ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g97 12/8 ಪು. 19-22
  • ಎಸ್‌ಪ್ರೆಸೊ ಕಾಫಿಯ ಸಾರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಎಸ್‌ಪ್ರೆಸೊ ಕಾಫಿಯ ಸಾರ
  • ಎಚ್ಚರ!—1997
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಅದನ್ನು ಎಸ್‌ಪ್ರೆಸೊ ಆಗಿ ಮಾಡುವುದು ಯಾವುದು?
  • ಗೃಹ ಎಸ್‌ಪ್ರೆಸೊಗಾಗಿ ಉಪಕರಣಗಳು
  • ನೀವು ಖರೀದಿಸುವ ಕಾಫಿ
  • ಬಟ್ಟಿಯಿಳಿಸುವ ವಿಧಾನ
  • ಕ್ಯಾಫೀನ್‌ನ ಕುರಿತೇನು?
  • ಕಾಫಿ ನಿಮ್ಮ ಕೊಲೆಸ್ಟರಾಲ್‌ ಮಟ್ಟವನ್ನು ಹೆಚ್ಚಿಸುತ್ತಿದೆಯೋ?
    ಎಚ್ಚರ!—2000
  • ಗುಣಮಟ್ಟದ ಕಾಫಿ—ತೋಟದಿಂದ ನಿಮ್ಮ ಲೋಟಕ್ಕೆ
    ಎಚ್ಚರ!—1999
  • ಪರಿವಿಡಿ
    ಎಚ್ಚರ!—2010
ಎಚ್ಚರ!—1997
g97 12/8 ಪು. 19-22

ಎಸ್‌ಪ್ರೆಸೊ ಕಾಫಿಯ ಸಾರ

‘ಕಾಫಿಗೆ ಅದರ ಸುವಾಸನೆಯಷ್ಟೇ ಉತ್ತಮವಾದ ರುಚಿಯಿರುತ್ತಿದ್ದರೆ!’ ನೀವೆಂದಾದರೂ ಹಾಗೆ ಹೇಳಿದ್ದುಂಟೊ? ಹಾಗಿದ್ದಲ್ಲಿ ನೀವು “ಕಾಫೆ ಎಸ್‌ಪ್ರೆಸೊ”ದ ರುಚಿಯನ್ನು ಆಸ್ವಾದಿಸಬಯಸಬಹುದು. ರಸಜ್ಞರು ಅದನ್ನು “ಅಂತಿಮ ಕಾಫಿ” ಮತ್ತು “ಕಾಫಿ ಪಾನದ ಪರಾಕಾಷ್ಠೆ” ಎಂದು ಕರೆದಿದ್ದಾರೆ.

ನೀವು ಈಗಾಗಲೇ ಎಸ್‌ಪ್ರೆಸೊ ಕಾಫಿಯನ್ನು ಆಸ್ವಾದಿಸಿರಬಹುದೊ? ನೀವು ಅದರ ಸಾರವಂತಿಕೆ ಮತ್ತು ಅತಿಯಾದ ರುಚಿಯಿಂದ ಒಂದುವೇಳೆ ಆಕರ್ಷಿತರಾಗಿರಬಹುದು. ಇಲ್ಲವೆ, ನಿಮ್ಮ ನಿರ್ಧಾರ ಹೀಗಿರಬಹುದು: ‘ನಾನಿದನ್ನು ಒಳ್ಳೇ ಕಾಫಿಯೆಂದು ಕರೆಯಲಾರೆ. ಅದನ್ನು ಅತಿ ಚಿಕ್ಕ ಕಪ್‌ನಲ್ಲಿ ಕುಡಿಯಲು ಕೊಡುವುದು ಆಶ್ಚರ್ಯಕರವೇನಲ್ಲ. ಅಂತಹ ತೀಕ್ಷ್ಣವಾದ, ಕಹಿ ಪಾನೀಯದಲ್ಲಿ ಕೆಲವೇ ಗುಟುಕುಗಳಿಗಿಂತ ಹೆಚ್ಚನ್ನು ಯಾರು ತಾನೇ ಸಹಿಸಿಕೊಳ್ಳಬಲ್ಲರು? ಅಲ್ಲದೆ, ಅದರಲ್ಲಿ ಅನಾರೋಗ್ಯಕರವಾದ ಪ್ರಮಾಣದಲ್ಲಿ ಕ್ಯಾಫೀನ್‌ ಒಳಗೊಂಡಿದೆಯೆಂಬುದು ನಿಶ್ಚಯ!’

ಆದರೂ, ಚೆನ್ನಾಗಿ ತಯಾರಿಸಿದ ಎಸ್‌ಪ್ರೆಸೊ ಕಹಿಯಾಗಿದೆಯೆ? ಮತ್ತು ದಿನನಿತ್ಯ ಕುಡಿಯುವ ಒಂದು ಕಪ್‌ ಕಾಫಿಗಿಂತ ಎಸ್‌ಪ್ರೆಸೊ ಕಾಫಿಯಲ್ಲಿ ಹೆಚ್ಚು ಕ್ಯಾಫೀನ್‌ ಇದೆಯೆ? ಉತ್ತರಗಳು ನಿಮ್ಮನ್ನು ಆಶ್ಚರ್ಯಗೊಳಿಸಬಹುದು.

ಅದನ್ನು ಎಸ್‌ಪ್ರೆಸೊ ಆಗಿ ಮಾಡುವುದು ಯಾವುದು?

ವಿವಿಧ ದೇಶಗಳು ಮತ್ತು ಸಂಸ್ಕೃತಿಗಳು ತಮ್ಮದೇ ಆದ ತಯಾರಿಕೆಯ ವಿಧಾನಗಳನ್ನು ವಿಕಸಿಸಿರುವುದಾದರೂ, ಎಸ್‌ಪ್ರೆಸೊ ಆರಂಭಗೊಂಡದ್ದು ಇಟಲಿಯಲ್ಲಿ. ಅದರ ರುಚಿ ಹೇಗಿದೆ? ಎಸ್‌ಪ್ರೆಸೊ ಪ್ರಿಯರು ಅದನ್ನು ಸುಗಂಧವುಳ್ಳ, ಸಮೃದ್ಧವಾದ, ಪಾನಕದಂತಹ, ನಯವಾದ, ಕಹಿಸಿಹಿಯಾದ, ಸುಟ್ಟ ಸಕ್ಕರೆಯಂತಹ ಮತ್ತು ಸುವಾಸನೆಯ ಪಾನವಾಗಿ ವರ್ಣಿಸುತ್ತಾರೆ. ಸಂಪೂರ್ಣವಾಗಿ ಬಟ್ಟಿಯಿಳಿಸಿದ ಒಂದು ಕಪ್‌ ಎಸ್‌ಪ್ರೆಸೊದಲ್ಲಿ, ಬಹಳ ಕಷ್ಟದಿಂದ ಪಡೆದಿರುವ, ನುಣುಪನ್ನು ಕೂಡಿಸಿ, ಸ್ವಲ್ಪ ಸುವಾಸನೆಯನ್ನು ತಡೆದಿಡುವ, ಕ್ರೇಮಾ ಎಂದು ಕರೆಯಲ್ಪಡುವ ಮೇಲ್ಪದರವಿದೆ.

ಒಂದು ಕಪ್‌ನಲ್ಲಿ ಇರುವುದು ಬರಿಯ 30ರಿಂದ 40 ಮಿಲಿಲೀಟರುಗಳು. ಸಾಮಾನ್ಯವಾಗಿ ಅದನ್ನು ಬಟ್ಟಿಯಿಳಿಸಿದ ಕೂಡಲೇ, ಸಕ್ಕರೆಯೊಂದಿಗೆ ಒಂದು ಡೆಮಿಟ್ಯಾಸ್‌ (ಕರಿ ಕಾಫಿಯ ಕಪ್‌)ನಲ್ಲಿ ತೀರ ತಾಜಾವಾಗಿ ಕೊಡಲಾಗುತ್ತದೆ!

ಅದನ್ನು ಹೇಗೆ ತಯಾರಿಸಲಾಗುತ್ತದೆ? ಒಂದು ವಿಶೇಷವಾಗಿ ಸೂತ್ರೀಕರಿಸಲ್ಪಟ್ಟ ಕಾಫಿ ಬೀಜದ ಮಿಶ್ರಣವನ್ನು ತೀರ ಗಾಢ ಕಂದು (ಕಪ್ಪು ಅಲ್ಲ) ಬಣ್ಣಕ್ಕೆ ಹುರಿದು, ನಿಯತಕ್ರಮದ ಕಾಫಿಗೆ ಬಳಸಲ್ಪಡುವುದಕ್ಕಿಂತ ಹೆಚ್ಚು ತೆಳುವಾಗಿ ಪುಡಿಮಾಡುವುದರೊಂದಿಗೆ ಎಸ್‌ಪ್ರೆಸೊವಿನ ತಯಾರಿಯು ಶುರುವಾಗುತ್ತದೆ. ಆದರೂ, ಎಸ್‌ಪ್ರೆಸೊವನ್ನು ಉಂಟುಮಾಡುವುದು ಮುಖ್ಯವಾಗಿ ಹುರಿಯುವುದಾಗಲಿ ಪುಡಿಮಾಡುವುದಾಗಲಿ ಅಲ್ಲ—ಗುರುತ್ವಾಕರ್ಷಣದ ಬದಲಿಗೆ ಒತ್ತಡವನ್ನು ಉಪಯೋಗಿಸುವ ಅದರ ಅದ್ವಿತೀಯವಾದ ಬಟ್ಟಿಯಿಳಿಸುವ ವಿಧಾನವೇ. ಒಂದು ಕಪ್‌ನಲ್ಲಿ ಇರುವ ಕಾಫಿಯ ಮೊತ್ತವು, ತೊಟ್ಟಿಕ್ಕಿಸಿದ ಕಾಫಿಯಲ್ಲಿ ಉಪಯೋಗಿಸುವ ಮೊತ್ತಕ್ಕಿಂತ ಸಾಧಾರಣ ಮೂರನೆಯ ಎರಡಂಶವಾಗಿದೆ—ಆದರೆ ತೀರ ಕಡಮೆ ನೀರಿನೊಂದಿಗೆ. ಈ ಬಟ್ಟಿಯಿಳಿಸುವ ವಿಧಾನವು, ಕಾಫಿ ಬೀಜಗಳ ಸಾರವನ್ನು ಹೊರತರುತ್ತದೆ.

ಅನೇಕ ರೆಸ್ಟೊರೆಂಟ್‌ಗಳಲ್ಲಿಯೊ ಕಾಫಿಯಂಗಡಿಗಳಲ್ಲಿಯೊ ನೀವು ಒಂದೊ ಎರಡೊ ಕಪ್‌ಗಳಿಗಾಗಿ ಕೇಳಿಕೊಳ್ಳಸಾಧ್ಯವಿದೆ. ಆದರೂ, ಒಂದು ಎಚ್ಚರಿಕೆ: ಅಜಾಗರೂಕತೆಯಿಂದ ಮಾಡಿದ ಎಸ್‌ಪ್ರೆಸೊ ಕಹಿಯಾಗಿರುತ್ತದೆ. ಆದಕಾರಣ, ಒಂದು ಹೊಟೇಲಿನಲ್ಲಿಯೊ ಕಾಫಿಯಂಗಡಿಯಲ್ಲಿಯೊ ನಿಮಗೆ ಎಸ್‌ಪ್ರೆಸೊ ಕೊಡಲ್ಪಡುವಾಗ, ಅದನ್ನು ಪರೀಕ್ಷಿಸಿರಿ. ನಿಮ್ಮ ಕಪ್‌ ತೀರ ತುಂಬಿರುವುದಾದರೆ ಅಥವಾ ಕಾಫಿಯ ಮೇಲೆ ಕ್ರೇಮಾ ಇಲ್ಲದಿದ್ದರೆ, ನಿಮಗೆ ತೀಕ್ಷ್ಣವಾದ, ವಿಪರೀತ ಬಟ್ಟಿಯಿಳಿಸಲ್ಪಟ್ಟ ಕಾಫಿ ಕೊಡಲ್ಪಟ್ಟಿರುವುದು ಸಂಭವನೀಯ.

ಎಸ್‌ಪ್ರೆಸೊ ಕಾಫಿಯೊಂದಿಗೆ ಎಸ್‌ಪ್ರೆಸೊ-ಆಧಾರಿತ ಪಾನೀಯ ಶ್ರೇಣಿಯೊಂದು ಜೊತೆಗೂಡಿದೆ. ಎಸ್‌ಪ್ರೆಸೊ ತೀರ ತೀಕ್ಷ್ಣವಾಗಿದೆಯೆಂದು ನೀವು ಕಂಡುಕೊಳ್ಳುವುದಾದರೆ, ರಸವತ್ತಾದ ಕಾಪುಚೀನೊ ಅಥವಾ ಕೆನೆಭರಿತ ಕಾಫೆ ಲಾಟೆಯನ್ನು ಏಕೆ ಉಪಯೋಗಿಸಬಾರದು?

ಗೃಹ ಎಸ್‌ಪ್ರೆಸೊಗಾಗಿ ಉಪಕರಣಗಳು

ನೀವು ಎಸ್‌ಪ್ರೆಸೊ ಪಾನೀಯಗಳನ್ನು ಮನೆಯಲ್ಲಿ ತಯಾರಿಸಲು ಬಯಸುತ್ತೀರೊ? ಸಮೃದ್ಧವಾದ, ಸಿಹಿ ಕಾಫಿಯನ್ನು ಮಾಡಲು ಪ್ರತಿಯೊಂದು ವಿವರಕ್ಕೂ ಗಮನಕೊಡುವುದು ಅತ್ಯಗತ್ಯ.

ನೀವು ಯಾವ ರೀತಿಯ ಎಸ್‌ಪ್ರೆಸೊ ಉಪಕರಣವನ್ನು ಖರೀದಿಸಬೇಕು? ಬೀಜವನ್ನು ಯಾವ ರೀತಿಯಲ್ಲೇ ಹುರಿಯಲಿ, ಯಾವ ರೀತಿಯಲ್ಲೇ ಪುಡಿಮಾಡಲಿ, ಯಾವುದೇ ತೊಟ್ಟಿಕ್ಕಿಸಿ ಮಾಡುವ ವಿಧಾನವು ನಿಜ ಎಸ್‌ಪ್ರೆಸೊವನ್ನು ಮಾಡಲಾರದು. ವಿಶೇಷವಾಗಿ ವಿನ್ಯಾಸಿಸಿದ ಉಪಕರಣ ನಿಮಗೆ ಅಗತ್ಯ.

ಸ್ಟೋವ್‌ಟಾಪ್‌ ಬಟ್ಟಿಪಾತ್ರೆಯು ಅನೇಕ ವೇಳೆ ಅತಿ ಕಡಮೆ ಖರ್ಚಿನದ್ದು. ಈ ಕಾಫಿ ತೆಳ್ಳಗಿರುವುದಾದರೂ ಮತ್ತು ಇದರಲ್ಲಿ ಕ್ರೇಮಾದ ಕೊರತೆ ಇರಸಾಧ್ಯವಿರುವುದಾದರೂ, ಅನೇಕರು ಮನೆಯ ಸ್ಟೋವ್‌ಟಾಪ್‌ ಎಸ್‌ಪ್ರೆಸೊವಿನಲ್ಲಿ ತೃಪ್ತಿಪಡುತ್ತಾರೆ. ದ್ರವಾಶಯದಲ್ಲಿ ಹಾಕುವ ನೀರಿನ ಮೊತ್ತವನ್ನು ಜಾಗರೂಕತೆಯಿಂದ ನಿಯಂತ್ರಿಸುವ ಮೂಲಕ ಅಥವಾ ಮುಚ್ಚಳವನ್ನು ತೆಗೆದಿಟ್ಟು, ಕುದಿಸುವಾಗ ಮಧ್ಯದಲ್ಲಿಯೇ ಪಾತ್ರೆಯನ್ನು ಜ್ವಾಲೆಯಿಂದ ತೆಗೆದು ಬಿಡುವ ಮೂಲಕ ನೀವು ಉತ್ತಮವಾದ ಎಸ್‌ಪ್ರೆಸೊವನ್ನು ಪಡೆಯಬಲ್ಲಿರಿ.

ಇಲೆಕ್ಟ್ರಿಕ್‌ ಸ್ಟೀಮ್‌ ಮಷೀನ್‌ಗಳು, ನೀರು ಕಾಫಿಯ ಮೂಲಕ ಹೋಗುವಂತೆ ನಿರ್ಬಂಧಿಸಲು ನೀರಿನ ಆವಿಯನ್ನು ಉಪಯೋಗಿಸುತ್ತವೆ. ನೀವು ಅತ್ಯುತ್ತಮವಾದ ಫಲಿತಾಂಶಗಳನ್ನು ಹೇಗೆ ಪಡೆಯಬಲ್ಲಿರಿ? ಅತಿಯಾಗಿ ಸಾರ ತೆಗೆಯುವುದನ್ನು ತಪ್ಪಿಸಲು ಮತ್ತು ಹಾಲನ್ನು ನೊರೆಗೊಳಿಸಲಿಕ್ಕಾಗಿ ಸಾಕಷ್ಟು ಆವಿಯನ್ನು ಉಳಿಸಲು, ಮೊದಲಿನ 30ರಿಂದ 60 ಮಿಲಿಲೀಟರುಗಳ ಅನಂತರ ಕಾಫಿಯ ಹರಿವನ್ನು ನಿಲ್ಲಿಸುವ ಮೂಲಕವೇ. ಆದಕಾರಣ, ಕಾಫಿಯ ಹರಿವನ್ನು ನಿಲ್ಲಿಸಲಿಕ್ಕಾಗಿ, ಸ್ವಿಚ್‌ ಇರುವ ಅಥವಾ ಇನ್ನೊಂದು ಸಾಧನವಿರುವ ಕಾಫಿ ಮೇಕರ್‌ ಯಂತ್ರಕ್ಕಾಗಿ ನೋಡಿರಿ. ಈ ಆವಿ ಯಂತ್ರಗಳು ಉತ್ತಮ ಕಾಪುಚೀನೊಗಳನ್ನು ಮತ್ತು ಲಾಟೆಗಳನ್ನು ಮಾಡುತ್ತವಾದರೂ, ಅತ್ಯುತ್ತಮವಾದ ನೇರ ಎಸ್‌ಪ್ರೆಸೊವನ್ನು ಮಾಡಲು, ಸ್ಟೋವ್‌ಟಾಪ್‌ ಬಟ್ಟಿಯಂತ್ರಗಳಂತೆ ಅಸಮರ್ಥವಾಗಿವೆ.

ಪಿಸ್ಟನ್‌ ಮಷೀನ್‌ಗಳು ಸಾಮಾನ್ಯವಾಗಿ ಅತಿ ದುಬಾರಿಯಾಗಿರುವುದಾದರೂ ಉತ್ಕೃಷ್ಟವಾದ ಎಸ್‌ಪ್ರೆಸೊವನ್ನು ಮಾಡಶಕ್ತವಾಗಿವೆ. ಪಿಸ್ಟನ್‌ ಮಷೀನನ್ನು ಉಪಯೋಗಿಸಲು, ಹಿಡಿಯನ್ನು ಒತ್ತಿ ಒತ್ತಡವನ್ನು ಹಾಕಬೇಕು. ಇದು ಸ್ಪ್ರಿಂಗ್‌ ಹೇರಿದ ಪಿಸ್ಟನ್‌ (ಆಡುಬೆಣೆ) ಅನ್ನು ಸಂಮರ್ದಿಸಿ, ಬಿಸಿ ನೀರು ಕಾಫಿಯ ಮೂಲಕ ಹೋಗುವಂತೆ ಒತ್ತಡವನ್ನೊಡ್ಡುತ್ತದೆ. ಕೆಲವರು ಪಿಸ್ಟನ್‌ ಮಷೀನ್‌ಗಳನ್ನು ಇಷ್ಟಪಡುತ್ತಾರೆ. ಏಕೆಂದರೆ ಅವುಗಳನ್ನು ಕೈಯಿಂದ ನಿಯಂತ್ರಿಸಬಹುದಲ್ಲದೆ ಅವು ನೋಡಲು ಆಕರ್ಷಣೀಯವೂ ಆಗಿವೆ. ಇತರರು ಅದನ್ನು ಉಪಯೋಗಿಸುವುದು ಕಷ್ಟಕರವೆಂದೂ ಅದು ತೀರ ನಿಧಾನವಾಗಿ ಬಿಸಿಯಾಗುತ್ತದೆಂದೂ ಕಂಡುಕೊಳ್ಳುತ್ತಾರೆ.

ಪಂಪ್‌ ಮಷೀನ್‌ಗಳು ಸಹ ಉತ್ಕೃಷ್ಟ ಎಸ್‌ಪ್ರೆಸೊವನ್ನು ಮಾಡಲು ಸಾಕಷ್ಟು ಒತ್ತಡವನ್ನು ಉಂಟುಮಾಡುತ್ತವೆ. ಅವನ್ನು ಪಿಸ್ಟನ್‌ ಮಷೀನ್‌ಗಳಿಗಿಂತ ಹೆಚ್ಚು ಸುಲಭವಾಗಿ ಮತ್ತು ಹೆಚ್ಚು ವೇಗದಲ್ಲಿ ಉಪಯೋಗಿಸಬಹುದು. ಆದಕಾರಣ, ಯಾರಿಗೆ ಅತ್ಯುತ್ತಮ ಎಸ್‌ಪ್ರೆಸೊ ಬೇಕೊ ಅವರು ಸಾಮಾನ್ಯವಾಗಿ ಪಂಪ್‌ ಮಷೀನ್‌ಗಳನ್ನು ಆರಿಸಿಕೊಳ್ಳುತ್ತಾರೆ. ಇವುಗಳಲ್ಲಿ ವಿವಿಧ ವೈಶಿಷ್ಟ್ಯಗಳಿರುತ್ತವೆ ಮತ್ತು ಕೆಲವು ಪಂಪ್‌ ಮಷೀನ್‌ಗಳು ಬೇರೆ ಮಷೀನ್‌ಗಳಿಗಿಂತ ಹೆಚ್ಚು ಬಾಳಿಕೆ ಬರುತ್ತವೆ. ಆದುದರಿಂದ ನೀವು ಕೊಂಡುಕೊಳ್ಳುವ ಮೊದಲು ಬೇರೆ ಬೇರೆ ಅಂಗಡಿಗಳಲ್ಲಿ ಪರೀಕ್ಷಿಸಿ ನೋಡಿರಿ. ತಮ್ಮ ಮಷೀನ್‌ಗಳನ್ನು ಉಪಯೋಗಿಸಿ ತೋರಿಸುವ ಅಂಗಡಿಗಳು, ನೀವು ಪ್ರಾಯೋಗಿಕ ಆಯ್ಕೆಯನ್ನು ಮಾಡುವಂತೆ ನಿಮ್ಮನ್ನು ಶಕ್ತಗೊಳಿಸುತ್ತವೆ.

ನೀವು ಖರೀದಿಸುವ ಕಾಫಿ

ಒಂದು ತಾಜಾ ಎಸ್‌ಪ್ರೆಸೊಗಾಗಿ ಹುರಿದ ಬೀಜವನ್ನು ಆರಿಸಿಕೊಳ್ಳಿರಿ. ಸೂಪರ್‌ಮಾರ್ಕೆಟ್‌ಗಳಲ್ಲಿ ಮಾರುವ ಕಾಫಿ ತಾಜಾ ಇರುವುದು ವಿರಳವಾಗಿರುವುದರಿಂದ, ಪ್ರತ್ಯೇಕ ಕಾಫಿಯಂಗಡಿಯನ್ನು ಹುಡುಕಿರಿ. ಬೀಜವು ಕಾಫಿ ಅಂಗಡಿಯಲ್ಲಿಯೇ ಹುರಿಯಲ್ಪಡುವುದಾದರೆ ಇನ್ನೂ ಉತ್ತಮ. ಪುಡಿಮಾಡಲ್ಪಟ್ಟ ಕಾಫಿಯು ಕೆಲವೇ ದಿನಗಳಲ್ಲಿ ಮುಗ್ಗಲಾಗುತ್ತದಾದರೂ ಕಾಫಿ ಬೀಜವು ಕೆಲವು ವಾರಗಳ ತನಕ ಸಾಧಾರಣ ತಾಜಾವಾಗಿ ಉಳಿಯುತ್ತದೆ. ಆದಕಾರಣ, ಸಾಧ್ಯವಿರುವಲ್ಲಿ ಇಡೀ ಬೀಜವನ್ನು ಖರೀದಿಸಿ, ಬೇಕಾದಾಗ ಮನೆಯಲ್ಲೇ ಪುಡಿಮಾಡಿರಿ. ಯೋಗ್ಯವಾದ ಪುಡಿಯು ತೆಳುವಾಗಿರುತ್ತಾದರೂ ತೀರ ನುಣ್ಣಗಾಗುವುದಿಲ್ಲ. ಪುಡಿಮಾಡಿದ ಕಾಫಿಯನ್ನು ನೀವು ಖರೀದಿಸಲೇ ಬೇಕಾಗಿರುವುದಾದರೆ, ಸಣ್ಣ ಮೊತ್ತದಲ್ಲಿ ಖರೀದಿಸಿರಿ ಮತ್ತು ಬೇಗನೆ ಉಪಯೋಗಿಸಿರಿ.

ನಿಮ್ಮ ಕಾಫಿಯನ್ನು ತಾಜಾವಾಗಿಟ್ಟುಕೊಳ್ಳಬೇಕಾದರೆ, ಅದನ್ನು ಒಂದು ವಾಯುಭದ್ರವಾದ (ಏರ್‌ಟೈಟ್‌) ಚಿಕ್ಕಡಬ್ಬಿಯಲ್ಲಿ ಬಿಗಿಯಾಗಿ ಮುಚ್ಚಿಡಿರಿ. ಒಂದೆರಡು ವಾರಗಳಲ್ಲಿ ಅದನ್ನು ಬಳಸಿ ಮುಗಿಸುವುದಾದರೆ, ಕಾಫಿಡಬ್ಬಿಯನ್ನು ತಂಪಾದ, ಕತ್ತಲೆಯ ಸ್ಥಳದಲ್ಲಿಡಿರಿ. ಇಲ್ಲವೆ, ಅದನ್ನು ಫ್ರೀಸರ್‌ನಲ್ಲಿಡಿರಿ.

ಬಟ್ಟಿಯಿಳಿಸುವ ವಿಧಾನ

ಅತ್ಯುತ್ತಮ ಉಪಕರಣ ಮತ್ತು ಕಾಫಿಯಿದ್ದರೂ, ಎಸ್‌ಪ್ರೆಸೊ ತಯಾರಿಯ ಕಲೆಯನ್ನು ಖರೀದಿಸಬಾರದು, ಅದನ್ನು ಕಲಿಯಲೇಬೇಕು. ನೀವು ಉಪಯೋಗಿಸುವ ಮಷೀನ್‌ನ ಮೇಲೆ ಹೊಂದಿಕೊಂಡು, ಕುದಿಸುವ ಕ್ರಮಗಳು ಭಿನ್ನವಾಗಿರುತ್ತವೆ. ಆದುದರಿಂದ, ಅದರೊಂದಿಗೆ ಬರುವ ಮಾರ್ಗದರ್ಶನವನ್ನು ಅನುಸರಿಸಿರಿ. ಸಾಕಷ್ಟು ಕಾಫಿಹುಡಿಯನ್ನು ಉಪಯೋಗಿಸಿರಿ. ಯೋಗ್ಯ ಮೊತ್ತವು ನಿಮ್ಮ ಫಿಲ್ಟರನ್ನು ಹೆಚ್ಚುಕಡಮೆ ತುಂಬಿ, ಕಾಫಿಹುಡಿಯು ವಿಕಾಸಗೊಳ್ಳುವಂತೆ ಸ್ವಲ್ಪ ಸ್ಥಳವನ್ನು ಬಿಟ್ಟುಕೊಡುವುದು. ಕಾಫಿಹುಡಿಯ ಪದರದ ಮೂಲಕ ನೀರು ನಿಧಾನವಾಗಿ ಮತ್ತು ಸಮಾನವಾಗಿ ಹರಿದು, ರುಚಿಯ ಪೂರ್ತಿ ಸಾರವನ್ನು ತೆಗೆಯುವುದಕ್ಕಾಗಿ, ಕಾಫಿಹುಡಿಯನ್ನು ಫಿಲ್ಟರ್‌ನಲ್ಲಿ ಸರಿಯಾಗಿ ತುಂಬಲು ಅಥವಾ ತುರುಕಲು ಸ್ವಲ್ಪ ಅನುಭವವು ಬೇಕಾಗುತ್ತದೆ.

ಯಾವ ತಪ್ಪನ್ನು ಮಾಡಬಾರದು? ಕಾಫಿಹುಡಿಯಿಂದ ತೀರ ಹೆಚ್ಚು ಕಾಫಿಯನ್ನು ಬಟ್ಟಿಯಿಳಿಸಬಾರದು. ಒಂದು ಬಾರಿಯ ಮೊತ್ತದಿಂದ 60ರಿಂದ 90 ಮಿಲಿಲೀಟರ್‌ಗಳಷ್ಟು ಕಾಫಿಯನ್ನು ಬಟ್ಟಿಯಿಳಿಸಲು ನೀವು ಪ್ರಯತ್ನಿಸುವುದಾದರೆ, ಅದು ತೆಳ್ಳಗಾಗುವುದು ಮತ್ತು ಕಹಿಯಾಗುವುದು. ನೀವು ಯಾವುದನ್ನು ನಿರೀಕ್ಷಿಸಿದಿರೊ ಆ ಎಸ್‌ಪ್ರೆಸೊಗೆ ಬದಲಾಗಿ, ತೀಕ್ಷ್ಣವಾದ ತೊಟ್ಟಿಕ್ಕಿಸಿರುವ ಕಾಫಿಯನ್ನು ಹೋಲುವ ಪಾನೀಯವು ನಿಮಗೆ ದೊರೆಯುವುದು.

ಆದಕಾರಣ, ಬಟ್ಟಿಯಿಳಿಸುವುದನ್ನು ಯಾವಾಗ ನಿಲ್ಲಿಸಬೇಕೆಂದು ತಿಳಿದಿರುವುದು ಒಂದು ಪ್ರಮುಖಾಂಶವಾಗಿದೆ. ಎಸ್‌ಪ್ರೆಸೊವಿನ ಒಂದು ಡೋಸ್‌, 30ರಿಂದ 40 ಮಿಲಿಲೀಟರುಗಳಷ್ಟು ದ್ರವವನ್ನು 20ರಿಂದ 25 ಸೆಕೆಂಡುಗಳಲ್ಲಿ ಫಲಿಸಬೇಕೆಂಬುದು ರಸಜ್ಞರ ಸೂಚನೆ. ಈ ಹಂತದಲ್ಲಿ, ಕಾಫಿಹುಡಿಯ ಸಾರವು ಪೂರ್ತಿಯಾಗಿ ತೆಗೆಯಲ್ಪಟ್ಟಿರುತ್ತದೆ, ಅದನ್ನು ಎಸೆದುಬಿಡಬೇಕು.

ಡಬಲ್‌ ಎಸ್‌ಪ್ರೆಸೊ (ಎರಡು ಕಪ್‌ ಎಸ್‌ಪ್ರೆಸೊ ಪ್ರಮಾಣ)ವನ್ನು ಬಟ್ಟಿಯಿಳಿಸುವಾಗಲೂ, “ಕಡಮೆ ಕಾಫಿಯನ್ನು ಬಟ್ಟಿಯಿಳಿಸುವುದು, ಹೆಚ್ಚು ಉತ್ತಮವಾದ ಫಲಿತಾಂಶಗಳನ್ನು” ಕೊಡುತ್ತದೆ. ನೀವು ಕಾಫಿಯನ್ನು ಎಷ್ಟು ಕಡಮೆ ಕುದಿಸುತ್ತೀರೊ ನಿಮ್ಮ ಕಾಫಿ ಅಷ್ಟು ಹೆಚ್ಚು ಸಿಹಿಯಾಗಿರುವುದು. ಡಬಲ್‌ ಎಸ್‌ಪ್ರೆಸೊ ಎಂಬುದರ ಅರ್ಥನಿರೂಪಣೆಯಲ್ಲಿ ವ್ಯತ್ಯಾಸವಿರುತ್ತದಾದರೂ, ಅದು ಹೆಚ್ಚುಕಡಮೆ ಒಂದು ಕಪ್‌ನಲ್ಲಿ, ಕಾಫಿಹುಡಿಯ ಇಮ್ಮಡಿ ಮೊತ್ತವನ್ನು ಉಪಯೋಗಿಸಿ ಎರಡು ಬಾರಿ ಕೊಡುವ ಪ್ರಮಾಣವಾಗಿದೆ.

ಕ್ಯಾಫೀನ್‌ನ ಕುರಿತೇನು?

ಎಸ್‌ಪ್ರೆಸೊವಿನ ಒಮ್ಮೆ ಕೊಡುವ ಪ್ರಮಾಣದಲ್ಲಿ, ದಿನನಿತ್ಯ ತೆಗೆದುಕೊಳ್ಳುವ ಕಾಫಿಯ ಕಪ್‌ಗಿಂತ ಕಡಮೆ ಕ್ಯಾಫೀನ್‌ ಇರಬಹುದು. ಅದು ನಿಮ್ಮನ್ನು ಆಶ್ಚರ್ಯಗೊಳಿಸುತ್ತದೊ? ಎಸ್‌ಪ್ರೆಸೊವಿನ ಹೆಚ್ಚುಮಟ್ಟದ ಸಾಂದ್ರಣದ ದೃಷ್ಟಿಯಲ್ಲಿ, ಅದು ಹೇಗೆ ಸಾಧ್ಯ?

ಹುರಿಯುವಾಗ ಆಗುವ ಗಾಢಬಣ್ಣವು ಇದಕ್ಕಿರುವ ಒಂದು ಕಾರಣಾಂಶ. ಹೆಚ್ಚು ಗಾಢವಾದ ಹುರಿಯುವಿಕೆಯಲ್ಲಿ ಕಡಮೆ ಕ್ಯಾಫೀನು ಇರುತ್ತದೆ. ಅಲ್ಲದೆ, ಅನೇಕ ಪ್ರತ್ಯೇಕತೆಯುಳ್ಳ ಕಾಫಿಯಂಗಡಿಗಳು ಅರ್ಯಾಬಿಕ ಕಾಫಿಬೀಜಗಳನ್ನು ಉಪಯೋಗಿಸುತ್ತವೆ. ಇವುಗಳಲ್ಲಿ ಸೂಪರ್‌ಮಾರ್ಕೆಟ್‌ಗಳಲ್ಲಿ ದೊರೆಯುವ ಡಬ್ಬಿ ಕಾಫಿಗಳಲ್ಲಿ ಉಪಯೋಗಿಸುವ ರೋಬಸ್ಟ ಕಾಫಿಬೀಜಗಳಿಗಿಂತ ಗಮನಾರ್ಹವಾಗಿ ಕಡಮೆ ಪ್ರಮಾಣದಲ್ಲಿ ಕ್ಯಾಫೀನ್‌ ಇರುತ್ತದೆ.

ಆದರೆ ಅತಿ ದೊಡ್ಡ ಕಾರಣಾಂಶವು ಪರಿಮಾಣವಾಗಿದೆ. ಎಸ್‌ಪ್ರೆಸೊ ಕಾಫಿಯಲ್ಲಿ ಪ್ರತಿ ಮಿಲಿಲೀಟರಿಗೆ ದಿನನಿತ್ಯ ಕುಡಿಯುವ ಕಾಫಿಗಿಂತ ಹೆಚ್ಚು ಕ್ಯಾಫೀನ್‌ ಇರುತ್ತದಾದರೂ, ಕಪ್‌ನಲ್ಲಿರುವ ದ್ರವವು ಕಡಮೆಯಾಗಿದೆ. ಹೀಗೆ, 180 ಮಿಲಿಲೀಟರುಗಳ ದಿನನಿತ್ಯ ಕುಡಿಯುವ ಕಾಫಿಯ ಕಪ್‌ನಲ್ಲಿ 100 ಅಥವಾ ಅದಕ್ಕೂ ಹೆಚ್ಚು ಮಿಲಿಗ್ರ್ಯಾಮ್‌ಗಳಷ್ಟು ಕ್ಯಾಫೀನ್‌ ಇರಬಹುದಾದರೂ, ಎಸ್‌ಪ್ರೆಸೊವಿನ ಒಂದು ಬಾರಿಯ ಪ್ರಮಾಣದಲ್ಲಿ ತುಸು ಕಡಮೆ ಕ್ಯಾಫೀನ್‌ ಇರಬಹುದೆಂದು ಕೆಲವು ಅಧ್ಯಯನಗಳು ತೋರಿಸುತ್ತವೆ.

ಆದರೂ, ಅಧ್ಯಯನಗಳ ಪರಿಣಾಮಗಳು ವಿಭಿನ್ನವಾಗಿವೆ, ಮತ್ತು ಕ್ಯಾಫೀನ್‌ನ ಮೊತ್ತವು ಬಳಸಲ್ಪಟ್ಟಿರುವ ಕಾಫಿಬೀಜಗಳ ಮೇಲೆ ಹಾಗೂ ಬಟ್ಟಿಯಿಳಿಸುವ ವಿಧಾನದ ಪ್ರತಿಯೊಂದು ಕ್ರಮದ ಮೇಲೆಯೂ ಅವಲಂಬಿಸಿರುವುದು. ಸಿಂಗಲ್‌ ಎಸ್‌ಪ್ರೆಸೊಗಿಂತ ಡಬಲ್‌ ಎಸ್‌ಪ್ರೆಸೊದಲ್ಲಿ ಹೆಚ್ಚು ಕ್ಯಾಫೀನ್‌ ಇರುವುದು ನಿಶ್ಚಯ. ಕುಡಿದಾದ ಮೇಲೆ ನಿಮಗೆ ಹೇಗೆನಿಸುತ್ತದೆಂಬುದು ಪ್ರಾಯಶಃ ಕ್ಯಾಫೀನ್‌ನ ಮಟ್ಟವನ್ನು ನಿರ್ಣಯಿಸುವ ಅತ್ಯುತ್ತಮ ಮಾರ್ಗದರ್ಶಕವಾಗಿದೆ. ಕ್ಯಾಫೀನ್‌ ಸೇವನೆಯನ್ನು ಕಡಮೆಮಾಡಲು, ಆದರೂ ಎಸ್‌ಪ್ರೆಸೊದಲ್ಲಿ ಆನಂದಿಸಲು ನೀವು ಬಯಸುವಲ್ಲಿ, ಕ್ಯಾಫೀನ್‌ರಹಿತ ಎಸ್‌ಪ್ರೆಸೊ ಬೀಜವನ್ನು ನೀವು ಉಪಯೋಗಿಸಸಾಧ್ಯವಿದೆ, ಅಥವಾ ನೀವು ಬಯಸುವ ಕ್ಯಾಫೀನ್‌ನ ಪ್ರತಿಶತಕ್ಕನುಸಾರ, ನಿಯತಕ್ರಮದ ಎಸ್‌ಪ್ರೆಸೊ ಬೀಜದೊಂದಿಗೆ ಅದನ್ನು ಬೆರಸಸಾಧ್ಯವಿದೆ.

ನೀವು ನಿಮ್ಮ ಸ್ವಂತ ಅಡುಗೆಮನೆಯಲ್ಲಿ ಎಸ್‌ಪ್ರೆಸೊವನ್ನು ಕುದಿಸಿ ತಯಾರಿಸಲು ಸಿದ್ಧರಾಗಿದ್ದೀರೊ? ಪಟ್ಟುಹಿಡಿದು ಪ್ರಯತ್ನಿಸುವುದರಿಂದ ಒಳ್ಳೆಯ ಪರಿಣಾಮಗಳು ಬರುತ್ತವೆ. ಆದಕಾರಣ ನೀವು ನಿಮ್ಮ ಸ್ವಂತ ಪ್ರಯೋಗಪ್ರಾಣಿಯಾಗಿರಿ. ನಿಮ್ಮ ಸ್ನೇಹಿತರಿಗೆ ಹಂಚುವ ಮೊದಲು ನೀವೇ ಪ್ರಯೋಗಿಸಿ ನೋಡಿರಿ. ಕ್ರೇಮಾ ಮತ್ತು ನೊರೆಯಾಡುವ ಹಾಲನ್ನು ತಯಾರಿಸಲು ನಿಮಗೆ ಅನುಭವದ ಅಗತ್ಯವಿದೆ. ಆದರೆ ನೀವು ನಿಮ್ಮ ಸ್ನೇಹಿತರನ್ನು, ಸ್ಥಳಿಕ ಕಾಫಿಯಂಗಡಿಯೊಂದಿಗೆ ಪ್ರತಿಸ್ಪರ್ಧಿಸುವ ಎಸ್‌ಪ್ರೆಸೊ ಪಾನೀಯಗಳ ಮೂಲಕ ಆನಂದಗೊಳಿಸುವಾಗ, ನಿಮ್ಮ ಪಟ್ಟುಹಿಡಿಯುವಿಕೆಗೆ ಫಲ ದೊರೆಯುವುದು. ಎಸ್‌ಪ್ರೆಸೊ, ಕಾಫಿಯ ಸಾಕ್ಷಾತ್‌ ಸಾರವೇ ಆಗಿದೆಯೆಂದು ನೀವು ಸಮ್ಮತಿಸಲೂಬಹುದು.

[ಪುಟ 32 ರಲ್ಲಿರುವ ಚೌಕ]

ನೊರೆಯಾಡುವ ಹಾಲನ್ನು ತಯಾರಿಸುವ ಮಾಹಿತಿಗಳು

ಕಾಪುಚೀನೊ ಮತ್ತು ಲಾಟೆಗಳಿಗೆ ಹಾಲು ನೊರೆಯಾಡುವಂತೆ ಮತ್ತು/ಅಥವಾ ಹಬೆಯಾಡುವಂತೆ ಮಾಡಲು, ನಿಮಗೆ ಒಂದು ಸ್ಟೀಲ್‌ ಬಿಂದಿಗೆ, ತಣ್ಣಗಿನ ಹಾಲು ಮತ್ತು ಹಾಲು ಆವಿಪಾತ್ರೆ ಅಗತ್ಯ. ಹಾಲು ಹಬೆಯಾಡುವಂತೆ ಮಾಡಲು ನಿಮ್ಮ ಎಸ್‌ಪ್ರೆಸೊ ಮಷೀನ್‌ನಲ್ಲಿ ದಂಡವಿಲ್ಲದಿರುವಲ್ಲಿ, ನೀವು ಈ ಉದ್ದೇಶಕ್ಕಾಗಿ ಒಂದು ಸ್ವಯಂ ಪೂರ್ಣ ಸಾಧನವನ್ನು ಖರೀದಿಸಬಲ್ಲಿರಿ.

1. ಒಂದು ಸ್ಟೀಲ್‌ ಬಿಂದಿಗೆಯನ್ನು ತಣ್ಣಗಿನ ಹಾಲಿನಿಂದ ಅರ್ಧಭಾಗದ ತನಕ ಮಾತ್ರ ತುಂಬಿಸಿರಿ.

2. ಹಬೆಯ ದಂಡವನ್ನು ಹಾಲಿನ ಮೇಲ್ಮೈಗಿಂತ ತುಸು ಕೆಳಗೆ ಇಟ್ಟು ಸ್ಟೀಮ್‌ ವ್ಯಾಲ್ವ್‌ ಅನ್ನು ತೆರೆಯಿರಿ.

3. ದಂಡದ ತುದಿಯನ್ನು ಮೇಲ್ಮೈಗಿಂತ ತುಸು ಕೆಳಗಿಟ್ಟು, ಬಿಂದಿಗೆಯನ್ನು ಕೆಳಕ್ಕಿಳಿಸಿ, ನೊರೆಯಾಡಿಸುವಾಗ ಹೆಚ್ಚು ಗಾಳಿಯನ್ನು ಸಂಯೋಜಿಸಿರಿ.

4. ಬಿಂದಿಗೆ ಸ್ಪರ್ಶಿಸಲು ತೀರ ಬಿಸಿಯಾಗಿರುವಾಗ ಯೋಗ್ಯ ತಾಪಮಾನವು ಸಾಮಾನ್ಯವಾಗಿ ತಲಪಲ್ಪಡುತ್ತದೆ.

5. ಸ್ಟೀಮ್‌ ವ್ಯಾಲ್ವನ್ನು ಮುಚ್ಚಿ, ಬಿಂದಿಗೆಯನ್ನು ಅದರ ಕೆಳಗಿನಿಂದ ತೆಗೆದುಬಿಡಿರಿ. ಬಳಿಕ ಉಳಿದಿರುವ ಹಾಲನ್ನು ಇಲ್ಲವಾಗಿಸಲು ಸ್ಟೀಮ್‌ ವ್ಯಾಲ್ವನ್ನು ತೆರೆಯಿರಿ ಮತ್ತು ಒದ್ದೆ ಬಟ್ಟೆಯಿಂದ ಅದನ್ನು ಒರೆಸಿರಿ.

[ಪುಟ 33 ರಲ್ಲಿರುವ ಚಿತ್ರ]

ಕಾಫಿಪುಡಿಗಿಂತ ಕಾಫಿಬೀಜ ಹೆಚ್ಚು ದೀರ್ಘಕಾಲ ತಾಜಾವಾಗಿ ಉಳಿಯುತ್ತದೆ

ಎಸ್‌ಪ್ರೆಸೊ ತಯಾರಿಸುವ ಒಂದು ಸ್ಟೀಮ್‌ ಮಷೀನನ್ನು ತೋರಿಸಲಾಗಿದೆ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ