೆ)ಗಳಲ್ಲಿ ತುಂಬಿಸಿಡಲ್ಪಟ್ಟು ಐಸ್ ಹಾಕದೆ ನೀಡಲ್ಪಡುವ ಪಾನೀಯಗಳು ಸುರಕ್ಷಿತವಾಗಿರುತ್ತವೆ. ಕೆಲವು ಪರೋಪಜೀವಿಗಳು ಘನೀಕರಿಸುವ ತಾಪಮಾನದಲ್ಲೂ ಬದುಕಿರುವ ಸಾಮರ್ಥ್ಯವಿದೆ, ಐಸ್ಗಡ್ಡೆಯು ಅದು ಮಾಡಲ್ಪಟ್ಟ ನೀರಿನಷ್ಟೇ ಶುದ್ಧವಾಗಿರುತ್ತದೆ. ರಸ್ತೆಬದಿಯ ಮಾರಾಟಗಾರರಿಂದ ಆಹಾರ ತಿನಿಸುಗಳನ್ನು ಕೊಂಡು ತಿನ್ನುವ ವಿಷಯದಲ್ಲಿ ನೀವು ಎಚ್ಚರಿಕೆಯುಳ್ಳವರಾಗಿರಲು ಬಯಸಬಹುದು. ಕತ್ತರಿಸಿಟ್ಟಿರುವ ಅನಾನಸು ಇಲ್ಲವೇ ಕಲ್ಲಂಗಡಿ ಹಣ್ಣು ನಿಮ್ಮ ಬಾಯಲ್ಲಿ ನೀರೂರಿಸುವಂತಿರಬಹುದು, ಆದರೆ ಕಲುಷಿತಗೊಂಡಿರಬಹುದಾದ ನೀರನ್ನು ಅವುಗಳ ಮೇಲೆ ಆಗಾಗ್ಗೆ ಚಿಮುಕಿಸುವ ಮೂಲಕ ಅವನ್ನು ತಾಜಾತನದಲ್ಲಿ ಇಡಲಾಗುತ್ತದೆ. ಎಚ್ಚರವಹಿಸಿರಿ, ಆದರೆ ನಿಮ್ಮ ಪ್ರವಾಸವನ್ನು ಇನ್ನು ಮುಂದೆ ಆನಂದಿಸಸಾಧ್ಯವಾಗದಷ್ಟು ಬುದ್ಧಿವಿಕಲ್ಪವನ್ನು ತೋರಿಸಬೇಡಿ. ಸೂಕ್ತವಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವ ಮೂಲಕ ಪರೋಪಜೀವಿಗಳಿಂದ ನಿಮ್ಮನ್ನು ನೀವೇ ರಕ್ಷಿಸಿಕೊಳ್ಳಲು ಅನೇಕ ವಿಷಯಗಳನ್ನು ಮಾಡಸಾಧ್ಯವಿದೆ.
[ಪುಟ 24 ರಲ್ಲಿರುವ ಚಿತ್ರ]
ನೈರ್ಮಲ್ಯತೆ ಒಂದು ಅತ್ಯುತ್ತಮ ರಕ್ಷಣೆಯಾಗಿದೆ
[ಪುಟ 25 ರಲ್ಲಿರುವ ಚಿತ್ರ]
ಐಸ್ಗಡ್ಡೆ ಅದು ಮಾಡಲ್ಪಟ್ಟಿರುವ ನೀರಿನಷ್ಟೇ ಶುದ್ಧವಾಗಿರುತ್ತದೆ
[ಪುಟ 25 ರಲ್ಲಿರುವ ಚಿತ್ರಗಳು]
ಅಮೀಬಗಳು ಮತ್ತು ಜಂತುಗಳು ಎರಡು ರೀತಿಯ ಪರೋಪಜೀವಿಗಳು
[ಕೃಪೆ]
DPDx, the CDC Parasitology Website