ದ್ವೇಷಿಸುವಂತೆ ಕಲಿಸಲ್ಪಟ್ಟಿರುವ ಒಂದು ಲೋಕ
ಜನರು ಅಂತರ್ಗತವಾಗಿ ಸ್ವಾರ್ಥಿಗಳಾಗಿದ್ದಾರೆ. ಮತ್ತು ಸ್ವಾರ್ಥಪರತೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳದಿರುವಲ್ಲಿ, ಅದು ದ್ವೇಷಕ್ಕೆ ತಿರುಗಸಾಧ್ಯವಿದೆ. ಮಾನವರು ಅಂತರ್ಗತವಾಗಿ ಸ್ವಾರ್ಥಿಗಳಾಗಿದ್ದಾರೆ ಮಾತ್ರವಲ್ಲ, ಇದಕ್ಕೆ ಕೂಡಿಸಿ, ವಾಸ್ತವದಲ್ಲಿ ಜನರು ಸ್ವಾರ್ಥಿಗಳಾಗಿರುವಂತೆ ಮಾನವ ಸಮಾಜವು ಅವರನ್ನು ವಾಸ್ತವದಲ್ಲಿ ತರಬೇತುಗೊಳಿಸುತ್ತದೆ!
ನಿಶ್ಚಯವಾಗಿಯೂ, ಸಾಮಾನ್ಯ ಹೇಳಿಕೆಗಳು ಯಾವಾಗಲೂ ಸಮಂಜಸವಾಗಿರುವುದಿಲ್ಲವಾದರೂ, ನಿರ್ದಿಷ್ಟ ಮನೋಭಾವಗಳು ಕೇವಲ ಬವಣೆಗಳೆಂದು ಪರಿಗಣಿಸಲಿಕ್ಕಾಗಿ ಅವು ತುಂಬ ಬಳಕೆಯಲ್ಲಿವೆ. ಅನೇಕವೇಳೆ ರಾಜಕಾರಣಿಗಳು ತಮ್ಮ ಮತದಾರರಿಗೆ ಸಹಾಯ ಮಾಡುವುದಕ್ಕಿಂತಲೂ ಹೆಚ್ಚಾಗಿ ಚುನಾವಣೆಗಳನ್ನು ಗೆಲ್ಲುವುದರಲ್ಲಿ ಆಸಕ್ತರಾಗಿರುವುದಿಲ್ಲವೊ? ವ್ಯಾಪಾರಸ್ಥರು ಹಾನಿಕಾರಕವಾದ ಉತ್ಪನ್ನಗಳು ಮಾರುಕಟ್ಟೆಯನ್ನು ತಲಪುವುದರಿಂದ ತಡೆಗಟ್ಟುವುದಕ್ಕಿಂತಲೂ, ಅನೇಕವೇಳೆ ಹಣವನ್ನು ಸಂಪಾದಿಸುವುದರಲ್ಲಿ—ಅಗತ್ಯವಿರುವಲ್ಲಿ ಯಾವುದಕ್ಕೂ ಹೇಸದೆ—ಹೆಚ್ಚು ಆಸಕ್ತರಾಗಿರುವುದಿಲ್ಲವೊ? ವೈದಿಕರು ತಮ್ಮ ಮಂದೆಗಳನ್ನು ನೈತಿಕತೆ ಹಾಗೂ ಪ್ರೀತಿಯ ಹಾದಿಯಲ್ಲಿ ಮಾರ್ಗದರ್ಶಿಸಿ ಮುನ್ನಡೆಸುವುದಕ್ಕಿಂತಲೂ, ಅನೇಕವೇಳೆ ಜನಪ್ರಿಯರಾಗಿರುವುದರಲ್ಲಿ ಅಥವಾ ಹಣವನ್ನು ಸಂಪಾದಿಸುವುದರಲ್ಲಿ ಆಸಕ್ತರಾಗಿರುವುದಿಲ್ಲವೊ?
ಎಳೆಯರಿಂದ ಆರಂಭ
ಸ್ವೇಚ್ಛಾಚಾರದ ಒಂದು ವಾತಾವರಣದಲ್ಲಿ ಮಕ್ಕಳು ಬೆಳೆಸಲ್ಪಡುವಾಗ, ಅವರು ನಿಜವಾಗಿಯೂ ಸ್ವಾರ್ಥಿಗಳಾಗಿರುವಂತೆ ಕಲಿಸಲ್ಪಡುತ್ತಿದ್ದಾರೆ. ಏಕೆಂದರೆ ಅವರ ಬಾಲ್ಯಾವಸ್ಥೆಯ ಅಪೇಕ್ಷೆಗಳನ್ನು ಪೂರೈಸಲಿಕ್ಕಾಗಿ, ದಾಕ್ಷಿಣ್ಯಪರತೆ ಹಾಗೂ ನಿಸ್ವಾರ್ಥಭಾವಗಳು ಅಲಕ್ಷಿಸಲ್ಪಡುತ್ತವೆ. ಶಾಲೆಯಲ್ಲಿ ಹಾಗೂ ಕಾಲೇಜಿನಲ್ಲಿ, ವಿದ್ಯಾರ್ಥಿಗಳು ವ್ಯಾಸಂಗದ ವಿಷಯಗಳಲ್ಲಿ ಮಾತ್ರವಲ್ಲ, ಕ್ರೀಡೆಗಳಲ್ಲಿಯೂ ಅಗ್ರಸ್ಥಾನವನ್ನು ಪಡೆದುಕೊಳ್ಳಲು ಶ್ರಮಿಸುವಂತೆ ಕಲಿಸಲ್ಪಡುತ್ತಾರೆ. ಅವರ ಧ್ಯೇಯಮಂತ್ರವೇನೆಂದರೆ, “ನೀವು ದ್ವಿತೀಯರಾಗಿರುವಲ್ಲಿ, ನೀವು ಕೊನೆಯವರೂ ಆಗಬಹುದು!”
ಹಿಂಸಾಕೃತ್ಯವನ್ನು ಪ್ರದರ್ಶಿಸುವ ವಿಡಿಯೋ ಆಟಗಳು, ಸ್ವಾರ್ಥ ರೀತಿಯಲ್ಲಿ ಸಮಸ್ಯೆಗಳನ್ನು ಪರಿಹರಿಸುವಂತೆ—ಸುಮ್ಮನೆ ಎದುರಾಳಿಯನ್ನು ನಿರ್ಮೂಲಮಾಡುವಂತೆ—ಯುವ ಜನರಿಗೆ ಕಲಿಸುತ್ತವೆ! ನಿಶ್ಚಯವಾಗಿಯೂ ಪ್ರೀತಿಯನ್ನು ಉತ್ತೇಜಿಸುವ ಒಂದು ಮನೋಭಾವ ಅಲ್ಲವೇ ಅಲ್ಲ! ಒಂದು ದಶಕದ ಹಿಂದೆ, ವಿಡಿಯೋ ಆಟಗಳು ಯುವ ಜನರಿಗೆ ಬೆದರಿಕೆಯನ್ನು ಒಡ್ಡಿದವೆಂದು ಅಮೆರಿಕದ ಸರ್ಜನ್ ಜನರಲ್ ಎಚ್ಚರಿಕೆ ನೀಡಿದರು. ಅವರು ಹೇಳಿದ್ದು: “ಆ ಆಟವು ಎದುರಾಳಿಯನ್ನು ನಾಶಮಾಡಲು ಪ್ರಯತ್ನಿಸುವುದರ ಸುತ್ತಲೂ ಆವೃತವಾಗಿರುತ್ತದೆ. ಆ ಆಟಗಳಲ್ಲಿ ಯಾವುದೂ ರಚನಾತ್ಮಕವಾದದ್ದಿಲ್ಲ.” ದ ನ್ಯೂ ಯಾರ್ಕ್ ಟೈಮ್ಸ್ಗೆ ಬರೆಯಲ್ಪಟ್ಟ ಒಂದು ಪತ್ರವು ದಾಖಲಿಸಿದ್ದೇನೆಂದರೆ, ಅನೇಕ ವಿಡಿಯೋ ಆಟಗಳು, “ಮನುಷ್ಯನ ಅತಿ ಹೇಯವಾದ ಸಹಜಪ್ರವೃತ್ತಿಗಳಿಗೆ ಸಹಾಯ ಮಾಡುತ್ತವೆ” ಮತ್ತು ಕೂಡಿಸಿದ್ದು: “ಅವು ಅವಿಚಾರಪರ, ಸಿಡುಕು ಸ್ವಭಾವದ ತರುಣತರುಣಿಯರ ಒಂದು ಸಂತತಿಯನ್ನು ಬೆಳೆಸುತ್ತಿವೆ.” ಜರ್ಮನಿಯ ವಿಡಿಯೋ ಆಟದ ವಿನೋದಿಯೊಬ್ಬನು, ಹೀಗೆ ಹೇಳಿದಾಗ ಎರಡನೆಯ ಹೇಳಿಕೆಯ ಸತ್ಯತೆಯನ್ನು ಒಪ್ಪಿಕೊಳ್ಳಲು ಸಾಕಷ್ಟು ಪ್ರಾಮಾಣಿಕನಾಗಿದ್ದನು: “ವಿಡಿಯೋ ಆಟಗಳನ್ನು ಆಡುವಾಗ, ನಾನು ಒಂದು ಕಾಲ್ಪನಿಕ ಲೋಕಕ್ಕೆ ಕೊಂಡೊಯ್ಯಲ್ಪಡುತ್ತಿದ್ದೆ, ಅಲ್ಲಿ ‘ಕೊಲ್ಲು ಅಥವಾ ಕೊಲ್ಲಲ್ಪಡು’ ಎಂಬ ಪ್ರಾಥಮಿಕ ಗುರಿನುಡಿಯು ಅನ್ವಯಯೋಗ್ಯವಾಗಿತ್ತು.”
ಕುಲಸಂಬಂಧವಾದದೊಂದಿಗೆ ಜೊತೆಗೂಡಿದಾಗ, ದ್ವೇಷವು ಇನ್ನೂ ಹೆಚ್ಚು ಕುಟಿಲ ಸ್ವಭಾವದ್ದಾಗುತ್ತದೆ. ಆದುದರಿಂದಲೇ, ವಿದೇಶೀಯರ ವಿರುದ್ಧವಾದ, ವಿಶೇಷವಾಗಿ ತುರ್ಕರ ವಿರುದ್ಧವಾದ ಹಿಂಸಾಚಾರವನ್ನು ಪ್ರದರ್ಶಿಸುವ ಬಲಪಂಥೀಯ ತೀವ್ರಗಾಮಿ ವಿಡಿಯೋಗಳ ಅಸ್ತಿತ್ವದ ಕುರಿತಾಗಿ ಜರ್ಮನರು ಚಿಂತಿತರಾಗಿದ್ದಾರೆಂಬುದು ಸುವ್ಯಕ್ತ. ಮತ್ತು ಚಿಂತಿತರಾಗಿರಲು ಅವರಿಗೆ ಸಕಾರಣವದೆ, ಯಾಕೆಂದರೆ ಜನವರಿ 1, 1994ರಂದಿನಿಂದ, ಜರ್ಮನಿಯ 68,78,100 ವಿದೇಶಿ ನಿವಾಸಿಗಳಲ್ಲಿ, 27.9 ಪ್ರತಿಶತ ಮಂದಿ ತುರ್ಕರಾಗಿದ್ದಾರೆ.
ರಾಷ್ಟ್ರೀಯತೆಯು ಶೈಶವದಿಂದ ಮಕ್ಕಳಿಗೆ ಏನನ್ನು ಕಲಿಸುತ್ತದೋ ಅದನ್ನು ಜಾತಿಸಂಬಂಧವಾದ ಭಾವನೆಗಳು ಪೋಷಿಸುತ್ತವೆ, ಅದೇನೆಂದರೆ, ನಿಮ್ಮ ರಾಷ್ಟ್ರದ ಶತ್ರುಗಳನ್ನು ದ್ವೇಷಿಸುವುದು ತಪ್ಪಲ್ಲ. ಟೈಮ್ ಲೇಖನದಾತರಾದ ಜಾರ್ಜ್ ಎಮ್. ಟೇಬರ್ರಿಂದ ಬರೆಯಲ್ಪಟ್ಟ ಒಂದು ಪ್ರಬಂಧವು ದಾಖಲಿಸಿದ್ದು: “ಇತಿಹಾಸದ ಎಲ್ಲ ರಾಜಕೀಯ ವಾದಗಳಲ್ಲಿ, ಬಹುಶಃ ರಾಷ್ಟ್ರೀಯತೆಯು ಅತ್ಯಂತ ಪ್ರಬಲವಾದದ್ದಾಗಿದೆ.” ಅವರು ವಿವರಿಸುತ್ತಾ ಹೇಳಿದ್ದು: “ಧರ್ಮವನ್ನು ಬಿಟ್ಟು, ಇನ್ನಿತರ ಯಾವುದೇ ಕಾರಣಕ್ಕಿಂತಲೂ, ರಾಷ್ಟ್ರೀಯತೆಯ ಹೆಸರಿನಲ್ಲಿ ಹೆಚ್ಚು ರಕ್ತವು ಸುರಿಸಲ್ಪಟ್ಟಿದೆ. ರಾಜಕೀಯ ನಾಯಕರು, ತಮ್ಮೆಲ್ಲ ತೊಂದರೆಗಳಿಗಾಗಿ ನೆರೆಹೊರೆಯ ಕೆಲವು ಕುಲಸಂಬಂಧವಾದ ಗುಂಪಿನ ಮೇಲೆ ದೋಷಾರೋಪ ಹೊರಿಸುತ್ತಾ, ಅನೇಕ ಶತಮಾನಗಳಿಂದ ಮತಭ್ರಾಂತ ದೊಂಬಿಗಳನ್ನು ಉದ್ರೇಕಿಸಿದ್ದಾರೆ.”
ಕುಲಸಂಬಂಧವಾದ ಇತರ ಗುಂಪುಗಳು, ಜಾತಿಗಳು, ಅಥವಾ ರಾಷ್ಟ್ರೀಯತೆಗಳ ವಿಷಯದಲ್ಲಿ ದೀರ್ಘ ಕಾಲಾವಧಿಯಿಂದ ಇರುವ ದ್ವೇಷವು, ಇಂದಿನ ಲೋಕದಲ್ಲಿರುವ ಅನೇಕ ಸಮಸ್ಯೆಗಳಿಗೆ ಕಾರಣವಾಗಿದೆ. ಮತ್ತು ಅನ್ಯರ ದ್ವೇಷ, ಅಪರಿಚಿತರು ಅಥವಾ ವಿದೇಶೀಯರ ಭಯವು ಅಧಿಕಗೊಳ್ಳುತ್ತಿದೆ. ಆದರೂ, ಆಸಕ್ತಿಕರವಾಗಿ, ಎಲ್ಲಿ ಕೆಲವೇ ಮಂದಿ ವಿದೇಶೀಯರು ಜೀವಿಸುತ್ತಾರೋ ಅಲ್ಲಿ, ಅನ್ಯರ ದ್ವೇಷವು ಅತ್ಯಂತ ಗಮನಾರ್ಹವಾದದ್ದಾಗಿದೆ ಎಂಬುದನ್ನು ಜರ್ಮನ್ ಸಮಾಜಶಾಸ್ತ್ರಜ್ಞರ ಒಂದು ಗುಂಪು ಕಂಡುಹಿಡಿಯಿತು. ತೀರ ಅನೇಕವೇಳೆ ಅದು ವೈಯಕ್ತಿಕ ಅನುಭವದಿಂದ ಉಂಟಾಗುವುದಕ್ಕಿಂತಲೂ ಹೆಚ್ಚಾಗಿ ಪೂರ್ವಕಲ್ಪಿತ ಅಭಿಪ್ರಾಯದಿಂದ ಉಂಟುಮಾಡಲ್ಪಡುತ್ತದೆ ಎಂಬುದನ್ನು ಇದು ರುಜುಪಡಿಸುವಂತೆ ತೋರುತ್ತದೆ. “ಯುವ ಜನರ ಪೂರ್ವಕಲ್ಪಿತ ಅಭಿಪ್ರಾಯಗಳು ಹೆಚ್ಚಾಗಿ ಅವರ ಸ್ನೇಹಿತರು ಹಾಗೂ ಕುಟುಂಬಗಳಿಂದ ಉತ್ತೇಜಿಸಲ್ಪಡುತ್ತವೆ” ಎಂಬುದನ್ನು ಆ ಸಮಾಜಶಾಸ್ತ್ರಜ್ಞರು ಕಂಡುಕೊಂಡರು. ನಿಜವಾಗಿಯೂ, ಸಂದರ್ಶಿಸಲ್ಪಟ್ಟವರಲ್ಲಿ 77 ಪ್ರತಿಶತ ಮಂದಿ, ಪೂರ್ವಕಲ್ಪಿತ ಅಭಿಪ್ರಾಯವನ್ನು ಅನುಮೋದಿಸಿದರಾದರೂ, ಅವರಿಗೆ ವಿದೇಶೀಯರೊಂದಿಗೆ ನೇರವಾದ ಸಂಪರ್ಕವಿರಲಿಲ್ಲ, ಅಥವಾ ತೀರ ಕಡಿಮೆ ಸಂಪರ್ಕವಿತ್ತು.
ಸ್ವಾರ್ಥಪರತೆಯ ಪಾಠವನ್ನು ಕಲಿಸುವುದು ಕಷ್ಟಕರವೇನಲ್ಲ, ಏಕೆಂದರೆ ಅಪರಿಪೂರ್ಣ ಹೆತ್ತವರಿಂದ ನಾವೆಲ್ಲರೂ ಸ್ವಲ್ಪ ಮಟ್ಟಿಗಿನ ಸ್ವಾರ್ಥಪರತೆಯನ್ನು ವಂಶಾನುಗತವಾಗಿ ಪಡೆದುಕೊಂಡಿದ್ದೇವೆ. ಆದರೆ ಪ್ರೀತಿ ಮತ್ತು ದ್ವೇಷದ ನಡುವಿನ ಸಂಘರ್ಷದಲ್ಲಿ, ಧರ್ಮವು ಯಾವ ಪಾತ್ರವನ್ನು ವಹಿಸುತ್ತದೆ?
ಧರ್ಮವು ಏನನ್ನು ಕಲಿಸುತ್ತದೆ?
ಧರ್ಮವು ಪ್ರೀತಿಯನ್ನು ಉತ್ತೇಜಿಸುವಂತಹದ್ದಾಗಿದೆ ಎಂದು ಜನರು ಸಾಮಾನ್ಯವಾಗಿ ಎಣಿಸುತ್ತಾರೆ. ಆದರೆ ಅದು ಪ್ರೀತಿಯನ್ನು ಉತ್ತೇಜಿಸುವುದಾದರೆ, ಮೂರೇ ಮೂರು ಉದಾಹರಣೆಗಳನ್ನು ಉಲ್ಲೇಖಿಸುವಲ್ಲಿ, ಉತ್ತರ ಐರ್ಲೆಂಡ್, ಮಧ್ಯ ಪೂರ್ವ, ಮತ್ತು ಭಾರತದಲ್ಲಿನ ಬಿಕ್ಕಟ್ಟಿಗೆ, ಧಾರ್ಮಿಕ ಭಿನ್ನತೆಗಳೇ ಏಕೆ ಮೂಲಭೂತ ಕಾರಣವಾಗಿರುತ್ತವೆ? ನಿಶ್ಚಯವಾಗಿಯೂ, ಧಾರ್ಮಿಕ ಭಿನ್ನತೆಗಳಲ್ಲ, ಬದಲಾಗಿ ರಾಜಕೀಯ ಭಿನ್ನತೆಗಳೇ ಈ ಗಲಭೆಗಳಿಗೆ ಕಾರಣವಾಗಿವೆಯೆಂದು ಕೆಲವು ಜನರು ವಾದಿಸುತ್ತಾರೆ. ಅದು ಒಂದು ವಾದಗ್ರಸ್ತ ಅಂಶವಾಗಿದೆ. ಏನೇ ಆಗಲಿ, ರಾಜಕೀಯ ಹಾಗೂ ಕುಲಸಂಬಂಧವಾದ ಒಲವುಗಳನ್ನು ಜಯಿಸಲು ಸಾಕಷ್ಟು ಪ್ರಬಲವಾಗಿರುವ ಪ್ರೀತಿಯನ್ನು ಜನರಲ್ಲಿ ತುಂಬುವುದರಲ್ಲಿ ವ್ಯವಸ್ಥಿತ ಧರ್ಮವು ಸೋತುಹೋಗಿದೆ ಎಂಬುದು ಸ್ಪಷ್ಟ. ಅನೇಕ ಕ್ಯಾತೊಲಿಕ್ ಹಾಗೂ ಆರ್ತೊಡಾಕ್ಸ್ ವಿಶ್ವಾಸಿಗಳು, ಮತ್ತು ಇನ್ನಿತರ ಧರ್ಮಗಳಿಗೆ ಸೇರಿರುವವರು, ಹಿಂಸಾಚಾರಕ್ಕೆ ನಡೆಸುವ ಪೂರ್ವಕಲ್ಪಿತ ಅಭಿಪ್ರಾಯವನ್ನು ಕಾರ್ಯತಃ ಮನ್ನಿಸುತ್ತಾರೆ.
ದೋಷಯುಕ್ತವಾಗಿದೆ ಎಂದು ವ್ಯಕ್ತಿಯೊಬ್ಬನು ಭಾವಿಸಬಹುದಾದ ಒಂದು ಧಾರ್ಮಿಕ ಗುಂಪಿನ ಬೋಧನೆಗಳು ಹಾಗೂ ಆಚರಣೆಗಳನ್ನು ತಪ್ಪೆಂದು ರುಜುಪಡಿಸಲು ಪ್ರಯತ್ನಿಸುವುದರಲ್ಲಿ ತಪ್ಪೇನೂ ಇಲ್ಲ. ಆದರೆ ಇದು ಆ ಧಾರ್ಮಿಕ ಗುಂಪು ಅಥವಾ ಅದರ ಸದಸ್ಯರ ವಿರುದ್ಧ ಹಿಂಸಾಚಾರವನ್ನು ಉಪಯೋಗಿಸುವ ಹಕ್ಕನ್ನು ಅವನಿಗೆ ಕೊಡುತ್ತದೊ? ದ ಎನ್ಸೈಕ್ಲೊಪೀಡಿಯ ಆಫ್ ರಿಲಿಜನ್ ಮುಚ್ಚುಮರೆಯಿಲ್ಲದೆ ಒಪ್ಪಿಕೊಳ್ಳುವುದು: “ಸಮೀಪ ಪೂರ್ವದಲ್ಲಿ ಹಾಗೂ ಐರೋಪ್ಯ ಇತಿಹಾಸದಲ್ಲಿ ಆಗಿಂದಾಗ್ಗೆ ಇತರ ಧಾರ್ಮಿಕ ಗುಂಪುಗಳ ಮೇಲಿನ ಹಿಂಸಾತ್ಮಕ ಆಕ್ರಮಣಗಳಿಗೆ ಧಾರ್ಮಿಕ ಮುಖಂಡರು ಅಪ್ಪಣೆ ಕೊಟ್ಟಿದ್ದಾರೆ.”
ಹಿಂಸಾಚಾರವು ಧರ್ಮದ ಅವಿಭಾಜ್ಯ ಅಂಗವಾಗಿದೆ ಎಂಬುದನ್ನು, ಹೀಗೆ ಹೇಳುವ ಮೂಲಕ ಈ ವಿಶ್ವಕೋಶವು ಪ್ರಕಟಪಡಿಸುತ್ತದೆ: “ಸಾಮಾಜಿಕ ಹಾಗೂ ಮನಶ್ಶಾಸ್ತ್ರಾನುಗುಣವಾದ—ಎರಡೂ ರೀತಿಯ—ಅಭಿವೃದ್ಧಿ ಕಾರ್ಯಯೋಜನೆಗಳಿಗೆ ಸಂಘರ್ಷವು ಅಗತ್ಯವಾದದ್ದಾಗಿದೆ ಎಂಬುದನ್ನು, ಡಾರ್ವಿನ್ ಮತಾನುಯಾಯಿಗಳು ಒಬ್ಬರೇ ಅಂಗೀಕರಿಸುವುದಿಲ್ಲ. ಸಂಘರ್ಷಕ್ಕೆ, ಹಿಂಸಾಚಾರಕ್ಕೆ, ಮತ್ತು ಹೀಗೆ ಅಭಿವೃದ್ಧಿಗೆ ಧರ್ಮವು ನಿರಂತರವಾದ ಮೂಲವಾಗಿ ಕಾರ್ಯನಡಿಸಿದೆ.”
ಅಭಿವೃದ್ಧಿಗಾಗಿ ಅದು ಅಗತ್ಯವಾಗಿದೆ ಎಂಬ ಆಧಾರದ ಮೇಲೆ ಹಿಂಸಾಚಾರವನ್ನು ನ್ಯಾಯವೆಂದು ಸಮರ್ಥಿಸಲು ಸಾಧ್ಯವಿಲ್ಲ. ಏಕೆಂದರೆ ಅಪೊಸ್ತಲ ಪೇತ್ರನು ಯೇಸು ಕ್ರಿಸ್ತನನ್ನು ರಕ್ಷಿಸಲು ಪ್ರಯತ್ನಿಸಿದಾಗ, ಅವನಿಂದ ಸ್ಥಾಪಿಸಲ್ಪಟ್ಟ ಪ್ರಸಿದ್ಧವಾದ ಮೂಲತತ್ವಕ್ಕೆ ಇದು ವ್ಯತಿರಿಕ್ತವಾಗಿ ಪರಿಣಮಿಸುವುದು. ಪೇತ್ರನು “ಕೈಚಾಚಿ ತನ್ನ ಕತ್ತಿಯನ್ನು ಹಿರಿದು ಮಹಾಯಾಜಕನ ಆಳನ್ನು ಹೊಡೆದು ಅವನ ಕಿವಿಯನ್ನು ಕಡಿದುಹಾಕಿದನು. ಆಗ ಯೇಸು ಅವನಿಗೆ—ನಿನ್ನ ಕತ್ತಿಯನ್ನು ತಿರಿಗಿ ಒರೆಯಲ್ಲಿ ಸೇರಿಸು; ಕತ್ತಿಯನ್ನು ಹಿಡಿದವರೆಲ್ಲರು ಕತ್ತಿಯಿಂದ ಸಾಯುವರು” ಎಂದು ಹೇಳಿದನು.—ಮತ್ತಾಯ 26:51, 52; ಯೋಹಾನ 18:10, 11.
ವ್ಯಕ್ತಿಗಳ ಕಡೆಗೆ—ಅವರು ಒಳ್ಳೆಯವರಾಗಿರಲಿ ಇಲ್ಲವೇ ಕೆಟ್ಟವರಾಗಿರಲಿ—ನಿರ್ದೇಶಿಸಲ್ಪಡುವ ಹಿಂಸಾಚಾರವು, ಪ್ರೀತಿಯ ರೀತಿಯಾಗಿರುವುದಿಲ್ಲ. ಹೀಗೆ, ಹಿಂಸಾಚಾರವನ್ನು ಅವಲಂಬಿಸುವ ಜನರು, ತಾವು ಒಬ್ಬ ಪ್ರೀತಿಪರ ದೇವರ ಅನುಕರಣೆಯಲ್ಲಿ ಈ ರೀತಿ ವರ್ತಿಸುತ್ತಿದ್ದೇವೆಂದು ಸುಳ್ಳಾಗಿ ಪ್ರತಿಪಾದಿಸುತ್ತಾರೆ. ಗ್ರಂಥಕರ್ತ ಏಮೊಸ್ ಆಸ್ ಇತ್ತೀಚೆಗೆ ದಾಖಲಿಸಿದ್ದು: “ಧಾರ್ಮಿಕ ಮತಭ್ರಾಂತರ ವಿಷಯದಲ್ಲಿ ಇದು ಪ್ರಾತಿನಿಧಿಕವಾಗಿದೆ . . . ಅದೇನೆಂದರೆ ಅವರು ದೇವರಿಂದ ಪಡೆದುಕೊಳ್ಳುವ ‘ಆಜ್ಞೆಗಳು’ ಯಾವಾಗಲೂ ಅಗತ್ಯವಾಗಿ ಒಂದೇ ಆಜ್ಞೆಯಾಗಿರುತ್ತವೆ: ಕೊಲೆಮಾಡು. ಎಲ್ಲ ಮತಭ್ರಾಂತರ ದೇವರು ಹೆಚ್ಚಾಗಿ ಪಿಶಾಚನಾಗಿರುವಂತೆ ತೋರುತ್ತದೆ.”
ಬೈಬಲು ಅದಕ್ಕೆ ತದ್ರೀತಿಯದ್ದಾದ ಒಂದು ವಿಷಯವನ್ನೇ ಹೇಳುತ್ತದೆ: “ಇವರು ದೇವರ ಮಕ್ಕಳೆಂಬದೂ ಅವರು ಸೈತಾನನ ಮಕ್ಕಳೆಂಬದೂ ಇದರಿಂದ ವ್ಯಕ್ತವಾಗುತ್ತದೆ. ನೀತಿಯನ್ನು ಅನುಸರಿಸದವನೂ ತನ್ನ ಸಹೋದರನನ್ನು ಪ್ರೀತಿಸದವನೂ ದೇವರಿಂದ ಹುಟ್ಟಿದವರಲ್ಲ. ತನ್ನ ಸಹೋದರನನ್ನು ದ್ವೇಷಿಸುವವನು ಕೊಲೆಗಾರನಾಗಿದ್ದಾನೆ, ಮತ್ತು ಯಾವ ಕೊಲೆಗಾರನಲ್ಲಿಯೂ ನಿತ್ಯಜೀವವು ಇರುವದಿಲ್ಲವೆಂಬದು ನಿಮಗೆ ಗೊತ್ತಾಗಿದೆ. ಒಬ್ಬನು ತಾನು ದೇವರನ್ನು ಪ್ರೀತಿಸುತ್ತೇನೆಂದು ಹೇಳಿ ತನ್ನ ಸಹೋದರನನ್ನು ದ್ವೇಷಿಸಿದರೆ ಅವನು ಸುಳ್ಳುಗಾರನಾಗಿದ್ದಾನೆ. ತಾನು ಕಂಡಿರುವ ತನ್ನ ಸಹೋದರನನ್ನು ಪ್ರೀತಿಸದವನು ತಾನು ಕಾಣದಿರುವ ದೇವರನ್ನು ಪ್ರೀತಿಸಲಾರನು. ದೇವರನ್ನು ಪ್ರೀತಿಸುವವನು ತನ್ನ ಸಹೋದರನನ್ನೂ ಪ್ರೀತಿಸಬೇಕೆಂಬ ಆಜ್ಞೆಯನ್ನು ನಾವು ಆತನಿಂದ ಹೊಂದಿದ್ದೇವೆ.”—1 ಯೋಹಾನ 3:10, 15; 4:20, 21.
ಸತ್ಯ ಧರ್ಮವು ಪ್ರೀತಿಯ ಮಾದರಿಯನ್ನು ಅನುಸರಿಸಬೇಕು. ಇದರಲ್ಲಿ ವೈರಿಗಳಿಗೂ ಪ್ರೀತಿಯನ್ನು ತೋರಿಸುವುದು ಒಳಗೊಂಡಿದೆ. ಯೆಹೋವನ ಕುರಿತಾಗಿ ನಾವು ಓದುವುದು: “ಆತನು ಕೆಟ್ಟವರ ಮೇಲೆಯೂ ಒಳ್ಳೆಯವರ ಮೇಲೆಯೂ ತನ್ನ ಸೂರ್ಯನು ಮೂಡುವಂತೆ ಮಾಡುತ್ತಾನೆ; ನೀತಿವಂತರ ಮೇಲೆಯೂ ಅನೀತಿವಂತರ ಮೇಲೆಯೂ ಮಳೆಸುರಿಸುತ್ತಾನೆ.” (ಮತ್ತಾಯ 5:44, 45; 1 ಯೋಹಾನ 4:7-10ನ್ನು ಸಹ ನೋಡಿರಿ.) ದ್ವೇಷದ ದೇವರಾದ ಸೈತಾನನಿಗೆ ಇದು ಎಷ್ಟೊಂದು ಅಸದೃಶವಾಗಿದೆ! ವ್ಯಭಿಚಾರ, ದುಷ್ಕೃತ್ಯ, ಮತ್ತು ಸ್ವಾರ್ಥಪರತೆಯ ಜೀವಿತಗಳನ್ನು ಜೀವಿಸುವಂತೆ, ಹೀಗೆ ತಮ್ಮ ಜೀವಿತಗಳನ್ನು ವೇದನೆ ಹಾಗೂ ದುರವಸ್ಥೆಯಿಂದ ತುಂಬಿಸಿಕೊಳ್ಳುವಂತೆ ಅವನು ಜನರಿಗೆ ಆಮಿಷ ಒಡ್ಡಿ, ದುಷ್ಪ್ರೇರಣೆಗೆ ಒಳಪಡಿಸುತ್ತಾನೆ. ಈ ಮತಭ್ರಷ್ಟ ಜೀವನ ಶೈಲಿಯು ಕಟ್ಟಕಡೆಗೆ ಅವರ ನಾಶನಕ್ಕೆ ಮುನ್ನಡಿಸುವುದೆಂಬುದು ಅವನಿಗೆ ಚೆನ್ನಾಗಿ ಗೊತ್ತಿದ್ದರೂ, ಅವನು ಇದನ್ನು ಮಾಡುತ್ತಾ ಇರುತ್ತಾನೆ. ತನ್ನ ಸ್ವಂತ ಹಿಂಬಾಲಕರನ್ನು ಸಂರಕ್ಷಿಸಲು ಅಶಕ್ತನಾಗಿರುವ—ಸ್ಪಷ್ಟವಾಗಿಯೂ ಮನಸ್ಸಿಲ್ಲದವನಾಗಿರುವ—ಒಬ್ಬನು, ನಾವು ಸೇವಿಸಲು ಅರ್ಹನಾಗಿರುವಂತಹ ರೀತಿಯ ದೇವರಾಗಿದ್ದಾನೊ?
ಭಯ, ಕೋಪ, ಅಥವಾ ಕೆಡುಕಿನ ಪರಿಜ್ಞಾನ
ಈ ಅಂಶಗಳು ದ್ವೇಷವನ್ನು ಹೊತ್ತಿಸುತ್ತವೆ ಎಂಬುದನ್ನು ಸುಲಭವಾಗಿ ಸಮರ್ಥಿಸಲಾಗುತ್ತದೆ. ಟೈಮ್ ಪತ್ರಿಕೆಯ ವರದಿಯೊಂದು ಹೇಳುವುದು: “ತೊಂದರೆಗೊಳಗಾಗಿದ್ದ 1930ಗಳಿಂದ, ಯೂರೋಪಿನ ಕಲಬೆರಕೆಯ ತೀವ್ರಗಾಮಿ ಚಳವಳಿಗಳು, ಸುಸಂದರ್ಭಗಳೆಂದು ತೋರುತ್ತಿರುವ ಅಷ್ಟೊಂದು ಸಂದರ್ಭಗಳನ್ನು ಉಪಯೋಗಿಸಿಕೊಂಡದ್ದಿಲ್ಲ. . . . ತಮ್ಮ ಉದ್ಯೋಗಗಳ ಭಯದಿಂದ, ಮಧ್ಯಮಾರ್ಗಿ ಸರಕಾರಗಳ ನಿಷ್ಫಲತೆಯ ವಿರುದ್ಧ ಜನರು ತೀವ್ರ ಕೋಪದಿಂದ ತಿರುಗಿಬಿದ್ದು, ತಮ್ಮ ಮಧ್ಯೆಯಿರುವ ವಿದೇಶೀಯರನ್ನು ಪಾಪಬಲಿಗಳಾಗಿ ಮಾಡುತ್ತಿದ್ದಾರೆ.” ರೈನಿಷರ್ ಮೆರ್ಕೂರ್/ಕ್ರಿಸ್ಟ್ ಉಂಟ್ ವೆಲ್ಟ್ ಎಂಬ ವಾರ್ತಾಪತ್ರದಲ್ಲಿ ಯಾರ್ಗ್ ಶಿಂಡ್ಲರ್, ಕಳೆದ ಎರಡು ದಶಕಗಳಲ್ಲಿ ಜರ್ಮನಿಯೊಳಗೆ ಪ್ರವಹಿಸಿರುವ ಹತ್ತಾರು ಸಾವಿರ ರಾಜಕೀಯ ಆಶ್ರಿತರ ಕಡೆಗೆ ಗಮನ ಸೆಳೆದರು. ದ ಜರ್ಮನ್ ಟ್ರಿಬ್ಯೂನ್ ಎಚ್ಚರಿಸುವುದು: “ಯೂರೋಪಿನಾದ್ಯಂತ ಜಾತಿಸಂಬಂಧವಾದವು ಅತ್ಯಧಿಕವಾಗುತ್ತಿದೆ.” ಇಷ್ಟೊಂದು ವಲಸೆಗಾರರ ಒಳಬರುವಿಕೆಯು, ದ್ವೇಷದ ಭಾವನೆಗಳನ್ನು ಉಂಟುಮಾಡುತ್ತದೆ. ಜನರು ಹೀಗೆ ಆಪಾದಿಸುತ್ತಿರುವುದಾಗಿ ಕೇಳಿಬಂದಿದೆ: ‘ಅವರಿಂದ ನಮಗೆ ಹಣವು ನಷ್ಟವಾಗುತ್ತಿದೆ, ಅವರು ನಮ್ಮ ಉದ್ಯೋಗಗಳನ್ನು ಕಸಿದುಕೊಳ್ಳುತ್ತಿದ್ದಾರೆ, ನಮ್ಮ ಪುತ್ರಿಯರಿಗೆ ಅವರು ಅಪಾಯವಾಗಿದ್ದಾರೆ.’ ಆಕ್ಸ್ಫರ್ಡ್ನ ಸೆಂಟ್ ಆ್ಯಂಟನೀಸ್ ಕಾಲೇಜಿನ ಒಬ್ಬ ಸಭಾಸದಸ್ಯನಾದ ಥೀಯಡೋರ್ ಸೆಲ್ಡನ್ ಹೇಳಿದ್ದೇನೆಂದರೆ, ಜನರು “ಹಿಂಸಾಚಾರಿಗಳಾಗಿದ್ದಾರೆ, ಏಕೆಂದರೆ ಅವರಿಗೆ ಬೆದರಿಕೆಹಾಕಲ್ಪಟ್ಟ ಅಥವಾ ಅಪಮಾನಗೊಳಿಸಲ್ಪಟ್ಟ ಅನಿಸಿಕೆಯಾಗುತ್ತದೆ. ಅವರ ಕೋಪದ ಕಾರಣಗಳೇ ಗಮನಕ್ಕೆ ಯೋಗ್ಯವಾಗಿರುವ ವಿಷಯಗಳಾಗಿವೆ.”
ತನ್ನ ಪೌರರಿಗೆ ದ್ವೇಷಿಸಲು ಕಲಿಸುವಂತಹ ನಮ್ಮ ಲೋಕವನ್ನು ವರ್ಣಿಸಲಿಕ್ಕಾಗಿ, ಬ್ರಿಟಿಷ್ ಟೆಲಿವಿಷನ್ ಪತ್ರಿಕೋದ್ಯೋಗಿಯಾದ ಜೋನ್ ಬೇಕ್ವೆಲ್, ಸಮಂಜಸವಾದ ಶಬ್ದಗಳನ್ನು ಉಪಯೋಗಿಸುತ್ತಾಳೆ. ಅವಳು ಬರೆಯುವುದು: “ನಾನು ಒಬ್ಬ ಸಂಪ್ರದಾಯಬದ್ಧ ಕ್ರೈಸ್ತಳಾಗಿಲ್ಲದಿದ್ದರೂ, ಪ್ರೀತಿಯ ದುರಂತಮಯ ಗೈರುಹಾಜರಿಯೇ ಕೆಡುಕಾಗಿದೆ ಎಂಬ ಯೇಸುವಿನ ಬೋಧನೆಯಲ್ಲಿರುವ ಗಾಢವಾದ ಹಾಗೂ ಸಮಗ್ರವಾದ ಸತ್ಯತೆಯನ್ನು ನಾನು ಗ್ರಹಿಸುತ್ತೇನೆ. . . . ಪ್ರೀತಿಯ ಸಿದ್ಧಾಂತಕ್ಕೆ ಸ್ವಲ್ಪವೇ ವಿಶ್ವಾಸವನ್ನು ಕೊಡುವ ಸಮಾಜವೊಂದರಲ್ಲಿ ನಾವು ಜೀವಿಸುತ್ತಿದ್ದೇವೆ ಎಂಬುದು ನನಗೆ ಗೊತ್ತು. ನಿಜವಾಗಿಯೂ, ಅದು ಎಷ್ಟೊಂದು ಚಾಕಚಕ್ಯತೆಯ ಸಮಾಜವೆಂದರೆ, ಇಂತಹ ಸಿದ್ಧಾಂತವನ್ನು ಅದು ತೀರ ಮುಗ್ಧವಾದುದು, ಭಾವಾತಿರೇಕದ್ದು, ಅಸಾಧ್ಯಾದರ್ಶವಾದುದು, ಲಾಭ ಮತ್ತು ಸ್ವಆಸಕ್ತಿಗಿಂತ ಕಾಳಜಿವಹಿಸುವಿಕೆ ಹಾಗೂ ನಿಸ್ವಾರ್ಥತೆಯು ಹೆಚ್ಚು ಅಮೂಲ್ಯವೆಂದು ಹೇಳುವಂತಹದ್ದೆಂದು ಹೇಳಿ ವರ್ಜಿಸಿಬಿಡುತ್ತದೆ. ಹೊಸ ವ್ಯಾಪಾರ ವಹಿವಾಟನ್ನು ಹೊಂದಿ, ಇರುವ ಜವಾಬ್ದಾರಿಗಳ ಕುರಿತು ಮೋಸಮಾಡಿ, ತಾನು ತಪ್ಪಾಗಿರುವುದಾದರೂ ಅದಕ್ಕಿರುವ ರುಜುವಾತನ್ನು ಲಘುವೆಂದು ತೋರಿಸುವಾಗ, ‘ನಾವು ವಾಸ್ತವವಾದಿಗಳಾಗಿರೋಣ’ ಎಂದು ಅದು ಹೇಳುತ್ತದೆ. ಅಂತಹ ಒಂದು ಲೋಕವು, ಅಪಜಯಗಳನ್ನು, ಒಂಟಿಗರನ್ನು, ಸಮಾಜವು ಯಾವುದನ್ನು ಯಶಸ್ಸು, ಸ್ವಾಭಿಮಾನ ಹಾಗೂ ಸಂತೋಷಭರಿತ ಕುಟುಂಬಗಳೆಂದು ಪರಿಗಣಿಸುತ್ತದೋ ಅದನ್ನು ಪಡೆದುಕೊಳ್ಳುವುದರಲ್ಲಿ ಯಶಸ್ಸುಪಡೆದುಕೊಳ್ಳದ ಜನರನ್ನು ಉತ್ಪಾದಿಸುತ್ತದೆ.”
ಈ ಲೋಕದ ದೇವರಾದ ಸೈತಾನನು, ಮಾನವಕುಲಕ್ಕೆ ದ್ವೇಷಿಸಲು ಕಲಿಸುತ್ತಿದ್ದಾನೆ ಎಂಬುದು ಸ್ಪಷ್ಟ. ಆದರೆ ವ್ಯಕ್ತಿಗತವಾಗಿ ನಾವು ಪ್ರೀತಿಸಲು ಕಲಿಯಸಾಧ್ಯವಿದೆ. ಇದು ಸಾಧ್ಯವಿದೆ ಎಂಬುದನ್ನು ಮುಂದಿನ ಲೇಖನವು ತೋರಿಸುವುದು.
[ಪುಟ 8 ರಲ್ಲಿರುವ ಚಿತ್ರ]
ವಿಡಿಯೋ ಆಟಗಳು ನಿಮ್ಮ ಮಕ್ಕಳಿಗೆ ದ್ವೇಷಿಸುವುದನ್ನು ಕಲಿಸುತ್ತಿರಸಾಧ್ಯವಿದೆಯೊ?
[ಪುಟ 9 ರಲ್ಲಿರುವ ಚಿತ್ರ]
ಯುದ್ಧದ ಹಿಂಸಾಚಾರವು, ಅಜ್ಞಾನ ಹಾಗೂ ದ್ವೇಷದ ಒಂದು ಗುಣಲಕ್ಷಣವಾಗಿದೆ
[ಕೃಪೆ]
Pascal Beaudenon/Sipa Press