ಕ್ಲೇಶಮುಕ್ತ ಪ್ರಮೋದವನಕ್ಕಾಗಿ ಅನ್ವೇಷಣೆ
“ನಾವು ಸೃಷ್ಟಿಸಲು ಬಯಸುವುದು, ಒಂದು ಸುಭದ್ರವಾದ ಮತ್ತು ಪ್ರಾಯಶಃ ಜನರು ಒಬ್ಬರ ಕುರಿತಾಗಿ ಒಬ್ಬರು ಚಿಂತಿಸುವ ಹಳೆಯ ಶೈಲಿಯ ಜೀವನವನ್ನು, ಅಷ್ಟೆ,” ಎಂದರು ಒಬ್ಬ ಬ್ರಿಟಿಷ್ ದಂಪತಿಗಳು. ಅವರು ಉಷ್ಣವಲಯದ ದ್ವೀಪ ಪ್ರಮೋದವನವೊಂದನ್ನು ಹುಡುಕಿ, ಅಲ್ಲಿ ಶಾಂತಿಯಿಂದ ಕೂಡಿ ಜೀವಿಸುವ ಸಮಾಜವೊಂದನ್ನು ಸ್ಥಾಪಿಸಲು ನಿರ್ಧರಿಸಿದರು. ನಿಸ್ಸಂದೇಹವಾಗಿ ನೀವು ಅವರ ಅನಿಸಿಕೆಗಳನ್ನು ಅರ್ಥಮಾಡಿಕೊಳ್ಳಬಲ್ಲಿರಿ. ಕ್ಲೇಶಮುಕ್ತ ಪ್ರಮೋದವನದಲ್ಲಿ ಜೀವಿಸುವ ಅವಕಾಶವನ್ನು ಯಾರು ತಾನೆ ಅತ್ಯಾತುರದಿಂದ ಅಂಗೀಕರಿಸುವುದಿಲ್ಲ?
ಪ್ರತ್ಯೇಕತೆ ಉತ್ತರವೊ?
ಅನೇಕ ಪ್ರಮೋದವನಾನ್ವೇಷಕರಿಗೆ ದ್ವೀಪದಲ್ಲಿ ವಾಸಿಸುವ ವಿಚಾರವು ಹಿಡಿಸುತ್ತದೆ. ಏಕೆಂದರೆ ಪ್ರತ್ಯೇಕತೆಯು ಸ್ವಲ್ಪಮಟ್ಟಿಗೆ ಭದ್ರತೆಯನ್ನೊದಗಿಸುತ್ತದೆ. ಕೆಲವರು ಶಾಂತಸಾಗರದ ಪ್ಯಾನಮಾ ಕರಾವಳಿಯಾಚೆಗಿರುವ ದ್ವೀಪಗಳನ್ನು ಅಥವಾ ಬೆಲೀಸ್ನಂತಹ ಕ್ಯಾರಿಬಿಯನ್ ಸಮುದ್ರದ ದ್ವೀಪಗಳನ್ನು ಆರಿಸಿಕೊಳ್ಳುತ್ತಾರೆ. ಇತರರು ತಮ್ಮ ಗಮನವನ್ನು ಹಿಂದೂ ಮಹಾಸಾಗರದ ಸಹಜ ಸುಂದರ ದ್ವೀಪಗಳ ಕಡೆಗೆ—ಉದಾಹರಣೆಗೆ, ಸೇಶೆಲ್ಸ್—ಹರಿಸುತ್ತಾರೆ.
ಒಂದು ಪ್ರತ್ಯೇಕವಾಗಿರುವ ಸಮಾಜವನ್ನು ಸ್ಥಾಪಿಸುವ ಜಾರಿವ್ಯವಸ್ಥೆಗಳು ಭಾವನಾತೀತವಾಗಿವೆ. ಸಾಕಷ್ಟು ಹಣ ದೊರಕುವುದಾದರೂ, ಅಸ್ತಿತ್ವದಲ್ಲಿರುವ ಸರಕಾರೀ ಶಾಸನ ಒಡನೆ ಜಮೀನಿನ ಖರೀದಿಸುವಿಕೆಯನ್ನು ನಿರ್ಬಂಧಿಸೀತು. ಆದರೆ, ಒಂದು ವೇಳೆ ಆದರ್ಶ ಉಷ್ಣವಲಯದ ದ್ವೀಪವೊಂದನ್ನು ಪಡೆಯಬಹುದಾಗಿದ್ದರೆ, ನೀವು ಅಲ್ಲಿ ಆನಂದವಾಗಿರುವಿರೊ? ನಿಮ್ಮ ಪ್ರಮೋದವನ ಕ್ಲೇಶಮುಕ್ತವಾಗಿದ್ದೀತೊ?
ಬ್ರಿಟನಿನ ಕರಾವಳಿಯಾಚೆಗಿರುವ ದೂರದ ದ್ವೀಪಗಳಲ್ಲಿ ಈಗ ಬೆಳೆಯುತ್ತಿರುವ ಜನಸಂಖ್ಯೆಯಿದೆ. ಅವುಗಳ ಹೊಸ ನಿವಾಸಿಗಳು ಮುಖ್ಯವಾಗಿ ಏಕಾಂತತೆ ಮತ್ತು ಶಾಂತಿಯನ್ನು ಹುಡುಕುತ್ತಿರುವ ಜನರಾಗಿದ್ದಾರೆ. ಸ್ಕಾಟ್ಲಂಡ್ನ ಪಶ್ಚಿಮ ಕರಾವಳಿಯಾಚೆಗಿರುವ 250 ಎಕ್ರೆ ಜಮೀನಿನ ದ್ವೀಪವಾದ ಈಆರ್ಸದಲ್ಲಿ ಒಂಟಿಯಾಗಿ ಜೀವಿಸುವ ಒಬ್ಬ ಮನುಷ್ಯನು, ತನಗಿರುವ ನೂರು ಕುರಿಗಳ ಮಂದೆಯನ್ನು ಪರಾಮರಿಸಲು ತನಗೆ ಎಷ್ಟು ಕೆಲಸ ಮಾಡಲಿಕ್ಕಿದೆಯೆಂದರೆ, ತನಗೆ ಒಂಟಿಗ ಭಾವನೆ ಆಗುವುದೇ ಇಲ್ಲವೆಂದು ವಾದಿಸುತ್ತಾನೆ. ಒಂದು ದ್ವೀಪದ ಏಕಾಂತತೆಯನ್ನು ಹುಡುಕಿರುವ ಇತರರಿಗೆ ಬೇಗನೆ ಒಂಟಿ ಭಾವನೆ ಬರುತ್ತದೆ. ಕೆಲವರು ಆತ್ಮಹತ್ಯೆಮಾಡಿಕೊಳ್ಳಲು ಪ್ರಯತ್ನಿಸಿದ್ದು, ಅವರಿಗೆ ರಕ್ಷೆಯ ಅವಶ್ಯವಿತ್ತೆಂದೂ ವರದಿಯುಂಟು.
ಉಷ್ಣವಲಯದ ಸಹಜ ಸುಂದರ ದ್ವೀಪವೊಂದು ಪ್ರಮೋದವನವಾಗಿರುವುದೆಂದು ಅನೇಕ ಜನರು ನಂಬುತ್ತಾರೆ. ವಿಪರೀತ ರೀತಿಯ ವಾಯುಗುಣ ಕೊಂಚವಾಗಿರುವ ಒಂದು ಹಿತಕರವಾದ ಹವಾಮಾನದಲ್ಲಿ ವಾಸಿಸುವುದು ಅವರಿಗೆ ಹಿಡಿಸುತ್ತದೆ. ಆದರೆ ಸಂಭವನೀಯ ಭೌಗೋಳಿಕ ಕಾವೇರುವಿಕೆ ಮತ್ತು ಪರಿಣಾಮವಾಗಿ ಸಮುದ್ರಮಟ್ಟದಲ್ಲಿನ ಏರಿಕೆಯ ಚಿಂತೆಯು ಅನೇಕ ದ್ವೀಪವಾಸಿಗಳ ಮಧ್ಯೆ ಅಪಾಯಸೂಚನೆಯನ್ನೆಬ್ಬಿಸಿದೆ. ಪಶ್ಚಿಮ ಶಾಂತಸಾಗರದ ಟೋಕಲಾವ್ ಪ್ರದೇಶದಲ್ಲಿರುವ ತಗ್ಗಾದ ಹವಳ ದಿಬ್ಬಗಳು ಹಾಗೂ ಹಿಂದೂ ಮಹಾಸಾಗರದ ಚದರಿರುವ ಮಾಲ್ಡೀವ್ ದ್ವೀಪಗಳ—ಪೂರ್ಣ ಉಬ್ಬರದ ಸಮಯದಲ್ಲಿ ಸಮುದ್ರ ಮಟ್ಟಕ್ಕಿಂತ ಎರಡು ಮೀಟರುಗಳಿಗಿಂತ ಹೆಚ್ಚು ಎತ್ತರದಲ್ಲಿಲ್ಲದ ಈ ದ್ವೀಪಗಳು—ನಿವಾಸಿಗಳಿಗೆ ಹಾಗೆಯೇ ಬೆದರಿಕೆಯ ಅನಿಸಿಕೆಯಾಗುತ್ತದೆ.
ತಮ್ಮ ದುರವಸ್ಥೆಗೆ ಬೆಂಬಲವನ್ನು ಕೋರಲು ಸುಮಾರು 40 ವಿಭಿನ್ನ ಸರಕಾರಗಳು ಸ್ಮಾಲ್ ಐಲೆಂಡ್ ಡೆವಲಪಿಂಗ್ ಸ್ಟೇಟ್ಸ್ ಫೆಡರೇಶನ್ನಲ್ಲಿ ಜೊತೆಗೂಡಿವೆ. ಈ ಚಿಕ್ಕ ದ್ವೀಪನಿವಾಸಿಗಳಿಗೆ ಸಾಮಾನ್ಯವಾಗಿ ದೀರ್ಘ ಜೀವ ನಿರೀಕ್ಷಣೆಯು ಇದೆಯಾದರೂ ಮತ್ತು ಅವರ ಶಿಶುಮರಣ ಕೆಳಮಟ್ಟದಲ್ಲಿರುವುದಾದರೂ, ಅವರು ಗುರುತರದ ಪರಿಸರೀಯ ಸಮಸ್ಯೆಗಳನ್ನು ಎದುರಿಸುತ್ತ ಹೋಗುತ್ತಾರೆ. ಚೆಲ್ಲಿದ ತೈಲ ಪದರಗಳು ಮತ್ತು ಹೊಲಸಾದ ಸಮುದ್ರಗಳು ಕೆಲವು ದ್ವೀಪಗಳ ಆರ್ಥಿಕ ಸ್ಥಿತಿಯನ್ನು ಶಿಥಿಲಗೊಳಿಸುತ್ತವೆ. ಇತರ ದ್ವೀಪಗಳು ಹೆಚ್ಚು ದೊಡ್ಡ ರಾಷ್ಟ್ರಗಳು ವಿಸರ್ಜಿಸಬಯಸುವ ವಿಷಮಯವಾದ ತ್ಯಾಜ್ಯವಸ್ತುಗಳ ತಿಪ್ಪೆರಾಶಿಗಳಾಗುತ್ತವೆ.
ಪ್ರಮೋದವನಾನ್ವೇಷಕರಿಗೆ ಆಶ್ರಯಸ್ಥಾನಗಳಾಗಿ ತೋರಿಬರುವ ಈ ದ್ವೀಪಗಳ ಸಾಕ್ಷಾತ್ ಅಪೇಕ್ಷಣೀಯತೆಯೇ ಒಂದು ಅಪಾಯವನ್ನು ತಂದೊಡ್ಡುತ್ತದೆ. ಅದು ಹೇಗೆ? ದ್ವೀಪದ ಬಿಸಿಲಿಗೊಡ್ಡಿರುವ ತೀರಗಳಿಗೆ ಗುಂಪುಗುಂಪಾಗಿ ಬರುವ ಪ್ರವಾಸಿಗಳು ಗಂಭೀರವಾದ ಜನಸಂದಣಿಯನ್ನುಂಟುಮಾಡಿ ಇರುವ ಅತ್ಯಲ್ಪ ಸಂಪನ್ಮೂಲಗಳ ಬರಿದಾಗುವಿಕೆಗೆ ಕಾರಣರಾಗುತ್ತಾರೆ. ಈ ಭೇಟಿಕಾರರು ಮಾಲಿನ್ಯದ ಸಮಸ್ಯೆಯನ್ನೂ ಉಲ್ಬಣಗೊಳಿಸುತ್ತಾರೆ. ಉದಾಹರಣೆಗೆ, ಕ್ಯಾರಿಬಿಯನ್ನಲ್ಲಿ ಪ್ರತಿ ವರ್ಷ ಎರಡು ಕೋಟಿ ಭೇಟಿಕಾರರು ಉತ್ಪಾದಿಸುವ ರೊಚ್ಚಿನಲ್ಲಿ ಹತ್ತರಲ್ಲಿ ಒಂದಂಶ ಮಾತ್ರ ಯಾವುದಾದರೂ ವಿಧದ ಸಂಸ್ಕರಣವನ್ನು ಪಡೆಯುತ್ತದೆ.
ಇದರಂತಹದ್ದೇ ಇರುವ ಯಾವುದೊ ಸಂಗತಿಯು ಇತರ ಆಕರ್ಷಕ ಸ್ಥಳಗಳಲ್ಲಿಯೂ ಸಂಭವಿಸುತ್ತದೆ. ಭಾರತದ ಪಶ್ಚಿಮ ಕರಾವಳಿಯಲ್ಲಿರುವ ಗೋವಾದಲ್ಲಿ ಏನು ಸಂಭವಿಸುತ್ತಿದೆಯೆಂಬುದನ್ನು ಪರಿಗಣಿಸಿರಿ. ಲಂಡನ್ನ ಇಂಡಿಪೆಂಡೆಂಟ್ ಆನ್ ಸಂಡೇ ಘೋಷಿಸಿದ್ದು: “ಅಧಿಕ ಪ್ರಮಾಣದ ಪ್ರವಾಸ ‘ಪ್ರಮೋದವನವನ್ನು ಕೆಡಿಸುತ್ತಿದೆ.’” ಅಧಿಕೃತ ಅಂದಾಜುಗಳು, 1972ರಲ್ಲಿದ್ದ 10,000 ಪ್ರವಾಸಿಗಳಿಂದ, 90ಗಳ ಆದಿಯಲ್ಲಿ ಹತ್ತು ಲಕ್ಷಗಳಿಗಿಂತ ಹೆಚ್ಚು ಪ್ರವಾಸಿಗಳ ಅಭಿವೃದ್ಧಿಯನ್ನು ತೋರಿಸುತ್ತದೆ. ಪ್ರವಾಸಿಗಳ ಜನಪ್ರವಾಹದಿಂದ ಲಾಭಗಳಿಸಲು ಆತುರರಾಗಿರುವ ಹೊಟೇಲ್ ಮಾಲಿಕರ ದುರಾಶೆಯಿಂದ, ಗೋವಾದ ದುರ್ಬಲ ಪರಿಸರಶಾಸ್ತ್ರ ಮತ್ತು ಅದ್ವಿತೀಯ ಸಂಸ್ಕೃತಿಗಳು ಅಪಾಯಕ್ಕೊಳಗಾಗಿವೆ ಎಂದು ಒಂದು ಗುಂಪು ಎಚ್ಚರಿಸುತ್ತದೆ. ಕೆಲವು ಹೊಟೇಲುಗಳು ಸಮುದ್ರತೀರದಲ್ಲಿ ಕಾನೂನುವಿರುದ್ಧವಾಗಿ ಕಟ್ಟಲ್ಪಟ್ಟಿವೆಯೆಂದು ಭಾರತ ಸರಕಾರದ ವರದಿಯೊಂದು ದೃಢಪಡಿಸುತ್ತದೆ. ಮರಳು ತೆಗೆಯಲ್ಪಟ್ಟಿದ್ದು, ಮರಗಳು ಕಡಿಯಲ್ಪಟ್ಟು ದಿನ್ನೆಗಳು ಸಮಮಾಡಲ್ಪಟ್ಟಿವೆ. ರೊಚ್ಚನ್ನು ಸಮುದ್ರ ತೀರಕ್ಕೆ ಹರಿಸಲಾಗುತ್ತದೆ ಅಥವಾ ಹತ್ತಿರದ ಭತ್ತದ ಗದ್ದೆಗಳಿಗೆ ಅದು ಸೋರಿಹೋಗುತ್ತದೆ. ಹೀಗೆ ಕಲುಷಿತತೆಯು ಹರಡುತ್ತದೆ.
ಪಾತಕಮುಕ್ತವೊ?
ಪಾತಕದ ಒಳಬರುವಿಕೆಯು ಅತ್ಯಂತ ಪ್ರಶಾಂತ ಪ್ರದೇಶಗಳ ಕೀರ್ತಿಯನ್ನೂ ಕುಂದಿಸುತ್ತದೆ. ಕ್ಯಾರಿಬಿಯನ್ನ ಚಿಕ್ಕದಾದ ಬಾರ್ಬೂಡ ದ್ವೀಪದಿಂದ, “ಪ್ರಮೋದವನದಲ್ಲಿ ಕಗ್ಗೊಲೆ” ಎಂಬ ಶೀರ್ಷಿಕೆಯ ವರದಿಯೊಂದು ಬರುತ್ತದೆ. ಈ ದ್ವೀಪದ ಕರಾವಳಿಯಾಚೆಗೆ ಬಿಗಿಯಲ್ಪಟ್ಟಿದ್ದ ಸುಖವಿಲಾಸ ವಿಹಾರನೌಕೆಯೊಂದರಲ್ಲಿ ನಡೆದ ನಾಲ್ಕು ಜನರ ಭಯಾನಕ ಕೊಲೆಯನ್ನು ಇದು ವರ್ಣಿಸಿತು. ಇಂತಹ ಸಂಭವಗಳು ಆ ಕ್ಷೇತ್ರದಲ್ಲೆಲ್ಲ ಹರಡುವ ಪಾತಕದ ಕುರಿತು ಚಿಂತೆಯನ್ನು ಹೆಚ್ಚಿಸುತ್ತದೆ.
ಮಧ್ಯ ಅಮೆರಿಕ ದೇಶದ ಒಂದು ರಾಜ್ಯದ ಸಂಬಂಧದಲ್ಲಿ, ಲಂಡನ್ನ ದ ಸಂಡೇ ಟೈಮ್ಸ್, “ಅಮಲೌಷಧಗಳು ‘ಪ್ರಮೋದವನ’ದಲ್ಲಿ ಗ್ಯಾಂಗ್ ಯುದ್ಧಗಳನ್ನು ವಿಯೋಜಿಸುತ್ತವೆ” ಎಂಬ ಶೀರ್ಷಿಕೆಯ ವರದಿಯನ್ನು ಕೊಟ್ಟಿತು. ಸ್ಥಳಿಕ ಸಂಪಾದಕನೊಬ್ಬನು, ಹೀಗೆ ಹೇಳುತ್ತ ಶಾಂತಿಯು ಇಲ್ಲದೆಹೋಗಿದೆಯೆಂಬ ನಿಜತ್ವದ ಕುರಿತು ವಿಷಾದಿಸಿದನು: “ಈಗ ಬೆಳಗ್ಗೆ ಎದ್ದು, ರಸ್ತೆಯಲ್ಲಿ 16 ವಯಸ್ಸಿನ ಹುಡುಗನೊಬ್ಬನು ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ನೋಡುವುದು ಒಂದು ಸಾಮಾನ್ಯ ಸಂಗತಿಯಾಗಿದೆ.”
ಸಮಾಜ ಪ್ರಮೋದವನದಲ್ಲಿ ಜೀವಿಸಲು ಉದ್ದೇಶಿಸುವವರು, ಶಾಂತಿಯಿಂದ ಬದುಕಲು ಸಮ್ಮತಿಸುವ ಜನರಿಗೆ ಮನವಿ ಮಾಡಿಕೊಳ್ಳಲು ನಿರೀಕ್ಷಿಸುತ್ತಾರೆ. ಆದರೆ ನಿಜತ್ವವೇನು? ಈ ಮೊದಲು ಪ್ರಸ್ತಾಪಿಸಲ್ಪಟ್ಟಿರುವ ಬ್ರಿಟಿಷ್ ದಂಪತಿಗಳ ಸಂಬಂಧದಲ್ಲಿ, ಭಿನ್ನಾಭಿಪ್ರಾಯಗಳು ಬೇಗನೆ ಮೇಲೆದ್ದು ಬಂದವು. ಅವರ ಸಾಹಸೋದ್ಯಮಕ್ಕೆ ಸೇರಿದ ಅರ್ಜಿದಾರರಲ್ಲಿ ಕೆಲವರು, ಆ ಯೋಜನೆಯಿಂದ ಸ್ಫುಟವಾಗಿ ಹಣಮಾಡಲು ಬಯಸಿದರು. ಆ ಪ್ರವರ್ತಕನು ಹೇಳಿದ್ದು: “ನಮಗೆ ನಾಯಕರು ಬೇಡ. ನಮ್ಮ ಸಂಪನ್ಮೂಲಗಳನ್ನು ಸೇರಿಸಿ ಸಂಗತಿಗಳನ್ನು ಮುಂದಕ್ಕೆ ದೂಡುವುದೇ ಮುಖ್ಯ ಉದ್ದೇಶ. ಅಸಾಧ್ಯಾದರ್ಶ ಸಮಾಜವೆಂದು ನಾನಿದನ್ನು ಕರೆಯುತ್ತೇನೆ.” ಇಂತಹ ಯೋಜನೆಗಳಲ್ಲಿ ಇದು ಎಷ್ಟು ಮಾತ್ರಕ್ಕೂ ಪ್ರಥಮವಲ್ಲ.—“ಪ್ರಮೋದವನ ಸಮಾಜ ಪ್ರಯೋಗಗಳು” ಎಂಬ ರೇಖಾಚೌಕ ನೋಡಿ.
ಬೇರೆ ಕೆಲವು ಪ್ರಮೋದವನಾನ್ವೇಷಕರು, ತಾವು ಲಾಟರಿ ಗೆಲ್ಲುವುದರಿಂದ ತಮ್ಮ ಗುರಿಯನ್ನು ಸಾಧಿಸುತ್ತೇವೆಂದು ನಂಬುತ್ತಾರೆ. ಆದರೆ ಈ ವಿಧದಲ್ಲಿ ಸಾಧಿಸಿದ ಹಣ ಸಂಪಾದನೆ ಸಂತೋಷವನ್ನು ತರುವುದೇ ವಿರಳ. 1995ರ ಫೆಬ್ರವರಿಯಲ್ಲಿ, ದ ಸಂಡೇ ಟೈಮ್ಸ್ ವರದಿಸಿದ್ದೇನಂದರೆ, ಇಂದಿನ ವರೆಗೆ ಬ್ರಿಟನ್ನಲ್ಲಿ ಲಾಟರಿ ವಿಜೇತರಲ್ಲಿ ಅತಿ ದೊಡ್ಡ ಲಾಟರಿ ವಿಜೇತನ ಕುಟುಂಬವು ಕಟುವಾದ ಅಂತಃಕಲಹವನ್ನು ಅನುಭವಿಸಿತು; ವಿಜಯವು ಅವರಿಗೆ “ತೀವ್ರ ಅಸಮಾಧಾನ, ಕಲಹ ಮತ್ತು ಭ್ರಾಂತಿ ನಿವಾರಣೆ”ಯನ್ನು ಹೊರತು ಬೇರೇನನ್ನೂ ತರಲಿಲ್ಲ. ಇಂತಹ ಪರಿಸ್ಥಿತಿಗಳಲ್ಲಿ ಹೀಗಾಗುವುದು ಅಸಾಮಾನ್ಯವೇನಲ್ಲ.
ಅಸಾಧ್ಯಾದರ್ಶಕ್ಕಾಗಿ ಮನುಷ್ಯನ ಹುಡುಕುವಿಕೆಯ ಕುರಿತ ಒಂದು ಅಧ್ಯಯನದಲ್ಲಿ, ಪತ್ರಿಕೋದ್ಯಮಿ ಬರ್ನರ್ಡ್ ಲೆವಿನ್, “ತತ್ಕ್ಷಣದ ಐಶ್ವರ್ಯಗಳ ಸ್ವಪ್ನ”ದ ಕುರಿತು ಮಾತಾಡುತ್ತ, ಪ್ರತಿಪಾದಿಸುವುದು: “ಅನೇಕಾನೇಕ ಸ್ವಪ್ನಗಳು ಸುಲಭವಾಗಿಯೇ ಘೋರಸ್ವಪ್ನಗಳಾಗಿ ಪರಿಣಮಿಸಬಲ್ಲವು. ಸಹಘಟನೆಯೆಂದು ತಳ್ಳಿಹಾಕಲು, ಭಯಂಕರ ವಿಪತ್ತುಗಳಿಗೆ (ಆತ್ಮಹತ್ಯೆಗಳು ಸೇರಿ) ನಡಿಸಿರುವ ತತ್ಕ್ಷಣದ ಐಶ್ವರ್ಯಗಳ ತೀರ ಹೆಚ್ಚು ದೃಢೀಕರಿಸಲ್ಪಟ್ಟ ಕಥೆಗಳಿವೆ.”
ಪ್ರಳಯದಿನ ಪಂಥಗಳ ಕುರಿತೇನು?
ಇತರ ಪ್ರಮೋದವನ ಯೋಜನೆಗಳಿಗೆ ಹೆಚ್ಚು ಅಮಂಗಳಸೂಚಕ ಸೂಚ್ಯಾರ್ಥಗಳಿವೆ. ಟೆಕ್ಸಸ್ನ ವೇಕೋದಲ್ಲಿ, 1993ರಲ್ಲಿ ಬ್ರಾಂಚ್ ಡೆವೀಡ್ಯನ್ ಪಂಥದ ಕಾಂಪೌಂಡ್ನ ಮೇಲೆ ಸರಕಾರೀ ನ್ಯಾಯಚಲಾಯಿಸುವ ಸಿಬಂದಿಗಳು ಹಾಕಿದ ಮುತ್ತಿಗೆಯನ್ನು ವರದಿಸುವಾಗ, ಆ ಪತನಕ್ಕೆ ನಡೆಸಿದ, “ಬಂದೂಕುಗಳು, ಮನಸ್ಸು ನಿಯಂತ್ರಣ ಮತ್ತು ಪ್ರಳಯದಿನದ ಪ್ರವಾದಿಯ ಕ್ಷಣಿಕೋತ್ಸಾಹದ ಮಿಶ್ರಣ”ದ ಕುರಿತು ಒಂದು ವಾರ್ತಾಪತ್ರವು ಹೇಳಿತು. ವಿಷಾದಕರವಾಗಿ, ಇದು ಒಂದೇ ಒಂದು ಸಂಭವವಲ್ಲ.
ಭಾರತೀಯ ಆಧ್ಯಾತ್ಮಿಕ ನಾಯಕ, ದಿವಂಗತ ಭಗವಾನ್ ಶ್ರೀ ರಜನೀಶರ ಹಿಂಬಾಲಕರು ಆರೆಗಾನ್ನಲ್ಲಿ ಒಂದು ಸಮಾಜವನ್ನು ಸ್ಥಾಪಿಸಿದರೂ, ತಮ್ಮ ನೆರೆಹೊರೆಯವರ ನೈತಿಕ ಸಂವೇದನಾಶೀಲತೆಯನ್ನು ನೋಯಿಸಿದರು. ಅವರ ನಾಯಕನ ಶ್ರೀಮಂತಿಕೆ ಮತ್ತು ಅವರು ಆಚರಿಸುತ್ತಿದ್ದ ಲೈಂಗಿಕ ಪ್ರಯೋಗವು, “ಒಂದು ಸುಂದರ ಹಸಿರು ಪ್ರದೇಶ”ವನ್ನು ತಾವು ಸ್ಥಾಪಿಸಿದ್ದೇವೆಂಬ ವಾದವನ್ನು ಶಿಥಿಲಗೊಳಿಸಿತು.
ಪ್ರಮೋದವನದ ನಿರೀಕ್ಷೆಗಳುಳ್ಳ ಜನರು ನಾಯಕರಾಗಿರುವ ಅನೇಕ ಕುಪಂಥಗಳು, ತಮ್ಮ ಹಿಂಬಾಲಕರು, ಕೆಲವು ಬಾರಿ ಹಿಂಸಾತ್ಮಕ ಮುಖಾಬಿಲೆಗಳಲ್ಲಿ ಅಂತ್ಯಗೊಳ್ಳುವ ವಿಚಿತ್ರ ಸಂಸ್ಕಾರಗಳನ್ನು ಆಚರಿಸಬೇಕೆಂದು ಕೇಳಿಕೊಳ್ಳುತ್ತವೆ. ವಾರ್ತಾಪತ್ರ ಅಂಕಣಕಾರ ಈಅನ್ ಬ್ರೋಡೀ ವಿವರಿಸುವುದು: “ತಾವು ನಿರ್ವಾತ ಸ್ಥಳದಲ್ಲಿ ಜೀವಿಸುತ್ತಿದ್ದೇವೆಂದೆಣಿಸುವವರಿಗೆ ಅಥವಾ ವಾಸ್ತವವಾದ ಲೋಕದ ಒತ್ತಡಗಳನ್ನು ನಿಭಾಯಿಸಸಾಧ್ಯವಿಲ್ಲದವರಿಗೆ ಕುಪಂಥಗಳು ಒಂದು ಆಶ್ರಯಸ್ಥಾನವನ್ನೂ ವಿನ್ಯಾಸಿತ ಸಮಾಜವನ್ನು ನೀಡುತ್ತವೆ.” ಆದರೂ, ಅವರ ಮಾತುಗಳು, ಅನೇಕ ಜನರು ಒಂದು ಪ್ರಮೋದವನದಲ್ಲಿ ಜೀವಿಸಲು ತುಂಬ ಇಷ್ಟಪಡುವರೆಂಬ ನಿಜತ್ವಕ್ಕೆ ಸಾಕ್ಷಿಕೊಡುತ್ತವೆ.
ಕ್ಲೇಶಮುಕ್ತ ಪ್ರಮೋದವನ
ಕ್ಲೇಶಗಳ ಪಟ್ಟಿ ಅಂತ್ಯರಹಿತವಾಗಿ ಕಾಣುತ್ತದೆ: ಮಾಲಿನ್ಯ, ಪಾತಕ, ಅಮಲೌಷಧದ ದುರುಪಯೋಗ, ವಿಪರೀತ ಜನನಿಬಿಡತೆ, ಕುಲಸಂಬಂಧವಾದ ಕಲಹ, ರಾಜಕೀಯ ಉತ್ಪ್ಲವನ ಮತ್ತು ಸರ್ವ ಮಾನವರಿಗೆ ಸಾಮಾನ್ಯವಾಗಿರುವ ಕ್ಲೇಶಗಳಾದ ರೋಗ ಮತ್ತು ಮರಣ. ಹಾಗಾದರೆ ಅಂತ್ಯ ತೀರ್ಮಾನವು ಏನಾಗಿರಬೇಕೆಂದರೆ, ಈ ಗ್ರಹದಲ್ಲೆಲ್ಲಿಯೂ ಪೂರ್ತಿಯಾಗಿ ಕ್ಲೇಶಮುಕ್ತ ಪ್ರಮೋದವನವೊಂದಿರುವುದಿಲ್ಲ. ಬರ್ನರ್ಡ್ ಲೆವೀನ್ ಒಪ್ಪಿಕೊಳ್ಳುವಂತೆ, “ಮಾನವಕುಲದ ದಾಖಲೆಯಲ್ಲಿ ಕೆಟ್ಟ ಹೆಸರೊಂದಿದೆ ಮತ್ತು ಮಾನವಕುಲದ ಆರಂಭದಿಂದ ಅದು ಅಲ್ಲಿತ್ತೆಂದು ಕಾಣುತ್ತದೆ. ಕೇವಲ ಕೆಲವೇ ಇತರ ಮಾನವರಿಗಿಂತ ಹೆಚ್ಚು ಮಂದಿಯೊಂದಿಗೆ ನಿಕಟವಾಗಿ ಸಂತೋಷದಿಂದ ಜೀವಿಸಲು ಇರುವ ಅಸಾಮರ್ಥ್ಯದ ರೂಪವನ್ನು ಅದು ತಾಳುತ್ತದೆ.”
ಆದರೂ, ನಿಜವಾಗಿಯೂ ಕ್ಲೇಶಮುಕ್ತವಾಗಿರುವ ಭೌಗೋಳಿಕ ಪ್ರಮೋದವನವೊಂದಿರುವುದು. ಅದರ ಕಾಲಾವಧಿಯ ಖಾತರಿಯು ಒಂದು ಮಾನವಾತೀತ ಶಕ್ತಿಯಿಂದ ಕೊಡಲ್ಪಡುತ್ತದೆ. ಹೌದು, 50 ಲಕ್ಷಗಳಿಗೂ ಹೆಚ್ಚಿನ ಜನರು ಈಗಲೂ ಆ ಗುರಿಯತ್ತ ಕಾರ್ಯನಡೆಸುತ್ತಿದ್ದಾರೆ ಮತ್ತು ಅವರು ಈಗಾಗಲೇ ತಮ್ಮೊಳಗೆ ಒಂದು ಅಮೂಲ್ಯವಾದ ಐಕ್ಯವನ್ನೂ ಸಾಪೇಕ್ಷವಾಗಿ ಕ್ಲೇಶಮುಕ್ತವಾದ ಪರಿಸರವನ್ನೂ ಅನುಭವಿಸುತ್ತಿದ್ದಾರೆ. ನೀವು ಅವರನ್ನು ಎಲ್ಲಿ ಕಂಡುಕೊಳ್ಳಬಲ್ಲಿರಿ? ಅವರು ಈಗ ಅನುಭವಿಸುತ್ತಿರುವ ಅದೇ ನಿರೀಕ್ಷೆಯಲ್ಲಿಯೂ ಪ್ರಯೋಜನಗಳಲ್ಲಿಯೂ ನೀವು ಹೇಗೆ ಪಾಲಿಗರಾಗಬಲ್ಲಿರಿ? ಮತ್ತು ಬರುತ್ತಿರುವ ಆ ಪ್ರಮೋದವನವು ಎಷ್ಟು ಕಾಲ ಬಾಳುವುದು?
[ಪುಟ 7 ರಲ್ಲಿರುವ ಚೌಕ]
ಪ್ರಮೋದವನ ಸಮಾಜ ಪ್ರಯೋಗಗಳು
ಆದಿ 19ನೆಯ ಶತಮಾನದಲ್ಲಿ, ಫ್ರೆಂಚ್ ಸಮಾಜವಾದಿ, ಏಟ್ಯೆನ್ ಕಾಬೆ (1788-1856) ಮತ್ತು 280 ಮಂದಿ ಒಡನಾಡಿಗಳು, ಅವನ ಆದರ್ಶಗಳ ಮೇಲೆ ಆಧಾರಿಸಿ, ಇಲ್ಲಿನೊಯಿಯ ನಾವೂನಲ್ಲಿ ಒಂದು ಸಾಮುದಾಯಿಕ ವಸತಿಯನ್ನು ಸ್ಥಾಪಿಸಿದರು. ಆದರೆ ಎಂಟು ವರ್ಷಗಳೊಳಗೆ ಆ ಸಮುದಾಯದಲ್ಲಿ ಎಂತಹ ವೈಮನಸ್ಯ ಹುಟ್ಟಿತೆಂದರೆ, ಐಅವ ಮತ್ತು ಕ್ಯಾಲಿಫಾರ್ನಿಯದಲ್ಲಿನ ಅದೇ ರೀತಿಯ ಗುಂಪುಗಳ ಹಾಗೆ, ಅದು ಬೇಗನೆ ಒಡೆದುಹೋಯಿತು.
ಇನ್ನೊಬ್ಬ ಫ್ರೆಂಚ್ ವ್ಯಕ್ತಿಯಾದ ಶಾರ್ಲ್ ಫುರೀಏ (1772-1837), ತನ್ನ ಎಲ್ಲ ಸದಸ್ಯರಿಗೆ ಬದಲಾಗುವ ಪಾತ್ರಗಳಿರುವ ಒಂದು ಸಹಕಾರಿ ವ್ಯಾವಸಾಯಿಕ ಸಮಾಜದ ಕಲ್ಪನೆಗಳನ್ನು ವಿಕಸಿಸಿದನು. ಇಡೀ ಗುಂಪಿನ ಯಶಸ್ಸಿನ ಮೇಲೆ ಆಧಾರಿತ ಸಂಭಾವನೆಯನ್ನು ಪ್ರತಿಯೊಬ್ಬನು ಪಡೆಯಬೇಕಾಗಿತ್ತು. ಆದರೆ ಈ ವಿಚಾರಗಳ ಮೇಲೆ ಆಧಾರಿಸಿದ ಫ್ರಾನ್ಸ್ ಮತ್ತು ಅಮೆರಿಕಗಳಲ್ಲಿ ಸ್ಥಾಪಿಸಲ್ಪಟ್ಟ ಸಮಾಜಗಳು ಅಲ್ಪಕಾಲಿಕವಾಗಿ ಪರಿಣಮಿಸಿದವು.
ಸುಮಾರು ಅದೇ ಸಮಯದಲ್ಲಿ, ವೇಲ್ಸ್ನ ಸಮಾಜ ಸುಧಾರಕ ರಾಬರ್ಟ್ ಓಅನ್ (1771-1858), ಸಹಕಾರಿ ಗ್ರಾಮಗಳನ್ನು ಪ್ರಸ್ತಾಪಿಸಿದನು. ಅಲ್ಲಿ ನೂರಾರು ಜನರು ಸಾಮುದಾಯಿಕ ಅಡುಗೆಮನೆ ಮತ್ತು ಭೋಜನಶಾಲೆಯುಳ್ಳವರಾಗಿ ಒಟ್ಟುಗೂಡಿ ಜೀವಿಸಲಿದ್ದರು. ಪ್ರತಿ ಕುಟುಂಬವು ತನ್ನ ಸ್ವಂತ ವಸತಿಗಳಲ್ಲಿ ಜೀವಿಸಿ, ಮಕ್ಕಳು ಮೂರು ವರ್ಷ ಪ್ರಾಯದವರಾಗುವ ತನಕ ಅವರನ್ನು ಪರಾಮರಿಸಲಿತ್ತು. ಆ ಬಳಿಕ ಅವರ ಪರಾಮರಿಕೆಯನ್ನು ಇಡೀ ಸಮಾಜವು ವಹಿಸಬೇಕಾಗಿತ್ತು. ಆದರೆ ಓಅನ್ನ ಪ್ರಯೋಗಗಳು ವಿಫಲಗೊಂಡು, ಅವನು ತನ್ನ ಸ್ವಂತ ಸಂಪತ್ತಿನಲ್ಲಿ ಹೆಚ್ಚನ್ನು ಕಳೆದುಕೊಂಡನು.
ಜಾನ್ ನಾಯಸ್ (1811-1886), ದ ನ್ಯೂ ಎನ್ಸೈಕ್ಲೊಪೀಡಿಯ ಬ್ರಿಟ್ಯಾನಿಕ ಯಾವುದನ್ನು, “ಅಮೆರಿಕದಲ್ಲಿ ಅಸಾಧ್ಯಾದರ್ಶದ ಸಾಮಾಜಿಕ ಸಮುದಾಯಗಳಲ್ಲಿ ಅತಿ ಯಶಸ್ವಿಯಾದುದು” ಎಂದು ಕರೆಯಿತೊ ಅದರ ಸ್ಥಾಪಕನಾದನು. ಅವನ ಹಿಂಬಾಲಕರು ಏಕಪತ್ನೀತ್ವ ವಿವಾಹಗಳನ್ನು ತ್ಯಜಿಸಿ, ಎಲ್ಲರ ಮಧ್ಯೆ ಕೇವಲ ಪರಸ್ಪರ ಸಮ್ಮತಿಯಿಂದ ಲೈಂಗಿಕ ಸಂಬಂಧಗಳನ್ನು ಅನುಮತಿಸಿದಾಗ, ನಾಯಸ್ನನ್ನು ವ್ಯಭಿಚಾರದ ಕಾರಣ ದಸ್ತಗಿರಿಮಾಡಲಾಯಿತು.
ಮಧ್ಯ ಅಮೆರಿಕದಲ್ಲಿ ಒಂದು ರೀತಿಯ “ಬಂಡವಾಳಶಾಹಿ ಅಸಾಧ್ಯಾದರ್ಶ”ವಾಗಿರುವ ಲ್ಯಾಸೇ ಫಾರ್ ಸಿಟಿ, ಅಂತಹ ಒಂದು ಅಸಾಧ್ಯಾದರ್ಶ ಸಮಾಜವನ್ನು ಸೃಷ್ಟಿಸುವರೆ ಮಾಡಿರುವ ಇತ್ತೀಚೆಗಿನ ಪ್ರಯತ್ನವಾಗಿದೆ ಎಂದು, ಲಂಡನ್ನ ದ ಸಂಡೇ ಟೈಮ್ಸ್ ವರದಿಮಾಡುತ್ತದೆ. ಆ ಯೋಜನೆಯು ಬಂಡವಾಳ ಹೂಡುವವರಿಗಾಗಿ ಹುಡುಕಿತು. “21ನೆಯ ಶತಮಾನದ ಅದ್ಭುತ ನಗರ”ದಲ್ಲಿ ಜೀವಿಸುವ ಪ್ರತೀಕ್ಷೆಯಿಂದ ಸೆಳೆಯಲ್ಪಟ್ಟು, ಪ್ರಮೋದವನಾನ್ವೇಷಕರು, 5,000 ಡಾಲರುಗಳನ್ನು ಕಳುಹಿಸಿ, ಒಂದು ರೀತಿಯ ಪಿರಮಿಡ್ ಮಾರುವಿಕೆಯನ್ನು ಸೇರುವಂತೆ, ಅಂದರೆ ಸದೃಶಮನಸ್ಕರನ್ನು ಹುಡುಕಿ, ಸರದಿಯಾಗಿ, ಅವರು ತಮ್ಮ ಹಣ ಹೂಡುವಿಕೆಯನ್ನು ಮಾಡುವಂತೆ ಆಮಂತ್ರಿಸಲ್ಪಟ್ಟರು. ಈ ಹಣದ ಮೊತ್ತವು, ಯೋಜನೆಯನ್ನು ವೀಕ್ಷಿಸಲು ಒಂದು ಏರ್ಲೈನ್ ಟಿಕೆಟನ್ನು ಮಾತ್ರ ಕೊಳ್ಳುತ್ತದೆಂದು ವದಂತಿ. ಅದೂ, “ಒಂದು ದೇಶವು ಎಂದಾದರೂ ಕಟ್ಟಡಕ್ಕೆ ಸ್ಥಳವನ್ನು ಕೊಡುವಂತೆ ನಿರ್ಬಂಧಿಸಲ್ಪಟ್ಟು, ಅಲ್ಲಿ ಒಂದು ಹೊಟೇಲು ಕಟ್ಟಲ್ಪಡುವಲ್ಲಿ” ಮಾತ್ರ, ಎಂದು ವಾರ್ತಾಪತ್ರ ಹೇಳಿತು. ಯಾವುದೇ “ಪ್ರಮೋದವನವು” ಅಲ್ಲಿ ಸ್ಥಾಪಿಸಲ್ಪಡುವ ಯಾವ ವಾಸ್ತವಿಕ ನಿರೀಕ್ಷೆಯೂ ಇಲ್ಲ.
[ಪುಟ 8 ರಲ್ಲಿರುವ ಚಿತ್ರ]
ಅನೇಕ ಪ್ರಮೋದವನಾನ್ವೇಷಕರಿಗೆ ಒಂದು ದ್ವೀಪವು ಮನಸ್ಸಿಗೆ ಹಿಡಿಸುವ ಸ್ಥಳವಾಗಿದೆ. ಆದರೆ ಇಂದು ಪಾತಕವು ಅತ್ಯಂತ ಪ್ರಶಾಂತವಾದ ಪ್ರದೇಶಗಳನ್ನೂ ಕುಂದಿಸುತ್ತದೆ