ಯುವ ಜನರು ಪ್ರಶ್ನಿಸುವುದು . . .
ನಾನು ಸ್ವಪಕ್ಷಪಾತದೊಂದಿಗೆ ಹೇಗೆ ವ್ಯವಹರಿಸಬಲ್ಲೆ?
“ನನ್ನ ತಂಗಿ ನನಗಿಂತಲೂ ಎರಡು ವರ್ಷಗಳಷ್ಟು ಚಿಕ್ಕವಳಾಗಿದ್ದು, ಎಲ್ಲ ಗಮನವನ್ನು ಗಿಟ್ಟಿಸಿಕೊಳ್ಳುತ್ತಾಳೆ. . . . ಅದು ನ್ಯಾಯಸಮ್ಮತವಾಗಿ ತೋರುವುದಿಲ್ಲ.”—ರಿಬೆಕ.a
ನಿಮ್ಮ ಸಹೋದರ ಇಲ್ಲವೆ ಸಹೋದರಿಯು ಹೆಚ್ಚು ಗಮನವನ್ನು ಪಡೆದಷ್ಟು ನೀವು ಕಡೆಗಣಿಸಲ್ಪಟ್ಟಿದ್ದೀರಿ ಎಂಬ ಅನಿಸಿಕೆ ನಿಮ್ಮಲ್ಲಿ ಹೆಚ್ಚಾಗಬಹುದು. ಮತ್ತು, ಅಸಾಧಾರಣ ಸಾಮರ್ಥ್ಯಗಳಿರುವ, ಗಂಭೀರವಾದ ಸಮಸ್ಯೆಗಳನ್ನು ಅನುಭವಿಸುತ್ತಿರುವ, ಇಲ್ಲವೆ ನಿಮ್ಮ ಹೆತ್ತವರಂತಹದ್ದೇ ಆದ ಅಭಿರುಚಿಗಳು ಇಲ್ಲವೆ ವ್ಯಕ್ತಿತ್ವದ ಗುಣಗಳಿರುವ ಒಡಹುಟ್ಟಿದವರಿರುವಲ್ಲಿ, ಯಾವುದೇ ರೀತಿಯ ಗಮನವನ್ನು ಗಿಟ್ಟಿಸಿಕೊಳ್ಳಲು ನೀವು ಬಹಳವಾಗಿ ಶ್ರಮಿಸಬೇಕಾಗಬಹುದು! ಅದರ ಕುರಿತು ನೀವು ಎಷ್ಟು ಹೆಚ್ಚು ಯೋಚಿಸುತ್ತೀರೊ ಅಷ್ಟು ಹೆಚ್ಚು ನಿಮಗೆ ನೋವು ಮತ್ತು ಕೋಪದ ಅನಿಸಿಕೆಯಾಗಬಹುದು.b
ಆದಾಗಲೂ, ಬೈಬಲು ಎಚ್ಚರಿಸುವುದು: “ಭಯಪಡಿರಿ, ಪಾಪಮಾಡಬೇಡಿರಿ, ಮೌನವಾಗಿರಿ; ಹಾಸಿಗೆಯ ಮೇಲೆ ಇರುವಾಗ ಹೃದಯದಲ್ಲೇ ಆಲೋಚಿಸಿಕೊಳ್ಳಿರಿ.” (ಕೀರ್ತನೆ 4:4) ನೀವು ಕ್ಷೋಭೆಗೊಂಡವರೂ ಕೋಪಗೊಂಡವರೂ ಆಗಿರುವಾಗ, ನೀವು ಅನಂತರ ವಿಷಾದಿಸಬಹುದಾದ ವಿಷಯವನ್ನು ಹೇಳುವ ಇಲ್ಲವೆ ಮಾಡುವ ಸಾಧ್ಯತೆಯು ಬಹಳ ಹೆಚ್ಚಾಗಿರುತ್ತದೆ. ತನ್ನ ಸಹೋದರನಾದ ಹೇಬೆಲನು ದೇವರೊಂದಿಗೆ ಅನುಭವಿಸಿದ ಅನುಗ್ರಹಿತ ಸ್ಥಾನದ ವಿಷಯದಲ್ಲಿ ಕಾಯಿನನು ಹೇಗೆ ಕೆರಳಿದನೆಂಬುದನ್ನು ಜ್ಞಾಪಿಸಿಕೊಳ್ಳಿ. ದೇವರು ಅವನಿಗೆ ಎಚ್ಚರಿಕೆ ನೀಡಿದ್ದು: “ಪಾಪವು ನಿನ್ನನ್ನು ಹಿಡಿಯಬೇಕೆಂದು ಬಾಗಲಲ್ಲಿ ಹೊಂಚಿಕೊಂಡಿರುವದು; ಆದರೂ ನೀನು ಅದನ್ನು ವಶಮಾಡಿಕೊಳ್ಳಬೇಕು.” (ಆದಿಕಾಂಡ 4:3-16) ಕಾಯಿನನು ತನ್ನ ಅನಿಸಿಕೆಗಳನ್ನು ಹತೋಟಿಯಲ್ಲಿಟ್ಟುಕೊಳ್ಳಲು ತಪ್ಪಿಹೋದನು, ಮತ್ತು ಪರಿಣಾಮವು ವಿಪತ್ಕಾರಕವಾಗಿತ್ತು!
ನಿಜ, ನೀವು ಕಾಯಿನನಂತೆ ಒಬ್ಬ ಕೊಲೆಗಾರರಾಗುವ ಅಂಚಿನಲ್ಲೇನಿಲ್ಲ. ಹಾಗಿದ್ದರೂ, ಸ್ವಪಕ್ಷಪಾತವು ಘೋರವಾದ ಅನಿಸಿಕೆಗಳು ಹಾಗೂ ಭಾವನೆಗಳನ್ನು ಕೆರಳಿಸಬಲ್ಲದು. ಆದಕಾರಣ ಅಪಾಯಗಳು ನಿಮ್ಮ ಬಾಗಿಲಲ್ಲಿ ಹೊಂಚಿಕೊಂಡಿರಬಹುದು! ಅವುಗಳಲ್ಲಿ ಕೆಲವು ಯಾವುವು? ಮತ್ತು ಈ ಸನ್ನಿವೇಶದ ಮೇಲೆ ನೀವು ಹೇಗೆ ಜಯಸಾಧಿಸಬಲ್ಲಿರಿ?
ನಿಮ್ಮ ನಾಲಗೆಯನ್ನು ಅಂಕೆಯಲ್ಲಿಡಿ!
ಬೆತ್ 13 ವರ್ಷ ಪ್ರಾಯದವಳಾಗಿದ್ದಾಗ, ತನ್ನ ಹೆತ್ತವರು ತನ್ನ ತಮ್ಮನ ಪಕ್ಷವಹಿಸಿ, ತನ್ನನ್ನು ಅನುಚಿತವಾಗಿ ಉಪಚರಿಸಿದರೆಂದು ಅವಳಿಗನಿಸಿತು. ಅವಳು ಜ್ಞಾಪಿಸಿಕೊಳ್ಳುವುದು: “ನನ್ನ ತಾಯಿ ಮತ್ತು ನಾನು ಪರಸ್ಪರ ಬಹಳಷ್ಟು ಕಿರುಚಿದೆವು, ಆದರೆ ಅದು ಯಾವ ಒಳಿತನ್ನೂ ಮಾಡಲೇ ಇಲ್ಲ. ಅವರು ಹೇಳುತ್ತಿದ್ದದ್ದನ್ನು ನಾನು ಕೇಳಿಸಿಕೊಳ್ಳುತ್ತಿರಲಿಲ್ಲ ಮತ್ತು ನಾನು ಹೇಳುತ್ತಿದ್ದದ್ದನ್ನು ಅವರು ಕೇಳಿಸಿಕೊಳ್ಳುತ್ತಿರಲಿಲ್ಲ. ಆದುದರಿಂದ ಏನೂ ಸಾಧಿಸಲ್ಪಡುತ್ತಿರಲಿಲ್ಲ.” ಕಿರುಚುವುದು ಒಂದು ಕೆಟ್ಟ ಸನ್ನಿವೇಶವನ್ನು ಇನ್ನೂ ಕೆಟ್ಟದಾಗಿ ಮಾತ್ರ ಮಾಡುತ್ತದೆಂದು ನೀವು ಸಹ ಕಂಡುಕೊಂಡಿರಬಹುದು. ಎಫೆಸ 4:31 ಹೇಳುವುದು: “ಎಲ್ಲಾ ದ್ವೇಷ ಕೋಪ ಕ್ರೋಧ ಕಲಹ ದೂಷಣೆ ಇವುಗಳನ್ನೂ ಸಕಲ ವಿಧವಾದ ದುಷ್ಟತನವನ್ನೂ ನಿಮ್ಮಿಂದ ದೂರಮಾಡಿರಿ.”
ನಿಮ್ಮ ದೃಷ್ಟಿಕೋನವನ್ನು ವ್ಯಕ್ತಪಡಿಸಲು ನೀವು ಕಿರುಚಬೇಕಾದ ಅಗತ್ಯವಿಲ್ಲ. ಸಾಮಾನ್ಯವಾಗಿ ಒಂದು ಶಾಂತಚಿತ್ತ ಸಮೀಪಿಸುವಿಕೆಯು, ಉತ್ತಮವಾಗಿ ಕಾರ್ಯನಡೆಸುತ್ತದೆ. ಜ್ಞಾನೋಕ್ತಿ 25:15 ಹೇಳುವುದು: “ದೀರ್ಘಶಾಂತಿಯಿಂದ ಪ್ರಭುವನ್ನೂ ಸಮ್ಮತಿಪಡಿಸಬಹುದು; ಮೃದುವಚನವು ಎಲುಬನ್ನು ಮುರಿಯುವದು.” ಆದುದರಿಂದ ನಿಮ್ಮ ಹೆತ್ತವರು ಸ್ವಪಕ್ಷಪಾತದ ವಿಷಯವಾಗಿ ದೋಷಿಗಳಾಗಿರುವಂತೆ ತೋರುವಲ್ಲಿ, ಕಿರುಚಿ ಆರೋಪಗಳನ್ನು ಮಾಡಬೇಡಿ. ಸೂಕ್ತವಾದ ಸಮಯಕ್ಕಾಗಿ ಕಾದು, ತದನಂತರ ಅವರೊಂದಿಗೆ ಒಂದು ಶಾಂತಚಿತ್ತ, ಗೌರವಪೂರ್ಣವಾದ ವಿಧದಲ್ಲಿ ಮಾತಾಡಿರಿ.—ಜ್ಞಾನೋಕ್ತಿ 15:23ನ್ನು ಹೋಲಿಸಿರಿ.
ನೀವು ನಿಮ್ಮ ಹೆತ್ತವರ ಕುಂದುಕೊರತೆಗಳ ಮೇಲೆ ಕೇಂದ್ರೀಕರಿಸುವುದಾದರೆ, ಇಲ್ಲವೆ ಅವರೆಷ್ಟು “ಪಕ್ಷಪಾತಿಗಳು” ಎಂಬ ಕಾರಣಕ್ಕಾಗಿ ಅವರನ್ನು ಆಕ್ಷೇಪಿಸುವುದಾದರೆ, ನೀವು ಕೇವಲ ಅವರ ಮನಸ್ಸನ್ನು ಕೆಡಿಸುವಿರಿ ಇಲ್ಲವೆ ಅವರನ್ನು ರಕ್ಷಣಾತ್ಮಕ ಸನ್ನಿವೇಶದಲ್ಲಿ ಹಾಕುವಿರಿ. ಅದರ ಬದಲಿಗೆ ಅವರ ಕ್ರಿಯೆಗಳು ನಿಮ್ಮನ್ನು ಹೇಗೆ ಬಾಧಿಸಿವೆ ಎಂಬುದರ ಮೇಲೆ ಕೇಂದ್ರೀಕರಿಸಿರಿ. (‘ನೀವು ನನ್ನನ್ನು ಕಡೆಗಣಿಸುವಾಗ, ನನಗೆ ನಿಜವಾಗಿಯೂ ನೋವುಂಟಾಗುತ್ತದೆ.’) ಅವರು ನಿಮ್ಮ ಅನಿಸಿಕೆಗಳನ್ನು ಗಂಭೀರವಾಗಿ ಪರಿಗಣಿಸಲು ಪ್ರಚೋದಿಸಲ್ಪಡುವುದು ಸಂಭವನೀಯ. ಅಲ್ಲದೆ, “ಕಿವಿಗೊಡುವದರಲ್ಲಿ ತೀವ್ರವಾಗಿ” ಇರಿ. (ಯಾಕೋಬ 1:19) ನಿಮ್ಮ ಒಡಹುಟ್ಟಿದವರಿಗೆ ಹೆಚ್ಚಿನ ಗಮನವನ್ನು ಕೊಡುತ್ತಿರುವುದಕ್ಕಾಗಿ ನಿಮ್ಮ ಹೆತ್ತವರಲ್ಲಿ ನ್ಯಾಯಸಮ್ಮತವಾದ ಕಾರಣಗಳಿರಬಹುದು. ಬಹುಶಃ ನಿಮಗೆ ತಿಳಿಯದೆ ಇರುವ ಸಮಸ್ಯೆಗಳನ್ನು ಅವನು ಅನುಭವಿಸುತ್ತಿದ್ದಾನೆ.
ಆದರೆ, ನೀವು ಕೋಪಗೊಂಡಿರುವಾಗ, ಸಿಟ್ಟಿಗೆದ್ದು ಬಿರುಸಾಗಿ ಮಾತಾಡುವ ಪ್ರವೃತ್ತಿಯುಳ್ಳವರಾಗಿರುವಲ್ಲಿ ಆಗೇನು? ಜ್ಞಾನೋಕ್ತಿ 25:28, ತನ್ನ “ಆತ್ಮವನ್ನು ಸ್ವಾಧೀನಮಾಡಿಕೊಳ್ಳದವ”ನನ್ನು “ಗೋಡೆ ಬಿದ್ದ” ಪಟ್ಟಣಕ್ಕೆ ಹೋಲಿಸುತ್ತದೆ; ಅವನು ತನ್ನ ಸ್ವಂತ ಅಪರಿಪೂರ್ಣ ಆವೇಗಗಳಿಂದಲೇ ಸೋಲಿಸಲ್ಪಡುವ ಸಾಧ್ಯತೆಯಿದೆ. ಮತ್ತೊಂದು ಕಡೆಯಲ್ಲಿ, ನಿಮ್ಮ ಅನಿಸಿಕೆಗಳನ್ನು ನಿಯಂತ್ರಿಸುವ ಸಾಮರ್ಥ್ಯವು ನಿಜವಾದ ಬಲದ ಗುರುತಾಗಿರುತ್ತದೆ! (ಜ್ಞಾನೋಕ್ತಿ 16:32) ಹಾಗಾದರೆ, ನಿಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸುವ ಮೊದಲು ನೀವು ಶಾಂತರಾಗುವ ತನಕ, ಬಹುಶಃ ಮರುದಿನದ ವರೆಗೂ ಏಕೆ ಕಾಯಬಾರದು? ತಿರುಗಾಟಕ್ಕೆ ಹೋಗುವುದು ಇಲ್ಲವೆ ಒಂದಿಷ್ಟು ವ್ಯಾಯಾಮಗಳನ್ನು ಮಾಡುತ್ತಾ ಸನ್ನಿವೇಶದಿಂದ ದೂರ ಹೋಗುವುದು ಸಹಾಯಕರವೆಂದೂ ನೀವು ಕಂಡುಕೊಳ್ಳಬಹುದು. (ಜ್ಞಾನೋಕ್ತಿ 17:14) ನಿಮ್ಮ ತುಟಿಗಳನ್ನು ಹತೋಟಿಯಲ್ಲಿಟ್ಟುಕೊಳ್ಳುವ ಮೂಲಕ, ನೋಯಿಸುವಂತಹ ಇಲ್ಲವೆ ಅವಿವೇಕತನದ ವಿಷಯವನ್ನು ಹೇಳುವುದರಿಂದ ನೀವು ದೂರವಿರುವಿರಿ.—ಜ್ಞಾನೋಕ್ತಿ 10:19; 13:3; 17:27.
ನವಿರಾದ ಅವಿಧೇಯತೆ
ದೂರವಿರಿಸಬೇಕಾದ ಮತ್ತೊಂದು ಅಪಾಯವು ಅವಿಧೇಯತೆಯಾಗಿದೆ. ತನ್ನ ಚಿಕ್ಕ ತಮ್ಮನು ಕುಟುಂಬ ಬೈಬಲ್ ಅಧ್ಯಯನವನ್ನು ಭಂಗಗೊಳಿಸಿದಾಗ, ಎಂದಿಗೂ ಶಿಕ್ಷಿಸಲ್ಪಡುತ್ತಿರಲಿಲ್ಲವೆಂದು ಹದಿನಾರು ವರ್ಷ ಪ್ರಾಯದ ಮಾರೀ ಗಮನಿಸಿದಳು. ಈ ವ್ಯಕ್ತವಾದ ಪಕ್ಷಪಾತದಿಂದ ಆಶಾಭಂಗಗೊಂಡು, ಅವಳು ಅಧ್ಯಯನದಲ್ಲಿ ಭಾಗವಹಿಸಲು ನಿರಾಕರಿಸುತ್ತಾ “ಮುಷ್ಕರ ಹೂಡಿದಳು.” ಯಾವುದಾದರೂ ವಿಷಯವು ಅನುಚಿತವಾಗಿತ್ತೆಂದು ನಿಮಗನಿಸಿದಾಗ, ನೀವು ಎಂದಾದರೂ ಮೌನ ಉಪಚಾರವನ್ನು ಇಲ್ಲವೆ ಅಸಹಕಾರದ ಮನೋಭಾವವನ್ನು ಪ್ರದರ್ಶಿಸಿದ್ದೀರೊ?
ಹಾಗಿರುವಲ್ಲಿ, ಇಂತಹ ನವಿರಾದ ಯುಕ್ತಿಗಳು, ನಿಮ್ಮ ಹೆತ್ತವರನ್ನು ಸನ್ಮಾನಿಸಿ ಅವರಿಗೆ ವಿಧೇಯರಾಗಬೇಕೆಂಬ ಬೈಬಲಿನ ಆಜ್ಞೆಗೆ ವಿರುದ್ಧವಾಗಿವೆ ಎಂಬುದನ್ನು ಗ್ರಹಿಸಿರಿ. (ಎಫೆಸ 6:1, 2) ಇನ್ನೂ ಹೆಚ್ಚಾಗಿ, ಅವಿಧೇಯತೆಯು ನಿಮ್ಮ ಹೆತ್ತವರೊಂದಿಗಿರುವ ನಿಮ್ಮ ಸಂಬಂಧವನ್ನು ಶಿಥಿಲಗೊಳಿಸುತ್ತದೆ. ನಿಮ್ಮ ಹೆತ್ತವರೊಂದಿಗೆ ನಿಮ್ಮ ಸಮಸ್ಯೆಗಳನ್ನು ಮಾತಾಡಿ ಬಗೆಹರಿಸುವುದು ಉತ್ತಮ. “ಯಥಾರ್ಥವಾದ ಉತ್ತರ”ವನ್ನು ನೀಡುವವನು ಇತರರ ಗೌರವವನ್ನು ಸಂಪಾದಿಸುತ್ತಾನೆಂದು ಜ್ಞಾನೋಕ್ತಿ 24:26 ಸೂಚಿಸುತ್ತದೆ. ಮಾರೀ ಈ ವಿಷಯವನ್ನು ತನ್ನ ತಾಯಿಯೊಂದಿಗೆ ಚರ್ಚಿಸಿದಾಗ, ಅವರು ಪರಸ್ಪರ ಅರ್ಥಮಾಡಿಕೊಳ್ಳತೊಡಗಿದರು ಮತ್ತು ವಿಷಯಗಳು ಉತ್ತಮಗೊಳ್ಳತೊಡಗಿದವು.
ಪ್ರತ್ಯೇಕರಾಗಿರುವುದರ ಅಪಾಯ
ಸ್ವಪಕ್ಷಪಾತದೊಂದಿಗೆ ವ್ಯವಹರಿಸುವ ಮತ್ತೊಂದು ಅಹಿತಕರವಾದ ವಿಧವು, ನಿಮ್ಮ ಕುಟುಂಬದಿಂದ ದೂರ ಸರಿಯುವುದು ಇಲ್ಲವೆ ಗಮನಕ್ಕಾಗಿ ಅವಿಶ್ವಾಸಿಗಳ ಕಡೆಗೆ ನೋಡುವುದಾಗಿದೆ. ಕಸಾಂಡ್ರಳ ವಿಷಯದಲ್ಲಿ ಇದೇ ಸಂಭವಿಸಿತು: “ನಾನು ನನ್ನ ಕುಟುಂಬದಿಂದ ನನ್ನನ್ನು ಪ್ರತ್ಯೇಕಿಸಿಕೊಂಡು, ಶಾಲೆಯಲ್ಲಿ ನಾನು ಮಾಡಿಕೊಂಡಿದ್ದ ಲೌಕಿಕ ಗೆಳೆಯರ ಕಡೆಗೆ ತಿರುಗಿದೆ. ನನಗೆ ಬಾಯ್ಫ್ರೆಂಡ್ಗಳು ಸಹ ಇದ್ದರು, ಆದರೆ ಅದು ನನ್ನ ಹೆತ್ತವರಿಗೆ ಗೊತ್ತಿರಲಿಲ್ಲ. ನಾನು ಸರಿಯಾದ ವಿಷಯವನ್ನು ಮಾಡುತ್ತಿಲ್ಲವೆಂದು ನನಗೆ ಗೊತ್ತಿದ್ದ ಕಾರಣ ನಾನು ಬಹಳ ಖಿನ್ನಳಾಗಿದ್ದೆ ಮತ್ತು ನನಗೊಂದು ದೋಷಿ ಮನಸ್ಸಾಕ್ಷಿಯಿತ್ತು. ಆ ಸನ್ನಿವೇಶದಿಂದ ಹೊರಬರಲು ನಾನು ಬಯಸಿದೆನಾದರೂ, ಅದನ್ನು ನನ್ನ ಹೆತ್ತವರಿಗೆ ತಿಳಿಯಪಡಿಸುವ ವಿಧವು ನನಗೆ ತೋಚಲೇ ಇಲ್ಲ.”
ನಿಮ್ಮ ಕುಟುಂಬ ಮತ್ತು ಜೊತೆ ವಿಶ್ವಾಸಿಗಳಿಂದ ಸ್ವತಃ ಪ್ರತ್ಯೇಕರಾಗಿರುವುದು ಅಪಾಯಕರ—ವಿಶೇಷವಾಗಿ ನೀವು ಕ್ಷೋಭೆಗೊಂಡು, ಸ್ಪಷ್ಟವಾಗಿ ಯೋಚಿಸದೇ ಇರುವಾಗ. ಜ್ಞಾನೋಕ್ತಿ 18:1 ಎಚ್ಚರಿಸುವುದು: “ಜನರಲ್ಲಿ ಸೇರದವನು ಸ್ವೇಚ್ಛಾನುಸಾರ ನಡೆಯುತ್ತಾ ಸಮಸ್ತ ಸುಜ್ಞಾನಕ್ಕೂ ರೇಗುವನು.” ಈ ಸಮಯದಲ್ಲಿ ನಿಮ್ಮ ಹೆತ್ತವರನ್ನು ಸಮೀಪಿಸುವುದು ಕಷ್ಟಕರವೆಂದು ನೀವು ಕಂಡುಕೊಳ್ಳುವುದಾದರೆ, ಜ್ಞಾನೋಕ್ತಿ 17:17ರಲ್ಲಿ ವರ್ಣಿಸಲ್ಪಟ್ಟಿರುವಂತಹ ಒಬ್ಬ ಕ್ರೈಸ್ತ ಮಿತ್ರನನ್ನು ಕಂಡುಕೊಳ್ಳಿರಿ: “ಮಿತ್ರನ ಪ್ರೀತಿಯು ನಿರಂತರ; ಸಹೋದರನ ಜನ್ಮವು ಆಪತ್ತಿನಲ್ಲಿ ಸಾರ್ಥಕ.” ಸಾಮಾನ್ಯವಾಗಿ ಅಂತಹ ಒಬ್ಬ “ಮಿತ್ರ”ನನ್ನು, ಸಭೆಯಲ್ಲಿರುವ ಪ್ರೌಢ ಸದಸ್ಯರಲ್ಲಿ ಹೆಚ್ಚು ಸುಲಭವಾಗಿ ಕಂಡುಕೊಳ್ಳಸಾಧ್ಯವಿದೆ.
ತನ್ನ ಅಗತ್ಯದ ಸಮಯದಲ್ಲಿ ಕಸಾಂಡ್ರ ಒಬ್ಬ “ಮಿತ್ರ”ನನ್ನು ಕಂಡುಕೊಂಡಳು: “ಸರ್ಕಿಟ್ ಮೇಲ್ವಿಚಾರಕರು [ಸಂಚರಣ ಶುಶ್ರೂಷಕರು] ನಮ್ಮ ಸಭೆಯನ್ನು ಸಂದರ್ಶಿಸಿದಾಗ, ಅವರೊಂದಿಗೆ ಶುಶ್ರೂಷೆಯಲ್ಲಿ ಕೆಲಸಮಾಡುವಂತೆ ನನ್ನ ಹೆತ್ತವರು ನನ್ನನ್ನು ಉತ್ತೇಜಿಸಿದರು. ಅವರು ಮತ್ತು ಅವರ ಪತ್ನಿಯು ಬಹಳಷ್ಟು ನಿರಾಡಂಬರ ಜನರಾಗಿದ್ದು, ನನ್ನಲ್ಲಿ ನಿಜವಾದ ಆಸಕ್ತಿಯನ್ನು ತೋರಿಸಿದರು. ನಾನು ಅವರೊಂದಿಗೆ ನಿಜವಾಗಿಯೂ ಮಾತಾಡಸಾಧ್ಯವಿತ್ತು. ಅವರು ನನ್ನನ್ನು ಖಂಡಿಸುವರೆಂಬ ಅನಿಸಿಕೆ ನನಗಾಗಲಿಲ್ಲ. ನೀವು ಕ್ರೈಸ್ತರೋಪಾದಿ ಬೆಳೆಸಲ್ಪಟ್ಟ ಕಾರಣ ಪರಿಪೂರ್ಣರಾಗಿರುವುದಿಲ್ಲ ಎಂಬುದನ್ನು ಅವರು ಗ್ರಹಿಸಿದರು.” ಕಸಾಂಡ್ರಳಿಗೆ ಬೇಕಾದದ್ದು ಕೇವಲ ಅವರ ಉತ್ತೇಜನ ಹಾಗೂ ಪ್ರೌಢ ಬುದ್ಧಿವಾದವೇ!—ಜ್ಞಾನೋಕ್ತಿ 13:20.
ಮತ್ಸರದ ಅಪಾಯ
ಜ್ಞಾನೋಕ್ತಿ 27:4 ಎಚ್ಚರಿಸುವುದು: “ಕೋಪವು ಕ್ರೂರ, ಕ್ರೋಧವು ಪ್ರವಾಹ; ಮಾತ್ಸರ್ಯಕ್ಕೆ ಎದುರಾಗಿ ಯಾರು ನಿಂತಾರು?” ದಯೆಯಿಂದ ಕಾಣಲ್ಪಡುವ ಒಬ್ಬ ಒಡಹುಟ್ಟಿದವನ ವಿಷಯದಲ್ಲಿನ ಮತ್ಸರ ಮತ್ತು ಹೊಟ್ಟೆಕಿಚ್ಚು, ದುಡುಕಿನ ಕೃತ್ಯಗಳನ್ನು ಮಾಡುವಂತೆ ಕೆಲವು ಯುವ ಜನರನ್ನು ಪ್ರಚೋದಿಸಿದೆ. ಸ್ತ್ರೀಯೊಬ್ಬಳು ಒಪ್ಪಿಕೊಂಡದ್ದು: “ನಾನು ಚಿಕ್ಕವಳಿದ್ದಾಗ, ನನಗೆ ತೆಳ್ಳನೆಯ, ಹುಲ್ಲಿನ ಕಂತೆಯಂತಹ ಕಂದು ಬಣ್ಣದ ಕೂದಲಿತ್ತು ಮತ್ತು ನನ್ನ ಸಹೋದರಿಗೆ ಅವಳ ಸೊಂಟದ ವರೆಗೆ ಇಳಿಬೀಳುತ್ತಿದ್ದ ಬಹುಕಾಂತಿಯ ಹೊಂಬಣ್ಣದ ಕೂದಲಿತ್ತು. ನನ್ನ ತಂದೆ ಯಾವಾಗಲೂ ಅವಳ ಕೂದಲನ್ನು ಹೊಗಳುತ್ತಿದ್ದರು. ಅವರು ಆಕೆಯನ್ನು ತಮ್ಮ ‘ರಾಪುನ್ಸಲ್’ (ಜರ್ಮನ್ ಜಾನಪದ ಕಥೆಗಳ ಕಥಾನಾಯಕಿ) ಎಂಬುದಾಗಿ ಕರೆದರು. ಒಂದು ರಾತ್ರಿ ಅವಳು ನಿದ್ರಿಸುತ್ತಿದ್ದಾಗ, ನಾನು ನನ್ನ ತಾಯಿಯ ಹೊಲಿಗೆ ಕತ್ತರಿಯನ್ನು ತೆಗೆದುಕೊಂಡು ಅವಳ ಮಂಚದ ಕಡೆಗೆ ತುದಿಗಾಲಲ್ಲಿ ನಡೆದು ನನಗೆ ಸಾಧ್ಯವಾದಷ್ಟು ಕೂದಲನ್ನು ಕತ್ತರಿಸಿಬಿಟ್ಟೆ.”—ಪ್ರತಿಸ್ಪರ್ಧೆ ಇಲ್ಲದ ಒಡಹುಟ್ಟಿದವರು (ಇಂಗ್ಲಿಷ್), ಅಡೆಲ್ ಫಾಬರ್ ಮತ್ತು ಇಲೇನ್ ಮಾಸ್ಲಿಷ್ ಅವರಿಂದ.
ಹಾಗಾದರೆ, ಬೈಬಲಿನಲ್ಲಿ ಮತ್ಸರವನ್ನು ನೀಚ ‘ಶರೀರಭಾವದ ಕರ್ಮಗಳಲ್ಲಿ’ ಒಂದಾಗಿ ವರ್ಣಿಸಿರುವುದು ಆಶ್ಚರ್ಯಕರವೇನೂ ಅಲ್ಲ. (ಗಲಾತ್ಯ 5:19-21; ರೋಮಾಪುರ 1:28-32) ಹಾಗಿದ್ದರೂ, “ಮತ್ಸರಪಡುವ ಪ್ರವೃತ್ತಿ” (NW) ನಮ್ಮೆಲ್ಲರಲ್ಲಿ ಇದೆ. (ಯಾಕೋಬ 4:5) ಆದುದರಿಂದ ನಿಮ್ಮ ಒಡಹುಟ್ಟಿದವನನ್ನು ತೊಂದರೆಗೆ ಸಿಲುಕಿಸಲು, ಅವನು ಅಪ್ರಸನ್ನಕರವಾಗಿ ತೋರುವಂತೆ ಮಾಡಲು, ಇಲ್ಲವೆ ಬೇರೆ ಯಾವುದೇ ವಿಧದಲ್ಲಿ ಅವನನ್ನು ಮೀರಿಸಲು ನೀವು ಹೊಂಚುಹಾಕುತ್ತಿರುವುದಾಗಿ ಕಂಡುಕೊಳ್ಳುವಾಗ, ಮತ್ಸರವು ನಿಮ್ಮ ಮೇಲೆ ಜಯಸಾಧಿಸಲು ಪ್ರಯತ್ನಿಸುತ್ತಾ “ಬಾಗಲಲ್ಲಿ ಹೊಂಚಿಕೊಂಡಿರ”ಬಹುದು!
ಹಾಗಾದರೆ ಇಂತಹ ಹಾನಿಕಾರಕ ಅನಿಸಿಕೆಗಳಿಗೆ ನೀವೇ ಇಂಬುಕೊಡುತ್ತಿರುವುದಾಗಿ ಕಂಡುಕೊಳ್ಳುವಲ್ಲಿ ಏನು ಮಾಡಬೇಕು? ಪ್ರಥಮವಾಗಿ, ದೇವರ ಬಳಿ ಆತನ ಆತ್ಮಕ್ಕಾಗಿ ಪ್ರಾರ್ಥಿಸಲು ಪ್ರಯತ್ನಿಸಿರಿ. ಗಲಾತ್ಯ 5:16 ಹೇಳುವುದು: “ಪವಿತ್ರಾತ್ಮನನ್ನು ಅನುಸರಿಸಿ ನಡೆದುಕೊಳ್ಳಿರಿ; ಆಗ ನೀವು ಶರೀರಭಾವದ ಅಭಿಲಾಷೆಗಳನ್ನು ಎಷ್ಟು ಮಾತ್ರಕ್ಕೂ ನೆರವೇರಿಸುವದಿಲ್ಲ.” (ತೀತ 3:3-5ನ್ನು ಹೋಲಿಸಿರಿ.) ನಿಮ್ಮ ಒಡಹುಟ್ಟಿದವರಿಗಾಗಿರುವ ನಿಮ್ಮ ನಿಜವಾದ ಅನಿಸಿಕೆಗಳ ಕುರಿತು ಪರ್ಯಾಲೋಚಿಸುವುದೂ ಸಹಾಯಕರವಾಗಿರಬಹುದು. ನಿಮ್ಮ ಅಸಮಾಧಾನದ ಎದುರಿನಲ್ಲಿಯೂ ಆ ಸಹೋದರ ಅಥವಾ ಸಹೋದರಿಗಾಗಿ ನಿಮ್ಮಲ್ಲಿ ಒಂದಿಷ್ಟೂ ಪ್ರೀತಿಯಿಲ್ಲವೆಂದು ನೀವು ನಿಜವಾಗಿಯೂ ಹೇಳಬಲ್ಲಿರೊ? ಒಳ್ಳೇದು, “ಪ್ರೀತಿಯು ಹೊಟ್ಟೆಕಿಚ್ಚುಪಡುವದಿಲ್ಲ”ವೆಂದು ಶಾಸ್ತ್ರಗಳು ನಮಗೆ ಹೇಳುತ್ತವೆ. (1 ಕೊರಿಂಥ 13:4) ಆದುದರಿಂದ, ನಕಾರಾತ್ಮಕ, ಮತ್ಸರ ಹುಟ್ಟಿಸುವ ಆಲೋಚನೆಗಳ ಮೇಲೆ ಗಮನವಿಡಲು ನಿರಾಕರಿಸಿರಿ. ಒಡಹುಟ್ಟಿದ ಆ ವ್ಯಕ್ತಿಯು ನಿಮ್ಮ ಹೆತ್ತವರಿಂದ ವಿಶೇಷವಾದ ಗಮನವನ್ನು ಗಿಟ್ಟಿಸಿಕೊಳ್ಳುತ್ತಿರುವಲ್ಲಿ ಅವನೊಂದಿಗೆ ಹರ್ಷಿಸಲು ಪ್ರಯತ್ನಿಸಿರಿ.—ರೋಮಾಪುರ 12:15ನ್ನು ಹೋಲಿಸಿರಿ.
ಈ ಸಂಬಂಧದಲ್ಲಿ ನಿಮ್ಮ ಹೆತ್ತವರೊಂದಿಗಿನ ನಿಮ್ಮ ಸಂಭಾಷಣೆಗಳೂ ಸಹಾಯಕರವಾಗಿ ಪರಿಣಮಿಸಬಹುದು. ನಿಮಗೆ ಹೆಚ್ಚಿನ ಗಮನವನ್ನು ಕೊಡುವುದರ ಅಗತ್ಯದ ಕುರಿತು ಅವರು ಮನಗಾಣಿಸಲ್ಪಡುವುದಾದರೆ, ನಿಮ್ಮ ಒಡಹುಟ್ಟಿದವರ ಕಡೆಗೆ ಮತ್ಸರದ ಅನಿಸಿಕೆಗಳ ಮೇಲೆ ಜಯಸಾಧಿಸುವ ವಿಷಯದಲ್ಲಿ ಇದು ನಿಮಗೆ ಬಹಳವಾಗಿ ಸಹಾಯ ಮಾಡುವುದು. ಆದರೆ ವಿಷಯಗಳು ಮನೆಯಲ್ಲಿ ಉತ್ತಮಗೊಳ್ಳದಿದ್ದರೆ ಮತ್ತು ಸ್ವಪಕ್ಷಪಾತವು ಮುಂದುವರಿದರೆ ಆಗೇನು? ನಿಮ್ಮ ಹೆತ್ತವರ ವಿರುದ್ಧ ಕೋಪಗೊಂಡು, ಅರಚಿ, ಇಲ್ಲವೆ ದಂಗೆಯೇಳಬೇಡಿ. ಒಂದು ಸಹಾಯಕರ, ವಿಧೇಯ ಮನೋಭಾವವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿರಿ. ಅಗತ್ಯವಿದ್ದಲ್ಲಿ, ಕ್ರೈಸ್ತ ಸಭೆಯಲ್ಲಿರುವ ಪ್ರೌಢ ಸಹೋದರರಿಂದ ಬೆಂಬಲವನ್ನು ಕೋರಿರಿ. ಎಲ್ಲಕ್ಕಿಂತಲೂ ಮಿಗಿಲಾಗಿ, ಯೆಹೋವ ದೇವರಿಗೆ ನಿಕಟರಾಗಿರಿ. ಕೀರ್ತನೆಗಾರನ ಮಾತುಗಳನ್ನು ಜ್ಞಾಪಿಸಿಕೊಳ್ಳಿರಿ: “ತಂದೆತಾಯಿಗಳು ನನ್ನನ್ನು ತೊರೆದುಬಿಟ್ಟರೇನು; ಯೆಹೋವನು ನನ್ನನ್ನು ಸೇರಿಸಿಕೊಳ್ಳುವನು.”—ಕೀರ್ತನೆ 27:10.
[ಅಧ್ಯಯನ ಪ್ರಶ್ನೆಗಳು]
a ಹೆಸರುಗಳಲ್ಲಿ ಕೆಲವು ಬದಲಾಯಿಸಲ್ಪಟ್ಟಿವೆ.
b ಎಚ್ಚರ! ಪತ್ರಿಕೆಯ ನವೆಂಬರ್ 8, 1997ರ ಸಂಚಿಕೆಯಲ್ಲಿರುವ, “ಎಲ್ಲ ಗಮನವನ್ನು ನನ್ನ ಸಹೋದರನು ಗಿಟ್ಟಿಸಿಕೊಳ್ಳುವುದೇಕೆ?” ಎಂಬ ಲೇಖನವನ್ನು ನೋಡಿರಿ.
[ಪುಟ 35 ರಲ್ಲಿರುವ ಚಿತ್ರ]
ಕಡೆಗಣಿಸಲ್ಪಟ್ಟ ಅನಿಸಿಕೆ ನಿಮಗಾಗುತ್ತದೆಂದು ವಿವರಿಸುವುದು, ಸಮಸ್ಯೆಯನ್ನು ಬಗೆಹರಿಸಬಹುದು