ಯುವ ಜನರು ಪ್ರಶ್ನಿಸುವುದು . . .
ಎಲ್ಲ ಗಮನವನ್ನು ನನ್ನ ಸಹೋದರನು ಗಿಟ್ಟಿಸಿಕೊಳ್ಳುವುದೇಕೆ?
“ನನ್ನನ್ನು ಕಾಡಿಸುವಂತಹ ವಿಷಯವೇನೆಂದರೆ, ನನ್ನ ಸಹೋದರ ಸಹೋದರಿಯರು ಅಯೋಗ್ಯವಾಗಿ ವರ್ತಿಸುವಾಗ, ಒಳ್ಳೆಯ ವರ್ತನೆ ಇಲ್ಲವೆ ಕೆಟ್ಟ ವರ್ತನೆಗಾಗಿ ಅವರು ಬಹಳಷ್ಟು ಗಮನವನ್ನು ಗಿಟ್ಟಿಸಿಕೊಳ್ಳುತ್ತಾರೆ. ಆದರೆ, ನಾನು ವಿಧೇಯ ಪ್ರವೃತ್ತಿಯುಳ್ಳವಳಾಗಿರುವುದರಿಂದ ಅವರು ನನ್ನ ಕಡೆಗೆ ಗಮನವನ್ನೇ ಕೊಡುವುದಿಲ್ಲ.”—18 ವರ್ಷ ಪ್ರಾಯದ ಕೇ.a
“ನನ್ನ ಸಹೋದರ ಸಹೋದರಿಯರಿಗೆ ಹೆಚ್ಚಿನ ಗಮನವನ್ನು ಕೊಡಲಾಗುತ್ತದೆ ಮತ್ತು ಅವರನ್ನು ನನಗಿಂತ ಉತ್ತಮವಾಗಿ ಉಪಚರಿಸಲಾಗುತ್ತದೆ. ನನಗೆ ಸಿಗುವಂತಹ ಗಮನವೆಲ್ಲ ಹೆಚ್ಚಾಗಿ ಸಲಹೆಯ ರೂಪದಲ್ಲಿರುತ್ತದೆ. ಅವರಿಗೂ ಸಲಹೆ ನೀಡಲಾಗುತ್ತದೆಂದು ನನಗೆ ಗೊತ್ತಿರುತ್ತಿದ್ದಲ್ಲಿ, ನೆಮ್ಮದಿಯ ಅನಿಸಿಕೆ ನನಗಾಗುತ್ತಿತ್ತು.”—15 ವರ್ಷ ಪ್ರಾಯದ ರೂತ್.
“ನನ್ನ ಅಣ್ಣಂದಿರು ಮತ್ತು ಅಕ್ಕಂದಿರಿಗೆ ಹೆಚ್ಚಿನ ಸುಯೋಗಗಳು ಮತ್ತು ಗಮನವು ಸಿಗುತ್ತದೆಂದು ನನಗೆ ತೋರುತ್ತದೆ.”—13 ವರ್ಷ ಪ್ರಾಯದ ಬಿಲ್.
ನಾವು ಹುಟ್ಟಿದ ದಿನದಿಂದಲೇ, ನಮಗೆಲ್ಲರಿಗೂ ನಮ್ಮ ಹೆತ್ತವರಿಂದ ಗಮನದ ಅಗತ್ಯವಿರುತ್ತದೆ. ಮತ್ತು ಅದರ ನ್ಯಾಯಸಮ್ಮತವಾದ ಪಾಲು ನಿಮಗೆ ಸಿಗುತ್ತಿಲ್ಲವೆಂದು ನಿಮಗನಿಸುವುದಾದರೆ, ನೀವು ಗ್ರಾಹ್ಯವಾಗಿಯೇ ನೊಂದುಕೊಂಡು, ಕೋಪಗೊಳ್ಳಬಹುದು. ವಿಶೇಷವಾಗಿ ನಿಮ್ಮ ಒಡಹುಟ್ಟಿದವರಲ್ಲಿ ಅತ್ಯಂತ ಹಿರಿಯನು, ಅತ್ಯಂತ ಕಿರಿಯನು, ಅತ್ಯುತ್ತಮವಾಗಿ ವರ್ತಿಸುವವನು, ಇಲ್ಲವೆ ಅತಿ ಅವಿಧೇಯನಾಗಿರುವವನು ಕೂಡ, ಎಲ್ಲ ಸಮಯದಲ್ಲಿ ಗಮನದ ಕೇಂದ್ರಬಿಂದುವಾಗಿರುವಂತೆ ತೋರುವುದಾದರೆ ವಿಷಯವು ಹಾಗಿರುವುದು. ದಾವೀದನು ಹೀಗೆ ಬರೆದಾಗ ಅವನಿಗೆ ಹೇಗನಿಸಿತೊ ಹಾಗೆಯೇ ನಿಮಗೂ ಅನಿಸಬಹುದು: “ನಾನು ಸತ್ತವರಂತೆ ಯಾರ ಜ್ಞಾಪಕಕ್ಕೂ ಬಾರದವನಾದೆನು; ಒಡೆದ ಬೋಕಿಯಂತಿದ್ದೇನೆ.”—ಕೀರ್ತನೆ 31:12.
ನೀವು ಗಿಟ್ಟಿಸಿಕೊಳ್ಳಲು ಇಷ್ಟಪಡುವ ಗಮನವನ್ನು ನಿಮ್ಮ ಒಡಹುಟ್ಟಿದವರಲ್ಲಿ ಒಬ್ಬನು ಗಿಟ್ಟಿಸಿಕೊಳ್ಳುತ್ತಿರುವುದನ್ನು ನೋಡುವುದು ವೇದನಾಮಯವಾಗಿರಬಲ್ಲದು. ಆದರೆ, ನೀವು ಪ್ರೀತಿಸಲ್ಪಡುತ್ತಿಲ್ಲ ಎಂಬುದನ್ನು ಇದು ಅನಿವಾರ್ಯವಾಗಿ ಅರ್ಥೈಸುತ್ತದೊ? ಇಲ್ಲವೇ ಇಲ್ಲ. ಕೆಲವೊಮ್ಮೆ ಯುವ ಜನರಿಗೆ ಅಸಾಧಾರಣವಾದ ಸಾಮರ್ಥ್ಯಗಳು ಇಲ್ಲವೆ ಸ್ನೇಹಪರ ವ್ಯಕ್ತಿತ್ವಗಳು ಇರುವ ಕಾರಣ, ಅವರು ಹೆಚ್ಚಿನ ಗಮನವನ್ನು ಗಿಟ್ಟಿಸಿಕೊಳ್ಳುತ್ತಾರೆ. 11 ವರ್ಷ ಪ್ರಾಯದ ಕೆನೆತ್ ಹೇಳುವುದು: “ನನ್ನ ಚಿಕ್ಕ ತಮ್ಮನಾದ ಆರ್ಥರ್, ಮೂರನೆಯ ತರಗತಿಯಲ್ಲಿರುವುದಾದರೂ ಅವನು ಐದನೆಯ ತರಗತಿಯವರ ವಾದ್ಯವೃಂದದಲ್ಲಿ ವಾದ್ಯ ನುಡಿಸುತ್ತಿದ್ದಾನೆ. ಅವನು ಕ್ರೀಡೆಗಳಲ್ಲಿಯೂ ಗಣಿತದಲ್ಲಿಯೂ ಅತ್ಯುತ್ತಮ ಅಂಕಗಳನ್ನು ಗಳಿಸುತ್ತಾನೆ. ವಾಸ್ತವವಾಗಿ, ಶಾಲೆಯಲ್ಲಿನ ಎಲ್ಲ ವಿಷಯಗಳಲ್ಲಿ ಅವನಿಗೆ ಎ ದರ್ಜೆ ಸಿಗುತ್ತದೆ. ಜನರು ನನಗಿಂತ ಹೆಚ್ಚಾಗಿ ಅವನನ್ನು ಇಷ್ಟಪಡುತ್ತಾರೆಂದು ನಾನು ಕೆಲವೊಮ್ಮೆ ನೆನಸುತ್ತೇನೆ, ಆದರೆ ಅವನ ಬಗ್ಗೆ ನಾನು ಹೊಟ್ಟೆಕಿಚ್ಚು ಪಡುವುದಿಲ್ಲ. ಹೌದು, ನಾನು ಒಂದಿಷ್ಟು ಹೊಟ್ಟೆಕಿಚ್ಚು ಪಡುತ್ತೇನೆ.”
ತಾವು ಅತ್ಯಂತ ಹಿರಿಯ ಇಲ್ಲವೆ ಕಿರಿಯವರಾಗಿರುವ ಕಾರಣಮಾತ್ರದಿಂದ, ತಮ್ಮ ಹೆತ್ತವರ ಸಮಯದಲ್ಲಿ ಸಿಂಹಪಾಲನ್ನು ಗಿಟ್ಟಿಸಿಕೊಳ್ಳುತ್ತಿರುವಂತೆ ತೋರುವ ಯುವ ಜನರೂ ಇದ್ದಾರೆ. ಯುವ ಯೋಸೇಫನ ಬಗ್ಗೆ ಬೈಬಲ್ ಹೇಳುವುದು: “ಯೋಸೇಫನು ಇಸ್ರಾಯೇಲನಿಗೆ ಮುಪ್ಪಿನಲ್ಲಿ ಹುಟ್ಟಿದವನಾದ್ದರಿಂದ ಇಸ್ರಾಯೇಲನು ಅವನನ್ನು ತನ್ನ ಎಲ್ಲಾ ಮಕ್ಕಳಿಗಿಂತ ಹೆಚ್ಚಾಗಿ ಪ್ರೀತಿಸಿ”ದನು. (ಆದಿಕಾಂಡ 37:3, 4) ಮತ್ತೊಂದು ಕಡೆಯಲ್ಲಿ, 18 ವರ್ಷ ಪ್ರಾಯದ ಟಾಡ್ಗೆ, ತನ್ನ ಅಣ್ಣ ಹಿರಿಯವನಾಗಿದ್ದ ಕಾರಣ ಅಚ್ಚುಮೆಚ್ಚಿನವನಾಗಿದ್ದನೆಂದು ಅನಿಸಿತು. ಅವನು ಜ್ಞಾಪಿಸಿಕೊಳ್ಳುವುದು: “ಒಮ್ಮೆ ಶಾಲೆಯ ಪ್ರಾಜೆಕ್ಟ್ಗಾಗಿ ಒಂದು ಅಚ್ಚುಮೆಚ್ಚಿನ ಮಗುವಿನ ಚಿತ್ರವನ್ನು ತರುವಂತೆ ನಮ್ಮಿಂದ ಕೇಳಿಕೊಳ್ಳಲಾಯಿತು. ಮನೆಯಲ್ಲಿ ನನ್ನ ಭಾವಚಿತ್ರಗಳು ಕೆಲವೇ ಇರುವುದನ್ನು ನಾನು ಕಂಡುಕೊಳ್ಳಸಾಧ್ಯವಿತ್ತಾದರೂ, ನನ್ನ ಅಣ್ಣನ ಭಾವಚಿತ್ರಗಳು ಅನೇಕವಿರುವುದನ್ನು ನಾನು ಗಮನಿಸಿದೆ. ಇದು ಹಾಗೇಕೆ ಎಂದು ನಾನು ಯೋಚಿಸುವಂತೆ ಮಾಡಿತು.”
ಆದರೆ ಅನೇಕ ವೇಳೆ, ಒಡಹುಟ್ಟಿದವರಲ್ಲಿ ಒಬ್ಬನಿಗೆ ಸಮಸ್ಯೆಗಳು—ಬಹುಶಃ ನಿಮಗೆ ಅರಿವಿಲ್ಲದ ಸಮಸ್ಯೆಗಳು—ಇರುವ ಕಾರಣ, ಹೆಚ್ಚಿನ ಗಮನವು ಕೊಡಲಾಗುತ್ತದೆ. ಈಗ 22ರ ಪ್ರಾಯದಲ್ಲಿರುವ ಕಸಾಂಡ್ರ ವಿವರಿಸುವುದು, “ನಾನು 16 ವರ್ಷ ಪ್ರಾಯದವಳಾಗಿದ್ದಾಗ, ನನ್ನ ಅಣ್ಣ ಬಹು ಕಷ್ಟಕರವಾದ ಸಮಯವನ್ನು ಅನುಭವಿಸುತ್ತಿದ್ದ. ಅವನು ನಿಜವಾಗಿಯೂ ಯೆಹೋವನನ್ನು ಸೇವಿಸಲು ಬಯಸಿದನೊ ಇಲ್ಲವೊ ಎಂಬುದರ ಕುರಿತು ಅವನು ನಿಶ್ಚಿತನಾಗಿರಲಿಲ್ಲ, ಮತ್ತು ನನ್ನ ಹೆತ್ತವರು ಬಹುಮಟ್ಟಿಗೆ ತಮ್ಮ ಎಲ್ಲ ಗಮನವನ್ನು ಅವನ ಮೇಲೆ ಕೇಂದ್ರೀಕರಿಸಿದರು. ಆ ಸಮಯದಲ್ಲಿ, ನಾನು ಅದರ ಕಾರಣವನ್ನು ಅರ್ಥಮಾಡಿಕೊಳ್ಳಲು ಅಸಮರ್ಥಳಾಗಿದ್ದೆ. ನನ್ನ ಬಗ್ಗೆ ಅವರು ಚಿಂತಿಸಲೇ ಇಲ್ಲವೆಂದು ನನಗನಿಸಿತು. ಅದು ನನ್ನನ್ನು ದುಃಖಿತಳನ್ನಾಗಿಯೂ ಕಡೆಗಣಿಸಲ್ಪಟ್ಟವಳನ್ನಾಗಿಯೂ ಮಾಡಿತು—ಕುಪಿತಳನ್ನಾಗಿಯೂ ಮಾಡಿತ್ತು.”
ಅವರು ಪಕ್ಷಪಾತ ತೋರಿಸುವುದರ ಕಾರಣ
ಆದರೆ ಕೆಲವೊಮ್ಮೆ, ಹೆತ್ತವರು ನಿಜವಾಗಿಯೂ ಪಕ್ಷಪಾತದ ವಿಷಯದಲ್ಲಿ ತಪ್ಪಿತಸ್ಥರಾಗಿರುತ್ತಾರೆ. ಒಬ್ಬ ತಾಯಿ ಒಪ್ಪಿಕೊಂಡದ್ದು: “ನನ್ನ ಮಗ ಪೌಲ್ಗೆ, ನಾವು ನಮ್ಮ ಮಗಳ ವಿಷಯದಲ್ಲಿ ಪಡುವ ಹೆಮ್ಮೆಯ ಬಗ್ಗೆ ವೇದನಾಮಯವಾಗಿ ತಿಳಿದಿದೆಯೆಂಬುದು ನನಗೆ ಗೊತ್ತು. ‘ಲಿಸ್ ಏನಾದರೂ ಹೇಳಿದರೆ, ನೀವು ಮತ್ತು ಅಪ್ಪ ಯಾವಾಗಲೂ ಪರಸ್ಪರ ನೋಡಿಕೊಳ್ಳುತ್ತೀರಿ’ ಎಂಬುದಾಗಿ ಅವನು ನಮಗೆ ನೇರವಾಗಿ ಹೇಳಿದ್ದಾನೆ. ಆರಂಭದಲ್ಲಿ, ಅವನು ಯಾವ ವಿಷಯದ ಬಗ್ಗೆ ಮಾತಾಡುತ್ತಿದ್ದನೆಂಬುದು ನಮಗೆ ಗೊತ್ತಿರಲಿಲ್ಲ. ಅನಂತರ, ನಾವು ಸತತವಾಗಿ ಅವಳ ವಿಷಯದಲ್ಲಿ ‘ಮೆಚ್ಚುಗೆಯ’ ನೋಟಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುತ್ತೇವೆಂಬುದನ್ನು ಗ್ರಹಿಸಿದೆವು. ಅವನು ನಮ್ಮನ್ನು ಎಚ್ಚರಿಸಿರುವುದರಿಂದ, ನಾವು ಅದನ್ನು ಇನ್ನು ಮುಂದೆ ಮಾಡದಿರಲು ನಿಜವಾದ ಪ್ರಯತ್ನ ಮಾಡಿದ್ದೇವೆ.”
ಆದರೆ ಹೆತ್ತವರು ಪಕ್ಷಪಾತವನ್ನು ತೋರಿಸುವುದಾದರೂ ಯಾವ ಕಾರಣಕ್ಕೆ? ಸ್ವತಃ ಅವರು ಬೆಳೆದುಬಂದ ವಾತಾವರಣವು ಒಂದು ಅಂಶವಾಗಿರಬಹುದು. ಉದಾಹರಣೆಗೆ, ನಿಮ್ಮ ತಾಯಿಯು ಅತ್ಯಂತ ಕಿರಿಯ ಮಗುವಾಗಿ ಬೆಳೆದಿದ್ದರೆ, ಅವರು ತಮ್ಮ ಕಿರಿಯ ಮಗುವಿನೊಂದಿಗೆ ಹೆಚ್ಚು ನಿಕಟವಾಗಿ ಸಂಬಂಧ ಕಲ್ಪಿಸಿಕೊಳ್ಳಬಹುದು. ಅದರ ಪರಿಜ್ಞಾನವೇ ಇಲ್ಲದೆ, ಅವರು ಆ ಮಗುವಿನ ಪಕ್ಷವಹಿಸುವ ಒಲವನ್ನು ತೋರಿಸಬಹುದು. ಇಲ್ಲವೇ, ಒಬ್ಬ ಹೆತ್ತವರಿಗೆ, ಯಾರೊಂದಿಗೆ ಅವರು ಏಕಪ್ರಕಾರದ ಸ್ವಭಾವ ಇಲ್ಲವೆ ಸಾಮಾನ್ಯ ಅಭಿರುಚಿಯನ್ನು ಹಂಚಿಕೊಳ್ಳುತ್ತಾರೊ, ಅಂತಹ ಮಗುವಿಗಾಗಿ ಸಹಾನುಭೂತಿ ಇರಬಹುದು. ತಮ್ಮ ಅವಳಿ ಪುತ್ರರಾದ ಏಸಾವ ಮತ್ತು ಯಾಕೋಬರ ಸಂಬಂಧದಲ್ಲಿ ಬೈಬಲು ಇಸಾಕ ಮತ್ತು ರೆಬೆಕ್ಕರ ಕುರಿತು ಹೇಳುವ ವಿಷಯವನ್ನು ಪರಿಗಣಿಸಿರಿ: “ಆ ಹುಡುಗರಿಬ್ಬರೂ ಬೆಳೆದಾಗ ಅವರಲ್ಲಿ ಏಸಾವನೆಂಬವನು ಬೇಟೆಯಾಡುವದರಲ್ಲಿ ಜಾಣನಾದನು; ಅವನು ಅರಣ್ಯವಾಸಿ. ಯಾಕೋಬನು ಸಾಧುಮನುಷ್ಯನಾಗಿ ಗುಡಾರಗಳಲ್ಲೇ ವಾಸಿಸಿದನು. ಬೇಟೆಯ ಮಾಂಸವು ಇಸಾಕನಿಗೆ ಇಷ್ಟವಾದದರಿಂದ ಅವನು ಏಸಾವನನ್ನು ಪ್ರೀತಿಸಿದನು; ರೆಬೆಕ್ಕಳು ಯಾಕೋಬನನ್ನು ಪ್ರೀತಿಸಿದಳು.”—ಆದಿಕಾಂಡ 25:27, 28.
ನಿಮ್ಮ ಒಡಹುಟ್ಟಿದವರಲ್ಲಿ ಒಬ್ಬರನ್ನು ನಿಮ್ಮ ಹೆತ್ತವರು ಇಷ್ಟಪಡುವಂತೆ ತೋರುವುದಾದರೆ, ನೀವು ಏನು ಮಾಡಬೇಕು?b ನೀವು ಅದರ ಕುರಿತು ನಿಮ್ಮ ಹೆತ್ತವರೊಂದಿಗೆ ಶಾಂತವಾದ, ಆರೋಪಹೊರಿಸದ ವಿಧದಲ್ಲಿ ಮಾತಾಡಲು ಪ್ರಯತ್ನಿಸಬಹುದು. (ಜ್ಞಾನೋಕ್ತಿ 15:22) ಅವರಿಗೆ ಗೌರವಪೂರ್ವಕವಾಗಿ ಕಿವಿಗೊಡುವ ಮೂಲಕ, ನೀವು ವಿಷಯಗಳನ್ನು ಅವರ ದೃಷ್ಟಿಕೋನದಿಂದ ನೋಡಲು ಶಕ್ತರಾಗಬಹುದು. ಇದು ನಿಮ್ಮ ನಿರಾಶೆಯನ್ನು ಶಾಂತಗೊಳಿಸಲು ಸಹಾಯ ಮಾಡಬಹುದು. (ಜ್ಞಾನೋಕ್ತಿ 19:11) ಹದಿವಯಸ್ಕಳೊಬ್ಬಳು ಹೇಳುವುದು: “ನನ್ನ ತಾಯಿಯವರು ನನಗಿಂತಲೂ ನನ್ನ ತಮ್ಮನ ಕಡೆಗೆ ಆಕರ್ಷಿತರಾಗಿದ್ದ ವಿಷಯವು ನನಗೆ ನಿಜವಾಗಿಯೂ ಕಿರಿಕಿರಿಯನ್ನುಂಟುಮಾಡಿತು. ಅದರ ಕುರಿತು ನಾನು ಅವರನ್ನು ಕೇಳಿದಾಗ, ಅವನು ಹೆಚ್ಚಾಗಿ ತಂದೆಯಂತಿರುವುದರಿಂದ ಅವರು ಅವನ ಕಡೆಗೆ ಆಕರ್ಷಿತರಾಗಿದ್ದಾರೆಂದು ವಿವರಿಸಿದರು. ಮತ್ತು ನಾನು ಹೆಚ್ಚಾಗಿ ತಾಯಿಯಂತಿರುವುದರಿಂದ ತಂದೆಯವರು ನನ್ನ ಕಡೆಗೆ ಆಕರ್ಷಿತರಾಗಿದ್ದಾರೆ. ಅಂತೆಯೇ, ನಾವಿಬ್ಬರೂ ಬಹಳಷ್ಟು ಸದೃಶರಾಗಿರುವುದರಿಂದ ಪರಸ್ಪರ ಕಿರಿಕಿರಿಯನ್ನುಂಟುಮಾಡುತ್ತೇವೆ. ಮತ್ತು ನನ್ನ ತಂದೆ ಹಾಗೂ ತಮ್ಮ ಬಹಳಷ್ಟು ಸದೃಶರಾಗಿರುವ ಕಾರಣ, ಅವರು ಒಬ್ಬರನ್ನೊಬ್ಬರು ರೇಗಿಸುತ್ತಾರೆ. ಹೀಗೆಂದು ಅವರು ಒಮ್ಮೆ ವಿವರಿಸಿದ ಬಳಿಕ, ಅದರ ಬಗ್ಗೆ ನಾನು ಅತಿಯಾಗಿ ಹರ್ಷಿಸಲಿಲ್ಲವಾದರೂ, ನಾನು ಅದನ್ನು ಒಪ್ಪಿಕೊಳ್ಳಸಾಧ್ಯವಾಯಿತು.”
ಅಸಮಾನ ಉಪಚಾರ—ಅನ್ಯಾಯವೊ?
ಹಾಗಾದರೆ, ಹೆತ್ತವರು ಪ್ರತಿಯೊಬ್ಬರನ್ನು ನಿಖರವಾಗಿ ಒಂದೇ ರೀತಿಯಲ್ಲಿ ಏಕೆ ಉಪಚರಿಸಲು ಸಾಧ್ಯವಿಲ್ಲ? ಈಗ 18 ವರ್ಷ ಪ್ರಾಯದವಳಾಗಿರುವ ಬೆತ್ ಹೇಳುವುದು: “ನಾನು ಸುಮಾರು 13 ವರ್ಷ ಪ್ರಾಯದವಳಾಗಿದ್ದಾಗ, ನನ್ನ ತಮ್ಮ ಮತ್ತು ನಾನು ಸಮಾನವಾಗಿ—ನಿಖರವಾಗಿ ಒಂದೇ ರೀತಿಯಲ್ಲಿ—ಉಪಚರಿಸಲ್ಪಡಬೇಕೆಂದು ನನಗನಿಸಿತು. ಯಾವಾಗಲೂ ಬಯ್ಯಿಸಿಕೊಳ್ಳುತ್ತಿದ್ದವಳು ನಾನೊಬ್ಬಳೇ ಆಗಿದ್ದರೂ, ಅವನಿಗೆ ಎಂದೂ ಶಿಸ್ತು ಕೊಡಲ್ಪಡಲಿಲ್ಲ. ಮತ್ತು ಕಾರಿನಲ್ಲಿ ತಂದೆಯೊಂದಿಗೆ ಕೆಲಸಮಾಡುತ್ತಾ ಅವರೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುವ ಸಂದರ್ಭ ಅವನಿಗೇ ಸಿಕ್ಕಿತು. ಅದು ತೀರ ಅಸಂಗತವೆಂದು ತೋರಿತು.”
ಆದರೆ ಅಸಮಾನ ಉಪಚಾರವು ಅನ್ಯಾಯವಾಗಿರಲೇಬೇಕೆಂದಿಲ್ಲ. ಯೇಸು ಕ್ರಿಸ್ತನು ತನ್ನ ಅಪೊಸ್ತಲರನ್ನು ಉಪಚರಿಸಿದ ರೀತಿಯನ್ನು ಪರಿಗಣಿಸಿರಿ. ನಿಸ್ಸಂದೇಹವಾಗಿ ಯೇಸು ಎಲ್ಲ 12 ಅಪೊಸ್ತಲರನ್ನು ಪ್ರೀತಿಸಿದನಾದರೂ, ಯಾಯಿರನ ಮಗಳ ಪುನರುತ್ಥಾನವನ್ನು ಮತ್ತು ತನ್ನ ರೂಪಾಂತರವನ್ನು ಸೇರಿಸಿ, ಕೆಲವೊಂದು ವಿಶೇಷ ಘಟನೆಗಳಿಗೆ ಸಾಕ್ಷಿಯಾಗಿರಲು ಅವನು ಅವರಲ್ಲಿ ಮೂವರನ್ನು ಮಾತ್ರ ಆಮಂತ್ರಿಸಿದನು. (ಮತ್ತಾಯ 17:1; ಮಾರ್ಕ 5:37) ಇನ್ನೂ ಹೆಚ್ಚಾಗಿ, ಯೇಸುವಿಗೆ ಅಪೊಸ್ತಲ ಯೋಹಾನನೊಂದಿಗೆ ಬಹು ವಿಶೇಷವಾದ ಆಪ್ತ ಸ್ನೇಹವಿತ್ತು. (ಯೋಹಾನ 13:23; 19:26; 20:2; 21:7, 20) ಇದು ಅಸಮಾನವಾಗಿತ್ತೊ? ಖಂಡಿತವಾಗಿಯೂ. ಅದು ಅನ್ಯಾಯವಾಗಿತ್ತೊ? ಇಲ್ಲವೇ ಇಲ್ಲ. ಏಕೆಂದರೆ ಯೇಸು ನಿರ್ದಿಷ್ಟ ವ್ಯಕ್ತಿಗಳ ಕಡೆಗೆ ವಿಶೇಷವಾಗಿ ಆಕರ್ಷಿತನಾಗಿದ್ದಿರಬಹುದಾದರೂ, ತನ್ನ ಇತರ ಅಪೊಸ್ತಲರ ಅಗತ್ಯಗಳನ್ನು ಅವನು ಕಡೆಗಣಿಸಲಿಲ್ಲ.—ಮಾರ್ಕ 6:31-34.
ಅದೇ ವಿಧದಲ್ಲಿ, ನಿಮ್ಮ ಒಡಹುಟ್ಟಿದವರಲ್ಲಿ ಒಬ್ಬನು, ಕೌಶಲಗಳು, ವ್ಯಕ್ತಿತ್ವ, ಅಥವಾ ಅಗತ್ಯಗಳ ಕಾರಣ ವಿಶೇಷ ಗಮನವನ್ನು ಗಿಟ್ಟಿಸಿಕೊಳ್ಳಬಹುದು. ಸಹಜವಾಗಿಯೇ, ಇದನ್ನು ಗಮನಿಸುವುದು ವೇದನಾಮಯವಾಗಿರಬಲ್ಲದು. ಆದರೆ, ಪ್ರಶ್ನೆಯು ಏನೆಂದರೆ, ನಿಮ್ಮ ಅಗತ್ಯಗಳು ನಿಜವಾಗಿಯೂ ಅಲಕ್ಷಿಸಲ್ಪಡುತ್ತಿವೆಯೊ? ನಿಮಗೆ ನಿಮ್ಮ ಹೆತ್ತವರ ಸಲಹೆ, ಸಹಾಯ, ಅಥವಾ ಬೆಂಬಲವು ಬೇಕಾಗಿರುವಾಗ, ಸಹಾಯ ಮಾಡಲು ಅವರು ಸಿದ್ಧರಾಗಿರುತ್ತಾರೊ? ಹಾಗಿರುವಲ್ಲಿ, ನೀವು ಅನ್ಯಾಯದ ಬಲಿಪಶುವೆಂದು ನಿಜವಾಗಿಯೂ ಹೇಳಬಲ್ಲಿರೊ? ಇತರರೊಂದಿಗೆ “ಅವರ ಅಗತ್ಯಗಳಿಗನುಸಾರ” (NW) ವ್ಯವಹರಿಸುವಂತೆ ಬೈಬಲ್ ನಮಗೆ ಉತ್ತೇಜನ ನೀಡುತ್ತದೆ. (ರೋಮಾಪುರ 12:13) ನೀವು ಮತ್ತು ನಿಮ್ಮ ಒಡಹುಟ್ಟಿದವರು ವಿಭಿನ್ನ ಅಗತ್ಯಗಳಿರುವ ವ್ಯಕ್ತಿಗಳಾಗಿರುವುದರಿಂದ, ನಿಮ್ಮ ಹೆತ್ತವರಿಗೆ ನಿಮ್ಮೆಲ್ಲರನ್ನು ಎಲ್ಲ ಸಮಯ ಒಂದೇ ರೀತಿಯಲ್ಲಿ ಉಪಚರಿಸಲು ಸಾಧ್ಯವೇ ಇಲ್ಲ.
ಈ ಹಿಂದೆ ಉಲ್ಲೇಖಿಸಲ್ಪಟ್ಟ ಬೆತ್, ಸಮಾನವಾದ ಉಪಚಾರವು ಯಾವಾಗಲೂ ನ್ಯಾಯಸಮ್ಮತವಲ್ಲ ಮತ್ತು ನ್ಯಾಯಸಮ್ಮತವಾದ ಉಪಚಾರವು ಯಾವಾಗಲೂ ಸಮಾನವಾಗಿರುವುದಿಲ್ಲ ಎಂಬುದನ್ನು ಗ್ರಹಿಸಿಕೊಳ್ಳುವಂತಾಯಿತು. ಅವಳು ಹೇಳುವುದು: “ನನ್ನ ತಮ್ಮ ಮತ್ತು ನಾನು ಭಿನ್ನವಾದ ಇಬ್ಬರು ವ್ಯಕ್ತಿಗಳು ಮತ್ತು ನಮ್ಮನ್ನು ಭಿನ್ನವಾಗಿ ಉಪಚರಿಸುವ ಅಗತ್ಯವಿದೆ ಎಂಬುದನ್ನು ನಾನು ಗಣ್ಯಮಾಡುವಂತಾಯಿತು. ಹಿನ್ನೋಟ ಬೀರುವಾಗ, ನಾನು ಚಿಕ್ಕವಳಾಗಿದ್ದಾಗ ನನಗೆ ಅದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಲೇ ಇಲ್ಲವೆಂಬುದನ್ನು ಈಗ ನಂಬಲಿಕ್ಕೇ ಆಗುವುದಿಲ್ಲ. ಆ ವಯಸ್ಸಿನಲ್ಲಿ ಒಬ್ಬನು ವಿಷಯಗಳನ್ನು ವೀಕ್ಷಿಸುವ ವಿಧದ ಕಾರಣ, ನಾನು ಆಗ ಅದನ್ನು ಅರ್ಥಮಾಡಿಕೊಳ್ಳಲಿಲ್ಲವೆಂದು ಭಾವಿಸುತ್ತೇನೆ.”
ವಿವೇಚಿಸುವವರಾಗಿರಲು ಕಲಿತುಕೊಳ್ಳುವುದು
ಹೌದು, “ಒಬ್ಬನು ವಿಷಯಗಳನ್ನು ವೀಕ್ಷಿಸುವ ವಿಧ”ವು, ನೀವು ನಿಮ್ಮ ಸನ್ನಿವೇಶಕ್ಕೆ ಹೇಗೆ ಪ್ರತಿಕ್ರಿಯಿಸುತ್ತೀರೆಂಬ ವಿಷಯದೊಂದಿಗೆ ಬಹಳವಾಗಿ ಸಂಬಂಧಿಸಿದೆ. ವರ್ಣಮಯ ಲೆನ್ಸುಗಳಂತೆ, ವಿಷಯಗಳು ನಿಮಗೆ ಗೋಚರವಾಗುವ ರೀತಿಗನುಸಾರ ನಿಮ್ಮ ಭಾವನೆಗಳು ಅವುಗಳಿಗೆ ಮೆರಗುನೀಡಬಲ್ಲವು. ಮತ್ತು ಹೆತ್ತವರ ಗಮನ ಹಾಗೂ ಸಮ್ಮತಿಗಾಗಿರುವ ಭಾವನಾತ್ಮಕ ಅಗತ್ಯವು ಪ್ರಬಲವಾಗಿರುತ್ತದೆ. ಸಂಶೋಧಕರಾದ ಸ್ಟೀವನ್ ಬ್ಯಾಂಕ್ ಮತ್ತು ಮೈಕಲ್ ಕಾನ್ ಗಮನಿಸುವುದು: “ಬಹಳ ಭಿನ್ನವಾಗಿರುವ ತಮ್ಮ ಮಕ್ಕಳನ್ನು ಸರಿಸಮಾನವಾಗಿ ಉಪಚರಿಸುವ ಆದರ್ಶಪ್ರಾಯ ಸನ್ನಿವೇಶವನ್ನು ಸಾಧಿಸುವುದು ಹೆತ್ತವರಿಂದ ಸಾಧ್ಯವಾಗಿರುವುದಾದರೂ, ಹೆತ್ತವರು ಇತರ ಮಕ್ಕಳಲ್ಲಿ ಒಂದರ ಪಕ್ಷವಹಿಸುತ್ತಿರುವಂತೆ ಪ್ರತಿಯೊಂದು ಮಗುವು ಗ್ರಹಿಸುವುದು.”
ಉದಾಹರಣೆಗೆ, ಆರಂಭದಲ್ಲಿ ಉಲ್ಲೇಖಿಸಲ್ಪಟ್ಟ ಆ ಮೂವರು ಯುವ ಜನರಿಂದ ಹೇಳಲ್ಪಟ್ಟ ವಿಷಯವನ್ನು ಪುನಃ ಪರಿಗಣಿಸಿರಿ. ಅವರ ಸನ್ನಿವೇಶವು ಅಪ್ರಸನ್ನಕರವಾಗಿ ತೋರಬಹುದು, ಆದರೆ ಒಂದು ನಿಜತ್ವವೇನೆಂದರೆ, ಅವರು ಒಡಹುಟ್ಟಿದವರು! ಹೌದು, ಇತರರು ಹೆಚ್ಚಿನ ಗಮನವನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ ಮತ್ತು ಅವನು ಅಥವಾ ಅವಳು ಕಡೆಗಣಿಸಲ್ಪಡುತ್ತಿದ್ದಾರೆಂದು ಪ್ರತಿಯೊಬ್ಬರೂ ಊಹಿಸಿಕೊಳ್ಳುತ್ತಾರೆ! ಹಾಗಾದರೆ, ಅನೇಕ ವೇಳೆ ವಿಷಯಗಳ ಕುರಿತಾಗಿ ನಮ್ಮ ದೃಷ್ಟಿಕೋನವು ಒಂದಿಷ್ಟು ತಿರುಚಲ್ಪಟ್ಟಿದೆ. “ಶಾಂತಾತ್ಮನು ವಿವೇಕಿ” ಎಂಬುದಾಗಿ ಜ್ಞಾನೋಕ್ತಿ 17:27 ಹೇಳುತ್ತದೆ. ವಿವೇಚಿಸುವವರಾಗಿರುವುದು ಎಂದರೆ, ವಿಷಯಗಳನ್ನು ಭಾವನಾತ್ಮಕವಾಗಿ ಅಲ್ಲ, ಬದಲಾಗಿ ವಾಸ್ತವಿಕವಾಗಿ ಮತ್ತು ಪಕ್ಷಪಾತರಹಿತವಾಗಿ ವೀಕ್ಷಿಸುವುದೇ. ನಿಮ್ಮ ಹೆತ್ತವರು ನಿಮ್ಮನ್ನೆಲ್ಲ ಒಂದೇ ರೀತಿಯಲ್ಲಿ ಉಪಚರಿಸದಿರಬಹುದಾದರೂ, ಅವರ ಹೃದಯದಲ್ಲಿ ನಿಮ್ಮೆಲ್ಲರ ಹಿತಾಸಕ್ತಿಗಳು ಇವೆಯೆಂಬುದನ್ನು ಗ್ರಹಿಸುವಂತೆ ವಿವೇಚನೆಯು ನಿಮಗೆ ಸಹಾಯ ಮಾಡಬಹುದು! ಇದನ್ನು ಗ್ರಹಿಸಿಕೊಳ್ಳುವುದು, ನೀವು ಕುಪಿತರೂ ವೈಮನಸ್ಯವುಳ್ಳವರೂ ಆಗಿರುವುದರಿಂದ ದೂರವಿರಲು ಸಹಾಯ ಮಾಡಬಲ್ಲದು.
ಆದರೂ, ಗಮನದ ವಿಷಯದಲ್ಲಿ ನಿಮ್ಮ ಹಕ್ಕುಳ್ಳ ಪಾಲು ನಿಮಗೆ ಸಿಗುತ್ತಿಲ್ಲವೆಂದು ನ್ಯಾಯಸಮ್ಮತವಾಗಿ ತೋರುವಲ್ಲಿ ಆಗೇನು? ನೀವು ಏನು ಮಾಡಬಲ್ಲಿರಿ? ಇದು ಎಚ್ಚರ! ಪ್ರತಿಕೆಯ ಮುಂದಿನ ಸಂಚಿಕೆಯಲ್ಲಿ ಪರಿಗಣಿಸಲ್ಪಡುವುದು.
[ಅಧ್ಯಯನ ಪ್ರಶ್ನೆಗಳು]
a ಹೆಸರುಗಳಲ್ಲಿ ಕೆಲವು ಬದಲಾಯಿಸಲ್ಪಟ್ಟಿವೆ.
b ಮುಂದಿನ ಲೇಖನವೊಂದು, ಪಕ್ಷಪಾತವನ್ನು ನಿಭಾಯಿಸುವುದರ ವಿಷಯವನ್ನು ಹೆಚ್ಚು ಪೂರ್ಣವಾಗಿ ಪ್ರಕಟಿಸುವುದು.
[ಪುಟ 37 ರಲ್ಲಿರುವ ಚಿತ್ರ]
ಅಸಮಾನ ಉಪಚಾರವು ಅನ್ಯಾಯವಾಗಿ ತೋರಬಲ್ಲದು