ಜಗತ್ತನ್ನು ಗಮನಿಸುವುದು
ನಕಲಿ ಔಷಧಸೂಚಿ ಔಷಧಗಳ ಕುರಿತು ಎಚ್ಚರಿಕೆಯಿಂದಿರಿ
ಸುಮಾರು 1,600 ಕೋಟಿ ಡಾಲರುಗಳ ವಾರ್ಷಿಕ ಮಾರಾಟಗಳೊಂದಿಗೆ, ನಕಲಿ ಔಷಧ ವ್ಯಾಪಾರವು ಉಚ್ಛ್ರಾಯ ಸ್ಥಿತಿಗೇರುತ್ತಿದೆ. ಲ ಮೊಂಡ್ ಎಂಬ ಪ್ಯಾರಿಸ್ ವಾರ್ತಾಪತ್ರಿಕೆಗನುಸಾರ, “ಪ್ರತಿ ವರ್ಷ ಲೋಕವ್ಯಾಪಕವಾಗಿ ಮಾರಲ್ಪಡುವ ಔಷಧಗಳಲ್ಲಿ ಕಡಿಮೆಪಕ್ಷ 7 ಪ್ರತಿಶತ ನಕಲಿಯಾಗಿವೆಯೆಂದು ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲ್ಯೂಏಚ್‌ಓ) ಅಂದಾಜುಮಾಡುತ್ತದೆ.” ಬ್ರೆಸಿಲ್‌ನಲ್ಲಿ ಪ್ರತಿಶತವು, 30ರಷ್ಟು ಮತ್ತು ಆಫ್ರಿಕದಲ್ಲಿ 60 ಪ್ರತಿಶತದಷ್ಟು ಉಚ್ಛವಾಗಿರಬಹುದು. ನಕಲಿ ಔಷಧಗಳು, ಸಾಚಾ ಉತ್ಪನ್ನದ ದುರ್ಬಲವಾದ ನಕಲುರೂಪಗಳಿಂದ ಹಿಡಿದು, ಸಂಪೂರ್ಣವಾಗಿ ನಿಷ್ಪ್ರಯೋಜಕವಾದ ಅಥವಾ ವಿಷಕಾರಿ ದ್ರವ್ಯಗಳ ವರೆಗೂ ಇರಬಲ್ಲವು. ಲ ಮೊಂಡ್, ನೈಜರ್‌ನಲ್ಲಿನ ಮಿದುಳ ಊರಿಯೂತ ಸೋಂಕುರೋಗದ ಉದಾಹರಣೆಯನ್ನು ಉಲ್ಲೇಖಿಸುತ್ತದೆ. ಅಲ್ಲಿ ಸಾವಿರಾರು ಜನರಿಗೆ, ಯಾವುದು ಬರಿಯ ನೀರೆಂದು ಅನಂತರ ತಿಳಿದುಬಂತೋ ಅದರ ಲಸಿಕೆಹಾಕಲಾಯಿತು. ಮತ್ತು ನೈಜೀರಿಯದಲ್ಲಿ, ಘನೀಕರಣರೋಧಕವು ಇದ್ದಂತಹ ಸಿರಪನ್ನು ಕೊಟ್ಟಾಗ 109 ಮಕ್ಕಳು ಸತ್ತರು. “ಸ್ವತಃ ಆಸ್ಪತ್ರೆಗಳೇ ಅನೇಕ ಸಲ ಕಳ್ಳಸಂತೆಗೆ ಮೊರೆಹೋಗುತ್ತವೆ, ಯಾಕಂದರೆ ಅದು ಕಡಿಮೆ ಹಣಕ್ಕೆ ಉತ್ಪನ್ನಗಳನ್ನು ನೀಡುತ್ತದೆ,” ಎಂದು ಆ ವಾರ್ತಾಪತ್ರಿಕೆಯು ತಿಳಿಸುತ್ತದೆ. ಅನೇಕ ದೇಶಗಳಲ್ಲಿ ನಿಯಮದ ನಿಷ್ಪರಿಣಾಮಕಾರಿ ಅಥವಾ ಭ್ರಷ್ಟ ಜಾರಿಗೊಳಿಸುವಿಕೆಯ ಕಾರಣದಿಂದ, ಆರೋಗ್ಯ ಅಧಿಕಾರಿಗಳಿಗೆ ಈ ಸಮಸ್ಯೆಗೆ ಒಂದು ಪರಿಹಾರವನ್ನು ಕಂಡುಕೊಳ್ಳಲು ಕಷ್ಟಕರವಾಗುತ್ತಿದೆ.
ಎಲುಬು ವರ್ತಕರು
“ಯುದ್ಧ-ಛಿದ್ರ ಕಾಬುಲ್ ದೇಶದ ಹತಾಶ ನಿವಾಸಿಗಳು, ಕೋಳಿ ಆಹಾರದಲ್ಲಿನ ಬಳಕೆಗಾಗಿ ಮಾರಲು ಮಾನವ ಎಲುಬುಗಳನ್ನು ಅಗೆದು ತೆಗೆಯುತ್ತಿದ್ದಾರೆ” ಎಂದು ರೈಟರ್ಸ್ ವಾರ್ತಾ ಸೇವೆಯು ವರದಿಸುತ್ತದೆ. ಕ್ಯಾಲ್ಸಿಯಮ್, ಫಾಸ್ಫೆಟ್, ಮತ್ತು ಕಾರ್ಬನೆಟ್ ಸಮೃದ್ಧವಾಗಿರುವ ಎಲುಬನ್ನು, ಪ್ರಾಣಿಆಹಾರ, ಸಾಬೂನು ಮತ್ತು ಅಡಿಗೆ ಎಣ್ಣೆಯನ್ನು ತಯಾರಿಸಲು ಉಪಯೋಗಿಸಲಾಗುತ್ತದೆ. ಸುಮಾರು ಆರು ಕಿಲೊಗ್ರಾಮ್‌ಗಳಷ್ಟು ತೂಕದ ಒಂದು ಅಸ್ಥಿಪಂಜರವು, ಸುಮಾರು 50 ಸೆಂಟ್ಸ್‌ಗಳನ್ನು ಗಳಿಸಬಲ್ಲದು. ಆ ಕಡುಬಡತನದ ನಗರದಲ್ಲಿ ಇದು ಸಂಬಂಧಸೂಚಕವಾಗಿ ಹಣದ ದೊಡ್ಡ ಮೊತ್ತವಾಗಿದೆ. “ಅದು ಒಳ್ಳೆಯ ವ್ಯಾಪಾರವಾಗಿದೆ,” ಎಂದು 14 ವರ್ಷ ಪ್ರಾಯದ ಫೈಸ್‌ದೀನ್ ಹೇಳುತ್ತಾನೆ. “ನಾನು ಅನೇಕವೇಳೆ ಪ್ರಾಣಿಯ ಎಲುಬುಗಳನ್ನು ಒಟ್ಟುಗೂಡಿಸುತ್ತೇನಾದರೂ, ಇಲ್ಲಿ ಮಾನವ ಎಲುಬುಗಳನ್ನು ಕಂಡುಕೊಳ್ಳುವುದು ಹೆಚ್ಚು ಸುಲಭ.” ವಿಷಾದಕರವಾಗಿ, ಆಫ್‌ಘಾನಿಸ್ತಾನ್‌ನಲ್ಲಿನ ಅನೇಕ ವರ್ಷಗಳ ಪೌರಯುದ್ಧವು, ಈ ಖನಿಜ ಭರಿತ ಸಾಮಗ್ರಿಯನ್ನು ಸುಲಭವಾಗಿ ದೊರೆಯುವಂತೆ ಸಾಧ್ಯಮಾಡಿದೆ.
ಸಮಯಕ್ಕಿಂತಲೂ ಹೆಚ್ಚಿನದ್ದನ್ನು ತಿಳಿಸುವಂತಹ ಕೈಗಡಿಯಾರಗಳು
ರೀಯೊ ಡೆ ಸನೆರೋದಲ್ಲಿ, ವಿಶ್ವವಿದ್ಯಾನಿಲಯದ ಪ್ರವೇಶ ಪರೀಕ್ಷೆಯಲ್ಲಿ ಮೋಸ ಮಾಡಲಿಕ್ಕಾಗಿ ಉಪಯೋಗಿಸಲಾದ ಅಂಕೀಯ ಕೈಗಡಿಯಾರಗಳನ್ನು ಹೊಂದಿರುವುದನ್ನು ಕಂಡುಹಿಡಿಯಲಾದ ಬಳಿಕ 77 ವಿದ್ಯಾರ್ಥಿಗಳನ್ನು ಅನರ್ಹಗೊಳಿಸಲಾಯಿತು ಎಂದು ಓ ಗ್ಲೊಬೊ ಎಂಬ ವಾರ್ತಾಪತ್ರಿಕೆಯು ವರದಿಸುತ್ತದೆ. ಆ ಗಡಿಯಾರಗಳು ಬಹುಮಟ್ಟಿಗೆ ಒಂದು ಟೆಲಿಫೋನ್ ಪೇಜರ್‌ನಂತೆ ಕೆಲಸಮಾಡಿದವು; ಆದರೆ ಟೆಲಿಫೋನ್ ನಂಬರ್‌ಗಳನ್ನು ಪಡೆಯುವ ಬದಲಿಗೆ, ಅವು ಪರೀಕ್ಷಾ ಪ್ರಶ್ನೆಗಳಿಗೆ ಸರಿಯಾದ ಉತ್ತರಗಳನ್ನು ಒದಗಿಸಿದವು. ಆ ಗಡಿಯಾರಗಳಲ್ಲಿ ಪ್ರತಿಯೊಂದಕ್ಕೆ ವಿದ್ಯಾರ್ಥಿಗಳು 14,000 ಡಾಲರುಗಳಷ್ಟು ಹಣವನ್ನು ತೆತ್ತಿದ್ದರೆಂದು ವಾರ್ತಾಪತ್ರಿಕೆಯು ಹೇಳುತ್ತದೆ. ಆಸಕ್ತಿಕರವಾಗಿ, 1987ರಷ್ಟು ಹಿಂದೆ, ಕಂಪ್ಯೂಟರೀಕೃತ ಕೈಗಡಿಯಾರಗಳನ್ನು ಉಪಯೋಗಿಸುವ ಮೋಸಗಾರರ ಕುರಿತಾಗಿ ಎಚ್ಚರ ವಹಿಸಲು ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿನ ಶಾಲಾ ಪರಿಶೀಲನಾ ಸಮಿತಿಗಳು ಶಿಕ್ಷಕರನ್ನು ಎಚ್ಚರಿಸಿದವು.
ವಿಕೃತಗೊಳಿಸಲ್ಪಟ್ಟ ದೃಷ್ಟಿ
ಹೆಚ್ಚಿನ ಜನರು ಒಂದು ಕನ್ನಡಿಯಲ್ಲಿ ನೋಡುವಂತಹ ಪ್ರತಿಬಿಂಬಿಸಲ್ಪಟ್ಟ ಆಕೃತಿ—ತಮ್ಮನ್ನೇ—ಯನ್ನು ಅಂಗೀಕರಿಸುತ್ತಾರೆ. ಆದರೆ ಬಾಡಿ ಡಿಸ್‌ಮಾರ್ಫಿಕ್ ಅಸ್ವಸ್ಥತೆಯೆಂಬ ಒಂದು ಸ್ಥಿತಿಯಿಂದಾಗಿ ನರಳುತ್ತಿರುವ ಜನರು, ಒಂದು ಕನ್ನಡಿಯಲ್ಲಿ ದಿಟ್ಟಿಸಿ, ತಮ್ಮ ವಿಕೃತಗೊಂಡ ಆಕೃತಿಯನ್ನು ಕಾಣುತ್ತಾರೆ. “ಅದು ಜನರು ಒಂದು ಆಕಾರವನ್ನು—ಅದು ವಾಸ್ತವದಲ್ಲಿ ಸಾಮಾನ್ಯವಾಗಿರುವಾಗ—ಅಸಹ್ಯವಾಗಿ ಕುರೂಪವಾಗಿರುವುದಾಗಿ ಊಹಿಸುತ್ತಾ, ಅದರ ಮೇಲೆಯೇ ಗಮನವಿರಿಸುವ ಒಂದು ಸ್ಥಿತಿಯಾಗಿದೆ,” ಎಂದು ಕೆನಡದ ಬ್ರಿಟಿಷ್ ಕೊಲಂಬಿಯದ ದ ಪ್ರಾವಿನ್ಸ್ ತಿಳಿಸುತ್ತದೆ. ಊಹಿತ ದೋಷಗಳ ಕುರಿತ ವ್ಯಥೆಯು ಎಷ್ಟು ಮಹತ್ತರವಾಗಿರಬಲ್ಲದೆಂದರೆ, ಆ ಅಸ್ವಸ್ಥತೆಯಿಂದ ನರಳುತ್ತಿರುವವರಲ್ಲಿ ಸುಮಾರು 25 ಪ್ರತಿಶತ ಮಂದಿ ಆತ್ಮಹತ್ಯೆ ಮಾಡಲು ಪ್ರಯತ್ನಿಸುತ್ತಾರೆಂದು ನ್ಯೂ ಯಾರ್ಕ್ ಮನೋಶಾಸ್ತ್ರಜ್ಞ ಎರಿಕ್ ಹಾಲಾಂಡರ್ ಹೇಳುತ್ತಾರೆ.
ಇತಿಹಾಸ ಪ್ರಸಿದ್ಧ ಕೊಯ್ಲು
“ಚೀನಾದ ಗೋಧಿ ಹೊಲಗಳಲ್ಲಿ, ಯಂತ್ರಗಳು ಆ ದೇಶದ ಇತಿಹಾಸದಲ್ಲಿ ಪ್ರಥಮ ಬಾರಿ ಮನುಷ್ಯನನ್ನು ಮೀರಿಸಿವೆ,” ಎಂದು ರೈಟರ್ಸ್ ವಾರ್ತಾ ಸೇವೆಯು ವರದಿಸಿತು. 8,00,000ಕ್ಕಿಂತಲೂ ಹೆಚ್ಚು ಕೊಯ್ಲಿನ ಯಂತ್ರಗಳು ಉಪಯೋಗಿಸಲ್ಪಟ್ಟವೆಂದು ಅದು ಹೇಳಿತು. ಗೋಧಿಯು ಪ್ರಥಮವಾಗಿ ಸಾ.ಶ.ಪೂ. 1300ಕ್ಕಿಂತ ಸ್ವಲ್ಪ ಸಮಯದ ಮುಂಚೆ ಚೀನಕ್ಕೆ ಪರಿಚಯಿಸಲ್ಪಟ್ಟಿತ್ತು, ಮತ್ತು ಅಂದಿನಿಂದ ಹೆಚ್ಚಾಗಿ ಕೈಯಿಂದಲೇ, ಚಿಕ್ಕ ಕುಟುಂಬದ ಹೊಲಗಳಲ್ಲಿ ಸಫಲಪೂರ್ವಕವಾಗಿ ಬೆಳೆಸಲ್ಪಟ್ಟಿದೆ. ಆದರೆ ಚೀನಾ, ಲೋಕದ ಜನಸಂಖ್ಯೆಯಲ್ಲಿ 20ಕ್ಕಿಂತಲೂ ಹೆಚ್ಚು ಪ್ರತಿಶತವನ್ನು ಪ್ರತಿನಿಧಿಸುವುದಾದರೂ, ಕೇವಲ 7 ಪ್ರತಿಶತ ಫಲಪ್ರದ ಜಮೀನನ್ನು ಹೊಂದಿರುವುದರಿಂದ, “ಕೃಷಿ ಅಧಿಕಾರಿಗಳು, ರಾಷ್ಟ್ರದ ಹೊಲಗಳಲ್ಲಿ ಯಂತ್ರೀಕರಣವನ್ನು ಅತಿಶಯಿಸಲು ಆತುರರಾಗಿದ್ದಾರೆ,” ಎಂಬುದಾಗಿ ವರದಿಯು ಹೇಳಿತು.
ಸಿಂಗಾಪುರದ ವಿದ್ಯಾರ್ಥಿಗಳು ಮಿಂಚುತ್ತಾರೆ
ಲೋಕದ ಸುತ್ತಲೂ ಇರುವ ಶಿಕ್ಷಣದ ಮಟ್ಟಗಳನ್ನು ಹೋಲಿಸಲಿಕ್ಕಾಗಿ, 41 ವಿಭಿನ್ನ ದೇಶಗಳಿಂದ ಬಂದ ಐದು ಲಕ್ಷಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು 90 ನಿಮಿಷಗಳ ಪರೀಕ್ಷೆಯನ್ನು ತೆಗೆದುಕೊಂಡರು. ಫಲಿತಾಂಶಗಳೇನು? ಪರೀಕ್ಷಾ ಅಂಕಗಳು, ಗಣಿತ ಮತ್ತು ವಿಜ್ಞಾನದಲ್ಲಿ—ಎರಡರಲ್ಲೂ—ಸಿಂಗಾಪುರ ಲೋಕದ ಅತ್ಯುತ್ತಮವಾದ ವಿದ್ಯಾರ್ಥಿಗಳನ್ನು ಉತ್ಪಾದಿಸುತ್ತದೆಂಬುದನ್ನು ಸೂಚಿಸುತ್ತವೆ. ಸಿಂಗಾಪುರವನ್ನು ಹಿಂಬಾಲಿಸಿ, ಗಣಿತದ ಅಂಕಗಳಲ್ಲಿ ಉಳಿದ ಹತ್ತು ಅಗ್ರ ದೇಶಗಳು, ದಕ್ಷಿಣ ಕೊರಿಯ, ಜಪಾನ್, ಹಾಂಗ್ ಕಾಂಗ್, ಬೆಲ್ಜಿಯಮ್, ಚೆಕ್ ರಿಪಬ್ಲಿಕ್, ಸ್ಲೊವಾಕ್ ರಿಪಬ್ಲಿಕ್, ಸ್ವಿಟ್ಸರ್ಲೆಂಡ್, ನೆದರ್‌ಲೆಂಡ್ಸ್, ಮತ್ತು ಸ್ಲೊವೇನಿಯ ಆಗಿದ್ದವು. ಅತ್ಯುತ್ತಮ ವಿಜ್ಞಾನ ಅಂಕಗಳು, ಸಿಂಗಾಪುರ, ಚೆಕ್ ರಿಪಬ್ಲಿಕ್, ಜಪಾನ್, ದಕ್ಷಿಣ ಕೊರಿಯ, ಬಲ್ಗೇರಿಯ, ನೆದೆರ್‌ಲೆಂಡ್ಸ್, ಸ್ಲೊವೇನಿಯ, ಆಸ್ಟ್ರೀಯ, ಹಂಗೆರಿ, ಮತ್ತು ಇಂಗ್ಲೆಂಡ್‌ಗೆ ಸಿಕ್ಕಿದವು. ಸುಮಾರು 34,00,000 ಜನರು ಮಾತ್ರ ಇರುವ ಒಂದು ರಾಷ್ಟ್ರವು, ಲೋಕದ ಉಳಿದ ಭಾಗವನ್ನು ಬುದ್ಧಿವಂತಿಕೆಯಲ್ಲಿ ಮೀರಿಸಿದ್ದು ಹೇಗೆ? ಪ್ರಾಯಶಃ ಕಠಿನ ಶ್ರಮದ ಮೂಲಕವೇ. ಸಿಂಗಾಪುರದ ವಿದ್ಯಾರ್ಥಿಗಳು, ಒಂದು ದಿನದಲ್ಲಿ ಶಾಲಾ ಮನೆಕೆಲಸವನ್ನು ಮಾಡಲು ಸರಾಸರಿ 4.6 ತಾಸುಗಳನ್ನು ಕಳೆಯುತ್ತಿರುವಾಗ, ಅಂತಾರಾಷ್ಟ್ರೀಯ ಸರಾಸರಿಯು 2ರಿಂದ 3 ತಾಸುಗಳಾಗಿರುತ್ತದೆ ಎಂದು ಏಷಿಯಾವೀಕ್ ವರದಿಸುತ್ತದೆ.
ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಬೆಚ್ಚಗಾಗಿರಿಸಲ್ಪಟ್ಟ ರೋಗಿಗಳು
ವಾಯುವಾಹಿತ ಬ್ಯಾಕ್ಟೀರಿಯಗಳ ಬೆಳವಣಿಗೆಯನ್ನು ಕುಂಠಿತಗೊಳಿಸಲು ತಣ್ಣಗಿರಿಸಲ್ಪಡುವ ಆಸ್ಪತ್ರೆಯ ಶಸ್ತ್ರಕ್ರಿಯೆಯ ಕೋಣೆಗಳು, ಸೋಂಕಿನ ಅಪಾಯವನ್ನು ಮೂರು ಪಟ್ಟು ವೃದ್ಧಿಸುತ್ತವೆ ಎಂದು ಕ್ಯಾಲಿಫೋರ್ನಿಯದ ವಿಶ್ವವಿದ್ಯಾನಿಲಯದ ಅರಿವಳಿಕೆತಜ್ಞರಾದ ಡ್ಯಾನಿಯಲ್ ಸೆಸ್ಲರ್ ಮಾಡಿದಂತಹ ಒಂದು ಹೊಸ ಅಧ್ಯಯನವು ವಾದಿಸುತ್ತದೆ. “ಗಾಯದ ಸೋಂಕನ್ನು ನಿಜವಾಗಿ ಉಂಟುಮಾಡುವಂತಹದ್ದು, ಗಾಳಿಯಲ್ಲಿ ತೇಲಾಡುತ್ತಿರುವ ಬ್ಯಾಕ್ಟೀರಿಯವಲ್ಲ, ಬದಲಾಗಿ ಚರ್ಮದ ಮೇಲೆ ಅಥವಾ ದೇಹದೊಳಗೆ ಬ್ಯಾಕ್ಟೀರಿಯದ ವಿರುದ್ಧ ರೋಗಿಯ ಕಡಿಮೆಗೊಂಡಿರುವ ನಿರೋಧಶಕ್ತಿಯಾಗಿದೆ,” ಎಂದು ಡಾ. ಸೆಸ್ಲರ್ ಹೇಳುತ್ತಾರೆ. ತಣ್ಣಗಿನ ಶಸ್ತ್ರಕ್ರಿಯೆ ಕೋಣೆಗಳು ಒಬ್ಬ ರೋಗಿಯ ದೇಹದ ತಾಪಮಾನವನ್ನು, ಎರಡೂವರೆ ಡಿಗ್ರಿ ಸೆಲ್ಸಿಯಸ್‌ನಷ್ಟು ಇಳಿಸಸಾಧ್ಯವಿದೆ. ಮತ್ತು ತಗ್ಗಿರುವ ದೇಹ ತಾಪಮಾನವು, ಸೋಂಕಿನ ವಿರುದ್ಧ ಹೋರಾಡಲು ಅತ್ಯಾವಶ್ಯಕವಾಗಿರುವ ಆಮ್ಲಜನಕಭರಿತ ರಕ್ತದ ಹರಿಯುವಿಕೆಯನ್ನು ಕಡಿಮೆಗೊಳಿಸುತ್ತದೆ. “ಸೋಂಕುರಕ್ಷಣೆಗಾಗಿ ಜವಾಬ್ದಾರವಾಗಿರುವ ಕೋಶಗಳು ಮತ್ತು ಎನ್ಸಿಮ್‌ಗಳು, ದೇಹವು ತಣ್ಣಗಿರುವಾಗ ದಕ್ಷವಾಗಿ ಕಾರ್ಯನಡಿಸುವುದೇ ಇಲ್ಲವೆಂದು” ಸೆಸ್ಲರ್ ಹೇಳುತ್ತಾರೆ. ಸೋಂಕಿನ ಕಡಿಮೆಗೊಳಿಸಲ್ಪಟ್ಟ ಪ್ರಮಾಣಕ್ಕೆ ಕೂಡಿಸಿ, ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಯಾರ ದೇಹ ತಾಪಮಾನವು ಸಾಧಾರಣವಾಗಿಡಲ್ಪಟ್ಟಿತ್ತೊ ಆ ರೋಗಿಗಳು ಆಸ್ಪತ್ರೆಯಲ್ಲಿ, ಬೆಚ್ಚಗಾಗಿರಿಸಲ್ಪಟ್ಟಿರದ ರೋಗಿಗಳಿಗಿಂತ ಬಹುಮಟ್ಟಿಗೆ ಮೂರು ದಿನ ಕಡಿಮೆ ಉಳಿದರೆಂದು ಸೆಸ್ಲರ್ ಮತ್ತು ಅವನ ಸಹಕರ್ಮಿಗಳು ಕಂಡುಕೊಂಡರು.