ಬಳಲಿಕೆ ಟ್ರಕ್ ಚಾಲಕರು ಗ್ರಹಿಸದ ಒಂದು ಅದೃಶ್ಯ ಪಾಶ
ಜರ್ಮನಿಯ ಎಚ್ಚರ! ಸುದ್ದಿಗಾರರಿಂದ
ತಾಸುಗಳು ದಾಟಿಹೋದಂತೆ, ಶಕ್ತಿಶಾಲಿ ಎಂಜಿನ್ನ ಏಕರೀತಿಯ ಮಂದ್ರಶ್ರುತಿ ಮತ್ತು ರಸ್ತೆಯ ಮೇಲೆ ಚಲಿಸುತ್ತಿರುವ 14 ಚಕ್ರಗಳ ತೀವ್ರವಾದ ಶಬ್ದವು, ಬಳಲಿಕೆಯ ವಿರುದ್ಧ ಟ್ರಕ್ ಚಾಲಕನ ಹೋರಾಟವನ್ನು ಕಷ್ಟಕರವಾದದ್ದಾಗಿ ಮಾಡಲು ಒಟ್ಟಾಗುತ್ತವೆ. ರಸ್ತೆಯ ಮೇಲಿರುವ ಗುರುತುಗಳು, ತಲೆದೀಪಗಳ ಕಾಂತಿಯಲ್ಲಿ ಮೌನವಾಗಿ ನುಸುಳಿಹೋಗುತ್ತವೆ. ಹಠಾತ್ತನೆ, ಹಿಂಬಾಲಕ ಬಂಡಿಯು ಒಂದು ಪಕ್ಕದಿಂದ ಇನ್ನೊಂದಕ್ಕೆ ಓಲಾಡುತ್ತದೆ; ಅದು ರಸ್ತೆಸರಿದು ದಿಕ್ಕುತಪ್ಪತೊಡಗಿದೆ.
ಚಾಲಕಚಕ್ರದ ತಿರುಚುವಿಕೆಯೊಂದಿಗೆ, ಚಾಲಕನು ತನ್ನ 40 ಟನ್ ಭಾರದ ವಾಹನವನ್ನು ಉಪಾಯದಿಂದ ಪುನಃ ರಸ್ತೆಗೆ ತಂದುಕೊಳ್ಳುತ್ತಾನೆ. ಪೂರ್ಣವಾಗಿ ಎಚ್ಚೆತ್ತುಕೊಂಡ ಅವನು, ಕಳೆದ ಕೆಲವು ಸೆಕೆಂಡುಗಳ ಸ್ಮರಣೆ ತನಗಿಲ್ಲವೆಂಬುದನ್ನು ಗ್ರಹಿಸಿಕೊಳ್ಳುತ್ತಾನೆ. ಅವನು ಬಳಲಿಕೆಯಿಂದ ಕಷ್ಟಾನುಭವಿಸುತ್ತಿದ್ದಾನೆ.a
ವಾಹನ ನಡೆಸುವಾಗ ಬಳಲಿಕೆಯ ವಿರುದ್ಧ ಹೋರಾಡುತ್ತಿರುವ ಯಾವನೇ ಒಬ್ಬನು, ಕ್ಷಣಿಕವಾಗಿ ತೂಕಡಿಸುವುದು ಸುಲಭ. ಇಂದಿನ ಕಿಕ್ಕಿರಿದ ರಸ್ತೆಗಳನ್ನು ಪರಿಗಣಿಸುವಾಗ, ರಸ್ತೆಯನ್ನು ಉಪಯೋಗಿಸುವ ಇತರರಿಗೂ ಅದು ಅತ್ಯಂತ ಅಪಾಯಕರವಾಗಿರಬಲ್ಲದು. ದೃಷ್ಟಾಂತಕ್ಕಾಗಿ, ದಕ್ಷಿಣ ಆಫ್ರಿಕದಲ್ಲಿ, ಜನವರಿ 1989 ಮತ್ತು ಮಾರ್ಚ್ 1994ರ ನಡುವೆ ಸಂಭವಿಸಿದ, ಸಾಗಣೆ ವಾಹನಗಳನ್ನೊಳಗೊಂಡ ಎಲ್ಲ ಅಪಘಾತಗಳಲ್ಲಿ, 35 ಪ್ರತಿಶತಕ್ಕಿಂತಲೂ ಹೆಚ್ಚಿನ ಅಪಘಾತಗಳು, ವಾಹನ ನಡೆಸುತ್ತಿರುವಾಗ ನಿದ್ರೆಹೋದ ಚಾಲಕರಿಂದ ಉಂಟಾದವು.
ಚಾಲಕರ ವರ್ತನೆಯ ವಿಷಯದಲ್ಲಿ ಸಂಶೋಧಕರಾದ ಪ್ರೊಫೆಸರ್ ಜಿ. ಸ್ಟಾಕರ್, ಫಾರ್ಶೂಲ್ ಎಂಬ ಜರ್ಮನ್ ಪತ್ರಿಕೆಯಲ್ಲಿ ಹೇಳಿದ್ದೇನೆಂದರೆ, ಹೆಚ್ಚುತ್ತಿರುವ ಬಳಲಿಕೆಯು ತೂಕಡಿಕೆಗೆ ನಡೆಸುತ್ತದೆ ಮತ್ತು ಅದರ ಪರಿಣಾಮಗಳು ಮದ್ಯದಿಂದ ಉಂಟಾಗುವ ಪರಿಣಾಮಗಳಿಗೆ ಸದೃಶವಾಗಿವೆ. ನಿಶ್ಚಯವಾಗಿಯೂ ಅವರ ಹೇಳಿಕೆಗಳು, ಟ್ರಕ್ ಚಾಲಕರಿಗೆ ಮಾತ್ರವಲ್ಲ, ಎಲ್ಲ ವಾಹನಗಳ ಚಾಲಕರಿಗೆ ಸುಸಂಬದ್ಧವಾಗಿವೆ.
ಬಳಲಿಕೆಯ ಕಾರಣಗಳು
ಅನೇಕ ದೇಶಗಳಲ್ಲಿ ಶಾಸನವು, ಒಬ್ಬ ಟ್ರಕ್ ಚಾಲಕನು ವಾಹನ ನಡೆಸಸಾಧ್ಯವಿರುವ ಅಧಿಕತಮ ಸಂಖ್ಯೆಯ ತಾಸುಗಳನ್ನು ಶಿಫಾರಸ್ಸುಮಾಡುವಾಗ, ಇಲ್ಲವೆ ನಿಗದಿಪಡಿಸುವಾಗಲೂ, ಬಳಲಿಕೆಗೆ ಸಂಬಂಧಿಸಿದ ಅಪಘಾತಗಳು ಪದೇ ಪದೇ ಸಂಭವಿಸುವುದು ಏಕೆ? ಮೊದಲನೆಯದಾಗಿ, ನಾವು ಟ್ರಕ್ ಚಾಲಕರ ದುಡಿಮೆಯ ಒಟ್ಟು ತಾಸುಗಳ ಕಡೆಗೆ ಗಮನಹರಿಸಬೇಕು. ಇದು, ವಾಹನ ನಡೆಸುತ್ತಾ ಮಾತ್ರವಲ್ಲ, ಇತರ ಕೆಲಸಗಳನ್ನೂ ಮಾಡುತ್ತಾ ವ್ಯಯಿಸಿದ ಸಮಯವನ್ನು ಒಳಗೊಳ್ಳುತ್ತದೆ. ಈ ದುಡಿಮೆಯ ತಾಸುಗಳು ಅನೇಕವೇಳೆ, ದೀರ್ಘವಾದವುಗಳೂ ಕ್ರಮರಹಿತವಾದವುಗಳೂ ಆಗಿರುತ್ತವೆ.
ಅಧಿಕಾಂಶ ಟ್ರಕ್ ಚಾಲಕರು, ಒಂದು ಕೆಲಸವನ್ನು ಸಂಪೂರ್ಣವಾಗಿ ಮುಗಿಸುವುದರಲ್ಲಿ ಆನಂದಿಸುತ್ತಾರೆ. ಇದು, ಯಾವುದೇ ರೀತಿಯ ಹವಾಮಾನದಲ್ಲಿ ಒಬ್ಬ ಗ್ರಾಹಕನಿಗೆ ಸರಕುಗಳನ್ನು ರವಾನಿಸುವುದನ್ನು ಅರ್ಥೈಸುತ್ತದೆ. ದಕ್ಷತೆಯು, ಸಂಚರಿಸಿದ ಅಂತರ ಮತ್ತು ರವಾನಿಸಿದ ಸರಕಿನ ಮೂಲಕ ಅಳೆಯಲ್ಪಡುತ್ತದೆ. ದುಡಿಮೆಯ ತಾಸುಗಳು ಸರಾಸರಿಗಿಂತ ಬಹಳಷ್ಟು ಹೆಚ್ಚಾಗಿರಬಹುದು. ಜರ್ಮನಿಯಲ್ಲಿ ಅಧಿಕಾಂಶ ಜನರು, ವಾರಕ್ಕೆ 40 ತಾಸುಗಳಿಗಿಂತ ಕಡಿಮೆ ದುಡಿಯುತ್ತಾರೆ, ಆದರೆ ಅನೇಕ ಟ್ರಕ್ ಚಾಲಕರು ಅದರ ಎರಡು ಪಟ್ಟು ಕೆಲಸಮಾಡುತ್ತಾರೆ.
ಇತರ ದೇಶಗಳಲ್ಲಿನ ಪರಿಸ್ಥಿತಿಗಳೂ ತೀರ ಸದೃಶವಾಗಿವೆ. ದಕ್ಷಿಣ ಆಫ್ರಿಕದಲ್ಲಿ ಕೂಲಿ ಬಹಳ ಕಡಿಮೆಯಾಗಿರುವ ಕಾರಣ, ದೀರ್ಘ ತಾಸುಗಳ ವರೆಗೆ ವಾಹನ ನಡೆಸುವ ಮೂಲಕ ತಮ್ಮ ಸಂಪಾದನೆಗಳಿಗೆ ಹೆಚ್ಚನ್ನು ಸೇರಿಸಲು ಚಾಲಕರು ಪ್ರಯತ್ನಿಸುತ್ತಾರೆ. ಭಾರತದಿಂದ ಬರುವ ವರದಿಗಳು ಸೂಚಿಸುವುದೇನೆಂದರೆ, ಸಾಗಣೆ ಕಂಪನಿಗಳು ಚಾಲಕರಿಗೆ ತಮ್ಮ ಪ್ರಯಾಣವನ್ನು ಮುಗಿಸಲು ಸಾಕಷ್ಟು ಸಮಯವನ್ನು ನೀಡುವುದಾದರೂ, ಅಧಿಕ ಸ್ಥಳಗಳಿಗೆ ಹೆಚ್ಚಿನ ಸರಕನ್ನು ರವಾನಿಸುವ ಮೂಲಕ ಟ್ರಕ್ ಚಾಲಕರು ತಮ್ಮ ಸಂಪಾದನೆಗಳಿಗೆ ಕೂಡಿಸುತ್ತಾರೆ. ಇದು, ಬಹಳಷ್ಟು ಸಮಯದ ವರೆಗೆ ವಾಹನ ನಡೆಸುತ್ತಾ ಇರುವುದನ್ನು ಕೇಳಿಕೊಳ್ಳುತ್ತದೆ. ಆಗ, ಅವರು ಕಂಪನಿಯನ್ನು ಸರಿಯಾದ ಸಮಯಕ್ಕೆ ತಲಪಲು ತಮ್ಮ ನಿದ್ರೆಯನ್ನು ಕಡಿಮೆಮಾಡಬೇಕಾಗುತ್ತದೆ.
ಐರೋಪ್ಯ ಒಕ್ಕೂಟದೊಳಗೆ, ಶಾಸನದಿಂದ ಅನುಮತಿಸಲ್ಪಟ್ಟ ಅಧಿಕತಮ ಸಂಖ್ಯೆಯ ತಾಸುಗಳನ್ನು ಉಪಯೋಗಿಸಿಕೊಳ್ಳುವ ಮೂಲಕ, ಒಬ್ಬ ಟ್ರಕ್ ಚಾಲಕನು ವಾಹನ ನಡೆಸುತ್ತಾ ವಾರಕ್ಕೆ 56 ತಾಸುಗಳನ್ನು ವ್ಯಯಿಸಬಲ್ಲನು. ಆದರೆ ಮುಂದಿನ ವಾರದಲ್ಲಿ, ವಾಹನ ನಡೆಸುವ ಅವನ ಅಧಿಕತಮ ಸಂಖ್ಯೆಯ ತಾಸುಗಳು 34ಕ್ಕೆ ಇಳಿಸಲ್ಪಡುತ್ತವೆ. ಅವನ ದುಡಿಮೆಯ ತಾಸುಗಳು—ಸರಕಿನ ಹೇರಿಕೆ ಹಾಗೂ ಇಳಿಸುವಿಕೆಗಾಗಿ ವ್ಯಯಿಸಿದ ಸಮಯವನ್ನೊಳಗೊಂಡು—ಒಂದು ನಿಯಂತ್ರಿಸುವ ಸಲಕರಣೆಯಿಂದ ದಾಖಲಿಸಲ್ಪಡುತ್ತವೆ. ಈ ದಾಖಲೆಯು, ಪ್ರತಿಯೊಬ್ಬ ಚಾಲಕನು ನಿಬಂಧನೆಗಳ ಪರಧಿಯೊಳಗೆ ಇದ್ದಾನೊ ಇಲ್ಲವೊ ಎಂಬುದನ್ನು ಪರಿಶೀಲಿಸಲು ಸಾಧ್ಯಮಾಡುತ್ತದೆ.
ವಾಹನ ನಡೆಸುತ್ತಾ ವ್ಯಯಿಸಿದ ಸಮಯದ ಮೊತ್ತವನ್ನು ಬಾಧಿಸುವ ಮತ್ತೊಂದು ಅಂಶವು, ಯಜಮಾನನ ದೃಷ್ಟಿಕೋನವಾಗಿದೆ. ಅವನ ಟ್ರಕ್ಕು, ಲಾಭದಾಯಕವಾಗಿ ಉಪಯೋಗಿಸಲ್ಪಡಬೇಕಾದ—ಸಾಧ್ಯವಾಗಿದ್ದರೆ ದಿನದ 24 ತಾಸುಗಳೂ ಸದಾ ಸರಕನ್ನು ರವಾನಿಸುತ್ತಾ—ಒಂದು ದುಬಾರಿ ಬಂಡವಾಳವನ್ನು ಪ್ರತಿನಿಧಿಸುತ್ತದೆ. ಸಾಗಣೆ ಕಂಪನಿಗಳ ಮಧ್ಯೆ ಪೈಪೋಟಿಯು ಬೆಳೆಯುತ್ತಾ ಇದೆ, ಮತ್ತು ದೀರ್ಘ ತಾಸುಗಳ ವರೆಗೆ ಸ್ವೇಚ್ಛೆಯಿಂದ ಕೆಲಸಮಾಡುವಂತೆ ಮ್ಯಾನೇಜರರು ಚಾಲಕರನ್ನು ಒತ್ತಾಯಿಸುತ್ತಾರೆ.
ದುಡಿಮೆಯ ತಾಸುಗಳು ದೀರ್ಘವಾಗಿದ್ದು, ಅವು ಅಸಾಮಾನ್ಯ ಸಮಯಗಳಲ್ಲಿ ಆರಂಭಿಸುವಾಗಲೂ ಬಳಲಿಕೆಯು ಫಲಿಸುತ್ತದೆ. ದೃಷ್ಟಾಂತಕ್ಕಾಗಿ, ಬೆಳಗ್ಗೆ ಒಂದರಿಂದ ನಾಲ್ಕು ಗಂಟೆಯ ನಡುವೆ ಕೆಲಸವನ್ನು ಆರಂಭಿಸುವುದು ಸಾಮಾನ್ಯವಾಗಿದೆ. ಅದು, ಅನೇಕ ಚಾಲಕರು ತಮ್ಮ ಅತ್ಯಂತ ನಿರುತ್ಸಾಹದ ಸ್ಥಿತಿಯಲ್ಲಿರುವ ಸಮಯವಾಗಿದೆ, ಮತ್ತು ಅವರ ಚಿತ್ತೈಕಾಗ್ರತೆಯು ಬಹಳ ದುರ್ಬಲವಾಗಿರುತ್ತದೆ. ಎಲ್ಲಿ ಕಂಪನಿಗಳು ಸಂಗ್ರಹವನ್ನು ಕನಿಷ್ಠ ಮಟ್ಟಕ್ಕೆ ಇಟ್ಟುಕೊಂಡು, ಸರಕುಗಳನ್ನು ‘ತಕ್ಕ ಸಮಯಕ್ಕೆ’ ತಲಪಿಸುವಂತೆ ಹಕ್ಕೊತ್ತಾಯ ಮಾಡುತ್ತವೊ, ಅಲ್ಲಿ ಒತ್ತಡವು ಹೆಚ್ಚಾಗುತ್ತದೆ. ಇದು, ಚಾಲಕನು ಒಪ್ಪಿಕೊಂಡ ಸಮಯಕ್ಕೆ ನಿಖರವಾಗಿ ಸರಕಿನೊಂದಿಗೆ ಗ್ರಾಹಕನ ಆವರಣಗಳೊಳಗೆ ಆಗಮಿಸಬೇಕೆಂಬುದನ್ನು ಅರ್ಥೈಸುತ್ತದೆ. ವಾಹನಗಳ ಭಾರಿ ಸಂಖ್ಯೆ, ಅನನುಕೂಲ ಹವಾಮಾನ, ಮತ್ತು ರಸ್ತೆಯ ರಿಪೇರಿಗಳು ವಿಳಂಬಗಳನ್ನು ಉಂಟುಮಾಡಬಹುದು. ಈ ವಿಳಂಬಗಳನ್ನು ಚಾಲಕನು ಹೇಗಾದರೂ ಮಾಡಿ ಸರಿದೂಗಿಸಬೇಕು.
ವಾಹನ ನಡೆಸಲು ಅಂಗೀಕಾರಾರ್ಹವಾದ ತಾಸುಗಳ ಸಂಖ್ಯೆಯ ಮೇಲೆ ನಿಬಂಧನೆಗಳಿದ್ದರೂ, ಪೊಲೀಸರಿಂದ ಮಾಡಲ್ಪಟ್ಟ ಹಠಾತ್ತನೆಯ ಪರಿಶೀಲನೆಗಳು ನಿಯಮದ ಉಲ್ಲಂಘನೆಗಳನ್ನು ಇನ್ನೂ ಪ್ರಕಟಪಡಿಸುತ್ತವೆ. ಪೋಲಿಟ್ಸೈ ಫರ್ಕೇರ್ ಅಂಟ್ ಟೆಕ್ನಿಕ್ ಎಂಬ ಪತ್ರಿಕೆಗನುಸಾರ, “ಎಲ್ಲ ಟ್ರಕ್ಕುಗಳು, ಬಸ್ಸುಗಳು, ಮತ್ತು ಅಪಾಯಕರ ಸರಕನ್ನು ರವಾನಿಸುವ ವಾಹನಗಳ 8 ಚಾಲಕರಲ್ಲಿ ಬಹುಮಟ್ಟಿಗೆ ಒಬ್ಬನು, ವಾಹನ ನಡೆಸುವುದಕ್ಕೆ ಮತ್ತು ವಿಶ್ರಾಂತಿ ತೆಗೆದುಕೊಳ್ಳುವುದಕ್ಕೆ ನಿಗದಿಪಡಿಸಲಾದ ತಾಸುಗಳ ಸಂಖ್ಯೆಗೆ ಅಂಟಿಕೊಳ್ಳುವುದಿಲ್ಲ.” ಯಾವ ಬಿಡುವು ಇಲ್ಲದೆ ವಾಹನ ನಡೆಸುತ್ತಾ 32 ತಾಸುಗಳನ್ನು ವ್ಯಯಿಸಿದ್ದ ಒಬ್ಬ ಟ್ರಕ್ ಚಾಲಕನನ್ನು ಪೊಲೀಸರು ಹ್ಯಾಮ್ಬರ್ಗ್ನಲ್ಲಿ, ವಾಹನಗಳ ಪರೀಕ್ಷೆಯ ಸಮಯದಲ್ಲಿ ಕಂಡುಕೊಂಡರು.
ಅಪಾಯವನ್ನು ಗ್ರಹಿಸಿಕೊಳ್ಳುವುದು
ಮೂವತ್ತು ವರ್ಷಗಳ ಕಾಲ ಅಂತಾರಾಷ್ಟ್ರೀಯ ಸರಕನ್ನು ರವಾನಿಸಿದ ದೂರ ಅಂತರದ ಒಬ್ಬ ಚಾಲಕನನ್ನು, ಬಳಲಿಕೆಯ ಸಮಸ್ಯೆಯ ಬಗ್ಗೆ ಕೇಳಲಾಯಿತು. ಅವನು ಗಮನಿಸಿದ್ದು: “ದುರಭಿಮಾನ ಮತ್ತು ಅತಿಯಾದ ಆತ್ಮವಿಶ್ವಾಸವು, ಒಬ್ಬ ಚಾಲಕನು ಆಯಾಸವನ್ನು ಕಡೆಗಣಿಸುವಂತೆ ಮಾಡಸಾಧ್ಯವಿದೆ. ಅಪಘಾತಗಳು ಸಂಭವಿಸುವುದು ಆ ಕಾರಣದಿಂದಲೇ.” ಬಳಲಿಕೆಯ ಸೂಚನೆಗಳು, ಪುಟ 22ರಲ್ಲಿರುವ ರೇಖಾಚೌಕದಲ್ಲಿ ಪಟ್ಟಿಮಾಡಲಾಗಿವೆ.
ಎಚ್ಚರಿಕೆಯ ಆರಂಭಿಕ ಸೂಚನೆಗಳನ್ನು ಗುರುತಿಸುವುದು, ಜೀವಗಳನ್ನು ರಕ್ಷಿಸಬಲ್ಲದು. ರಾಷ್ಟ್ರೀಯ ಸಾಗಣೆಯ ಸುರಕ್ಷಾ ಸಮಿತಿಯಿಂದ ಅಮೆರಿಕದಲ್ಲಿ ನಡೆಸಲ್ಪಟ್ಟ ಒಂದು ಅಧ್ಯಯನವು ಗಾಬರಿಹುಟ್ಟಿಸುವಂತಹ ಅಂಕಿ ಅಂಶಗಳನ್ನು ಪ್ರಕಟಿಸಿತು: ಮತ್ತೊಂದು ವಾಹನವನ್ನೊಳಗೊಳ್ಳದ 107 ಅಪಘಾತಗಳಲ್ಲಿ 62 ಅಪಘಾತಗಳು ಬಳಲಿಕೆಗೆ ಸಂಬಂಧಿಸಿದ್ದವು. ಆದಕಾರಣ, ಟ್ರಕ್ ಉದ್ಯಮವು, ಚಾಲಕನು ನಿದ್ರೆಹೋಗುವಾಗಲೆಲ್ಲಾ ಎಚ್ಚರಿಕೆಯನ್ನು ನೀಡುವ ತಾಂತ್ರಿಕ ಸಹಾಯಕಗಳ ವಿಕಸನೆಗೆ ಮಹತ್ತರವಾದ ಮಹತ್ವವನ್ನು ಕೊಡುತ್ತದೆ.
ಚಾಲಕನು ಎಷ್ಟು ಬಾರಿ ತನ್ನ ಕಣ್ಣುಗಳನ್ನು ಮಿಟುಕಿಸುತ್ತಾನೆಂದು ಗಮನಿಸುವ ಒಂದು ವಿಡಿಯೊ ಕ್ಯಾಮರವನ್ನು ಉಪಯೋಗಿಸುತ್ತಾ, ಒಂದು ಜ್ಯಾಪನೀಸ್ ಕಂಪನಿಯು ಒಂದು ಇಲೆಕ್ಟ್ರಾನಿಕ್ ವ್ಯವಸ್ಥೆಯ ಮೇಲೆ ಕೆಲಸಮಾಡುತ್ತಿದೆ. ಚಾಲಕನು ತೀರ ಹೆಚ್ಚು ಹೊತ್ತು ಕಣ್ಣು ಮಿಟುಕಿಸುವುದಾದರೆ, ಮೊದಲೇ ರೆಕಾರ್ಡ್ ಮಾಡಲ್ಪಟ್ಟ ಧ್ವನಿಯು ಅವನ ಅಪಾಯಕರ ಸನ್ನಿವೇಶದ ಬಗ್ಗೆ ಅವನಿಗೆ ಎಚ್ಚರಿಕೆ ನೀಡುತ್ತದೆ. ವಾಹನವು ಎಷ್ಟು ಸುಗಮವಾಗಿ ನಡೆಸಲ್ಪಡುತ್ತಿದೆ ಎಂಬುದನ್ನು ಅಳೆಯುವ ಒಂದು ಸಲಕರಣದ ಮೇಲೆ ಒಂದು ಐರೋಪ್ಯ ಕಂಪನಿಯು ಕೆಲಸಮಾಡುತ್ತಿದೆ. ಟ್ರಕ್ಕು ಓಲಾಡಿದರೆ, ಕ್ಯಾಬಿನ್ನಲ್ಲಿ ಒಂದು ಎಚ್ಚರಿಕೆಯು ಕೇಳಿಬರುತ್ತದೆ. ಆದರೂ, ಪರಿಣಾಮಕಾರಿ ಸಹಾಯಕಗಳು ಉತ್ಪಾದಿಸಲ್ಪಡುವ ಮುಂಚೆ, ಒಂದಿಷ್ಟು ಸಮಯವು ಗತಿಸಿಹೋಗುವುದು.
ಅಪಾಯವನ್ನು ಪ್ರತಿರೋಧಿಸುವುದು
ಬಳಲಿಕೆಯು ಬಹುಮಟ್ಟಿಗೆ ಪ್ರತಿಯೊಂದು ವಾಹನದಲ್ಲಿರುವ, ಆಮಂತ್ರಿಸಲ್ಪಡದ ಹಾಗೂ ಅನಿಷ್ಟವಾದ ಪ್ರಯಾಣಿಕನಾಗಿದೆ. ಪ್ರಶ್ನೆಯು, ಅದನ್ನು ಹೊರದೂಡುವುದು ಹೇಗೆ ಎಂಬುದೇ. ಕೆಲವು ಚಾಲಕರು, ಕ್ಯಾಫಿನ್ ಇರುವ ಪಾನೀಯಗಳನ್ನು ಬಹಳವಾಗಿ ಸೇವಿಸುತ್ತಾರೆ, ಆದರೂ ಬಳಲಿಕೆಯು ನಿಷ್ಠುರವಾಗಿ ಅವರನ್ನು ಬಾಧಿಸುತ್ತಾ ಇರುತ್ತದೆ. ಇತರರು, ಬೇರೆ ಉತ್ತೇಜಕಗಳ ಕಡೆಗೆ ತಿರುಗುತ್ತಾರೆ. ಇವು ಆರೋಗ್ಯಕ್ಕೆ ಅಪಾಯಕರವೆಂದು ಹೇಳುವ ಅಗತ್ಯವಿಲ್ಲ. ಮೆಕ್ಸಿಕೊದಲ್ಲಿ ಕೆಲವು ಚಾಲಕರು, ಎಚ್ಚರವಾಗಿರಲು ಮೆಣಸಿನ ಕಾಯಿ (ಬಹಳ ಖಾರವಾದ ಮೆಣಸು)ಯನ್ನು ತಿನ್ನುತ್ತಾರೆ.
ಬೇಗ ಆರಂಭಿಸುವ ಮೊದಲು, ಸಾಕಷ್ಟು ನಿದ್ರಿಸುವುದು ಯುಕ್ತವಾಗಿದೆ. ಮತ್ತು ತತ್ವಾನುಸಾರ, ವಾಹನ ನಡೆಸಲು ನಿಗದಿಮಾಡಲ್ಪಟ್ಟ ತಾಸುಗಳ ಸಂಖ್ಯೆಗೆ ಒಬ್ಬನು ಅಂಟಿಕೊಳ್ಳಬೇಕು. ದಕ್ಷಿಣ ಆಫ್ರಿಕದಲ್ಲಿ, ವಾಹನ ನಡೆಸಿದ ಐದು ತಾಸುಗಳ ಬಳಿಕ, ಒಂದು ನಿಲುಗಡೆಯನ್ನು ಪರಿಣತರು ಶಿಫಾರಸ್ಸುಮಾಡುತ್ತಾರೆ. ರಸ್ತೆಯ ಏಕರೀತಿಯ ಹರವುಗಳಲ್ಲಿ, ಚಾಲಕನು ತನ್ನ ಮನಸ್ಸನ್ನು ಸಕ್ರಿಯವಾಗಿಯೂ ಕೇಂದ್ರಿತವಾಗಿಯೂ ಇಡತಕ್ಕದ್ದು. ಕೆಲವು ಚಾಲಕರು ರೇಡಿಯೊವನ್ನು ಆಲಿಸುತ್ತಾರೆ ಇಲ್ಲವೆ ಸಿಬಿ (ಪ್ರಜಾತರಂಗಾಂತರ) ರೇಡಿಯೊದಲ್ಲಿ ಇತರ ಚಾಲಕರೊಂದಿಗೆ ಮಾತಾಡುತ್ತಾರೆ. ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾಗಿರುವ ಚಾಲಕನೊಬ್ಬನು, ಕಾವಲಿನಬುರುಜು ಮತ್ತು ಎಚ್ಚರ!ಗಳಂತಹ ಬೈಬಲ್ ಸಂಬಂಧಿತ ಮುಖ್ಯಶೀರ್ಷಿಕೆಗಳಿರುವ ಮತ್ತು ಬೈಬಲಿನ ವಾಕ್ಯವೃಂದಗಳಿರುವ ಕ್ಯಾಸೆಟ್ಟುಗಳನ್ನು ಆಲಿಸುತ್ತಾನೆ. ಇತರ ಸೂಚನೆಗಳನ್ನು ಈ ಪುಟದಲ್ಲಿರುವ ರೇಖಾಚೌಕದಲ್ಲಿ ಕಂಡುಕೊಳ್ಳಸಾಧ್ಯವಿದೆ.
ಜೀವನದ ವೆಚ್ಚವನ್ನು ನೀಗಿಸಲು ಸಾಕಾಗುವಷ್ಟನ್ನು ಸಂಪಾದಿಸುವುದು ಹೆಚ್ಚೆಚ್ಚು ಕಠಿನವಾಗುತ್ತಿದೆ, ಆದುದರಿಂದ ಸಮಚಿತ್ತರಾಗಿರುವುದು ಸುಲಭವಾಗಿರುವುದಿಲ್ಲ. ಕೆಲವು ಕಂಪನಿಗಳು ಇಲ್ಲವೆ ಮ್ಯಾನೇಜರರು, ಬಳಲಿಕೆಯ ಪಾಶವು ಚಾಲಕರಿಗೆ ಒಡ್ಡುವ ಅಪಾಯವನ್ನು ಕಡಿಮೆ ಅಂದಾಜು ಮಾಡುತ್ತಾರೆ. ಹಾಗಾದರೆ, ಸಾಗಣೆ ವ್ಯಾಪಾರದೊಂದಿಗೆ ಸಂಬಂಧಿಸಿರುವ ಪ್ರತಿಯೊಬ್ಬರೂ, ಬಳಲಿಕೆಯ ಬಗ್ಗೆ ಇಷ್ಟರ ತನಕ ಕಲಿತ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಒಳ್ಳೆಯದು. ಇದಕ್ಕೆ ಸೇರಿಸಿ, ಚಾಲಕರಲ್ಲಿ ಅನೇಕವೇಳೆ ತಮ್ಮ ಸ್ವಂತ ಅನುಭವದಿಂದ ಕಲಿತ ಉಪಯೋಗಿ ಗುಟ್ಟುಗಳಿರುತ್ತವೆ. ಇವು ತೂಕಡಿಕೆಯ ವಿರುದ್ಧ ಹೋರಾಡಲು ಇತರರಿಗೆ ಸಹಾಯ ಮಾಡಬಲ್ಲವು.
ನಿಶ್ಚಯವಾಗಿಯೂ, ಎಚ್ಚರವಾಗಿ ಉಳಿಯುವ ಅತ್ಯುತ್ತಮ ವಿಧಾನವು, ದೇಹದ ಬೇಡಿಕೆಗಳನ್ನು ಪೂರೈಸುವುದಾಗಿದೆ: ಎಚ್ಚರಿಕೆಯ ಯಾವುದೇ ಸೂಚನೆಗಳನ್ನು ನೀವು ಗುರುತಿಸುವಲ್ಲಿ, ಸಾಧ್ಯವಿರುವ ಮುಂದಿನ ವಿಶ್ರಾಮ ಕ್ಷೇತ್ರದಲ್ಲಿ ನಿಂತು, ಒಂದಿಷ್ಟು ನಿದ್ರಿಸಿರಿ. ತದನಂತರ, ಮತ್ತೊಮ್ಮೆ ವಾಹನ ನಡೆಸುವ ಪಂಥಾಹ್ವಾನವನ್ನು ಎದುರಿಸಿರಿ. ಅದೃಶ್ಯವಾದ ಬಳಲಿಕೆಯ ಪಾಶದೊಳಗೆ ಬೀಳದಿರಿ!
[ಪಾದಟಿಪ್ಪಣಿ]
a ಜರ್ಮನಿಯಲ್ಲಿರುವ ಟ್ರಕ್ ಚಾಲಕರಲ್ಲಿ ಕೊಂಚ ಜನರು ಮಾತ್ರ ಹೆಂಗಸರಾಗಿರುವುದರಿಂದ, ಈ ಲೇಖನದಲ್ಲಿ ಪುಲ್ಲಿಂಗವು ಉಪಯೋಗಿಸಲ್ಪಟ್ಟಿದೆ.
[ಪುಟ 33 ರಲ್ಲಿರುವ ಚೌಕ]
ತತ್ಕ್ಷಣದ ಕ್ರಿಯೆಯನ್ನು ಅಗತ್ಯಪಡಿಸುವ ಎಚ್ಚರಿಕೆಯ ಸೂಚನೆಗಳು
• ನಿಮ್ಮ ಕಣ್ಣುಗಳು ಉರಿಯುತ್ತವೊ ಇಲ್ಲವೆ ಕಣ್ಣುರೆಪ್ಪೆಗಳು ಜೋಲುಬೀಳುತ್ತವೊ?
• ನೀವು ವಿಷಯಗಳನ್ನು ಊಹಿಸಿಕೊಳ್ಳುತ್ತೀರೊ ಅಥವಾ ಸ್ವತಃ ಹಗಲುಗನಸು ಕಾಣುತ್ತಿರುವುದಾಗಿ ಕಂಡುಕೊಳ್ಳುತ್ತೀರೊ?
• ರಸ್ತೆಯ ಮಧ್ಯೆರೇಖೆಯ ಉದ್ದಕ್ಕೂ ವಾಹನ ನಡೆಸುವಂತೆ ಮಾಡುತ್ತಾ, ರಸ್ತೆಯು ನಿಮಗೆ ಹೆಚ್ಚು ಇಕ್ಕಟ್ಟಾಗಿ ತೋರುತ್ತದೊ?
• ಪ್ರಯಾಣದ ನಿರ್ದಿಷ್ಟ ಭಾಗಗಳ ನಿಮ್ಮ ಸ್ಮರಣೆಯು ಮಾಯವಾಗಿದೆಯೊ?
• ಚಾಲಕಚಕ್ರ ಮತ್ತು ಬ್ರೇಕುಗಳ ನಿಮ್ಮ ಬಳಕೆಯು ಸಾಮಾನ್ಯಕ್ಕಿಂತಲೂ ಥಟ್ಟನೆ ನೂಕುವಂತಹದ್ದಾಗಿದೆಯೊ?
ಮೇಲಿನ ಪ್ರಶ್ನೆಗಳಲ್ಲಿ ಕೇವಲ ಒಂದು ಪ್ರಶ್ನೆಗೂ ಹೌದೆಂದು ಉತ್ತರಿಸುವುದು, ನಿಮಗೆ ತತ್ಕ್ಷಣದ ವಿರಾಮದ ಅಗತ್ಯವಿದೆಯೆಂಬುದನ್ನು ಅರ್ಥೈಸುತ್ತದೆ
[ಪುಟ 34 ರಲ್ಲಿರುವ ಚೌಕ]
ದೂರ-ಅಂತರದ ಪ್ರಯಾಣಗಳಲ್ಲಿ
• ಸಾಕಷ್ಟು ನಿದ್ರೆಮಾಡಿರಿ
• ಉತ್ತೇಜಕಗಳ ಮೇಲೆ ಅವಲಂಬಿಸಬೇಡಿ
• ಕ್ರಮವಾಗಿ ವಿರಾಮ ತೆಗೆದುಕೊಳ್ಳಿ, ದೇಹವನ್ನು ನಮ್ಯವಾಗಿಸಲು ವ್ಯಾಯಾಮಗಳನ್ನು ಮಾಡಿರಿ
• ರಸ್ತೆಯ ಏಕರೀತಿಯ ಹರವುಗಳು ವಿಶೇಷವಾಗಿ ಅಪಾಯಕರವಾಗಿವೆ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಳ್ಳಿರಿ
• ಹಸಿದವರಾಗಿದ್ದು ಒಂದು ಪ್ರಯಾಣವನ್ನು ಆರಂಭಿಸದಿರಿ. ಒಳ್ಳೆಯ ತಿನ್ನುವ ಹವ್ಯಾಸಗಳ ರೂಢಿ ಮಾಡಿಕೊಳ್ಳಿ: ಲಘುವಾದ ಹಾಗೂ ಆರೋಗ್ಯಕರವಾದ ಆಹಾರಪಥ್ಯ
• ದ್ರವಗಳನ್ನು ಹೇರಳವಾಗಿ ಕುಡಿಯಿರಿ, ಆದರೆ ಮದ್ಯವನ್ನು ದೂರವಿರಿಸಿರಿ