ಗುಣಮಟ್ಟದ ಕಾಫಿ—ತೋಟದಿಂದ ನಿಮ್ಮ ಲೋಟಕ್ಕೆ
ಬ್ರೆಸಿಲಿನಲ್ಲಿರುವ ಎಚ್ಚರ! ಸುದ್ದಿಗಾರರಿಂದ
ಫಿನ್ಲೆಂಡಿನವರು ಅದನ್ನು ತಮ್ಮ ರಾಷ್ಟ್ರೀಯ ಪಾನೀಯವೆಂದು ಕರೆಯುತ್ತಾರೆ. ಅನೇಕ ಇಟಲಿಯನ್ನರಿಗೆ ಅದನ್ನು ತಯಾರಿಸುವುದು ಒಂದು ಸಮಾರಂಭವಾಗಿದೆ. ಫ್ರಾನ್ಸ್, ಜರ್ಮನಿ, ಮೆಕ್ಸಿಕೊ, ಅಮೆರಿಕ ಮತ್ತು ಇನ್ನಿತರ ದೇಶಗಳಲ್ಲಿ ಅದು ಬೆಳಗ್ಗಿನ ಉಪಾಹಾರದ ಒಂದು ಮುಖ್ಯ ಭಾಗವಾಗಿದೆ. ಚಹಾದ ನಂತರ, ಅದು ಜಗತ್ತಿನ ಅಚ್ಚುಮೆಚ್ಚಿನ ಪಾನೀಯವಾಗಿದೆ. ಅದು ಯಾವುದು? ಜಗತ್ತಿನ ಮೂರನೇ ಒಂದರಷ್ಟು ಜನತೆಗಿರುವ ಒಂದೇ ಒಂದು ಉತ್ತರ—ಕಾಫಿ!
ಅದರ ಕುರಿತು ನಿಮ್ಮ ವೈಯಕ್ತಿಕ ಅನಿಸಿಕೆ ಏನೇ ಆಗಿರಲಿ, ಕಾಫಿಗಿರುವ ಜನಪ್ರಿಯತೆಯನ್ನು ಯಾರೂ ಅಲ್ಲಗಳೆಯಸಾಧ್ಯವಿಲ್ಲ. ಲಭ್ಯವಿರುವ ಕಾಫಿಗಳಲ್ಲಿ ಗುಣಮಟ್ಟದ ಕಾಫಿಯನ್ನು ಮಾಡುವುದರಲ್ಲಿ ಏನು ಅಡಕವಾಗಿದೆ? ಅದನ್ನು ಎಲ್ಲಿ ಬೆಳೆಯಲಾಗುತ್ತದೆ? ಮತ್ತು ಹೇಗೆ ಬೆಳೆಸಲಾಗುತ್ತದೆ? ನಿಜವಾಗಿಯೂ ವಿವಿಧ ರೀತಿಯ ಕಾಫಿಗಳಲ್ಲಿ ಹೆಚ್ಚು ವ್ಯತ್ಯಾಸವಿದೆಯೇ? ಯಾವ ಅಂಶಗಳು ಅವುಗಳ ಗುಣಮಟ್ಟ, ಸ್ವಾದ ಮತ್ತು ಬೆಲೆಯನ್ನು ಪ್ರಭಾವಿಸುತ್ತವೆ?
ಅದರ ಮೂಲವೆಲ್ಲಿ?
ಕಾಫಿ ಮರದ ಬೀಜಗಳನ್ನು ಹುರಿಯುವ ಮೂಲಕ ಕಾಫಿಯನ್ನು ತಯಾರಿಸಲಾಗುತ್ತದೆ. ಇದು ಮೆರುಗುವ ಗಾಢಹಸಿರಿನ ಎಲೆಗಳನ್ನೊಳಗೊಂಡ ವಿಶಾಲವಾದ ಒಂದು ನಿತ್ಯಹಸಿರಿನ ಕುರುಚಲು ಮರವಾಗಿದ್ದು, ಉಷ್ಣವಲಯದ ಅಂಚಿನಲ್ಲಿರುವ ಪ್ರದೇಶಗಳಲ್ಲಿ ಬೆಳೆಯುತ್ತದೆ. ಕುಸುಮ ಕಾಲದಲ್ಲಿ, ಈ ಮರವು ಮನಕ್ಕೆ ಮುದನೀಡುವ ಮಲ್ಲಿಗೆಯ ಕಂಪನ್ನು ಸೂಸುವ ಸುಂದರವಾದ ಶ್ವೇತವರ್ಣದ ಪುಷ್ಪಗಳಿಂದ ಅಲಂಕೃತವಾಗಿರುತ್ತದೆ. ಕುಸುಮವರಳಿದ ಕೆಲವೇ ದಿನಗಳಲ್ಲಿ, ಪುಷ್ಪಗಳ ಸ್ಥಾನದಲ್ಲಿ ಚೆರಿಹಣ್ಣಿನಂತಿರುವ ಹಸಿರು ಹಣ್ಣುಗಳ ಗೊಂಚಲುಗಳು ಕಾಣಿಸಿಕೊಳ್ಳುತ್ತವೆ. ಈ ಹಣ್ಣುಗಳು ಪ್ರಗತಿಪರವಾಗಿ ಬೆಳೆದು, ಹಸಿರು ಬಣ್ಣದ ವಿವಿಧ ರಂಗುಗಳಿಂದ ಹಿಡಿದು ಪೂರ್ತಿ ಹಣ್ಣಾಗುವಾಗ ಕಂದುಹೊಂಬಣ್ಣ ಇಲ್ಲವೆ ಕೆಂಪು ಅಥವಾ ಹಳದಿಯಾಗಿ ಬದಲಾವಣೆ ಹೊಂದುತ್ತವೆ.
ಕಾಫಿ ಮರಗಳಲ್ಲಿ, ಕಸಿಮಾಡಿದ ಹೊಂದರುಗಳಿಂದ ಹಿಡಿದು 12 ಮೀಟರ್ ಎತ್ತರದ ಮರಗಳ ವರೆಗೆ ಸುಮಾರು 70 ನಾನಾ ಬಗೆಯ ತಳಿಗಳಿದ್ದರೂ, ಜಗತ್ತಿನ ಶೇಕಡ 98ರಷ್ಟು ಉತ್ಪಾದನೆಗೆ ಕೇವಲ ಎರಡು ತಳಿಗಳು ಮಾತ್ರ ಕಾರಣವಾಗಿವೆ. ಅವು, ಕಾಫೀ ಅರಾಬಿಕ ಅಥವಾ ಸರಳ ಮಾತಿನಲ್ಲಿ ಅರಾಬಿಕ, ಹಾಗೂ ರೋಬಸ್ಟ ಎಂದು ಸಹ ಪರಿಚಿತವಾಗಿರುವ ಕಾಫೀ ಕ್ಯಾನೆಫೋರ. ವಿಶೇಷವಾಗಿ ಉನ್ನತ ಪ್ರದೇಶಗಳಲ್ಲಿ ಬೆಳೆಯುವ ಅರಾಬಿಕ ತಳಿಗಳಿಂದ ಅತ್ಯುತ್ತಮ ಕಾಫಿಯು ದೊರೆಯುತ್ತದೆ. ಸಾಮಾನ್ಯವಾಗಿ ಕಾಫಿ ಮರಗಳು 4ರಿಂದ 6 ಮೀಟರುಗಳಷ್ಟು ಎತ್ತರಕ್ಕೆ ಬೆಳೆಯುತ್ತವಾದರೂ, ಅವುಗಳನ್ನು ಸುಮಾರು 4 ಮೀಟರುಗಳಷ್ಟು ಎತ್ತರಕ್ಕೆ ಕತ್ತರಿಸಲಾಗುತ್ತದೆ. ಅವು ಹೆಚ್ಚಾಗಿ ಇನ್ಸ್ಟೆಂಟ್ ಕಾಫಿಯಾಗಿ ಉಪಯೋಗಿಸಲ್ಪಡುವ ರೋಬಸ್ಟವು, ಕ್ಯಾಫೀನ್ ಅಂಶವನ್ನು ಹೆಚ್ಚಾಗಿ ಹೊಂದಿದ್ದು ಅದು ಗುರುತಿಸಲಾಗದ ಅಸ್ಪಷ್ಟ ಸ್ವಾದವನ್ನು ಹೊಂದಿದೆ.
ಗುಣಮಟ್ಟದ ಕಾಫಿಯನ್ನು ಬೆಳೆಸುವುದು
ಗುಣಮಟ್ಟದ ಕಾಫಿಯನ್ನು ಬೆಳೆಸುವುದರಲ್ಲಿ ಏನು ಒಳಗೂಡಿದೆ? ಒಂದೇ ಮಾತಿನಲ್ಲಿ ಹೇಳುವುದಾದರೆ, ಪರಿಶ್ರಮ! ತಕ್ಕಮಟ್ಟಿಗೆ ಸೂರ್ಯನ ಬೆಳಕು ಮತ್ತು ನೆರಳು ದೊರಕುವಂತೆ ವಿನ್ಯಾಸಿಸಲ್ಪಟ್ಟಿರುವ ನರ್ಸರಿ ಪಾತಿಗಳಲ್ಲಿ, ವಿಶೇಷವಾಗಿ ತಳಿಮಾಡಿದ ಬೀಜಗಳನ್ನು ಬಿತ್ತುವುದರೊಂದಿಗೆ ಅದರ ಕೆಲಸವು ಆರಂಭವಾಗುತ್ತದೆ. ಸುಮಾರು ಆರು ತಿಂಗಳುಗಳ ನಂತರ, ಕೃತಕ ಗೊಬ್ಬರ ಮತ್ತು ಖನಿಜಾಂಶಗಳಿಂದ ಹದಮಾಡಲ್ಪಟ್ಟಿರುವ ಮಣ್ಣಿನ ನೆಲದಲ್ಲಿ ಸಸಿಗಳನ್ನು ನಾಟಿಮಾಡಲಾಗುತ್ತದೆ. ಕಾಫಿ ಸಸಿಗಳನ್ನು ಇಳಿಜಾರು ನೆಲದ ಆಕೃತಿಯನ್ನು ಅನುಸರಿಸುವ ಸಾಲುಗಳಲ್ಲಿ ನೆಡಲಾಗುತ್ತದೆ. ಮಣ್ಣಿನ ಮತ್ತು ಮರಗಳ ಸಂರಕ್ಷಣೆಗೆ ಹಾಗೂ ಕಟಾವಿಗೆ ಹೆಚ್ಚು ಸುಲಭವಾಗಿರಲು ಸಸಿಗಳ ನಡುವೆ ಸಾಕಷ್ಟು ಅಂತರವನ್ನು ಬಿಡಲಾಗುತ್ತದೆ.
ಮರಗಳು ಹೆಚ್ಚು ಫಲನೀಡುವಂಥದ್ದಾಗಿರಬೇಕಾದರೆ, ಅವುಗಳಿಗೆ ವರ್ಷವಿಡೀ ಸತತವಾದ ಗಮನವು ಅಗತ್ಯ. ಇದು ಮಣ್ಣಿನಲ್ಲಿರುವ ಸತ್ವಗಳಿಗಾಗಿ ಪೈಪೋಟಿಮಾಡುವ ಕಳೆಗಳನ್ನು ತೆಗೆಯುವುದು ಹಾಗೂ ಬೀಜಕೊರಗಗಳು ಮತ್ತು ಕಾಫಿ ಶಿಲೀಂಧ್ರಗಳಂಥ ವಿನಾಶಕ ಕೀಟಗಳು ಮತ್ತು ರೋಗಗಳ ವಿರುದ್ಧ ರಕ್ಷಣೆಗಾಗಿ ಕ್ರಮಬದ್ಧವಾದ ಶಿಲೀಂಧ್ರನಾಶಕ ಮತ್ತು ಕೀಟನಾಶಕಗಳನ್ನು ಸಿಂಪಡಿಸುವುದನ್ನು ಒಳಗೂಡಿಸುತ್ತದೆ.
ಎಳೆ ಗಿಡವು ಫಲ ನೀಡಲು ಕಡಿಮೆಪಕ್ಷ ಎರಡು ವರ್ಷಗಳನ್ನಾದರೂ ತೆಗೆದುಕೊಳ್ಳುತ್ತದೆ. ಕೊಯ್ಲಿನ ಸಮಯವು ಸನ್ನಿಹಿತವಾದಂತೆ ಕೆಲಸವೂ ಒಮ್ಮಿಂದೊಮ್ಮೆಲೇ ಹೆಚ್ಚಾಗುತ್ತದೆ. ಕಾಸ್ಟರೀಕ ಮತ್ತು ಕೊಲಂಬಿಯದಂಥ ದೇಶಗಳಲ್ಲಿ ಅನುಸರಿಸುವಂತೆ ಹಣ್ಣಾಗಿರುವ ಕಾಫಿ ಚೆರಿಹಣ್ಣುಗಳನ್ನು ಮಾತ್ರ ಕೈಗಳಿಂದ ಒಂದೊಂದಾಗಿ ಕೀಳುವುದೇ ತಕ್ಕ ವಿಧಾನವಾಗಿದೆ.
ಈ ರೀತಿ ಕೊಯ್ಯಲ್ಪಡುವ ಚೆರಿಹಣ್ಣುಗಳನ್ನು ಸಾಮಾನ್ಯವಾಗಿ ಆರ್ದ್ರ ಪ್ರಕ್ರಿಯೆಯೆಂದು ಕರೆಯಲ್ಪಡುವ ಕಾರ್ಯವಿಧಾನದ ಮೂಲಕ ಪರಿಷ್ಕರಿಸಲಾಗುತ್ತದೆ. ಈ ವಿಧಾನದಲ್ಲಿ ಚೆರಿಹಣ್ಣುಗಳನ್ನು ತಿಳ್ಳು ತೆಗೆದುಹಾಕುವ ಯಂತ್ರಗಳಲ್ಲಿ ಹಾಕಲಾಗುತ್ತದೆ. ಅದು ಬೀಜದಿಂದ ಹೆಚ್ಚಿನಾಂಶದ ತಿರುಳನ್ನು ಬೇರ್ಪಡಿಸುತ್ತದೆ. ಅನಂತರ ಬೀಜಗಳನ್ನು ಒಂದರಿಂದ ಮೂರು ದಿನಗಳವರೆಗೂ ತೊಟ್ಟಿಗಳಲ್ಲಿ ಇಡಲಾಗುತ್ತದೆ, ಈ ಸಮಯಾವಧಿಯಲ್ಲಿ ಸ್ವಾಭಾವಿಕವಾಗಿ ಉಂಟಾಗುವ ಕಿಣ್ವಗಳು ಉಳಿದಿರುವ ತಿರುಳಿಗೆ ಹುಳಿ ಹಿಡಿಸುವ ಮೂಲಕ ಅದನ್ನು ಕೊಳೆಯುವಂತೆ ಮಾಡುತ್ತವೆ. ತಿರುಳಿನ ಕೊನೆಯ ಅವಶೇಷಗಳನ್ನೂ ತೆಗೆಯಲು ನಂತರ ಬೀಜಗಳನ್ನು ತೊಳೆಯಲಾಗುತ್ತದೆ. ಕೆಲವನ್ನು ಕಾಂಕ್ರಿಟಿನ ಚಾವಣಿಗಳ ಮೇಲೆ ಇಲ್ಲವೆ ಒಣಗಿಸುವ ಟೇಬಲುಗಳ ಮೇಲೆ ಹರಡಿ ಬಿಸಿಲಿನಲ್ಲಿ ಒಣಗಿಸಲಾಗುತ್ತದೆ ಮತ್ತು ಕೆಲವನ್ನು ಶುಷ್ಕ ಗಾಳಿಯ ಡ್ರೈಯರುಗಳಲ್ಲಿ ಹಾಯ್ದು ಹೋಗುವಂತೆ ಮಾಡಲಾಗುತ್ತದೆ. ಅನಂತರ, ಬೀಜದ ಸುತ್ತಲೂ ಇರುವ, ಬೆಳ್ಳಿಬಣ್ಣದ ಸಿಪ್ಪೆ ಮತ್ತು ಹೊಟ್ಟು ಸೇರಿರುವ ಒಣಸಿಪ್ಪೆಯ ಪದರುಗಳನ್ನು ಯಾಂತ್ರಿಕವಾಗಿ ತೆಗೆಯಲಾಗುತ್ತದೆ. ಆರ್ದ್ರ ಪ್ರಕ್ರಿಯೆಯ ಸಮಯದಲ್ಲಿ ಉಂಟಾಗುವ ಹುದುಗಿಸುವಿಕೆಯೊಂದಿಗೆ ಕೇವಲ ಪೂರ್ತಿ ಹಣ್ಣಾಗಿರುವ ಚೆರಿಗಳನ್ನು ಮಾತ್ರ ಉಪಯೋಗಿಸುವ ಮೂಲಕ ಅತ್ಯುತ್ತಮ ಗುಣಮಟ್ಟದ ಸೌಮ್ಯ ಕಾಫಿಯನ್ನು ತಯಾರಿಸಲಾಗುತ್ತದೆ.
ಜಗತ್ತಿನ ಅತ್ಯಂತ ಹೆಚ್ಚಿನ ಕಾಫಿ ಉತ್ಪಾದಕ ದೇಶವಾದ ಬ್ರೆಸಿಲಿನಲ್ಲಿ, ಬಹುತೇಕ ಬೆಳೆಗಾರರು ಡೆರೀಸ ಎಂದು ಹೆಸರುವಾಸಿಯಾಗಿರುವ ಕೊಯ್ಲಿನ ವಿಧಾನವನ್ನು ಅನುಸರಿಸುತ್ತಾರೆ. ಕಾಫಿ ಬೀಜಗಳು ಹಣ್ಣಾಗಲಿರುವ ಯಾವುದೇ ಹಂತದಲ್ಲಿದ್ದರೂ ಒಂದೇ ಸಮಯದಲ್ಲಿ ರೆಂಬೆಗಳಿಂದ ಎಲ್ಲಾ ಚೆರಿಗಳನ್ನು ಕೈಯಿಂದ ಕೀಳುವ ಮೂಲಕ ಕಟಾವು ಮಾಡಲಾಗುತ್ತದೆ. ಇತ್ತೀಚೆಗೆ, ಕೆಲವು ಬೆಳೆಗಾರರು ಉತ್ಪಾದನೆ ಮತ್ತು ಗುಣಮಟ್ಟವನ್ನು ಹೆಚ್ಚಿಸಲು, ಯಾಂತ್ರಿಕ ಇಲ್ಲವೆ ಅರೆಯಾಂತ್ರಿಕ ಕೊಯ್ಲಿನ ವಿಧಾನದ ಕಡೆಗೆ ತಿರುಗುತ್ತಿದ್ದಾರೆ. ಒಂದು ವಿಧಾನವು, ಕೈಯಲ್ಲಿ ಹಿಡಿದು ಉಪಯೋಗಿಸುವ ನ್ಯುಮ್ಯಾಟಿಕ್ ಯಂತ್ರವಾಗಿದೆ. ಇದರ ತುದಿಯಲ್ಲಿ ಕಂಪಿಸುವ “ಬೆರಳುಗಳ” ಉದ್ದ ತೋಳಿದ್ದು ಅದು ಮರದ ರೆಂಬೆಗಳನ್ನು ಕುಲುಕಿಸುವ ಮೂಲಕ ಹಣ್ಣಾದ ಚೆರಿಗಳು ಮಾತ್ರ ನೆಲಕ್ಕೆ ಬೀಳುವಂತೆ ಮಾಡುತ್ತವೆ.
ಈ ರೀತಿ ಕೆಳಗೆ ಬಿದ್ದ ಚೆರಿಗಳನ್ನು ಒಟ್ಟುಗೂಡಿಸಿದ ನಂತರ, ಅದರಲ್ಲಿರುವ ಕಸ-ಕಡ್ಡಿ ಮತ್ತು ಎಲೆಗಳನ್ನು ತೆಗೆಯಲು ಯಾಂತ್ರಿಕವಾಗಿ ಇಲ್ಲವೆ ಕೈಗಳಿಂದ ಜಲ್ಲಡಿ ಹಿಡಿಯಬೇಕಾಗುತ್ತದೆ. ಅನಂತರ ಚೆರಿಗಳನ್ನು 60 ಲೀಟರಿನ ಬುಟ್ಟಿಗಳಲ್ಲಿ ಹಾಕಲಾಗುತ್ತದೆ. ಜಲ್ಲಡಿ ಹಿಡಿದ ಚೆರಿಗಳನ್ನು ಕಾಂಕ್ರೀಟಿನ ಬಾನೆಗಳಲ್ಲಿ ಇಲ್ಲವೆ ಅದಕ್ಕಾಗಿಯೇ ತಯಾರಿಸಲ್ಪಟ್ಟಿರುವ ಯಂತ್ರಗಳಲ್ಲಿ ತೊಳೆಯಲಾಗುತ್ತದೆ. ಈ ತೊಳೆಯುವ ಪ್ರಕ್ರಿಯೆಯು, ಹಣ್ಣಾದ ಚೆರಿಗಳನ್ನು ಕೊಳೆಯಲಾರಂಭಿಸಿರುವ ಹಳೇ ಒಣಚೆರಿಗಳಿಂದ ಬೇರ್ಪಡಿಸುತ್ತದೆ.
ಒಮ್ಮೆ ತೊಳೆದಾದ ನಂತರ, ಕಾಫಿಯನ್ನು ಬಿಸಿಲಿನಲ್ಲಿ ಒಣಗಿಸುವುದಕ್ಕಾಗಿ 15ರಿಂದ 20 ದಿನಗಳ ವರೆಗೆ ಸಿಮೆಂಟಿನ ಚಾವಣಿಗಳ ಮೇಲೆ ಹರಡಿಸಲಾಗುತ್ತದೆ. ಈ ಸಮಯದಲ್ಲಿ ಬೀಜಗಳು ಒಂದೇ ಸಮನಾಗಿ ಒಣಗುವುದಕ್ಕಾಗಿ ಹೆಚ್ಚುಕಡಿಮೆ ಪ್ರತಿ 20 ನಿಮಿಷಕ್ಕೊಮ್ಮೆ ಅವುಗಳನ್ನು ತಿರುಗಿಸಲಾಗುತ್ತದೆ. ಒಣಗಿಸುವ ಪ್ರಕ್ರಿಯೆಯನ್ನು ತ್ವರಿತಗೊಳಿಸಲಿಕ್ಕಾಗಿ ಯಾಂತ್ರಿಕ ಡ್ರೈಯರುಗಳನ್ನು ಕೆಲವೊಮ್ಮೆ ಉಪಯೋಗಿಸಲಾಗುತ್ತದೆ. ಬೀಜಗಳು ತೀರ ಒಣಗದಂತೆ ಕಾಫಿಯ ಆರ್ದ್ರತೆಯ ಮಟ್ಟದ ಮೇಲೆ ಗಮನವಿಡಬೇಕು, ಇಲ್ಲದಿದ್ದರೆ ಬೀಜಗಳು ಭಿದುರವಾಗುತ್ತ ಒಡೆದುಹೋಗುವುದು ಮಾತ್ರವಲ್ಲದೆ ಅವುಗಳ ಬೆಲೆಯನ್ನು ತಗ್ಗಿಸುತ್ತದೆ. ತಕ್ಕ ಆರ್ದ್ರತೆಯ ಪರಿಮಾಣವು ಸುಮಾರು 11ರಿಂದ 12 ಪ್ರತಿಶತದಷ್ಟು ಮುಟ್ಟಿದೊಡನೆ ಕಾಫಿ ಬೀಜದಿಂದ ಸಿಪ್ಪೆಯನ್ನು ಬೇರ್ಪಡಿಸಲು ಸಿಪ್ಪೆಸುಲಿಯುವ ಯಂತ್ರದಲ್ಲಿ ಹಾಕಲಾಗುತ್ತದೆ. ಅನಂತರ, ಬೀಜಗಳನ್ನು 60 ಕಿಲೋಗ್ರ್ಯಾಮ್ನ ಗೋಣಿಚೀಲಗಳಲ್ಲಿ ತುಂಬಿಸಲಾಗುತ್ತದೆ. ಈ ಹಂತದಲ್ಲಿ ಕಾಫಿಯನ್ನು ಸಾಮಾನ್ಯವಾಗಿ ಸಹಕಾರಿಗಳಿಗೆ ಸಾಗಿಸಲಾಗುತ್ತದೆ, ಅಲ್ಲಿ ಅವುಗಳನ್ನು ವರ್ಗೀಕರಿಸಿ ಇನ್ನೂ ಹೆಚ್ಚಿನ ಪ್ರಕ್ರಿಯೆಗೊಳಪಡಿಸಲಾಗುತ್ತದೆ.
ವರ್ಗೀಕರಣ
ಸಹಕಾರಿಗಳಲ್ಲಿ ಕಾಫಿ ಚೀಲಗಳನ್ನು ಟ್ರಕ್ಕುಗಳಿಂದ ಒಂದೊಂದಾಗಿ ಕೆಳಗಿಳಿಸಲಾಗುತ್ತದೆ. ಕೆಲಸಗಾರರು ತಮ್ಮ ಹೊರೆಗಳನ್ನು ಕೆಳಗಿಳಿಸುವ ಮುನ್ನ, ಉದ್ದವಾದ ಮತ್ತು ಮೊನಚಾದ ಉಪಕರಣದಿಂದ ಪ್ರತಿಯೊಂದು ಚೀಲವನ್ನು ಚುಚ್ಚಿ ಅದರಲ್ಲಿರುವ ಸ್ಯಾಂಪಲನ್ನು ತೆಗೆಯುವ ಓರ್ವ ವ್ಯಕ್ತಿಯನ್ನು ಅವರು ದಾಟಿಹೋಗುತ್ತಾರೆ. ಒಂದೇ ಸರಕುಗಾಡಿಯ ಎಲ್ಲಾ ಚೀಲಗಳಿಂದಲೂ ತೆಗೆದ ಸ್ಯಾಂಪಲುಗಳನ್ನು ನಂತರ ಒಂದೇ ಸ್ಯಾಂಪಲಾಗಿ ಒಟ್ಟುಗೂಡಿಸಿ, ಅದಕ್ಕೆ ಲೇಬಲ್ ಹಚ್ಚಿ ವರ್ಗೀಕರಿಸಲಾಗುತ್ತದೆ.
ಒಮ್ಮೆ ಸ್ಯಾಂಪಲುಗಳನ್ನು ತೆಗೆದಾದ ನಂತರ, ಬೇರೆಬೇರೆ ಸರಕುಗಾಡಿಗಳಿಂದ ತೆಗೆದ ಕಾಫಿಯನ್ನು ಒಟ್ಟುಗೂಡಿಸಿ ಅವುಗಳ ಗುಣಮಟ್ಟವನ್ನು ಹೆಚ್ಚಿಸಲು ಇನ್ನೂ ಹೆಚ್ಚಿನ ಪರಿಷ್ಕರಣೆಗೆ ಒಳಪಡಿಸಲಾಗುತ್ತದೆ. ಮೊದಲಾಗಿ, ಅಶುದ್ಧತೆಗಳನ್ನು ಬೇರ್ಪಡಿಸುವ ಯಂತ್ರದಲ್ಲಿ ಅವುಗಳನ್ನು ಹಾದುಹೋಗುವಂತೆ ಮಾಡಲಾಗುತ್ತದೆ. ಎರಡನೆಯದಾಗಿ, ಬೀಜಗಳನ್ನು ಅವುಗಳ ಗಾತ್ರಕ್ಕನುಸಾರ ಬೇರ್ಪಡಿಸುವ ಯಾಂತ್ರಿಕ ಜಲ್ಲಡಿಯಲ್ಲಿ ಹಾದುಹೋಗುವಂತೆ ಮಾಡಲಾಗುತ್ತದೆ. ಅನಂತರ, ಅವುಗಳ ತೂಕಕ್ಕನುಸಾರ ಬೇರ್ಪಡಿಸುವ ಕಂಪಿಸುವ ಮೇಜಿನ ಮೂಲಕ ಅವು ಮುಂದೆ ಹೋಗುತ್ತವೆ. ಇದಾದ ನಂತರ, ಬೀಜಗಳನ್ನು ಇಲೆಕ್ಟ್ರಾನಿಕ್ ಬೇರ್ಪಡಿಸುವ ಯಂತ್ರಕ್ಕೆ ಒಯ್ಯಲಾಗುತ್ತದೆ. ಅಲ್ಲಿ ಕಷಾಯವಿಳಿಸಿದ ಕಾಫಿಯ ಸ್ವಾದವನ್ನು ಕೆಡಿಸಬಹುದಾದ ಯಾವುದೇ ಹಸಿರು ಇಲ್ಲವೇ ಕಪ್ಪು ಬೀಜಗಳು ತೆಗೆದುಹಾಕಲ್ಪಡುತ್ತವೆ. ಉಳಿದವುಗಳನ್ನು ನಂತರ ಉಗ್ರಾಣಸ್ಥಳಕ್ಕೆ ಸಾಗಿಸಲಾಗುತ್ತದೆ, ಆಮೇಲೆ ಅವುಗಳನ್ನು ಚೀಲಗಳಲ್ಲಿ ಸುರಿಯಲಾಗುತ್ತದೆ. ಒಂದೇ ರೀತಿಯ ಗಾತ್ರ ಹಾಗೂ ಗುಣಮಟ್ಟದ ಬೀಜಗಳನ್ನು ಹೊಂದಿರುವ ಚೀಲಗಳು, ರಫ್ತುಗಾರರಿಗೆ ಇಲ್ಲವೆ ಸ್ಥಳೀಯ ಮಾರಾಟಗಾರರಿಗೆ ಮಾರಲು ಸಿದ್ಧವಾಗಿರುತ್ತವೆ.
ಮುಂಚಿತವಾಗಿ ತೆಗೆದುಕೊಂಡಿದ್ದ ಆ ಸ್ಯಾಂಪಲುಗಳು ಹೇಗೆ ಉಪಯೋಗಿಸಲ್ಪಡುತ್ತವೆ? ಪ್ರತಿಯೊಬ್ಬ ಬೆಳೆಗಾರನು ತಾನು ಬೆಳೆಸಿದ ಕಾಫಿ ಬೆಳೆಗೆ ಪಡೆದುಕೊಳ್ಳಲಿರುವ ಬೆಲೆಯನ್ನು ನಿರ್ಧರಿಸುವ ಸಲುವಾಗಿ ಅವುಗಳನ್ನು ವರ್ಗೀಕರಿಸಲಾಗುತ್ತದೆ. ಪ್ರಥಮವಾಗಿ, ಮುನ್ನೂರು ಗ್ರ್ಯಾಮ್ ಸ್ಯಾಂಪಲಿನಲ್ಲಿರುವ ನ್ಯೂನತೆಗಳ ಮೇಲೆ ಆಧಾರಿತಗೊಂಡು, ಅವುಗಳ ವರ್ಗಕ್ಕೆ ತಕ್ಕಂತೆ ದರ್ಜೆ ನೀಡಲಾಗುತ್ತದೆ. ನ್ಯೂನತೆಗಳಲ್ಲಿ, ಕಪ್ಪು, ಹಸಿರು ಇಲ್ಲವೇ ಒಡೆದಿರುವ ಬೀಜಗಳು ಹಾಗೂ ಹೊಟ್ಟು, ಕಡ್ಡಿ ಮತ್ತು ಕಲ್ಲು ಹರಳುಗಳಂತಹ ಅಶುದ್ಧಗಳೂ ಸೇರಿವೆ. ಆಮೇಲೆ, ಬೀಜಗಳನ್ನು ಒಂದರ ನಂತರ ಇನ್ನೊಂದು ಜರಡಿಗಳಲ್ಲಿ ಹಾಕುವ ಮೂಲಕ ಅವುಗಳನ್ನು ಗಾತ್ರಕ್ಕನುಸಾರ ಬೇರ್ಪಡಿಸಲಾಗುತ್ತದೆ.
ಅಂತಿಮವಾಗಿ ಸ್ವಾದದ ಪರೀಕ್ಷೆಯು ಪ್ರಾರಂಭವಾಗುತ್ತದೆ. ಸ್ಯಾಂಪಲುಗಳನ್ನು ಸ್ವಲ್ಪ ಹುರಿದು, ನಂತರ ಪುಡಿಮಾಡಲಾಗುತ್ತದೆ ಮತ್ತು ಅವುಗಳಲ್ಲಿ ಕೊಂಚ ಭಾಗವನ್ನು ಅಳತೆಮಾಡಿ ಹಲವು ಲೋಟಗಳಿಗೆ ಹಾಕಲಾಗುತ್ತದೆ. ಕುದಿಯುವ ನೀರನ್ನು ಅದಕ್ಕೆ ಸೇರಿಸಿ, ಮಿಶ್ರಣವನ್ನು ಕಲಕಲಾಗುತ್ತದೆ. ಒಬ್ಬ ಅನುಭವಸ್ಥ ರುಚಿಗಾರನು, ಪ್ರತಿಯೊಂದು ಸ್ಯಾಂಪಲುಗಳಿಂದ ಹೊರಬರುವ ಪರಿಮಳವನ್ನು ಮೂಸಿ ನೋಡುತ್ತಾನೆ. ಸ್ಯಾಂಪಲುಗಳು ತಣ್ಣಗಾಗಲು ಅನುಮತಿಸಿ, ಪುಡಿಗಳು ತಳಸೇರಿದ ನಂತರ, ಅವನು ಸಣ್ಣ ಸೌಟನ್ನು ಸ್ಯಾಂಪಲಿನಲ್ಲಿ ಮುಳುಗಿಸಿ ತನ್ನ ಬಾಯಿಗೆ ಹೀರಿಕೊಂಡು, ಕೂಡಲೇ ಅದನ್ನು ಉಗುಳಿಬಿಡುತ್ತಾ ವೇಗವಾಗಿ ಮುಂದಿನ ಲೋಟದೆಡೆಗೆ ಸಾಗಿ ಇದೇ ಕ್ರಿಯೆಯನ್ನು ಅಲ್ಲೂ ಮುಂದುವರಿಸುತ್ತಾನೆ. ಎಲ್ಲಾ ಸ್ಯಾಂಪಲುಗಳ ರುಚಿಯನ್ನು ಸವಿದ ನಂತರ, ಅವನು ಸೌಮ್ಯ (ಆಹ್ಲಾದಕರ, ತಿಳಿಯಾದ, ಹೆಚ್ಚುಕಡಿಮೆ ಸಿಹಿಯಾಗಿರುವ) ಕಾಫಿಯಿಂದ ಹಿಡಿದು ಕಡು (ಆಯೊಡಿನಿನ ರುಚಿಯನ್ನು ಹೋಲುವ ತೀಕ್ಷ್ಣ ರುಚಿಯನ್ನು ಹೊಂದಿರುವ) ಕಾಫಿಯವರೆಗೆ ದರ್ಜೆ ನೀಡುತ್ತಾನೆ.
ಒಬ್ಬ ರುಚಿಗಾರನಿಗೆ ಸೂಕ್ಷ್ಮವಾದ ರಸನೇಂದ್ರಿಯವಿರಬೇಕು. ಕಾಫಿಯ ಅನೇಕ ಸೂಕ್ಷ್ಮ ಸುವಾಸನೆಗಳನ್ನು ನಿಷ್ಕೃಷ್ಟವಾಗಿ ಗುರುತಿಸಬೇಕಾದರೆ ಅವನು ಅನುಭವಸ್ಥನು ಮತ್ತು ತುಂಬ ಬುದ್ಧಿವಂತನು ಆಗಿರಬೇಕು. ಕಾಫಿ ಬೆಲೆಯನ್ನು ನಿರ್ಧರಿಸುವುದಕ್ಕೆ ಮೂಲ ಕಾರಣವಾಗಿರುವುದರೊಂದಿಗೆ, ಗುಣಮಟ್ಟದ ಕಾಫಿಯನ್ನು ತಯಾರಿಸುವುದರಲ್ಲಿ ಒಳಗೂಡಿರುವ ಸ್ವಾದವನ್ನು ನೋಡುವುದು ಮುಂದಿನ ಹೆಜ್ಜೆಗೆ ಬಹಳ ಪ್ರಾಮುಖ್ಯವಾಗಿದೆ.
ಬೆರೆಸುವುದು ಮತ್ತು ಹುರಿಯುವುದು
ಸಾಮಾನ್ಯವಾಗಿ ಹಸಿ ಬೀಜಗಳೊಂದಿಗೆ ಮಾಡಲಾಗುವ ಬೆರೆಸುವಿಕೆಯು, ಕಾಫಿಯ ರುಚಿ, ಪರಿಮಳ, ಸತ್ವ ಮತ್ತು ತೋರ್ಕೆಯಂಥ ಅನುಕೂಲ ಗುಣಗಳನ್ನು ವರ್ಧಿಸುವ ಸಮತೂಲನವುಳ್ಳ ಉತ್ಪನ್ನವನ್ನು ತಯಾರಿಸಲು ಸಂಪೂರಕ ಗುಣಲಕ್ಷಣಗಳೊಂದಿಗೆ ಕಾಫಿಗಳನ್ನು ಮಿಶ್ರಣಗೊಳಿಸುವ ಕಲೆಯಾಗಿದೆ. ವಿಶೇಷವಾದ ವೈಶಿಷ್ಟ್ಯಗಳೊಂದಿಗೆ ಸ್ವಾದಿಷ್ಟಕರವಾದ ಪಾನೀಯವನ್ನು ತಯಾರಿಸುವಾಗ ಏಕರೀತಿಯ ಸಾಂದ್ರತೆಯನ್ನು ಕಾಪಾಡಿಕೊಳ್ಳುವುದು ತಾನೇ ಮಿಶ್ರಕರಿಗೆ ಪಂಥಾಹ್ವಾನವಾಗಿದೆ.
ಮುಂದಿನ ಹೆಜ್ಜೆಯಾದ ಹುರಿಯುವಿಕೆಯು ಕೂಡ ಗುಣಮಟ್ಟದ ಕಾಫಿಗೆ ತುಂಬ ಮಹತ್ವದ್ದಾಗಿದೆ. ಈ ಹೆಜ್ಜೆಯಲ್ಲಿ, ಬೀಜದೊಳಗೆ ಜಟಿಲವಾದ ರಾಸಾಯನಿಕ ಪರಿವರ್ತನೆಗಳು ನಡೆಯುತ್ತ ಇದು ಕಾಫಿಯ ಸ್ವಾಭಾವಿಕ ಪರಿಮಳವನ್ನು ಹೊರಸೂಸುತ್ತದೆ. ಬಯಸುವ ರುಚಿ ಮತ್ತು ಬಳಸಲ್ಪಡುವ ಕುದಿಸುವ ವಿಧಾನದ ಮೇಲಾಧರಿಸಿ ಹುರಿದ ಕಾಫಿಯು ಮಂದ, ಮಧ್ಯಮ ಇಲ್ಲವೆ ಕಡು ಬಣ್ಣದ್ದಾಗಿರಸಾಧ್ಯವಿದೆ. ಆದರೆ, ಬೀಜಗಳನ್ನು ಹೆಚ್ಚು ಹುರಿಯುವುದರಿಂದ ಅವುಗಳಲ್ಲಿರುವ ಪರಿಮಳ ಸೂಸುವ ಎಣ್ಣೆಗಳು ನಷ್ಟವಾಗಿ ಅವುಗಳ ಮೇಲ್ಮೈಯಲ್ಲಿ ಹೊಳಪುಂಟಾಗುವಂತೆ ಮಾಡಸಾಧ್ಯವಿದೆ. ಇದು ಸ್ವಲ್ಪವೇ ಪರಿಮಳವಿರುವ ಕಹಿಯಾದ ಕಾಫಿಗೆ ಕಾರಣವಾಗುತ್ತದೆ.
ಉತ್ತಮ ಗುಣಮಟ್ಟದ ಕಾಫಿಯನ್ನು ಉತ್ಪಾದಿಸಲು ಸರಿಯಾಗಿ ಪುಡಿಮಾಡುವುದು ಸಹ ಪ್ರಾಮುಖ್ಯವಾಗಿದೆ. ಪುಡಿಯ ಗಾತ್ರವು ಕುದಿಸುವ ವಿಧಾನದ ಮೇಲೆ ಹೊಂದಿಕೊಂಡಿರುತ್ತದೆ. ಉದಾಹರಣೆಗೆ, ಮಧ್ಯಮ ಗಾತ್ರದ ಪುಡಿಯನ್ನು, ಬಟ್ಟೆ ಇಲ್ಲವೆ ಪೇಪರ್ ಫಿಲ್ಟರನ್ನು ಬಳಸಿ ತಯಾರಿಸುವ ಕಾಫಿಗಾಗಿ ಉಪಯೋಗಿಸಲಾಗುತ್ತದೆ. ನುಣ್ಣಗೆ ಪುಡಿಮಾಡಿದ ಕಾಫಿಯನ್ನು ಫಿಲ್ಟರ್ ಮಾಡದಿರುವ ಟರ್ಕಿಷ್ ಕಾಫಿಗಾಗಿ ಉಪಯೋಗಿಸಲಾಗುತ್ತದೆ.
ಒಮ್ಮೆ ಪುಡಿಮಾಡಿದ ಮೇಲೆ, ಕಾಫಿಯು ಪ್ಯಾಕ್ ಮಾಡಲ್ಪಟ್ಟು ರವಾನಿಸಲ್ಪಡುತ್ತದೆ. ಪ್ಲ್ಯಾಸ್ಟಿಕ್ಗಳಲ್ಲಿ ತುಂಬಿಸಿಡಲ್ಪಟ್ಟ ಕಾಫಿಯು ಸುಮಾರು 60 ದಿನಗಳ ವರೆಗೆ ಉಳಿಯುತ್ತದೆ. ಆದರೆ ಗಾಳಿಯಾಡದಂತೆ ತುಂಬಿಸಿಡಲ್ಪಟ್ಟ ಕಾಫಿಯು ಒಂದು ವರ್ಷದ ವರೆಗೂ ಬರುತ್ತದೆ. ತೆರೆಯಲ್ಪಟ್ಟಾಗ ಕಾಫಿಯನ್ನು ಬಿಗಿಯಾದ ಮುಚ್ಚಳವಿರುವ ಡಬ್ಬಗಳಲ್ಲಿ ಮುಚ್ಚಿಡಬೇಕು. ಫ್ರಿಜ್ನಲ್ಲಿ ಇಟ್ಟರೆ ಇನ್ನೂ ಉತ್ತಮ.
‘ಪರಿಪೂರ್ಣ ಕಾಫಿ’ಯನ್ನು ತಯಾರಿಸುವುದು
ನೆಡುವುದು, ಬೆಳೆಸುವುದು, ಕಟಾವು, ಪರಿಷ್ಕರಣೆ, ವರ್ಗೀಕರಣ, ಬೆರೆಸುವಿಕೆ, ಹುರಿಯುವಿಕೆ ಮತ್ತು ಪುಡಿಮಾಡುವಿಕೆಯ ಈ ಎಲ್ಲಾ ಕೆಲಸದ ನಂತರ, ಅಂತಿಮವಾಗಿ ನೀವು ಕಾಯುತ್ತಿರುವ ವಿಭಾಗಕ್ಕೆ ನಾವು ಬರುತ್ತೇವೆ. ಅದೇ ‘ಪರಿಪೂರ್ಣ ಕಾಫಿ’ಯ ತಯಾರಿಸುವಿಕೆ! ಬೆರೆಸುವಿಕೆಯಲ್ಲಿ ಅನೇಕ ವಿಧಾನಗಳಿವೆ. ಟರ್ಕಿಷ್, ಆಟೋಮ್ಯಾಟಿಕ್ ಡ್ರಿಪ್ ಮತ್ತು ಇಟಾಲಿಯನ್ ಮೋಕಾ ಎಂಬವು ಕೆಲವೇ ಹೆಸರುಗಳು ಮಾತ್ರ. ಇವುಗಳಲ್ಲಿ ಪ್ರತಿಯೊಂದನ್ನು ಬೇರೆಬೇರೆ ವಿಧಾನಗಳಲ್ಲಿ ತಯಾರಿಸಬೇಕಾಗುತ್ತದೆ. ಸಾಮಾನ್ಯವಾಗಿ ಒಂದು ಲೀಟರ್ ನೀರಿಗೆ 6ರಿಂದ 8 ಟೇಬಲ್ ಚಮಚದಷ್ಟು ಕಾಫಿ ಪುಡಿಯನ್ನು ಉಪಯೋಗಿಸಲು ಶಿಫಾರಸ್ಸು ಮಾಡಲಾಗುತ್ತದೆ. ಸದ್ಯಕ್ಕೆ ಎಷ್ಟು ಅಗತ್ಯವಿದೆಯೋ ಅಷ್ಟನ್ನು ಮಾತ್ರ ತಯಾರಿಸಿ. ಸೋಸಿದ ಪುಡಿಯನ್ನು ಮತ್ತೆ ಎಂದೂ ಉಪಯೋಗಿಸಬೇಡಿ, ಮತ್ತು ಉಪಯೋಗಿಸಿದ ಕೂಡಲೇ ಕಾಫಿ ಪಾತ್ರೆಯನ್ನು, ಫಿಲ್ಟರ್ ಹಿಡಿಯನ್ನು ಮತ್ತು ಇತರ ಪಾತ್ರೆಗಳನ್ನು ನೀರಿನಿಂದ ಯಾವಾಗಲೂ ತೊಳೆಯಿರಿ.
ಮುಂದಿನ ಬಾರಿ ನೀವು ನಿಮ್ಮ ಅಚ್ಚುಮೆಚ್ಚಿನ ಕಾಫಿಯ ಪರಿಮಳ ಮತ್ತು ಸ್ವಾದವನ್ನು ಸವಿಯಲು ಕುಳಿತುಕೊಳ್ಳುವಾಗ, ಅದು ಬ್ರೆಸಿಲಿಯನ್ ಕಾಫೆಸೀನ್ಯೋ, ಅಥವಾ ಕೊಲಂಬಿಯನ್ ಟಿನ್ಟೋ, ಇಟ್ಯಾಲಿಯನ್ ಎಸ್ಪ್ರೆಸೋ ಇಲ್ಲವೆ ನಿಮ್ಮ ಸ್ವಂತ ಮಿಶ್ರಿತ ಕಾಫಿಯಾಗಿರಲಿ, ನೀವು ಒಂದು ಕ್ಷಣ ನಿಲ್ಲಿಸಿ ಲಭ್ಯವಿರುವ ಗುಣಮಟ್ಟದ ಆ ಕಾಫಿಯ ಹಿನ್ನೆಲೆಯಲ್ಲಿ ಅಡಗಿರುವ ಕಠಿಣ ಪರಿಶ್ರಮದ ಕುರಿತು ಏಕೆ ಯೋಚಿಸಬಾರದು? ಅದೇ, ತೋಟದಿಂದ ನಿಮ್ಮ ಲೋಟಕ್ಕೆ ಬರುವ ಕಾಫಿ!
[ಪುಟ 24 ರಲ್ಲಿರುವ ಚಿತ್ರ]
ನರ್ಸರಿಯಲ್ಲಿ ಸಸಿಗಳು ತಕ್ಕ ಮಟ್ಟಿಗೆ ಸೂರ್ಯನ ಬೆಳಕು ಮತ್ತು ನೆರಳನ್ನು ಪಡೆಯುತ್ತಿವೆ
[ಪುಟ 24 ರಲ್ಲಿರುವ ಚಿತ್ರ]
ಬಲಿತ ಕಾಫಿ ಮರಗಳ ತೋಟ
[ಪುಟ 25 ರಲ್ಲಿರುವ ಚಿತ್ರ]
ಕಾಫಿ ಚೆರಿಹಣ್ಣುಗಳನ್ನು ರೆಂಬೆಗಳಿಂದ ಕೀಳುವ ಮೂಲಕ ಕಟಾವು ಮಾಡಲಾಗುತ್ತಿದೆ
[ಪುಟ 25 ರಲ್ಲಿರುವ ಚಿತ್ರ]
ಬ್ರೆಸಿಲಿಯನ್ ಕಟಾವುಗಾರನು ಚೆರಿಹಣ್ಣುಗಳಿಂದ ಎಲೆ ಮತ್ತು ಕಸವನ್ನು ಕೈಯಿಂದ ಬೇರ್ಪಡಿಸುತ್ತಿರುವುದು
[ಪುಟ 26 ರಲ್ಲಿರುವ ಚಿತ್ರ]
ಮುನ್ನೂರು ಗ್ರ್ಯಾಮ್ ಬೀಜಗಳಲ್ಲಿರುವ ನ್ಯೂನತೆಗಳ ಸಂಖ್ಯೆಯನ್ನು ಲೆಕ್ಕಮಾಡುವ ಮೂಲಕ ಸ್ಯಾಂಪಲುಗಳನ್ನು ವರ್ಗೀಕರಿಸಲಾಗುತ್ತದೆ
[ಪುಟ 26 ರಲ್ಲಿರುವ ಚಿತ್ರ]
ಒಬ್ಬ ರುಚಿಗಾರನಿಗೆ ಅತ್ಯಂತ ಹೆಚ್ಚು ಅನುಭವವಿರಬೇಕು