ಪ್ರಾಣಿ ನಿದ್ರಾವಸ್ಥೆಯ ರಹಸ್ಯಗಳು
ಕೆನ್ಯದ ಎಚ್ಚರ! ಸುದ್ದಿಗಾರರಿಂದ
ನಿದ್ರೆ—ನಮ್ಮ ಜೀವನಾವಧಿಯ ಮೂರನೇ ಒಂದು ಭಾಗವನ್ನು ನಾವು ಆ ವಿಶ್ರಾಂತಿಕರ ಸ್ಥಿತಿಯಲ್ಲಿ ಕಳೆಯುತ್ತೇವೆ. ಸಮಯದ ಅಪವ್ಯಯದ ಬದಲಿಗೆ, ನಿದ್ರೆಯು ಅನೇಕ ಪ್ರಮುಖವಾದ ಶರೀರ ವೈಜ್ಞಾನಿಕ ಮತ್ತು ಮನಶ್ಶಾಸ್ತ್ರೀಯ ಆವಶ್ಯಕತೆಗಳನ್ನು ತೃಪ್ತಿಗೊಳಿಸುವಂತೆ ಕಾಣುತ್ತದೆ. ಆದಕಾರಣ ನಿದ್ರೆಯನ್ನು, ದೇವರಿಂದ ಬರುವ ಅಮೂಲ್ಯವಾದ ಕೊಡುಗೆಯೋಪಾದಿ ವೀಕ್ಷಿಸಸಾಧ್ಯವಿದೆ.—ಕೀರ್ತನೆ 127:2ನ್ನು ಹೋಲಿಸಿ.
ನಿದ್ರೆಯು, ಪ್ರಾಣಿಲೋಕದಲ್ಲಿಯೂ ಒಂದು ಪ್ರಮುಖ ಪಾತ್ರವನ್ನು ವಹಿಸುತ್ತದೆಂಬುದು ಆಶ್ಚರ್ಯಕರವೇನಲ್ಲ. ಹೌದು, ಅನೇಕ ಜಾತಿಗಳು ಆಕರ್ಷಕ, ಕೆಲವೊಮ್ಮೆ ವಿನೋದಕರ ಮತ್ತು ಅನೇಕ ವೇಳೆ ಅಸಾಮಾನ್ಯವಾದ ರೀತಿಗಳಲ್ಲಿ ನಿದ್ರೆಮಾಡುತ್ತವೆ. ನಾವು ಕೆಲವು ದೃಷ್ಟಾಂತಗಳನ್ನು ನೋಡೋಣ.
ನಿದ್ರಾ ವೀರಾಗ್ರಣಿಗಳು
ಆಫ್ರಿಕದ ಮಧ್ಯಾಹ್ನದ ಬಿಸಿಲಲ್ಲಿ, ಸಿಂಹವು ತನ್ನ ಹೊಟ್ಟೆಯನ್ನು ಮೇಲೆಮಾಡಿಕೊಂಡು, ಪಂಜಾಗಳನ್ನು ಆಕಾಶದ ಕಡೆ ಎತ್ತಿ ನಿದ್ರಿಸುವುದನ್ನು ನೋಡಿರುವ ಯಾವನಾದರೂ, ಈ ಭಯಂಕರ ಬೆಕ್ಕುಜಾತಿಯ ಮೃಗ ಮನೆಯ ಬೆಕ್ಕಿನಷ್ಟೇ ಸಾಧುವಾಗಿದೆಯೆಂದು ತೀರ್ಮಾನಿಸಬಹುದು. ಆದರೆ ತೋರಿಕೆಗಳು ವಂಚಕವಾಗಿವೆ. ಥಾಮಸ್ ಕ್ಯಾಂಪಿಯನ್ ಎಂಬ 17ನೆಯ ಶತಮಾನದ ಲೇಖಕನು ಬರೆದುದು: “ಮಲಗಿರುವ ಸಿಂಹವನ್ನು ಕೆಣಕಲು ಯಾರು ತಾನೇ ಧೈರ್ಯಮಾಡುತ್ತಾರೆ?” ಹೌದು, ಬಲಾಢ್ಯವಾದ ಸಿಂಹಕ್ಕೂ ತನ್ನ ಮಾಂಸಾಹಾರಿ ಜೀವನಶೈಲಿಯನ್ನು ನಡೆಸಲು, ದಿನಕ್ಕೆ ಸುಮಾರು 20 ತಾಸುಗಳಷ್ಟು ನಿದ್ರೆ ಆವಶ್ಯಕ.
ನ್ಯೂ ಸೀಲೆಂಡ್‌ನಲ್ಲಿ ಕಂಡುಬರುವ, ಜಡಾವಸ್ಥೆಯ ಹಲ್ಲಿಸದೃಶ ಪ್ರಾಣಿಯಾದ ಟೂಅಟಾರವನ್ನೂ ಪರಿಗಣಿಸಿರಿ. ಅದು ವರ್ಷದಲ್ಲಿ ಅರ್ಧಭಾಗವನ್ನು ಲಘು ನಿಶ್ಚೇಷ್ಟ ಸ್ಥಿತಿಯಲ್ಲಿ ಕಳೆಯುತ್ತದೆ. ಏಕೆ? ಟೂಅಟಾರ ಎಷ್ಟು ಜಡ ಪ್ರಕೃತಿಯದ್ದೆಂದರೆ, ಅದು ಆಹಾರವನ್ನು ಅಗಿಯುತ್ತಿರುವಾಗಲೂ ನಿದ್ದೆಹೋಗುತ್ತದೆ! ಆದರೆ ಅಷ್ಟೆಲ್ಲ ನಿದ್ದೆ ಅದಕ್ಕೆ ಸ್ವಲ್ಪಮಟ್ಟಿಗೆ ಒಳ್ಳೆಯದನ್ನು ಮಾಡುತ್ತದೆಂದು ಕಾಣುತ್ತದೆ, ಏಕೆಂದರೆ ಕೆಲವು ಟೂಅಟಾರಗಳು ಸುಮಾರು 100 ವರ್ಷಗಳಷ್ಟು ಬದುಕುತ್ತವೆಂದು ವಿಜ್ಞಾನಿಗಳು ಅಂದಾಜುಮಾಡುತ್ತಾರೆ!
ಕಾಲ್ಪನಿಕ ಕುಂಭಕರ್ಣನಂತೆ, ಇತರ ಜೀವಿಗಳೂ ದೀರ್ಘ ಕಾಲಾವಧಿಯ ತನಕ ನಿದ್ರಿಸುತ್ತವೆ. ಅನೇಕ ಪ್ರಾಣಿಗಳು ಶೈತ್ಯದ ಚಳಿಗಾಲಗಳನ್ನು ಪಾರಾಗುವ ರೀತಿಯು ಅದೇ ಆಗಿದೆ. ಇದಕ್ಕೆ ತಯಾರಿಸುತ್ತ, ಆ ಪ್ರಾಣಿಯು, ದೀರ್ಘ ನಿದ್ರೆಯ ಅವಧಿಯಲ್ಲಿ ತನ್ನ ಪೋಷಣೆಗಾಗಿ, ಕೊಬ್ಬಿನ ದೊಡ್ಡ ಪದರಗಳನ್ನು ಬೆಳೆಸಿಕೊಳ್ಳುತ್ತದೆ. ಆದರೆ ಆ ನಿದ್ರಾವಸ್ಥೆಯಲ್ಲಿರುವ ಪ್ರಾಣಿಯು ಬಹಳ ಚಳಿಯಿಂದ ಸಾಯುವುದರಿಂದ ಯಾವುದು ತಡೆಯುತ್ತದೆ? ಪ್ರಾಣಿಲೋಕದೊಳಗೆ (ಇಂಗ್ಲಿಷ್) ಎಂಬ ಪುಸ್ತಕ ವಿವರಿಸುವಂತೆ, ಮಿದುಳು ಆ ಪ್ರಾಣಿಯ ರಕ್ತದಲ್ಲಿನ ರಾಸಾಯನಿಕ ಬದಲಾವಣೆಗಳನ್ನು ವಿಯೋಜಿಸಿ, ಒಂದು ವಿಧದ ಪ್ರಾಕೃತಿಕ ಘನೀಕರಣರೋಧಕವನ್ನು ಉಂಟುಮಾಡುತ್ತದೆ. ಆ ಜೀವಿಯ ದೇಹ ತಾಪಮಾನವು ಘನೀಕರಣಕ್ಕಿಂತ ತುಸು ಮೇಲಿನ ವರೆಗೆ ಇಳಿದಾಗ, ಅದರ ಹೃದಯ ಮಿಡಿತ ಅದರ ಸಾಮಾನ್ಯ ವೇಗಕ್ಕಿಂತ ಕೊಂಚ ಕಡಿಮೆಯಾಗುತ್ತದೆ; ಅದರ ಉಸಿರಾಟ ನಿಧಾನವಾಗುತ್ತದೆ. ಬಳಿಕ ಗಾಢವಾದ ನಿದ್ರೆಯು ಬರುತ್ತದೆ ಮತ್ತು ಅದು ಅನೇಕ ವಾರಗಳ ತನಕ ಮುಂದುವರಿಯಬಲ್ಲದು.
‘ಹಾರುತ್ತ’ ನಿದ್ರಿಸುವುದೊ?
ಕೆಲವು ಪ್ರಾಣಿಗಳು ತೀರ ವಿಚಿತ್ರ ರೀತಿಗಳಲ್ಲಿ ನಿದ್ರೆಮಾಡುತ್ತವೆ. ಸೂಟಿ ಟರ್ನ್ ಎಂದು ಕರೆಯಲ್ಪಡುವ ಕಡಲಹಕ್ಕಿಯನ್ನು ಪರಿಗಣಿಸಿರಿ. ಒಂದು ಮರಿ ಸೂಟಿ ಟರ್ನ್ ತನ್ನ ಗೂಡನ್ನು ಬಿಟ್ಟು ಹೋಗುವಾಗ, ಅದು ಸಮುದ್ರದ ಕಡೆ ಹಾರುತ್ತ, ಮುಂದಿನ ಕೆಲವು ವರ್ಷಗಳ ತನಕ ಎಡೆಬಿಡದೆ ಹಾರಾಡುತ್ತ ಇರುತ್ತದೆ! ಅದು ಜಲಾಭೇದ್ಯ ಪುಕ್ಕಸಜ್ಜಿತವಾಗಿಲ್ಲದಿರುವುದರಿಂದ ಮತ್ತು ಇತರ ಕಡಲಪಕ್ಷಿಗಳಂತೆ ನೀರಿಗಿಳಿಯಲು ಅದಕ್ಕೆ ಜಾಲಪಾದಗಳಿಲ್ಲದಿರುವುದರಿಂದ, ಆ ಸೂಟಿ ಟರ್ನ್ ಸಮುದ್ರದಲ್ಲಿ ಮುಳುಗುವುದರಿಂದ ದೂರವಿರುತ್ತದೆ. ಅದು ನೀರಿನ ಮೇಲ್ಮೈಯಲ್ಲಿರುವ ಚಿಕ್ಕ ಮೀನುಗಳನ್ನು ಗೋರುವ ಮೂಲಕ ಬೇಟೆಯಾಡುತ್ತದೆ.
ಆದರೆ ಅದು ನಿದ್ರಿಸುವುದು ಯಾವಾಗ? ಉತ್ತರ ಅಮೆರಿಕದ ಜಲ, ಆಹಾರಪ್ರಾಣಿ ಮತ್ತು ಬೇಟೆಪಕ್ಷಿಗಳು (ಇಂಗ್ಲಿಷ್) ಎಂಬ ಪುಸ್ತಕ ಹೇಳುವುದು: “ಅವುಗಳ ಗರಿಗಳು ಜಲಪೂರಿತವಾಗುವುದರಿಂದ ಅವು ಸಾಗರದ ಮೇಲೆ ನಿದ್ರೆಹೋಗುವುದು ಅಸಂಭವನೀಯ. ಈ ಪಕ್ಷಿಗಳು ಹಾರುವಾಗ ನಿದ್ರಿಸಬಹುದೆಂದು ಕೆಲವು ವಿಜ್ಞಾನಿಗಳು ಸೂಚಿಸುತ್ತಾರೆ.”
ಜಲದಡಿಯಲ್ಲಿ ಲಘುನಿದ್ರೆ
ಮೀನುಗಳು ನಿದ್ರಿಸುತ್ತವೆಯೆ? ದ ವರ್ಲ್ಡ್ ಬುಕ್ ಎನ್‌ಸೈಕ್ಲೊಪೀಡಿಯಕ್ಕನುಸಾರ, ಕಶೇರುಕಗಳಲ್ಲಿ, “ಸರೀಸೃಪಗಳು, ಪಕ್ಷಿಗಳು ಮತ್ತು ಸಸ್ತನಿಗಳು ಮಾತ್ರ, ಮಿದುಳು ತರಂಗ ನಮೂನೆಗಳಲ್ಲಿ ಬದಲಾವಣೆಗಳೊಂದಿಗೆ, ನಿಜ ನಿದ್ರೆಯನ್ನು ಅನುಭವಿಸುತ್ತವೆ.” ಹಾಗಿದ್ದರೂ ಮೀನುಗಳು, ಅವುಗಳಲ್ಲಿ ಹೆಚ್ಚಿನವುಗಳಿಗೆ ತಮ್ಮ ಕಣ್ಣುಗಳನ್ನು ಮುಚ್ಚಲಿಕ್ಕಾಗುವುದಿಲ್ಲವಾದರೂ, ನಿದ್ರೆಯಂತಹ ವಿಶ್ರಾಂತಿಯ ಅವಧಿಗಳನ್ನು ಖಂಡಿತ ಆನಂದಿಸುತ್ತವೆ.
ಕೆಲವು ಮೀನುಗಳು ಮಗ್ಗುಲಾಗಿ, ಇನ್ನು ಕೆಲವು ತಲೆಕೆಳಗೆ ಮಾಡಿ ಅಥವಾ ನೆಟ್ಟನೆಯ ಭಂಗಿಯಲ್ಲಿಯೇ ನಿದ್ರಿಸುತ್ತವೆ. ಫ್ಲೌಂಡರ್‌ನಂತಹ ಕೆಲವು ಚಪ್ಪಟೆ ಮೀನುಗಳು ಎಚ್ಚರವಿರುವಾಗ ಸಮುದ್ರತಳದಲ್ಲಿ ಜೀವಿಸುತ್ತವೆ. ಆದರೆ ನಿದ್ರಿಸುವಾಗ, ಅವು ತಳದಿಂದ ಕೆಲವೇ ಸೆಂಟಿಮೀಟರ್‌ಗಳಷ್ಟು ಮೇಲೆ ತೇಲುವ ಭಂಗಿಯನ್ನು ತೆಗೆದುಕೊಳ್ಳುತ್ತವೆ.
ವರ್ಣರಂಜಿತವಾದ ಪ್ಯಾರಟ್ ಮೀನಿಗೆ ಒಂದು ಅಪೂರ್ವವಾದ ಶಯನಕಾಲದ ಕ್ರಮವಿದೆ: ಅದು ಒಂದು “ರಾತ್ರಿಯುಡುಪನ್ನು” ಹಾಕಿಕೊಳ್ಳುತ್ತದೆ. ಅದರ ವಿಶ್ರಾಂತಿಯ ಸಮಯವು ಹತ್ತಿರ ಬರುವಾಗ, ತನ್ನ ಶರೀರವನ್ನೆಲ್ಲ ಪೂರ್ತಿ ಆವರಿಸುವ ಒಂದು ಲೋಳೆ ಪದಾರ್ಥವನ್ನು ಅಥವಾ ಅಂಟನ್ನು ಅದು ಸ್ರವಿಸುತ್ತದೆ. ಉದ್ದೇಶವೇನು? ಪ್ರಕೃತಿ ಲೇಖಕ ಡಗ್ ಸ್ಟ್ಯೂವರ್ಟ್ ಹೇಳುವುದು: “ಬಹುಶಃ ಪರಭಕ್ಷಕ ಮೀನುಗಳು ಪತ್ತೆಹಚ್ಚದಂತೆ.” ಅದು ಎಚ್ಚೆತ್ತಾಗ ತನ್ನ ಅಂಟುಡುಪಿನಿಂದ ಹೊರಬರುತ್ತದೆ.
ಇದೇ ರೀತಿ ಸೀಲ್‌ಗಳಿಗೆ ಬಾಟ್ಲಿಂಗ್ ಎಂದು ಕರೆಯಲ್ಪಡುವ ಆಸಕ್ತಿಕರವಾದ ಶಯನಸಮಯದ ಕ್ರಮವಿದೆ. ಅವು ತಮ್ಮ ಗಂಟಲನ್ನು ಬಲೂನಿನಂತೆ ಹಿಗ್ಗಿಸಿ, ಒಂದು ರೀತಿಯ ಪ್ರಾಕೃತಿಕ ತೇಲುಕವಚವನ್ನು ನಿರ್ಮಿಸುತ್ತವೆ. ಈ ರೀತಿ ತೇಲುವಂತೆ ಎತ್ತಿಹಿಡಿಯಲ್ಪಡುವ ಮೂಲಕ, ಅವು ನೀರಿನಲ್ಲಿ ನೆಟ್ಟಗೆ ತೇಲುವಾಗ, ಉಸಿರಾಡಲು ತಮ್ಮ ಮೂಗುಗಳನ್ನು ಮೇಲ್ಮೈಗೆ ತೆರೆದಿಡುತ್ತ ನಿದ್ರಿಸಬಲ್ಲವು.
ಒಂದು ಕಣ್ಣನ್ನು ತೆರೆದಿಡುವುದು
ವನ್ಯ ಪ್ರದೇಶಗಳಲ್ಲಿ ನಿದ್ದೆಹೋಗುವುದು, ಪರಭಕ್ಷಕ ಪ್ರಾಣಿಗಳಿಗೆ, ಆ ಪ್ರಾಣಿಯನ್ನು ಸುಲಭಭೇದ್ಯವಾಗಿ ಮಾಡುತ್ತದೆ. ಆದಕಾರಣ ಅನೇಕ ಜೀವಿಗಳು, ರೂಪಕವಾಗಿ ಹೇಳುವುದಾದರೆ, ಒಂದು ಕಣ್ಣನ್ನು ತೆರೆದಿಟ್ಟು ನಿದ್ರಿಸುತ್ತವೆ. ನಿದ್ರೆಯ ಸಮಯದಲ್ಲಿ ಅವುಗಳ ಮಿದುಳುಗಳು ಎಚ್ಚರಿಕೆಯ ಒಂದು ಮಟ್ಟವನ್ನು ಕಾಪಾಡಿಕೊಳ್ಳುತ್ತವೆ. ಅಪಾಯಕಾರಕವಾದ ಯಾವ ಧ್ವನಿಗಳಿಗೂ ಅವು ಪ್ರತಿಕ್ರಿಯಿಸುವಂತೆ ಇದು ಅನುಮತಿಸುತ್ತದೆ. ಬೇರೆ ಜೀವಿಗಳು ಕ್ರಮವಾದ ಸಂರಕ್ಷಣಾ ಪರೀಕ್ಷೆಗಳನ್ನು ಮಾಡುತ್ತ ಬದುಕಿ ಉಳಿಯುತ್ತವೆ. ಉದಾಹರಣೆಗೆ, ಹಿಂಡಾಗಿ ನಿದ್ರಿಸುತ್ತಿರುವ ಪಕ್ಷಿಗಳು ನಿಯತ ಕಾಲಿಕವಾಗಿ ಕಣ್ಣು ತೆರೆದು ಇಣಿಕಿ ನೋಡುತ್ತ, ಅಪಾಯವಿದೆಯೊ ಎಂದು ಪರೀಕ್ಷಿಸುತ್ತವೆ.
ಆಫ್ರಿಕದಲ್ಲಿನ ಎರಳೆಗಳು ಅಥವಾ ಜೀಬ್ರಗಳ ಹಿಂಡುಗಳು ತದ್ರೀತಿ ವಿಶ್ರಾಂತಿಯ ಅವಧಿಗಳಲ್ಲಿ ಒಂದನ್ನೊಂದು ಕಾಯುತ್ತವೆ. ಕೆಲವೊಮ್ಮೆ ಇಡೀ ಹಿಂಡು ನೆಲದ ಮೇಲೆ ಆಲಸ್ಯದಿಂದ ಮಲಗಿರುವಾಗ, ಎಚ್ಚರಿಕೆಯ ಸ್ಥಿತಿಯನ್ನು ತೋರಿಸುತ್ತ ತಮ್ಮ ತಲೆಗಳನ್ನು ಮೇಲಕ್ಕೆತ್ತಿ ಹಿಡಿಯುತ್ತವೆ. ಆಗಾಗ, ಒಂದು ಪ್ರಾಣಿಯು ತನ್ನ ಪಕ್ಕಕ್ಕೆ ಹೊರಳಿ, ನೆಲದ ಮೇಲೆ ನಿಶ್ಚಲವಾಗಿ ಬಿದ್ದು ಗಾಢವಾಗಿ ನಿದ್ರಿಸುತ್ತದೆ. ಕೆಲವು ನಿಮಿಷಗಳಲ್ಲಿ, ಹಿಂಡಿನ ಇನ್ನೊಂದು ಪ್ರಾಣಿ ತನ್ನ ಸರದಿಯನ್ನು ತೆಗೆದುಕೊಳ್ಳುತ್ತದೆ.
ಹಾಗೆಯೇ ಆನೆಗಳು ಹಿಂಡಾಗಿ ನಿದ್ರಿಸುತ್ತವೆ. ಆದರೆ ಸರ್ವಸಾಮಾನ್ಯವಾಗಿ, ವಯಸ್ಕ ಆನೆಗಳು ನಿಂತುಕೊಂಡು ಲಘುವಾಗಿ ನಿದ್ರಿಸುತ್ತ, ತಮ್ಮ ಕಣ್ಣುಗಳನ್ನು ಆಗಾಗ್ಗೆ ತೆರೆದು, ಅಪಾಯದ ಯಾವುದೇ ಸದ್ದುಗಳನ್ನು ಆಲಿಸಲು, ತಮ್ಮ ಬೃಹದಾಕಾರದ ಕಿವಿಗಳನ್ನು ಎತ್ತಿ, ನಿಮಿರಿಸುತ್ತವೆ. ಈ ದೊಡ್ಡ ಪಹರೆಯವರ ನೆರಳಿನಲ್ಲಿ, ಚಿಕ್ಕ ಮರಿಗಳು ತಮ್ಮ ಪಕ್ಕಗಳಲ್ಲಿ ಉದ್ದಕ್ಕೂ ಬಿದ್ದುಕೊಂಡು ಗಾಢವಾಗಿ ನಿದ್ರಿಸುತ್ತವೆ. ಒಂದು ಇಡೀ ಹಿಂಡು ನಿದ್ದೆಹೋಗುವುದನ್ನು ಕಂಡದ್ದನ್ನು, ಲೇಖಕಿ ಸಿಂಥಿಯ ಮಾಸ್ ಆನೆ ಸ್ಮರಣೆಗಳು (ಇಂಗ್ಲಿಷ್) ಎಂಬ ತಮ್ಮ ಪುಸ್ತಕದಲ್ಲಿ ಜ್ಞಾಪಿಸಿಕೊಳ್ಳುತ್ತಾರೆ: “ಪ್ರಥಮವಾಗಿ ಸಣ್ಣ ಮರಿಗಳು, ಬಳಿಕ ವಯಸ್ಕ ಆನೆಗಳು ಮತ್ತು ಕೊನೆಗೆ ವಯಸ್ಕ ಹೆಣ್ಣಾನೆಗಳು ಮಲಗಿ ನಿದ್ದೆಹೋದವು. ಬೆಳದಿಂಗಳಿನಲ್ಲಿ ಅವು ಬೂದು ಬಣ್ಣದ ಮಹಾ ಬಂಡೆಗಳಂತೆ ಕಂಡುಬಂದರೂ ಅವುಗಳ ಗಾಢವಾದ, ಶಾಂತ ಗೊರಕೆ ಹೊಡೆಯುವಿಕೆಯು ಆ ನಿದರ್ಶನವನ್ನು ಸುಳ್ಳಾಗಿಸಿತು.”
ಪ್ರಾಣಿಗಳ ನಿದ್ರಾಭ್ಯಾಸಗಳ ಕುರಿತು ನಮಗಿನ್ನೂ ತುಂಬ ಕಲಿಯಲಿಕ್ಕಿದೆ. ಆದರೆ ನಮಗೆ ನಿಶ್ಚಯವಾಗಿ ಸಾಪೇಕ್ಷವಾಗಿ ಎಷ್ಟು ಕೊಂಚ ತಿಳಿದಿದೆಯೊ ಅದನ್ನು ಪರಿಗಣಿಸುವಾಗ, “ಸಮಸ್ತವನ್ನು ಸೃಷ್ಟಿಸಿದಾತನ” ಚಕಿತಗೊಳಿಸುವ ವಿವೇಕದ ಕುರಿತು ಚಿಂತನೆಮಾಡುವಂತೆ ಅದು ನಮ್ಮನ್ನು ಪ್ರಚೋದಿಸುವುದಿಲ್ಲವೆ?—ಪ್ರಕಟನೆ 4:11.