ಯುವ ಜನರೇ—ಲೋಕದ ಆತ್ಮವನ್ನು ಪ್ರತಿರೋಧಿಸಿರಿ
“ನಾವು ಪ್ರಾಪಂಚಿಕ [“ಲೋಕದ,” NW] ಆತ್ಮವನ್ನು ಹೊಂದದೆ ದೇವರು ನಮಗೆ ದಯಪಾಲಿಸಿರುವ ಕೃಪಾವರಗಳನ್ನು ತಿಳುಕೊಳ್ಳುವದಕ್ಕಾಗಿ ದೇವರಿಂದ ಬಂದ ಆತ್ಮವನ್ನೇ ಹೊಂದಿದೆವು.”—1 ಕೊರಿಂಥ 2:12.
1, 2. (ಎ) ಲೋಕದ ಯುವ ಜನರು ಮತ್ತು ಯೆಹೋವನ ಸಾಕ್ಷಿಗಳ ಸಭೆಗಳಲ್ಲಿರುವ ಯುವ ಜನರ ಮಧ್ಯೆ ಯಾವ ವ್ಯತ್ಯಾಸವನ್ನು ಕಾಣಬಹುದು? (ಬಿ) ಸಾಕ್ಷಿ ಯುವ ಜನರಲ್ಲಿ ಹೆಚ್ಚಿನವರು ಯಾವ ಆದರಣೀಯ ಶ್ಲಾಘನೆಗೆ ಅರ್ಹರಾಗಿದ್ದಾರೆ?
“ನಮ್ಮ ಯುವ ಸಂತತಿಯು, ಉತ್ಸಾಹಶೂನ್ಯ, ತಿರಸ್ಕೃತ, ಹಾಗೂ ದಂಗೆಕೋರ ಸಂತತಿಯಾಗಿ ಪರಿಣಮಿಸಿದೆ” ಎಂದು ಆಸ್ಟ್ರೇಲಿಯದ ದ ಸನ್-ಹೆರಲ್ಡ್ ಎಂಬ ವಾರ್ತಾಪತ್ರಿಕೆಯು ಪ್ರಕಟಿಸಿತು. ಅದು ಕೂಡಿಸಿ ಹೇಳಿದ್ದು: “ಗಂಭೀರವಾದ ಅಪರಾಧಗಳ ವಿಷಯದಲ್ಲಿ ದೋಷಾರೋಪಿಸಲ್ಪಟ್ಟ ಹದಿಹರೆಯದವರ ಸಂಖ್ಯೆಯು, [ಹಿಂದಿನ ವರ್ಷಕ್ಕಿಂತಲೂ] ಶೇಕಡ 22ರಷ್ಟು ಹೆಚ್ಚಾಗಿದೆ ಎಂದು ನ್ಯಾಯಾಲಯದ ದಾಖಲೆಗಳು ತೋರಿಸುತ್ತವೆ . . . ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಈ ಪ್ರಮಾಣವು 60ಗಳ ಮಧ್ಯಭಾಗದಿಂದ ಮೂರು ಪಟ್ಟು ಹೆಚ್ಚಾಗಿದೆ . . . ಸಂತತಿಗಳ ನಡುವೆ ಇರುವ ಪೀಳಿಗೆಯ ಅಂತರವು ಒಂದು ವಾಸ್ತವವಾದ ಅಂತರವಾಗಿದ್ದು, ದಿನೇ ದಿನೇ ಅನೇಕಾನೇಕ ಯುವ ಜನರು ಅಮಲೌಷಧ, ಮದ್ಯಸಾರ, ಮತ್ತು ಸ್ವನಾಶನದ ವಿಸ್ಮೃತಿಯೊಳಗೆ ಜಾರಿ ಬೀಳುತ್ತಿದ್ದಾರೆ.” ಈ ರೀತಿಯ ಪರಿಸ್ಥಿತಿಯು ಒಂದು ದೇಶಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ. ಲೋಕದ ಎಲ್ಲೆಡೆಯೂ ಇರುವ ಹೆತ್ತವರು, ಶಿಕ್ಷಕರು, ಮತ್ತು ಮಾನಸಿಕ ಆರೋಗ್ಯದ ಪರಿಣತರು, ಯುವ ಜನರ ಈ ಸ್ಥಿತಿಯನ್ನು ಕಂಡು ಮರುಕಪಡುತ್ತಾರೆ.
2 ಇಂದಿನ ಹೆಚ್ಚಿನ ಯುವ ಜನರು ಮತ್ತು ಯೆಹೋವನ ಸಾಕ್ಷಿಗಳ ಸಭೆಗಳಲ್ಲಿರುವ ಒಳ್ಳೆಯ ಯುವ ಜನರ ಮಧ್ಯೆ ಎಂತಹ ಗಮನಾರ್ಹವಾದ ವ್ಯತ್ಯಾಸವಿದೆ! ಇವರು ಪರಿಪೂರ್ಣರಾಗಿದ್ದಾರೆ ಎಂಬುದು ಇದರರ್ಥವಲ್ಲ. ಇವರು ಸಹ ತಮಗಿರುವ “ಯೌವನದ ಇಚ್ಛೆ”ಗಳ ವಿರುದ್ಧ ಹೆಣಗಾಡಬೇಕಾಗಿದೆ. (2 ತಿಮೊಥೆಯ 2:22) ಆದರೆ, ಈ ಯುವ ಜನರು ಒಂದು ಗುಂಪಿನೋಪಾದಿ, ಸರಿಯಾದುದರ ಪಕ್ಷವನ್ನು ಧೈರ್ಯದಿಂದ ಎತ್ತಿಹಿಡಿದು, ಲೋಕದ ಒತ್ತಡಗಳಿಗೆ ಮಣಿಯಲು ನಿರಾಕರಿಸಿದ್ದಾರೆ. ಸೈತಾನನ ‘ತಂತ್ರೋಪಾಯಗಳನ್ನು’ ಎದುರಿಸಿ ಜಯಿಸುತ್ತಿರುವ ಎಲ್ಲ ಯುವ ಜನರಾದ ನಿಮ್ಮನ್ನು ನಾವು ಹೃತ್ಪೂರ್ವಕವಾಗಿ ಶ್ಲಾಘಿಸುತ್ತೇವೆ! (ಎಫೆಸ 6:11) “ಯೌವನಸ್ಥರೇ [ಮತ್ತು ಯೌವನಸ್ಥೆಯರೇ], ನೀವು ಶಕ್ತರಾಗಿರುವದರಿಂದಲೂ ದೇವರ ವಾಕ್ಯವು ನಿಮ್ಮಲ್ಲಿ ನೆಲೆಗೊಂಡಿರುವದರಿಂದಲೂ ನೀವು ಕೆಡುಕನನ್ನು ಜಯಿಸಿರುವದರಿಂದಲೂ ನಿಮಗೆ ಬರೆದಿದ್ದೇನೆ” ಎಂಬುದಾಗಿ ಅಪೊಸ್ತಲ ಯೋಹಾನನಂತೆ ಹೇಳಲು ನಾವು ಪ್ರಚೋದಿಸಲ್ಪಡುತ್ತೇವೆ.—1 ಯೋಹಾನ 2:14.
3. “ಆತ್ಮ” ಎಂಬ ಪದವು ಏನನ್ನು ಅರ್ಥೈಸಬಲ್ಲದು?
3 ಆದರೆ, ಆ ಕೆಡುಕನ ವಿರುದ್ಧ ಹೋರಾಡಿ ಜಯಿಸುತ್ತಾ ಇರಲು, ಯಾವುದನ್ನು ಬೈಬಲು “ಲೋಕದ ಆತ್ಮ”ವೆಂದು ಕರೆಯುತ್ತದೊ ಅದನ್ನು ನೀವು ಅತಿಪ್ರಯಾಸದಿಂದ ಪ್ರತಿರೋಧಿಸಬೇಕಾಗಿದೆ. (1 ಕೊರಿಂಥ 2:12) ಗ್ರೀಕ್ ಭಾಷೆಯ ಒಂದು ಆಧಾರಗ್ರಂಥಕ್ಕನುಸಾರ, “ಆತ್ಮ” ಎಂಬುದು “ಒಬ್ಬ ವ್ಯಕ್ತಿಯಲ್ಲಿ ವ್ಯಾಪಿಸಿ, ಕಾರ್ಯನಡೆಸುವ ಮನೋವೃತ್ತಿ ಇಲ್ಲವೆ ಪ್ರಭಾವವನ್ನು” ಅರ್ಥೈಸಬಲ್ಲದು. ಉದಾಹರಣೆಗೆ, ಒಬ್ಬನು ಸಿಡುಕಿನ ಸ್ವಭಾವದವನಾಗಿದ್ದರೆ, ಅವನಲ್ಲಿ ಕೆಟ್ಟ “ಆತ್ಮ”ವಿದೆಯೆಂದು ನೀವು ಹೇಳಬಹುದು. ನಿಮ್ಮ “ಆತ್ಮ,” ಮನೋವೃತ್ತಿ, ಇಲ್ಲವೆ ಮಾನಸಿಕ ಪ್ರವೃತ್ತಿಯು, ನೀವು ಮಾಡುವ ಆಯ್ಕೆಗಳನ್ನು ಮತ್ತು ನಿಮ್ಮ ನಡೆನುಡಿಗಳನ್ನು ಪ್ರಭಾವಿಸುತ್ತದೆ. ಇಂತಹ “ಆತ್ಮವನ್ನು” ವ್ಯಕ್ತಿಗಳು ಮತ್ತು ಗುಂಪುಗಳು ಸಹ ತೋರಿಸಸಾಧ್ಯವಿದೆ. ಅಪೊಸ್ತಲ ಪೌಲನು ಕ್ರೈಸ್ತರ ಒಂದು ಗುಂಪಿಗೆ ಬರೆದುದು: “ನಮ್ಮ ಕರ್ತನಾದ ಯೇಸು ಕ್ರಿಸ್ತನ ಕೃಪೆಯು ನಿಮ್ಮ ಆತ್ಮದೊಂದಿಗಿರಲಿ [“ನೀವು ತೋರಿಸುವ ಆತ್ಮದೊಂದಿಗಿರಲಿ,” NW].” (ಫಿಲೆಮೋನ 25) ಹಾಗಾದರೆ, ಈ ಲೋಕವು ಯಾವ ರೀತಿಯ ಆತ್ಮವನ್ನು ತೋರಿಸುತ್ತದೆ? “ಲೋಕವೆಲ್ಲವು ಕೆಡುಕನ” ಅಂದರೆ, ಪಿಶಾಚನಾದ ಸೈತಾನನ “ವಶದಲ್ಲಿ ಬಿದ್ದಿ”ರುವುದರಿಂದ, ಈ ಲೋಕದ ಆತ್ಮವು ಹಿತಕರವಾಗಿರಸಾಧ್ಯವಿಲ್ಲ ಅಲ್ಲವೆ?—1 ಯೋಹಾನ 5:19.
ಲೋಕದ ಆತ್ಮವನ್ನು ಗುರುತಿಸುವುದು
4, 5. (ಎ) ಎಫೆಸದ ಸಭೆಯವರು ಕ್ರೈಸ್ತರಾಗುವ ಮುಂಚೆ ಯಾವ ಆತ್ಮವು ಅವರನ್ನು ಪ್ರಭಾವಿಸಿತ್ತು? (ಬಿ) “ವಾಯುವಿನ ಅಧಿಕಾರವುಳ್ಳ ಪ್ರಭು” ಯಾರು, ಮತ್ತು “ವಾಯು” ಏನಾಗಿದೆ?
4 ಪೌಲನು ಬರೆದುದು: “ಅಪರಾಧಗಳ ಮತ್ತು ಪಾಪಗಳ ದೆಸೆಯಿಂದ ಸತ್ತವರಾಗಿದ್ದ ನಿಮ್ಮನ್ನೇ ದೇವರು ಬದುಕಿಸಿದನು. ನೀವು ಪೂರ್ವದಲ್ಲಿ ಅಪರಾಧಗಳನ್ನೂ ಪಾಪಗಳನ್ನೂ ಮಾಡುವವರಾಗಿದ್ದು ಇಹಲೋಕಾಚಾರಕ್ಕೆ ಅನುಸಾರವಾಗಿ ನಡೆದುಕೊಂಡಿರಿ, ಅಂದರೆ ವಾಯುವಿನ ಅಧಿಕಾರವುಳ್ಳ ಪ್ರಭುವಿನ ಅನುಸಾರವಾಗಿ. ಈ ಆತ್ಮವು ಅವಿಧೇಯತೆಯ ಪುತ್ರರಲ್ಲಿ ಈಗ ಕಾರ್ಯಮಾಡುವಂತಹದ್ದಾಗಿದೆ. ನಾವೆಲ್ಲರೂ ಪೂರ್ವದಲ್ಲಿ ಅವಿಧೇಯರಾಗಿದ್ದು ಶರೀರಭಾವದ ಆಶೆಗಳಿಗೆ ಅಧೀನರಾಗಿ ಶರೀರಕ್ಕೂ ಮನಸ್ಸಿಗೂ ಸಂಬಂಧಪಟ್ಟ ಇಚ್ಛೆಗಳನ್ನು ನೆರವೇರಿಸುತ್ತಾ ನಡೆದು ಮಿಕ್ಕಾದವರಂತೆ ಸ್ವಭಾವಸಿದ್ಧವಾಗಿ ದೇವರ ಕೋಪಕ್ಕೆ ಗುರಿಯಾಗಿದ್ದೆವು.”—ಎಫೆಸ 2:1-3, NW.
5 ಕ್ರೈಸ್ತ ಮಾರ್ಗದ ಕುರಿತು ಕಲಿತುಕೊಳ್ಳುವ ಮುಂಚೆ ಎಫೆಸದಲ್ಲಿದ್ದ ಕ್ರೈಸ್ತರು, ತಮಗರಿವಿಲ್ಲದೆಯೇ “ವಾಯುವಿನ ಅಧಿಕಾರವುಳ್ಳ ಪ್ರಭುವಿನ,” ಅಂದರೆ ಪಿಶಾಚನಾದ ಸೈತಾನನ ಹಿಂಬಾಲಕರಾಗಿದ್ದರು. ಈ “ವಾಯು,” ಸೈತಾನನು ಹಾಗೂ ಅವನ ದೆವ್ವಗಳು ವಾಸಿಸುವ ಒಂದು ಅಕ್ಷರಾರ್ಥ ಸ್ಥಳವಲ್ಲ. ಈ ಮೇಲಿನ ಮಾತುಗಳನ್ನು ಪೌಲನು ಬರೆದ ಸಮಯದಲ್ಲಿ, ಪಿಶಾಚನಾದ ಸೈತಾನನಿಗೂ ಅವನ ದೆವ್ವಗಳಿಗೂ ಸ್ವರ್ಗಕ್ಕೆ ಪ್ರವೇಶಾಧಿಕಾರವಿತ್ತು. (ಹೋಲಿಸಿ ಯೋಬ 1:6; ಪ್ರಕಟನೆ 12:7-12.) “ವಾಯು” ಎಂಬ ಪದವು, ಸೈತಾನನ ಲೋಕದಲ್ಲಿ ಪ್ರಚಲಿತವಾಗಿರುವ ಆತ್ಮ, ಇಲ್ಲವೆ ಮನೋಭಾವವನ್ನು ಅರ್ಥೈಸುತ್ತದೆ. (ಹೋಲಿಸಿ ಪ್ರಕಟನೆ 16:17-21.) ನಮ್ಮ ಸುತ್ತಲೂ ಇರುವ ವಾಯುವಿನಂತೆ, ಈ ಆತ್ಮವು ಎಲ್ಲೆಡೆಯೂ ಇದೆ.
6. “ವಾಯುವಿನ ಅಧಿಕಾರ” ಅಂದರೇನು, ಮತ್ತು ಅದು ಅನೇಕ ಯುವ ಜನರ ಮೇಲೆ ಹೇಗೆ ಪ್ರಯೋಗಿಸಲ್ಪಡುತ್ತದೆ?
6 ಆದರೆ ಈ “ವಾಯುವಿನ ಅಧಿಕಾರ” ಅಂದರೇನು? ಜನರ ಮೇಲೆ ಈ “ವಾಯು” ಬೀರುವ ಅಗಾಧವಾದ ಪ್ರಭಾವವನ್ನೇ ಇದು ಸೂಚಿಸುತ್ತಿರಬಹುದು. ಈ ಆತ್ಮವು “ಅವಿಧೇಯತೆಯ ಪುತ್ರರಲ್ಲಿ . . . ಕಾರ್ಯನಡೆಸುವಂತಹದ್ದಾಗಿದೆ” ಎಂಬುದಾಗಿ ಪೌಲನು ಹೇಳಿದನು. ಹೀಗೆ, ಈ ಲೋಕದ ಆತ್ಮವು, ಅವಿಧೇಯತೆ ಮತ್ತು ದಂಗೆಕೋರ ಮನೋಭಾವವನ್ನು ಉಂಟುಮಾಡುತ್ತದೆ. ಮತ್ತು ಸಮವಯಸ್ಕರ ಒತ್ತಡದ ಮೂಲಕ, ಈ ಅಧಿಕಾರವು ಪ್ರಯೋಗಿಸಲ್ಪಡುತ್ತದೆ. ಒಬ್ಬ ಸಾಕ್ಷಿ ಯುವತಿಯು ಹೇಳುವುದು: “ಶಾಲೆಯಲ್ಲಿ ಒಂದಿಷ್ಟು ದಂಗೆಕೋರ ಆತ್ಮವನ್ನು ಪ್ರದರ್ಶಿಸುವಂತೆ ಎಲ್ಲರೂ ನಿಮ್ಮನ್ನು ಉತ್ತೇಜಿಸುತ್ತಾರೆ. ಮತ್ತು ಆ ರೀತಿಯಲ್ಲಿ ನಡೆದುಕೊಳ್ಳುವಾಗ, ಸಮವಯಸ್ಕರು ನಿಮ್ಮನ್ನು ಬಹಳ ಗೌರವದಿಂದ ಕಾಣುತ್ತಾರೆ.”
ಲೋಕಾತ್ಮದ ಗುಣಲಕ್ಷಣಗಳು
7-9. (ಎ) ಇಂದಿನ ಯುವ ಜನರಲ್ಲಿ ತೋರಿಬರುವ ಲೋಕಾತ್ಮದ ಕೆಲವು ವಿಧಾನಗಳನ್ನು ಹೆಸರಿಸಿರಿ. (ಬಿ) ಈ ವಿಷಯಗಳಲ್ಲಿ ಯಾವುದನ್ನಾದರೂ ನೀವು ಸ್ಥಳಿಕವಾಗಿ ಗಮನಿಸಿದ್ದೀರೊ?
7 ಇಂದಿನ ಯುವ ಜನರಲ್ಲಿ ತೋರಿಬರುವ ಲೋಕಾತ್ಮದ ಕೆಲವು ಗುಣಲಕ್ಷಣಗಳು ಯಾವುವು? ಅದು ಅಪ್ರಾಮಾಣಿಕತೆ ಮತ್ತು ದಂಗೆಕೋರತನವೇ ಆಗಿದೆ. ಒಂದು ಪತ್ರಿಕಾ ವರದಿಯು ಹೇಳಿದ್ದೇನೆಂದರೆ, ಜೂನಿಯರ್ ಮತ್ತು ಸೀನಿಯರ್ ಕಾಲೇಜು ವಿದ್ಯಾರ್ಥಿಗಳಲ್ಲಿ 70 ಪ್ರತಿಶತಕ್ಕಿಂತಲೂ ಹೆಚ್ಚಿನವರು, ತಾವು ಪ್ರೌಢ ಶಾಲೆಯಲ್ಲಿರುವಾಗಲೇ ಪರೀಕ್ಷೆಯಲ್ಲಿ ಕಾಪಿ ಹೊಡೆದಿದ್ದೇವೆಂದು ಒಪ್ಪಿಕೊಂಡರು. ಇಂದು, ಮರ್ಯಾದೆಯಿಲ್ಲದ, ಕಟುವಾದ, ಹಾಗೂ ಅಶ್ಲೀಲವಾದ ಮಾತುಕತೆಯು ಸಹ ವ್ಯಾಪಕವಾಗಿದೆ. ಕೆಲವೊಮ್ಮೆ ಯೋಬ ಮತ್ತು ಅಪೊಸ್ತಲ ಪೌಲರು ನ್ಯಾಯಸಮ್ಮತವಾದ ಕೋಪವನ್ನು ವ್ಯಕ್ತಪಡಿಸಲು ಕಟುವಾದ ಮಾತುಗಳನ್ನು ಉಪಯೋಗಿಸಿದರೆಂದು ಕೆಲವರು ಹೇಳಬಹುದು. (ಯೋಬ 12:2; 2 ಕೊರಿಂಥ 12:13) ಆದರೆ, ಇಂದಿನ ಅನೇಕ ಯುವ ಜನರು ಉಪಯೋಗಿಸುವಂತಹ ತೀಕ್ಷ್ಣವಾದ ಅಣಕುನುಡಿಯು ಶಾಬ್ದಿಕ ಅಪಪ್ರಯೋಗಕ್ಕೆ ಸಮವಾಗಿದೆ.
8 ಮಿತಿಮೀರಿದ ಮನೋರಂಜನೆಯು ಸಹ ಈ ಲೋಕಾತ್ಮದ ಗುಣಲಕ್ಷಣವಾಗಿದೆ. ಯುವ ಜನರ ನೈಟ್ಕ್ಲಬ್ಗಳು, ರೇವ್ಗಳು,a ಮತ್ತು ಹತೋಟಿಮೀರಿದ ಉತ್ಸವಗಳ ನಾನಾ ಪ್ರಕಾರಗಳು ತುಂಬ ಜನಪ್ರಿಯವಾಗಿವೆ. ಉಡುಗೆ-ತೊಡುಗೆ ಮತ್ತು ಕೇಶಾಲಂಕಾರದ ವಿಷಯದಲ್ಲಿ ಸಹ ಅತಿರೇಕಕ್ಕೆ ಹೋಗುವುದನ್ನು ನಾವು ಎಲ್ಲೆಲ್ಲಿಯೂ ಕಾಣಬಹುದು. ದೊಗಲೆ ಬಟ್ಟೆಗಳನ್ನು ಧರಿಸುವುದರಿಂದ ಹಿಡಿದು, ದೇಹವನ್ನು ಚುಚ್ಚಿಸಿಕೊಳ್ಳುವಂತಹ ತಲ್ಲಣಗೊಳಿಸುವ ಶೈಲಿಗಳನ್ನು ಅನುಕರಿಸುವವರೆಗೂ, ಇಂದಿನ ಅನೇಕ ಯುವ ಜನರು ಲೋಕದ ದಂಗೆಕೋರ ಆತ್ಮದೊಂದಿಗೆ ತಮ್ಮನ್ನು ಗುರುತಿಸಿಕೊಳ್ಳುತ್ತಾರೆ. (ಹೋಲಿಸಿ ರೋಮಾಪುರ 6:16.) ಪ್ರಾಪಂಚಿಕ ಸ್ವತ್ತುಗಳನ್ನು ಕೂಡಿಸುವುದರಲ್ಲಿ ತಲ್ಲೀನರಾಗಿರುವುದು ಮತ್ತೊಂದು ಗುಣಲಕ್ಷಣವಾಗಿದೆ. ಒಂದು ಶೈಕ್ಷಣಿಕ ಪತ್ರಿಕೆಗನುಸಾರ, “ಮಾರಾಟಗಾರರು ತಮ್ಮ ಜಾಹೀರಾತು ಹಾಗೂ ಶೈಕ್ಷಣಿಕ ತಂತ್ರಗಳಿಂದ ಮತ್ತು ಉತ್ಪಾದನೆಗಳ ದೊಡ್ಡ ಸಂಗ್ರಹದಿಂದ ಮಕ್ಕಳ ಮೇಲೆ ಸತತವಾಗಿ ಪ್ರಭಾವವನ್ನು ಬೀರಿದ್ದಾರೆ.” ಅಮೆರಿಕದ ಯುವ ಜನರು ತಮ್ಮ ಪ್ರೌಢ ಶಾಲಾ ಶಿಕ್ಷಣವನ್ನು ಮುಗಿಸುವುದರೊಳಗೆ, 3,60,000 ಟಿವಿ ಜಾಹೀರಾತುಗಳಿಗೆ ಒಡ್ಡಲ್ಪಟ್ಟಿರುವರು. ಖರೀದಿಮಾಡುವ ಒತ್ತಡವು ನಿಮ್ಮ ಸಮವಯಸ್ಕರಿಂದಲೂ ಬರಬಹುದು. ಒಬ್ಬ 14 ವರ್ಷ ಪ್ರಾಯದ ಹುಡುಗಿಯು ಹೇಳುವುದು: “‘ನೀನು ಹಾಕಿಕೊಂಡಿರುವಂತಹ ಸ್ವೆಟರ್, ಜ್ಯಾಕೆಟ್, ಇಲ್ಲವೆ ಜೀನ್ಸ್ ಯಾವ ಕಂಪನಿಯದು?’ ಎಂಬುದು ಎಲ್ಲರ ಮುಖ್ಯ ಪ್ರಶ್ನೆಯಾಗಿರುತ್ತದೆ.”
9 ಬೈಬಲ್ ಸಮಯಗಳಂದಿನಿಂದಲೂ ಅಶುದ್ಧ ವರ್ತನೆಯನ್ನು ಪ್ರಚೋದಿಸಲಿಕ್ಕಾಗಿ, ಸೈತಾನನು ಅಹಿತಕರವಾದ ಸಂಗೀತವನ್ನು ಒಂದು ಸಾಧನವನ್ನಾಗಿ ಬಳಸಿದ್ದಾನೆ. (ಹೋಲಿಸಿ ವಿಮೋಚನಕಾಂಡ 32:17-19; ಕೀರ್ತನೆ 69:12; ಯೆಶಾಯ 23:16.) ಹಾಗಾದರೆ, ತೀರ ಸ್ಪಷ್ಟವಾಗಿರದಿದ್ದರೂ ಲೈಂಗಿಕವಾಗಿ ಆಕರ್ಷಕವಾಗಿರುವ ಗೀತೆಯ ಲಹರಿಗಳು, ಲೌಕಿಕವಾದ, ಹಾಗೂ ತೀರ ಅಸಭ್ಯವಾದ ರೀತಿಯಲ್ಲಿ ಉದ್ರೇಕವನ್ನುಂಟುಮಾಡುವ ಸಂಗೀತವು ಇಂದು ಬಹಳ ಜನಪ್ರಿಯವಾಗಿದೆ. ಈ ಲೋಕದ ಅಶುದ್ಧ ಆತ್ಮದ ಮತ್ತೊಂದು ಗುಣಲಕ್ಷಣವು ಲೈಂಗಿಕ ಅನೈತಿಕತೆಯಾಗಿದೆ. (1 ಕೊರಿಂಥ 6:9-11) ದ ನ್ಯೂ ಯಾರ್ಕ್ ಟೈಮ್ಸ್ ಎಂಬ ವಾರ್ತಾಪತ್ರಿಕೆಯು ವರದಿಸುವುದು: “ಅನೇಕ ಹದಿವಯಸ್ಕರು ತಮ್ಮ ಸಮವಯಸ್ಕರಿಂದ ಅಂಗೀಕರಿಸಲ್ಪಡಲಿಕ್ಕಾಗಿ ಲೈಂಗಿಕ ಸಂಭೋಗವನ್ನು ಒಂದು ಆವಶ್ಯಕತೆಯಾಗಿ ಪರಿಗಣಿಸುತ್ತಾರೆ . . . ಪ್ರೌಢ ಶಾಲೆಯ ಪ್ರತಿ ಮೂವರು ಸೀನಿಯರ್ ಮಕ್ಕಳಲ್ಲಿ ಇಬ್ಬರು, ಈಗಾಗಲೇ ಲೈಂಗಿಕ ಸಂಭೋಗದಲ್ಲಿ ಒಳಗೂಡಿದ್ದಾರೆ.” 8ರಿಂದ 12 ವರ್ಷ ಪ್ರಾಯದ ಮಕ್ಕಳು “ಲೈಂಗಿಕವಾಗಿ ಹೆಚ್ಚು ಸಕ್ರಿಯರಾಗುತ್ತಿದ್ದಾರೆ” ಎಂದು ದ ವಾಲ್ ಸ್ಟ್ರೀಟ್ ಜರ್ನಲ್ನಲ್ಲಿ ಕಂಡುಬಂದ ಒಂದು ಲೇಖನವು ಅಗತ್ಯವಾದ ಪುರಾವೆಯನ್ನು ಒದಗಿಸಿತು. ಇತ್ತೀಚೆಗೆ ನಿವೃತ್ತರಾದ ಶಾಲಾ ಸಲಹೆಗಾರರೊಬ್ಬರು ಹೇಳಿದ್ದು: “ಆರನೆಯ ತರಗತಿಯಲ್ಲೇ ಕೆಲವರು ಗರ್ಭವತಿಯರಾಗುವುದನ್ನು ನಾವು ನೋಡಲಾರಂಭಿಸಿದ್ದೇವೆ.”b
ಈ ಲೋಕದ ಆತ್ಮವನ್ನು ತಿರಸ್ಕರಿಸುವುದು
10. ಕ್ರೈಸ್ತ ಕುಟುಂಬಗಳಲ್ಲಿ ಬೆಳೆದುಬಂದ ಕೆಲವು ಯುವ ಜನರು, ಯಾವ ರೀತಿಯಲ್ಲಿ ಈ ಲೋಕದ ಆತ್ಮಕ್ಕೆ ಬಲಿಬಿದ್ದಿದ್ದಾರೆ?
10 ವಿಷಾದಕರವಾಗಿ, ಕ್ರೈಸ್ತ ಯುವ ಜನರಲ್ಲಿ ಕೆಲವರು ಈ ಲೋಕದ ಆತ್ಮಕ್ಕೆ ಬಲಿಬಿದ್ದಿದ್ದಾರೆ. ಜ್ಯಾಪನೀಸ್ ಹುಡುಗಿಯೊಬ್ಬಳು ಒಪ್ಪಿಕೊಂಡದ್ದು: “ನನ್ನ ಹೆತ್ತವರು ಹಾಗೂ ಜೊತೆ ಕ್ರೈಸ್ತರ ಮುಂದೆ ನಾನು ಒಳ್ಳೆಯವಳಂತೆ ನಟಿಸಿದೆ. ಆದರೆ, ಇದರ ಜೊತೆಗೆ ನಾನು ಮತ್ತೊಂದು ರೀತಿಯ ಜೀವನವನ್ನೂ ನಡೆಸುತ್ತಿದ್ದೆ.” ಕೆನ್ಯದ ಒಬ್ಬ ಯುವತಿಯು ಹೇಳುವುದು: “ಸ್ವಲ್ಪ ಸಮಯದ ವರೆಗೆ ನಾನು ಇಬ್ಬಗೆಯ ಜೀವನವನ್ನು ನಡೆಸಿದೆ. ಅದರಲ್ಲಿ ಪಾರ್ಟಿಗಳು, ರಾಕ್ ಸಂಗೀತ, ಮತ್ತು ಯೋಗ್ಯರಲ್ಲದ ಸ್ನೇಹಿತರು ಇದ್ದರು. ಇದು ತಪ್ಪೆಂದು ನನಗೆ ಗೊತ್ತಿತ್ತು, ಆದರೆ ಸಕಾಲದಲ್ಲಿ ಇದೆಲ್ಲವೂ ಸರಿಯಾಗುವುದೆಂದು ಭಾವಿಸಿ ನಾನು ಈ ವಿಷಯವನ್ನು ಕಡೆಗಣಿಸಿದೆ. ಆದರೆ ಪರಿಸ್ಥಿತಿಯು ಸುಧಾರಿಸಲಿಲ್ಲ. ಅದು ಇನ್ನೂ ಹದಗೆಡುತ್ತಾ ಹೋಯಿತು.” ಜರ್ಮನಿಯಲ್ಲಿರುವ ಒಬ್ಬ ಯುವತಿಯು ಹೇಳುವುದು: “ಲೌಕಿಕ ಸ್ನೇಹಿತರ ಸಾಹಚರ್ಯದಿಂದ ಇದೆಲ್ಲವೂ ಆರಂಭಿಸಿತು. ತರುವಾಯ ನಾನು ಧೂಮಪಾನ ಮಾಡಲಾರಂಭಿಸಿದೆ. ನಾನು ನನ್ನ ಹೆತ್ತವರ ಮನಸ್ಸಿಗೆ ನೋವನ್ನು ಉಂಟುಮಾಡಲು ಬಯಸಿದೆ, ಆದರೆ ಕೊನೆಗೆ ನೋವನ್ನು ಅನುಭವಿಸಿದವಳು ನಾನೇ ಆಗಿದ್ದೆ.”
11. ಹತ್ತು ಮಂದಿ ಗೂಢಚಾರರು ಕೆಟ್ಟ ವರದಿಯನ್ನು ತಂದಾಗ, ಅವರನ್ನು ಅನುಸರಿಸದೆ ಇರುವಂತೆ ಕಾಲೇಬನು ಹೇಗೆ ಶಕ್ತನಾದನು?
11 ಹೀಗಿದ್ದರೂ, ಲೋಕದ ಆತ್ಮವನ್ನು ಪ್ರತಿರೋಧಿಸಲು, ಹೌದು, ಅದನ್ನು ತಿರಸ್ಕರಿಸಲು ಸಾಧ್ಯವಿದೆ. ಗತಕಾಲದ ಕಾಲೇಬನ ಉದಾಹರಣೆಯನ್ನು ಪರಿಗಣಿಸಿರಿ. ಹೇಡಿಗಳಾದ ಹತ್ತು ಮಂದಿ ಗೂಢಚಾರರು, ವಾಗ್ದತ್ತ ದೇಶದ ಕುರಿತು ತಪ್ಪಾದ ವರದಿಯನ್ನು ಒಪ್ಪಿಸಿದರು. ಇದರಿಂದ ಯೆಹೋಶುವ ಮತ್ತು ಕಾಲೇಬರು ಗಾಬರಿಗೊಳ್ಳದೆ, ಇತರರು ಹೇಳಿದ್ದನ್ನೇ ಅನುಮೋದಿಸಲು ನಿರಾಕರಿಸಿದರು. ಅವರಿಬ್ಬರೂ ಧೈರ್ಯದಿಂದ ಹೇಳಿದ್ದು: “ನಾವು ಸಂಚರಿಸಿ ನೋಡಿದ ದೇಶವು ಅತ್ಯುತ್ತಮವಾದದ್ದು; ಅದು ಹಾಲೂ ಜೇನೂ ಹರಿಯುವ ದೇಶ; ಯೆಹೋವನು ನಮ್ಮನ್ನು ಮೆಚ್ಚಿಕೊಂಡರೆ ಅದರಲ್ಲಿ ನಮ್ಮನ್ನು ಸೇರಿಸಿ ಅದನ್ನು ನಮ್ಮ ಸ್ವಾಧೀನಕ್ಕೆ ಕೊಡುವನು.” (ಅರಣ್ಯಕಾಂಡ 14:7, 8) ಈ ಎಲ್ಲ ಒತ್ತಡವನ್ನು ಎದುರಿಸಿ ನಿಲ್ಲಲು ಕಾಲೇಬನು ಹೇಗೆ ಶಕ್ತನಾದನು? ಕಾಲೇಬನ ಕುರಿತು ಯೆಹೋವನು ಹೇಳಿದ್ದು: “ಒಂದು ಭಿನ್ನವಾದ ಆತ್ಮವು ಅವನಲ್ಲಿ ನೆಲೆಗೊಂಡಿದೆ.”—ಅರಣ್ಯಕಾಂಡ 14:24, NW.
“ಒಂದು ಭಿನ್ನವಾದ ಆತ್ಮ” ವನ್ನು ತೋರ್ಪಡಿಸುವುದು
12. ಮಾತುಕತೆಯ ವಿಷಯದಲ್ಲಿ ಒಬ್ಬನು “ಭಿನ್ನವಾದ ಆತ್ಮ”ವನ್ನು ತೋರ್ಪಡಿಸುವುದು ಏಕೆ ಪ್ರಾಮುಖ್ಯವಾಗಿದೆ?
12 ಇಂದು ಲೋಕಾತ್ಮದಿಂದ ವ್ಯತ್ಯಾಸವಾದ “ಒಂದು ಭಿನ್ನವಾದ ಆತ್ಮ” ಇಲ್ಲವೆ ಮನೋಭಾವವನ್ನು ತೋರ್ಪಡಿಸಲು, ಧೈರ್ಯ ಹಾಗೂ ಬಲದ ಅಗತ್ಯವಿದೆ. ಇದನ್ನು ಮಾಡಸಾಧ್ಯವಿರುವ ಒಂದು ವಿಧವು, ಚುಚ್ಚುಹಾಸ್ಯದ, ಅಗೌರವಪೂರ್ಣ ಮಾತುಕತೆಯಿಂದ ದೂರವಿರುವುದೇ ಆಗಿದೆ. “ಸಾರ್ಕ್ಯಾಸಮ್” ಎಂಬ ಇಂಗ್ಲಿಷ್ ಪದವು ಒಂದು ಗ್ರೀಕ್ ಕ್ರಿಯಾಪದದಿಂದ ತೆಗೆಯಲ್ಪಟ್ಟಿದೆ. ಅದರ ಅಕ್ಷರಾರ್ಥವು, “ನಾಯಿಗಳಂತೆ ಮಾಂಸವನ್ನು ಕಚ್ಚಿ ಹರಿಯುವುದು” ಆಗಿದೆ. (ಹೋಲಿಸಿ ಗಲಾತ್ಯ 5:15.) ನಾಯಿಯ ಹಲ್ಲುಗಳು ಒಂದು ಎಲುಬಿನಿಂದ ಮಾಂಸವನ್ನು ಕಚ್ಚಿ ಹರಿಯಲು ಸಾಧ್ಯವಿರುವಂತೆಯೇ, ಕಟುವಾದ “ಹಾಸ್ಯವು” ಇತರರ ಗೌರವವನ್ನು ಹರಿದುಹಾಕಬಲ್ಲದು. ಆದರೆ, “ಈಗಲಾದರೋ ಕ್ರೋಧ ಕೋಪ ಮತ್ಸರ ದೂಷಣೆ ಬಾಯಿಂದ ಹೊರಡುವ ದುರ್ಭಾಷೆ ಇವುಗಳನ್ನು ವಿಸರ್ಜಿಸಿಬಿಡಿರಿ” ಎಂಬುದಾಗಿ ಕೊಲೊಸ್ಸೆ 3:8 ನಿಮ್ಮನ್ನು ಪ್ರೋತ್ಸಾಹಿಸುತ್ತದೆ. ಮತ್ತು ಜ್ಞಾನೋಕ್ತಿ 10:19 ಹೇಳುವುದು: “ಮಾತಾಳಿಗೆ ಪಾಪ ತಪ್ಪದು; ಮೌನಿಯು ಮತಿವಂತ.” ಯಾರಾದರೂ ನಿಮ್ಮನ್ನು ಅಪಮಾನಿಸುವುದಾದರೆ, ದೂಷಿಸುವ ಅಂತಹ ವ್ಯಕ್ತಿಯೊಂದಿಗೆ ಪ್ರಾಯಶಃ ಖಾಸಗಿಯಾಗಿ ಶಾಂತಭಾವದಿಂದ ಹಾಗೂ ಸಮಾಧಾನದಿಂದ ಮಾತಾಡುತ್ತಾ, ‘ಮತ್ತೊಂದು ಕೆನ್ನೆಯನ್ನೂ ಒಡ್ಡಲು’ ಬೇಕಾದ ಆತ್ಮನಿಯಂತ್ರಣವು ನಿಮ್ಮಲ್ಲಿರಲಿ.—ಮತ್ತಾಯ 5:39; ಜ್ಞಾನೋಕ್ತಿ 15:1.
13. ಪ್ರಾಪಂಚಿಕ ವಸ್ತುಗಳ ವಿಷಯದಲ್ಲಿ ಯುವ ಜನರು ಸಮತೂಕದ ನೋಟವನ್ನು ಹೇಗೆ ತೋರಿಸಬಲ್ಲರು?
13 “ಒಂದು ಭಿನ್ನವಾದ ಆತ್ಮ”ವನ್ನು ತೋರ್ಪಡಿಸುವ ಮತ್ತೊಂದು ವಿಧಾನವು, ಪ್ರಾಪಂಚಿಕ ವಸ್ತುಗಳ ಬಗ್ಗೆ ಸಮತೂಕದ ನೋಟವನ್ನು ಕಾಪಾಡಿಕೊಳ್ಳುವುದೇ ಆಗಿದೆ. ಒಳ್ಳೊಳ್ಳೇ ವಸ್ತುಗಳನ್ನು ಹೊಂದಿರುವ ಬಯಕೆಯು ತೀರ ಸ್ವಾಭಾವಿಕ. ಯೇಸು ಕ್ರಿಸ್ತನಲ್ಲಿ ಉತ್ತಮ ಗುಣಮಟ್ಟದ ಒಂದು ನಿಲುವಂಗಿಯಾದರೂ ಇತ್ತೆಂಬುದುರಲ್ಲಿ ಸಂದೇಹವಿಲ್ಲ. (ಯೋಹಾನ 19:23, 24) ಆದರೆ ವಸ್ತುಗಳನ್ನು ಸಂಪಾದಿಸುವುದು ಒಂದು ಗೀಳಾಗಿ ಪರಿಣಮಿಸಿ, ನೀವು ನಿಮ್ಮ ಹೆತ್ತವರು ಖರೀದಿಸಸಾಧ್ಯವಾಗದಂತಹ ವಸ್ತುಗಳನ್ನು ಖರೀದಿಸುವಂತೆ ಅವರನ್ನು ಸತತವಾಗಿ ಪೀಡಿಸುವುದಾದರೆ, ಇಲ್ಲವೆ ಬೇರೆ ಯುವ ಜನರನ್ನು ಕೇವಲ ಅನುಕರಿಸಲು ಬಯಸುವುದಾದರೆ, ಆಗ ನೀವು ತಿಳಿದುಕೊಂಡಿರುವುದಕ್ಕಿಂತಲೂ ಹೆಚ್ಚಿನ ಅಧಿಕಾರವನ್ನು ಲೋಕದ ಆತ್ಮವು ನಿಮ್ಮ ಮೇಲೆ ಹೊಂದಿರಬಹುದು. ಬೈಬಲು ಹೇಳುವುದು: “ಲೋಕದಲ್ಲಿರುವ ಶರೀರದಾಶೆ ಕಣ್ಣಿನಾಶೆ ಬದುಕುಬಾಳಿನ ಡಂಬ ಈ ಮೊದಲಾದವುಗಳೆಲ್ಲವು ತಂದೆಯಿಂದ ಹುಟ್ಟದೆ ಲೋಕದಿಂದ ಹುಟ್ಟಿದವುಗಳಾಗಿವೆ.” ಹೌದು, ಲೋಕದ ಭೋಗಾಸಕ್ತ ಆತ್ಮದ ಅಧಿಕಾರಕ್ಕೆ ವಶವಾಗಬೇಡಿರಿ! ಇದ್ದದ್ದರಲ್ಲಿಯೇ ಸಂತೃಪ್ತರಾಗಿರಲು ಕಲಿತುಕೊಳ್ಳಿರಿ.—1 ಯೋಹಾನ 2:16; 1 ತಿಮೊಥೆಯ 6:8-10.
14. (ಎ) ಯೆಶಾಯನ ದಿನದಲ್ಲಿದ್ದ ದೇವಜನರು, ಮನೋರಂಜನೆಯ ವಿಷಯದಲ್ಲಿ ಅಸಮತೂಕ ನೋಟವನ್ನು ಹೇಗೆ ತೋರ್ಪಡಿಸಿದರು? (ಬಿ) ನೈಟ್ಕ್ಲಬ್ಗಳಲ್ಲಿ ಮತ್ತು ಅಸಭ್ಯ ಪಾರ್ಟಿಗಳಲ್ಲಿ ಕೆಲವು ಕ್ರೈಸ್ತ ಯುವ ಜನರು ಯಾವ ಅಪಾಯಗಳನ್ನು ಎದುರಿಸಿದ್ದಾರೆ?
14 ಮನೋರಂಜನೆಯನ್ನು ಅದರ ಸ್ಥಾನದಲ್ಲಿಡುವುದು ಕೂಡ ಪ್ರಾಮುಖ್ಯವಾಗಿದೆ. ಪ್ರವಾದಿಯಾದ ಯೆಶಾಯನು ಪ್ರಕಟಿಸಿದ್ದು: “ಅಯ್ಯೋ, ಮದ್ಯದ ಗೀಳಿನಿಂದಲೇ ಮುಂಜಾನೆ ಎದ್ದು ಸಂಜೆಯಾದ ಮೇಲೆಯೂ ದ್ರಾಕ್ಷಾರಸದಿಂದ ಅಮಲೇರಿದವರಾಗಿ ಕಾಲಕಳೆಯುವವರ ಪಾಡು ಏನು ಹೇಳಲಿ! ಕಿನ್ನರಿ, ವೀಣೆ, ದಮ್ಮಡಿ, ಕೊಳಲು, ದ್ರಾಕ್ಷಾರಸ ಇವುಗಳೇ ಅವರ ಔತಣಗಳ ಸೊಬಗು; ಯೆಹೋವನ ಕೆಲಸವನ್ನೋ ಅವರು ಲಕ್ಷಿಸರು, ಆತನ ಹಸ್ತಕಾರ್ಯವನ್ನು ಆಲೋಚಿಸರು.” (ಯೆಶಾಯ 5:11, 12) ವಿಷಾದಕರವಾಗಿ, ಕ್ರೈಸ್ತ ಯುವ ಜನರಲ್ಲಿ ಕೆಲವರು, ತದ್ರೀತಿಯ ಅಸಭ್ಯ ಪಾರ್ಟಿಗಳಲ್ಲಿ ಒಳಗೂಡಿದ್ದಾರೆ. ಯುವ ಜನರ ನೈಟ್ಕ್ಲಬ್ಗಳಲ್ಲಿ ಏನು ಸಂಭವಿಸುತ್ತದೆಂಬುದನ್ನು ವರ್ಣಿಸುವಂತೆ ಕ್ರೈಸ್ತ ಯುವ ಜನರ ಒಂದು ಗುಂಪನ್ನು ಕೇಳಿದಾಗ, ಒಬ್ಬ ಯುವ ಸಹೋದರಿಯು ಹೇಳಿದ್ದು: “ಅಲ್ಲಿ ಜಗಳಗಳು ತೀರ ಸಾಮಾನ್ಯ. ನಾನೂ ಅವುಗಳಲ್ಲಿ ಒಳಗೂಡಿದ್ದೆ.” ಯುವ ಸಹೋದರನೊಬ್ಬನು ಕೂಡಿಸಿ ಹೇಳಿದ್ದು: “ಅಲ್ಲಿ ಕುಡಿತ, ಧೂಮಪಾನ, ಮತ್ತು ಇನ್ನಿತರ ಅನೇಕ ವಿಷಯಗಳು ನಡೆಯುತ್ತಿದ್ದವು.” ಮತ್ತೊಬ್ಬ ಯುವ ಸಹೋದರನು ಒಪ್ಪಿಕೊಂಡದ್ದು: “ಜನರು ಮಿತಿಮೀರಿ ಕುಡಿಯುತ್ತಾರೆ. ನಂತರ ಮೂರ್ಖರಂತೆ ವರ್ತಿಸುತ್ತಾರೆ! ಅಲ್ಲಿ ಅಮಲೌಷಧಗಳೂ ಸಿಗುತ್ತವೆ. ಅನೇಕ ಕೆಟ್ಟ ವಿಷಯಗಳು ನಡೆಯುತ್ತವೆ. ಅಲ್ಲಿಗೆ ಹೋಗಿ ಅದರಿಂದ ಪ್ರಭಾವಿತರಾಗಲಾರಿರಿ ಎಂದು ನೀವು ಯೋಚಿಸುವುದಾದರೆ, ಆ ಆಲೋಚನೆಯು ತಪ್ಪಾಗಿದೆ.” ಸಕಾರಣದಿಂದಲೇ ಬೈಬಲು ಅನಿರ್ಬಂಧಿತ ಆನಂದೋತ್ಸವಗಳನ್ನು ಇಲ್ಲವೆ “ಅಸಭ್ಯ ಪಾರ್ಟಿಗಳನ್ನು,” “ಶರೀರಭಾವದ ಕರ್ಮ”ಗಳಲ್ಲಿ ಒಂದಾಗಿ ಪಟ್ಟಿಮಾಡುತ್ತದೆ.—ಗಲಾತ್ಯ 5:19-21, ಬೈಯಿಂಗ್ಟನ್; ರೋಮಾಪುರ 13:13.
15. ಮನೋರಂಜನೆಯ ವಿಷಯದಲ್ಲಿ ಯಾವ ಸಮತೂಕ ನೋಟವನ್ನು ಬೈಬಲು ನೀಡುತ್ತದೆ?
15 ಹಾನಿಕಾರಕ ಮನೋರಂಜನೆಯನ್ನು ತ್ಯಜಿಸುವುದು, ನಿಮ್ಮ ಜೀವನದಿಂದ ಸಂತೋಷವನ್ನು ಕಸಿದುಕೊಳ್ಳಲಾರದು. ನಾವು ಆರಾಧಿಸುವ “ಸಂತೋಷದ ದೇವರು,” ನೀವು ನಿಮ್ಮ ಯೌವನದಲ್ಲಿ ಆನಂದಿಸುವಂತೆ ಬಯಸುತ್ತಾನೆ. (1 ತಿಮೊಥೆಯ 1:11, NW; ಪ್ರಸಂಗಿ 11:9) ಆದರೆ ಬೈಬಲು ಎಚ್ಚರಿಸುವುದು: “ಆನಂದೋತ್ಸವವನ್ನು [“ಮನೋರಂಜನೆಯನ್ನು,” ಲಾಮ್ಸಾ] ಪ್ರೀತಿಸುವವನು ಕೊರತೆಪಡುವನು.” (ಜ್ಞಾನೋಕ್ತಿ 21:17, NW) ನೀವು ಮನೋರಂಜನೆಯನ್ನು ನಿಮ್ಮ ಜೀವಿತದ ಅತ್ಯಂತ ಪ್ರಾಮುಖ್ಯ ವಿಷಯವನ್ನಾಗಿ ಮಾಡಿಕೊಳ್ಳುವುದಾದರೆ, ಆತ್ಮಿಕ ಕೊರತೆಯನ್ನು ಅನುಭವಿಸುವಿರಿ. ಆದುದರಿಂದ ಮನೋರಂಜನೆಯ ಆಯ್ಕೆಯಲ್ಲಿ ಬೈಬಲಿನ ತತ್ವಗಳನ್ನು ಅನುಕರಿಸಿರಿ. ನಿಮ್ಮನ್ನು ಕೆಡವಿಹಾಕುವ ಬದಲು ಆತ್ಮೋನ್ನತಿ ಮಾಡುವ ನಾನಾ ಪ್ರಕಾರದ ಮನೋರಂಜನೆಗಳಿವೆ.c—ಪ್ರಸಂಗಿ 11:10.
16. ಕ್ರೈಸ್ತ ಯುವ ಜನರು ತಾವು ಭಿನ್ನರಾಗಿದ್ದೇವೆಂಬುದನ್ನು ಹೇಗೆ ತೋರಿಸಬಲ್ಲರು?
16 ಲೋಕದ ಶೈಲಿಗಳನ್ನು ತಿರಸ್ಕರಿಸುತ್ತಾ, ನಿಮ್ಮ ಉಡುಗೆ-ತೊಡುಗೆ ಮತ್ತು ಕೇಶಾಲಂಕಾರದ ವಿಷಯದಲ್ಲಿ ಸಭ್ಯತೆಯನ್ನು ತೋರ್ಪಡಿಸುವುದು ಸಹ, ನಿಮ್ಮನ್ನು ಭಿನ್ನರಾಗಿ ಗುರುತಿಸುವುದು. (ರೋಮಾಪುರ 12:2; 1 ತಿಮೊಥೆಯ 2:9) ಸಂಗೀತದ ಆಯ್ಕೆಯಲ್ಲೂ ಜಾಗರೂಕರಾಗಿರುವುದರಿಂದ ನೀವು ಭಿನ್ನರಾಗಿ ಕಾಣುವಿರಿ. (ಫಿಲಿಪ್ಪಿ 4:8, 9) “ಕಸದ ಡಬ್ಬಿಗೆ ಎಸೆಯಲು ಯೋಗ್ಯವಾದ ಸಂಗೀತವು ನನ್ನಲ್ಲಿದೆ, ಆದರೆ ಆ ಸಂಗೀತವು ಬಹಳ ಸೊಗಸಾಗಿದೆ!” ಎಂದು ಒಬ್ಬ ಯುವತಿಯು ಒಪ್ಪಿಕೊಳ್ಳುತ್ತಾಳೆ. ತದ್ರೀತಿಯಲ್ಲಿ ಮತ್ತೊಬ್ಬ ಯುವಕನು ಒಪ್ಪಿಕೊಂಡದ್ದು: “ಸಂಗೀತವು ನನ್ನ ಬಲಹೀನತೆಯಾಗಿದೆ, ಏಕೆಂದರೆ ಅದು ನನಗೆ ತುಂಬ ಇಷ್ಟ. ಅದರಲ್ಲಿ ಯಾವುದೋ ತಪ್ಪಿರುವುದನ್ನು ನಾನು ಗಮನಿಸುವಾಗ, ಇಲ್ಲವೆ ನನ್ನ ಹೆತ್ತವರು ಅದರ ಬಗ್ಗೆ ನನಗೆ ತಿಳಿಸುವಾಗ, ನನ್ನ ಭಾವನೆಗಳ ಮೇಲೆ ವಿವೇಕವು ಜಯಸಾಧಿಸುವಂತೆ ಅನುಮತಿಸಲು ಬಹಳಷ್ಟು ಪ್ರಯಾಸಪಡಬೇಕಾಗಿರುತ್ತದೆ. ಏಕೆಂದರೆ, ಆ ಸಂಗೀತವನ್ನು ನಾನು ಬಹಳವಾಗಿ ಇಷ್ಟಪಡುತ್ತೇನೆ.” ಯುವ ಜನರೇ, ‘[ಸೈತಾನನ] ಯೋಜನೆಗಳ ವಿಷಯದಲ್ಲಿ ಅಜ್ಞಾನಿ’ಗಳಾಗಿರಬೇಡಿ! (2 ಕೊರಿಂಥ 2:11) ಅವನು ಸಂಗೀತವನ್ನು ಉಪಯೋಗಿಸಿ, ಯುವ ಕ್ರೈಸ್ತರನ್ನು ಯೆಹೋವನಿಂದ ವಿಮುಖಗೊಳಿಸುತ್ತಿದ್ದಾನೆ! ರ್ಯಾಪ್, ಹೆವಿ ಮೆಟಲ್, ಮತ್ತು ಬದಲಿ ರಾಕ್ ಸಂಗೀತಗಳನ್ನು ಚರ್ಚಿಸಿದ ಲೇಖನಗಳು ವಾಚ್ ಟವರ್ ಪ್ರಕಾಶನಗಳಲ್ಲಿ ಬಂದಿವೆ.d ಆದರೆ ಹೊಸದಾಗಿ ಬರುವ ಪ್ರತಿಯೊಂದು ಪ್ರಕಾರದ ಮತ್ತು ಶೈಲಿಯ ಸಂಗೀತದ ಬಗ್ಗೆ ವಾಚ್ ಟವರ್ ಪ್ರಕಾಶನಗಳು ಹೇಳಿಕೆಯನ್ನು ನೀಡಸಾಧ್ಯವಿಲ್ಲ. ಆದುದರಿಂದ ಸಂಗೀತವನ್ನು ಆರಿಸಿಕೊಳ್ಳುವಾಗ, ನೀವು “ಬುದ್ಧಿ”ಯನ್ನು ಮತ್ತು “ವಿವೇಕ”ವನ್ನು ಉಪಯೋಗಿಸಬೇಕು.—ಜ್ಞಾನೋಕ್ತಿ 2:11.
17. (ಎ) ಪೋರ್ನಿಯ ಎಂದರೇನು, ಮತ್ತು ಅದು ಯಾವ ಕ್ರಿಯೆಗಳನ್ನು ಒಳಗೊಳ್ಳುತ್ತದೆ? (ಬಿ) ನೈತಿಕತೆಯ ವಿಷಯದಲ್ಲಿ ದೇವರ ಚಿತ್ತವು ಏನಾಗಿದೆ?
17 ಕೊನೆಯದಾಗಿ, ನೀವು ನೈತಿಕವಾಗಿ ಶುದ್ಧರಾಗಿರಬೇಕು. ಬೈಬಲು ಪ್ರೇರಿಸುವುದು: “ಜಾರತ್ವಕ್ಕೆ ದೂರವಾಗಿ ಓಡಿಹೋಗಿರಿ.” (1 ಕೊರಿಂಥ 6:18) ಹಾದರಕ್ಕಾಗಿರುವ ಮೂಲಭೂತ ಗ್ರೀಕ್ ಪದವು ಪೋರ್ನಿಯ ಆಗಿದ್ದು, ವಿವಾಹ ಬಂಧದ ಹೊರಗೆ ನಡೆಸಲ್ಪಡುವ ಎಲ್ಲ ನಿಷಿದ್ಧ ಲೈಂಗಿಕ ಚಟುವಟಿಕೆಯನ್ನು ಇದು ಸೂಚಿಸುತ್ತದೆ. ಇದರಲ್ಲಿ ಜನನಾಂಗಗಳ ಉಪಯೋಗವು ಸಹ ಸೇರಿದೆ. ಇದರಲ್ಲಿ ಮೌಖಿಕ ಕಾಮ ಮತ್ತು ಉದ್ದೇಶಪೂರ್ವಕವಾಗಿ ಜನನೇಂದ್ರಿಯಗಳನ್ನು ಮುದ್ದಿಸುವುದು ಒಳಗೂಡಿರುತ್ತದೆ. ತಾವು ಹಾದರವನ್ನು ಮಾಡುತ್ತಿಲ್ಲವೆಂದು ಊಹಿಸುತ್ತಾ, ಅನೇಕ ಕ್ರೈಸ್ತ ಯುವ ಜನರು ಇಂತಹ ವರ್ತನೆಯಲ್ಲಿ ಒಳಗೂಡಿದ್ದಾರೆ. ಆದರೆ ದೇವರ ವಾಕ್ಯವು ಸ್ಪಷ್ಟವಾಗಿ ಹೇಳುವುದು: “ದೇವರ ಚಿತ್ತವೇನಂದರೆ ನೀವು ಶುದ್ಧರಾಗಿರಬೇಕೆಂಬದೇ. ಆದದರಿಂದ ಹಾದರಕ್ಕೆ ದೂರವಾಗಿರಬೇಕು. ದೇವರನ್ನರಿಯದ ಅನ್ಯಜನಗಳಂತೆ ಕಾಮಾಭಿಲಾಷೆಗೆ ಒಳಪಡದೆ ನಿಮ್ಮಲ್ಲಿ ಪ್ರತಿಯೊಬ್ಬನು ಪವಿತ್ರವಾದ ಮನಸ್ಸಿನಿಂದಲೂ ಘನತೆಯಿಂದಲೂ ಧರ್ಮಪತ್ನಿಯನ್ನು ಸಂಪಾದಿಸಿಕೊಳ್ಳಲು ತಿಳಿಯಬೇಕು.”—1 ಥೆಸಲೊನೀಕ 4:3, 4.
18. (ಎ) ಯುವಕನೊಬ್ಬನು ಲೋಕದ ಆತ್ಮದಿಂದ ಕಲುಷಿತನಾಗದೆ ಹೇಗೆ ಉಳಿಯಬಹುದು? (ಬಿ) ಮುಂದಿನ ಲೇಖನದಲ್ಲಿ ಏನನ್ನು ಚರ್ಚಿಸಲಾಗುವುದು?
18 ಹೌದು, ಯೆಹೋವನ ಸಹಾಯದಿಂದ ನೀವು ಲೋಕದ ಆತ್ಮದಿಂದ ಕಲುಷಿತರಾಗದೆ ಉಳಿಯಬಹುದು! (1 ಪೇತ್ರ 5:10) ಸೈತಾನನು ಅನೇಕ ವೇಳೆ ತನ್ನ ಮಾರಕವಾದ ಪಾಶಗಳನ್ನು ಮರೆಮಾಚುವುದರಿಂದ, ಅಪಾಯವನ್ನು ಗುರುತಿಸಲು ಬಹಳಷ್ಟು ವಿವೇಚನೆಯ ಅಗತ್ಯವಿದೆ. ಯುವ ಜನರು ತಮ್ಮ ಗ್ರಹಣಶಕ್ತಿಗಳನ್ನು ಬೆಳೆಸಿಕೊಳ್ಳುವಂತೆ ನಮ್ಮ ಮುಂದಿನ ಲೇಖನವು ಸಹಾಯ ಮಾಡುತ್ತದೆ.
[ಅಧ್ಯಯನ ಪ್ರಶ್ನೆಗಳು]
a ಇವು ಸಾಮಾನ್ಯವಾಗಿ ಇಡೀ ರಾತ್ರಿ ನಡೆಯುವ ಡ್ಯಾನ್ಸ್ ಪಾರ್ಟಿಗಳಾಗಿವೆ. ಹೆಚ್ಚಿನ ಮಾಹಿತಿಗಾಗಿ, 1998, ಜನವರಿ 1ರ ಎಚ್ಚರ! ಪತ್ರಿಕೆಯ ಸಂಚಿಕೆಯಲ್ಲಿ “ಯುವ ಜನರು ಪ್ರಶ್ನಿಸುವುದು . . . ರೇವ್ಗಳು ಹಾನಿರಹಿತವಾದ ವಿನೋದವಾಗಿವೆಯೊ?” ಎಂಬ ಲೇಖನವನ್ನು ನೋಡಿರಿ.
b ಸುಮಾರು 11 ವರ್ಷ ಪ್ರಾಯದ ಮಕ್ಕಳು.
c ಹೆಚ್ಚಿನ ಸಲಹೆಗಳಿಗಾಗಿ, ಯುವ ಜನರ ಪ್ರಶ್ನೆಗಳು—ಕಾರ್ಯಸಾಧಕ ಉತ್ತರಗಳು ಎಂಬ ಪುಸ್ತಕದ 296-303ನೆಯ ಪುಟಗಳನ್ನು ನೋಡಿರಿ.
d ಕಾವಲಿನಬುರುಜು ಪತ್ರಿಕೆಯ ಏಪ್ರಿಲ್ 15, 1993ರ ಸಂಚಿಕೆಯನ್ನು ನೋಡಿರಿ.
ಪುನರ್ವಿಮರ್ಶೆಗಾಗಿ ಪ್ರಶ್ನೆಗಳು
◻ ಈ “ಲೋಕದ ಆತ್ಮ”ವು ಏನಾಗಿದೆ, ಮತ್ತು ಅದು ಜನರ ಮೇಲೆ ಹೇಗೆ “ಅಧಿಕಾರ” ಪಡೆದಿದೆ?
◻ ಇಂದಿನ ಯುವ ಜನರಲ್ಲಿ ಕಂಡುಬರುವ ಲೋಕಾತ್ಮದ ಕೆಲವು ಗುಣಲಕ್ಷಣಗಳು ಯಾವುವು?
◻ ಮಾತುಕತೆ ಹಾಗೂ ಮನೋರಂಜನೆಯ ವಿಷಯದಲ್ಲಿ ಕ್ರೈಸ್ತ ಯುವ ಜನರು “ಭಿನ್ನವಾದ ಆತ್ಮ”ವನ್ನು ಹೇಗೆ ತೋರಿಸಬಲ್ಲರು?
◻ ನೈತಿಕತೆ ಹಾಗೂ ಸಂಗೀತದ ವಿಷಯದಲ್ಲಿ ಕ್ರೈಸ್ತ ಯುವ ಜನರು “ಭಿನ್ನವಾದ ಆತ್ಮ”ವನ್ನು ಹೇಗೆ ತೋರಿಸಬಲ್ಲರು?
[ಪುಟ 9 ರಲ್ಲಿರುವ ಚಿತ್ರ]
ಅನೇಕ ಯುವ ಜನರು ತಮ್ಮ ನಡತೆಯಿಂದ ತಾವು ಲೋಕ ಆತ್ಮದ “ಅಧಿಕಾರ”ದ ನಿಯಂತ್ರಣದಲ್ಲಿದ್ದೇವೆ ಎಂಬುದನ್ನು ತೋರಿಸುತ್ತಾರೆ
[ಪುಟ 10 ರಲ್ಲಿರುವ ಚಿತ್ರ]
ಸಂಗೀತದ ಆಯ್ಕೆಯಲ್ಲಿ ಜಾಗರೂಕರಾಗಿರಿ
[ಪುಟ 11 ರಲ್ಲಿರುವ ಚಿತ್ರ]
ಲೋಕದ ಆತ್ಮವನ್ನು ಪ್ರತಿರೋಧಿಸಲು ಧೈರ್ಯದ ಅಗತ್ಯವಿದೆ