ಬ್ರೂನೋಸ್ಟ್—ನಾರ್ವೆಯ ಒಂದು ಚೀಸ್ ರಸಭಕ್ಷ್ಯ
ನಾರ್ವೆಯ ಎಚ್ಚರ! ಸುದ್ದಿಗಾರರಿಂದ
ನನ್ನೊಂದಿಗೆ ನಾರ್ವೆಯ ಸಾದಾ ಮನೆಯೊಂದಕ್ಕೆ ಬನ್ನಿ. ಹೊತ್ತರೂಟದ ಮೇಜಿನ ಮೇಲೆ ಬೆಣ್ಣೆ, ತೌಡಿರುವ ರೊಟ್ಟಿ ಮತ್ತು ಇನ್ನೂ ಅನೇಕ ವಸ್ತುಗಳಿವೆ. ಆದರೆ ತುಸು ನಿಲ್ಲಿ! ಒಂದು ವಸ್ತು ಕಾಣೆಯಾಗಿದೆ. ‘ಬ್ರೂನೋಸ್ಟ್ ಎಲ್ಲಿದೆ?’ ಎಂದು ಒಬ್ಬನು ಕೇಳಲು ಹೆಚ್ಚು ಸಮಯ ಹಿಡಿಯುವುದಿಲ್ಲ.
ನೂರಾರು ರೀತಿಯ ಚೀಸ್ (ಗಿಣ್ಣು)ಗಳನ್ನೊಳಗೊಂಡ, ಎಲ್ಲಾ ರೀತಿಯ ಸ್ಯಾಂಡ್ವಿಚ್ ಪೂರಣ (ಫಿಲ್ಲಿಂಗ್)ಗಳಲ್ಲಿ, ಬ್ರೂನೋಸ್ಟ್ ಅಥವಾ ಕಂದುಬಣ್ಣದ ಚೀಸ್, ತನ್ನದೇ ಆದ ಪ್ರತ್ಯೇಕ ವರ್ಗಕ್ಕೆ ಸೇರಿದೆ. ನಾರ್ವೆಯ ಹೆಚ್ಚಿನ ಮನೆಗಳಲ್ಲಿ ಇದು ಕಂಡುಬರುತ್ತದೆ ಮತ್ತು ಈ ದೇಶದಲ್ಲಿ ತಿನ್ನಲಾಗುವ ಎಲ್ಲ ಚೀಸ್ಗಳಲ್ಲಿ ಸುಮಾರು ಕಾಲು ಭಾಗವನ್ನು ಪ್ರತಿನಿಧಿಸುತ್ತದೆ. ನಾರ್ವೆಯ ಜನರು ಪ್ರತಿ ವರ್ಷ 12,000 ಟನ್ನುಗಳಷ್ಟು ಬ್ರೂನೋಸ್ಟ್ ಅನ್ನು ತಿನ್ನುತ್ತಾರೆ. ಅಂದರೆ ಪ್ರತಿ ವ್ಯಕ್ತಿಗೆ ಸರಾಸರಿ ಮೂರು ಕಿಲೊಗ್ರಾಮ್ಗಳಿಗಿಂತಲೂ ಹೆಚ್ಚು. ಅದೇ ಸಮಯದಲ್ಲಿ, ಆಸ್ಟ್ರೇಲಿಯ, ಕೆನಡ, ಡೆನ್ಮಾರ್ಕ್, ಸ್ವೀಡನ್ ಮತ್ತು ಅಮೆರಿಕದಂತಹ ದೇಶಗಳಿಗೆ, ಸುಮಾರು 450 ಟನ್ನುಗಳಷ್ಟು ಬ್ರೂನೋಸ್ಟ್ ಅನ್ನು ರಫ್ತುಮಾಡಲಾಗುತ್ತದೆ.
ಅನೇಕ ವಿದೇಶೀಯರಿಗೆ ಬ್ರೂನೋಸ್ಟ್ನ ಪ್ರಥಮ ರುಚಿ ದೊರೆಯುವುದು ನಾರ್ವೆಯ ಹೊಟೇಲೊಂದರಲ್ಲಿ. ಉರುಟು ಅಥವಾ ಚತುರ್ಭುಜಾಕೃತಿಯಾಗಿರುವ ಈ ಚೀಸ್, ಅನುಕೂಲವಾದ, ಓಸ್ಟರ್ಹೋವಲ್ ಎಂದು ಕರೆಯಲ್ಪಡುವ ತುಂಡುಮಾಡುವ ಸಣ್ಣ ಉಪಕರಣದೊಂದಿಗೆ, ಹೊತ್ತರೂಟದ ಮೇಜಿನ ಮೇಲೆ ಅನಿವಾರ್ಯವಾಗಿ ಹೆಚ್ಚುಕಡಮೆ ಸದಾ ಇರುತ್ತದೆ. ಚೀಸ್ನ ಮೇಲ್ಭಾಗದಿಂದ ತೆಳು ಹೋಳುಗಳನ್ನು ಮಾಡಲು ಇದನ್ನು ಉಪಯೋಗಿಸಲಾಗುತ್ತದೆ.
ಆದರೆ ನಿಜವಾಗಿಯೂ ಬ್ರೂನೋಸ್ಟ್ ಅಂದರೇನು? ಇದನ್ನು ಕಂಡುಹಿಡಿಯಲು ನಾವು ಒಂದು ನಿಜ ಸೇಅಟರ್ಗೆ ಅಥವಾ ಬೆಟ್ಟದ ಬೇಸಗೆ ಹುಲ್ಲುಗಾವಲು ಹೊಲಕ್ಕೆ ಭೇಟಿಕೊಟ್ಟೆವು. ಇಲ್ಲಿ ಬ್ರೂನೋಸ್ಟ್ ಈಗಲೂ ಸಾಂಪ್ರದಾಯಿಕ ರೀತಿಯಲ್ಲಿ ತಯಾರಿಸಲ್ಪಡುತ್ತದೆ.
ಬ್ರೂನೋಸ್ಟ್ ಅನ್ನು ಸಾಂಪ್ರದಾಯಿಕ ವಿಧದಲ್ಲಿ ತಯಾರಿಸುವುದು
ನಾವು ತಲಪಿದಾಗ, ಆಗತಾನೇ ಆಡುಗಳ ಹಾಲು ಕರೆದಾಗಿತ್ತು. ಹಾಲಿನವಳು ಆಡಿನ ಹಾಲನ್ನು ರುಚಿಕರವಾದ ಚೀಸ್ ಆಗಿ ಮಾರ್ಪಡಿಸುವಾಗ, ಅವಳ ಜೊತೆಸೇರಲು ನಮಗೆ ಅನುಮತಿಸಲಾಯಿತು.
ಆಡುಗಳನ್ನು ದಿನಕ್ಕೆ ಎರಡಾವರ್ತಿ ಕರೆಯಲಾಗುತ್ತದೆ ಮತ್ತು ಹಾಲನ್ನು ಒಂದು ದೊಡ್ಡ ಪಾತ್ರೆಯೊಳಗೆ ಹಾಕಲಾಗುತ್ತದೆ. ಅಲ್ಲಿ ಅದನ್ನು ಸುಮಾರು 30 ಡಿಗ್ರಿ ಸೆಲ್ಸಿಯಸ್ನಷ್ಟು ತಾಪಮಾನದಲ್ಲಿ ಕಾಯಿಸಿ, ಅದಕ್ಕೆ ಹಾಲನ್ನು ಹೆಪ್ಪುಗಟ್ಟಿಸುವ ರೆನಿನ್ ಕಿಣ್ವವನ್ನು ಸೇರಿಸಲಾಗುತ್ತದೆ. ಬಿಳಿ ಮೊಸರು, ಹ್ವೇ (ಹಾಲೊಡಕು ನೀರು) ಎಂದು ಕರೆಯಲ್ಪಡುವ ಉಳಿದ ಹಾಲಿನಿಂದ ಪ್ರತ್ಯೇಕವಾಗಲಾರಂಭಿಸುತ್ತದೆ. ಹೆಚ್ಚಿನ ಹ್ವೇಯನ್ನು ಮೊಸರಿನಿಂದ ಪರಿಶ್ರಮಪಟ್ಟು ತೆಗೆಯಲಾಗುತ್ತದೆ. ಮೊಸರನ್ನು ಪ್ರತ್ಯೇಕವಾದ ಮರದ ಪಾತ್ರೆಗಳಲ್ಲಿ ನಾರ್ವೆಯ ಆಡಿನ ಬಿಳಿ ಚೀಸಾಗುವಂತೆ ಒಟ್ಟುಗೂಡಿಸಲಾಗುತ್ತದೆ. ಈ ಬಿಳಿ ಚೀಸು “ಪೂರ್ತಿ ಪಕ್ವವಾಗಿರದಿರು” (ಲೈವ್)ವುದರಿಂದ, ಅದು ಉಪಯೋಗಕ್ಕೆ ಸಿದ್ಧವಾಗುವ ಮೊದಲು ಸುಮಾರು ಮೂರು ವಾರ ಪಕ್ವವಾಗಬೇಕು.
ಹಾಗಾದರೆ, ಕಂದುಬಣ್ಣದ ಚೀಸ್ ಅಥವಾ ಬ್ರೂನೋಸ್ಟ್ನ ಕುರಿತೇನು? ಆ ಶುದ್ಧ ಹ್ವೇಗೆ ಈಗ ಹಾಲು ಮತ್ತು ಕೆನೆ ಕೂಡಿಸಲ್ಪಟ್ಟು, ಈ ಮಿಶ್ರಣವನ್ನು ಕುದಿಸಲಾಗುತ್ತದೆ. ಅದನ್ನು ಸತತವಾಗಿ ಕದಡಿಸುತ್ತಿರಬೇಕು. ಈ ಮಿಶ್ರಣ ಕುದಿಯುವಾಗ ಹೆಚ್ಚಿನ ಹಬೆ ಬಾಷ್ಪೀಕರಣಗೊಂಡು, ಹ್ವೇ ಬಣ್ಣ ಬದಲಾಯಿಸುತ್ತದೆ. ಸುಮಾರು ಮೂರು ತಾಸುಗಳ ಬಳಿಕ, ಅದು ಕಂದುಬಣ್ಣದ ಪೇಸ್ಟಾಗುತ್ತದೆ. ಆಗ ಅದನ್ನು ಪಾತ್ರೆಯಿಂದ ತೆಗೆದು, ಆ ಪೇಸ್ಟ್ ತಣ್ಣಗಾಗುವಾಗ ಆ ಕದಡಿಸುವಿಕೆಯು ಮುಂದುವರಿಯುತ್ತದೆ. ಅಂತಿಮವಾಗಿ ಅದನ್ನು ನಾದಿ, ಆ ಬಳಿಕ ಅಚ್ಚುಗಳೊಳಗೆ ತುರುಕಿಸಲಾಗುತ್ತದೆ. ಬಿಳಿ ಚೀಸ್ಗೆ ಅಸದೃಶವಾಗಿ, ಬ್ರೂನೋಸ್ಟ್ ಅನ್ನು ಪಕ್ವಗೊಳಿಸುವ ಅಗತ್ಯವಿರುವುದಿಲ್ಲ. ಮರುದಿನ, ಕಂದುಬಣ್ಣದ ಚೀಸ್ ಅಚ್ಚಿನಿಂದ ಹೊರತೆಗೆಯಲ್ಪಟ್ಟಾಗ, ಅದು, ಕಂದುಬಣ್ಣದ ನಾರ್ವೀಜಿಯನ್ ಆಡು ಚೀಸ್ನ ಪ್ರತಿಯೊಬ್ಬ ಪ್ರಿಯನನ್ನು ಮೆಚ್ಚಿಸಲು ಸಿದ್ಧವಾಗಿರುತ್ತದೆ.
ಈ ಕಾರ್ಯಗತಿಯ ಮೂಲತತ್ತ್ವಗಳು ಇನ್ನೂ ಅವೇ ಆಗಿರುವುದಾದರೂ, ಈ ಚೀಸ್ ಮಾಡುವ ಹಳೆಯ ರೀತಿಯ ವಿಧಾನವನ್ನು ದೀರ್ಘ ಸಮಯದಿಂದ ದೊಡ್ಡ ಪ್ರಮಾಣದ ಮೆಷೀನ್ ಉತ್ಪಾದನೆಯಿಂದ ಸ್ಥಾನಾಂತರಿಸಲಾಗಿದೆ. ಹಳೆಯ ಕಬ್ಬಿಣದ ತೆರೆದ ಪಾತ್ರೆಗಳ ಬದಲು ನಿರ್ವಾತ ಕೇಂದ್ರೀಕಾರಕ ಸಾಧನಗಳನ್ನು ಹಾಗೂ ಪ್ರೆಷರ್ ಕುಕ್ಕರ್ಗಳನ್ನು ಉಪಯೋಗಿಸುವ ಡೇರಿಗಳು, ಬೆಟ್ಟದ ಡೇರಿ ಫಾರ್ಮಿನ ಸ್ಥಳವನ್ನು ಭರ್ತಿಮಾಡಿವೆ.
ನಾರ್ವೀಜಿಯನ್ ನಿರ್ಮಿತಿ
ಬ್ರೂನೋಸ್ಟ್ ಹೇಗೆ ಆರಂಭಗೊಂಡಿತು? ಗುಡ್ಬ್ರಾನ್ಸ್ಡಾಲನ್ ಕಣಿವೆಯಲ್ಲಿ ಜೀವಿಸುತ್ತಿದ್ದ ಆನಿ ಹಾವ್ ಎಂಬ ಹಾಲಿನವಳು, 1863ರ ಬೇಸಗೆಯಲ್ಲಿ, ಭೇದನವಾಗಿ ಪರಿಣಮಿಸಿದ ಒಂದು ಪ್ರಯೋಗವನ್ನು ಮಾಡಿದಳು. ಆಕೆ ದನದ ಶುದ್ಧ ಹಾಲಿನಿಂದ ಚೀಸ್ ಮಾಡಿ ಹ್ವೇಯನ್ನು ಕುದಿಸಿ ಕಡಮೆಮಾಡುವ ಮೊದಲು, ಅದಕ್ಕೆ ಕೆನೆಯನ್ನು ಕೂಡಿಸಲು ಯೋಚಿಸಿದಳು. ಇದರ ಪರಿಣಾಮವಾಗಿ ಕೊಬ್ಬಿನಿಂದ ತುಂಬಿದ ಒಂದು ರುಚಿಕರವಾದ ಕಂದುಬಣ್ಣದ ಚೀಸ್ ಉಂಟಾಯಿತು. ತರುವಾಯ, ಜನರು ಉತ್ಪನ್ನದ ಮೂಲವಾಗಿ ಆಡಿನ ಹಾಲನ್ನೂ, ಆಡಿನ ಹಾಲು ಮತ್ತು ದನದ ಹಾಲಿನ ಮಿಶ್ರಣವನ್ನೂ ಉಪಯೋಗಿಸಲಾರಂಭಿಸಿದರು. 1933ರಲ್ಲಿ, ಆಕೆಯ ಮುದಿ ಪ್ರಾಯದಲ್ಲಿ ಆನಿ ಹಾವ್ಗೆ, ಆಕೆಯ ನಿರ್ಮಿತಿ ಸಲುವಾಗಿ ನಾರ್ವೆಯ ಅರಸನ ಸ್ಪೆಷಲ್ ಮೆಡಲ್ ಆಫ್ ಮೆರಿಟ್ ಪದಕವನ್ನು ಕೊಡಲಾಯಿತು.
ಇಂದು, ನಾಲ್ಕು ಪ್ರಧಾನ ರೀತಿಗಳ ಬ್ರೂನೋಸ್ಟ್ ಇದೆ: ಎಕ್ಟ ಯೇಟಾಸ್ಟ್ ಎಂಬ ನಿಜ ಆಡಿನ ಚೀಸ್, ಆಡಿನ ಶುದ್ಧ ಹಾಲಿನಿಂದ ಮಾಡಲ್ಪಡುತ್ತದೆ. ಗುಡ್ಬ್ರಾನ್ಸ್ಡಾಲ್ಸಾಸ್ಟ್ ಎಂಬ ಆ ಕಣಿವೆಯ ಹೆಸರಿನ ಅತಿ ಸಾಮಾನ್ಯ ಚೀಸ್ನಲ್ಲಿ 10-12 ಪ್ರತಿಶತ ಆಡಿನ ಹಾಲು ಮತ್ತು ಬಾಕಿ ದನದ ಹಾಲಿದೆ. ಫ್ಲೋಎಟೆಮಿಸಾಸ್ಟ್ ಕ್ರೀಮ್ ಹ್ವೇ ಚೀಸ್, ದನದ ಶುದ್ಧ ಹಾಲಿನಿಂದ ಮಾಡಲ್ಪಡುತ್ತದೆ. ಪ್ರೀಮ್ ಎಂಬ ಮೃದು ಕಂದುಬಣ್ಣದ ಹ್ವೇ ಚೀಸ್, ದನದ ಹಾಲಿನಿಂದ ಮಾಡಲ್ಪಟ್ಟರೂ ಅದಕ್ಕೆ ಸಕ್ಕರೆಯನ್ನು ಸೇರಿಸಲಾಗುತ್ತದೆ. ಇದನ್ನು ಬೇರೆ ಜಾತಿಯ ಚೀಸ್ಗಳಿಗಿಂತ ಕಡಮೆ ಕುದಿಸಲಾಗುತ್ತದೆ. ಅದರಲ್ಲಿರುವ ಕೊಬ್ಬು, ಸ್ಥಿರತೆ ಮತ್ತು ಬಣ್ಣ—ಚೀಸ್ ಎಷ್ಟು ನಸುಬಣ್ಣದ್ದು ಅಥವಾ ಕಡುಬಣ್ಣದ್ದು ಆಗಿರಬೇಕು ಎಂಬುದು—ಹ್ವೇ, ಕೆನೆ ಮತ್ತು ಹಾಲಿನ ಪ್ರಮಾಣ ಮತ್ತು ಕುದಿಸುವ ಸಮಯದ ಮೇಲೆ ಹೊಂದಿಕೊಂಡಿರುತ್ತದೆ. ಬ್ರೂನೋಸ್ಟ್ಅನ್ನು ಅಷ್ಟು ವಿಶೇಷವಾಗಿಸುವುದು ಯಾವುದೆಂದರೆ, ಅದು ವಾಸ್ತವವಾಗಿ ಹಾಲಿನ ಕೇಸಿಇನ್ (ಒಂದು ರೀತಿಯ ಫಾಸ್ಫೊ ಪ್ರೋಟೀನ್)ನಿಂದಲ್ಲ ಹ್ವೇಯಿಂದ ಮಾಡಲ್ಪಡುವುದೇ. ಹೀಗೆ, ಇದರಲ್ಲಿ ಹೆಚ್ಚು ಹಾಲು ಸಕ್ಕರೆ ಇರುವುದರಿಂದ ಅದು ಅದಕ್ಕೆ ಸಿಹಿಯಾದ, ಕ್ಯಾರಮೆಲ್ (ಸುಟ್ಟಸಕ್ಕರೆ) ರುಚಿಯನ್ನು ಕೊಡುತ್ತದೆ.
ನಾರ್ವೆಯ ಸಾವಿರಾರು ಮಂದಿಗೆ, ಬ್ರೂನೋಸ್ಟ್ ಒಂದು ರಸಭಕ್ಷ್ಯವಷ್ಟೇಯಲ್ಲ, ಅವರ ದೈನಂದಿನ ಆಹಾರದ ಅಗತ್ಯವಾದ ಭಾಗವೂ ಆಗಿದೆ. ಈಗ ಸ್ವತಃ ನೀವೇ ಈ ನಾರ್ವೀಜಿಯನ್ ವಿಶೇಷ ಭಕ್ಷ್ಯದ ರುಚಿನೋಡಲು ಬಯಸಬಹುದು.
[ಪುಟ 38 ರಲ್ಲಿರುವ ಚೌಕ/ಚಿತ್ರಗಳು]
ನಿಮ್ಮ ಸ್ವಂತ ಬ್ರೂನೋಸ್ಟ್ಅನ್ನು ಮಾಡುವುದು
ರುಚಿಕರವಾದ ಬ್ರೂನೋಸ್ಟ್ಅನ್ನು ಮಾಡುವುದು ತುಂಬ ಅನುಭವ ಬೇಕಾಗಿರುವ ಒಂದು ಕಲೆ. ವಿವಿಧ ರೀತಿಗಳ ಬ್ರೂನೋಸ್ಟ್ ತಯಾರಿಕೆಯ ವಿವರಗಳು ನಿಶ್ಚಯವಾಗಿಯೂ ವ್ಯಾಪಾರಗುಟ್ಟುಗಳಾಗಿವೆ. ಆದರೆ ನೀವು ಪ್ರಾಯಶಃ ಸ್ವಲ್ಪ ಪ್ರಯೋಗ ಮಾಡಿ ನಿಮ್ಮ ಸ್ವಂತ ಬ್ರೂನೋಸ್ಟ್ಅನ್ನು ತಯಾರಿಸಲು ಬಯಸಬಹುದು. ಮೊತ್ತದಲ್ಲಿ ಏಳು ಲೀಟರ್ ಹಾಲು ಮತ್ತು ಕೆನೆಯಿರುವ ಈ ಪಾಕವಿಧಾನವು ನಿಮಗೆ 700 ಗ್ರ್ಯಾಮ್ಗಳಷ್ಟು ಬ್ರೂನೋಸ್ಟ್ ಅನ್ನೂ ಉಪೋತ್ಪನ್ನವಾಗಿ 500 ಗ್ರ್ಯಾಮ್ಗಳಷ್ಟು ಬಿಳಿ ಚೀಸನ್ನೂ ಕೊಡುವುದು.
1. ಐದು ಲೀಟರ್ಗಳಷ್ಟು ಹಾಲನ್ನು ಸುಮಾರು 30 ಡಿಗ್ರಿ ಸೆಲ್ಸಿಯಸ್ ತನಕ ಕಾಯಿಸಿ, ರೆನಿನನ್ನು ಸೇರಿಸಿ ಸುಮಾರು ಅರ್ಧ ತಾಸು ಕಾಯಿರಿ. ಈಗ ಹಾಲು ಹೆಪ್ಪುಗಟ್ಟಲಾರಂಭಿಸುವುದು.
2. ಪ್ರತ್ಯೇಕಗೊಳ್ಳುವ ಮೊಸರನ್ನು ಘನಾಕಾರಗಳಲ್ಲಿ ಕತ್ತರಿಸಿ, ಎಚ್ಚರಿಕೆಯಿಂದ ಕದಡಿಸಿರಿ. ಇದು ಮೊಸರಿನಿಂದ ಹ್ವೇಯನ್ನು ಬಿಡುಗಡೆಗೊಳಿಸಲಿಕ್ಕಾಗಿದೆ. ಹಾಲನ್ನು ಇನ್ನೂ ಹೆಚ್ಚು ಕಾಯಿಸುವುದು ಪ್ರಯೋಜನಕರವಾಗಬಹುದು.
3. ಹ್ವೇಯನ್ನು ಸೋಸಿ ಮೊಸರನ್ನು ತೆಗೆಯಿರಿ. ಮೊಸರನ್ನು ಮೃದುಚೀಸಾಗಿ ಉಪಯೋಗಿಸಬಹುದು ಅಥವಾ ಅದನ್ನು ಬಿಳಿ ಚೀಸಾಗಿ ಅಚ್ಚೊತ್ತಿಸಬಹುದು.
4. ಕುದಿಸಿ ಕಡಮೆಮಾಡಿದ ಹ್ವೇ ಮಿಶ್ರಣದಲ್ಲಿ ಸಾಮಾನ್ಯವಾಗಿ ಮೂರರಲ್ಲಿ ಎರಡು ಪಾಲು ಹ್ವೇ ಮತ್ತು ಮೂರರಲ್ಲಿ ಒಂದು ಪಾಲು ಹಾಲು ಮತ್ತು ಕೆನೆ ಸೇರಿರುತ್ತದೆ. ಅಂದರೆ ನೀವೀಗ ಅದಕ್ಕೆ ಸುಮಾರು ಎರಡು ಲೀಟರ್ ಕೆನೆ ಮತ್ತು/ಅಥವಾ ಹಾಲನ್ನು ಕೂಡಿಸಬೇಕಾಗುತ್ತದೆ. ಪೂರ್ತಿ ಕೊಬ್ಬಿನ ಪ್ರಮಾಣವಿರುವ ಒಂದು ಸಾಧಾರಣ ಚೀಸನ್ನು ಪಡೆಯಲು 4-5 ಡೆಸಿಲೀಟರ್ ಕೆನೆಯನ್ನು ಉಪಯೋಗಿಸಿರಿ. ಕೆನೆಯ ಸಣ್ಣ ಪ್ರಮಾಣವು ಹೆಚ್ಚು ಕೊಬ್ಬಿಲ್ಲದ ಚೀಸನ್ನು ಕೊಡುವುದು.
5. ನೀವು ಕದಡಿಸುತ್ತ ಇರುವಾಗ ಆ ಮಿಶ್ರಣ ನಿಧಾನವಾಗಿ ಕುದಿಯಲಿ. ಹ್ವೇ ಸಾಕಾಗುವಷ್ಟು ಕುದಿದು ಕಡಮೆಯಾಗಲು ಅನೇಕ ತಾಸುಗಳು ಹಿಡಿಯುತ್ತವೆ. ಆಗ ಅದು ಹೆಚ್ಚು ಗಟ್ಟಿಯಾಗುವುದು. ಇದು ಹೇಗೆ ಗೊತ್ತಾಗುತ್ತದೆಂದರೆ, ಕದಡಿಸುತ್ತಿರುವಾಗ ನಿಮಗೆ ಆ ಕೆಟಲ್ನ ತಳವನ್ನು ನೋಡಸಾಧ್ಯವಾಗಬಹುದು. ಹ್ವೇಯನ್ನು ಎಷ್ಟು ಹೆಚ್ಚು ಕುದಿಸಲಾಗುತ್ತದೊ, ಚೀಸ್ ಅಷ್ಟು ಗಟ್ಟಿಯಾಗಿಯೂ ಕಡು ಛಾಯೆಯದ್ದಾಗಿಯೂ ಪರಿಣಮಿಸುವುದು.
6.ಕಂದುಬಣ್ಣದ ಪೇಸ್ಟನ್ನು ಕೆಟ್ಲ್ನಿಂದ ತೆಗೆದು, ಅದು ತಣಿಯುವಾಗ ಆ ಕದಡಿಸುವಿಕೆಯನ್ನು ಪೂರ್ತಿಯಾಗಿ ಮುಂದುವರಿಸಿರಿ. ಹರಳು ಹರಳಾದ ಚೀಸ್ ದೊರೆಯುವುದನ್ನು ತಪ್ಪಿಸಲು ಇದು ಪ್ರಾಮುಖ್ಯ.
7. ಹೆಚ್ಚುಕಡಮೆ ತಣ್ಣಗಾದಾಗ ಆ ಅಂಟು ಎಷ್ಟು ಗಟ್ಟಿಯಾಗುತ್ತದೆಂದರೆ, ಅದನ್ನು ನಾದಿ ಅಚ್ಚಿನೊಳಗೆ ತುರುಕಸಾಧ್ಯವಿದೆ. ಇಡೀ ರಾತ್ರಿ ಅದು ಹಾಗೆಯೇ ಇರಲಿ.
ಜೊತೆಯಲ್ಲಿ ತಿನ್ನುವ ವಸ್ತುವಾಗಿ, ಬ್ರೂನೋಸ್ಟ್ ತೆಳ್ಳಗಿನ ಹೋಳುಗಳಲ್ಲಿ ಅತಿ ರುಚಿಕರವಾಗಿದ್ದು, ಜನರು ತಾಜಾ ಬ್ರೆಡ್ನೊಂದಿಗೆ ಅಥವಾ ವಾಫ್ಲ್ ದೋಸೆಯೊಂದಿಗೆ ಅದನ್ನು ತಿನ್ನಲು ಇಷ್ಟಪಡುತ್ತಾರೆ.
[ಪುಟ 38 ರಲ್ಲಿರುವ ಚಿತ್ರ ಕೃಪೆ]
With kind courtesy of TINE Norwegian Dairies