ಕೀಟ ಹಾರಾಟದ ಒಗಟು ಬಿಡಿಸಲ್ಪಟ್ಟದ್ದು
ಕೀಟಗಳು, ತಮ್ಮ ಭಾರವಾದ ದೇಹ ಮತ್ತು ಅತಿ ನಾಜೂಕಾದ ರೆಕ್ಕೆಗಳೊಂದಿಗೆ ಹೇಗೆ ಆಕಾಶದಲ್ಲಿ ಹಾರುತ್ತಾ ಇರಸಾಧ್ಯವೆಂದು ವಿಜ್ಞಾನಿಗಳು ಬಹಳ ಸಮಯದಿಂದ ಆಶ್ಚರ್ಯಪಟ್ಟಿದ್ದಾರೆ. ಈ ಪುಟ್ಟ ಜೀವಿಗಳು, ವಾಯುಬಲಶಾಸ್ತ್ರದ ಸಾಂಪ್ರದಾಯಿಕ ಮೂಲತತ್ವಗಳನ್ನು ಕಡೆಗಣಿಸುವಂತೆ ತೋರುತ್ತದೆ. ಈಗ, ಇಂಗ್ಲೆಂಡ್ನ ಕೇಂಬ್ರಿಜ್ ವಿಶ್ವವಿದ್ಯಾನಿಲಯದ ಸಂಶೋಧಕರು, ಅಸಾಧ್ಯವಾಗಿರುವಂತೆ ತೋರುವ ಈ ಸಾಧನೆಯನ್ನು ಕೀಟಗಳು ಹೇಗೆ ನಿರ್ವಹಿಸುತ್ತವೆ ಎಂಬುದನ್ನು ಕಂಡುಹಿಡಿದಿದ್ದಾರೆ.
ಕೀಟ ಹಾರಾಟದ ಅಧ್ಯಯನ ಮಾಡಲು, ವಿಜ್ಞಾನಿಗಳು ಹಾಕ್ಮಾತ್ (ಗಿಡುಗಚಿಟ್ಟೆ)ನ ಸುತ್ತಲೂ ಹತ್ತಿಯ ನೂಲೊಂದನ್ನು ಕಟ್ಟಿ, ಅದನ್ನು ಒಂದು ವಾಯುಕೊಳವೆಯೊಳಗೆ ಇರಿಸಿದರು. ಕೊಳವೆಯೊಳಗೆ ಅವರು ವಿಷಕಾರಿಯಲ್ಲದ ಹೊಗೆಯನ್ನು ಪಂಪುಮಾಡಿ, ಚಿಟ್ಟೆಯು ಅದರ ರೆಕ್ಕೆಗಳನ್ನು ಬಡಿದಾಗ ಹೊಗೆಯು ಚಲಿಸಿದ ವಿಧವನ್ನು ಗಮನಿಸಿದರು. ಅನಂತರ, ತನ್ನ ರೆಕ್ಕೆಗಳನ್ನು 100 ಬಾರಿ ಹೆಚ್ಚು ನಿಧಾನವಾಗಿ ಬೀಸಿದ, 10 ಪಟ್ಟು ಹೆಚ್ಚು ದೊಡ್ಡದಾದ ಒಂದು ತಾಂತ್ರಿಕ ನಮೂನೆಯನ್ನು ಅವರು ನಿರ್ಮಿಸಿ, ಈಗ ಸುಲಭವಾಗಿ ಗ್ರಹಿಸಸಾಧ್ಯವಿದ್ದ ಪರಿಣಾಮಗಳನ್ನು ಗಮನಿಸಿದರು. ಚಿಟ್ಟೆಯ ರೆಕ್ಕೆಯು ಅದರ ಕೆಳಮುಖ ಹೊಡೆತವನ್ನು ಆರಂಭಿಸಿದಾಗ, ರೆಕ್ಕೆಯ ಬುಡದಲ್ಲಿ ಒಂದು ಸುಳಿ ಇಲ್ಲವೆ ವಾಯುವಿನ ಒಂದು ಆವರ್ತವು ರೂಪುಗೊಳ್ಳುತ್ತದೆಂಬುದನ್ನು ಅವರು ಕಂಡುಕೊಂಡರು. ಹೀಗೆ, ರೆಕ್ಕೆಯ ಮೇಲ್ಭಾಗದಲ್ಲಿ ಉಂಟಾದ ಕಡಿಮೆ ಒತ್ತಡವು, ಮೇಲೆತ್ತುವಿಕೆಯನ್ನು ಉತ್ಪಾದಿಸಿ, ಕೀಟವನ್ನು ಮೇಲಕ್ಕೆ ಸೆಳೆಯುತ್ತದೆ. ಸುಳಿಯು ಬತ್ತಿಹೋದರೆ, ಚಿಟ್ಟೆಯು ಮೇಲೆತ್ತುವಿಕೆಯನ್ನು ಕಳೆದುಕೊಂಡು, ನೆಲಕ್ಕೆ ಬೀಳುವುದು. ವಾಯುವಿನ ಸುಳಿಯು, ರೆಕ್ಕೆಯ ಆದ್ಯ ಮೊನೆಯಿಂದ ರೆಕ್ಕೆಯ ತುದಿಯ ಉದ್ದಕ್ಕೂ ಸಂಚರಿಸುತ್ತದೆ, ಮತ್ತು ಹೀಗೆ, ರೆಕ್ಕೆಯ ಕೆಳಮುಖ ಹೊಡೆತದಿಂದ ಉತ್ಪಾದಿಸಲ್ಪಟ್ಟ ಮೇಲೆತ್ತುವಿಕೆಯು—ಚಿಟ್ಟೆಯ ಭಾರಕ್ಕೆ ಒಂದೂವರೆ ಪಟ್ಟು ಸಮಾನವಾಗಿದ್ದು—ಯಾವ ತೊಂದರೆಯೂ ಇಲ್ಲದೆ ಕೀಟವು ಹಾರುವಂತೆ ಅನುಮತಿಸುತ್ತದೆ.
ವೈಮಾನಿಕೀಯ ತಂತ್ರಜ್ಞಾನಿಗಳು, ಡೆಲ್ಟ-ರೆಕ್ಕೆ ವಿಮಾನಗಳು (ರೆಕ್ಕೆಯು ಗ್ರೀಕ್ ಅಕ್ಷರವಾದ Δ ಅನ್ನು ಹೋಲುವುದರಿಂದ ಹಾಗೆ ಕರೆಯಲ್ಪಡುತ್ತದೆ) ತಮ್ಮ ರೆಕ್ಕೆತುದಿಗಳಲ್ಲಿ ಸುಳಿಗಳನ್ನು ಉತ್ಪಾದಿಸುತ್ತವೆ ಎಂಬುದನ್ನು ಈಗಾಗಲೇ ಬಲ್ಲವರಾಗಿದ್ದರು. ಈ ಸುಳಿಗಳು ಮೇಲೆತ್ತುವಿಕೆಯನ್ನು ಸೃಷ್ಟಿಸುತ್ತವೆ. ಆದರೆ, ತಮ್ಮ ರೆಕ್ಕೆಗಳನ್ನು ಬಡಿಯುವ ಕೀಟಗಳಿಗೆ ಸುಳಿಗಳು ಹೇಗೆ ಮೇಲೆತ್ತನ್ನು ಒದಗಿಸುತ್ತವೆ ಎಂಬುದು ಈಗ ಅವರಿಗೆ ತಿಳಿದಿರುವ ಕಾರಣ, ಚಾಲಕ ಮತ್ತು ಹೆಲಿಕಾಪ್ಟರ್ಗಳ ವಿನ್ಯಾಸದಲ್ಲಿ ಈ ಸಂಗತಿಯನ್ನು ಹೇಗೆ ಬಳಸುವುದೆಂಬುದನ್ನು ಅವರು ಅಧ್ಯಯನಿಸಲು ಬಯಸುತ್ತಾರೆ.