ಬಿಕ್ಕಟ್ಟಿನಲ್ಲಿರುವ ಮಕ್ಕಳು
“ಮಕ್ಕಳಿಗೆ ವಿಶೇಷ ಗಮನ ಮತ್ತು ಸಮಯವು ಕೊಡಲ್ಪಡದಿದ್ದಲ್ಲಿ, ಮಾನವಜಾತಿಯ ಅತಿ ಮೂಲಭೂತ ದೀರ್ಘಾವಧಿಯ ಸಮಸ್ಯೆಗಳು ಹಾಗೆಯೇ ಉಳಿಯುವವು.”—ವಿಶ್ವ ಸಂಸ್ಥೆಯ ಮಕ್ಕಳ ನಿಧಿ.
ಜಗತ್ತಿನಾದ್ಯಂತ ಮಕ್ಕಳು ಬಿಕ್ಕಟ್ಟಿನಲ್ಲಿದ್ದಾರೆ. ಈ ಹೃದಯವಿದ್ರಾವಕ ಪರಿಸ್ಥಿತಿಯ ಪರಿಮಾಣದ ಕುರಿತು ಮನದಟ್ಟು ಮಾಡುವ ರುಜುವಾತನ್ನು ಸ್ವೀಡನಿನ ಸ್ಟಾಕ್‌ಹೋಮ್‌ನಲ್ಲಿ 1996ರಲ್ಲಿ ನಡೆದ, ಮಕ್ಕಳ ವ್ಯಾಪಾರೀ ಲೈಂಗಿಕ ಶೋಷಣೆಯ ವಿರುದ್ಧ ವಿಶ್ವ ಸಮ್ಮೇಳನದಲ್ಲಿ ಸಾದರಪಡಿಸಲಾಯಿತು. ಆ ಸಮ್ಮೇಳನಕ್ಕೆ, 130 ದೇಶಗಳ ಪ್ರತಿನಿಧಿಗಳು ಹಾಜರಿದ್ದರು. ಉದಾಹರಣೆಗಾಗಿ, ಲೋಕದ ಅನೇಕ ಭಾಗಗಳಲ್ಲಿ ಲಕ್ಷಾಂತರ ಹುಡುಗಿಯರು, ಅವರಲ್ಲಿ ಕೆಲವರು ಹತ್ತು ವರ್ಷ ಪ್ರಾಯದಷ್ಟು ಎಳೆಯವರಾಗಿದ್ದರೂ ವೇಶ್ಯೆಯರಾಗಿ ಕೆಲಸಮಾಡಲು ಒತ್ತಾಯಿಸಲ್ಪಡುತ್ತಾರೆಂದು ಅಲ್ಲಿ ರುಜುವಾತಿನೊಂದಿಗೆ ತಿಳಿಸಲಾಯಿತು.
ಅಂತಹ ಬಲಾತ್ಕೃತ ವೇಶ್ಯವಾಟಿಕೆಯು “ಈಗಿನ ಕಾಲದ ದಾಸತ್ವದ ಅತ್ಯಂತ ನೀಚ ರೂಪ”ವಾಗಿ ಕರೆಯಲ್ಪಟ್ಟಿದೆಯೆಂದು ಆಸ್ಟ್ರೇಲಿಯದ ಮೆಲ್ಬರ್ನ್ ಯೂನಿವರ್ಸಿಟಿ ಲಾ ರಿವ್ಯೂ ತಿಳಿಸಿತು. ಅನೇಕ ವರ್ಷಗಳ ಸತತವಾದ ಶಾರೀರಿಕ, ಮಾನಸಿಕ, ಮತ್ತು ಭಾವನಾತ್ಮಕ ಅತ್ಯಾಚಾರಕ್ಕೊಳಗಾದ ನಂತರ, ಈ ಹುಡುಗಿಯರು ಜೀವನಪರ್ಯಂತ ಗಾಯದ ಗುರುತುಗಳೊಂದಿಗೆ ನರಳುತ್ತಾರೆ. ಹೆಚ್ಚಿನ ಸಂದರ್ಭಗಳಲ್ಲಿ, ಈ ಹುಡುಗಿಯರು ಕೇವಲ ತಮ್ಮ ಹೊಟ್ಟೆಪಾಡಿಗಾಗಿ ಇಂತಹ ಕ್ರೌರ್ಯಕ್ಕೆ ಮಣಿಯುತ್ತಾರೆ. ಇಲ್ಲದಿದ್ದಲ್ಲಿ, ಅವರು ಉಪವಾಸ ಬಿದ್ದು ಸಾಯಬೇಕು ಅಷ್ಟೇ. ದುಃಖಕರ ಸಂಗತಿಯೇನೆಂದರೆ, ಈ ನಿರ್ಗತಿಕ ಹುಡುಗಿಯರಲ್ಲಿ ಅನೇಕರು ತಮ್ಮ ಸ್ವಂತ ಬಡ ಹೆತ್ತವರಿಂದ ಹಣಕ್ಕಾಗಿ ವೇಶ್ಯವಾಟಿಕೆಗೆ ತಳ್ಳಲ್ಪಟ್ಟಿದ್ದರು.
ಮಕ್ಕಳ ಈ ವಿಶದವಾದ ದುರಂತಕ್ಕೆ ಇನ್ನೊಂದು ಸಮಸ್ಯೆಯನ್ನು ಕೂಡಿಸಸಾಧ್ಯವಿದೆ. ಅದು, ಈಗಾಗಲೇ ಬಿಸಿಬಿಸಿಯಾಗಿ ಚರ್ಚಿಸಲ್ಪಡುತ್ತಿರುವ ಬಾಲ ದುಡಿಮೆಯ ವಾದಾಂಶ. ಏಷಿಯ, ದಕ್ಷಿಣ ಅಮೆರಿಕ, ಮತ್ತು ಬೇರೆ ಕಡೆಗಳಲ್ಲಿ ಹಾಗೂ ಅಮೆರಿಕದಲ್ಲಿರುವ ವಲಸೆಗಾರರ ಕೆಲವೊಂದು ಸಮುದಾಯಗಳಲ್ಲಿ, ಐದು ಪ್ರಾಯದಷ್ಟು ಎಳೆಯ ಮಕ್ಕಳು ಸಹ, “ದಾಸ್ಯ ದುಡಿಮೆ” ಎಂದು ಕರೆಯಲ್ಪಡುವ ದುಡಿಮೆಗೆ ಒತ್ತಾಯಿಸಲ್ಪಡುತ್ತಾರೆ. ಅವರು, ಅತಿ ನೀಚ ಪರಿಸ್ಥಿತಿಗಳಲ್ಲಿ ಪುಟ್ಟ ರೊಬಾಟ್‌ಗಳಂತೆ ಕೆಲಸಮಾಡುತ್ತಾರೆ. ಇದು ಅವರ ಎಳೆಯ ಶರೀರ ಮತ್ತು ಮನಸ್ಸುಗಳನ್ನು ಛಿದ್ರಗೊಳಿಸುತ್ತದೆ. ಅವರಲ್ಲಿ ಹೆಚ್ಚಿನವರಿಗೆ ಯಾವುದೇ ವಿದ್ಯಾಭ್ಯಾಸವಾಗಲಿ, ಹೆತ್ತವರ ಪ್ರೀತಿಯಾಗಲಿ, ಸುರಕ್ಷಿತವಾಗಿರಲು ಮನೆಗಳಾಗಲಿ, ಆಟಿಕೆಗಳಾಗಲಿ, ಆಟವಾಡಲು ಉದ್ಯಾನಗಳಾಗಲಿ ಇಲ್ಲ. ಅವರಲ್ಲಿ ಅನೇಕರು ತಮ್ಮ ಸ್ವಂತ ಹೆತ್ತವರಿಂದಲೇ ನಿರ್ದಯವಾಗಿ ಶೋಷಣೆಗೊಳಗಾಗುತ್ತಿದ್ದಾರೆ.
ಬಾಲ ಸೈನಿಕರು ಮತ್ತು ಅನಾಥಾಶ್ರಮಗಳು
ಈ ದುರಂತಕ್ಕೆ ಇನ್ನೂ ಹೆಚ್ಚನ್ನು ಕೂಡಿಸುತ್ತಾ, ಗೆರಿಲ್ಲ ಸೈನ್ಯಗಳಲ್ಲಿ ಬಾಲ ಸೈನಿಕರ ಬಳಕೆಯು ಹೆಚ್ಚಾಗಿದೆ. ಮಕ್ಕಳನ್ನು ಅಪಹರಿಸಿಯೋ ಗುಲಾಮ ಮಾರುಕಟ್ಟೆಗಳಲ್ಲಿ ಖರೀದಿಸಿಯೋ, ಅನಂತರ ಅವರನ್ನು ವ್ಯವಸ್ಥಿತವಾಗಿ ಹಿಂಸಿಸಲಾಗುತ್ತದೆ. ಕೆಲವೊಮ್ಮೆ ಅವರು ಕೊಲೆ ನಡೆಯುತ್ತಿರುವುದನ್ನು ನೋಡುವಂತೆಯೂ ಮಾಡಲಾಗುತ್ತದೆ. ಕೆಲವರು ತಮ್ಮ ಸ್ವಂತ ಹೆತ್ತವರನ್ನೂ ಕೊಲ್ಲುವಂತೆ ಅಥವಾ ತಮ್ಮ ಕೊಲೆಮಾಡುವ ಕೌಶಲವನ್ನು ಹೆಚ್ಚಿಸಲಿಕ್ಕಾಗಿ ಅಮಲೌಷಧಗಳನ್ನು ಸೇವಿಸುವಂತೆಯೂ ಅಪ್ಪಣೆ ನೀಡಲಾಗುತ್ತದೆ.
ಆಫ್ರಿಕದಲ್ಲಿ, ಸಾವಿರಾರು ಬಾಲ ಸೈನಿಕರ ಮನಸ್ಸನ್ನು ಕೆಡಿಸಿರುವುದರಿಂದಾಗಿರುವ ಪರಿಣಾಮಗಳ ಕುರಿತು ಮುಂದಿನ ವಿಷಯವು ಒಂದು ನಮೂನೆಯಾಗಿದೆ. ಈ ಭಾವಶೂನ್ಯ ಸಂಭಾಷಣೆಯು ಒಬ್ಬ ಸಾಮಾಜಿಕ ಕಾರ್ಯಕರ್ತ ಮತ್ತು ಒಬ್ಬ ಬಾಲ ಸೈನಿಕನ ನಡುವೆ ನಡೆಯಿತು. ಆ ಬಾಲಕನು ತನ್ನಲ್ಲಿ ಉಳಿದಿದ್ದ ಒಂದಿಷ್ಟು ಮುಗ್ಧತೆಯನ್ನು ಕಾಪಾಡಲು ಪ್ರಯತ್ನಿಸುತ್ತಿದ್ದನೆಂಬುದು ಸ್ಪಷ್ಟ:
“ನೀನು ಕೊಲೆಮಾಡಿದೆಯೊ? ‘ಇಲ್ಲ.’
ನಿನ್ನ ಬಳಿ ಬಂದೂಕಿತ್ತೊ? ‘ಹೌದು.’
ನೀನು ಬಂದೂಕಿನಿಂದ ಗುರಿಯಿಟ್ಟಿಯೊ? ‘ಹೌದು.’
ಅದರಿಂದ ಗುಂಡುಹಾರಿಸಿದೆಯೊ? ‘ಹೌದು.’
ಆಮೇಲೆ ಏನಾಯಿತು? ‘ಅವರು ನಿಂತಲ್ಲಿಯೇ ಬಿದ್ದುಬಿಟ್ಟರು.’”
ಈ ಎಳೆಯರಲ್ಲಿ ಕೆಲವರು ಪುಟಾಣಿಗಳಿಗಿಂತ ಸ್ವಲ್ಪ ದೊಡ್ಡವರಾಗಿದ್ದಾರೆ ಅಷ್ಟೇ. ಕೆಲವರು ಆರು ಮತ್ತು ಅದಕ್ಕಿಂತ ಹೆಚ್ಚು ಪ್ರಾಯದವರಾಗಿರುತ್ತಾರೆ. 1988ರಷ್ಟು ಹಿಂದೆಯೇ, ಜಗತ್ತಿನಾದ್ಯಂತ ಬಾಲ ಸೈನಿಕರ ಸಂಖ್ಯೆ 2,00,000 ಆಗಿತ್ತು ಎಂದು ವರದಿಸಲಾಗಿದೆ.
1988 ಮತ್ತು 1992ರ ನಡುವಿನ ವರ್ಷಗಳಲ್ಲಿ, ಏಷಿಯದಲ್ಲಿರುವ ಒಂದು ದೇಶದ ಅನಾಥಾಶ್ರಮದಲ್ಲಿ 550 ಮಂದಿ ಮಕ್ಕಳನ್ನು ಊಟಕೊಡದೆ ಸಾಯಿಸಲಿಕ್ಕಾಗಿ ಆರಿಸಲಾಯಿತು. ಇವರಲ್ಲಿ ಹೆಚ್ಚಿನವರು ಹುಡುಗಿಯರಾಗಿದ್ದರು. ಒಬ್ಬ ವೈದ್ಯೆ ವರದಿಸಿದ್ದು: “ಆ ಅನಾಥ ಮಕ್ಕಳಿಗೆ, ತಮ್ಮ ನೋವನ್ನು ನಿವಾರಿಸಿಕೊಳ್ಳಲು ಯಾವುದೇ ಗುಳಿಗೆಗಳಿರಲಿಲ್ಲ. ಅವರು ಸಾಯುವ ಸ್ಥಿತಿಯಲ್ಲಿದ್ದಾಗಲೂ ಅವರನ್ನು ಮಂಚಗಳಿಗೆ ಕಟ್ಟಿಹಾಕಲಾಗಿತ್ತು.”
ಯೂರೋಪ್‌ನ ಸನ್ನಿವೇಶವು ಹೇಗಿದೆ? ಲೈಂಗಿಕ ಶೋಷಣೆಗಾಗಿ ಹುಡುಗಿಯರನ್ನು ಅಪಹರಿಸುತ್ತಿದ್ದ ಒಂದು ಅಂತಾರಾಷ್ಟ್ರೀಯ ಲಂಪಟ ಸಾಹಿತ್ಯ ಗುಪ್ತಕೂಟವು ಪತ್ತೆಹಚ್ಚಲ್ಪಟ್ಟಾಗ, ಅಲ್ಲಿರುವ ಒಂದು ದೇಶದಲ್ಲಿ ಗಲಭೆಯುಂಟಾಯಿತು. ಕೆಲವು ಹುಡುಗಿಯರನ್ನು ಕೊಲ್ಲಲಾಗಿತ್ತು ಅಥವಾ ಊಟಕೊಡದೆ ಸಾಯಿಸಲಾಗಿತ್ತು.
ಮಕ್ಕಳ ದೌರ್ಜನ್ಯ ಮತ್ತು ಶೋಷಣೆಯ ವಿಷಯದಲ್ಲಿ, ಅನೇಕ ದೇಶಗಳಲ್ಲಿ ನಿಜವಾದ ಸಮಸ್ಯೆಯಿದೆಯೆಂದು ಈ ಎಲ್ಲ ವರದಿಗಳು ಖಂಡಿತವಾಗಿಯೂ ಸೂಚಿಸುತ್ತವೆ. ಆದರೆ ಇದು ಒಂದು ಜಗದ್ವ್ಯಾಪಕ ಸಮಸ್ಯೆಯಾಗಿದೆಯೆಂದು ಹೇಳುವುದು ಅತಿಶಯೋಕ್ತಿಯೊ? ಈ ಪ್ರಶ್ನೆಯನ್ನು ಮುಂದಿನ ಲೇಖನವು ಉತ್ತರಿಸುವುದು.
[ಪುಟ 5 ರಲ್ಲಿರುವ ಚಿತ್ರ]
ಲೈಬೀರಿಯದಲ್ಲಿ ಒಬ್ಬ ಬಾಲ ಸೈನಿಕ
[ಕೃಪೆ]
John Gunston/Sipa Press
[ಪುಟ 5 ರಲ್ಲಿರುವ ಚಿತ್ರ]
ಕೊಲಂಬಿಯದಲ್ಲಿನ ಒಂದು ಇಟ್ಟಿಗೆ ಕಾರ್ಖಾನೆಯಲ್ಲಿ, ಮಕ್ಕಳು ಮಾನವ ಕೈಬಂಡಿಗಳಾಗಿ ಕೆಲಸಮಾಡುತ್ತಾರೆ
[ಕೃಪೆ]
UN PHOTO 148000/Jean Pierre Laffont
[ಪುಟ 4 ರಲ್ಲಿರುವ ಚಿತ್ರ ಕೃಪೆ]
FAO photo/F. Botts