ಬೈಬಲಿನ ದೃಷ್ಟಿಕೋನ
ವಿಜ್ಞಾನಕ್ಕೂ ಬೈಬಲಿಗೂ ಒಮ್ಮನವಿದೆಯೋ?
ವಿಮಾನಗಳು ಹಾಗೂ ಅಣು ಬಾಂಬುಗಳಿಂದ ಹಿಡಿದು ತಳಿಶಾಸ್ತ್ರೀಯವಾಗಿ ಕುಶಲತೆಯಿಂದ ನಿರ್ವಹಿಸಲ್ಪಟ್ಟ ಕೋಶಗಳ ಹಾಗೂ ಕುರಿಯ ಕ್ಲೋನಿಂಗ್ನ ವರೆಗೆ, ನಮ್ಮ 20ನೆಯ ಶತಮಾನವು ವಿಜ್ಞಾನದಿಂದ ನಿಯಂತ್ರಿಸಲ್ಪಟ್ಟಿರುವ ಒಂದು ಯುಗವಾಗಿದೆ. ವಿಜ್ಞಾನಿಗಳು ಮನುಷ್ಯರನ್ನು ಚಂದ್ರನ ಮೇಲೆ ಮುಟ್ಟಿಸಿದ್ದಾರೆ, ಸಿಡುಬನ್ನು ನಿರ್ಮೂಲಮಾಡಿದ್ದಾರೆ, ವ್ಯವಸಾಯವನ್ನು ಮಹತ್ತರವಾಗಿ ಬದಲಾಯಿಸಿದ್ದಾರೆ ಹಾಗೂ ಕೋಟ್ಯಂತರ ಜನರಿಗೆ ತತ್ಕ್ಷಣದ ಲೋಕವ್ಯಾಪಕ ಸಂಪರ್ಕ ವ್ಯವಸ್ಥೆಯನ್ನು ತಂದಿದ್ದಾರೆ. ಈ ಕಾರಣದಿಂದ ವಿಜ್ಞಾನಿಗಳು ಏನೇ ಹೇಳಿದರೂ ಜನರು ಕಿವಿಗೊಡುತ್ತಾರೆಂಬ ವಿಷಯದಲ್ಲಿ ಆಶ್ಚರ್ಯವೇನಿಲ್ಲ. ಆದರೆ ವಿಜ್ಞಾನಿಗಳಿಗೆ ಬೈಬಲಿನ ಕುರಿತಾಗಿ—ಏನಾದರೂ ಹೇಳಲಿಕ್ಕಿರುವಲ್ಲಿ—ಏನನ್ನು ಹೇಳುತ್ತಾರೆ? ಮತ್ತು ಪ್ರತಿಯಾಗಿ ಬೈಬಲು ವಿಜ್ಞಾನದ ಬಗ್ಗೆ ನಮಗೆ ಏನನ್ನು ಹೇಳುತ್ತದೆ?
ಅದ್ಭುತಕಾರ್ಯಗಳು ಅವೈಜ್ಞಾನಿಕವೋ?
“ವೈಜ್ಞಾನಿಕ ಸ್ವಭಾವದ ಜನರು ‘ಕಾರಣ ಮತ್ತು ಫಲಿತಾಂಶ’ ಸಂಬಂಧದಲ್ಲಿ ನಂಬುತ್ತಾರೆ. ಪ್ರತಿಯೊಂದಕ್ಕೂ ಒಂದು ಸಂಪೂರ್ಣ ಸಹಜ ವಿವರಣೆಯಿದೆ ಎಂಬುದಾಗಿ ಅವರು ಭಾವಿಸುತ್ತಾರೆ” ಎಂದು ಒಂದು ಕಂಟೆಂಪರರಿ ಎನ್ಸೈಕ್ಲೊಪೀಡಿಯ ಹೇಳುತ್ತದೆ. ಬೈಬಲಿನ ವಿದ್ಯಾರ್ಥಿಗಳು ಸಹ ಸ್ಥಾಪಿತ ವೈಜ್ಞಾನಿಕ ತತ್ತ್ವಗಳನ್ನು ಸ್ವೀಕರಿಸುತ್ತಾರೆ. ಆದರೂ, ಪ್ರಸ್ತುತ ಜ್ಞಾನಕ್ಕನುಸಾರ ವೈಜ್ಞಾನಿಕ ರೀತಿಯಲ್ಲಿ ವಿವರಿಸಲ್ಪಡಸಾಧ್ಯವಿರದ ಅದ್ಭುತಕಾರಿಯಾದ ಘಟನೆಗಳನ್ನು ಬೈಬಲು ಅನೇಕ ವೇಳೆ ಚರ್ಚಿಸುತ್ತದೆ ಎಂಬುದನ್ನು ಅವರು ಅಂಗೀಕರಿಸುತ್ತಾರೆ. ಯೆಹೋಶುವನ ದಿನದಲ್ಲಿ ಸೂರ್ಯನು ಸ್ತಬ್ಧವಾಗಿ ನಿಂತುಕೊಂಡದ್ದು ಹಾಗೂ ಯೇಸು ನೀರಿನ ಮೇಲೆ ನಡೆದದ್ದು ಉದಾಹರಣೆಗಳಾಗಿವೆ. (ಯೆಹೋಶುವ 10:12, 13; ಮತ್ತಾಯ 14:23-34) ಆದರೂ, ಈ ಅದ್ಭುತಕಾರ್ಯಗಳು, ಅತಿಲೌಕಿಕವಾದೊಂದು ವಿಧದಲ್ಲಿ ಕಾರ್ಯನಡಿಸುವ ದೇವರ ಶಕ್ತಿಯಿಂದ ಆಗುವ ವಿಷಯವಾಗಿ ಪ್ರಸ್ತುತಪಡಿಸಲ್ಪಟ್ಟಿವೆ.
ಈ ಅಂಶವು ನಿರ್ಧಾರಕವಾಗಿದೆ. ದೈವಿಕ ನೆರವಿಲ್ಲದೆ ಜನರು ನೀರಿನ ಮೇಲೆ ನಡೆಯಬಲ್ಲರು ಅಥವಾ ವಿನಾ ಕಾರಣವಾಗಿ ಆಕಾಶದಲ್ಲಿನ ಸೂರ್ಯನ ದೃಶ್ಯ ಚಲನೆಯು ಅಡ್ಡೈಸಲ್ಪಡಸಾಧ್ಯವಿದೆ ಎಂಬುದನ್ನು ಬೈಬಲು ಸಮರ್ಥಿಸಿದ್ದಲ್ಲಿ, ಅದು ವೈಜ್ಞಾನಿಕ ವಾಸ್ತವಾಂಶಗಳನ್ನು ವಿರೋಧಿಸುವಂತೆ ತೋರಬಹುದು. ಆದರೂ, ಅದು ಅಂಥ ಘಟನೆಗಳನ್ನು ದೇವರ ಶಕ್ತಿಗೆ ಆಧ್ಯಾರೋಪಿಸುವಾಗ, ಅದು ವಿಜ್ಞಾನವನ್ನು ವಿರೋಧಿಸದೆ ಚರ್ಚೆಯನ್ನು ವಿಜ್ಞಾನವು ಇನ್ನೂ ಅರ್ಥಮಾಡಿಕೊಳ್ಳಸಾಧ್ಯವಿರದ ವಿಚಾರಕ್ಷೇತ್ರಕ್ಕೆ ನಡೆಸುತ್ತದೆ.
ಬೈಬಲು ವಿಜ್ಞಾನವನ್ನು ವಿರೋಧಿಸುತ್ತದೋ?
ಇನ್ನೊಂದು ಕಡೆಯಲ್ಲಿ, ಜನರ ಜೀವಿತಗಳಲ್ಲಿನ ಸರ್ವಸಾಧಾರಣವಾದ ಘಟನೆಗಳನ್ನು ಅಥವಾ ಸಸ್ಯಗಳ, ಪ್ರಾಣಿಗಳ ಬಗ್ಗೆ ಹಾಗೂ ಸ್ವಾಭಾವಿಕ ಪ್ರಕೃತಿ ಘಟನೆಯ ಕುರಿತಾಗಿ ಮಧ್ಯೆ ಸೇರಿಸಿ ಹೇಳುವ ಬೈಬಲಿನ ಪ್ರಸಂಗಗಳ ಕುರಿತಾಗಿ ಏನು? ಆಸಕ್ತಿಭರಿತವಾಗಿಯೇ, ಆ ಹೇಳಿಕೆಗಳ ಪೂರ್ವಾಪರವು ಪರಿಗಣಿಸಲ್ಪಡುವಂಥ ವಿದ್ಯಮಾನಗಳಲ್ಲಿ ಬೈಬಲು ಜ್ಞಾತ ವೈಜ್ಞಾನಿಕ ವಾಸ್ತವಾಂಶಗಳನ್ನು ವಿರೋಧಿಸುತ್ತಿರುವ ಯಾವುದೇ ರುಜುಪಡಿಸಲ್ಪಟ್ಟ ಉದಾಹರಣೆಯಿರುವುದಿಲ್ಲ.
ಉದಾಹರಣೆಗೆ, ಸಾವಿರಾರು ವರ್ಷಗಳ ಹಿಂದೆ ಜೀವಿಸುತ್ತಿದ್ದ ಜನರ ಗ್ರಹಣಶಕ್ತಿಗಳನ್ನು ಪ್ರತಿಬಿಂಬಿಸುವ ಕಾವ್ಯಾತ್ಮಕ ಭಾಷೆಯನ್ನು ಬೈಬಲು ಆಗಾಗ್ಗೆ ಉಪಯೋಗಿಸುತ್ತದೆ. “ಎರಕದ ದರ್ಪಣದಷ್ಟು ಗಟ್ಟಿಯಾಗಿರುವ” ಆಕಾಶವನ್ನು ಯೆಹೋವನು ಬಡಿಯುವ ಅಥವಾ ರೂಪಿಸುವುದರ ಬಗ್ಗೆ ಯೋಬನ ಪುಸ್ತಕವು ಮಾತಾಡುವಾಗ, ಅದು ಸೂಕ್ತವಾಗಿ ಆಕಾಶವನ್ನು ಪ್ರಕಾಶಮಾನವಾದ ಪ್ರತಿಬಿಂಬವನ್ನು ನೀಡುವ ಒಂದು ಎರಕದ ದರ್ಪಣವಾಗಿ ವರ್ಣಿಸುತ್ತದೆ. (ಯೋಬ 37:18) ಭೂಮಿಗೆ “ಸುಣ್ಣಪಾದಗಳು” ಇರುವ ಅಥವಾ ‘ಮೂಲೆಗಲ್ಲು’ ಇರುವುದರ ಕುರಿತಾದ ದೃಷ್ಟಾಂತವನ್ನು ನೀವು ಅಕ್ಷರಾರ್ಥಕವಾಗಿ ತೆಗೆದುಕೊಳ್ಳದಂತೆಯೇ, ಆ ದೃಷ್ಟಾಂತವನ್ನು ಅಕ್ಷರಾರ್ಥಕವಾಗಿ ತೆಗೆದುಕೊಳ್ಳುವ ಅಗತ್ಯವಿಲ್ಲ.—ಯೋಬ 38:4-7.
ಇದು ಪ್ರಾಮುಖ್ಯವಾಗಿದೆ, ಏಕೆಂದರೆ ಹಲವಾರು ಭಾಷ್ಯಕಾರರು ಅಂಥ ದೃಷ್ಟಾಂತಗಳನ್ನು ಅಕ್ಷರಾರ್ಥಕವಾಗಿ ತೆಗೆದುಕೊಂಡಿದ್ದಾರೆ. (2 ಸಮುವೇಲ 22:8; ಕೀರ್ತನೆ 78:23, 24ನ್ನು ನೋಡಿ.) ದಿ ಆ್ಯಂಕರ್ ಬೈಬಲ್ ಡಿಕ್ಷ್ನರಿಯಿಂದ ಉದ್ಧರಿಸಲ್ಪಟ್ಟ ಈ ಮುಂದಿನ ವಿಷಯದಂತೆ ಯಾವುದನ್ನೋ ಬೈಬಲು ಕಲಿಸುತ್ತದೆ ಎಂದು ಅವರು ತೀರ್ಮಾನಿಸಿದ್ದಾರೆ.
“ಮಾನವರು ವಾಸಿಸುವ ಭೂಮಿಯನ್ನು, ನೀರಿನ ಅಮಿತ ಕ್ಷೇತ್ರದ ಮೇಲೆ ತೇಲುತ್ತಿರುವಂಥ ಒಂದು ದುಂಡನೆಯ, ಘನ ವಸ್ತು, ಪ್ರಾಯಶಃ ತಟ್ಟೆಯಾಕಾರದ ವಸ್ತುವಾಗಿ ನೆನಸಲಾಗಿದೆ. ಈ ಕೆಳಮಟ್ಟದ ಜಲರಾಶಿಗೆ ಸಮಾಂತರವಾಗಿದ್ದು ತದ್ರೀತಿಯಲ್ಲಿ ಅಮಿತವಾಗಿರುವ ಎರಡನೆಯ ಜಲರಾಶಿಯಿದೆ. ಇಲ್ಲಿಂದ ನೀರು ಸ್ವರ್ಗೀಯ ಜಲಾಶಯವನ್ನು ಭೇದಿಸುತ್ತಾ ರಂಧ್ರಗಳು ಹಾಗೂ ಕಾಲುವೆಗಳ ಮುಖಾಂತರ ಮಳೆಯ ರೂಪದಲ್ಲಿ ಕೆಳಗೆ ಸುರಿಯುತ್ತದೆ. ಸೂರ್ಯಚಂದ್ರರೂ ಇತರ ಜ್ಯೋತಿರ್ವಾಹಗಳೂ ಭೂಮಿಯ ಮೇಲೆ ಕಮಾನಿನಂತಿರುವ ಬಾಗಿದ ವಿನ್ಯಾಸದಲ್ಲಿ ಸ್ಥಾಯಿಯಾಗಿವೆ. ಈ ವಿನ್ಯಾಸವು ಸುಪರಿಚಿತ ಯಾಜಕೀಯ ವರ್ಣನೆಯ ‘ತಾರಾಗೋಳ’ (ರೇಖಿಯ) ಆಗಿದೆ.”
ಸ್ಫುಟವಾಗಿಯೇ, ಈ ವರ್ಣನೆಯು ಆಧುನಿಕ ವಿಜ್ಞಾನದೊಂದಿಗೆ ಅಸಮ್ಮತಿಸುತ್ತದೆ. ಆದರೆ ಇದು ಆಕಾಶದ ಕುರಿತಾದ ಬೈಬಲಿನ ಕಲಿಕೆಯ ಪ್ರಾಮಾಣಿಕ ನಿರ್ಧಾರಣೆಯಾಗಿದೆಯೋ? ಇಲ್ಲವೇ ಇಲ್ಲ. ದಿ ಇಂಟರ್ನ್ಯಾಷನಲ್ ಸ್ಟ್ಯಾಂಡರ್ಡ್ ಬೈಬಲ್ ಎನ್ಸೈಕ್ಲೊಪೀಡಿಯ ಹೇಳುವುದೇನೆಂದರೆ, ಹೀಬ್ರೂ ವಿಶ್ವದ ಕುರಿತ ಅಂಥ ವರ್ಣನೆಗಳು “ನಿಜತ್ವದಲ್ಲಿ ಹಳೆಯ ಒಡಂಬಡಿಕೆಯಲ್ಲಿರುವ ಯಾವುದೇ ವಾಸ್ತವವಾದ ಹೇಳಿಕೆಗಳ ಮೇಲೆ ಆಧಾರಿತವಾಗಿರುವುದಕ್ಕಿಂತಲೂ ಹೆಚ್ಚಾಗಿ ಯೂರೋಪಿನ ಕತ್ತಲೆ ಯುಗಗಳ ಸಮಯದಲ್ಲಿ ಪ್ರಚಲಿತವಾಗಿದ್ದ ವಿಚಾರಗಳ ಮೇಲೆ ಆಧಾರಿತವಾಗಿವೆ.” ಆ ಮಧ್ಯಯುಗಗಳ ವಿಚಾರಗಳು ಎಲ್ಲಿಂದ ಬಂದವು? ಡೇವಿಡ್ ಸಿ. ಲಿಂಡ್ಬರ್ಗ್, ಪಾಶ್ಚಾತ್ಯ ವಿಜ್ಞಾನದ ಪ್ರಾರಂಭಗಳು (ಇಂಗ್ಲಿಷ್) ಎಂಬ ಪುಸ್ತಕದಲ್ಲಿ ವಿವರಿಸುವುದೇನೆಂದರೆ, ಯಾರ ಕೃತಿಗಳು ಹೆಚ್ಚಾಗಿ ಮಧ್ಯಯುಗದ ಕಲಿಕೆಯ ಆಧಾರವಾಗಿದ್ದವೋ, ಆ ಪುರಾತನ ಗ್ರೀಕ್ ತತ್ತ್ವಜ್ಞಾನಿಯಾದ ಅರಿಸ್ಟಾಟಲ್ನ ವಿಶ್ವವಿಜ್ಞಾನದ ಮೇಲೆ ಅವು ಬಹಳವಾಗಿ ಅವಲಂಬಿಸಿದ್ದವು.
ದೇವರು ಬೈಬಲನ್ನು 20ನೆಯ ಶತಮಾನದ ವಿಜ್ಞಾನಿಗೆ ರಂಜಿಸುವ ಭಾಷೆಯಲ್ಲಿ ಹೇಳುವುದು ಅರ್ಥಹೀನವೂ ಅಪಕರ್ಷಿಸುವಂಥದ್ದೂ ಆಗಿರಸಾಧ್ಯವಿತ್ತು. ವೈಜ್ಞಾನಿಕ ಸೂತ್ರಗಳ ಬದಲಿಗೆ, ಬೈಬಲು ಕಣ್ಣಿಗೆಕಟ್ಟುವಂಥ ದೃಷ್ಟಾಂತಗಳನ್ನು ಒಳಗೊಂಡಿರುತ್ತದೆ. ಈ ದೃಷ್ಟಾಂತಗಳು ಅವುಗಳನ್ನು ಪ್ರಥಮವಾಗಿ ಬರೆದಂತಹ ಜನರ ದೈನಂದಿನ ಜೀವಿತದಿಂದ ತೆಗೆಯಲ್ಪಟ್ಟಿವೆ. ಇವು ಕೂಡ ಅನಂತ ಶಕ್ತಿಯಿಂದ ಸಚೇತನವಾಗಿರುವ ಕಣ್ಣಿಗೆಕಟ್ಟುವಂಥ ವರ್ಣನೆಗಳಾಗಿವೆ.—ಯೋಬ 38:8-38; ಯೆಶಾಯ 40:12-23.
ಉನ್ನತ ಮೂಲದಿಂದ ಬರುವ ಜ್ಞಾನ
ಆದರೂ ಆಸಕ್ತಿಭರಿತವಾಗಿಯೇ, ಕೆಲವು ಬೈಬಲ್ ಸಂಬಂಧಿತ ಸೂಚಿಗಳು ಆ ಸಮಯದಲ್ಲಿ ಜೀವಿಸುತ್ತಿದ್ದ ಜನರಿಗೆ ಲಭ್ಯವಾಗಿರದಿದ್ದ ವೈಜ್ಞಾನಿಕ ಜ್ಞಾನವನ್ನು ಪ್ರತಿಬಿಂಬಿಸುವಂತೆ ಕಂಡುಬರುತ್ತವೆ. ದೇವರು “ಶೂನ್ಯದ ಮೇಲೆ [ಆಕಾಶದ] ಉತ್ತರ ದಿಕ್ಕನ್ನು ವಿಸ್ತರಿಸಿ ಭೂಲೋಕವನ್ನು ಯಾವ ಆಧಾರವೂ ಇಲ್ಲದೆ ತೂಗಹಾಕಿದ್ದಾನೆ” ಎಂದು ಯೋಬನು ವರ್ಣಿಸುತ್ತಾನೆ. (ಯೋಬ 26:7) ಭೂಮಿಯು “ಯಾವ ಆಧಾರವೂ ಇಲ್ಲದೆ” ತೂಗುಹಾಕಲ್ಪಟ್ಟಿರುವ ವಿಚಾರವು, ಭೂಮಿಯನ್ನು ಆನೆಗಳ ಅಥವಾ ಕಡಲ ಆಮೆಗಳ ಮೇಲೆ ಇರಿಸಿದ ಹೆಚ್ಚಿನ ಪ್ರಾಚೀನ ಜನರ ಮಿಥ್ಯೆಗಳಿಂದ ಬಹಳ ಭಿನ್ನವಾಗಿತ್ತು. ಆ ಸಮಯದಲ್ಲಿದ್ದ ವೈದ್ಯಕೀಯ ಜ್ಞಾನಕ್ಕಿಂತ ಬಹಳ ಮುಂಚೆಯೇ ಆರೋಗ್ಯಸೂತ್ರಗಳಿಗಾಗಿ ಬೇಕಾಗಿರುವ ಆವಶ್ಯಕತೆಗಳನ್ನು ಮೋಶೆಯ ನಿಯಮವು ಒಳಗೊಂಡಿದೆ. ಕುಷ್ಠರೋಗವಿದೆ ಎಂದು ಸಂದೇಹಿಸಲ್ಪಟ್ಟ ಜನರ ಸಂಪರ್ಕ ನಿಷೇಧಕ್ಕಾಗಿ ನಿಯಮಗಳು ಹಾಗೂ ಮೃತ ಜನರನ್ನು ಮುಟ್ಟುವುದರ ವಿರುದ್ಧವಿದ್ದ ಪ್ರತಿಬಂಧವು ಅನೇಕ ಇಸ್ರಾಯೇಲ್ಯರ ಜೀವಗಳನ್ನು ರಕ್ಷಿಸಿದವೆಂಬುದರಲ್ಲಿ ಸಂದೇಹವೇ ಇಲ್ಲ. (ಯಾಜಕಕಾಂಡ 13; ಅರಣ್ಯಕಾಂಡ 19:11-16) ಸ್ಪಷ್ಟ ವೈದೃಶ್ಯದಲ್ಲಿ, ಅಶ್ಶೂರ್ಯರ ವೈದ್ಯಕೀಯ ಅಭ್ಯಾಸಗಳು “ಧರ್ಮ, ಕಣಿಹೇಳುವಿಕೆ ಹಾಗೂ ಭೂತವಿದ್ಯೆಯ ಒಂದು ಮಿಶ್ರಣ”ವಾಗಿ ವರ್ಣಿಸಲ್ಪಟ್ಟಿವೆ ಮತ್ತು ಅವು ನಾಯಿ ಹೇಲು ಹಾಗೂ ಮಾನವ ಮೂತ್ರದಿಂದ ಮಾಡಲ್ಪಡುವ ಚಿಕಿತ್ಸೆಗಳನ್ನು ಒಳಗೊಂಡಿದ್ದವು.
ಸೃಷ್ಟಿಕರ್ತನಿಂದ ಪ್ರೇರಿಸಲ್ಪಟ್ಟ ಒಂದು ಗ್ರಂಥದಿಂದ ಒಬ್ಬನು ನಿರೀಕ್ಷಿಸಬಹುದಾಗಿರುವಂತೆ, ಬೈಬಲು ಪ್ರಾಚೀನ ಜನರಿಗೆ ಅರ್ಥಹೀನವಾಗಿರಸಾಧ್ಯವಿದ್ದ ಅಥವಾ ಗೊಂದಲಕ್ಕೀಡುಮಾಡಿರಸಾಧ್ಯವಿದ್ದ ವೈಜ್ಞಾನಿಕ ವಿವರಣೆಗಳಲ್ಲಿ ಎಂದೂ ತಲ್ಲೀನಗೊಳ್ಳದಿರುವುದಾದರೂ, ಸಮಯಕ್ಕೆ ಬಹಳ ಮುಂಚೆಯೇ ಸ್ಪಷ್ಟವಾದ ವೈಜ್ಞಾನಿಕ ನಿಷ್ಕೃಷ್ಟ ಮಾಹಿತಿಯನ್ನು ಒಳಗೊಂಡಿದೆ. ಬೈಬಲಿನಲ್ಲಿ ಜ್ಞಾತ ವೈಜ್ಞಾನಿಕ ವಾಸ್ತವಾಂಶಗಳಿಗೆ ವಿರೋಧವಾಗಿರುವ ಯಾವುದೇ ವಿಷಯವು ಒಳಗೊಂಡಿರುವುದಿಲ್ಲ. ಅದಕ್ಕೆ ಬದಲಾಗಿ, ವಿಕಾಸ ವಾದದಂಥ ರುಜುಪಡಿಸಲ್ಪಡದ ವಾದಗಳೊಂದಿಗೆ ಅಸಮ್ಮತಿಸುವ ಅನೇಕ ವಿಷಯಗಳು ಬೈಬಲಿನಲ್ಲಿ ಒಳಗೊಂಡಿವೆ.
[ಪುಟ 36 ರಲ್ಲಿರುವ ಸಂಕ್ಷಿಪ್ತ ವಿವರಣೆ]
ಭೂಮಿಯು ‘ಯಾವುದೇ ಆಧಾರವೂ ಇಲ್ಲದೆ ತೂಗುತ್ತಿದೆ’ ಎಂಬ ಯೋಬನ ಹೇಳಿಕೆಯು, ತನ್ನ ಸಮಕಾಲೀನರಿಗೆ ಲಭ್ಯವಿರದದಿದ್ದ ಜ್ಞಾನವನ್ನು ಸೂಚಿಸುತ್ತದೆ
[ಪುಟ 35 ರಲ್ಲಿರುವ ಚಿತ್ರ ಕೃಪೆ]
NASA