ಡೌನ್ ಅಂಡರ್‌ನಲ್ಲಿನ ಜೀವನ ಭಿನ್ನ
ಆಸ್ಟ್ರೇಲಿಯದ ಎಚ್ಚರ! ಸುದ್ದಿಗಾರರಿಂದ
“ಡೌನ್ ಅಂಡರ್” (ಕೆಳಗಡೆ) ಎಂಬುದು ಇತ್ತೀಚಿನ ವರ್ಷಗಳಲ್ಲಿ ಅನೇಕರಿಗೆ ಜ್ಞಾತವಾಗಿರುವ ಒಂದು ಇಂಗ್ಲಿಷ್ ಅಭಿವ್ಯಕ್ತಿ. ಆದರೆ ಯಾವುದರ ಕೆಳಗಡೆ? ಭೂಮಧ್ಯರೇಖೆಯ ಕೆಳಗಡೆ ಅಥವಾ ಅಡಿಯಲ್ಲಿರುವ ದೇಶಗಳಿಗೆ ಅದು ಸೂಚಿಸುತ್ತದೆ. ಪಾರಿಭಾಷಿಕ ಅರ್ಥದಲ್ಲಿ, ದಕ್ಷಿಣ ಖಗೋಳಾರ್ಧದ ಎಲ್ಲ ದೇಶಗಳನ್ನು “ಡೌನ್ ಅಂಡರ್” ಎಂದು ಕರೆಯಸಾಧ್ಯವಿದೆ. ಆದರೆ ಸಾಮಾನ್ಯವಾಗಿ ಕೇವಲ ಆಸ್ಟ್ರೇಲಿಯ ಮತ್ತು ನ್ಯೂ ಸೀಲೆಂಡ್ ದೇಶಗಳನ್ನು ಹಾಗೆ ಕರೆಯಲಾಗುತ್ತದೆ. ಈ ಲೇಖನವು, ಆಸ್ಟ್ರೇಲಿಯದ ಮೇಲೆ ಕೇಂದ್ರೀಕರಿಸುತ್ತದೆ. ಆ ಹೆಸರು “ದಕ್ಷಿಣ”ದ ಎಂಬ ಅರ್ಥಬರುವ ಔಸ್ಟ್ರಾಲೀಸ್ ಎಂಬ ಲ್ಯಾಟಿನ್ ಪದದಿಂದ ಬರುತ್ತದೆ.
ಆಸ್ಟ್ರೇಲಿಯದಲ್ಲಿನ ಜೀವನವು, ಉತ್ತರಾರ್ಧ ಗೋಳದ ಅನೇಕ ದೇಶಗಳ ಜೀವನಕ್ಕಿಂತ ಭಿನ್ನವಾಗಿದೆ. ಮತ್ತು ಭೌಗೋಳಿಕ ಸ್ಥಾನ ಮಾತ್ರ ಅದನ್ನು ಭಿನ್ನವಾಗಿಸುವುದಿಲ್ಲ. ಭೇಟಿಕಾರರು ಗಮನಿಸುವ ಇನ್ನೂ ಅನೇಕ ವ್ಯತ್ಯಾಸಗಳಿವೆ.
ಯೂರೋಪಿಯನ್ ನೆಲಸುನಾಡು
ಈ ವಿಶಾಲವಾದ, ಸೂರ್ಯಪ್ರಕಾಶದಲ್ಲಿ ನೆನೆದಿರುವ ದೇಶದಲ್ಲಿ, 1788ರಲ್ಲಿ, ಯೂರೋಪಿಯನ್ ನೆಲಸುನಾಡು ಆರಂಭಗೊಂಡಿತು. ಪ್ರಥಮ ಹಡಗು ಪಡೆ ಎಂದು ಪ್ರಸಿದ್ಧವಾಗಿರುವ ಹಾಯಿಹಡಗುಗಳ ಒಂದು ಗುಂಪು ಸಿಡ್ನಿ ಖಾರಿಯೊಳಗೆ ಬಂದು ಮುಟ್ಟಿತು. ಅವುಗಳ ಪ್ರಯಾಣಿಕರು ಹೆಚ್ಚಾಗಿ ಇಂಗ್ಲೆಂಡ್, ಐರ್ಲೆಂಡ್ ಮತ್ತು ಸ್ಕಾಟ್ಲೆಂಡ್‌ನ ಕೈದಿಗಳಾಗಿದ್ದು, ತಮ್ಮೊಂದಿಗೆ ಇಂಗ್ಲಿಷ್ ಭಾಷೆಯನ್ನು ತಂದವರಾದರು. ಮುಂದಿನ 150 ವರುಷಗಳಲ್ಲಿ, ಹೆಚ್ಚಿನ ವಲಸೆಗಾರರು ಬ್ರಿಟಿಷ್ ಮೂಲದವರಾಗಿದ್ದರು.
ಎರಡನೆಯ ಲೋಕ ಯುದ್ಧದ ಅನಂತರ, ವಲಸೆಯ ನಮೂನೆಯಲ್ಲಿ ಬದಲಾವಣೆಯಾಯಿತು. ಇಂದು ವಿಭಿನ್ನ ದೇಶಗಳಿಂದ ಬಂದಿರುವ ಸಾವಿರಾರು ಮಂದಿ “ಹೊಸ ಆಸ್ಟ್ರೇಲಿಯನರು” ಇದ್ದಾರೆ. ಅವರಲ್ಲಿ ಹೆಚ್ಚಿನ ಸಂಖ್ಯೆ ಇಟೆಲಿ ಮತ್ತು ಗ್ರೀಸ್ ದೇಶಗಳವರದ್ದು. ಈ ವಲಸೆಗಾರರು ಆಸ್ಟ್ರೇಲಿಯನ್ ಜೀವನ ರೀತಿಗೆ ವೈವಿಧ್ಯವನ್ನು ಕೊಟ್ಟು, ತಮ್ಮೊಂದಿಗೆ ತಮ್ಮ ಸ್ವಂತ ಭಾಷೆಗಳನ್ನು, ಮತ್ತು ಇಂಗ್ಲಿಷ್ ಭಾಷೆಯ ವಿಶಿಷ್ಟ ಉಚ್ಚಾರಣೆಯನ್ನು ಹಾಗೂ ತಮ್ಮ ಅಡುಗೆ ಕಲೆ ಮತ್ತು ಸಂಸ್ಕೃತಿಗಳನ್ನು ತಂದಿದ್ದಾರೆ.
ಇಲ್ಲಿ ಕೇಳಿಬರುವ ವಿವಿಧ ಉಚ್ಚಾರಣಾ ರೀತಿಗಳಿಗೆ ಇದೇ ಕಾರಣ. ಆದರೆ, ಅನೇಕ ಸಂತತಿಗಳಿಂದ ಇಲ್ಲಿ ವಾಸಿಸಿದ್ದ ಕುಟುಂಬಗಳವರಿಗೂ ವಿಶಿಷ್ಟ ರೀತಿಯ ಇಂಗ್ಲಿಷ್ ಉಚ್ಚಾರಣೆ ಮತ್ತು ಮಾತನಾಡುವ ವಿಧವಿದೆ. ಇಂಗ್ಲಿಷ್ ಸ್ವರಾಕ್ಷರಗಳಾದ ಏ, ಈ, ಐ, ಓ, ಯೂ ಅರ್ಧಸ್ವರದ, ಅನೇಕ ವೇಳೆ ಅಸ್ಪಷ್ಟ ಧ್ವನಿಯ ರೂಪವನ್ನು ತೆಗೆದುಕೊಳ್ಳುತ್ತವೆ. ಇದನ್ನು ನಿಷ್ಕೃಷ್ಟವಾಗಿ ಪ್ರತ್ಯೇಕಿಸಲು ಸಮಯ ಹಿಡಿಯಬಹುದು. ಅಲ್ಲದೆ, ಆಸ್ಟ್ರೇಲಿಯಕ್ಕೆ ವಿಚಿತ್ರವಾದ ಅಭಿವ್ಯಕ್ತಿಗಳಿವೆ. ಉದಾಹರಣೆಗೆ, ಹಗಲಿನ ಅಥವಾ ರಾತ್ರಿಯ ಯಾವುದೇ ಸಮಯವಾಗಿರಲಿ, “ಗುಡ್ ಮಾರ್ನಿಂಗ್,” ಅಥವಾ “ಗುಡ್ ಈವ್ನಿಂಗ್” ಎಂದು ಹೇಳುವ ಬದಲಿಗೆ, ಸ್ವೀಕೃತ ಅಭಿವಂದನೆಯು ಸ್ನೇಹಭಾವದ, “ಗುಡ್ಡೇ, ಮೈಟ್!” ಎಂದಾಗಿದೆ. ಅನೇಕ ವೇಳೆ, ಇದನ್ನನುಸರಿಸಿ ಒಬ್ಬನ ಆರೋಗ್ಯದ ಕುರಿತ ವಿನಯಪೂರ್ವಕವಾದ ಮಾತುಕತೆ ನಡೆದ ಮೇಲೆ, ಭೇಟಿಕಾರನು, “ಹೌ ಯರ್ ಗೋಯಿನ್ ಮೈಟ್, ಆರೈಟ್?” (ಹೇಗಿದ್ದೀ ಸ್ನೇಹಿತ, ಚೆನ್ನಾಗಿದ್ದಿಯಾ?) ಎಂದು ಕೇಳಲ್ಪಡಬಹುದು.
ಜನರು ಕೂಡ ಭಿನ್ನರು
ಈ ಗಡುಸಾದ ದೇಶದಲ್ಲಿ ಬದುಕಿ ಉಳಿಯಲು ಹೊಂದಾಣಿಕೆ ಮತ್ತು ನೈತಿಕ ಬಲ ಅಗತ್ಯವಿತ್ತು. ಅನೇಕ ಆಸ್ಟ್ರೇಲಿಯನರ ಆಶಾವಾದಕ್ಕೆ ಇದು ಕಾರಣವಾಗಿದ್ದಿರಬಹುದು. ಇದು, “ಷೀ’ಲ್ ಬೀ ರೈಟ್, ಮೈಟ್!” ಎಂಬ ವಾಕ್ಸರಣಿಯನ್ನು ಹುಟ್ಟಿಸಿದೆ. ವಿಷಯಗಳು ನಿರಾಶಾದಾಯಕವಾಗಿ ಕಂಡುಬರುವಾಗ ಒಬ್ಬನು ಹೆಚ್ಚು ಚಿಂತಿಸಬೇಕೆಂದಿಲ್ಲವೆಂದೂ, ಅಂತಿಮವಾಗಿ ಎಲ್ಲವೂ ಸರಿಯಾಗುವುದೆಂದೂ ಇದು ಸೂಚಿಸುತ್ತದೆ.
ದಿ ಆಸ್ಟ್ರೇಲಿಯನ್ಸ್ ಎಂಬ ಪುಸ್ತಕದ ಮುನ್ನುಡಿ ಗಮನಿಸುವುದು: “ಸರಪಣಿಗಳಿಂದ ತನ್ನ ಜೀವನವನ್ನಾರಂಭಿಸಿದ ಒಂದು ದೇಶ, ಇನ್ನೂರು ವರ್ಷಗಳ ಅನಂತರ, ಚಿಕ್ಕ ರಾಷ್ಟ್ರಗಳ ಮಧ್ಯೆ ಅತ್ಯಂತ ಕ್ರಿಯಾತ್ಮಕವೂ ಸಂಪದ್ಭರಿತವೂ ಆಗಿ ಪರಿಣಮಿಸಿದೆಯಾದರೆ, ಅದು ಕೆಲವು ಆಕರ್ಷಕ ಹಾಗೂ ಬಹುವಿಧದ ವ್ಯಕ್ತಿಗಳನ್ನು ಉತ್ಪಾದಿಸಲೇಬೇಕೆಂಬುದು ನ್ಯಾಯಸಮ್ಮತ. . . . ಇವರು ದಿ ಆಸ್ಟ್ರೇಲಿಯನ್ಸ್ ಎಂಬ ಜನರನ್ನು ಸಂಯೋಜಿಸುತ್ತಾರೆ.”
ಗೆಳೆತನದ ಈ ಗುಣವು ತಮ್ಮೊಳಗೆ ಬಂದು ಸೇರಿದ್ದು, ಕಳೆದ ಎರಡು ಶತಮಾನಗಳಲ್ಲಿ ತಮ್ಮಲ್ಲಿದ್ದ ಬಲವಾದ, ಬದುಕಿ ಉಳಿಯುವ ಸಹಜ ಪ್ರವೃತ್ತಿಯ ಕಾರಣವೇ ಎಂಬುದಾಗಿ ಅನೇಕ ಆಸ್ಟ್ರೇಲಿಯನರು ಭಾವಿಸುತ್ತಾರೆ. Iನೆಯ ಲೋಕ ಯುದ್ಧದಲ್ಲಿ ಆಸ್ಟ್ರೇಲಿಯದ ಸೈನಿಕರ ಪಟ್ಟುಬಿಡದ ಗುಣದ ಕಡೆಗೆ ಗಮನವನ್ನು ಸೆಳೆಯಲು ಅವರು ಇಷ್ಟಪಡುತ್ತಾರೆ. ನ್ಯೂ ಸೀಲೆಂಡಿನ ಶಸ್ತ್ರಸಜ್ಜಿತ ಸೈನ್ಯದವರೊಂದಿಗೆ, ಈ ಗಡುಸಾದ ಸೈನ್ಯದವರು ಆ್ಯನ್‌ಸ್ಯಾಕ್ಸ್ ಎಂದು ಜ್ಞಾತರಾಗಿದ್ದರು. ಇದು ಆಸ್ಟ್ರೇಲಿಯ ಮತ್ತು ನ್ಯೂ ಸೀಲೆಂಡ್‌ನ ಸಂಯೋಜಿತ ಸೈನ್ಯಗಳ ಪ್ರಥಮಾಕ್ಷರಿಯಾಗಿತ್ತು. ಅವರು “ಡಿಗರ್ಸ್” (ತೋಡುಗರು) ಎಂದೂ ಸುಪ್ರಸಿದ್ಧರಾದರು. ಆದರೆ ಇದು ಅವರು ಕಂದಕ ತೋಡುವುದನ್ನು ಸೂಚಿಸಿತೊ, 1800ಗಳಲ್ಲಿ ಜನರು ಗುಂಪುಗುಂಪಾಗಿ ಎಲ್ಲಿಗೆ ಹೋಗಿದ್ದರೊ ಆ ಆಸ್ಟ್ರೇಲಿಯದ ಚಿನ್ನದ ಗಣಿಗಳಲ್ಲಿ ಅಗೆಯುವುದನ್ನು ಸೂಚಿಸಿತೊ ಎಂಬುದು ಅನಿಶ್ಚಯ.
ವಾಹನ ನಡೆಸುವುದು—ದೊಡ್ಡ ವ್ಯತ್ಯಾಸ
ರಸ್ತೆಯ ಬಲಗೈ ಪಕ್ಕದಲ್ಲಿ ವಾಹನಗಳು ಓಡುವ ದೇಶಗಳಿಂದ ಬರುವ ಭೇಟಿಕಾರರು, ಆಸ್ಟ್ರೇಲಿಯದಲ್ಲಿ ವಾಹನ ನಡೆಸುವಿಕೆಯು ಅತಿ ಭಿನ್ನವಾಗಿರುವುದನ್ನು ಕಂಡುಕೊಳ್ಳುತ್ತಾರೆ. ದೇಶದಲ್ಲೆಲ್ಲ ವಾಹನಗಳು ಎಡಗೈ ಪಕ್ಕದಲ್ಲಿ ನಡೆಸಲ್ಪಡುತ್ತವೆ.
ಆದುದರಿಂದ, ಬಲಗೈ ವಾಹನ ನಡೆಸುವಿಕೆ ಸಾಮಾನ್ಯವಾಗಿರುವ ಒಂದು ದೇಶದಿಂದ ನೀವು ಆಸ್ಟ್ರೇಲಿಯಕ್ಕೆ ಬರುವಲ್ಲಿ, ಸಂದಣಿಯಿರುವ ರಸ್ತೆಯಲ್ಲಿ ನೀವಿಡುವ ಪ್ರಥಮ ಹೆಜ್ಜೆಗಳು ಅಪಾಯಕರವಾಗಿ ಪರಿಣಮಿಸಬಲ್ಲವು. ನಿಮಗೆ ರಸ್ತೆ ದಾಟುತ್ತಿರುವಾಗ ಅಭ್ಯಾಸವಾಗಿ ಹೋಗಿರುವ, ‘ಎಡಕ್ಕೆ ನೋಡಿ, ಬಳಿಕ ಬಲಕ್ಕೆ, ಮತ್ತು ಪುನಃ ಎಡಕ್ಕೆ’ ಎಂಬ ಕ್ರಮವು ವಿಪತ್ಕಾರಕವಾಗಿರಬಲ್ಲದು. ಈಗ ನೀವು ದಾಟುವ ಮುಂಚೆ, ‘ಬಲಕ್ಕೆ, ಬಳಿಕ ಎಡಕ್ಕೆ ಮತ್ತು ಪುನಃ ಬಲಕ್ಕೆ’ ನೋಡಬೇಕು. ಶಹಭಾಸ್! ನೀವು ಬೇಗನೆ ಕಲಿಯುತ್ತಿದ್ದೀರಿ. ಅರೆರೇ! ನೀವು ತಪ್ಪಾದ ಕಡೆಯಿಂದ ಕಾರಿನೊಳಗೆ ಹೋಗುತ್ತಿದ್ದೀರಲ್ಲಾ. ಈ ದೇಶದಲ್ಲಿ ಡ್ರೈವರ್ ಬಲಗೈ ಪಕ್ಕದಲ್ಲಿ ಕುಳಿತುಕೊಳ್ಳುತ್ತಾನೆಂಬುದನ್ನು ನೀವು ಮರೆತುಬಿಟ್ಟಿರಾ!
ವಿಭಿನ್ನ ಹವಾಮಾನ ನಮೂನೆಗಳು
ಉತ್ತರಾರ್ಧ ಗೋಳಕ್ಕೆ ಹೋಲಿಸುವಾಗ, ಡೌನ್ ಅಂಡರ್‌ನಲ್ಲಿ ಋತುಗಳು ವಿಪರ್ಯಸ್ತವಾಗುತ್ತವೆ. ಬಿಸಿಯಾದ ಒಣಗಾಳಿ ಉತ್ತರದಿಂದಲೂ ವಾಯುವ್ಯದಿಂದಲೂ ಬರುವಾಗ, ಶೀತ ಬದಲಾವಣೆಗಳೆಲ್ಲ ದಕ್ಷಿಣದಿಂದ ಬರುತ್ತವೆ. ಶೀತಧಾರಿಯಾದ ಉತ್ತರದಿಂದ ಬೀಸುವ ಗಾಳಿಯ ಕುರಿತು ಇಲ್ಲಿ ಹೇಳಲ್ಪಡುವುದೇ ಇಲ್ಲವಾದರೂ ಅತಿ ಶೈತ್ಯದ ದಕ್ಷಿಣ ಚಂಡಮಾರುತ ಮತ್ತು ದಟ್ಟವಾದ ಹಿಮಗಾಳಿಗಳ ಸಾಧ್ಯತೆಯ ಕುರಿತು ಎಚ್ಚರಿಕೆ.
ಆಸ್ಟ್ರೇಲಿಯವು, ಭೂಮಿಯ ಅತಿ ಶುಷ್ಕ ಮತ್ತು ಅತಿ ಬಿಸಿಯಾಗಿರುವ ಭೂಖಂಡವಾಗಿದೆ. ಒಣ ಒಳಪ್ರದೇಶಗಳಲ್ಲಿನ ತಾಪಮಾನಗಳು 30 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚು ಏರುತ್ತವೆ. ದಾಖಲೆಯಾಗಿರುವ ಅತ್ಯುನ್ನತ ತಾಪಮಾನ 53.1 ಡಿಗ್ರಿಗಳು. ಅತಿ ಕಡಮೆ ತಾಪಮಾನ ಸ್ನೋಯೀ ಪರ್ವತ ಪ್ರದೇಶದಲ್ಲಿರುವ ಆಸ್ಟ್ರೇಲಿಯದ ಅತ್ಯುನ್ನತ ಶಿಖರವಾದ ಮೌಂಟ್ ಕಾಸೀಅಸ್ಕೊ ಬಳಿ ದಾಖಲೆಯಾಗಿರುವ -22 ಡಿಗ್ರಿಗಳು.
ಉತ್ತರಾರ್ಧ ಗೋಳದ ಮಟ್ಟಗಳಂತೆ, ಇಲ್ಲಿ ತೀರ ಚಳಿಯಿಲ್ಲ. ಉದಾಹರಣೆಗೆ, ವಿಕ್ಟೋರಿಯ ರಾಜ್ಯದ ರಾಜಧಾನಿಯಾದ ಮೆಲ್ಬರ್ನ್ ಅನ್ನು ತೆಗೆದುಕೊಳ್ಳಿ. ಈ ನಗರವು ಆಸ್ಟ್ರೇಲಿಯದ ತೀರ ದಕ್ಷಿಣದಲ್ಲಿದೆಯಾದರೂ, ಜುಲೈ ತಿಂಗಳ ದಿನದ ಸರಾಸರಿ ತಾಪಮಾನ ಅಲ್ಲಿ 6ರಿಂದ 13 ಡಿಗ್ರಿ ಸೆಲ್ಸಿಯಸ್ ಆಗಿರುತ್ತದೆ. ಇದನ್ನು ಚೈನಾದ ಬೇಜಿಂಗ್‌ನಲ್ಲಿನ ಜನವರಿಯ ದಿನದ ಸರಾಸರಿಯಾದ -10ರಿಂದ +1 ಡಿಗ್ರಿಗಳಿಗೂ ಅಥವಾ ನ್ಯೂ ಯಾರ್ಕ್‌ನ -4ರಿಂದ +3 ಡಿಗ್ರಿಗಳಿಗೂ ಹೋಲಿಸಿ. ಈ ಎರಡು ನಗರಗಳೂ ಭೂಮಧ್ಯರೇಖೆಯಿಂದ ಮೆಲ್ಬರ್ನ್‌ನಷ್ಟೇ ದೂರದಲ್ಲಿವೆ. ಹಾಗಾದರೆ ಡೌನ್ ಅಂಡರ್‌ನಲ್ಲಿ, ವಿಶೇಷವಾಗಿ ಭೂಮಿಯ ಅತಿ ಶೈತ್ಯವಿರುವ ಸ್ಥಳವಾದ ದಕ್ಷಿಣ ಧ್ರುವಕ್ಕೆ ಸಮೀಪವಿರುವಾಗ, ಅದು ಬೆಚ್ಚಗಿರುವುದೇಕೆ?
ಉತ್ತರಾರ್ಧ ಗೋಳವನ್ನು ಭೂಪ್ರದೇಶ ಆವರಿಸಿರುತ್ತದೆ, ಆದರೆ ದಕ್ಷಿಣಾರ್ಧ ಗೋಳವನ್ನು ಸಾಗರಗಳು ಆವರಿಸಿವೆ. ಇದೇ ವ್ಯತ್ಯಾಸ. ಆಸ್ಟ್ರೇಲಿಯ ಮತ್ತು ನ್ಯೂ ಸೀಲೆಂಡ್ ದೇಶಗಳನ್ನು ಸಾವಿರಾರು ಕಿಲೊಮೀಟರುಗಳಷ್ಟು ಸಾಗರವು ಆವರಿಸಿರುವುದರಿಂದ, ಇದು ತೀರ ಚಳಿಯಿರುವ ದಕ್ಷಿಣ ಧ್ರುವದ ಗಾಳಿರಾಶಿಯ ಎದುರು ಹೆಚ್ಚು ಬೆಚ್ಚಗಿನ ಗಾಳಿಯ ಪ್ರತಿರೋಧಕವನ್ನು ನಿರ್ಮಿಸಿ, ಹೀಗೆ ಹವಾಮಾನವನ್ನು ಬೆಚ್ಚಗಾಗಿ ಇಡುತ್ತದೆ.
ಆಸ್ಟ್ರೇಲಿಯ ಭೂಖಂಡವು ದೊಡ್ಡ ಗಾತ್ರದ್ದಾಗಿರುವುದರಿಂದ, ವಿವಿಧ ಭಾಗಗಳ ಹವಾಮಾನದಲ್ಲಿ ಸ್ಪಷ್ಟವಾದ ವ್ಯತ್ಯಾಸಗಳಿವೆ. ಹೆಚ್ಚು ದಕ್ಷಿಣಕ್ಕಿರುವ ರಾಜ್ಯಗಳಲ್ಲಿ ಋತುಗಳಲ್ಲಿ ಭಿನ್ನತೆಗಳಿವೆ. ಶುಭ್ರವಾದ, ತಣ್ಣಗಿನ ಅಥವಾ ಹಿಮಕವಿದ ರಾತ್ರಿಗಳಿರುವ ಚಳಿಗಾಲಗಳನ್ನು, ಸಾಮಾನ್ಯವಾಗಿ, ಹಿತಕರವಾದ ಬೆಚ್ಚಗಿನ ದಿನಗಳು ಅನುಸರಿಸಿ ಬರುತ್ತವೆ. ಈ ಹಿತಕರವಾದ ಚಳಿಗಾಲದ ದಿನಗಳು ಅನೇಕ ವೇಳೆ, ಉತ್ತರಾರ್ಧ ಗೋಳದ ಅನೇಕ ದೇಶಗಳ ಬೇಸಗೆಯ ತಾಪಮಾನವನ್ನು ಹೋಲುತ್ತವೆ. ಆಸ್ಟ್ರೇಲಿಯದ ಉತ್ತರ ರಾಜ್ಯಗಳಲ್ಲಾದರೋ, ವರ್ಷವು ಕೇವಲ ಎರಡು ಋತುಗಳಾಗಿ ವಿಭಾಗಿಸಲ್ಪಡುತ್ತದೆ—ದೀರ್ಘವಾಗಿರುವ ಶುಷ್ಕ ಋತು ಮತ್ತು ಮಳೆಗಾಲದ ಆರ್ದ್ರತೆಯಿರುವ ಋತು. ನಾರ್ದರ್ನ್ ಟೆರಿಟೊರಿಯ ರಾಜಧಾನಿಯಾದ ಡಾರ್ವಿನ್‌ನಲ್ಲಿ, ತಾಪಮಾನವು ಸುಮಾರು 32 ಡಿಗ್ರಿ ಸೆಲ್ಸಿಯಸ್ ಆಗಿರುತ್ತದೆ.
ಬೇರೆ ವ್ಯತ್ಯಾಸಗಳು
ಭೂಖಂಡದ ಹೆಚ್ಚಿನ ಪ್ರದೇಶದಲ್ಲಿ ಹೆಚ್ಚಾಗಿ ಬೆಚ್ಚಗಿನ ಹವಾಮಾನವಿರುವುದರಿಂದ, ಆಸ್ಟ್ರೇಲಿಯದ ಜನರು ಬಹುಮಟ್ಟಿಗೆ ಮಾಮೂಲು ಬಟ್ಟೆಯನ್ನು ಧರಿಸುವವರಾಗಿದ್ದಾರೆ. ಆದರೆ ಚಾಚುಏಣಿರುವ ಟೋಪಿಯನ್ನು ಧರಿಸುವುದು ಪ್ರಾಮುಖ್ಯ. ಇಲ್ಲಿ, ಸೂರ್ಯನ ಬೆಳಕಿಗೆ ಒಡ್ಡಲ್ಪಡುವಿಕೆಯು ಹೆಚ್ಚಾಗಿರುವುದರಿಂದ, ಹೆಚ್ಚು ಸಮಶೀತೋಷ್ಣವಿರುವ ದೇಶಗಳಿಗಿಂತ ಚರ್ಮದ ಕ್ಯಾನ್ಸರ್‌ನ ಸಂಭವಗಳು ಹೆಚ್ಚಿವೆ.
ಆಸ್ಟ್ರೇಲಿಯದಲ್ಲಿ ಇನ್ನೂ, ವಿಶಾಲವಾದ ಬಯಲುಗಳು ತುಂಬ ಇರುವುದರಿಂದ, ಅನೇಕ ಪಿಕ್ನಿಕ್ ಪ್ರದೇಶಗಳಲ್ಲಿ ಬಾರ್ಬಿಕ್ಯೂ ಬಯಲೂಟ ಸೌಕರ್ಯಗಳು ಏರ್ಪಡಿಸಲ್ಪಡುತ್ತವೆ. ಮಾಂಸವು ತುಲನಾತ್ಮಕವಾಗಿ ಅಗ್ಗವಾಗಿರುವುದಿಂದ, ಸಾಸೆಜ್ ಮತ್ತು ಸ್ಟೇಕ್‌ಗಳು ಬಾರ್ಬಿಕ್ಯೂವಿನ ಸಾಮಾನ್ಯ ಆಹಾರವಾಗಿವೆ. ಆದರೆ ಆ ಬಾರ್ಬಿಕ್ಯೂ ಬಯಲೂಟದ ಸುತ್ತ ನಿಂತಿರುವ ಆ ಜನರು ರಹಸ್ಯ ಕೈ ಸಂಕೇತಗಳನ್ನು ಕೊಡುತ್ತಿದ್ದಾರೊ? ಇಲ್ಲ, ಅವರು ನೊಣಗಳನ್ನು ಓಡಿಸಲಿಕ್ಕಾಗಿ ತಮ್ಮ ಖಾಲಿ ಕೈಯನ್ನು ಆಡಿಸುತ್ತ ಇದ್ದಾರೆ! ನೊಣಗಳೂ ಸೊಳ್ಳೆಗಳೂ, ವಿಶೇಷವಾಗಿ ಹೆಚ್ಚು ಬೆಚ್ಚಗಿನ ಹವಾಮಾನದಲ್ಲಿ, ಬಯಲೂಟಕ್ಕೆ ಒಂದು ದೊಡ್ಡ ಸಮಸ್ಯೆಯನ್ನು ಒಡ್ಡುತ್ತವೆ.
ಹೀಗೆ, ಡೌನ್ ಅಂಡರ್‌ನಲ್ಲಿ ವಾಸಿಸುವುದೆಂದರೆ ನೊಣ ಮತ್ತು ಸೊಳ್ಳೆಗಳೊಂದಿಗೆ ವಾಸಿಸಲು ಕಲಿಯುವುದು ಎಂದರ್ಥ. ಹೆಚ್ಚಿನ ಮನೆಗಳಿಗೆ ಮುಂದೆಯೂ ಹಿಂದೆಯೂ ಪರದೆಯ ಬಾಗಿಲುಗಳಿವೆ. ಆದಿ ದಿನಗಳಲ್ಲಿ ಜನರು ನೊಣ ನಿರೋಧಕವಾಗಿ ಏಣಿನಿಂದ ತೂಗಾಡುತ್ತಿದ್ದ ಅನೇಕ ಬಿರಡೆಗಳಿದ್ದ ಟೋಪಿಗಳನ್ನು ಧರಿಸುತ್ತಿದ್ದರು. ಆದರೆ ಕೀಟ ವಿಕರ್ಷಕಗಳು ಬಂದಂದಿನಿಂದ ಅಂತಹ ಟೋಪಿಗಳು ಈಗ ಹೆಚ್ಚಾಗಿ ಕಾಣಸಿಗುವುದಿಲ್ಲ.
ಇನ್ನೊಂದು ವ್ಯತ್ಯಾಸವು, ಶೋಭಾಯಮಾನವಾದ, ವರ್ಣರಂಜಿತವಾದ ಪುಷ್ಪಗಳು ಮತ್ತು ಪುಷ್ಪಬಿಡುವ ಕುರುಚಲು ಗಿಡಗಳು ಮತ್ತು ಮರಗಳ ಸಂಬಂಧದಲ್ಲಿದೆ. ಉತ್ತರಾರ್ಧ ಗೋಳದಲ್ಲಿ ಸಾಮಾನ್ಯವಾಗಿ ಗಮನಿಸಲ್ಪಟ್ಟ ಬಲವಾದ ಸುವಾಸನೆ ಇಲ್ಲಿಲ್ಲ. ಪುಷ್ಪಗಳ ಸುಗಂಧದ ಪೂರ್ಣ ಪರಿಣಾಮವನ್ನು ಪಡೆಯಬೇಕಾದರೆ, ಇಲ್ಲಿ ತೋಟಪ್ರಿಯನು ಹೂವುಗಳನ್ನು ಮೂಸಿಯೇ ನೋಡಬೇಕು. ಆಸ್ಟ್ರೇಲಿಯದ ಎಲ್ಲ ಪುಷ್ಪಗಳ ವಿಷಯದಲ್ಲಿ ಇದು ಸತ್ಯವಲ್ಲವೆಂಬುದು ನಿಶ್ಚಯ. ಉದಾಹರಣೆಗೆ, ಡ್ಯಾಫ್ನಿ ಮತ್ತು ಮಲ್ಲಿಗೆಯ ಗಿಡಗಳು ನಿಮ್ಮ ಮೂಗಿಗೆ ಮನೋಹರವಾದ ಸತ್ಕಾರವನ್ನು ನೀಡುತ್ತವೆ. ಆದರೆ ಸಾಮಾನ್ಯವಾಗಿ, ಇಲ್ಲಿಯ ಹೂವುಗಳ ಸುವಾಸನೆ ಹೆಚ್ಚು ಚಳಿಯಿರುವ ಹವಾಮಾನದ ಹೂವುಗಳಿಗಿಂತ ಕಡಮೆ.
ವ್ಯಾಪಕವಾದ ವಿಸ್ತಾರ ಪ್ರದೇಶಗಳು
ಡೌನ್ ಅಂಡರ್‌ನಲ್ಲಿ ಜೀವಿಸುವುದರಲ್ಲಿ ನಿಜವಾಗಿಯೂ ಭಿನ್ನವಾಗಿರುವ ಒಂದು ಅಂಶವು, ವಿಸ್ತಾರ ಪ್ರದೇಶವಾಗಿದೆ. ಯಾವುದು ಹತ್ತಿರ, ಯಾವುದು ದೂರ ಎಂಬ ಭಾವನೆಯು, ಅನೇಕ ಉತ್ತರದ ದೇಶಗಳಿಗಿಂತ ಇಲ್ಲಿ ಭಿನ್ನವಾಗಿದೆ. ಕೆಲವು ಪಟ್ಟಣಗಳ ಮಧ್ಯೆ ಇರುವ ಅಂತರಗಳು ಎಷ್ಟು ಹೆಚ್ಚೆಂದರೆ, ಇನ್ನೊಂದು ಪಟ್ಟಣವನ್ನು ನೋಡುವ ಮೊದಲು ಒಬ್ಬನು ಅನೇಕ ತಾಸುಗಳ ಪ್ರಯಾಣವನ್ನು ಮಾಡಬೇಕಾಗುತ್ತದೆ. ವಿಶೇಷವಾಗಿ ಯಾವುದು ಅಕ್ಕರೆಯಿಂದ ಔಟ್‌ಬ್ಯಾಕ್ ಎಂದು ಜ್ಞಾತವಾಗಿದೆಯೊ ಅಲ್ಲಿ ಇದು ಸತ್ಯವಾಗಿದೆ. ಇಲ್ಲಿ ವಿಸ್ತಾರ ಪ್ರದೇಶವೂ ಪ್ರಶಾಂತತೆಯೂ ಅಪಾರವಾಗಿದೆ, ಮತ್ತು ಭೇಟಿಗಾರನೊಬ್ಬನು ಚೈತನ್ಯದಾಯಕವಾದ, ನಿರ್ಮಲ ಗಾಳಿಯನ್ನು ತನ್ನ ಶ್ವಾಸಕೋಶಗಳಲ್ಲಿ ತುಂಬಿಸಿಕೊಳ್ಳಬಲ್ಲನು. ಹತ್ತಿರದಲ್ಲಿ, ಸಾಮಾನ್ಯವಾಗಿ ಗಮ್ (ಗೋಂದು) ಮರವೆಂದು ಕರೆಯಲ್ಪಡುವ ಯೂಕಲಿಪ್ಟಸ್ ಮರವಿದೆ. ಗಮ್ ಮರಗಳು ಮತ್ತು ವಾಟ್‌ಲ್ ಅಥವಾ ಅಕೇಷಿಯ ಮರಗಳು ಒಳನಾಡಿನ ಭೂದೃಶ್ಯದಲ್ಲಿ ಎದ್ದುತೋರುತ್ತವೆ.
ಸಂಜೆಯು ಸಮೀಪಿಸುವಾಗ, ಒಂದು ಉಜ್ವಲ ಸೂರ್ಯಾಸ್ತ ನಿಮ್ಮ ಕಣ್ಣುಗಳನ್ನು ಆನಂದಗೊಳಿಸುತ್ತದೆ. ಆದರೆ ಕತ್ತಲೆಯು ಬೆರಗುಗೊಳಿಸುವ ಅನಿರೀಕ್ಷಿತತೆಯಿಂದ ಬಂದುಬಿಡುತ್ತದೆ, ಏಕೆಂದರೆ ಡೌನ್ ಅಂಡರ್‌ನಲ್ಲಿ ಸಂಧ್ಯಾ ನಸುಬೆಳಕು ಇರುವುದು ತೀರ ಕಡಮೆ. ಬೇಗನೆ, ಉಜ್ವಲವಾಗಿ ಶುಭ್ರವಾಗಿರುವ ದಕ್ಷಿಣದ ರಾತ್ರಿ ಆಕಾಶವು ತನ್ನ ಪ್ರಸಿದ್ಧವಾದ ಸದರ್ನ್ ಕ್ರಾಸ್ ಎಂದು ಕರೆಯಲ್ಪಡುವ ರಚನೆಯ ದಕ್ಷಿಣ ನಕ್ಷತ್ರಪುಂಜ ಸೇರಿರುವ ತಾರಾ ಸಮೂಹವನ್ನು ಹೊರಗೆಡಹುತ್ತದೆ. ವನ್ಯಜೀವನ ತನ್ನ ವಿಶ್ರಾಂತಿಯನ್ನು ಆರಂಭಿಸುವಾಗ, ಗಮ್ ಮರಗಳು ಆಕಾಶಕ್ಕೆದುರಾಗಿ ರೇಖಿಸಲ್ಪಟ್ಟಿರುತ್ತವೆ. ಮತ್ತು ವ್ಯಾಪಕವಾದ ವಿಸ್ತಾರ ಪ್ರದೇಶವನ್ನು ಇನ್ನೂ ಎದ್ದುಕಾಣುವಂತೆ ಮಾಡುತ್ತದೊ ಎಂಬಂತೆ ನಿಶ್ಶಬ್ದತೆ ನಿಮ್ಮನ್ನು ಆವರಿಸುತ್ತದೆ.
ನೀವು ಮಲಗುವ ಚೀಲದೊಳಗೆ ಸೇರಿಕೊಳ್ಳುವ ಮೊದಲು ಜಾಗರೂಕತೆಯಿಂದ ಶಿಬಿರಾಗ್ನಿಯನ್ನು ನಂದಿಸಿರಿ. ಇದು ಅತ್ಯಗತ್ಯ ಏಕೆಂದರೆ ಆಸ್ಟ್ರೇಲಿಯದ ಪೊದೆಗಾಡಿನಲ್ಲಿ ಬೆಂಕಿ ನಿಯಂತ್ರಣ ತಪ್ಪುವಾಗ, ಅದು ಬೇಗನೆ ತನ್ನ ದಾರಿಯಲ್ಲಿರುವ ಯಾವುದನ್ನೂ ಲಕ್ಷಿಸದೆ ಸರ್ವನಾಶವಾಗಿ ಪರಿಣಮಿಸುತ್ತದೆ. ತೀಕ್ಷ್ಣ ಕಾವಿನಿಂದಾಗಿ ಗಮ್ ಮರಗಳ ನೆತ್ತಿಗಳು ಸ್ಫೋಟಗೊಳ್ಳುವುದರಿಂದ, ಬೆಂಕಿ ಗಾಬರಿಗೊಳಿಸುವ ವೇಗದಿಂದ ಹರಡುವಂತಾಗುತ್ತದೆ. ಬಿಸಿ, ಒಣ ಬೇಸಗೆಯ ತಿಂಗಳುಗಳಲ್ಲಿ, ಪೊದೆಗಾಡಿನ ಪ್ರದೇಶದಲ್ಲಿ ವಾಸಿಸುತ್ತಿರುವವರಿಗೆ ಕಾಡ್ಗಿಚ್ಚು ಸತತವಾಗಿ ಭೀತಿಕಾರಕವಾದ ವಿಷಯವಾಗಿದೆ. ಅಗ್ನಿ ನಿಷೇಧಗಳನ್ನು ಮತ್ತು ಬೆಂಕಿ ಹಚ್ಚುವ ವಿಷಯದಲ್ಲಿರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
ಬೇಗನೆ ಅರುಣೋದಯವಾಗಲಾಗಿ, ಹತ್ತಿರದ ಗಮ್ ಮರವೊಂದರಲ್ಲಿ ರಾತ್ರಿಯನ್ನು ಕಳೆದಿರುವ ಕುಕಬರ ಮಿಂಚುಳ್ಳಿಗಳ ಹಿಂಡು ಆನಂದಗಾಯನವನ್ನು ಆರಂಭಿಸುವಾಗ, ಗದ್ದಲಭರಿತವಾದ ಅವುಗಳ ನಗುವಿನ ಶಬ್ದಕ್ಕೆ ನೀವು ಎದ್ದೇಳುತ್ತೀರಿ. ಮಂಕು ಹಿಡಿದವರಾಗಿ, ನೀವು ಡೇರೆಯಿಂದ ಹೊರಗೆ ನೋಡುವಾಗ ಬೇರೆ ಮರಗಳೂ ಸುಂದರವಾದ ವರ್ಣರಂಜಿತ ಪಕ್ಷಿಗಳಿಂದ ತುಂಬಿರುವುದನ್ನು ನೀವು ನೋಡುತ್ತೀರಿ. ಇಷ್ಟರೊಳಗೆ ನೀವು ಅವುಗಳಲ್ಲಿ ಅನೇಕ ಪಕ್ಷಿಗಳನ್ನು ಹಾಗೂ ಕ್ಯಾಂಗರೂ, ಕೋಆಲ, ಈಮ್ಯೂ ಮತ್ತು ವಾಂಬ್ಯಾಟ್ ಸಹ ಸೇರಿರುವ ಇತರ ಪ್ರಾಣಿಗಳನ್ನು ಸಂಧಿಸಿದ್ದಿರಬಹುದು. ನೀವು ಸಂಧಿಸಲು ತವಕಪಡದೆ ಇರುವ ಪ್ರಾಣಿಗಳು, ಹಾವುಗಳು ಮತ್ತು ಜೇಡರ ಹುಳುಗಳು. ಹೌದು, ಲೋಕದಲ್ಲಿರುವ ಅತಿ ವಿಷಮಯ ಹಾವುಗಳಲ್ಲಿ ಮತ್ತು ಜೇಡರ ಹುಳುಗಳಲ್ಲಿ ಕೆಲವು ಈ ಭೂಖಂಡದಲ್ಲಿವೆ. ಆದರೆ ನೀವು ಅವುಗಳಿಗೆ ತೊಂದರೆಯನ್ನುಂಟುಮಾಡದಿರುವಲ್ಲಿ, ಇವುಗಳಲ್ಲಿ ಹೆಚ್ಚಿನವು ನಿಮಗೆ ಎಂದೂ ಅಪಾಯಕಾರಿಗಳಾಗಿರುವುದಿಲ್ಲ.
ಶಿಬಿರಾಗ್ನಿಯ ಸುತ್ತ ಕುಳಿತು ಮಾಡುವ ಉಪಾಹಾರಕ್ಕೆ ಇದು ಸಮಯವಾಗಿದೆ. ಸಾಮಾನ್ಯವಾಗಿ ಇದು ಬೇಕನ್ ಮತ್ತು ಮೊಟ್ಟೆ ಮತ್ತು ಚೆನ್ನಾಗಿ ಟೋಸ್ಟ್ ಮಾಡಿರುವ ಬ್ರೆಡ್ ತುಂಡುಗಳ ರೂಪದಲ್ಲಿ ಇರುತ್ತದೆ. ಸ್ವಚ್ಛ ಗಾಳಿಯು ನಿಮಗೆ ಒಳ್ಳೆಯ ಹಸಿವನ್ನುಂಟುಮಾಡಿದೆ. ಆ ನೊಣಗಳ ಮಧ್ಯೆ ನಿಮ್ಮ ಉಪಾಹಾರವನ್ನು ಸವಿಯುವಾಗ, ಆಸ್ಟ್ರೇಲಿಯ ಭೂಖಂಡದ ವಿಶಾಲ ಪ್ರದೇಶದ ನಸುನೋಟವನ್ನು ಕೊಟ್ಟಿರುವ ಈ ಪೊದೆಗಾಡಿನ ಅನುಭವವನ್ನು ಪುನರಾಲೋಚಿಸಲು ನೀವು ತೊಡಗುತ್ತೀರಿ.
ಈ ವಿಸ್ತಾರವಾದ ದೇಶದಲ್ಲಿ ನೀವು ಮಾಡಿದ ಪ್ರಯಾಣಗಳು ಮುಗಿದು ನೀವೀಗ ಮನೆಗೆ ಹಿಂದಿರುಗುತ್ತಿದ್ದೀರಿ. ಸ್ನೇಹಪರರಾದ ಆಸ್ಟ್ರೇಲಿಯನರು ಮತ್ತು ಅವರು ಜೀವಿಸುವ ನಿರಾಡಂಬರದ ರೀತಿ—ಇವನ್ನು ತಿಳಿಯುವುದರಲ್ಲಿ ನಿಮಗಾದ ಅನುಭವ ನಿಮ್ಮ ಜ್ಞಾಪಕದಲ್ಲಿ ಉಳಿಯುವುದು ನಿಸ್ಸಂಶಯ. ಹೆಚ್ಚಿನ ಭೇಟಿಕಾರರಂತೆ, ಯಾವಾಗಲಾದರೊಮ್ಮೆ ನೀವು ಪ್ರಾಯಶಃ ಹಿಂದಿರುಗಿ ಬರಲು ಬಯಸುತ್ತೀರಿ. ಆದರೆ ಒಂದು ತೀರ್ಮಾನವನ್ನು ನೀವು ತಲಪಿದ್ದೀರೆಂಬುದು ನಿಸ್ಸಂದೇಹ: ಡೌನ್ ಅಂಡರ್‌ನಲ್ಲಿ ಜೀವನ ಭಿನ್ನ!
[ಪುಟ 24 ರಲ್ಲಿರುವ ಚಿತ್ರ ಕೃಪೆ]
ಪ್ಯಾರಕೀಟ್ ಮತ್ತು ಪಿಂಕ್ ಕಾಕಟೂ: By courtesy of Australian International Public Relations; ಸ್ತ್ರೀ: By courtesy of West Australian Tourist Commission