ಯುವ ಜನರು ಪ್ರಶ್ನಿಸುವುದು. . .
ರೇವ್ಗಳು ಹಾನಿರಹಿತವಾದ ವಿನೋದವಾಗಿವೆಯೊ?
“ನನ್ನ ಕೈಗಳನ್ನು ಮೇಲಕ್ಕೆತ್ತಿ ನಾನು ನರ್ತಿಸುವಾಗ ಮತ್ತು ಸಂಗೀತವು ನನ್ನ ಶರೀರದಲ್ಲಿ ಉಕ್ಕೇರುತ್ತಿರುವಾಗ, ನರ್ತಿಸುತ್ತಿರುವ ಇತರರಿಂದ ನನಗೆ ಶಕ್ತಿತುಂಬಿದ ಅನಿಸಿಕೆಯಾಗುತ್ತದೆ. ಅದೊಂದು ಪರವಶತೆಯಂತಿದೆ.”—ಜೀನ.
ರೇವ್ಗೆ ಹಾಜರಾಗುವ ರೋಮಾಂಚನವನ್ನು ಜೀನ ಈ ರೀತಿಯಲ್ಲಿ ವರ್ಣಿಸುತ್ತಾಳೆ. ಸಾಮಾನ್ಯವಾಗಿ ಇಡೀ ರಾತ್ರಿ ಇರುವ ಈ ಡ್ಯಾನ್ಸ್ ಪಾರ್ಟಿಗಳು, ಪ್ರಥಮವಾಗಿ 1980ಗಳಲ್ಲಿ ಬ್ರಿಟನ್ನಲ್ಲಿ ಜನಪ್ರಿಯವಾದವು. ಈಗ ಅವು ಅಮೆರಿಕ, ಕೆನಡ, ಜರ್ಮನಿ, ದಕ್ಷಿಣ ಆಫ್ರಿಕ, ನ್ಯೂಸೀಲೆಂಡ್, ಬೆಲ್ಜಿಯಮ್, ಮತ್ತು ಭಾರತವನ್ನು ಸೇರಿಸಿ, ಭೂಗೋಲದ ಎಲ್ಲ ಭಾಗಗಳಲ್ಲಿ ತೋರಿಬರುತ್ತಿವೆ.
ಜನರು ಉನ್ಮಾದಾವಸ್ಥೆಯ, ನಾನ್-ಸ್ಟಾಪ್ ನೃತ್ಯದ ಒಂದು ರಾತ್ರಿಗಾಗಿ ಸೇರಸಾಧ್ಯವಿರುವ ಯಾವುದೇ ಸ್ಥಳದಲ್ಲಿ—ಕ್ಲಬ್ಗಳಲ್ಲಿ, ತೊರೆಯಲ್ಪಟ್ಟಿರುವ ಸರಕು ಮಳಿಗೆಗಳಲ್ಲಿ, ಖಾಲಿ ಹೊಲಗಳಲ್ಲಿ ರೇವ್ಗಳು ನಡೆಸಲ್ಪಡುತ್ತವೆ. “ಯುವ ಜನರ ಮನೋರಂಜನೆಯ ಆಯ್ಕೆಯಾಗಿ, ಕ್ರಮೇಣವಾಗಿ ರೇವ್ಗಳು ನೈಟ್ ಕ್ಲಬ್ಗೆ ಹೋಗುವುದನ್ನು ಸ್ಥಾನಪಲ್ಲಟಗೊಳಿಸುತ್ತಿವೆ” ಎಂದು ದಕ್ಷಿಣ ಆಫ್ರಿಕದ ಜೋಹಾನೆಸ್ಬರ್ಗ್ನ ಸಂಡೇ ಟೈಮ್ಸ್ ಮ್ಯಾಗಸಿನ್ನಲ್ಲಿ ಆ್ಯಡಮ್ ಲೆವಿನ್ ಬರೆದರು. ಅವರು ಕೂಡಿಸಿದ್ದು: “ನಿಮ್ಮ ಹದಿಹರೆಯದವರು ಅದನ್ನು ಇನ್ನೂ ತಿಳಿಸಿಲ್ಲವಾದರೆ, ನಿಮಗೆ ಸಂಸರ್ಗದ ಸಮಸ್ಯೆಯಿದೆ.”
ರೇವ್ ಕಾರ್ಯಕ್ಷೇತ್ರದ ಕಡೆಗೆ ಒಂದು ನೋಟ
ರೇವ್ಗಳು ಕೆಲವೊಮ್ಮೆ ರಹಸ್ಯವಾಗಿರುತ್ತವೆ. ಅವುಗಳ ನಿವೇಶನವು ಘಟನೆಯ ದಿನದ ವರೆಗೆ ಪ್ರಕಟಿಸಲ್ಪಡುವುದಿಲ್ಲ. ಆದಾಗಲೂ, ವಿಸ್ತೃತ ಬೆಳಕುಗಳು ಮತ್ತು ಸ್ಪಂದಿಸುವ ಟೆಕ್ನೊ ಸಂಗೀತ ಆರಂಭವಾಗುವಾಗ, ಡಸನುಗಟ್ಟಲೆಯಿಂದ ಹಿಡಿದು ಸಾವಿರಾರು ಯುವ ಜನರು, ವಿಲಕ್ಷಣವಾದ ಉಡುಪಿನಲ್ಲಿ ಹಾಜರಿರಬಹುದು. “ಅದು ಸುತ್ತಲೂ ನರ್ತಿಸುವ ಮತ್ತು ತಾಳಕ್ಕನುಸಾರ ತಮ್ಮ ಹಿಂಸಾಭಾವಗಳನ್ನು ಪ್ರದರ್ಶಿಸುತ್ತಿರುವ ಜನರ ಒಂದು ದೊಡ್ಡ ಏಕೀಕೃತ ಸಮೂಹದಂತಿದೆ” ಎಂದು ಒಬ್ಬ ಕಾಲೇಜ್ ವಿದ್ಯಾರ್ಥಿನಿಯಾದ ಕೇಟಿ ಹೇಳುತ್ತಾಳೆ.
ಆದರೆ, ರೇವ್ ಬರಿಯ ನೃತ್ಯಕ್ಕಿಂತ ಹೆಚ್ಚಿನದ್ದಾಗಿದೆ. ಅದು ಒಂದು ಸಂಸ್ಕೃತಿಯೂ ಆಗಿದೆ, ಅಥವಾ ರೇವ್ ಅನುಯಾಯಿಗಳು ಅದನ್ನು ಕರೆಯಲು ಇಷ್ಟಪಡುವಂತೆ ಒಂದು “ಕಾರ್ಯಕ್ಷೇತ್ರ”ವಾಗಿದೆ. ರೇವ್ ರಂಗದ ಮೂಲ ತತ್ವಗಳು—ಜಾತಿ, ರಾಷ್ಟ್ರೀಯತೆ ಅಥವಾ ಲೈಂಗಿಕತೆಯ ಪರಿವೆಯಿಲ್ಲದೆ—ಶಾಂತಿ, ಪ್ರೀತಿ, ಐಕ್ಯ, ಮತ್ತು ಗೌರವ ಆಗಿದೆಯೆಂದು ಹೇಳಲಾಗುತ್ತದೆ. “ಈ ಪಾರ್ಟಿಗಳಲ್ಲಿ ನಾವು ಸಂಸ್ಕೃತಿಗಳನ್ನು ಬೆರೆಸಲು ಪ್ರಯತ್ನಿಸುತ್ತಿದ್ದೇವೆ” ಎಂದು, ನೃತ್ಯ ಸಂಗೀತದಲ್ಲಿ ವಿಶೇಷತೆ ಪಡೆದಿರುವ ಅಂಗಡಿಯೊಂದರ ಮಾಲೀಕನು ಹೇಳುತ್ತಾನೆ. ಅವನು ಕೂಡಿಸುವುದು: “ವಿಚಾರವು ಆತ್ಮೀಯತೆಯಾಗಿದೆ, ಮತ್ತು ಜೊತೆಯಾಗಿ ನರ್ತಿಸುವುದು ಅದನ್ನು ಸಾಧಿಸುವ ಒಂದು ಪರಿಣಾಮಕಾರಿ ಮಾರ್ಗವಾಗಿದೆ.”
ಉದಾತ್ತ ಧ್ಯೇಯಗಳೆಂದು ತೋರುವಂತಹ ಇವುಗಳ ನೋಟದಲ್ಲಿ ನೀವು ಹೀಗೆ ಕೇಳಬಹುದು, ‘ರೇವ್ಗಳಲ್ಲಿ ಏನು ತಪ್ಪಿರಸಾಧ್ಯವಿದೆ?’ ಆದರೆ ನೀವು ರೇವ್ ರಂಗದ ಕುರಿತು ಪರಿಗಣಿಸಬೇಕಾದ ಇನ್ನೊಂದು ಪಾರ್ಶ್ವವಿದೆ.
ರೇವ್ಗಳ ಒರಟು ಪಾರ್ಶ್ವ
ಮದ್ಯಸಾರವು ರೇವ್ಗಳಲ್ಲಿ ವಿರಳವಾಗಿ ಬಳಸಲ್ಪಡುತ್ತದೆಂದು ಕೆಲವರು ವಾದಿಸುತ್ತಾರೆ. ಆದರೆ ಅಮಲೌಷಧಗಳು ತುಂಬ ಸಾಮಾನ್ಯವಾಗಿವೆ. “ಅಮಲೌಷಧಗಳ ಉಪಸ್ಥಿತಿಯು ಅಷ್ಟು ವ್ಯಾಪಕವಾಗಿ ಬಳಸಲ್ಪಡದಿರುತ್ತಿದ್ದಲ್ಲಿ ರೇವ್ ರಂಗವು ಸಾರ್ವಜನಿಕರಿಂದ ಹೆಚ್ಚು ಸುಲಭವಾಗಿ ಅಂಗೀಕರಿಸಲ್ಪಡುತ್ತಿತ್ತೊ ಏನೊ ಎಂದು ಕೆಲವರು ಕುತೂಹಲಪಡುತ್ತಾರೆ” ಎಂದು ಬ್ರೈಅನ್ ಎಂಬ ಹೆಸರಿನ ಒಬ್ಬ ರೇವರ್ ಒಪ್ಪಿಕೊಳ್ಳುತ್ತಾನೆ. “ಇನ್ನು ಅನೇಕರು, ಅವುಗಳಿಲ್ಲದೆ ರೇವ್ಗಳು ಹೇಗೆ ಅಸ್ತಿತ್ವದಲ್ಲಿರಸಾಧ್ಯವಿದೆಯೆಂದು ಖಂಡಿತವಾಗಿಯೂ ಕುತೂಹಲಪಡುತ್ತಾರೆ” ಎಂದು ಅವನು ಕೂಡಿಸುತ್ತಾನೆ.
ಕೆಲವು ರೇವ್ಗಳಲ್ಲಿ ಮಾರಿವಾನ ಮತ್ತು ಎಲ್ಎಸ್ಡಿಗಳು ಜನಪ್ರಿಯವಾಗಿರುವುದಾದರೂ, ರೇವ್ ಅನುಯಾಯಿಗಳ ನಡುವೆ ಇಷ್ಟವಾಗಿರುವಂತಹ ಅಮಲೌಷಧವು, ಸಾಮಾನ್ಯವಾಗಿ ಎಕ್ಸ್ಟಸಿ ಎಂದು ಜ್ಞಾತವಾಗಿರುವ ಎಮ್ಡಿಎಮ್ಎ ಆಗಿದೆಯೆಂದು ತೋರುತ್ತದೆ. ಎಕ್ಸ್ಟಸಿ ಸಾಪೇಕ್ಷವಾಗಿ ಸುರಕ್ಷಿತವಾಗಿದೆಯೆಂದು ಬಳಕೆದಾರರು ವಾದಿಸುತ್ತಾರೆ. ಅದು ಅವರಿಗೆ ಇಡೀ ರಾತ್ರಿ ನರ್ತಿಸಲು ಶಕ್ತಿಯನ್ನು ತುಂಬುವುದಲ್ಲದೆ ಅದು ಅವರ ಸುಖಭಾವನೆಗಳನ್ನು ಹೆಚ್ಚಿಸುತ್ತದೆಂದು ಅವರು ಪಟ್ಟುಹಿಡಿದು ಹೇಳುತ್ತಾರೆ. ಆದರೆ, “ಜನಪ್ರಿಯ ಅಮಲೌಷಧವು ಮಿದುಳನ್ನು ಹಾನಿಗೊಳಿಸಬಹುದು” ಎಂಬ ಶಿರೋನಾಮದ ಕೆಳಗೆ, ದ ನ್ಯೂ ಯಾರ್ಕ್ ಟೈಮ್ಸ್ ಗಮನಿಸಿದ್ದೇನೆಂದರೆ, ಎಕ್ಸ್ಟಸಿ “ಹಸಿವು, ನಿದ್ರೆ, ಮನೋವೃತ್ತಿ, ಆವೇಗಪರತೆ ಮತ್ತು ಇತರ ಮಾನಸಿಕ ಕಾರ್ಯಾಚರಣೆಗಳ ಮೇಲೆ ದೀರ್ಘ ಕಾಲದ ಹಾನಿಕರ ಪರಿಣಾಮಗಳನ್ನು ಬೀರಬಹುದು.” ಅಷ್ಟೇ ಅಲ್ಲ. “ಎಕ್ಸ್ಟಸಿಯಿಂದಾಗಿ ಕೆಲವು ಮರಣಗಳು ಸಂಭವಿಸಿವೆ ಮತ್ತು ಸಾಮಾನ್ಯವಾದ ಪ್ರಮಾಣಗಳನ್ನು ತೆಗೆದುಕೊಂಡ ಜನರು ಹೃದಯಸ್ತಂಭನ, ಪಿತ್ತಜನಕಾಂಗದ ಸ್ತಂಭನ ಅಥವಾ ಅತಿಸುಪ್ತಿಯನ್ನು ಅನುಭವಿಸಿದ ಹಲವಾರು ಇತರ ವಿದ್ಯಮಾನಗಳು ಇವೆ” ಎಂದು ಡಾ. ಹಾವರ್ಡ್ ಮಕಿನೀ ಹೇಳುತ್ತಾರೆ. ಸಕಾರಣದಿಂದ, ಡಾ. ಸೀಲ್ವಾನ್ ಡೆ ಮೀರಾಂಡಾ ಹೇಳುವುದು: “ಎಕ್ಸ್ಟಸಿಯನ್ನು ಸೇವಿಸುವ ರೇವ್ಗೆ ಹೋಗುವವರು ಮೃತ್ಯುವಿನೊಂದಿಗೆ ನರ್ತಿಸುತ್ತಿದ್ದಾರೆ.”
ಹರ್ಬಲ್ ಆ್ಯಸಿಡ್, ಆಕ್ಸಲರೇಷನ್, ಹರ್ಬಲ್ ಎಕ್ಸ್ಟಸಿ, ಅಥವಾ ರಷ್ನಂತಹ ಜೈವಿಕ ಅಮಲೌಷಧಗಳು ಕೂಡ ಹಾನಿಕರವಾಗಿರಬಲ್ಲವು. ಉದಾಹರಣೆಗಾಗಿ, ನಿರ್ದಿಷ್ಟ ಪರಿಸ್ಥಿತಿಗಳ ಕೆಳಗೆ ಜೈವಿಕ ಅಮಲೌಷಧವಾದ ಆಕ್ಸಲರೇಷನ್, ಒಂದು ಹೃದಯಾಘಾತ ಮತ್ತು ಮರಣವನ್ನೂ ಉಂಟುಮಾಡಬಲ್ಲದೆಂದು ಹೇಳಲಾಗುತ್ತದೆ.
ರೇವ್ಗಳಲ್ಲಿ ಉಪಯೋಗಿಸಲ್ಪಡುವ ಅಮಲೌಷಧಗಳು ಹಾನಿರಹಿತವೆಂದು ಈಗಲೂ ಪಟ್ಟುಹಿಡಿಯುವವರಿಗೆ, ಪರಿಗಣಿಸಲಿಕ್ಕಾಗಿ ಇನ್ನೊಂದು ಅಂಶವಿದೆ. ಕೆನಡದ ಪೊಲೀಸ್ ಪತ್ತೇದಾರಿ ಈಆನ್ ಬ್ರಿಗ್ಸ್ ವಾದಿಸುವುದೇನೆಂದರೆ, ಎಕ್ಸ್ಟಸಿಯಾಗಿ ಮಾರಲ್ಪಡುವ ಅಮಲೌಷಧಗಳಲ್ಲಿ 90 ಪ್ರತಿಶತ ನಿಜವಾಗಿ ಎಕ್ಸ್ಟಸಿಯಾಗಿರುವುದೇ ಇಲ್ಲ. “ಅದರಲ್ಲಿ ಹೆಚ್ಚಿನದ್ದು ಪಿಸಿಪಿ ಅಥವಾ ಇತರ ಅಪಾಯಕಾರಿ ಅಮಲೌಷಧವಾಗಿರುತ್ತದೆ. ಈ ಅಮಲೌಷಧಗಳನ್ನು ಮಾರುವ ಜನರು ನೀತಿನಿಷ್ಠೆಗಳಿಲ್ಲದವರು. ಅಮಲೌಷಧಗಳು ಪರಿಣಾಮವನ್ನು ಬೀರಲಾರಂಭಿಸುವಾಗ, ಅವರು ಅಲ್ಲಿರುವುದಿಲ್ಲ.”a
ಕೆಲವು ರೇವ್ಗಳು ಅಮಲೌಷಧಮುಕ್ತ ಆಗಿರಬಹುದೆಂಬುದು ಒಪ್ಪತಕ್ಕ ಮಾತು. ಆದಾಗಲೂ, ರೇವರ್ಸ್ ಕೂಡ ಒಪ್ಪಿಕೊಳ್ಳುವುದೇನೆಂದರೆ, ಒಂದು ರೇವ್ನಲ್ಲಿ ಉಪಸ್ಥಿತರಿರುವ ಯಾವುದೇ ವ್ಯಕ್ತಿಗಳು, ಅನೇಕ ವ್ಯಕ್ತಿಗಳು, ಅಥವಾ ಹೆಚ್ಚಿನ ವ್ಯಕ್ತಿಗಳು ಒಂದು ನಿಷಿದ್ಧವಾದ ಪದಾರ್ಥದ ಪ್ರಭಾವದ ಕೆಳಗಿರುವರೊ ಎಂಬುದನ್ನು ಭವಿಷ್ಯನುಡಿಯಲು ಅನೇಕವೇಳೆ ಅಸಾಧ್ಯವಾಗಿದೆಯೆಂಬುದನ್ನು ಒಪ್ಪಿಕೊಳ್ಳುತ್ತಾರೆ.
ರೇವ್ಗಳು ನಿಜವಾಗಿ ನಿಮಗಾಗಿವೆಯೊ?
ಸಂಗೀತ ಮತ್ತು ನರ್ತಿಸುವುದರಲ್ಲಿ ತಪ್ಪೇನಿಲ್ಲ, ಅಥವಾ ಸಂತೋಷದಿಂದ ಸಮಯವನ್ನು ಕಳೆಯಲು ಬಯಸುವುದರಲ್ಲಿ ಅಯೋಗ್ಯವಾದದ್ದೇನೂ ಇಲ್ಲ. ಎಷ್ಟೆಂದರೂ ಬೈಬಲ್ ಹೇಳುವುದೇನೆಂದರೆ, “ಆನಂದಕ್ಕಾಗಿ ಒಂದು ಸಮಯ”ವಿದೆ ಮತ್ತು “ನರ್ತಿಸುವುದಕ್ಕಾಗಿ ಒಂದು ಸಮಯ”ವಿದೆ. (ಪ್ರಸಂಗಿ 3:4, ಟುಡೇಸ್ ಇಂಗ್ಲಿಷ್ ವರ್ಷನ್) ಅದು ಹೀಗೂ ಬುದ್ಧಿವಾದಕೊಡುತ್ತದೆ: “ಪ್ರಾಯದಲ್ಲಿ ಆನಂದಿಸು.” (ಪ್ರಸಂಗಿ 11:9) ಹಾಗಾದರೆ ನೀವು ಸಂತೋಷದಿಂದಿರಬೇಕೆಂದು ಸೃಷ್ಟಿಕರ್ತನು ಬಯಸುತ್ತಾನೆ! ಹಾಗಿದ್ದರೂ, “ಲೋಕವೆಲ್ಲವು ಕೆಡುಕನ,” ಪಿಶಾಚನಾದ ಸೈತಾನನ “ವಶದಲ್ಲಿ ಬಿದ್ದಿದೆ” ಎಂಬುದನ್ನು ನೀವು ನೆನಪಿನಲ್ಲಿಡಬೇಕು. (1 ಯೋಹಾನ 5:19) ಹೀಗೆ, ಈ ಲೋಕದಿಂದ ಮಹಿಮೆಗೊಳಿಸಲ್ಪಡುತ್ತಿರುವ ಮನೋರಂಜನೆಯ ರೂಪಗಳು, ಅನೇಕವೇಳೆ ಅಹಿತಕರವಾದ ಘಟಕಾಂಶಗಳಿಂದ ಕಳಂಕಗೊಳಿಸಲ್ಪಡುತ್ತವೆಯೆಂಬುದು ಒಂದು ಆಶ್ಚರ್ಯಕರ ಸಂಗತಿಯಾಗಿರಬಾರದು.
ಉದಾಹರಣೆಗಾಗಿ, ರೇವ್ಗಳಿಗೆ ಹಾಜರಾಗುವವರ ಕುರಿತಾಗಿ ಯೋಚಿಸಿರಿ. ‘ಶರೀರಾತ್ಮಗಳ ಕಲ್ಮಶವನ್ನು ತೊಲಗಿಸುವ’ ಕುರಿತಾದ ಬೈಬಲಿನ ಬುದ್ಧಿವಾದವನ್ನು ಅವರು ಅನುಸರಿಸುತ್ತಿದ್ದಾರೊ? (2 ಕೊರಿಂಥ 7:1) ನಿಜ, ರೇವ್ ಅನುಯಾಯಿಗಳು ಶಾಂತಿ, ಪ್ರೀತಿ ಮತ್ತು ಐಕ್ಯವನ್ನು ಸಮರ್ಥಿಸುತ್ತಿರಬಹುದು. ಆದರೆ “ಮೇಲಣಿಂದ ಬರುವ ವಿವೇಕ” “ಶಾಂತಿಯುತ”ವಾಗಿರುವುದಕ್ಕಿಂತಲೂ ಹೆಚ್ಚಿನದ್ದಾಗಿದೆ. ಅದು “ನಿರ್ಮಲ”ವೂ ಆಗಿದೆ. (ಯಾಕೋಬ 3:15, 17, NW) ನಿಮ್ಮನ್ನೇ ಹೀಗೆ ಕೇಳಿಕೊಳ್ಳಿರಿ, ‘ರೇವ್ಗಳಿಗೆ ಹೋಗುವವರ ನೀತಿಗಳು, ದೇವರ ವಾಕ್ಯವಾದ ಬೈಬಲಿನಲ್ಲಿ ಕಂಡುಬರುವ ಮಟ್ಟಗಳಿಗೆ ಹೊಂದಿಕೆಯಲ್ಲಿವೆಯೊ? “ದೇವರನ್ನು ಪ್ರೀತಿಸದೆ ಭೋಗಗಳನ್ನೇ ಪ್ರೀತಿಸುವವ”ರಾಗಿರುವವರೊಂದಿಗೆ ನಾನು ಇಡೀ ರಾತ್ರಿಯನ್ನು ಕಳೆಯಲು ಬಯಸುತ್ತೇನೊ?’—2 ತಿಮೊಥೆಯ 3:4; 1 ಕೊರಿಂಥ 6:9, 10; ಹೋಲಿಸಿರಿ ಯೆಶಾಯ 5:11, 12.
ಪರಿಗಣಿಸಲಿಕ್ಕಾಗಿ ಇವು ಪ್ರಾಮುಖ್ಯ ಪ್ರಶ್ನೆಗಳಾಗಿವೆ, ಯಾಕಂದರೆ “ದುಸ್ಸಹವಾಸವು ಸದಾಚಾರವನ್ನು ಕೆಡಿಸುತ್ತದೆ” ಎಂದು ಪೌಲನು ಬರೆದನು. (1 ಕೊರಿಂಥ 15:33) ದೇವರ ನಿಯಮಗಳಿಗಾಗಿ ಅನಾದರವನ್ನು ತೋರಿಸುವವರೊಂದಿಗೆ ಸಹವಾಸವನ್ನು ಮಾಡುವುದು ಕೊನೆಯಲ್ಲಿ ವಿಪತ್ತಿಗೆ ನಡಿಸುವುದು, ಯಾಕಂದರೆ ಬೈಬಲ್ ತಿಳಿಸುವುದು: “ಜ್ಞಾನಿಗಳ ಸಹವಾಸಿ ಜ್ಞಾನಿಯಾಗುವನು; ಜ್ಞಾನಹೀನರ ಒಡನಾಡಿ ಸಂಕಟಪಡುವನು.”—ಜ್ಞಾನೋಕ್ತಿ 13:20.
ವಾಸ್ತವಾಂಶವೇನೆಂದರೆ, ಅನೇಕ ರೇವ್ಗಳು ನಿಜವಾಗಿ ಅಮಲೌಷಧದ ಪಾರ್ಟಿಗಳಾಗಿವೆ ಮತ್ತು ಅದಕ್ಕೆ ಹಾಜರಾಗುವವರು ಕಹಿ ಫಲಿತಾಂಶಗಳನ್ನು ಕೊಯ್ಯಸಾಧ್ಯವಿದೆ. ಉದಾಹರಣೆಗಾಗಿ, ಕೆಲವು ರೇವ್ಗಳು, ಒಂದೇ ಅವು ಕಾನೂನುವಿರುದ್ಧವಾಗಿ ನಡೆಸಲ್ಪಡುತ್ತಿರುವ ಕಾರಣದಿಂದ ಇಲ್ಲವೆ ಅಮಲೌಷಧಗಳು ಅಲ್ಲಿ ಬಳಸಲ್ಪಡುತ್ತಿರುವ ಕಾರಣದಿಂದ ಪೊಲೀಸರಿಂದ ದಾಳಿಮಾಡಲ್ಪಟ್ಟು, ನಿಲ್ಲಿಸಲ್ಪಡುತ್ತವೆ. ಕಾನೂನುಪಾಲಕರಲ್ಲದವರ ನಡುವೆ ನೀವು ಲೆಕ್ಕಿಸಲ್ಪಡಲು ಬಯಸುತ್ತೀರೊ? (ರೋಮಾಪುರ 13:1, 2) ನಿಯಮದ ಉಲ್ಲಂಘನೆಯು ಇಲ್ಲದಿದ್ದರೂ, ನೀವು ಅಂತಹ ಒಂದು ಪಾರ್ಟಿಗೆ ಹಾಜರಾಗಿ, “ಪ್ರಪಂಚದ ದೋಷವು ಹತ್ತದಂತೆ” ಉಳಿಯಲು ಸಾಧ್ಯವಿದೆಯೊ? (ಯಾಕೋಬ 1:27) ವಿಲಾಸಗೋಷ್ಠಿಗಳು, ಅಥವಾ “ಆವೇಶದ ಪಾರ್ಟಿಗಳು” (ಬಾಯಿಂಗ್ಟನ್) ಬೈಬಲಿನಲ್ಲಿ ಖಂಡಿಸಲ್ಪಟ್ಟಿರುವುದರಿಂದ, ಒಂದು ರೇವ್ನಲ್ಲಿನ ನಿಮ್ಮ ಉಪಸ್ಥಿತಿಯು, ದೇವರ ಮತ್ತು ಮನುಷ್ಯರ ಮುಂದೆ ಒಂದು ಶುದ್ಧ ಮನಸ್ಸಾಕ್ಷಿಯನ್ನು ಕಾಪಾಡಿಕೊಳ್ಳಲು ನಿಮ್ಮನ್ನು ಶಕ್ತಗೊಳಿಸುವುದೊ?—ಗಲಾತ್ಯ 5:21; 2 ಕೊರಿಂಥ 4:1, 2; 1 ತಿಮೊಥೆಯ 1:18, 19.
ಸ್ಪಷ್ಟವಾಗಿ, ಕ್ರೈಸ್ತರು ರೇವ್ಗಳ ಅಪಾಯದ ಕುರಿತು ಎಚ್ಚರವಾಗಿರಬೇಕು. ಆದರೆ ಹತಾಶೆಗೊಳ್ಳಬೇಡಿರಿ. ನೀವು ಆನಂದಿಸಸಾಧ್ಯವಿರುವ ಬಹಳಷ್ಟು ಮನೋರಂಜನೆಯು ಇನ್ನೂ ಇದೆ. ಉದಾಹರಣೆಗಾಗಿ, ಯೆಹೋವನ ಸಾಕ್ಷಿಗಳ ನಡುವೆ ಅನೇಕ ಕುಟುಂಬಗಳು, ಹಿತಕರವಾದ ನೆರವಿಗಳನ್ನು ಏರ್ಪಡಿಸಿವೆ.b ಜಾಗರೂಕತೆಯ ಯೋಜನೆ ಮತ್ತು ಮೇಲ್ವಿಚಾರಣೆಯೊಂದಿಗೆ, ಇವು ಹಾಜರಿರುವವರೆಲ್ಲರಿಗೂ ಆತ್ಮಿಕವಾಗಿ ಮತ್ತು ಶಾರೀರಿಕವಾಗಿ ಚೈತನ್ಯಗೊಳಿಸಲ್ಪಟ್ಟಿರುವ ಅನಿಸಿಕೆಯನ್ನು ಕೊಡುತ್ತವೆ. ಹೆಚ್ಚು ಪ್ರಾಮುಖ್ಯವಾಗಿ, ಭಕ್ತಿವೃದ್ಧಿಮಾಡುವ ಸಹವಾಸವು, ತನ್ನ ಜನರು ಹರ್ಷಿಸಬೇಕೆಂದು ಬಯಸುವ ‘ಸಂತೋಷದ ದೇವರಾದ’ (NW) ಯೆಹೋವನನ್ನು ಸಂತೋಷಗೊಳಿಸುತ್ತದೆ.—1 ತಿಮೊಥೆಯ 1:11; ಪ್ರಸಂಗಿ 8:15.
[ಅಧ್ಯಯನ ಪ್ರಶ್ನೆಗಳು]
a ಪಿಸಿಪಿ (ಫೆನ್ಸಿಕ್ಲಿಡಿನ್), ವೈವಿಧ್ಯಮಯವಾದ ಮಾನಸಿಕ ರೂಪಕಗಳನ್ನು ಪ್ರೇರಿಸಲು ಕಾನೂನುವಿರುದ್ಧವಾಗಿ ಕೆಲವೊಮ್ಮೆ ಬಳಸಲ್ಪಡುವ ಒಂದು ಅರಿವಳಿಕೆಯಾಗಿದೆ.
b ಹೆಚ್ಚಿನ ಮಾಹಿತಿಗಾಗಿ, ಆಗಸ್ಟ್ 15, 1992ರ ಕಾವಲಿನಬುರುಜು (ಇಂಗ್ಲಿಷ್) ಪತ್ರಿಕೆಯ 15-20ನೆಯ ಪುಟಗಳನ್ನು ಮತ್ತು ಜೂನ್ 8, 1997ರ ಎಚ್ಚರ! ಪತ್ರಿಕೆಯ 8-10ನೆಯ ಪುಟಗಳನ್ನು ನೋಡಿರಿ.
[ಪುಟ 21 ರಲ್ಲಿರುವ ಚೌಕ]
ಟೆಕ್ನೊ ಅಂದರೆ ಏನು?
ಸರಳವಾಗಿ ಹೇಳುವುದಾದರೆ, ಟೆಕ್ನೊ, ಎಲೆಕ್ಟ್ರಾನಿಕ್ ನೃತ್ಯ ಸಂಗೀತಕ್ಕೆ ಸೂಚಿಸುತ್ತದೆ. ಅದರಲ್ಲಿ ಅನೇಕ ಶೈಲಿಗಳು ಸೇರಿವೆ. ಹೆಚ್ಚಿನ ಜನರು ಟೆಕ್ನೊವನ್ನು ತಾಳಬದ್ಧವಾಗಿರುವುದಾಗಿ ವರ್ಣಿಸಬಹುದು. ಯಾಕಂದರೆ ಅದು ಸಾಮಾನ್ಯವಾಗಿ ಪ್ರತಿ ನಿಮಿಷಕ್ಕೆ 115ರಿಂದ 160 ತಾಳಗಳ ನಡುವೆಯಿರುತ್ತದೆ.
“ಟೆಕ್ನೊವಿನ ಪರಿಚಯವಿಲ್ಲದವರಿಗೆ, ಅದು ನೀವು ದಂತವೈದ್ಯನ ಕುರ್ಚಿಯಲ್ಲಿ ಕುಳಿತುಕೊಳ್ಳುವಾಗ ಕೇಳುವಂತಹ ಮತ್ತು ಸೋದೋಮ್ ಗೊಮೋರಗಳ ನಾಶನದ ರಾತ್ರಿ ಕೇಳಿಬಂದ ಶಬ್ದಗಳೆಂದು ನೀವು ಭಾವಿಸುವ ಶಬ್ದಗಳಂತೆ ಕೇಳಿಸುತ್ತದೆ” ಎಂದು ದಿ ಯೂರೋಪಿಯನ್ ಹೇಳುತ್ತದೆ. ಆದಾಗಲೂ, ಕೆಲವು ಕೇಳುಗರು, ಟೆಕ್ನೊವಿನ ಸ್ಥಿರವಾದ ತಾಳದಿಂದ ಮರುಳುಗೊಳಿಸಲ್ಪಟ್ಟಿದ್ದಾರೆ. “ನನಗೆ ಈ ಸಂಗೀತವು ಅಮಿತ ಸ್ವಾತಂತ್ರ್ಯದ ಅನಿಸಿಕೆಯನ್ನು ಕೊಡುತ್ತದೆ” ಎಂದು 18 ವರ್ಷ ಪ್ರಾಯದ ಕ್ರಿಸ್ಟೀನ್ ಹೇಳುತ್ತಾಳೆ. ಸಾನ್ಯಳಿಗೂ ಹಾಗೆಯೇ ಅನಿಸುತ್ತದೆ. ಅವಳು ಒಪ್ಪಿಕೊಳ್ಳುವುದು: “ಆರಂಭದಲ್ಲಿ ನನಗೆ ಟೆಕ್ನೊ ಸಂಗೀತ ಇಷ್ಟವಾಗಲೇ ಇಲ್ಲ. ಆದರೆ ನೀವು ಅದನ್ನು ಎಷ್ಟು ಹೆಚ್ಚು ಕೇಳುತ್ತೀರೊ, ಅದು ನಿಮಗೆ ಅಷ್ಟೇ ಹೆಚ್ಚು ಸ್ವೀಕಾರಯೋಗ್ಯವಾಗುತ್ತದೆ. ನೀವದರ ಧ್ವನಿಯನ್ನು ಹೆಚ್ಚು ಗಟ್ಟಿಮಾಡುವಲ್ಲಿ, ಅದರ ಗುದ್ದುವ ತಾಳವನ್ನು ತಪ್ಪಿಸಲಾರಿರಿ. ನೀವು ಸ್ವಯಂಚಲಿಯಾಗುತ್ತೀರಿ. ನೀವು ಜಾಗರೂಕರಾಗಿರದಿದ್ದಲ್ಲಿ, ಆ ತಾಳವು ನಿಮ್ಮ ಇಡೀ ದೇಹವನ್ನು ನಿಯಂತ್ರಿಸುತ್ತದೆ.” 19 ವಯಸ್ಸಿನ ಶರ್ಲಿ, ಟೆಕ್ನೊವಿನಲ್ಲಿ ಇನ್ನೂ ಹೆಚ್ಚಿನದ್ದನ್ನು ಕಾಣುತ್ತಾಳೆ. “ಅದು ಸಂಗೀತಕ್ಕಿಂತ ಹೆಚ್ಚಿನದ್ದಾಗಿದೆ. ಅದು ಬಟ್ಟೆಬರೆ ಮತ್ತು ನುಡಿಯಲ್ಲಿ ವ್ಯಕ್ತಪಡಿಸಲ್ಪಡುವ ಒಂದು ಇಡೀ ಜೀವನ ರೀತಿಯಾಗಿದೆ.”
‘ಕರ್ತನಿಗೆ ಮೆಚ್ಚಿಗೆಯಾದದ್ದು ಏನೆಂಬದನ್ನು ಪರಿಶೋಧಿಸಿ ತಿಳುಕೊಳ್ಳಲು’ ಕ್ರೈಸ್ತರು ಬಯಸುತ್ತಾರೆ. (ಎಫೆಸ 5:10) ಆದುದರಿಂದ, ಅವರು ಸಂಗೀತದ ಬೇರೆ ಯಾವುದೇ ಶೈಲಿಯೊಂದಿಗೆ ಎಚ್ಚರಿಕೆಯಿಂದಿರುವಂತೆಯೇ ಟೆಕ್ನೊವಿನೊಂದಿಗೆ ಎಚ್ಚರವಾಗಿರಬೇಕು. ನೀವು ಟೆಕ್ನೊವಿನ ಕಡೆಗೆ ಸೆಳೆಯಲ್ಪಟ್ಟಿರುವುದಾಗಿ ಕಂಡುಕೊಳ್ಳುವಲ್ಲಿ, ನಿಮ್ಮನ್ನೇ ಹೀಗೆ ಕೇಳಿಕೊಳ್ಳಿರಿ: ‘ಸಂಗೀತದ ಈ ಶೈಲಿಯು ನನ್ನನ್ನು ಹೇಗೆ ಪ್ರಭಾವಿಸುತ್ತದೆ? ಅದು ನನ್ನನ್ನು ಸಂತೋಷಿತನು, ಪ್ರಶಾಂತನು ಮತ್ತು ಶಾಂತಿಯುತನನ್ನಾಗಿ ಮಾಡುತ್ತದೊ? ಅಥವಾ ಅದು ಪ್ರಾಯಶಃ ಕೋಪದ ಇಲ್ಲವೇ ಅನೈತಿಕ ಆಲೋಚನೆಗಳನ್ನು ಕೆರಳಿಸುತ್ತಾ, ನನ್ನನ್ನು ರೇಗಿಸುತ್ತದೊ? ಈ ಸಂಗೀತದ ಶೈಲಿಯ ಕಡೆಗಿನ ನನ್ನ ಆಕರ್ಷಣೆಯು ನನ್ನನ್ನು ಅದರ ಜೀವನ ಶೈಲಿಗೆ ಇನ್ನೂ ಹತ್ತಿರ ಸೆಳೆಯುವುದೊ? ಈ ಶೈಲಿಯ ಸಂಗೀತವನ್ನು ಕೇಳಲು ಅಥವಾ ಅದರ ತಾಳಕ್ಕೆ ಕುಣಿಯಲಿಕ್ಕಾಗಿ ಒಂದು ರೇವನ್ನು ಹಾಜರಾಗಲು ನಾನು ಪ್ರಲೋಭಿಸಲ್ಪಡುವೆನೊ?’
ನಿಜವಾಗಿಯೂ, ಕೊನೆಯ ಮಾತು ಇದಾಗಿದೆ: ಸಂಗೀತದ ವಿಷಯದಲ್ಲಿ ನಿಮ್ಮ ಅಭಿರುಚಿ ಏನೇ ಆಗಿರಲಿ, ಅದು ನಿಮ್ಮ ಮತ್ತು ನಿಮ್ಮ ಸ್ವರ್ಗೀಯ ತಂದೆಯ ಮಧ್ಯೆ ಬರುವಂತೆ ಎಂದೂ ಬಿಡಬೇಡಿರಿ.