ಒಂದು ಭೌಗೋಲಿಕ ಪರಿಹಾರ—ಅದು ಸಾಧ್ಯವೊ?
ಕ್ಷಯರೋಗ (ಟಿಬಿ)ವು, ಭೌಗೋಲಿಕ ಪರಿಹಾರವನ್ನು ಅಗತ್ಯಪಡಿಸುವ ಒಂದು ಭೌಗೋಲಿಕ ಸಮಸ್ಯೆಯಾಗಿದೆ ಎಂದು ಪರಿಣತರು ಒಪ್ಪಿಕೊಳ್ಳುತ್ತಾರೆ. ಯಾವ ದೇಶವೂ ಟಿಬಿಯನ್ನು ಪ್ರತ್ಯೇಕವಾಗಿ ನಿಯಂತ್ರಿಸಸಾಧ್ಯವಿಲ್ಲ, ಏಕೆಂದರೆ ಪ್ರತಿವಾರ ಕೋಟಿಗಟ್ಟಲೆ ಜನರು ಅಂತಾರಾಷ್ಟ್ರೀಯ ಸರಹದ್ದುಗಳನ್ನು ದಾಟಿಬರುತ್ತಾರೆ.
ಟಿಬಿಯಿಂದ ಅತಿಯಾಗಿ ಬಾಧಿಸಲ್ಪಟ್ಟಿರುವ ಬಡ ರಾಷ್ಟ್ರಗಳಿಗೆ ಶ್ರೀಮಂತ ರಾಷ್ಟ್ರಗಳು ಸಹಾಯಮಾಡಬೇಕೆಂಬುದನ್ನು ಅಂತಾರಾಷ್ಟ್ರೀಯ ಸಹಕಾರಸಂಘವು ಅಗತ್ಯಪಡಿಸುತ್ತದೆಂದು ಅನೇಕರು ನಂಬುತ್ತಾರೆ. ಡಾ. ಆರಾಟಾ ಕೋಚೀ ಹೇಳುವಂತೆ, “ಕ್ಷಯರೋಗವು ತಮ್ಮ ಸ್ವಂತ ದೇಶಗಳಿಗೆ ಹರಡುವ ಮೊದಲು, ಕ್ಷಯರೋಗದ ವಿರುದ್ಧ ಹೋರಾಡುವಂತೆ ವಿಕಾಸಶೀಲ ದೇಶಗಳಿಗೆ ಸಹಾಯ ಮಾಡುವುದು ಶ್ರೀಮಂತ ದೇಶಗಳ ಪ್ರಯೋಜನಕ್ಕಾಗಿದೆ.”
ಆದರೆ ಧನಿಕ ರಾಷ್ಟ್ರಗಳು, ಯಾವುದನ್ನು ಹೆಚ್ಚು ಜರೂರಾದ ಆದ್ಯತೆಗಳು ಮತ್ತು ಸಮಸ್ಯೆಗಳೆಂದು ಪರಿಗಣಿಸುತ್ತವೊ ಅವುಗಳಿಂದ ಸುತ್ತುವರಿಯಲ್ಪಟ್ಟಿದ್ದು, ಬಡ ದೇಶಗಳಿಗೆ ಸಹಾಯ ನೀಡಲು ಧಾವಿಸಿರುವುದಿಲ್ಲ. ಕೆಲವು ಬಡ ದೇಶಗಳು, ತಮ್ಮ ಯುದ್ಧ ಸಾಧನಗಳಿಗಾಗಿ ಹಣವನ್ನು ವಿನಿಯೋಗಿಸುತ್ತಾ, ಅನೇಕ ವೇಳೆ ಆರೋಗ್ಯ ಆರೈಕೆಯನ್ನು ಕಡೆಗಣಿಸುತ್ತವೆ. 1996ರ ಮಧ್ಯಭಾಗದೊಳಗಾಗಿ, ಲೋಕದ ಟಿಬಿ ರೋಗಿಗಳಲ್ಲಿ 10 ಪ್ರತಿಶತದಷ್ಟು ರೋಗಿಗಳು ಮಾತ್ರ ಡಿಓಟಿಎಸ್ ಕಾರ್ಯಾಚರಣೆಯಿಂದ ಉಪಚರಿಸಲ್ಪಡುತ್ತಿದ್ದರು—ಸಾಂಕ್ರಾಮಿಕವು ಹೆಚ್ಚು ಕೆಡುವುದರಿಂದ ತಡೆಗಟ್ಟಲು ಈ ಸಂಖ್ಯೆಯು ಅತ್ಯಲ್ಪ ಸಂಖ್ಯೆಯಾಗಿದೆ.
ಡಬ್ಲ್ಯೂಏಚ್ಓ ಗಮನಿಸುವುದು: “ಟಿಬಿಯನ್ನು ಗುಣಪಡಿಸುವ ಅರಿವು ಮತ್ತು ಅಗ್ಗವಾದ ಔಷಧಗಳು ಅನೇಕ ದಶಕಗಳಿಂದ ಅಸ್ತಿತ್ವದಲ್ಲಿವೆ. ಲೋಕದಾದ್ಯಂತ ಈ ಔಷಧಗಳು ಪರಿಣಾಮಕಾರಿಯಾಗಿ ಬಳಸಲ್ಪಡುತ್ತವೆ ಎಂಬುದನ್ನು ಖಚಿತಮಾಡಿಕೊಳ್ಳುವಂತೆ, ಅಧಿಕಾರ, ಪ್ರಭಾವ ಮತ್ತು ಸಹಾನುಭೂತಿಯಿರುವ ಜನರ ವತಿಯಿಂದ ಹುರುಪಿನ ಪ್ರಯತ್ನವನ್ನು ಲೋಕವು ಕೇಳಿಕೊಳ್ಳುತ್ತದೆ.”
ಬರಲಿರುವ ವಿಜಯ
ಸಮಸ್ಯೆಯನ್ನು ಬಗೆಹರಿಸಲು ಅಧಿಕಾರ ಮತ್ತು ಪ್ರಭಾವವಿರುವ ಮಾನವರ ಕಡೆಗೆ ನಾವು ಭರವಸೆಯಿಂದ ನೋಡಸಾಧ್ಯವಿದೆಯೊ? ಪ್ರೇರಿತ ಬೈಬಲ್ ಬರಹಗಾರನು ಬರೆದುದು: “ಪ್ರಭುಗಳಲ್ಲಿ ಭರವಸವಿಡಬೇಡಿರಿ; ಮಾನವನನ್ನು ನೆಚ್ಚಬೇಡಿರಿ, ಅವನು ಸಹಾಯಮಾಡ ಶಕ್ತನಲ್ಲ.” ಹಾಗಾದರೆ, ಯಾರಲ್ಲಿ ನಾವು ಭರವಸವಿಡಸಾಧ್ಯವಿದೆ? ಆ ವಚನವು ಮುಂದೆ ಹೇಳುವುದು: “ಯಾವನಿಗೆ ಯಾಕೋಬನ ದೇವರು ಸಹಾಯಕನೋ ಯಾವನು ತನ್ನ ದೇವರಾದ ಯೆಹೋವನನ್ನು ನಂಬಿರುತ್ತಾನೋ ಅವನೇ ಧನ್ಯನು. ಭೂಮಿ, ಆಕಾಶ, ಸಾಗರ, ಚರಾಚರ ಇವುಗಳನ್ನು ನಿರ್ಮಿಸಿದವನೂ . . . ಆತನೇ.”—ಕೀರ್ತನೆ 146:3, 5-7.
ಭೂಮಿಯ ವಿನ್ಯಾಸಕನೂ ಸೃಷ್ಟಿಕರ್ತನೂ ಆದ ಯೆಹೋವ ದೇವರಿಗೆ, ರೋಗಕ್ಕೆ ಅಂತ್ಯವನ್ನು ತರುವ ಶಕ್ತಿ ಹಾಗೂ ವಿವೇಕ—ಎರಡೂ ಇದೆ. ಆತನಿಗೆ ಸಹಾನುಭೂತಿ ಇದೆಯೊ? ತನ್ನ ಪ್ರೇರಿತ ಪ್ರವಾದಿಯ ಮುಖಾಂತರ, ಯೆಹೋವನು ವಾಗ್ದಾನಿಸುವುದು: “ಒಬ್ಬನು ತನ್ನನ್ನು ಸೇವಿಸುವ ಸ್ವಂತ ಮಗನನ್ನು ಕರುಣಿಸುವಂತೆ ನಾನು ಅವರನ್ನು [ನನ್ನ ಜನರನ್ನು] ಕರುಣಿಸುವೆನು.”—ಮಲಾಕಿಯ 3:17.
ಬೈಬಲಿನ ಕೊನೆಯ ಅಧ್ಯಾಯವು, ಅಪೊಸ್ತಲ ಯೋಹಾನನಿಗೆ ಕೊಡಲ್ಪಟ್ಟ ಒಂದು ದರ್ಶನವನ್ನು ವರ್ಣಿಸುತ್ತದೆ. ಅವನು “ಪ್ರತಿ ತಿಂಗಳು ತಮ್ಮ ಫಲಗಳನ್ನು ಬಿಟ್ಟು, ಫಲದ ಹನ್ನೆರಡು ಎಲೆಗಳನ್ನು ಉತ್ಪಾದಿಸುವ ಜೀವವೃಕ್ಷ”ಗಳನ್ನು ನೋಡಿದನು. ಈ ಸಾಂಕೇತಿಕ ವೃಕ್ಷಗಳು ಮತ್ತು ಅವು ಉತ್ಪಾದಿಸುವ ಫಲವು, ವಿಧೇಯ ಮಾನವರು ಭೂಮಿಯ ಮೇಲೆ ಸದಾಕಾಲ ಜೀವಿಸಶಕ್ತರಾಗುವಂತೆ ಮಾಡುವ ದೈವಿಕ ಒದಗಿಸುವಿಕೆಗಳನ್ನು ಚಿತ್ರಿಸುತ್ತದೆ.—ಪ್ರಕಟನೆ 22:2, NW.
ಮುಂದುವರಿಸುತ್ತಾ, ಯೋಹಾನನು ಬರೆದುದು: “ಆ ಮರಗಳ ಎಲೆಗಳು ಜನಾಂಗಗಳನ್ನು ವಾಸಿಮಾಡುವುದಕ್ಕಾಗಿದ್ದವು” (NW). ಈ ಸಾಂಕೇತಿಕ ಎಲೆಗಳು, ಮಾನವಕುಲದ ವಾಸಿಮಾಡುವಿಕೆ—ಆತ್ಮಿಕವಾಗಿಯೂ ಶಾರೀರಿಕವಾಗಿಯೂ—ಯಲ್ಲಿ ಪರಿಣಮಿಸುವ ದೇವರಿಂದ ಬರುವ ಆಶೀರ್ವಾದಗಳನ್ನು ಚಿತ್ರಿಸುತ್ತವೆ. ಹೀಗೆ, ದೇವರ ಆಳಿಕೆಯ ಕೆಳಗೆ, ನೀತಿಯ ಹೊಸ ಲೋಕದಲ್ಲಿ ಟಿಬಿ ಸಂಪೂರ್ಣವಾಗಿ ಮತ್ತು ಶಾಶ್ವತವಾಗಿ ಜಯಿಸಲ್ಪಡುವುದೆಂಬ ವಿಷಯದಲ್ಲಿ ನಾವು ನಿಶ್ಚಿತರಾಗಿರಬಲ್ಲೆವು.—ಪ್ರಕಟನೆ 21:3, 4.
[ಪುಟ 8,9 ರಲ್ಲಿರುವಚಿತ್ರ]
ಮಾನವಕುಲಕ್ಕೆ ಶಾಶ್ವತವಾದ ವಾಸಿಮಾಡುವಿಕೆಯನ್ನು ದೇವರು ವಾಗ್ದಾನಿಸುತ್ತಾನೆ