ಮಕ್ಕಳ ಲೈಂಗಿಕ ಶೋಷಣೆ ಒಂದು ಲೋಕವ್ಯಾಪಕ ಸಮಸ್ಯೆ
ಸ್ವೀಡನ್ನ ಎಚ್ಚರ! ಸುದ್ದಿಗಾರರಿಂದ
ಮಾನವ ಸಮಾಜವು, ಮಕ್ಕಳ ದುರ್ಬಳಕೆಯ ಒಂದು ತಲ್ಲಣಗೊಳಿಸುವ ವಿಧದಿಂದ ಕ್ಷೋಭೆಗೊಳಪಡಿಸಲ್ಪಡುತ್ತಿದೆ. ಅದು ಇತ್ತೀಚಿನ ವರ್ಷಗಳ ವರೆಗೆ ವ್ಯಾಪಕವಾಗಿ ತಿಳಿದಿರದ ವ್ಯಾಪ್ತಿ ಮತ್ತು ಸ್ವರೂಪದ್ದಾಗಿದೆ. ಅದರ ಕುರಿತು ಏನು ಮಾಡಸಾಧ್ಯವಿದೆ ಎಂಬುದನ್ನು ಅವಲೋಕಿಸಲು, 130 ರಾಷ್ಟ್ರಗಳ ಪ್ರತಿನಿಧಿಗಳು, ಸ್ವೀಡನ್ನ ಸ್ಟಾಕ್ಹೋಮ್ನಲ್ಲಿ, ಮಕ್ಕಳ ವ್ಯಾಪಾರಿ ಲೈಂಗಿಕ ಶೋಷಣೆಯ ವಿರುದ್ಧ ಪ್ರಥಮ ಲೋಕ ಸಮ್ಮೇಳನದಲ್ಲಿ ಕೂಡಿಬಂದರು. ಸ್ವೀಡನ್ನ ಒಬ್ಬ ಎಚ್ಚರ! ಸುದ್ದಿಗಾರನೂ ಅಲ್ಲಿದ್ದನು.
ಮ್ಯಾಗ್ಡಾಲೆನ್ 14 ವರ್ಷ ಪ್ರಾಯದವಳಾಗಿದ್ದಾಗ, ಅವಳು ಫಿಲಿಪ್ಪೀನ್ಸ್ನ ಮನಿಲಾದಲ್ಲಿರುವ ಒಂದು ಬೀಯರ್ ಅಂಗಡಿಯಲ್ಲಿ “ಆತಿಥೇಯ”ಳಂತೆ ಕಾರ್ಯಮಾಡುವ ಉದ್ಯೋಗಕ್ಕೆ ಸೆಳೆಯಲ್ಪಟ್ಟಳು. ವಾಸ್ತವದಲ್ಲಿ ಅವಳ ಕೆಲಸವು, ಪುರುಷ ಗಿರಾಕಿಗಳನ್ನು ಒಂದು ಚಿಕ್ಕ ಕೋಣೆಗೆ ಕರೆದುಕೊಂಡು ಹೋಗಿ ಅವರ ಲೈಂಗಿಕ ಶೋಷಣೆಗೆ ತನ್ನ ದೇಹವನ್ನು ತೆರೆದು ತೋರಿಸುವುದನ್ನು ಒಳಗೊಂಡಿತು—ಪ್ರತಿ ರಾತ್ರಿ ಸರಾಸರಿಯಾಗಿ 15 ಪುರುಷರು ಮತ್ತು ಶನಿವಾರಗಳಂದು 30 ಪುರುಷರು. ಇನ್ನು ಮುಂದೆ ಅದನ್ನು ತಾಳಿಕೊಳ್ಳಲು ತನಗೆ ಸಾಧ್ಯವಿಲ್ಲವೆಂದು ಅವಳು ಕೆಲವೊಮ್ಮೆ ಹೇಳಿದಾಗ, ಮುಂದುವರಿಸಿಕೊಂಡು ಹೋಗುವಂತೆ ಅವಳ ಯಜಮಾನನು ಅವಳನ್ನು ಒತ್ತಾಯಿಸುತ್ತಿದ್ದನು. ಅವಳು ಅನೇಕ ವೇಳೆ ತನ್ನ ಕೆಲಸದ ದಿನವನ್ನು ಬೆಳಗ್ಗೆ ನಾಲ್ಕು ಗಂಟೆಗೆ, ದಣಿದು, ಖಿನ್ನಳಾಗಿ ಮತ್ತು ತುಚ್ಛ ಅನಿಸಿಕೆಯೊಂದಿಗೆ ಕೊನೆಗೊಳಿಸುತ್ತಿದ್ದಳು.
ಸಾರೂನ್, ಕ್ಯಾಂಬೋಡಿಯದ ಪ್ನಾಮ್ ಪೆನ್ನ ದಿಕ್ಕಿಲ್ಲದ ಒಬ್ಬ ಎಳೆಯ ಅನಾಥ ಹುಡುಗ. ಅವನಿಗೆ ಮೇಹರೋಗ (ಸಿಫಿಲಿಸ್)ವಿತ್ತು ಮತ್ತು ಅವನು ವಿದೇಶೀಯರೊಂದಿಗೆ ಸಂಭೋಗಮಾಡಿದನೆಂಬುದು ವಿದಿತವಾಗಿತ್ತು. ಅವನಿಗೆ ಒಂದು ದೇವಸ್ಥಾನದಲ್ಲಿ ವಸತಿಯು ಕೊಡಲಾಗಿತ್ತು. ಅಲ್ಲಿ ಒಬ್ಬ ಮಾಜಿ ಸಂನ್ಯಾಸಿಯು ಅವನನ್ನು ‘ನೋಡಿಕೊಳ್ಳ’ಲಿದ್ದನು. ಆದರೆ, ಈ ಮನುಷ್ಯನು ಹುಡುಗನನ್ನು ಲೈಂಗಿಕವಾಗಿ ದುರುಪಯೋಗಿಸಿ, ವಿದೇಶೀಯರೊಂದಿಗೆ ಸಂಭೋಗಕ್ಕಾಗಿ ಅವನನ್ನು ಲಭ್ಯಗೊಳಿಸಿದನು. ದೇವಸ್ಥಾನದಲ್ಲಿದ್ದ ಸಾರೂನನ ವಸತಿಯು ಹಾಳುಮಾಡಲ್ಪಟ್ಟಾಗ, ಅವನು ತನ್ನ ಸೋದರತ್ತೆಯೊಂದಿಗೆ ವಾಸಿಸತೊಡಗಿದನಾದರೂ ಪುರುಷ ವೇಶ್ಯಾವಾಟಿಕೆಯಲ್ಲಿ ಮುಂದುವರಿಯುವಂತೆ ನಿರ್ಬಂಧಿಸಲ್ಪಟ್ಟನು.
ಇವು, ಕಳೆದ ವರ್ಷದ ಕೊನೆಯ ಭಾಗದಲ್ಲಿ, ಮಕ್ಕಳ ವ್ಯಾಪಾರಿ ಲೈಂಗಿಕ ಶೋಷಣೆಯ ವಿರುದ್ಧ ಲೋಕ ಸಭೆಯಲ್ಲಿ ನಿರ್ವಹಿಸಲ್ಪಟ್ಟ ಈ ಭಯಂಕರ ಸಮಸ್ಯೆಯ ಕೇವಲ ಎರಡು ಉದಾಹರಣೆಗಳಾಗಿವೆ. ಈ ಆಚರಣೆಯು ಎಷ್ಟು ವ್ಯಾಪಕವಾಗಿದೆ? ಲಕ್ಷಾಂತರ ಮಕ್ಕಳು ಇದರಲ್ಲಿ ಸೇರಿದ್ದಾರೆ—ನಿಶ್ಚಯವಾಗಿಯೂ ಕೋಟಿಗಳಷ್ಟು ಮಕ್ಕಳು ಎಂದು ಕೆಲವರು ಹೇಳುತ್ತಾರೆ. ಒಬ್ಬ ಪ್ರತಿನಿಧಿಯು ಸಮಸ್ಯೆಯನ್ನು ಸಾರಾಂಶಿಸಿದ್ದು: “ಮಕ್ಕಳನ್ನು ಲೈಂಗಿಕ ಹಾಗೂ ಆರ್ಥಿಕ ವಸ್ತುಗಳಂತೆ ಖರೀದಿಸಿ, ಮಾರಲಾಗುತ್ತದೆ. ಅವರನ್ನು ಕಳ್ಳ ಮಾಲಿನಂತೆ ಗಡಿನಾಡಿನೊಳಗೆ ಮತ್ತು ಗಡಿನಾಡಿನಾಚೆ ವಿನಿಮಯ ಮಾಡಲಾಗುತ್ತದೆ, ವೇಶ್ಯಾಗೃಹಗಳಲ್ಲಿ ಬಂಧಿಸಲ್ಪಟ್ಟು, ಅಧಿಕ ಸಂಖ್ಯೆಯ ಲೈಂಗಿಕ ಶೋಷಣೆಗಾರರಿಗೆ ಅಧೀನರಾಗುವಂತೆ ಒತ್ತಾಯಿಸಲಾಗುತ್ತದೆ.”
ಕೂಡಿಬಂದವರಿಗೆ, ಸ್ವೀಡನ್ನ ಪ್ರಧಾನ ಮಂತ್ರಿಗಳಾದ ಯೋರಾನ್ ಪರ್ಸನ್ ತಮ್ಮ ಆರಂಭದ ಹೇಳಿಕೆಯಲ್ಲಿ, ಈ ಶೋಷಣೆಯನ್ನು “ಪಾತಕದ ಅತ್ಯಂತ ಕ್ರೂರ, ಅತ್ಯಂತ ಅನಾಗರಿಕ ಹಾಗೂ ಅಸಹ್ಯಕರ ಬಗೆ” ಎಂಬುದಾಗಿ ಹೆಸರಿಸಿದರು. ವಿಶ್ವ ಸಂಸ್ಥೆಯ ಪ್ರತಿನಿಧಿಯೊಬ್ಬಳು ಹೇಳಿದ್ದೇನೆಂದರೆ, ಇದು “ವಿಭಿನ್ನ ವಿಧಗಳಲ್ಲಿ ಮಕ್ಕಳ ಮೇಲೆ ಮಾಡುವ ಒಂದು ಆಕ್ರಮಣವಾಗಿದೆ . . . , ಇದು ಸಂಪೂರ್ಣವಾಗಿ ಕೆಟ್ಟದ್ದು ಮತ್ತು ಮಾನವ ಹಕ್ಕುಗಳ ವಿಷಯದಲ್ಲಿ ಊಹಿಸಬಹುದಾದ ಅತ್ಯಂತ ಹೇಯ ಉಲ್ಲಂಘನೆಯಾಗಿದೆ.” ಮಕ್ಕಳ ಲೈಂಗಿಕ ಶೋಷಣೆಯ ವ್ಯಾಪ್ತಿ, ಸ್ವರೂಪ, ಕಾರಣಗಳು ಹಾಗೂ ಪರಿಣಾಮಗಳು ಪರಿಗಣಿಸಲ್ಪಟ್ಟಂತೆ, ಸಭೆಯ ಆದ್ಯಂತ ಅದರ ವಿರುದ್ಧ ವೇದಿಕೆಯಿಂದ ತದ್ರೀತಿಯ ಅನೇಕ ಕೋಪಾವೇಶದ ಅಭಿವ್ಯಕ್ತಿಗಳು ಕೇಳಿಬಂದವು.
“ಅದರ ವ್ಯಾಪ್ತಿ ರಾಷ್ಟ್ರೀಯ ಗಡಿನಾಡುಗಳನ್ನು ಮೀರುತ್ತದೆ ಮತ್ತು ಅದರ ಪರಿಣಾಮವು ಒಂದು ಸಂತತಿಯಿಂದ ಮುಂದಿನ ಸಂತತಿಯ ವರೆಗೆ ವಿಸ್ತರಿಸುತ್ತದೆ,” ಎಂಬುದಾಗಿ ಒಂದು ಮೂಲವು ಅದನ್ನು ವ್ಯಕ್ತಪಡಿಸಿತು. ಮತ್ತೊಂದು ಹೇಳಿದ್ದು: “ಪ್ರತಿ ವರ್ಷ ಅಂದಾಜುಮಾಡಲ್ಪಟ್ಟ ಹತ್ತು ಲಕ್ಷ ಮಕ್ಕಳು ಈ ನವಕೋಟಿ ಡಾಲರಿನ ಕಾನೂನುಬಾಹಿರ ಲೈಂಗಿಕ ಮಾರುಕಟ್ಟೆಯನ್ನು ಪ್ರವೇಶಿಸುತ್ತಾರೆಂದು ನಂಬಲಾಗುತ್ತದೆ.” ಯಾವ ಪರಿಣಾಮದೊಂದಿಗೆ? “ಮಕ್ಕಳಿಗಿರುವ ಘನತೆಯ ಪ್ರಜ್ಞೆ, ಗುರುತು ಮತ್ತು ಆತ್ಮ ಗೌರವ ಕುಗ್ಗಿಸಲ್ಪಡುತ್ತದೆ ಮತ್ತು ಭರವಸೆಯಿಡುವ ಅವರ ಸಾಮರ್ಥ್ಯ ಮಂದವಾಗುತ್ತದೆ. ಅವರ ಶಾರೀರಿಕ ಹಾಗೂ ಭಾವಾತ್ಮಕ ಆರೋಗ್ಯವು ಗಂಡಾಂತರಕ್ಕೊಳಗಾಗುತ್ತದೆ, ಅವರ ಹಕ್ಕುಗಳು ಉಲ್ಲಂಘಿಸಲ್ಪಡುತ್ತವೆ ಮತ್ತು ಅವರ ಭಾವಿ ಜೀವನಗಳು ಅಪಾಯಕ್ಕೊಳಗಾಗಿಸಲ್ಪಡುತ್ತವೆ.”
ಕೆಲವು ಕಾರಣಗಳು
ಈ ಸಮಸ್ಯೆಯ ಸ್ಫೋಟಕ ಬೆಳವಣಿಗೆಗಿರುವ ಕೆಲವು ಕಾರಣಗಳಾವುವು? ಕೆಲವು ಮಕ್ಕಳು “ವೇಶ್ಯಾವಾಟಿಕೆಯಲ್ಲಿ ಪರಿಸ್ಥಿತಿಗಳಿಂದಾಗಿ, ಬೀದಿಗಳಲ್ಲಿ ಬದುಕುವ ಒಂದು ವಿಧವಾಗಿ, ತಮ್ಮ ಕುಟುಂಬಗಳನ್ನು ಬೆಂಬಲಿಸಲು ಸಹಾಯ ಮಾಡುವುದಕ್ಕಾಗಿ, ಇಲ್ಲವೆ ಬಟ್ಟೆಗಳು ಮತ್ತು ವಸ್ತುಗಳಿಗೆ ಹಣತೆರಲಿಕ್ಕಾಗಿ ತಳ್ಳಲ್ಪಡುತ್ತಾರೆ. ಇತರರು ಜಾಹೀರಾತು ಮಾಧ್ಯಮದಲ್ಲಿ ತೋರಿಸಲ್ಪಡುವ ಗಿರಾಕಿಗಳ ಸುರಿಮಳೆಯಿಂದ ಆಕರ್ಷಿಸಲ್ಪಡುತ್ತಾರೆ,” ಎಂದು ಹೇಳಲಾಯಿತು. ಇನ್ನೂ ಇತರರು ಅಪಹರಿಸಲ್ಪಟ್ಟು, ವೇಶ್ಯಾವಾಟಿಕೆಯಲ್ಲಿ ತೊಡಗುವಂತೆ ಒತ್ತಾಯಿಸಲ್ಪಡುತ್ತಾರೆ. ಎಲ್ಲೆಡೆಯೂ ನೈತಿಕ ಮೌಲ್ಯಗಳ ಕ್ಷಿಪ್ರವಾದ ಸವೆತ, ಅಷ್ಟೇ ಅಲ್ಲದೆ ಸಾಮಾನ್ಯವಾಗಿರುವ ಆಶಾರಾಹಿತ್ಯದ ಪ್ರಜ್ಞೆ, ಉಲ್ಲೇಖಿಸಲ್ಪಟ್ಟ ಕಾರಣಗಳಲ್ಲಿ ಕೆಲವಾಗಿದ್ದವು.
ಅನೇಕ ಹುಡುಗಿಯರು ಮತ್ತು ಹುಡುಗರು ಲೈಂಗಿಕ ವ್ಯಾಪಾರದಲ್ಲಿ ಒಳಗೊಳ್ಳುವುದು ಕುಟುಂಬ ದುರುಪಯೋಗದ ಕಾರಣದಿಂದಲೇ. ಮನೆಯಲ್ಲಿ ಹಿಂಸಾಚಾರ ಮತ್ತು ಅಗಮ್ಯಗಮನವು ಅವರನ್ನು ಬೀದಿಗಳಿಗೆ ಹೊಡೆದೋಡಿಸುತ್ತವೆ. ಅಲ್ಲಿ, ಅವರು ಮಕ್ಕಳಕಾಮಿಗಳಿಂದ ಮತ್ತು ಇತರರಿಂದ—ಕೆಲವು ಪೊಲೀಸರಿಂದಲೂ ಎಂದು ತೋರುತ್ತದೆ—ದುರುಪಯೋಗಿಸಲ್ಪಡುವ ಗಂಡಾಂತರದಲ್ಲಿರುತ್ತಾರೆ. ಬಾಡಿಗೆಗಾಗಿ ಮಕ್ಕಳು ಎಂಬ ಶೀರ್ಷಿಕೆಯ ಸಮಸ್ಯೆಯ ಕುರಿತಾದ ಒಂದು ವರದಿಯು, ಬ್ರೆಸಿಲ್ನಲ್ಲಿರುವ ಆರು ವರ್ಷ ಪ್ರಾಯದ ಕಾಟ್ಯಾ ಬಗ್ಗೆ ಹೇಳುತ್ತದೆ. ಅವಳು ಒಬ್ಬ ಪೊಲೀಸನಿಂದ ಹಿಡಿಯಲ್ಪಟ್ಟಾಗ, ಅಸಭ್ಯ ಕ್ರಿಯೆಗಳನ್ನು ಮಾಡುವಂತೆ ಅವನು ಅವಳನ್ನು ಒತ್ತಾಯಿಸಿದನು ಮತ್ತು ತನ್ನ ಮುಖ್ಯಸ್ಥನಿಗೆ ಅವಳು ಹೇಳುವುದಾದರೆ, ಅವಳ ಕುಟುಂಬದವರನ್ನು ಕೊಂದುಹಾಕುವ ಬೆದರಿಕೆಯನ್ನೊಡ್ಡಿದನು. ಮರುದಿನ ಅವನು ಬೇರೆ ಐದು ಪುರುಷರೊಂದಿಗೆ ಬಂದನು. ತಮಗಾಗಿಯೂ ಅದೇ ಲೈಂಗಿಕ ಸೇವೆಯನ್ನು ಅವಳು ಮಾಡುವಂತೆ ಅವರೆಲ್ಲರೂ ಬಯಸಿದರು.
ಸ್ವೀಡನ್ನ ಒಂದು ಸಂಸ್ಥೆಯಾದ ದ ಚಿಲ್ಡ್ರೆನ್ಸ್ ಓಮ್ಬಡ್ಸ್ಮನ್, ಪ್ರತಿನಿಧಿಗಳಿಗೆ ಹೇಳಿದ್ದು: “ಮಕ್ಕಳ ವೇಶ್ಯಾವಾಟಿಕೆಯನ್ನು ಯಾವುದು ಉಂಟುಮಾಡುತ್ತದೆ ಎಂಬುದರ ಕುರಿತಾಗಿ ಅಧ್ಯಯನಗಳು ನಡೆಸಲ್ಪಟ್ಟಾಗ, [ಕಾಮ] ಪ್ರವಾಸೋದ್ಯಮವು ಪ್ರಧಾನ ಕಾರಣಗಳಲ್ಲೊಂದು ಎಂಬುದರಲ್ಲಿ ಸಂದೇಹವೇ ಇಲ್ಲ.” ಒಂದು ವರದಿಯು ಹೇಳಿದ್ದು: “ಕಳೆದ ಹತ್ತು ವರ್ಷಗಳಲ್ಲಿ ಮಕ್ಕಳ ವೇಶ್ಯಾವಾಟಿಕೆಯಲ್ಲಾದ ಅಪ್ರಮಾಣಭೂತ ಅಭಿವೃದ್ಧಿಯು ನೇರವಾಗಿ ಪ್ರವಾಸೋದ್ಯಮದಿಂದ ಉಂಟಾಗಿದೆ. ವರ್ಧಿಷ್ಣು ದೇಶಗಳಿಂದ ನೀಡಲ್ಪಡುವ ಅತ್ಯಂತ ನವೀನ ಪ್ರವಾಸಿಗ ಆಕರ್ಷಣೆಯು ಮಕ್ಕಳ ವೇಶ್ಯಾವಾಟಿಕೆಯಾಗಿದೆ.” ಯೂರೋಪ್, ಅಮೆರಿಕ, ಜಪಾನ್, ಬೇರೆಕಡೆಗಳಿಂದ ಬರುವ “ಕಾಮ ಪ್ರವಾಸಗಳು” ಲೋಕದಾದ್ಯಂತ ಮಕ್ಕಳ ವೇಶ್ಯಾವಾಟಿಕೆಗೆ ಹೆಚ್ಚಿನ ಬೇಡಿಕೆಯನ್ನು ಸೃಷ್ಟಿಸುತ್ತವೆ. ಕಾಮ ಪ್ರವಾಸಗಳನ್ನು ಪ್ರವರ್ಧಿಸಲು, ಒಂದು ಯೂರೋಪಿಯನ್ ಆಕಾಶಯಾನವು ಲೈಂಗಿಕವಾಗಿ ವ್ಯಕ್ತವಾಗುವ ಭಂಗಿಯಲ್ಲಿ ಒಂದು ಮಗುವಿನ ವ್ಯಂಗ್ಯಚಿತ್ರವನ್ನು ಉಪಯೋಗಿಸಿತು. ಸಂಚಾರ ನಿಯೋಗಗಳು ಪ್ರತಿ ವರ್ಷ ಸಾವಿರಾರು ಜನರಿಗೆ ಕಾಮ ಪ್ರವಾಸಗಳನ್ನು ಏರ್ಪಡಿಸುತ್ತವೆ.
ಕಾರಣಗಳ ದೀರ್ಘ ಪಟ್ಟಿಯಲ್ಲಿ, ಹೊಸ ತಂತ್ರಜ್ಞಾನದ ಮೂಲಕ ಶಿಶುಕಾಮದ ಉದ್ಯಮಕ್ಕಿರುವ ಅಂತಾರಾಷ್ಟ್ರೀಯ ಬಡತಿಯೂ ಒಂದಾಗಿದೆ. ಇಂಟರ್ನೆಟ್, ಇತರ ಕಂಪ್ಯೂಟರ್ ಸಂಬಂಧಿತ ತಂತ್ರಜ್ಞಾನಗಳೊಂದಿಗೆ ಸೇರಿ, ಲಂಪಟಸಾಹಿತ್ಯದ ಏಕೈಕ ದೊಡ್ಡ ಮೂಲವಾಗಿದೆ ಎಂದು ವರದಿಸಲಾಗಿದೆ. ಕಡಮೆ ಹಣದ ವಿಡಿಯೊ ಸಜ್ಜು, ತದ್ರೀತಿಯಲ್ಲಿ ಮಕ್ಕಳ ಲಂಪಟಸಾಹಿತ್ಯದ ಉತ್ಪಾದನೆಯನ್ನು ಸರಾಗಮಾಡಿದೆ.
ಅವರು ಯಾರಾಗಿದ್ದಾರೆ?
ಲೈಂಗಿಕವಾಗಿ ಮಕ್ಕಳನ್ನು ದುರುಪಯೋಗಿಸುವ ವಯಸ್ಕರಲ್ಲಿ ಹೆಚ್ಚಿನವರು ಮಕ್ಕಳಕಾಮಿಗಳಾಗಿದ್ದಾರೆ. ಮಕ್ಕಳಕಾಮಿಗೆ ಮಕ್ಕಳ ಕಡೆಗೆ ಒಂದು ವಿಕೃತ ಲೈಂಗಿಕ ಆಕರ್ಷಣೆ ಇರುತ್ತದೆ. ಸ್ವೀಡನ್ನ ಚಿಲ್ಡ್ರೆನ್ಸ್ ಓಮ್ಬಡ್ಸ್ಮನ್ಗನುಸಾರ, “ಅವರು ಅನಿವಾರ್ಯವಾಗಿ ವಯಸ್ಸಾಗುತ್ತಿರುವ, ರೇನ್ಕೋಟ್ಗಳನ್ನು ಧರಿಸಿಕೊಂಡಿರುವ ಹೊಲಸು ಪುರುಷರು ಅಥವಾ ಹಿಂಸಾತ್ಮಕ ಗಡುಸು ಪುರುಷರಾಗಿರುವುದಿಲ್ಲ. ಒಬ್ಬ ಪ್ರಾತಿನಿಧಿಕ ಮಕ್ಕಳಕಾಮಿಯು, ಒಬ್ಬ ಸುಶಿಕ್ಷಿತ ನಡುವಯಸ್ಸಿನ ಪುರುಷನಾಗಿದ್ದು, ಅನೇಕ ವೇಳೆ ಒಬ್ಬ ಶಿಕ್ಷಕನಾಗಿ, ವೈದ್ಯನಾಗಿ, ಸಮಾಜಸೇವಕನಾಗಿ ಇಲ್ಲವೆ ಒಬ್ಬ ಪಾದ್ರಿಯಾಗಿ ಮಕ್ಕಳೊಂದಿಗೆ ಕೆಲಸಮಾಡುತ್ತಿರುವ ವ್ಯಕ್ತಿಯಾಗಿದ್ದಾನೆ.”
ಆ ಸ್ವೀಡಿಷ್ ಗುಂಪು ರೋಸಾರ್ಯೊ ಎಂಬ 12 ವರ್ಷ ಪ್ರಾಯದ ಫಿಲಿಪಿನೊ ಹುಡುಗಿಯ ಉದಾಹರಣೆಯನ್ನು ಮಂಡಿಸಿತು. ಅವಳು ಒಬ್ಬ ಕಾಮ ಪ್ರವಾಸಿಗನಿಂದ, ಆಸ್ಟ್ರಿಯದಿಂದ ಬಂದ ಒಬ್ಬ ವೈದ್ಯನಿಂದ ಲೈಂಗಿಕವಾಗಿ ದುರುಪಯೋಗಿಸಲ್ಪಟ್ಟಳು. ಅವನ ದುರುಪಯೋಗವು ಅವಳ ಮರಣದಲ್ಲಿ ಫಲಿಸಿತು.
ಕ್ಯಾರಲ್ ಬೆಲಮಿ, ಜಿನಿವಾದಲ್ಲಿರುವ ಯೂನಿಸೆಫ್ (ವಿಶ್ವ ಸಂಸ್ಥೆಯ ಮಕ್ಕಳ ನಿಧಿ)ನ ಕಾರ್ಯ ನಿರ್ವಾಹಕಿಯು ಆ 12 ವರ್ಷ ಪ್ರಾಯದ ಫಿಲಿಪಿನೊ ಹುಡುಗಿಯ ಕುರಿತು ಮುಂದಿನ ವಿಷಯವನ್ನು ಹೇಳಿದಳು: “ಯಾರಿಗೆ ಮಕ್ಕಳ ಆರೈಕೆ ಮತ್ತು ಸಂರಕ್ಷಣೆಯ ಕೆಲಸವು ವಹಿಸಲ್ಪಟ್ಟಿದೆಯೊ ಆ ವಯಸ್ಕರೇ ಅನೇಕ ವೇಳೆ ಈ ಸಹಿಸಲಾಗದ ಆಚರಣೆಯನ್ನು ಅನುಮತಿಸಿ ಶಾಶ್ವತಗೊಳಿಸುತ್ತಾರೆ. ಇವರಲ್ಲಿ ಮಕ್ಕಳನ್ನು ಲೈಂಗಿಕವಾಗಿ ಶೋಷಣೆ ಮಾಡಲು ತಮ್ಮ ಪ್ರತಿಷ್ಠೆ ಹಾಗೂ ಅಧಿಕಾರವನ್ನು ಉಪಯೋಗಿಸುವ ಶಿಕ್ಷಕರು, ಆರೋಗ್ಯ ಕಸಬಿನವರು, ಪೊಲೀಸ್ ಅಧಿಕಾರಿಗಳು, ರಾಜಕಾರಣಿಗಳು, ಮತ್ತು ಪಾದ್ರಿವರ್ಗದ ಸದಸ್ಯರು ಸೇರಿರುತ್ತಾರೆ.”
ಧರ್ಮವು ಒಳಗೂಡಿದೆ
ರೋಮನ್ ಕ್ಯಾತೊಲಿಕ್ ಚರ್ಚಿನ ಒಬ್ಬ ಪ್ರತಿನಿಧಿ ಸ್ಟಾಕ್ಹೋಮ್ ಸಭೆಯಲ್ಲಿ ಪ್ರಕಟಿಸಿದ್ದೇನೆಂದರೆ, ಮಕ್ಕಳ ಶೋಷಣೆಯು “ಪಾತಕಗಳಲ್ಲೇ ಅತ್ಯಂತ ಘೋರವಾದದ್ದು” ಮತ್ತು “ಮೌಲ್ಯಗಳ ಅಗಾಧವಾದ ವಕ್ರತೆ ಹಾಗೂ ಕುಸಿತಗಳ ಫಲಿತಾಂಶ”ವಾಗಿದೆ. ಆದರೂ, ಕ್ಯಾತೊಲಿಕ್ ಚರ್ಚು ತನ್ನ ಸ್ವಂತ ಪಾದ್ರಿವರ್ಗದಲ್ಲಿ ಇಂತಹ ಆಚರಣೆಗಳಿಂದ ತೀವ್ರವಾಗಿ ಪ್ರಭಾವಿಸಲ್ಪಟ್ಟಿದೆ.
1993, ಆಗಸ್ಟ್ 16ರ ನ್ಯೂಸ್ವೀಕ್ ಸಂಚಿಕೆಯಲ್ಲಿ, “ಪಾದ್ರಿಗಳು ಮತ್ತು ದುರುಪಯೋಗ” ಎಂಬ ಶೀರ್ಷಿಕೆಯ ಲೇಖನವು “ಅಮೆರಿಕದ ಕ್ಯಾತೊಲಿಕ್ ಚರ್ಚಿನ ಆಧುನಿಕ ಇತಿಹಾಸದಲ್ಲಿ ಅತಿ ಕೀಳಾದ ಪಾದ್ರಿ ಸಂಬಂಧಿತ ಹಗರಣ”ದ ಕುರಿತು ವರದಿಸಿತು. ಅದು ಹೇಳಿದ್ದು: “1982ರಂದಿನಿಂದ ಅಂದಾಜುಮಾಡಲ್ಪಟ್ಟ 400 ಪಾದ್ರಿಗಳ ವಿರುದ್ಧ ಆಪಾದನೆಗಳು ಹೊರಿಸಲ್ಪಟ್ಟಿರುವುದಾದರೂ, ಸುಮಾರು 2,500 ಪಾದ್ರಿಗಳು ಮಕ್ಕಳನ್ನು ಇಲ್ಲವೆ ಹದಿವಯಸ್ಕರನ್ನು ಪೀಡಿಸಿದ್ದಾರೆಂದು ಕೆಲವು ಚರ್ಚುಸದಸ್ಯರು ಅನುಮಾನಿಸುತ್ತಾರೆ. . . . ಹಣಕ್ಕಿಂತಲೂ ಹೆಚ್ಚಾಗಿ, ಹಗರಣವು ಚರ್ಚಿಗೆ ತೀವ್ರವಾದ ಪೇಚಾಟವನ್ನು ಮತ್ತು ಅದರ ನೈತಿಕ ಅಧಿಕಾರದಲ್ಲಿ ಸ್ವಲ್ಪ ನಷ್ಟವನ್ನು ತಂದಿದೆ.” ಲೋಕದಾದ್ಯಂತ ಇರುವ ಇತರ ಧರ್ಮಗಳೂ ಇದೇ ಸನ್ನಿವೇಶದಲ್ಲಿವೆ.
ಗ್ರೇಟ್ ಬ್ರಿಟನ್ನಿಂದ ಬಂದಿದ್ದ ಕಾಮಸಂಬಂಧಿತ ಪಾತಕದ ಸಲಹೆಗಾರನಾದ ರೇ ವೈಅರ್, ಸ್ಟಾಕ್ಹೋಮ್ ಸಭೆಗೆ ಒಬ್ಬ ಪಾದ್ರಿಯಿಂದ ವಿಕೃತವಾಗಿ ದುರುಪಯೋಗಿಸಲ್ಪಟ್ಟಿದ್ದ ಇಬ್ಬರು ಹುಡುಗರ ಕುರಿತು ಹೇಳಿದನು. ಆ ಹುಡುಗರಲ್ಲಿ ಒಬ್ಬನು ಈಗ, ಪಾದ್ರಿಗಳಿಂದ ಮಕ್ಕಳ ದುರುಪಯೋಗಕ್ಕೆ ಬಲಿಯಾದವರಿಗಾಗಿ ಒಂದು ನಿಯೋಗವನ್ನು ನಡೆಸುತ್ತಿದ್ದಾನೆ, ಮತ್ತು ಇನ್ನೊಬ್ಬನು ಸ್ವತಃ ಒಬ್ಬ ದುರುಪಯೋಗಿ ಆಗಿದ್ದಾನೆ.
ಥಾಯ್ಲೆಂಡಿನ ಒಬ್ಬ ಬೌದ್ಧ ಪಂಡಿತನಾದ ಮಿಡಾನಾನ್ಡೂ ಬಿಕ್ಕೂ, ವರದಿಸಿದ್ದೇನೆಂದರೆ, “ನಿರ್ದಿಷ್ಟ ಪ್ರಕಾರಗಳ ಬೌದ್ಧಮತೀಯ ಆಚರಣೆಯು, ಥಾಯ್ಲೆಂಡ್ನಲ್ಲಿ ಹಲವಾರು ಮಟ್ಟಗಳಲ್ಲಾಗುವ ಮಕ್ಕಳ ವ್ಯಾಪಾರಿ ಲೈಂಗಿಕ ಶೋಷಣೆಗೆ ಹೊಣೆಯಾಗಿರುತ್ತವೆ. ಥಾಯ್ಲೆಂಡ್ನ ಸ್ಥಳೀಯ ಹಳ್ಳಿಗಳಲ್ಲಿರುವ ಸಂನ್ಯಾಸಿಗಳು ಕೆಲವೊಮ್ಮೆ, ವೇಶ್ಯಾವಾಟಿಕೆಯಲ್ಲಿ ಒತ್ತಾಯಿಸಲ್ಪಟ್ಟಿರುವ ಮಕ್ಕಳು ಸಮುದಾಯಕ್ಕೆ ಹಿಂದಿರುಗಿಸಿದ ಹಣದಿಂದ ಪ್ರಯೋಜನ ಪಡೆದಿದ್ದಾರೆ.”
ಏನು ಮಾಡಸಾಧ್ಯವಿದೆ?
ಗ್ರೇಟ್ ಬ್ರಿಟನ್ನ ಲೈಸೆಸ್ಟರ್ ವಿಶ್ವವಿದ್ಯಾನಿಲಯದ ಡಾ. ಜೂಲ್ಯಾ ಓಕೊನೆಲ್ ಡೇವಿಡ್ಸನ್, ಶೋಷಣೆಗಾರರು ತಮ್ಮ ವರ್ತನೆಗೆ ನೀಡುವ ನ್ಯಾಯಸಮರ್ಥನೆಯನ್ನು ವಿರೋಧಿಸುವಂತೆ ಸಭೆಗೆ ಕರೆನೀಡಿದರು. ದುರುಪಯೋಗಿಗಳು ಅನೇಕ ವೇಳೆ ಮಗುವಿನ ಊಹಿತ ಲೈಂಗಿಕ ಸಡಿಲುನಡತೆ ಮತ್ತು ಅನೈತಿಕತೆಯ ಮೇಲೆ ಕೇಂದ್ರೀಕರಿಸಿ, ಮಗು ಈಗಾಗಲೇ ನೈತಿಕವಾಗಿ ಭ್ರಷ್ಟನೂ ಹಾಳಾದವನೂ ಆಗಿದ್ದಾನೆಂದು ವಾದಿಸುತ್ತಾರೆ. ಇತರ ಶೋಷಣೆಗಾರರು ತಮ್ಮ ಕ್ರಿಯೆಗಳಿಂದ ಯಾವ ಹಾನಿಯೂ ಆಗದು ಮತ್ತು ಇದರಿಂದ ಮಗುವು ಲಾಭಪಡೆಯುತ್ತದೆ ಎಂಬ ವಿಕೃತ ಹಾಗೂ ಸುಳ್ಳು ವಾದವನ್ನು ಉಪಯೋಗಿಸುತ್ತಾರೆ.
ಕಾಮ ಪ್ರವಾಸೋದ್ಯಮದೊಂದಿಗೆ ನಿರ್ವಹಿಸುತ್ತಿರುವ ಪರಿಣತರ ಒಂದು ಗುಂಪು, ಶಾಲಾ ಪಠ್ಯಕ್ರಮದಲ್ಲಿ ಶಿಕ್ಷಣದ ಮೂಲಕ ಅದರ ವಿರುದ್ಧ ಹೋರಾಡುವುದನ್ನು ಶಿಫಾರಸ್ಸು ಮಾಡಿತು. ಅದಕ್ಕೆ ಕೂಡಿಸಿ, ಮಕ್ಕಳ ಲೈಂಗಿಕ ಶೋಷಣೆಯ ವಿರುದ್ಧ ನೀಡಲ್ಪಡುವ ಮಾಹಿತಿಯು ಇಡೀ ಸಂಚಾರದ ಉದ್ದಕ್ಕೂ ಪ್ರಯಾಣಿಕರನ್ನು ತಲಪಬೇಕು—ಹೊರಡುವ ಮೊದಲು, ಪ್ರಯಾಣದ ನಡುವೆ, ಮತ್ತು ಗಮ್ಯಸ್ಥಾನದಲ್ಲಿ.
ಹೊಸ ಸಂವಾದ ತಂತ್ರಜ್ಞಾನಗಳ ಕುರಿತು ಒಂದು ಗುಂಪು ಸೂಚಿಸಿದ್ದೇನೆಂದರೆ, ಮಕ್ಕಳ ಶೋಷಣೆ ಮಾಡುವ ವಿಷಯದ ನಿರ್ಮೂಲನಕ್ಕಾಗಿ ರಾಷ್ಟ್ರಗಳಿಗೆ ಮಾರ್ಗದರ್ಶನಗಳು ಒದಗಿಸಲ್ಪಡಬೇಕು. ಈ ಕ್ಷೇತ್ರದಲ್ಲಿನ ಚಟುವಟಿಕೆಯನ್ನು ಸುಸಂಘಟಿತಗೊಳಿಸಲು ಒಂದು ಏಕೈಕ ಅಂತಾರಾಷ್ಟ್ರೀಯ ನಿಯೋಗದ ಸ್ಥಾಪನೆಯು ಪರಿಗಣಿಸಲ್ಪಟ್ಟಿತು. ಕಂಪ್ಯೂಟರ್ ಉತ್ಪಾದನೆಯ ಮಕ್ಕಳ ಲಂಪಟಸಾಹಿತ್ಯ ಮತ್ತು ಸಾಮಾನ್ಯವಾಗಿ ಮಕ್ಕಳ ಲಂಪಟಸಾಹಿತ್ಯದ ಒಡೆತನ ಎಲ್ಲ ದೇಶಗಳಲ್ಲಿ ಅಪರಾಧಗಳೆಂದು ಪರಿಗಣಿಸಲ್ಪಡಬೇಕು—ಕಾನೂನು ಇದಕ್ಕೆ ದಂಡನೆಯನ್ನು ವಿಧಿಸಬೇಕು—ಎಂದು ಮತ್ತೊಂದು ಗುಂಪು ಶಿಫಾರಸ್ಸು ಮಾಡಿತು.
ಹೆತ್ತವರು ಏನು ಮಾಡಸಾಧ್ಯವಿದೆ? ಹೆತ್ತವರು ತಮ್ಮ ಮಕ್ಕಳನ್ನು ಸಂರಕ್ಷಿಸುವ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕೆಂದು ಮಾಧ್ಯಮದ ಪಾತ್ರದೊಂದಿಗೆ ನಿರ್ವಹಿಸುತ್ತಿರುವ ಒಂದು ಗುಂಪು ಸೂಚಿಸಿತು. ಅದು ಹೇಳಿದ್ದು: “ಮಕ್ಕಳು ದೊಡ್ಡವರಾಗಿ ಮಾಧ್ಯಮವನ್ನು ಉಪಯೋಗಿಸಲು ತೊಡಗಿದಂತೆ ಹೆತ್ತವರು ಅವರಿಗೆ ಮಾರ್ಗದರ್ಶನವನ್ನು ಮಾತ್ರವಲ್ಲ ಮಾಧ್ಯಮದ ಪ್ರಭಾವವನ್ನು ಸರಿದೂಗಿಸಲು ಮತ್ತು ಮಗುವು ತಿಳಿವಳಿಕೆಯಲ್ಲಿ ಬೆಳೆಯುವಂತೆ ಸಹಾಯ ಮಾಡಲು ಮಾಹಿತಿಯ ಮೂಲಗಳ ಬಗ್ಗೆ ಹೆಚ್ಚಿನ ಸಮಾಚಾರ, ವಿವರಣೆ ಮತ್ತು ವಿವಿಧತೆಯನ್ನು ಒದಗಿಸಬಲ್ಲರು.”
ಆ ಸಭೆಯ ಕುರಿತು ವರದಿಮಾಡುತ್ತಿದ್ದ ಒಂದು ಸ್ವೀಡಿಷ್ ಟಿವಿ ಕಾರ್ಯಕ್ರಮವು, ಹೆತ್ತವರು ತಮ್ಮ ಮಕ್ಕಳ ಮೇಲೆ ಹೆಚ್ಚು ಉತ್ತಮವಾದ ನಿಗಾವಣೆಯಿಡುವ ಮತ್ತು ಅವರನ್ನು ಅಪಾಯಗಳಿಗೆ ಜಾಗರೂಕಗೊಳಿಸುವ ಅಗತ್ಯವನ್ನು ಒತ್ತಿಹೇಳಿತು. ಹಾಗಿದ್ದರೂ, ಅದು ಸಲಹೆನೀಡಿದ್ದು: “ಮಕ್ಕಳಿಗೆ ಕೇವಲ ‘ಅಸಭ್ಯ ವೃದ್ಧ ಪುರುಷ’ರ ವಿರುದ್ಧ ಎಚ್ಚರಿಕೆ ನೀಡಬೇಡಿರಿ, ಏಕೆಂದರೆ ಮಕ್ಕಳು . . . ತಾವು ವಯಸ್ಸಾದ, ಹೊಲಸು ಪುರುಷರ ವಿಷಯದಲ್ಲಿ ಮಾತ್ರ ಜಾಗರೂಕರಾಗಿರಬೇಕೆಂದು ನೆನಸುವರು. ಆದಾಗ್ಯೂ ಇಂತಹ ಪಾತಕಗಳನ್ನು ಗೈಯುವ ವ್ಯಕ್ತಿಯು ಒಂದು ಸಮವಸ್ತ್ರವನ್ನು ಅಥವಾ ನೀಟಾದ ಸೂಟನ್ನೂ ಧರಿಸಿರಸಾಧ್ಯವಿದೆ. ಹೀಗೆ, ಅವರಲ್ಲಿ ಅಸಾಮಾನ್ಯವಾದ ಆಸಕ್ತಿಯನ್ನು ವಹಿಸುವ ಅಪರಿಚಿತರ ಕುರಿತು ಅವರಿಗೆ ಎಚ್ಚರಿಕೆ ನೀಡಿರಿ.” ಮಕ್ಕಳು ತಮ್ಮೊಂದಿಗೆ ಅಯೋಗ್ಯವಾಗಿ ನಡೆದುಕೊಳ್ಳುವ ಯಾವದೇ ವ್ಯಕ್ತಿಯ—ತಮಗೆ ಪರಿಚಯವಿರುವ ಜನರನ್ನೂ ಸೇರಿಸಿ—ಕುರಿತಾಗಿಯೂ ಎಚ್ಚರಿಸಲ್ಪಡಬೇಕು ಮತ್ತು ಅಧಿಕಾರಿಗಳಿಗೆ ದೂರುಕೊಡುವಂತೆ ಪ್ರೇರಿಸಲ್ಪಡಬೇಕು.
ಏಕಮಾತ್ರ ಪರಿಹಾರ
ಸ್ಟಾಕ್ಹೋಮ್ ಸಭೆಗೆ ಮಕ್ಕಳ ಲೈಂಗಿಕ ಶೋಷಣೆಯ ಕಾರಣಗಳನ್ನು ಹೇಗೆ ಜಯಿಸುವುದೆಂದು ಮಾತ್ರ ಸೂಚಿಸಲು ಸಾಧ್ಯವಾಗಲಿಲ್ಲ. ಈ ಕಾರಣಗಳು ಕೆಳಗಿನಂತಿವೆ: ಎಲ್ಲೆಡೆಯೂ ತೀವ್ರವಾಗಿ ಕ್ಷಯಿಸುತ್ತಿರುವ ನೈತಿಕ ಮೌಲ್ಯಗಳು; ಹೆಚ್ಚಾಗುತ್ತಿರುವ ಸ್ವಾರ್ಥ ಮತ್ತು ಪ್ರಾಪಂಚಿಕ ವಿಷಯಗಳಿಗಾಗಿ ಅತ್ಯಾಶೆ; ಜನರನ್ನು ಅನ್ಯಾಯದಿಂದ ರಕ್ಷಿಸಲು ಮಾಡಲ್ಪಟ್ಟ ನಿಯಮಗಳಿಗೆ ಬೆಳೆಯುತ್ತಿರುವ ಅಗೌರವ; ಇತರರ ಕ್ಷೇಮ, ಘನತೆ ಮತ್ತು ಜೀವಕ್ಕಾಗಿ ಹೆಚ್ಚುತ್ತಿರುವ ತಾತ್ಸಾರಭಾವ; ಕುಟುಂಬ ಏರ್ಪಾಡಿನ ತೀವ್ರ ಕುಸಿತ; ಜನಸಂಖ್ಯಾಸ್ಫೋಟನೆಯ ಕಾರಣ ವ್ಯಾಪಕವಾದ ಬಡತನ, ನಿರುದ್ಯೋಗ, ನಗರೀಕರಣ, ಮತ್ತು ವಲಸೆಹೋಗುವಿಕೆ; ವಿದೇಶೀಯರು ಮತ್ತು ನಿರಾಶ್ರಿತರ ವಿರುದ್ಧ ಬೆಳೆಯುತ್ತಿರುವ ಕುಲವಾದ; ಅಮಲೌಷಧಗಳ ಸದಾ ಹೆಚ್ಚುತ್ತಿರುವ ಉತ್ಪಾದನೆ ಮತ್ತು ವ್ಯಾಪಾರ; ಮತ್ತು ಭ್ರಷ್ಟಮಾಡಲ್ಪಟ್ಟ ಧಾರ್ಮಿಕ ನೋಟಗಳು, ಆಚರಣೆಗಳು ಮತ್ತು ಸಂಪ್ರದಾಯಗಳು.
ಮಕ್ಕಳ ಲೈಂಗಿಕ ಶೋಷಣೆಯು ತಲ್ಲಣಗೊಳಿಸುವಂತಹದ್ದಾಗಿದ್ದರೂ, ಅಂತಹ ಕೆಟ್ಟತನವು ಜಾಗರೂಕ ಬೈಬಲ್ ವಾಚಕರಿಗೆ ಅದೊಂದು ಆಶ್ಚರ್ಯಕರ ವಿಷಯವಾಗಿರುವುದಿಲ್ಲ. ಏಕೆ? ಏಕೆಂದರೆ “ಕಡೇ ದಿವಸ”ಗಳೆಂದು ಬೈಬಲ್ ಕರೆಯುವ ಸಮಯದಲ್ಲಿ ನಾವು ಈಗ ಜೀವಿಸುತ್ತಾ ಇದ್ದೇವೆ ಮತ್ತು ದೇವರ ವಾಕ್ಯಕ್ಕನುಸಾರ “ನಿಭಾಯಿಸಲು ಕಠಿನವಾದ ಸಮಯಗಳು” ಇಲ್ಲಿವೆ. (2 ತಿಮೊಥೆಯ 3:1-5, 13, NW) ಆದುದರಿಂದ ನೈತಿಕ ಮೌಲ್ಯಗಳು ಕೆಟ್ಟ ಪರಿಸ್ಥಿತಿಯಿಂದ ಅತಿ ಕೀಳಾದ ಪರಿಸ್ಥಿತಿಗೆ ಇಳಿದಿರುವುದು ಆಶ್ಚರ್ಯದ ಸಂಗತಿಯೊ?
ಆದರೆ, ಲೋಕದ ದೊಡ್ಡ ಸಮಸ್ಯೆಗಳಿಗಿರುವ ಏಕಮಾತ್ರ ಪರಿಹಾರವನ್ನು ಬೈಬಲ್ ಸೂಚಿಸುತ್ತದೆ—ಸರ್ವಶಕ್ತ ದೇವರ ಮೂಲಕ ಸಂಪೂರ್ಣ ನಿರ್ಮಲೀಕರಣ. ಬೇಗನೆ ಆತನು ತನ್ನ ಶಕ್ತಿಯನ್ನು ತೋರ್ಪಡಿಸಿ, ತನ್ನ ನೀತಿಯ ತತ್ವಗಳು ಹಾಗೂ ನಿಯಮಗಳಿಗನುಸಾರ ಜೀವಿಸದ ಎಲ್ಲರನ್ನು ಭೂಮಿಯಿಂದ ತೆಗೆದುಬಿಡುವನು: “ಯಥಾರ್ಥವಂತರು ದೇಶದಲ್ಲಿ ಸ್ವತಂತ್ರರಾಗಿರುವರು, ನಿರ್ದೋಷಿಗಳು ಅದರಲ್ಲಿ ನೆಲೆಯಾಗಿರುವರು. ದುಷ್ಟರಾದರೋ ದೇಶದೊಳಗಿಂದ ಕೀಳಲ್ಪಡುವರು, ದ್ರೋಹಿಗಳು ನಿರ್ಮೂಲರಾಗುವರು.”—ಜ್ಞಾನೋಕ್ತಿ 2:21, 22; 2 ಥೆಸಲೊನೀಕ 1:6-9.
“ನಿರ್ಮೂಲರಾಗು”ವವರಲ್ಲಿ ಮಕ್ಕಳನ್ನು ವೇಶ್ಯಾವಾಟಿಕೆಯಲ್ಲಿ ತೊಡಗಿಸುವ ಮತ್ತು ಮಕ್ಕಳನ್ನು ದುರುಪಯೋಗಿಸುವ ಭ್ರಷ್ಟ ಜನರು ಸೇರಿರುವರು. ದೇವರ ವಾಕ್ಯವು ಹೇಳುವುದು: “ಜಾರರು . . . ವ್ಯಭಿಚಾರಿಗಳು . . . ಪುರುಷ [ಅಥವಾ ಹುಡುಗ]ಗಾಮಿಗಳು . . . ದೇವರ ರಾಜ್ಯಕ್ಕೆ ಬಾಧ್ಯರಾಗುವದಿಲ್ಲ.” (1 ಕೊರಿಂಥ 6:9, 10) ಅದು ಕೂಡಿಸುವುದೇನೆಂದರೆ, “ಅಸಹ್ಯವಾದದ್ದರಲ್ಲಿ ಸೇರಿದವರು, . . . ಜಾರರು” “ಎರಡನೆಯ ಮರಣ”ಕ್ಕೆ—ಅನಂತ ನಾಶನಕ್ಕೆ ಗುರಿಮಾಡಲ್ಪಡುವರು.—ಪ್ರಕಟನೆ 21:8.
ದೇವರು ಭೂಮಿಯನ್ನು ಶುಚಿಗೊಳಿಸಿ, ಸಂಪೂರ್ಣವಾಗಿ ಹೊಸ ಹಾಗೂ ನ್ಯಾಯವಾದ ವಿಷಯಗಳ ವ್ಯವಸ್ಥೆಯನ್ನು “ನೂತನಾಕಾಶಮಂಡಲವನ್ನೂ ನೂತನಭೂಮಂಡಲವನ್ನೂ” ತರುವನು. (2 ಪೇತ್ರ 3:13) ಆಗ, ದೇವರ ರಚನೆಯ ಆ ಹೊಸ ಲೋಕದಲ್ಲಿ, ಭ್ರಷ್ಟ, ವಿಕೃತ ಜನರು ಇನ್ನೆಂದಿಗೂ ಮುಗ್ಧರನ್ನು ಸ್ವಪ್ರಯೋಜನಕ್ಕಾಗಿ ಉಪಯೋಗಿಸಿಕೊಳ್ಳರು. ಮತ್ತು ಪುನಃ ಇನ್ನೆಂದಿಗೂ ಬಲಿಗಳಾಗಿಸಲ್ಪಡುವ ಭಯ ಮುಗ್ಧರಿಗಿರದು, ಏಕೆಂದರೆ “ಅವರನ್ನು ಯಾರೂ ಹೆದರಿಸರು.”—ಮೀಕ 4:4.
[ಪುಟ 23 ರಲ್ಲಿರುವ ಸಂಕ್ಷಿಪ್ತ ವಿವರಣೆ]
“ಪಾತಕದ ಅತ್ಯಂತ ಅನಾಗರಿಕ ಹಾಗೂ ಅಸಹ್ಯಕರ ಬಗೆ.”—ಸ್ವೀಡನ್ನ ಪ್ರಧಾನ ಮಂತ್ರಿ
[ಪುಟ 24 ರಲ್ಲಿರುವ ಸಂಕ್ಷಿಪ್ತ ವಿವರಣೆ]
“ಪ್ರತಿ ವಾರ, 1 ಕೋಟಿಯಿಂದ 1.2 ಕೋಟಿ ಪುರುಷರು ಯುವ ವೇಶ್ಯೆರನ್ನು ಭೇಟಿಮಾಡುತ್ತಾರೆ.”—ದಿ ಇಕಾನಮಿಸ್ಟ್, ಲಂಡನ್
[ಪುಟ 25 ರಲ್ಲಿರುವ ಸಂಕ್ಷಿಪ್ತ ವಿವರಣೆ]
ವಿಕಾಸಶೀಲ ದೇಶಗಳಲ್ಲಿ ಆಗುವ ಮಕ್ಕಳ ಶೋಷಣೆಯ ಒಂದು ಪ್ರಧಾನ ಕಾರಣವು ಕಾಮ ಪ್ರವಾಸೋದ್ಯಮವಾಗಿದೆ
[ಪುಟ 24 ರಲ್ಲಿರುವ ಚೌಕ]
ಕಾಮ ಪ್ರವಾಸೋದ್ಯಮ—ಏಕೆ?
(ಪ್ರವಾಸಿಗರು ಮಕ್ಕಳೊಂದಿಗೆ ಸಂಭೋಗದಲ್ಲಿ ತೊಡಗುವ ಕೆಲವು ಕಾರಣಗಳು)
(1) ಪ್ರವಾಸಿಗನು ಅನುಭವಿಸುವ ಅನಾಮಧೇಯತ್ವವು ಅವನನ್ನು ಮನೆಯ ಸಾಮಾಜಿಕ ಅಡಚಣೆಗಳಿಂದ ಬಿಡುಗಡೆಗೊಳಿಸುತ್ತದೆ
(2) ಪ್ರವಾಸಿಗರಿಗೆ ಸ್ಥಳೀಯ ಭಾಷೆಯ ಸೀಮಿತ ಇಲ್ಲವೆ ಯಾವ ತಿಳಿವಳಿಕೆಯೂ ಇಲ್ಲದಿರುವ ಕಾರಣ, ಮಗುವಿನೊಂದಿಗೆ ಸಂಭೋಗಕ್ಕಾಗಿ ಹಣ ತೆರುವುದು ಅಂಗೀಕೃತವಾದ ಸಂಗತಿಯೆಂದು ಇಲ್ಲವೆ ಮಕ್ಕಳನ್ನು ಬಡತನದಿಂದ ಸಹಾಯ ಮಾಡುವ ವಿಧವೆಂದು ನಂಬುವಂತೆ ಸುಲಭವಾಗಿ ಅವರನ್ನು ತಪ್ಪುದಾರಿಗೆ ಎಳೆಯಸಾಧ್ಯವಿದೆ
(3) ಕುಲಸಂಬಂಧವಾದ ಮನೋಭಾವಗಳು ತಾವು ಯಾರನ್ನು ಕೀಳ್ಮಟ್ಟದವರೆಂದು ಪರಿಗಣಿಸುತ್ತಾರೊ ಅವರನ್ನು ಭೇಟಿಗಾರರು ಶೋಷಣೆ ಮಾಡುವಂತೆ ನಡಿಸುತ್ತದೆ
(4) ವಿಕಾಸಶೀಲ ದೇಶಗಳಲ್ಲಿ ಕಾಮ ಸೇವೆಗಳು ಕಡಿಮೆ ಖರ್ಚಿನದ್ದಾಗಿವೆ ಎಂದು ಪ್ರವಾಸಿಗರು ನೋಡುವಾಗ ತಾವು ಧನವಂತರೆಂಬ ಅನಿಸಿಕೆ ಅವರಿಗಾಗುತ್ತದೆ
[ಪುಟ 26 ರಲ್ಲಿರುವ ಚೌಕ]
ಸಮಸ್ಯೆಯ ಜಗದ್ವ್ಯಾಪಕ ವ್ಯಾಪ್ತಿ
(ಮುಂದಿನವುಗಳು ಹಲವಾರು ಸರಕಾರಿ ಅಧಿಕಾರಿಗಳು ಮತ್ತು ಇತರ ಸಂಸ್ಥೆಗಳಿಂದ ಮಾಡಲ್ಪಟ್ಟ ಅಂದಾಜುಗಳು ಆಗಿವೆ)
ಅಮೆರಿಕ: 1,00,000ಕ್ಕಿಂತಲೂ ಹೆಚ್ಚಿನ ಮಕ್ಕಳು ಒಳಗೊಂಡಿದ್ದಾರೆಂದು ಅಧಿಕೃತ ಮೂಲಗಳು ಹೇಳುತ್ತವೆ
ಕೆನಡ: ಸಂಘಟಿತ ವೇಶ್ಯಾವಾಟಿಕೆಯ ದಲ್ಲಾಳಿಗಳ ಗುಂಪುಗಳಿಂದ ಸಾವಿರಾರು ಹದಿವಯಸ್ಕ ಹುಡುಗಿಯರು ವೇಶ್ಯಾವಾಟಿಕೆಯಲ್ಲಿ ಸೇರಿಸಲ್ಪಡುತ್ತಿದ್ದಾರೆ
ಕೊಲಂಬಿಯಾ: ಬಗೊಟಾದ ಬೀದಿಗಳಲ್ಲಿ ಲೈಂಗಿಕವಾಗಿ ಶೋಷಣೆಗೊಳಪಡಿಸಲಾದ ಮಕ್ಕಳ ಸಂಖ್ಯೆಯು ಕಳೆದ ಏಳು ವರ್ಷಗಳಲ್ಲಿ ಐದು ಪಟ್ಟು ಹೆಚ್ಚಾಗಿದೆ
ಚೈನ: ವೇಶ್ಯಾವಾಟಿಕೆಯಲ್ಲಿ ತೊಡಗಿಸಲ್ಪಟ್ಟಿರುವ 2,00,000ದಿಂದ 5,00,000 ಮಕ್ಕಳು. ಇತ್ತೀಚಿನ ವರ್ಷಗಳಲ್ಲಿ ಚೈನಾದ ಸುಮಾರು 5,000 ಹುಡುಗಿಯರು ಗಡಿನಾಡಿನ ಆಚೆ ಆಕರ್ಷಿಸಲ್ಪಟ್ಟು, ಮಿಯಾನ್ಮಾರ್ನಲ್ಲಿ ವೇಶ್ಯೆಯರಂತೆ ಮಾರಲ್ಪಟ್ಟಿದ್ದಾರೆ
ಟೈವಾನ್: 30,000 ಮಕ್ಕಳು ಒಳಗೊಂಡಿದ್ದಾರೆ
ಥಾಯ್ಲೆಂಡ್: 3,00,000 ಮಕ್ಕಳು ಒಳಗೊಂಡಿದ್ದಾರೆ
ಪೂರ್ವ ಯೂರೋಪ್: 1,00,000 ಬೀದಿ ಮಕ್ಕಳು. ಅನೇಕರು ಪಶ್ಚಿಮ ಯೂರೋಪ್ನಲ್ಲಿರುವ ವೇಶ್ಯಾಗೃಹಗಳಿಗೆ ಕಳುಹಿಸಲ್ಪಡುತ್ತಾರೆ
ಫಿಲಿಪ್ಪೀನ್ಸ್: 40,000 ಮಕ್ಕಳು ಒಳಗೊಂಡಿದ್ದಾರೆ
ಬ್ರೆಸಿಲ್: ವೇಶ್ಯಾವಾಟಿಕೆಯಲ್ಲಿ ಕಡಿಮೆ ಪಕ್ಷ 2,50,000 ಮಕ್ಕಳು
ಭಾರತ: 4,00,000 ಮಕ್ಕಳು ಕಾಮ ಉದ್ಯಮದಲ್ಲಿ ಒಳಗೊಂಡಿದ್ದಾರೆ
ಮಿಯಾನ್ಮಾರ್: ಥಾಯ್ಲೆಂಡ್ನಲ್ಲಿರುವ ವೇಶ್ಯಾಗೃಹಗಳಿಗೆ ಪ್ರತಿ ವರ್ಷ 10,000 ಹುಡುಗಿಯರು ಮತ್ತು ಸ್ತ್ರೀಯರು ಸಾಗಿಸಲ್ಪಡುತ್ತಾರೆ
ಮೋಸಾಂಬೀಕ್: ಯುಎನ್ನ ಶಾಂತಿಸ್ಥಾಪಕ ಪಡೆಗಳು ಮಕ್ಕಳನ್ನು ಲೈಂಗಿಕವಾಗಿ ಶೋಷಣೆಗೊಳಪಡಿಸಿದವೆಂದು ನೆರವುನೀಡಿದ ನಿಯೋಗಗಳು ಆಪಾದಿಸಿದವು
ಶ್ರೀ ಲಂಕ: 6ರಿಂದ 14 ವರ್ಷ ಪ್ರಾಯದ 10,000 ಮಕ್ಕಳು ವೇಶ್ಯಾಗೃಹಗಳಲ್ಲಿ ಗುಲಾಮರಾಗಿ ಮಾಡಲ್ಪಟ್ಟಿದ್ದಾರೆ ಮತ್ತು 10ರಿಂದ 18 ವರ್ಷ ಪ್ರಾಯದ 5,000 ಮಕ್ಕಳು ಸ್ವತಂತ್ರರಾಗಿ ಪ್ರವಾಸಿಧಾಮಗಳಲ್ಲಿ ಕೆಲಸಮಾಡುತ್ತಿದ್ದಾರೆ