ವಿಜಯ ಮತ್ತು ವಿಷಾದಾತ
“ಕಳೆದ 30 ವರ್ಷಗಳಿಂದ, ಕ್ಷಯರೋಗದ ಕಥೆ ವಿಜಯ ಮತ್ತು ವಿಷಾದಾಂತದಿಂದ ತುಂಬಿದೆ—ಆ ರೋಗವನ್ನು ನಿಯಂತ್ರಿಸಲು ಮತ್ತು ಅಂತಿಮವಾಗಿ ನಿರ್ಮೂಲಗೊಳಿಸಲು ಸಾಧನವನ್ನು ಒದಗಿಸಿದ ವಿಜ್ಞಾನಿಗಳ ವಿಜಯ ಮತ್ತು ಅವರ ಶೋಧಗಳ ಪ್ರಯೋಜನ ಪಡೆಯುವುದರಲ್ಲಿ ವ್ಯಾಪಕವಾದ ವೈಫಲ್ಯಗಳ ವಿಷಾದಾಂತ.”—ಜೆ. ಆರ್. ಬಿಗ್ನಾಲ್, 1982.
ಕ್ಷಯರೋಗ (ಟಿಬಿ)ವು ಬಹಳ ಕಾಲದಿಂದ ಕೊಲ್ಲುತ್ತ ಬಂದಿದೆ. ಯೂರೋಪಿಯನರು ದಕ್ಷಿಣ ಅಮೆರಿಕಕ್ಕೆ ಜಲಯಾನ ಮಾಡುವುದಕ್ಕೆ ಎಷ್ಟೋ ಮೊದಲು, ಅದು ಪೆರು ದೇಶದ ಇಂಕ ಜನರನ್ನು ಪೀಡಿಸಿತು. ಫರೋಹರು ಐಗುಪ್ತವನ್ನು ವೈಭವದಿಂದ ಆಳಿದ ದಿನಗಳಲ್ಲಿ ಅದು ಐಗುಪ್ತ್ಯರ ಮೇಲೆ ದಾಳಿ ನಡೆಸಿತು. ಪುರಾತನದ ಬಾಬೆಲ್, ಗ್ರೀಸ್ ಮತ್ತು ಚೀನದಲ್ಲಿ, ಟಿಬಿ ವರಿಷ್ಠರ ಮೇಲೂ ಕನಿಷ್ಟರ ಮೇಲೂ ಬೀಳಲು ಹೊಂಚುಹಾಕಿತೆಂದು ಹಳೆಯ ಬರಹಗಳು ತೋರಿಸುತ್ತವೆ.
ಹದಿನೆಂಟನೆಯ ಶತಮಾನದಿಂದ ಹಿಡಿದು 20ನೆಯ ಶತಮಾನದ ಆರಂಭದ ವರೆಗೆ, ಪಾಶ್ಚಾತ್ಯ ದೇಶಗಳಲ್ಲಿ ಟಿಬಿ ಮರಣದ ಪ್ರಧಾನ ಕಾರಣವಾಗಿತ್ತು. ಕೊನೆಗೆ 1882ರಲ್ಲಿ, ಜರ್ಮನ್ ವೈದ್ಯ, ರೋಬರ್ಟ್ ಕಾಖ್, ರೋಗಕಾರಣವಾದ ಬಸಿಲಸ್ ಏಕಾಣುಜೀವಿಯ ಕುರಿತ ತನ್ನ ಶೋಧವನ್ನು ಅಧಿಕೃತವಾಗಿ ಪ್ರಕಟಿಸಿದನು. ಹದಿಮೂರು ವರ್ಷಗಳ ಬಳಿಕ, ವಿಲ್‌ಹೆಲ್ಮ್ ರಾಅಂಟ್ಜೆನ್ ಎಕ್ಸ್ ರೇಯನ್ನು ಕಂಡುಹಿಡಿದನು. ಕ್ಷಯರೋಗದ ಗಾಯಗಳ ಸೂಚನೆಗಳನ್ನು ಜೀವಿತರ ಶ್ವಾಸಕೋಶಗಳಲ್ಲಿ ಕಾಣುವರೆ ಅದರಿಂದ ಸಾಧ್ಯವಾಯಿತು. ಮುಂದೆ, 1921ರಲ್ಲಿ ಫ್ರೆಂಚ್ ವಿಜ್ಞಾನಿಗಳು ಟಿಬಿಯ ವಿರುದ್ಧ ಒಂದು ಲಸಿಕೆಯನ್ನು ತಯಾರಿಸಿದರು. ಅದನ್ನು ಕಂಡುಹಿಡಿದ ವಿಜ್ಞಾನಿಗಳ ಹೆಸರಿರುವ ಈ ಬಿಸಿಜಿ (ಬಸಿಲಸ್ ಕಾಲ್ಮೆಟ್-ಗೇರನ್), ಈ ರೋಗದ ನಿವಾರಕವಾಗಿ ಒಂದೇ ಲಸಿಕೆಯಾಗಿ ಉಳಿದಿದೆ. ಆದರೂ, ಟಿಬಿ ಭಯಂಕರ ನಷ್ಟವನ್ನು ವಸೂಲುಮಾಡುತ್ತ ಮುಂದುವರಿದಿದೆ.
ಕಟ್ಟಕಡೆಗೆ, ಒಂದು ಚಿಕಿತ್ಸೆ!
ವೈದ್ಯರು ಟಿಬಿ ರೋಗಿಗಳನ್ನು ಸ್ಯಾನಟೋರಿಯಮ್ ಚಿಕಿತ್ಸಾಲಯಗಳಿಗೆ ಕಳುಹಿಸಿದರು. ರೋಗಿಗಳು ವಿಶ್ರಾಂತಿ ತೆಗೆದುಕೊಂಡು ತಾಜಾ ಗಾಳಿಯನ್ನು ಸೇವಿಸುವಂತೆ, ಈ ಆಸ್ಪತ್ರೆಗಳನ್ನು ಪದೇ ಪದೇ ಬೆಟ್ಟಗಳಲ್ಲಿ ಕಟ್ಟಲಾಗುತ್ತಿತ್ತು. ಬಳಿಕ 1944ರಲ್ಲಿ, ಅಮೆರಿಕದ ವೈದ್ಯರು ಸ್ಟ್ರೆಪ್ಟಮೈಸಿನ್ ಅನ್ನು ಕಂಡುಹಿಡಿದರು. ಟಿಬಿಯ ವಿರುದ್ಧವಾಗಿ ಪರಿಣಾಮಕಾರಿಯಾಗಿ ಕಂಡುಬಂದ ಪ್ರಥಮ ಜೀವಾಣುನಾಶಕ ಇದಾಗಿತ್ತು. ಬೇಗನೆ, ಟಿಬಿ ವಿರುದ್ಧವಾದ ಇತರ ಔಷಧಿಗಳು ಹೊರಬಂದವು. ಕೊನೆಗೆ, ತಮ್ಮ ಸ್ವಂತ ಮನೆಗಳಲ್ಲಿಯೂ, ಟಿಬಿ ರೋಗಿಗಳು ರೋಗವನ್ನು ಗುಣಪಡಿಸಿಕೊಳ್ಳುವ ಸಾಧ್ಯತೆಯಿತ್ತು.
ಸೋಂಕಿನ ಪ್ರಮಾಣ ಕೆಳಗಿಳಿದಾಗ, ಭವಿಷ್ಯ ಸುಖಮಯವಾಗಿ ಕಂಡಿತು. ಆಸ್ಪತ್ರೆಗಳನ್ನು ಮುಚ್ಚಲಾಯಿತು ಮತ್ತು ಟಿಬಿ ಸಂಶೋಧನೆಗಾಗಿದ್ದ ನಿಧಿ ಬರಿದಾಯಿತು. ನಿರೋಧಕ ಕಾರ್ಯಕ್ರಮಗಳನ್ನು ರದ್ದುಮಾಡಲಾಯಿತು ಮತ್ತು ವಿಜ್ಞಾನಿಗಳು ಮತ್ತು ವೈದ್ಯರು ಹೊಸ ವೈದ್ಯಕೀಯ ಪಂಥಾಹ್ವಾನಗಳಿಗಾಗಿ ಹುಡುಕಿದರು.
ವಿಕಾಸಶೀಲ ದೇಶಗಳಲ್ಲಿ ಟಿಬಿ ಇನ್ನೂ ಭಾರಿ ಬಲಿಗಳನ್ನು ತೆಗೆದುಕೊಳ್ಳುತ್ತಿದ್ದರೂ, ಸುಧಾರಣೆ ನಿಶ್ಚಯವಾಗಿತ್ತು. ಟಿಬಿ ಇತಿಹಾಸಗತವಾಗಿತ್ತು. ಹೀಗೆಂದು ನೆನಸಿದ್ದು ಜನರು, ಆದರೆ ಅವರ ಎಣಿಕೆ ತಪ್ಪಾಗಿತ್ತು.
ಮಾರಕವಾದ ಪುನರಾಗಮನ
ಮಧ್ಯ 1980ಗಳಲ್ಲಿ, ಟಿಬಿ ಭಯಂಕರವೂ ಮಾರಕವೂ ಆಗಿ ಪುನರಾಗಮಿಸಿತು. ಬಳಿಕ, ಎಪ್ರಿಲ್ 1993ರಲ್ಲಿ, ಲೋಕಾರೋಗ್ಯ ಸಂಸ್ಥೆಯು (ಡಬ್ಲ್ಯೂಏಚ್‌ಓ) ಟಿಬಿಯನ್ನು, “ಭೌಗೋಳಿಕ ತುರ್ತು” ಎಂದು ಘೋಷಿಸಿ, “ಅದರ ವ್ಯಾಪನವನ್ನು ತಡೆಯಲು ಶೀಘ್ರ ಕ್ರಮವನ್ನು ಕೈಕೊಳ್ಳದಿರುವಲ್ಲಿ, ಮುಂದಿನ ದಶಕದಲ್ಲಿ ಮೂರು ಕೋಟಿ ಜೀವಗಳನ್ನು ಆ ರೋಗವು ಬಲಿ ತೆಗೆದುಕೊಳ್ಳುವುದು” ಎಂದು ಹೇಳಿತು. ಡಬ್ಲ್ಯೂಏಚ್‌ಓ ಇತಿಹಾಸದಲ್ಲಿ ಆ ರೀತಿಯ ಘೋಷಣೆಯಲ್ಲಿ ಇದು ಪ್ರಥಮವಾಗಿತ್ತು.
ಅಂದಿನಿಂದ, ಯಾವುದೇ “ಶೀಘ್ರ ಕ್ರಮ” ಆ ರೋಗದ ವ್ಯಾಪನೆಯನ್ನು ತಡೆದದ್ದಿಲ್ಲ. ವಾಸ್ತವವಾಗಿ, ಸನ್ನಿವೇಶವು ಕೆಟ್ಟಿದೆ. ಟಿಬಿಯಿಂದ 1995ರಲ್ಲಿ, ಇತಿಹಾಸದ ಇನ್ನಾವ ವರ್ಷಕ್ಕಿಂತಲೂ ಹೆಚ್ಚು ಜನರು ಸತ್ತರೆಂದು ಇತ್ತೀಚೆಗೆ ಡಬ್ಲ್ಯೂಏಚ್‌ಓ ವರದಿಸಿತು. ಮುಂದಿನ 50 ವರ್ಷಗಳಲ್ಲಿ 50 ಕೋಟಿಗಳಷ್ಟು ಜನರು ಟಿಬಿ ರೋಗಸ್ಥರಾಗಬಹುದೆಂದೂ ಡಬ್ಲ್ಯೂಏಚ್‌ಓ ಎಚ್ಚರಿಸಿತು. ಹೆಚ್ಚೆಚ್ಚಾಗಿ ಜನರು, ಅನೇಕ ವೇಳೆ ವಾಸಿಯಾಗದಿದ್ದ, ವಿವಿಧೌಷಧ ನಿರೋಧಕವಾದ ಟಿಬಿಗೆ ಬಲಿಯಾಗಲಿದ್ದರು.
ಮಾರಕ ಪುನರಾಗಮನವೇಕೆ?
ಇದಕ್ಕೆ ಒಂದು ಕಾರಣವು, ಕಳೆದ 20 ವರ್ಷಗಳಲ್ಲಿ, ಟಿಬಿ ನಿಯಂತ್ರಣ ಕಾರ್ಯಕ್ರಮಗಳು ಲೋಕದ ಅನೇಕ ದೇಶಗಳಲ್ಲಿ ಕೆಡುತ್ತ ಹೋಗಿವೆ ಇಲ್ಲವೆ ಇಲ್ಲದೆ ಹೋಗಿವೆ. ಇದು ರೋಗಿಗಳ ರೋಗನಿರ್ಣಯಮಾಡಿ ಅವರಿಗೆ ಚಿಕಿತ್ಸೆ ನೀಡುವುದನ್ನು ವಿಳಂಬಿಸಿದೆ. ಸರದಿಯಾಗಿ ಇದು ಹೆಚ್ಚು ಮರಣಗಳನ್ನೂ ರೋಗಹರಡಿಕೆಯನ್ನೂ ಉಂಟುಮಾಡಿದೆ.
ಟಿಬಿಯ ಪುನರ್ತೋರಿಬರುವಿಕೆಗೆ ಇನ್ನೊಂದು ಕಾರಣವು, ಜನನಿಬಿಡ ನಗರಗಳಲ್ಲಿ, ವಿಶೇಷವಾಗಿ ವಿಕಾಸಶೀಲ ಲೋಕದ ಬೃಹತ್ ನಗರಗಳಲ್ಲಿ, ಬಡ, ನ್ಯೂನಪೋಷಿತ ಜನರ ಹೆಚ್ಚುತ್ತಿರುವ ಸಂಖ್ಯೆಯೇ. ಟಿಬಿಯು ಬಡ ಜನಸಂಖ್ಯೆಗಳಿಗೆ ಸೀಮಿತವಾಗಿಲ್ಲದಿದ್ದರೂ—ಟಿಬಿ ಯಾರಿಗೂ ಸೋಂಕಬಲ್ಲದು—ಅನಿರ್ಮಲಕರವಾದ ಹಾಗೂ ಜನನಿಬಿಡ ಪರಿಸ್ಥಿತಿಗಳು, ಈ ರೋಗವು ವ್ಯಕ್ತಿಯಿಂದ ವ್ಯಕ್ತಿಗೆ ಹರಡುವುದನ್ನು ಹೆಚ್ಚು ಸುಲಭಮಾಡುತ್ತವೆ. ಜನರ ರೋಗರಕ್ಷಾ ವ್ಯವಸ್ಥೆಗಳು, ರೋಗವನ್ನು ತಡೆಗಟ್ಟಲಿಕ್ಕಾಗಿ ತೀರ ಬಲಹೀನವಾಗಿರುವ ಸಂದರ್ಭಗಳನ್ನೂ ಹೆಚ್ಚಿಸುತ್ತವೆ.
ಏಚ್‌ಐವಿ ಮತ್ತು ಟಿಬಿ—ಇಬ್ಬಾಧೆ
ದೊಡ್ಡ ಸಮಸ್ಯೆಯೇನಂದರೆ, ಟಿಬಿಯು ಏಡ್ಸ್ ವಿಷಕಣವಾದ ಏಚ್‌ಐವಿಯೊಂದಿಗೆ ಒಂದು ಮಾರಕವಾದ ಪಾಲುದಾರಿಕೆಯನ್ನು ರಚಿಸಿರುವುದೇ. ಏಡ್ಸ್ ಸಂಬಂಧಿತ ಕಾರಣಗಳಿಂದಾಗಿ 1995ರಲ್ಲಿ ಸತ್ತರೆಂದು ಅಂದಾಜು ಮಾಡಲಾಗಿರುವ ಹತ್ತು ಲಕ್ಷ ಜನರಲ್ಲಿ, ಪ್ರಾಯಶಃ ಮೂರರಲ್ಲಿ ಒಂದು ಭಾಗ ಜನರು ಟಿಬಿಯ ಕಾರಣ ಸತ್ತರು. ಟಿಬಿಯನ್ನು ನಿರೋಧಿಸಲು ದೇಹಕ್ಕಿರುವ ಸಾಮರ್ಥ್ಯವನ್ನು ಏಚ್‌ಐವಿ ದುರ್ಬಲಗೊಳಿಸುವುದೇ ಇದಕ್ಕೆ ಕಾರಣ.
ಹೆಚ್ಚಿನ ಜನರಲ್ಲಿ, ಟಿಬಿ ಸೋಂಕು ಕಾಯಿಲೆ ಬೀಳಿಸುವ ಹಂತಕ್ಕೆ ಪ್ರಗತಿ ಹೊಂದುವುದಿಲ್ಲ. ಇದೇಕೆ? ಏಕೆಂದರೆ ಟಿಬಿ ಏಕಾಣುಜೀವಿಗಳು ಮ್ಯಾಕ್ರಫೇಜ್‌ಗಳೆಂಬ ಕಣಗಳೊಳಗೆ ಬಂಧಿಸಲ್ಪಟ್ಟಿರುತ್ತವೆ. ಅಲ್ಲಿ ಅವು ವ್ಯಕ್ತಿಯ ರೋಗರಕ್ಷಾ ವ್ಯವಸ್ಥೆಯಿಂದ, ಪ್ರತ್ಯೇಕವಾಗಿ ಟಿ ಲಿಂಫೊಸೈಟ್‌ಗಳಿಂದ, ಅಥವಾ ಟಿ ದುಗ್ಧಕಣಗಳಿಂದ ಬಂಧಿಸಲ್ಪಟ್ಟಿರುತ್ತವೆ.
ಟಿಬಿ ವಿಷಕಣಗಳು ಬಿಗಿ ಮುಚ್ಚಳಗಳ ಬುಟ್ಟಿಗಳಲ್ಲಿ ಭದ್ರವಾಗಿರುವ ಸರ್ಪಗಳಂತಿವೆ. ಮ್ಯಾಕ್ರಫೇಜ್‌ಗಳು ಆ ಬುಟ್ಟಿಗಳು ಮತ್ತು ಟಿ ಕಣಗಳು ಆ ಮುಚ್ಚಳಗಳು. ಏಡ್ಸ್ ಏಕಾಣುಜೀವಿ ಬಂದು ಸೇರಿದಾಗ, ಅದು ಆ ಬುಟ್ಟಿಗಳಿಂದ ಮುಚ್ಚಳಗಳನ್ನು ಕಿತ್ತೊಗೆಯುತ್ತದೆ. ಅದು ಸಂಭವಿಸಿದಾಗ ವಿಷಕಣಗಳು ತಪ್ಪಿಸಿಕೊಂಡು ಹೋಗಿ, ದೇಹದ ಯಾವ ಭಾಗವನ್ನೂ ಹಾಳುಮಾಡಲು ಸ್ವತಂತ್ರವಾಗಿರುತ್ತವೆ.
ಆದಕಾರಣ, ಏಡ್ಸ್ ರೋಗಿಗಳು ಸಕ್ರಿಯ ಟಿಬಿಯನ್ನು ಬೆಳೆಸಿಕೊಳ್ಳುವುದು, ಆರೋಗ್ಯಕರವಾದ ರೋಗರಕ್ಷಾ ವ್ಯವಸ್ಥೆಗಳಿರುವ ಜನರಿಗಿಂತ ಎಷ್ಟೊ ಹೆಚ್ಚು ಸಂಭಾವ್ಯ. ಸ್ಕಾಟ್ಲೆಂಡ್‌ನ ಟಿಬಿ ವಿಶೇಷಜ್ಞರೊಬ್ಬರು ಹೇಳಿದ್ದು: “ಏಚ್‌ಐವಿ ಇರುವ ಜನರು ತೀರ ಸುಲಭ ಪ್ರಭಾವಿತರು. ಲಂಡನ್‌ನ ಒಂದು ಚಿಕಿತ್ಸಾಲಯದಲ್ಲಿ ಇಬ್ಬರು ಏಚ್‌ಐವಿ ರೋಗಿಗಳು, ಅವರು ಕುಳಿತಿದ್ದ ಮೊಗಸಾಲೆಯಲ್ಲಿ ಅವರನ್ನು ದಾಟಿ ಒಬ್ಬ ಟಿಬಿ ರೋಗಿಯನ್ನು ಟ್ರಾಲಿಯಲ್ಲಿ ದೂಡಿಕೊಂಡು ಹೋಗುತ್ತಿದ್ದಾಗ ಆ ರೋಗದ ಸೋಂಕನ್ನು ಪಡೆದರು.”
ಹೀಗೆ ಏಡ್ಸ್, ಟಿಬಿ ಸಾಂಕ್ರಾಮಿಕ ರೋಗವು ವರ್ಧಿಸುವಂತೆ ಸಹಾಯಮಾಡಿದೆ. ಒಂದು ಅಂದಾಜಿಗನುಸಾರ, ಇಸವಿ 2000ದೊಳಗೆ, ಏಡ್ಸ್ ಸಾಂಕ್ರಾಮಿಕ ರೋಗವು, ಅನ್ಯಥಾ ಸಂಭವಿಸದಿರುತ್ತಿದ್ದ 14 ಲಕ್ಷ ಟಿಬಿ ರೋಗಸ್ಥಿತಿಗಳಲ್ಲಿ ಫಲಿಸುವುದು. ಟಿಬಿಯ ವರ್ಧನೆಯಲ್ಲಿ ಒಂದು ಮುಖ್ಯ ಅಂಶವೇನಂದರೆ, ಏಡ್ಸ್ ಆಹುತಿಗಳು ಆ ರೋಗಕ್ಕೆ ತೀರ ಸುಲಭವಾಗಿ ಈಡಾಗುತ್ತಾರೆ ಮಾತ್ರವಲ್ಲ, ಏಡ್ಸ್ ರೋಗವಿಲ್ಲದವರನ್ನು ಸೇರಿಸಿ ಇತರರಿಗೂ ಅವರು ಟಿಬಿಯನ್ನು ಹರಡಿಸಬಲ್ಲರು.
ವಿವಿಧೌಷಧ ನಿರೋಧಕ ಟಿಬಿ
ಟಿಬಿಯ ವಿರುದ್ಧ ಹೋರಾಟವನ್ನು ಹೆಚ್ಚು ಕಷ್ಟಕರವಾಗಿಸುವುದರಲ್ಲಿ ಕೊನೆಯ ಕಾರಣವು, ಟಿಬಿಯ ಔಷಧ ನಿರೋಧಕ ತಳಿಯ ನಿರ್ಗಮನವೇ. ಈ ಅತೀತ ತಳಿಗಳು ರೋಗವನ್ನು ಪುನಃ ಗುಣವಾಗದಂತೆ ಮಾಡುವ ಬೆದರಿಕೆಯನ್ನು ಹಾಕುತ್ತವೆ—ಆ್ಯಂಟಿಬಯಾಟಿಕ್ ಪ್ರತಿಜೀವಕಗಳಿಗಿಂತ ಮೊದಲಿನ ಯುಗಗಳಲ್ಲಿದ್ದಂತೆ.
ಹಾಸ್ಯವ್ಯಂಗ್ಯವಾಗಿ, ಟಿಬಿ ನಿರೋಧಕ ಔಷಧಗಳ ನ್ಯೂನ ನಿರ್ವಹಣ ಆಡಳಿತವು, ವಿವಿಧೌಷಧ ನಿರೋಧಕ ಟಿಬಿಯ ಪ್ರಧಾನ ಕಾರಣವಾಗಿದೆ. ಟಿಬಿಗೆ ಪರಿಣಾಮಕಾರಿಯಾದ ಚಿಕಿತ್ಸೆಯು ಕಡಮೆಪಕ್ಷ ಆರು ತಿಂಗಳುಗಳನ್ನಾವರಿಸಿ, ರೋಗಿಗಳು ನಾಲ್ಕು ಔಷಧಗಳನ್ನು ತಪ್ಪದೆ ಕ್ರಮವಾಗಿ ಸೇವಿಸುವುದನ್ನು ಅಪೇಕ್ಷಿಸುತ್ತದೆ. ರೋಗಿಯು ದಿನಕ್ಕೆ ಒಂದು ಡಸನ್ನಿನಷ್ಟು ಗುಳಿಗೆಗಳನ್ನು ತಿನ್ನುವ ಆವಶ್ಯಕತೆಯಿರಬಹುದು. ರೋಗಿಗಳು ಔಷಧಗಳನ್ನು ಕ್ರಮವಾಗಿ ತೆಗೆದುಕೊಳ್ಳದಿದ್ದರೆ ಅಥವಾ ಚಿಕಿತ್ಸೆಯನ್ನು ಮುಗಿಸದಿರುವಲ್ಲಿ, ಕೊಲ್ಲಲು ಕಷ್ಟಕರವಾಗಿರುವ ಅಥವಾ ಕೊಲ್ಲಲು ಸಾಧ್ಯವಾಗದಿರುವ ಟಿಬಿಯ ತಳಿಗಳು ಬೆಳೆದುಬರುತ್ತವೆ. ಕೆಲವು ತಳಿಗಳು, ಸಾಮಾನ್ಯವಾಗಿ ಟಿಬಿಗಾಗಿ ತೆಗೆದುಕೊಳ್ಳುವ ಏಳರಷ್ಟೂ ಔಷಧಗಳಿಗೆ ನಿರೋಧಕವಾಗಿವೆ.
ವಿವಿಧೌಷಧ ನಿರೋಧಕ ಟಿಬಿಯ ರೋಗಿಗಳಿಗೆ ಚಿಕಿತ್ಸೆಮಾಡುವುದು ಕೇವಲ ಕಷ್ಟಕರವಾಗಿರುವುದು ಮಾತ್ರವಲ್ಲ, ದುಬಾರಿಯೂ ಆಗಿದೆ. ಇತರ ಟಿಬಿ ರೋಗಿಗಳ ಚಿಕಿತ್ಸೆಗಿಂತ ಇದರ ಖರ್ಚು ಸುಮಾರು ನೂರು ಪಾಲು ಹೆಚ್ಚಾಗಿರಬಲ್ಲದು. ಉದಾಹರಣೆಗೆ, ಅಮೆರಿಕದಲ್ಲಿ ಕೇವಲ ಒಂದು ರೋಗಸ್ಥಿತಿಯ ಚಿಕಿತ್ಸೆಯ ಖರ್ಚು 2,50,000 ಡಾಲರುಗಳನ್ನೂ ಮೀರಬಹುದು!
ಲೋಕವ್ಯಾಪಕವಾಗಿ ಸುಮಾರು ಹತ್ತು ಕೋಟಿ ಜನರು ಔಷಧ ನಿರೋಧಕ ಟಿಬಿ ತಳಿಗಳಿಂದ ಸೋಂಕಿತರಾಗಿರಬಹುದೆಂದು ಡಬ್ಲ್ಯೂಏಚ್‌ಓ ಅಂದಾಜು ಮಾಡುತ್ತದೆ. ಇವುಗಳಲ್ಲಿ ಕೆಲವನ್ನು, ಯಾವುದೇ ಜ್ಞಾತ ಟಿಬಿ ನಿರೋಧಕ ಔಷಧಗಳೂ ವಾಸಿಮಾಡವು. ಈ ಮಾರಕ ತಳಿಗಳು ಹೆಚ್ಚು ಸಾಮಾನ್ಯ ತಳಿಗಳಷ್ಟೇ ರೋಗ ಸೋಂಕಿಸುವಂತಹವುಗಳು.
ರೋಗನಿರೋಧ ಮತ್ತು ರೋಗಪರಿಹಾರ
ಈ ಭೌಗೋಳಿಕ ತುರ್ತು ಪರಿಸ್ಥಿತಿಯನ್ನು ಪ್ರತಿರೋಧಿಸಲು ಏನು ಮಾಡಲಾಗುತ್ತಿದೆ? ಈ ರೋಗವನ್ನು ನಿಯಂತ್ರಿಸುವ ಅತ್ಯುತ್ತಮ ಮಾರ್ಗವು, ಆದಿ ಹಂತದಲ್ಲಿಯೇ ಸೋಂಕಿನ ರೋಗಸ್ಥಿತಿಗಳನ್ನು ಕಂಡುಹಿಡಿದು ವಾಸಿಮಾಡುವುದೇ. ಈಗಾಗಲೇ ಅಸ್ವಸ್ಥರಾಗಿರುವವರಿಗೆ ಇದು ಸಹಾಯಮಾಡುವುದು ಮಾತ್ರವಲ್ಲ, ರೋಗವು ಇತರರಿಗೆ ಹರಡುವುದನ್ನೂ ಅದು ನಿಲ್ಲಿಸುತ್ತದೆ.
ಟಿಬಿಗೆ ಚಿಕಿತ್ಸೆ ಕೊಡದೆ ಬಿಡುವುದಾದರೆ, ಅದಕ್ಕೆ ಬಲಿಬೀಳುವವರಲ್ಲಿ ಅರ್ಧಕ್ಕಿಂತ ಹೆಚ್ಚು ಮಂದಿಯನ್ನು ಅದು ಕೊಲ್ಲುತ್ತದೆ. ಆದರೂ, ಯೋಗ್ಯ ರೀತಿಯಲ್ಲಿ ಚಿಕಿತ್ಸೆಮಾಡುವಲ್ಲಿ, ಹೆಚ್ಚುಕಡಮೆ ಪ್ರತಿಯೊಂದು ರೋಗಸ್ಥಿತಿಯಲ್ಲೂ ಟಿಬಿ—ಅದು ವಿವಿಧೌಷಧ ನಿರೋಧಕ ತಳಿಯಿಂದ ಬಂದದ್ದಲ್ಲವಾದರೆ—ವಾಸಿಯಾಗಬಲ್ಲದು.
ನಾವು ನೋಡಿರುವಂತೆ, ಪರಿಣಾಮಕಾರಿಯಾದ ಚಿಕಿತ್ಸೆಯು, ರೋಗಿಗಳು ಔಷಧದ ಸರಣಿಯನ್ನು ಪೂರ್ತಿಗೊಳಿಸುವುದನ್ನು ಅಪೇಕ್ಷಿಸುತ್ತದೆ. ಆದರೆ, ಅನೇಕಾವರ್ತಿ ಅವರು ಹೀಗೆ ಮಾಡುವುದಿಲ್ಲ. ಏಕೆ? ಏಕೆಂದರೆ ಚಿಕಿತ್ಸೆ ಆರಂಭಗೊಂಡ ಕೆಲವೇ ವಾರಗಳಲ್ಲಿ ಕೆಮ್ಮು, ಜ್ವರ ಮತ್ತು ಇತರ ರೋಗಸೂಚನೆಗಳು ಸಾಮಾನ್ಯವಾಗಿ ಕಾಣದೆಹೋಗುತ್ತವೆ. ಆದಕಾರಣ ಅನೇಕ ರೋಗಿಗಳು, ತಾವು ಗುಣಹೊಂದಿದ್ದೇವೆಂದು ನೆನಸಿ ಔಷಧ ತೆಗೆದುಕೊಳ್ಳುವುದನ್ನು ನಿಲ್ಲಿಸುತ್ತಾರೆ.
ಈ ಸಮಸ್ಯೆಯನ್ನು ಪ್ರತಿರೋಧಿಸಲು, ಡಬ್ಲ್ಯೂಏಚ್‌ಓ ಡಿಓಟಿಎಸ್ ಎಂಬ ಕಾರ್ಯಕ್ರಮವನ್ನು ಪ್ರವರ್ಧಿಸುತ್ತದೆ. ಇದು, “ಪ್ರತ್ಯಕ್ಷಾವಲೋಕನ ಚಿಕಿತ್ಸೆ, ಹ್ರಸ್ವ ಸರಣಿ” ಎಂಬುದರ ಇಂಗ್ಲಿಷ್ ಪ್ರಥಮಾಕ್ಷರಗಳನ್ನೊಳಗೊಂಡಿದೆ. ಅದರ ಹೆಸರೇ ಸೂಚಿಸುವಂತೆ, ಆರೋಗ್ಯ ಕಾರ್ಮಿಕರು ತಮ್ಮ ರೋಗಿಗಳು ಔಷಧಗಳ ಪ್ರತಿ ಡೋಸನ್ನು ತೆಗೆದುಕೊಳ್ಳುತ್ತಾರೆಂಬುದನ್ನು, ಚಿಕಿತ್ಸೆಯ ಎರಡು ತಿಂಗಳುಗಳಲ್ಲಿಯಾದರೂ ನಿಶ್ಚಯಮಾಡಿಕೊಳ್ಳುತ್ತಾರೆ. ಆದರೂ, ಇದನ್ನು ಮಾಡುವುದು ಯಾವಾಗಲೂ ಸುಲಭವಲ್ಲ, ಏಕೆಂದರೆ ಟಿಬಿ ಪೀಡಿತರಲ್ಲಿ ಅನೇಕರು ಸಮಾಜದ ಎಲ್ಲೆಗಳಲ್ಲಿ ಜೀವಿಸುತ್ತಾರೆ. ಅವರ ಜೀವನಗಳು ಅನೇಕಾವರ್ತಿ ಕ್ಷೋಭೆ ಮತ್ತು ಸಮಸ್ಯೆಗಳಿಂದ ತುಂಬಿರುವುದರಿಂದ—ಕೆಲವರಿಗೆ ಮನೆಯೂ ಇಲ್ಲ—ಅವರು ಔಷಧಗಳನ್ನು ತೆಗೆದುಕೊಳ್ಳುತ್ತಿದ್ದಾರೆಂದು ಕ್ರಮವಾಗಿ ನೋಡುವ ಪಂಥಾಹ್ವಾನವು ಭಾರಿಯಾಗಿರಬಲ್ಲದು.
ಹಾಗಾದರೆ, ಮಾನವಕುಲದ ಮೇಲೆ ಬಂದಿರುವ ಈ ವ್ಯಾಧಿಯನ್ನು ಅಂತಿಮವಾಗಿ ಜಯಿಸುವುದಕ್ಕೆ ಯಾವ ಪ್ರತೀಕ್ಷೆಗಳಾದರೂ ಇವೆಯೊ?
[ಪುಟ 5 ರಲ್ಲಿರುವ ಚೌಕ]
ಟಿಬಿ ವಾಸ್ತವಾಂಶ
ವರ್ಣನೆ: ಟಿಬಿ ಸಾಮಾನ್ಯವಾಗಿ ಶ್ವಾಸಕೋಶದ ಮೇಲೆ ಆಕ್ರಮಣಮಾಡಿ ಅದನ್ನು ಧ್ವಂಸಮಾಡುವ ರೋಗವಾದರೂ, ಅದು ದೇಹದ ಇತರ ಭಾಗಗಳಿಗೂ, ವಿಶೇಷವಾಗಿ ಮಿದುಳು, ಮೂತ್ರಜನಕಾಂಗ ಮತ್ತು ಎಲುಬುಗಳಿಗೂ ಹರಡಬಲ್ಲದು.
ರೋಗಸೂಚನೆಗಳು: ಶ್ವಾಸಕೋಶಗಳ ಟಿಬಿ, ಕೆಮ್ಮಲು, ತೂಕನಷ್ಟ ಮತ್ತು ಹಸಿವು ನಷ್ಟ, ರಾತ್ರಿಯಲ್ಲಿ ಕಠಿನ ಬೆವರಿಕೆ, ನಿತ್ರಾಣ, ಲಘು ಉಸಿರಾಟ ಮತ್ತು ಎದೆನೋವುಗಳನ್ನು ಉಂಟುಮಾಡಬಲ್ಲದು.
ರೋಗನಿರ್ಣಯ ವಿಧಾನ: ಕ್ಷಯಕ್ರಿಮಿಸಾರ ಚರ್ಮ ಪರೀಕ್ಷೆಯು, ಒಬ್ಬ ವ್ಯಕ್ತಿ ಬಸಿಲಸ್ ಏಕಾಣುಜೀವಿಯ ಸಂಪರ್ಕದಲ್ಲಿದ್ದಾನೊ ಎಂಬುದನ್ನು ತೋರಿಸಬಲ್ಲದು. ಎದೆಯ ಎಕ್ಸ್ ರೇ ಶ್ವಾಸಕೋಶಕ್ಕಾಗಿರುವ ಹಾನಿಯನ್ನು ತೋರಿಸಬಲ್ಲದು. ಇದು ಸಕ್ರಿಯ ಟಿಬಿ ಸೋಂಕನ್ನು ಸೂಚಿಸಬಹುದು. ರೋಗಿಯ ಉಗುಳಿನ ಪ್ರಯೋಗಶಾಲೆಯ ಪರೀಕ್ಷೆ, ಟಿಬಿ ಬಸಿಲೈ ಏಕಾಣುಜೀವಿಗಳನ್ನು ಕಂಡುಹಿಡಿಯುವ ಅತಿ ಭರವಸಾರ್ಹ ವಿಧವಾಗಿದೆ.
ಯಾರು ಪರೀಕ್ಷಿಸಲ್ಪಡಬೇಕು: ಟಿಬಿ ರೋಗಸೂಚನೆಗಳಿರುವವರು ಇಲ್ಲವೆ ಟಿಬಿ ರೋಗಿಗೆ ಒತ್ತಾಗಿ, ಪದೇ ಪದೇ ಒಡ್ಡಲ್ಪಟ್ಟಿರುವವರು—ವಿಶೇಷವಾಗಿ ನ್ಯೂನ ಗಾಳಿಸಂಚಾರವಿರುವ ಕೋಣೆಗಳಲ್ಲಿ.
ಲಸಿಕೆಹಾಕುವಿಕೆ: ಬಿಸಿಜಿ ಎಂಬ ಒಂದೇ ಒಂದು ಲಸಿಕೆಯಿದೆ. ಮಕ್ಕಳಲ್ಲಿ ಕಠಿನ ಟಿಬಿಯನ್ನು ಅದು ನಿರೋಧಿಸಿದರೂ ತರುಣರಿಗೂ ವಯಸ್ಕರಿಗೂ ಇದರಿಂದ ಪ್ರಯೋಜನವಾಗುವುದಿಲ್ಲ. ಹೆಚ್ಚೆಂದರೆ, ಈ ಲಸಿಕೆ ಸುಮಾರು 15 ವರ್ಷಗಳ ತನಕ ರೋಗರಕ್ಷಣೆಯನ್ನು ಒದಗಿಸುತ್ತದೆ. ರೋಗ ಅಂಟಿರದಿರುವವರನ್ನು ಮಾತ್ರ ಬಿಸಿಜಿ ಕಾಪಾಡುತ್ತದೆ; ಆಗಲೇ ರೋಗ ಅಂಟಿರುವವರಿಗೆ ಅದು ಯಾವ ಪ್ರಯೋಜನವನ್ನೂ ಕೊಡುವುದಿಲ್ಲ.
[ಪುಟ 5 ರಲ್ಲಿರುವ ಚೌಕ]
ಟಿಬಿ ಮತ್ತು ಫ್ಯಾಷನ್
ವಿಚಿತ್ರವೆಂದು ಕಂಡುಬರಬಹುದಾದರೂ, 19ನೆಯ ಶತಮಾನದಲ್ಲಿ ಟಿಬಿಯನ್ನು ಭಾವನಾ ಸ್ವಾತಂತ್ರಾತ್ಮಕವೆಂದು ನೋಡಲಾಗುತ್ತಿತ್ತು. ಅದರ ರೋಗಸೂಚನೆಗಳು ಸೂಕ್ಷ್ಮಗ್ರಾಹಿ, ಕಲಾತ್ಮಕ ಪ್ರವೃತ್ತಿಗಳನ್ನು ವರ್ಧಿಸುತ್ತವೆಂದು ಜನರು ನಂಬಿದರು.
ಫ್ರೆಂಚ್ ನಾಟಕಕಾರ ಮತ್ತು ಕಾದಂಬರಿಕಾರ ಆಲೆಕ್ಸಾಂಡ್ರ ಡೂಮಾ, ಆದಿ 1820ಗಳಲ್ಲಿ ತನ್ನ ಮೆಮ್ವಾರ್‌ನಲ್ಲಿ ಬರೆದುದು: “ಎದೆಯ ರೋಗಗಳಿಂದ ಬಳಲುವುದು ಆಗಿನ ಫ್ಯಾಷನ್ ಆಗಿತ್ತು; ಎಲ್ಲರೂ ಕ್ಷಯಗ್ರಸ್ತರಾಗಿದ್ದರು, ವಿಶೇಷವಾಗಿ ಕವಿಗಳು; ಮೂವತ್ತರ ಪ್ರಾಯವನ್ನು ತಲಪುವ ಮೊದಲು ಸಾಯುವುದು ಉತ್ತಮ ಫ್ಯಾಷನಾಗಿತ್ತು.”
ಇಂಗ್ಲಿಷ್ ಕವಿ ಲಾರ್ಡ್ ಬೈರನ್ ಹೀಗೆ ಹೇಳಿದನಂತೆ: “ನಾನು ಕ್ಷಯಗ್ರಸ್ತನಾಗಿ ಸಾಯಲಿಚ್ಛಿಸುತ್ತೇನೆ . . . ಆಗ ಮಹಿಳೆಯರು ಹೀಗೆನ್ನುವರು, ‘ಆ ಬಡಪಾಯಿ ಬೈರನ್‌ನನ್ನು ನೋಡಿರಿ, ಸಾಯುವಾಗ ಅವನು ಎಷ್ಟು ಸ್ವಾರಸ್ಯವುಳ್ಳವನಾಗಿ ಕಾಣುತ್ತಾನೆ!’”
ಟಿಬಿಯಿಂದಾಗಿ ಸತ್ತನೆಂದು ತಿಳಿದುಬಂದಿರುವ, ಅಮೆರಿಕನ್ ಲೇಖಕ ಹೆನ್ರಿ ಡೇವಿಡ್ ಥರೋ ಬರೆದುದು: “ಆರೋಗ್ಯಹೀನತೆ ಮತ್ತು ರೋಗ, ಅನೇಕಾವರ್ತಿ, . . . ಕೆನ್ನೆ ಕೆಂಪೇರುವ ಕ್ಷಯಜ್ವರದಂತೆ ಕಾಂತಿಪೂರ್ಣವಾಗಿದೆ.”
ಟಿಬಿಯ ಕುರಿತ ಈ ಆಕರ್ಷಣೆಯ ಕುರಿತು ಮಾತಾಡುತ್ತ, ದ ಜರ್ನಲ್ ಆಫ್ ದಿ ಅಮೆರಿಕನ್ ಮೆಡಿಕಲ್ ಅಸೋಸಿಯೇಷನ್‌ನಲ್ಲಿ ಒಂದು ಲೇಖನವು ಹೇಳಿದ್ದು: “ಈ ರೋಗಕ್ಕಾಗಿದ್ದ ವಿರೋಧಾಭಾಸಾತ್ಮಕವಾದ ಮಮತೆ, ಫ್ಯಾಷನ್ ಅಭಿರುಚಿಗಳನ್ನು ವ್ಯಾಪಿಸಿತು; ಸ್ತ್ರೀಯರು ಬಿಳಿಚಿಕೊಂಡ, ಭಿದುರ ನೋಟಕ್ಕಾಗಿ ಪ್ರಯತ್ನಿಸುತ್ತ, ಬಿಳಿ ಪ್ರಸಾಧನಗಳನ್ನು ಉಪಯೋಗಿಸಿ, ತೆಳ್ಳಗಾದ ಮಸ್ಲಿನ್ ಉಡುಪುಗಳನ್ನು ಮೆಚ್ಚಿದರು—ಹೆಚ್ಚಾಗಿ ಇಂದಿನ, ಆಹಾರಮಾಂದ್ಯ ತೋರಿಕೆಯ ರೂಪದರ್ಶಿಯರು ಕಾಣಲು ಪ್ರಯತ್ನಿಸುವಂತೆ.”
[ಪುಟ 7 ರಲ್ಲಿರುವ ಚೌಕ]
ಟಿಬಿಯನ್ನು ಸೋಂಕಿಸಿಕೊಳ್ಳುವುದು ಸುಲಭವೊ?
“ಕ್ಷಯರೋಗದ ಬ್ಯಾಕ್ಟೀರಿಯದಿಂದ ಅಡಗಿಕೊಳ್ಳುವ ಸ್ಥಳವೇ ಇಲ್ಲ,” ಎಂದು ಡಬ್ಲ್ಯೂಏಚ್‌ಓ ಗ್ಲೋಬಲ್ ಟಿಬಿ ಕಾರ್ಯಕ್ರಮದ ಡಾ. ಆರಾಟಾ ಕೋಚೀ ಎಚ್ಚರಿಸುತ್ತಾರೆ. “ಗಾಳಿಯೊಳಕ್ಕೆ ಕೆಮ್ಮಲ್ಪಟ್ಟ ಅಥವಾ ಸೀನಲ್ಪಟ್ಟ ಒಂದು ಟಿಬಿ ಕ್ರಿಮಿಯನ್ನು, ಕೇವಲ ಉಸಿರಾಟದಿಂದ ಒಳಕ್ಕೆ ಸೇರಿಸಿಕೊಳ್ಳುವುದರಿಂದ ಯಾವನಿಗೂ ಟಿಬಿ ಸೋಂಕಬಲ್ಲದು. ಈ ಕ್ರಿಮಿಗಳು ಗಾಳಿಯಲ್ಲಿ ತಾಸುಗಟ್ಟಲೆ, ವರ್ಷಗಟ್ಟಲೆಯೂ ಉಳಿಯಬಲ್ಲವು. ನಮಗೆಲ್ಲರಿಗೂ ಅಪಾಯವಿದೆ.”
ಒಬ್ಬನು ಟಿಬಿಯಿಂದ ಕಾಯಿಲೆ ಬೀಳುವ ಮೊದಲು ಎರಡು ಸಂಗತಿಗಳು ನಡೆಯಬೇಕು. ಪ್ರಥಮವಾಗಿ, ಅವನೊ ಅವಳೊ ಟಿಬಿ ಬ್ಯಾಕ್ಟೀರಿಯದಿಂದ ಸೋಂಕಿತರಾಗಿರಬೇಕು. ಎರಡನೆಯದಾಗಿ, ಆ ಸೋಂಕು, ರೋಗವಾಗಿ ಪರಿಣಮಿಸಬೇಕು.
ಜಾಸ್ತಿ ಸೋಂಕಿಸಶಕ್ತನಾದ ವ್ಯಕ್ತಿಯೊಂದಿಗೆ ಆಗುವ ಸಂಕ್ಷಿಪ್ತ ಸಂಪರ್ಕದಿಂದಾಗಿ ರೋಗ ಅಂಟಲು ಸಾಧ್ಯವಿರುವುದಾದರೂ, ಟಿಬಿಯು ಪದೇ ಪದೇ ಸಂಪರ್ಕಕ್ಕೆ ಬರುವುದರಿಂದಾಗಿ ಹರಡುವುದು ಹೆಚ್ಚು ಸಂಭವನೀಯ. ಜನಸಂದಣಿಯಿರುವ ಪರಿಸ್ಥಿತಿಗಳಲ್ಲಿ ವಾಸಿಸುವ ಕುಟುಂಬ ಸದಸ್ಯರ ಮಧ್ಯೆ ಹರಡುವಂತೆ.
ಸೋಂಕು ತಗಲುವ ಒಬ್ಬ ವ್ಯಕ್ತಿ ಉಸಿರಾಡಿ ಒಳಗೆ ತೆಗೆದುಕೊಂಡ ಬಸಿಲೈ ಏಕಾಣುಜೀವಿಗಳು ಎದೆಯೊಳಗೆ ಬಹುಸಂಖ್ಯಾಕವಾಗುತ್ತವೆ. ಆದರೂ, 10ರಲ್ಲಿ 9 ಜನರಲ್ಲಿರುವ ರೋಗರಕ್ಷಾ ವ್ಯವಸ್ಥೆಯು ಸೋಂಕಿನ ಹರಡಿಕೆಯನ್ನು ನಿಲ್ಲಿಸುವುದರಿಂದ, ಸೋಂಕಿರುವ ವ್ಯಕ್ತಿ ಕಾಯಿಲೆ ಬೀಳುವುದಿಲ್ಲ. ಆದರೆ ಹಲವೊಮ್ಮೆ, ರೋಗರಕ್ಷಾ ವ್ಯವಸ್ಥೆಯು, ಏಚ್‌ಐವಿ, ಸಿಹಿಮೂತ್ರ, ಕ್ಯಾನ್ಸರಿನ ಕೆಮತೆರಪಿ ಚಿಕಿತ್ಸೆಗಳು ಅಥವಾ ಇತರ ಕಾರಣಗಳಿಂದಾಗಿ ತೀರ ಬಲಗುಂದುವುದರಿಂದ, ಸುಪ್ತ ಬಸಿಲೈ ಏಕಾಣುಜೀವಿಗಳು ಸಕ್ರಿಯವಾಗಬಲ್ಲವು.
[ಪುಟ 4 ರಲ್ಲಿರುವ ಚಿತ್ರ ಕೃಪೆ]
New Jersey Medical School—National Tuberculosis Center
[ಪುಟ 7 ರಲ್ಲಿರುವ ಚಿತ್ರ]
ಏಡ್ಸ್ ವೈರಸ್‌ನಿಂದ ಬಿಡುಗಡೆಹೊಂದಿದ ಟಿಬಿ ಬಸಿಲೈ ಏಕಾಣುಜೀವಿಗಳು, ಬುಟ್ಟಿಯಿಂದ ಬಿಡುಗಡೆಮಾಡಿದ ಸರ್ಪಗಳಂತಿವೆ