ಯುದ್ಧದೊಂದಿಗೆ ಪ್ರತಿಸ್ಪರ್ಧಿಸುವ ಮರಣ ಸಂಖ್ಯೆ
ಇಪ್ಪತ್ತಮೂರು ವರ್ಷ ಪ್ರಾಯದ ಮ್ಯಾರಿಲಿನಳಿಗೆ ತೂಕ ಕಳೆದುಕೊಂಡು, ಕ್ಷೀಣಿಸಿಹೋದ ಅನಿಸಿಕೆ ಆದಾಗ, ಅದು ಅವಳ ಇತ್ತೀಚೆಗಿನ ಗರ್ಭಧಾರಣೆಗೆ ಸಂಬಂಧಿಸಿರಬಹುದೆಂದು ಅವಳು ಊಹಿಸಿದಳು. ಅವಳಿಗೆ ಪಟ್ಟುಬಿಡದ ಕೆಮ್ಮೂ ಇತ್ತು, ಅದನ್ನು ಅವಳು ತನ್ನ ವೈದ್ಯರಿಗೆ ಹೇಳಿದಳು. ಅದು ಶ್ವಾಸೇಂದ್ರಿಯ ಪ್ರದೇಶದ ಮೇಲ್ಭಾಗದ ಸೋಂಕೆಂದು ಹೇಳಿ, ಅವರು ಪ್ರತಿಜೀವಕಗಳನ್ನು ಬರೆದುಕೊಟ್ಟರು. ತದನಂತರ, ರಾತ್ರಿ ಬೆವರುವಿಕೆ ಆರಂಭವಾದಾಗ, ಮ್ಯಾರಿಲಿನ್ ನಿಜವಾಗಿಯೂ ಚಿಂತಿತಳಾದಳು. ಅವಳು ತನ್ನ ವೈದ್ಯರಲ್ಲಿಗೆ ಪುನಃ ಹೋದಳು. ಎದೆಯ ಎಕ್ಸ್ ರೇ ತೆಗೆಯುವಂತೆ ಅವರು ಏರ್ಪಡಿಸಿದರು.
ಎಕ್ಸ್ ರೇ ಛಾಯಾಚಿತ್ರದ ಮೇಲೆ ಕಾಣಿಸಿಕೊಂಡ ಮಬ್ಬಾದ ಆಕಾರವು, ತುರ್ತಿನ ಕ್ರಿಯೆಯನ್ನು ಕೇಳಿಕೊಂಡಿತಾದರೂ, ಫೋನಿನ ಮೂಲಕ ಮ್ಯಾರಿಲಿನಳನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ. “ವೈದ್ಯರು ನನ್ನ ತಾಯಿಯನ್ನು ಸಂಪರ್ಕಿಸಿ, ನಾನು ನಿಜವಾಗಿಯೂ ಅಸ್ವಸ್ಥಳಾಗಿದ್ದೇನೆಂದು ಅವರಿಗೆ ಹೇಳಿದರು. ನನ್ನ ತಾಯಿ ನನ್ನನ್ನು ಕಾಣಲು ಬಂದು, ಕೂಡಲೇ [ವೈದ್ಯರ] ಬಳಿಗೆ ಹೋಗುವಂತೆ ನನಗೆ ಹೇಳಿದರು. ಅವರು ನನ್ನನ್ನು ಆಸ್ಪತ್ರೆಗೆ ಕಳುಹಿಸಿದರು. ಅಲ್ಲಿ ಮತ್ತೊಂದು ಎಕ್ಸ್ ರೇಯನ್ನು ತೆಗೆದ ಮೇಲೆ, ಅವರು ನನ್ನನ್ನು ಆಸ್ಪತ್ರೆಯಲ್ಲಿ ಇರಿಸಿಕೊಂಡರು,” ಎಂದು ಮ್ಯಾರಿಲಿನ್ ಹೇಳಿದಳು.
ತನಗೆ ಕ್ಷಯರೋಗ (ಟಿಬಿ) ಇದೆಯೆಂದು ಮ್ಯಾರಿಲಿನ್ಗೆ ಗೊತ್ತಾದಾಗ, ಅವಳು ತಲ್ಲಣಗೊಂಡಳು. ತಾನು ಸತ್ತುಹೋಗುತ್ತೇನೆಂದು ಅವಳು ನೆನಸಿದಳು, ಆದರೆ ಟಿಬಿನಿರೋಧಕ ಔಷಧಗಳ ಚಿಕಿತ್ಸೆಯ ಬಳಿಕ, ಅವಳು ಬೇಗನೆ ಗುಣವಾದಳು.
ತನಗೆ ಟಿಬಿ ಇರುವ ವಿಷಯದಲ್ಲಿ ಮ್ಯಾರಿಲಿನ್ ಆಶ್ಚರ್ಯಗೊಂಡದ್ದು ಗ್ರಾಹ್ಯವೇ ಸರಿ. ಅಭಿವೃದ್ಧಿಗೊಂಡಿರುವ ಲೋಕದಲ್ಲಿ ಟಿಬಿ ಜಯಿಸಲ್ಪಟ್ಟಿತ್ತೆಂದು, ಆರೋಗ್ಯ ವೃತ್ತಿಯಲ್ಲಿರುವ ಅನೇಕರು ಇತ್ತೀಚಿನ ವರೆಗೂ ನಂಬಿದ್ದರು. ಲಂಡನಿನ ಒಂದು ಚಿಕಿತ್ಸಾ ಕೇಂದ್ರದಲ್ಲಿರುವ ಒಬ್ಬ ಸಹಾಯಕಿಯು ಹೇಳಿದ್ದು: “ಅದು ಪ್ಲೇಗ್ ರೋಗದೊಂದಿಗೆ ಅಂತ್ಯಗೊಂಡಿತ್ತೆಂದು ನಾನು ನೆನಸಿದೆ. ಆದರೆ ನಾನಿಲ್ಲಿ ಕೆಲಸಮಾಡಲು ಬಂದಾಗ, ಅದು ನಿಶ್ಚಯವಾಗಿಯೂ ಅಸ್ತಿತ್ವದಲ್ಲಿದ್ದು, ನಗರದ ಒಳಭಾಗದಲ್ಲಿ ತೀವ್ರವಾಗಿ ಅಭಿವೃದ್ಧಿಯಾಗುತ್ತಾ ಇರುವುದನ್ನು ನಾನು ಕಂಡುಕೊಂಡೆ.”
ಟಿಬಿ ಎಲ್ಲಿ ಮಾಯವಾಗಿಹೋಗಿತ್ತೊ ಆ ಸ್ಥಳಗಳಿಗೆ ಅದು ಹಿಂದಿರುಗಿದೆ; ಅದು ಎಲ್ಲಿ ಉಳಿದಿತ್ತೊ ಅಲ್ಲಿ ಇನ್ನೂ ಕೆಟ್ಟದ್ದಾಗಿ ಪರಿಣಮಿಸಿದೆ. ಟಿಬಿ ಜಯಿಸಲ್ಪಡುವ ಬದಲಿಗೆ, ಯುದ್ಧ ಮತ್ತು ಕ್ಷಾಮಕ್ಕೆ ಸಮವಾಗಿರುವ ಒಂದು ಹಂತಕ ರೋಗವಾಗಿ ಪರಿಣಮಿಸಿದೆ. ಇದನ್ನು ಪರಿಗಣಿಸಿ:
◼ ಆಧುನಿಕ ಔಷಧಿಯ ಅದ್ಭುತಕರ ಅಭಿವೃದ್ಧಿಗಳ ಎದುರಿನಲ್ಲಿಯೂ, ಕಳೆದ ನೂರು ವರ್ಷಗಳಲ್ಲಿ ಟಿಬಿ 20 ಕೋಟಿ ಜನರನ್ನು ಸಮಾಧಿಗೆ ಕಳುಹಿಸಿದೆ.
◼ 200 ಕೋಟಿಯಷ್ಟು ಜನರು—ಲೋಕದ ಜನಸಂಖ್ಯೆಯ ಮೂರನೆಯ ಒಂದು ಭಾಗ—ಒಂದು ರೀತಿಯ ಏಕಾಣುಜೀವಿಯಾದ ಟಿಬಿ ಬಸಿಲಸ್ನಿಂದ ಈಗಾಗಲೇ ಸೋಂಕಿತರಾಗಿದ್ದಾರೆ. ಇದಕ್ಕೆ ಕೂಡಿಸಿ, ಪ್ರತಿ ಸೆಕೆಂಡಿಗೆ ಮತ್ತೊಬ್ಬ ವ್ಯಕ್ತಿಯು ಟಿಬಿಯಿಂದ ಸೋಂಕಿತನಾಗುತ್ತಾನೆ!
◼ 1995ರಲ್ಲಿ, ಯಾರಲ್ಲಿ ಟಿಬಿ ಪೂರ್ತಿಯಾಗಿ ವಿಕಾಸಗೊಂಡಿತ್ತೊ ಅವರ ಸಂಖ್ಯೆಯು ಸುಮಾರು 2.2 ಕೋಟಿಯಾಗಿತ್ತು. ಹೆಚ್ಚುಕಡಿಮೆ 30 ಲಕ್ಷ ಜನರು ಸತ್ತುಹೋದರು, ಅವರಲ್ಲಿ ಹೆಚ್ಚಿನವರು ವರ್ಧಿಷ್ಣು ಲೋಕದಲ್ಲಿರುವವರಾಗಿದ್ದರು.
ಟಿಬಿಯ ವಿರುದ್ಧ ಹೋರಾಡಲು ಸಮರ್ಥವಾದ ಔಷಧಗಳು ಲಭ್ಯವಾಗಿರುವಾಗಲೂ, ಈ ರೋಗವು ಮಾನವಕುಲವನ್ನು ಬಿಡದೆ ಬಾಧಿಸುವುದೇಕೆ? ಅದು ಎಂದಾದರೂ ಜಯಿಸಲ್ಪಡುವುದೊ? ಅದರ ವಿರುದ್ಧ ನಿಮ್ಮನ್ನು ಸಂರಕ್ಷಿಸಿಕೊಳ್ಳುವ ಯಾವ ವಿಧವಾದರೂ ಇದೆಯೊ? ಈ ಪ್ರಶ್ನೆಗಳನ್ನು ಮುಂದಿನ ಲೇಖನಗಳು ಉತ್ತರಿಸುವವು.
[ಪುಟ 3 ರಲ್ಲಿರುವ ಚಿತ್ರ ಕೃಪೆ]
New Jersey Medical School—National Tuberculosis Center