ಖಾಲಿಯಾದ ಗೂಡಿನಲ್ಲಿ ಸಂತೋಷದಿಂದ ಜೀವಿಸುವುದು
“ನಮ್ಮಲ್ಲಿ ಹೆಚ್ಚು ಮಂದಿಗೆ, ಅಂತಿಮ ಅಗಲಿಕೆಗಾಗಿ ನಾವು ಎಷ್ಟೇ ಚೆನ್ನಾಗಿ ಸಿದ್ಧರಾಗಿರುವುದಾದರೂ, ಅದು ಒಂದು ಆಘಾತವಾಗಿರುತ್ತದೆ” ಎಂದು ಹೆತ್ತವಳೊಬ್ಬಳು ಒಪ್ಪಿಕೊಂಡಳು. ಹೌದು, ಒಂದು ಮಗುವು ಮನೆ ಬಿಟ್ಟು ಹೋಗುವುದು ಅನಿವಾರ್ಯವಾಗಿರುವುದಾದರೂ, ಅದು ನಿಜವಾಗಿಯೂ ಸಂಭವಿಸುವಾಗ, ಅದರೊಂದಿಗೆ ವ್ಯವಹರಿಸುವುದು ಅಷ್ಟೊಂದು ಸುಲಭವಾಗಿರಲಿಕ್ಕಿಲ್ಲ. ತನ್ನ ಮಗನಿಗೆ ವಿದಾಯ ಹೇಳಿದ ಬಳಿಕ ತನ್ನ ಸ್ವಂತ ಪ್ರತಿಕ್ರಿಯೆಯ ಕುರಿತು ಒಬ್ಬ ತಂದೆಯು ಹೀಗೆ ಹೇಳುತ್ತಾನೆ: “ನನ್ನ ಜೀವಿತದಲ್ಲಿ ಮೊತ್ತಮೊದಲ ಬಾರಿಗೆ . . . , ನಾನು ಸುಮ್ಮನೆ ಬಿಕ್ಕಿಬಿಕ್ಕಿ ಅತ್ತುಬಿಟ್ಟೆ.”
ಅನೇಕ ಹೆತ್ತವರಿಗಾದರೋ ಅವರ ಮಕ್ಕಳು ಮನೆ ಬಿಟ್ಟು ಹೋಗುವುದು, ಅವರ ಜೀವನದಲ್ಲಿ ಒಂದು ದೊಡ್ಡ ಶೂನ್ಯತೆಯನ್ನು—ತೆರೆದಿಡಲ್ಪಟ್ಟಿರುವ ಒಂದು ಗಾಯವನ್ನು—ಉಂಟುಮಾಡುತ್ತದೆ. ತಮ್ಮ ಮಕ್ಕಳೊಂದಿಗೆ ದಿನಾಲೂ ಸಂಪರ್ಕಮಾಡುವುದು ತಪ್ಪಿಹೋದುದರಿಂದಾಗಿ, ಕೆಲವರು ತೀವ್ರವಾದ ಒಂಟಿತನ, ವೇದನೆ, ಮತ್ತು ನಷ್ಟದ ಭಾವನೆಗಳನ್ನು ಅನುಭವಿಸುತ್ತಾರೆ. ಮತ್ತು ಹೆತ್ತವರಿಗಲ್ಲದೆ ಬೇರೆಯವರಿಗೂ ಹೊಂದಿಕೊಂಡು ಹೋಗಲು ಕಷ್ಟವಾಗುತ್ತಿರಬಹುದು. ಎಡ್ವರ್ಡ್ ಮತ್ತು ಆ್ಯವ್ರಿಲ್ ಎಂಬ ಹೆಸರಿನ ಒಬ್ಬ ದಂಪತಿಗಳು ನಮಗೆ ಜ್ಞಾಪಕಹುಟ್ಟಿಸುವುದು: “ಮನೆಯಲ್ಲಿ ಇನ್ನೂ ಬೇರೆ ಮಕ್ಕಳು ಇರುವುದಾದರೆ, ಅವರಿಗೂ ಆ ನಷ್ಟದ ಅನಿಸಿಕೆಯಾಗುತ್ತದೆ.” ಈ ದಂಪತಿಗಳ ಬುದ್ಧಿವಾದವೇನು? “ಇನ್ನೂ ಮನೆಯಲ್ಲಿರುವ ಮಕ್ಕಳಿಗೆ ನಿಮ್ಮ ಸಮಯ ಹಾಗೂ ತಿಳುವಳಿಕೆಯನ್ನು ಕೊಡಿರಿ. ಇದು ಅವರಿಗೆ ಹೊಂದಿಕೊಳ್ಳಲು ಸಹಾಯ ಮಾಡುವುದು.”
ಹೌದು, ಜೀವನವು ಹೇಗೂ ಮುಂದುವರಿಯುತ್ತಾ ಇರುತ್ತದೆ. ನೀವು ನಿಮ್ಮ ಉಳಿದ ಮಕ್ಕಳನ್ನು ನೋಡಿಕೊಳ್ಳಬೇಕಾಗಿದ್ದಲ್ಲಿ—ನಿಮ್ಮ ಉದ್ಯೋಗ ಅಥವಾ ಗೃಹಕೃತ್ಯದ ಕೆಲಸಗಳ ಕುರಿತಾಗಿ ಹೇಳಬೇಕಾಗಿಯೇ ಇಲ್ಲ—ನೀವು ನಿಮ್ಮನ್ನು ದುಃಖದಲ್ಲಿ ಮುಳುಗಿಸಿಕೊಳ್ಳುವಂತೆ ಬಿಡಸಾಧ್ಯವಿಲ್ಲ. ಆದುದರಿಂದ, ನಿಮ್ಮ ಮಕ್ಕಳು ಮನೆ ಬಿಟ್ಟು ಹೋದಂತೆ, ಸಂತೋಷವನ್ನು ಕಂಡುಕೊಳ್ಳಸಾಧ್ಯವಿರುವ ಕೆಲವು ವಿಧಗಳ ಕಡೆಗೆ ನೋಟ ಹರಿಸೋಣ.
ಸಕಾರಾತ್ಮಕ ವಿಷಯಗಳ ಮೇಲೆ ಕೇಂದ್ರೀಕರಿಸಿರಿ
ನಿಶ್ಚಯವಾಗಿಯೂ, ನಿಮಗೆ ದುಃಖ ಅಥವಾ ಏಕಾಂತದ ಅನಿಸಿಕೆಯಾಗುತ್ತಿದ್ದು, ಅಳಬೇಕೆನಿಸಿದರೆ ಅಥವಾ ಸಹಾನುಭೂತಿಯುಳ್ಳ ಸ್ನೇಹಿತನೊಬ್ಬನೊಂದಿಗೆ ನಿಮ್ಮ ಭಾವನೆಗಳನ್ನು ಹೇಳಿಕೊಳ್ಳಬೇಕೆನಿಸಿದರೆ, ಅವಶ್ಯವಾಗಿ ಹಾಗೆ ಮಾಡಿರಿ. ಬೈಬಲು ಹೇಳುವುದು: “ಕಳವಳವು ಮನಸ್ಸನ್ನು ಕುಗ್ಗಿಸುವದು; ಕನಿಕರದ ಮಾತು ಅದನ್ನು ಹಿಗ್ಗಿಸುವದು.” (ಜ್ಞಾನೋಕ್ತಿ 12:25) ಕೆಲವೊಮ್ಮೆ ಇತರರು ವಿಷಯಗಳ ಕುರಿತು ಹೊಚ್ಚಹೊಸತಾದ ನೋಟವನ್ನು ಒದಗಿಸಬಲ್ಲರು. ಉದಾಹರಣೆಗಾಗಿ, ವಾಲ್ಡೆಮಾರ್ ಮತ್ತು ಮಾರೀಆನ್ ಎಂಬ ಹೆಸರಿನ ಒಬ್ಬ ದಂಪತಿಗಳು ಸಲಹೆ ನೀಡುವುದು: “ಆ ವಿಷಯವನ್ನು ಒಂದು ನಷ್ಟವಾಗಿ ಅಲ್ಲ, ಬದಲಾಗಿ ಒಂದು ಗುರಿಯ ಯಶಸ್ವಿಕರವಾದ ಸಾಧನೆಯೋಪಾದಿ ಪರಿಗಣಿಸಿರಿ.” ವಿಷಯಗಳ ಕಡೆಗೆ ದೃಷ್ಟಿಹರಿಸುವ ಎಂತಹ ಒಂದು ಸಕಾರಾತ್ಮಕ ವಿಧ! “ನಾವು ನಮ್ಮ ಹುಡುಗರನ್ನು ಜವಾಬ್ದಾರಿಯುತರಾದ ವಯಸ್ಕರಾಗಿ ಬೆಳೆಸಲು ಶಕ್ತರಾಗಿದ್ದಕ್ಕಾಗಿ ಸಂತೋಷಿತರಾಗಿದ್ದೇವೆ” ಎಂದು, ರೂಡಾಲ್ಫ್ ಮತ್ತು ಹಿಲ್ಡ ಎಂಬ ಹೆಸರಿನ ಒಬ್ಬ ದಂಪತಿಗಳು ಹೇಳುತ್ತಾರೆ.
ನೀವು ನಿಮ್ಮ ಮಗುವನ್ನು “ಯೆಹೋವನ ಶಿಸ್ತು ಮತ್ತು ಮಾನಸಿಕ ಕ್ರಮಪಡಿಸುವಿಕೆಯಲ್ಲಿ” (NW) ಬೆಳೆಸಲು ಪ್ರಯತ್ನಿಸಿದ್ದೀರೊ? (ಎಫೆಸ 6:4) ನೀವು ಹಾಗೆ ಬೆಳೆಸಿರುವುದಾದರೂ, ಅವನು ಅಥವಾ ಅವಳು ಮನೆ ಬಿಟ್ಟು ಹೋಗುವುದರ ಕುರಿತು ನಿಮಗೆ ಇನ್ನೂ ಚಿಂತೆಯಿರಬಹುದು. ಆದರೆ ತಮ್ಮ ಮಗುವಿಗೆ ಈ ರೀತಿಯಲ್ಲಿ ತರಬೇತಿ ನೀಡುವವರಿಗೆ, ಬೈಬಲು ಈ ಆಶ್ವಾಸನೆಯನ್ನು ಕೊಡುತ್ತದೆ: “[ಅವನು] ಮುಪ್ಪಿನಲ್ಲಿಯೂ ಓರೆಯಾಗನು.” (ಜ್ಞಾನೋಕ್ತಿ 22:6) ನಿಮ್ಮ ತರಬೇತಿಗೆ ನಿಮ್ಮ ಮಗುವು ಪ್ರತಿಕ್ರಿಯಿಸಿದೆಯೆಂಬುದನ್ನು ನೋಡುವುದು ಅಪಾರವಾಗಿ ಸಂತೃಪ್ತಿಯನ್ನುಂಟುಮಾಡುವುದಿಲ್ಲವೊ? ತನ್ನ ಆತ್ಮಿಕ ಕುಟುಂಬದ ಕುರಿತು ಅಪೊಸ್ತಲ ಯೋಹಾನನು ಹೇಳಿದ್ದು: “ನನ್ನ ಮಕ್ಕಳು ಸತ್ಯವನ್ನನುಸರಿಸಿ ನಡೆಯುವವರಾಗಿದ್ದಾರೆಂದು ಕೇಳುವದಕ್ಕಿಂತ ಹೆಚ್ಚಾದ ಸಂತೋಷವು ನನಗಿಲ್ಲ.” (3 ಯೋಹಾನ 4) ಬಹುಶಃ ನೀವು ಸಹ ನಿಮ್ಮ ಸ್ವಂತ ಮಗುವಿನ ಕುರಿತು ತದ್ರೀತಿಯ ಭಾವಾತಿರೇಕಗಳನ್ನು ಹೊಂದಸಾಧ್ಯವಿದೆ.
ಎಲ್ಲ ಮಕ್ಕಳು ಕ್ರೈಸ್ತ ತರಬೇತಿಗೆ ಪ್ರತಿಕ್ರಿಯೆ ತೋರಿಸುವುದಿಲ್ಲವೆಂಬುದು ಸತ್ಯ. ಪ್ರಾಯಕ್ಕೆ ಬಂದ ನಿಮ್ಮ ಮಗುವಿನ ವಿಷಯದಲ್ಲಿ ಇದು ಸತ್ಯವಾಗಿ ಪರಿಣಮಿಸುವಲ್ಲಿ, ಒಬ್ಬ ಹೆತ್ತವರೋಪಾದಿ ನೀವು ವಿಫಲರಾಗಿದ್ದೀರಿ ಎಂಬುದನ್ನು ಇದು ಅರ್ಥೈಸುವುದಿಲ್ಲ. ನಿಮ್ಮ ಮಗುವನ್ನು ದೈವಿಕ ಮಾರ್ಗದಲ್ಲಿ ಬೆಳೆಸಲು ನೀವು ನಿಮ್ಮಿಂದಾದಷ್ಟು ಚೆನ್ನಾಗಿ ಪ್ರಯತ್ನಿಸಿರುವಲ್ಲಿ, ನೀವು ಅನಗತ್ಯವಾಗಿ ನಿಮ್ಮನ್ನು ಹಳಿದುಕೊಳ್ಳಬೇಡಿ. ಒಬ್ಬ ವಯಸ್ಕನೋಪಾದಿ ನಿಮ್ಮ ಮಗುವು ದೇವರ ಮುಂದೆ ತನ್ನ ಸ್ವಂತ ಜವಾಬ್ದಾರಿಯ ಹೊರೆಯನ್ನು ಹೊರಬೇಕೆಂಬುದನ್ನು ಮನಸ್ಸಿನಲ್ಲಿಡಿ. (ಗಲಾತ್ಯ 6:5) ಸಕಾಲದಲ್ಲಿ ಅವನು ತನ್ನ ಆಯ್ಕೆಗಳನ್ನು ಪುನಃ ಪರಿಗಣಿಸುವನು ಮತ್ತು ಅಂತಿಮವಾಗಿ ಆ “ಬಾಣ”ವು (NW) ಎಲ್ಲಿಗೆ ಗುರಿಯಿಡಲ್ಪಟ್ಟಿತ್ತೋ ಅಲ್ಲಿಗೆ ಹೋಗುವುದು ಎಂಬ ನಿರೀಕ್ಷೆಯನ್ನು ಕಾಪಾಡಿಕೊಳ್ಳಿರಿ.—ಕೀರ್ತನೆ 127:4.
ನೀವು ಇನ್ನೂ ಹೆತ್ತವರಾಗಿದ್ದೀರಿ!
ನಿಮ್ಮ ಮಗುವಿನ ಅಗಲಿಕೆಯು ಒಂದು ಗಮನಾರ್ಹವಾದ ಬದಲಾವಣೆಯನ್ನು ಸೂಚಿಸುವಾಗ, ಒಬ್ಬ ಹೆತ್ತವರೋಪಾದಿ ನಿಮ್ಮ ಕೆಲಸವು ಮುಗಿದಿದೆಯೆಂಬುದನ್ನು ಇದು ಅರ್ಥೈಸುವುದಿಲ್ಲ. ಮಾನಸಿಕ-ಆರೋಗ್ಯದ ವಿಶೇಷಜ್ಞರಾದ ಹಾವರ್ಡ್ ಹಾಲ್ಪರ್ನ್ ಹೇಳುವುದು: “ನೀವು ಸಾಯುವ ದಿನದ ವರೆಗೂ ನೀವು ಹೆತ್ತವರಾಗಿದ್ದೀರಿ, ಆದರೆ ಕೊಡುವ ಹಾಗೂ ಪೋಷಣೆಮಾಡುವ ವಿಷಯದಲ್ಲಿ ಬದಲಾವಣೆಗಳನ್ನು ಮಾಡಬೇಕಾಗಿದೆ.”
ಬಹಳ ಸಮಯದ ಹಿಂದೆಯೇ ಬೈಬಲು ಒಪ್ಪಿಕೊಂಡದ್ದೇನೆಂದರೆ, ಒಂದು ಮಗುವು ಬೆಳೆದು ದೊಡ್ಡದಾಗಿದೆ ಎಂದ ಮಾತ್ರಕ್ಕೆ ತಂದೆತ್ತಾಯನವು ನಿಂತುಹೋಗುವುದಿಲ್ಲ. ಜ್ಞಾನೋಕ್ತಿ 23:22 ಹೇಳುವುದು: “ಹೆತ್ತ ತಂದೆಯ ಮಾತಿಗೆ ಕಿವಿಗೊಡು; ಮುಪ್ಪಿನಲ್ಲಿಯೂ [“ವೃದ್ಧಪ್ರಾಯದಲ್ಲಿಯೂ,” NW] ತಾಯಿಯನ್ನು ಅಸಡ್ಡೆಮಾಡಬೇಡ.” ಹೌದು, ಹೆತ್ತವರು ‘ವೃದ್ಧಪ್ರಾಯದವರಾಗಿ,’ ಅವರ ಮಕ್ಕಳು ವಯಸ್ಕರಾಗಿರುವಾಗಲೂ, ಹೆತ್ತವರು ತಮ್ಮ ಮಕ್ಕಳ ಜೀವಿತಗಳಲ್ಲಿ ಒಂದು ಗಮನಾರ್ಹವಾದ ಪ್ರಭಾವವನ್ನು ಬೀರಸಾಧ್ಯವಿದೆ. ಕೆಲವೊಂದು ಹೊಂದಾಣಿಕೆಗಳನ್ನು ಮಾಡುವ ಅಗತ್ಯವಿದೆಯೆಂಬುದು ನಿಶ್ಚಯ. ಆದರೆ ಎಲ್ಲ ಸಂಬಂಧಗಳನ್ನು ಹೊಚ್ಚಹೊಸತಾಗಿಡಲು ಹಾಗೂ ಸಮಾಧಾನಕರವಾಗಿಡಲಿಕ್ಕಾಗಿ, ಅವುಗಳನ್ನು ಆಗಿಂದಾಗ್ಗೆ ಸರಿಹೊಂದಿಸಿಕೊಳ್ಳುತ್ತಾ ಇರಬೇಕು. ಈಗ ನಿಮ್ಮ ಮಕ್ಕಳು ಬೆಳೆದಿರುವುದರಿಂದ, ಅವರೊಂದಿಗಿನ ನಿಮ್ಮ ಸಂಬಂಧವನ್ನು ಹೆಚ್ಚು ವಯಸ್ಕ ರೀತಿಯದ್ದಾಗಿಡಲು ಕಾರ್ಯನಡಿಸಿರಿ. ಆಸಕ್ತಿಕರವಾಗಿ, ಅಧ್ಯಯನಗಳು ಸೂಚಿಸುವುದೇನೆಂದರೆ, ಮಕ್ಕಳು ಮನೆ ಬಿಟ್ಟು ಹೋದ ಮೇಲೆ, ಹೆತ್ತವರ-ಮಗುವಿನ ಸಂಬಂಧವು ಅನೇಕವೇಳೆ ಉತ್ತಮಗೊಳ್ಳುತ್ತದೆ! ಮಕ್ಕಳು ನಿಜವಾದ ಲೋಕದ ಒತ್ತಡಗಳನ್ನು ಮುಖಾಮುಖಿಯಾಗಿ ಎದುರಿಸುವಾಗ, ಅವರು ಅನೇಕವೇಳೆ ತಮ್ಮ ಹೆತ್ತವರನ್ನು ಒಂದು ಹೊಸ ದೃಷ್ಟಿಕೋನದಿಂದ ನೋಡಲಾರಂಭಿಸುತ್ತಾರೆ. ಹಾರ್ಟ್ಮೂಟ್ ಎಂಬ ಹೆಸರಿನ ಜರ್ಮನ್ ವ್ಯಕ್ತಿಯೊಬ್ಬನು ಹೇಳಿದ್ದು: “ಈಗ ನಾನು ನನ್ನ ಹೆತ್ತವರನ್ನು ಹೆಚ್ಚು ಉತ್ತಮವಾಗಿ ಅರ್ಥಮಾಡಿಕೊಳ್ಳುತ್ತೇನೆ ಮತ್ತು ಕೆಲವು ಸಂಗತಿಗಳನ್ನು ಅವರು ನಿರ್ದಿಷ್ಟ ರೀತಿಯಲ್ಲಿಯೇ ಏಕೆ ಮಾಡಿದರೆಂಬುದನ್ನು ನಾನು ಗ್ರಹಿಸುತ್ತೇನೆ.”
ಮಧ್ಯ ತಲೆಹಾಕಬೇಡಿ
ಆದರೂ, ನೀವು ನಿಮ್ಮ ವಯಸ್ಕ ಮಗುವಿನ ವೈಯಕ್ತಿಕ ಜೀವನದಲ್ಲಿ ಮಧ್ಯ ತಲೆಹಾಕುವವರಾಗಿರುವಲ್ಲಿ, ಹೆಚ್ಚು ಹಾನಿಯನ್ನು ಉಂಟುಮಾಡಸಾಧ್ಯವಿದೆ. (1 ತಿಮೊಥೆಯ 5:13ನ್ನು ಹೋಲಿಸಿರಿ.) ತನ್ನ ಅತ್ತೆಮಾವಂದಿರೊಂದಿಗೆ ಬಹಳ ಬಿಕ್ಕಟ್ಟುಗಳನ್ನು ಅನುಭವಿಸುತ್ತಿರುವ ಒಬ್ಬ ವಿವಾಹಿತ ಸ್ತ್ರೀಯು ಪ್ರಲಾಪಿಸಿದ್ದು: “ನಾವು ಅವರನ್ನು ಪ್ರೀತಿಸುತ್ತೇವೆ, ಆದರೆ ನಾವು ನಮ್ಮ ಸ್ವಂತ ಜೀವಿತಗಳನ್ನು ನಡಿಸಿ, ನಮ್ಮ ಸ್ವಂತ ನಿರ್ಣಯಗಳನ್ನು ಮಾಡಲು ಬಯಸುತ್ತೇವೆ.” ವಯಸ್ಕ ಮಗುವೊಂದು ನೇರವಾಗಿ ಆಪತ್ತಿನೊಳಗೆ ಸಿಕ್ಕಿಕೊಳ್ಳಲಿರುವಾಗ, ಖಂಡಿತವಾಗಿಯೂ ಯಾವುದೇ ಪ್ರೀತಿಪೂರ್ಣ ಹೆತ್ತವರು ಸುಮ್ಮನೆ ನೋಡುತ್ತಾ ನಿಲ್ಲುವುದಿಲ್ಲ. ಆದರೆ ಸಾಮಾನ್ಯವಾಗಿ, ಹೆತ್ತವರ ಬುದ್ಧಿವಾದವು ಎಷ್ಟೇ ವಿವೇಕಯುತವಾದದ್ದಾಗಿರಲಿ ಅಥವಾ ಸದುದ್ದೇಶವುಳ್ಳದ್ದಾಗಿರಲಿ, ಅದನ್ನು ಕೇಳದೇ ಇದ್ದಾಗ, ಅದನ್ನು ಕೊಡದಿರುವುದು ಅತ್ಯುತ್ತಮ. ಒಂದು ಮಗುವು ವಿವಾಹವಾದ ಬಳಿಕ ಇದು ವಿಶೇಷವಾಗಿ ಸತ್ಯವಾಗಿದೆ.
ಎಚ್ಚರ! (ಇಂಗ್ಲಿಷ್) ಪತ್ರಿಕೆಯು 1983ರಷ್ಟು ಹಿಂದೆ ಈ ಸಲಹೆಯನ್ನು ನೀಡಿತು: “ನಿಮ್ಮ ಬದಲಾದ ಪಾತ್ರವನ್ನು ಅಂಗೀಕರಿಸಿರಿ. ಒಂದು ಮಗುವು ನಡೆಯಲು ಆರಂಭಿಸಿದಾಗ, ಮಗುವನ್ನು ನೋಡಿಕೊಳ್ಳುವವರೋಪಾದಿ ಇದ್ದ ನಿಮ್ಮ ಕೆಲಸವನ್ನು ನೀವು ಬಿಟ್ಟುಬಿಡುತ್ತೀರಿ. ತದ್ರೀತಿಯಲ್ಲಿ, ನೀವು ಈಗ ನಿಮ್ಮ ನೆಚ್ಚಿನ ಗೃಹಪಾಲಕ ಪಾತ್ರವನ್ನು, ಸಲಹೆಗಾರನ ಪಾತ್ರದೊಂದಿಗೆ ವಿನಿಮಯ ಮಾಡಿಕೊಳ್ಳಬೇಕು. ಜೀವಿತದ ಈ ಹಂತದಲ್ಲಿ ನಿಮ್ಮ ಮಗುವಿಗಾಗಿ ನೀವು ನಿರ್ಣಯಗಳನ್ನು ಮಾಡುವುದು, ಅವನಿಗೆ ತೇಗು ಬರುವಂತೆ ಮಾಡುವುದರಷ್ಟು ಅಥವಾ ಅವನಿಗೆ ಮೊಲೆಯೂಡಿಸುವಷ್ಟು ಅಯೋಗ್ಯವಾಗಿರುವುದು. ಒಬ್ಬ ಸಲಹೆಗಾರರೋಪಾದಿ, ನಿಮಗೆ ನಿಶ್ಚಿತ ಪರಿಮಿತಿಗಳಿವೆ. ಹೆತ್ತವರೋಪಾದಿ ನಿಮಗಿರುವ ಅಧಿಕಾರಕ್ಕೆ ನೀವು ಇನ್ನು ಮುಂದೆ ಪರಿಣಾಮಕರವಾಗಿ ಮೊರೆಹೋಗಲಾರಿರಿ. (‘ನಾನು ಹೇಳುವುದರಿಂದ ಅದನ್ನು ಮಾಡು.’) ನಿಮ್ಮ ಮಗುವಿನ ವಯಸ್ಕ ಅಂತಸ್ತಿಗೆ ಗೌರವವು ಕೊಡಲ್ಪಡಬೇಕು.”a
ನಿಮ್ಮ ಮಗು ಮತ್ತು ಅವನ ಅಥವಾ ಅವಳ ಸಂಗಾತಿಯು ಮಾಡುವ ಎಲ್ಲ ನಿರ್ಣಯಗಳೊಂದಿಗೆ ನೀವು ಸಮ್ಮತಿಸದಿರಬಹುದು. ಆದರೆ ವಿವಾಹದ ಪಾವಿತ್ರ್ಯಕ್ಕಾಗಿರುವ ಗೌರವವು, ನೀವು ನಿಮ್ಮ ಚಿಂತೆಯನ್ನು ತಗ್ಗಿಸಿ, ಅನಾವಶ್ಯಕವಾಗಿ ಮಧ್ಯೆ ತಲೆಹಾಕುವುದನ್ನು ತೊರೆಯುವಂತೆ ನಿಮಗೆ ಸಹಾಯ ಮಾಡಸಾಧ್ಯವಿದೆ. ಸತ್ಯಾಂಶವೇನೆಂದರೆ, ಯುವ ದಂಪತಿಗಳು ತಮಗಿರುವ ಸಮಸ್ಯೆಗಳನ್ನು ತಮ್ಮ ನಡುವೆಯೇ ಬಗೆಹರಿಸಿಕೊಳ್ಳುವಂತೆ ಬಿಡುವುದು ಸರ್ವಸಾಮಾನ್ಯವಾಗಿ ಅತ್ಯುತ್ತಮವಾದದ್ದಾಗಿದೆ. ಇಲ್ಲದಿದ್ದರೆ, ವಿವಾಹದ ಒಂದು ಸೂಕ್ಷ್ಮ ಹಂತದಲ್ಲಿ, ಟೀಕೆಯ ಮನೋಭಾವಕ್ಕೆ ತೀರ ಸಂವೇದಿಗಳಾಗಿರಬಹುದಾದ ಒಬ್ಬ ಅಳಿಯ ಅಥವಾ ಸೊಸೆಗೆ ನೀವು ಅನಪೇಕ್ಷಿತ ಸಲಹೆಯನ್ನು ಕೊಡುವಾಗ, ನಿಮಗೆ ಅನಗತ್ಯವಾದ ಘರ್ಷಣೆಯ ಅಪಾಯವಿರುತ್ತದೆ. ಈ ಮೇಲೆ ತಿಳಿಸಲ್ಪಟ್ಟ ಎಚ್ಚರ! ಪತ್ರಿಕೆಯ ಲೇಖನವು ಮತ್ತೂ ಸಲಹೆ ನೀಡಿದ್ದು: “ಒಬ್ಬ ಅಳಿಯನನ್ನು ಅಥವಾ ಒಬ್ಬ ಸೊಸೆಯನ್ನು ಒಬ್ಬ ವೈರಿಯನ್ನಾಗಿ ಮಾಡುವಂತಹ, ನಿರಂತರವಾದ ಅನಪೇಕ್ಷಿತ ಸಲಹೆಗಳನ್ನು ಕೊಡಲಿಕ್ಕಾಗಿರುವ ಶೋಧನೆಯನ್ನು ನಿಗ್ರಹಿಸಿರಿ.” ಬೆಂಬಲ ನೀಡುವವರಾಗಿರಿ—ಕೈವಾಡ ತೋರಿಸುವವರಾಗಿರಬೇಡಿ. ಒಂದು ಒಳ್ಳೆಯ ಸಂಬಂಧವನ್ನು ಕಾಪಾಡಿಕೊಳ್ಳುವ ಮೂಲಕ, ಸಲಹೆಯು ನಿಜವಾಗಿಯೂ ಅಗತ್ಯವಿರುವಲ್ಲಿ, ನಿಮ್ಮ ಮಗುವು ನಿಮ್ಮನ್ನು ಸಮೀಪಿಸುವುದನ್ನು ನೀವು ಹೆಚ್ಚು ಸುಲಭವಾದದ್ದಾಗಿ ಮಾಡುವಿರಿ.
ವೈವಾಹಿಕ ಬಂಧಗಳನ್ನು ಪುನಃ ನವೀಕರಿಸಿರಿ
ಅನೇಕ ದಂಪತಿಗಳಿಗಾದರೋ, ಖಾಲಿಯಾದ ಗೂಡು ಹೆಚ್ಚಾದ ವೈವಾಹಿಕ ಸಂತೋಷದ ಸಂಭವನೀಯತೆಯನ್ನೂ ತೆರೆದಿಡಬಹುದು. ಯಶಸ್ವಿಕರವಾದ ಹೆತ್ತವ ಸಂಬಂಧಿತ ಕೆಲಸದಲ್ಲಿ ಒಳಗೂಡಿರುವ ಸಮಯ ಹಾಗೂ ಪ್ರಯತ್ನವು ಎಷ್ಟರ ಮಟ್ಟಿಗೆ ಸಮಯವನ್ನು ಕಬಳಿಸುವಂತಹದ್ದಾಗಿರಬಲ್ಲದೆಂದರೆ, ದಂಪತಿಗಳು ತಮ್ಮ ಸ್ವಂತ ಸಂಬಂಧವನ್ನು ಅಲಕ್ಷಿಸಿಬಿಡುತ್ತಾರೆ. ಒಬ್ಬ ಪತ್ನಿಯು ಹೇಳುವುದು: “ಈಗ ಮಕ್ಕಳು ಮನೆ ಬಿಟ್ಟು ಹೋಗಿರುವುದರಿಂದ, ಕೊನ್ರಾಡ್ ಮತ್ತು ನಾನು, ಪುನಃ ಒಮ್ಮೆ ಪರಸ್ಪರ ಪರಿಚಿತರಾಗಲು ಪ್ರಯತ್ನಿಸುತ್ತಿದ್ದೇವೆ.”
ಹೆತ್ತವ ಸಂಬಂಧಿತವಾದ ದೈನಂದಿನ ಜವಾಬ್ದಾರಿಗಳಿಂದ ಮುಕ್ತರಾಗಿದ್ದು, ಈಗ ನಿಮಗೆ ಪರಸ್ಪರ ಹೆಚ್ಚು ಸಮಯಾವಕಾಶವಿರಬಹುದು. ಒಬ್ಬ ಹೆತ್ತವರು ಹೇಳಿದ್ದು: “ಹೊಸದಾಗಿ ಸಿಕ್ಕಿರುವ ಈ ವಿರಾಮದ ಸಮಯವು . . . ನಾವು ಯಾರು ಎಂಬುದರ ಕುರಿತು ಹೆಚ್ಚು ಗಮನವನ್ನು ಕೇಂದ್ರೀಕರಿಸಲು, ನಮ್ಮ ಸಂಬಂಧಗಳ ಕುರಿತು ಹೆಚ್ಚನ್ನು ಕಲಿಯಲಿಕ್ಕಾಗಿ ಗಮನಕೊಡಲು, ಹಾಗೂ ನಮ್ಮ ಆವಶ್ಯಕತೆಗಳನ್ನು ಪೂರೈಸುವ ಚಟುವಟಿಕೆಗಳಲ್ಲಿ ಒಳಗೂಡಲಾರಂಭಿಸಲು ನಮ್ಮನ್ನು ಅನುಮತಿಸುತ್ತದೆ.” ಅವಳು ಕೂಡಿಸುವುದು: “ಅದು ಹೊಸದಾದ ಕಲಿಯುವಿಕೆ ಮತ್ತು ನಂಬಲಸಾಧ್ಯವಾದ ಬೆಳವಣಿಗೆಯ ಒಂದು ಸಮಯವಾಗಿದೆ, ಮತ್ತು ಅಂತಹ ಸಮಯಗಳು ಮನಃಕ್ಷೋಭೆಗೊಳಿಸುವ ಸಮಯಗಳಾಗಿರಬಹುದಾದರೂ, ಅವು ಗೆಲವುತರುವಂತಹ ಸಮಯಗಳೂ ಆಗಿವೆ.”
ಕೆಲವು ದಂಪತಿಗಳಿಗೆ ಹೆಚ್ಚಾದ ಹಣಕಾಸಿನ ಸ್ವಾತಂತ್ರ್ಯವೂ ದೊರೆಯುತ್ತದೆ. ಈ ಹಿಂದೆ ನಿಲ್ಲಿಸಲ್ಪಟ್ಟಿದ್ದ ಹವ್ಯಾಸಗಳು ಹಾಗೂ ಜೀವನೋಪಾಯಗಳನ್ನು ನೀವು ಈಗ ಬೆನ್ನಟ್ಟಸಾಧ್ಯವಿದೆ. ಯೆಹೋವನ ಸಾಕ್ಷಿಗಳ ನಡುವೆ, ಅನೇಕ ದಂಪತಿಗಳು ತಮಗೆ ಹೊಸದಾಗಿ ಸಿಕ್ಕಿರುವ ಸ್ವಾತಂತ್ರ್ಯವನ್ನು, ಆತ್ಮಿಕ ಅಭಿರುಚಿಗಳನ್ನು ಬೆನ್ನಟ್ಟಲು ಉಪಯೋಗಿಸುತ್ತಾರೆ. ಹರ್ಮಾನ್ ಎಂಬ ಹೆಸರಿನ ತಂದೆಯೊಬ್ಬನು ವಿವರಿಸುವುದೇನೆಂದರೆ, ಅವನ ಮಕ್ಕಳು ಮನೆ ಬಿಟ್ಟು ಹೋದ ಬಳಿಕ, ಅವನೂ ಅವನ ಹೆಂಡತಿಯೂ ಆ ಕೂಡಲೆ ಪೂರ್ಣ ಸಮಯದ ಸೇವೆಯನ್ನು ಪುನಃ ಆರಂಭಿಸುವುದರ ಕಡೆಗೆ ತಮ್ಮ ಗಮನವನ್ನು ಹರಿಸಿದರು.
ಏಕ ಹೆತ್ತವರು ಹೋಗಲು ಬಿಡುವುದು
ಖಾಲಿಯಾದ ಗೂಡಿಗೆ ಹೊಂದಿಕೊಳ್ಳುವುದು, ವಿಶೇಷವಾಗಿ ಏಕ ಹೆತ್ತವರಿಗೆ ತುಂಬ ಕಷ್ಟಕರವಾಗಿರಸಾಧ್ಯವಿದೆ. ಇಬ್ಬರು ಮಕ್ಕಳ ಏಕ ಹೆತ್ತವಳಾಗಿರುವ ರೆಬೆಕ ವಿವರಿಸುವುದು: “ನಮ್ಮ ಮಕ್ಕಳು ಮನೆ ಬಿಟ್ಟು ಹೋಗುವಾಗ, ನಮ್ಮ ಜೊತೆಗಿರಲು ಹಾಗೂ ನಮ್ಮನ್ನು ಪ್ರೀತಿಸಲಿಕ್ಕಾಗಿ ನಮಗೆ ಒಬ್ಬ ಪತಿಯಿಲ್ಲ.” ಒಬ್ಬ ಏಕ ಹೆತ್ತವಳು ತನ್ನ ಮಕ್ಕಳನ್ನು, ಭಾವನಾತ್ಮಕ ಬೆಂಬಲದ ಒಂದು ಮೂಲವಾಗಿ ಕಂಡಿರಬಹುದು. ಮತ್ತು ಅವರು ಮನೆವಾರ್ತೆಯ ಖರ್ಚಿಗಾಗಿ ಹಣಸಹಾಯವನ್ನು ಮಾಡುತ್ತಿದ್ದಲ್ಲಿ, ಅವರ ಅಗಲುವಿಕೆಯಿಂದ ಹಣಕಾಸಿನ ತೊಂದರೆಯೂ ಉಂಟಾಗಬಹುದು.
ಉದ್ಯೋಗ-ತರಬೇತಿ ಕಾರ್ಯಕ್ರಮಗಳು ಅಥವಾ ಅಲ್ಪಕಾಲಾವಧಿಯ ಶಾಲಾ ಕೋರ್ಸುಗಳಿಗೆ ಸೇರಿಕೊಳ್ಳುವ ಮೂಲಕ, ಕೆಲವರು ಆರ್ಥಿಕವಾಗಿ ತಮ್ಮ ಸ್ಥಿತಿಯನ್ನು ಉತ್ತಮಗೊಳಿಸಿಕೊಳ್ಳಲು ಶಕ್ತರಾಗುತ್ತಾರೆ. ಆದರೆ ಒಬ್ಬನು ಒಂಟಿತನದ ಶೂನ್ಯಭಾವವನ್ನು ಹೇಗೆ ತುಂಬಿಸಿಕೊಳ್ಳುವನು? ಏಕ ಹೆತ್ತವಳೊಬ್ಬಳು ಹೇಳುವುದು: “ನನ್ನನ್ನು ನಾನು ಕಾರ್ಯಮಗ್ನಳಾಗಿಸಿಕೊಳ್ಳುವುದು ನನಗೆ ಸಹಾಯ ಮಾಡುತ್ತದೆ. ಅದು ಬೈಬಲನ್ನು ಓದುವುದಾಗಿರಬಲ್ಲದು, ಮನೆಯನ್ನು ಸ್ವಚ್ಛಗೊಳಿಸುವುದಾಗಿರಬಲ್ಲದು, ಅಥವಾ ಸುಮ್ಮನೆ ವಾಕಿಂಗ್ ಮಾಡುವುದು ಅಥವಾ ಓಡುವುದಾಗಿರಬಲ್ಲದು. ಆದರೆ ನನಗೆ ಒಂಟಿತನವನ್ನು ಜಯಿಸಲಿಕ್ಕಾಗಿರುವ ಅತ್ಯಂತ ಪ್ರಯೋಜನಕರವಾದ ವಿಧವು, ಒಬ್ಬ ಆತ್ಮಿಕ ಮಿತ್ರನೊಂದಿಗೆ ಮಾತಾಡುವುದಾಗಿದೆ.” ಹೌದು, ‘ಹೃದಯವನ್ನು ವಿಶಾಲಗೊಳಿಸಿರಿ,’ ಮತ್ತು ಹೊಸ ಹಾಗೂ ಸಂತೃಪ್ತಿಕರವಾದ ಗೆಳೆತನಗಳನ್ನು ಬೆಳೆಸಿರಿ. (2 ಕೊರಿಂಥ 6:13) ನೀವು ತೀರ ಭಾವಪರವಶರಾಗುವಾಗ, ‘ವಿಜ್ಞಾಪನೆಗಳಲ್ಲಿಯೂ ಪ್ರಾರ್ಥನೆಗಳಲ್ಲಿಯೂ ನೆಲೆಗೊಳ್ಳಿರಿ.’ (1 ತಿಮೊಥೆಯ 5:5) ಈ ಕಷ್ಟಕರವಾದ ಹೊಂದಾಣಿಕೆಯ ಕಾಲಾವಧಿಯಲ್ಲಿ ಯೆಹೋವನು ನಿಮಗೆ ಬಲಕೊಡುತ್ತಾನೆ ಹಾಗೂ ಬೆಂಬಲಕೊಡುತ್ತಾನೆ ಎಂಬ ವಿಷಯದಲ್ಲಿ ಖಾತ್ರಿಯಿಂದಿರಿ.
ಸಂತೋಷಕರವಾಗಿ ಹೋಗಲು ಬಿಡುವುದು
ನಿಮ್ಮ ಸನ್ನಿವೇಶವು ಏನೇ ಆಗಿರಲಿ, ಮಕ್ಕಳು ಮನೆಯನ್ನು ಬಿಟ್ಟು ಹೋಗುವಾಗ, ಜೀವಿತವು ಕೊನೆಗೊಳ್ಳುವುದಿಲ್ಲವೆಂಬುದನ್ನು ಅರ್ಥಮಾಡಿಕೊಳ್ಳಿ. ಇಲ್ಲವೆ ಕುಟುಂಬ ಬಂಧಗಳು ಕರಗಿಹೋಗುವುದಿಲ್ಲ. ಬೈಬಲಿನಲ್ಲಿ ವರ್ಣಿಸಲ್ಪಟ್ಟಿರುವ ಸದೃಢವಾದ ಪ್ರೀತಿಯು, ಜನರು ಬಹಳ ದೂರವಿರುವಾಗಲೂ, ಅವರನ್ನು ಒಟ್ಟಿಗೆ ಆತ್ಮಿಯವಾಗಿರಿಸುವಷ್ಟು ಬಲವುಳ್ಳದ್ದಾಗಿದೆ. ಪ್ರೀತಿಯು “ಎಲ್ಲವನ್ನೂ ಸಹಿಸಿಕೊಳ್ಳುತ್ತದೆ. ಪ್ರೀತಿಯು ಎಂದಿಗೂ ಬಿದ್ದುಹೋಗುವದಿಲ್ಲ” ಎಂದು ಅಪೊಸ್ತಲ ಪೌಲನು ನಮಗೆ ಜ್ಞಾಪಕಹುಟ್ಟಿಸುತ್ತಾನೆ. (1 ಕೊರಿಂಥ 13:7, 8) ನೀವು ನಿಮ್ಮ ಕುಟುಂಬದಲ್ಲಿ ಬೆಳೆಸಿರುವಂತಹ ನಿಸ್ವಾರ್ಥ ಪ್ರೀತಿಯು, ಕೇವಲ ನಿಮ್ಮ ಮಕ್ಕಳು ಮನೆಯನ್ನು ಬಿಟ್ಟು ಹೋಗುವ ಕಾರಣದಿಂದಾಗಿ ನಿಷ್ಫಲವಾಗಲಾರದು.
ಆಸಕ್ತಿಕರವಾಗಿ, ಮಕ್ಕಳು ಅಗಲುವಿಕೆ ಮತ್ತು ಮನೆಯ ಹಂಬಲದ ನೋವುಗಳನ್ನು ಅನುಭವಿಸಲು ಆರಂಭಿಸುವಾಗ, ಅಥವಾ ಸ್ವಲ್ಪಮಟ್ಟಿಗಿನ ಆರ್ಥಿಕ ಒತ್ತಡಗಳ ಅನಿಸಿಕೆ ಅವರಿಗಾಗುವಾಗ, ಅನೇಕವೇಳೆ ಸಂಪರ್ಕವನ್ನು ಪುನಃ ಸ್ಥಾಪಿಸುವುದರಲ್ಲಿ ಅವರೇ ಮೊದಲಿಗರಾಗಿರುತ್ತಾರೆ. ಹಾನ್ ಮತ್ತು ಇಂಗ್ರಿಟ್ ಸಲಹೆ ನೀಡುವುದು: “ನಿಮ್ಮ ಮನೆ ಬಾಗಿಲು ಅವರಿಗಾಗಿ ಯಾವಾಗಲೂ ತೆರೆದಿದೆ ಎಂಬುದು ಮಕ್ಕಳಿಗೆ ತಿಳಿದಿರಲಿ.” ಕ್ರಮವಾದ ಭೇಟಿಗಳು, ಪತ್ರಗಳು, ಅಥವಾ ಆಗಾಗ ಟೆಲಿಫೋನ್ ಕರೆಗಳನ್ನು ಮಾಡುವುದು, ಅವರೊಂದಿಗೆ ಸಂಪರ್ಕವನ್ನಿಟ್ಟುಕೊಳ್ಳಲು ನಿಮಗೆ ಸಹಾಯ ಮಾಡುವುದು. “ಅವರ ಕಾರ್ಯಕಲಾಪಗಳಲ್ಲಿ ಅಧಿಕ ಪ್ರಸಂಗತನದಿಂದ ತಲೆಹಾಕದೆ, ಅವರು ಮಾಡುತ್ತಿರುವ ವಿಷಯದಲ್ಲಿ ಆಸಕ್ತಿವಹಿಸಿರಿ” ಎಂದು, ಜಾಕ್ ಹಾಗೂ ನೋರಾ ಅದನ್ನು ವ್ಯಕ್ತಪಡಿಸಿದರು.
ಮಕ್ಕಳು ಮನೆ ಬಿಟ್ಟು ಹೋಗುವಾಗ, ನಿಮ್ಮ ಜೀವಿತವು ಬದಲಾಗುತ್ತದೆ. ಆದರೆ ಖಾಲಿಯಾದ ಗೂಡಿನಲ್ಲಿನ ಜೀವಿತವು, ಕಾರ್ಯಮಗ್ನವೂ, ಕ್ರಿಯಾಶೀಲವೂ, ಮತ್ತು ಸಂತೃಪ್ತಿಕರವೂ ಆದದ್ದಾಗಿರಸಾಧ್ಯವಿದೆ. ಹಾಗೂ, ನಿಮ್ಮ ಮಕ್ಕಳೊಂದಿಗಿನ ನಿಮ್ಮ ಸಂಬಂಧವು ಬದಲಾಗುತ್ತದೆ. ಆದರೂ, ಅದು ಇನ್ನೂ ಒಂದು ಸಂತೋಷಕರವಾದ, ಪ್ರತಿಫಲದಾಯಕ ಸಂಬಂಧವಾಗಿರಸಾಧ್ಯವಿದೆ. “ಹೆತ್ತವರಿಂದ ಸ್ವಾತಂತ್ರ್ಯವು, ಹೆತ್ತವರಿಗಾಗಿರುವ ಪ್ರೀತಿ, ನಿಷ್ಠೆ, ಅಥವಾ ಗೌರವದ ನಷ್ಟವನ್ನು ಅರ್ಥೈಸುವುದಿಲ್ಲ. . . . ನಿಜವಾಗಿಯೂ, ಬಲವಾದ ಕುಟುಂಬ ಬಂಧಗಳು ಅನೇಕವೇಳೆ ಜೀವನ ಚಕ್ರದಾದ್ಯಂತ ಉಳಿಯುತ್ತವೆ” ಎಂದು, ಪ್ರೊಫೆಸರರಾದ ಜೆಫ್ರಿ ಲೀ ಮತ್ತು ಗ್ಯಾರೀ ಪ್ಯಾಟರ್ಸನ್ ಹೇಳುತ್ತಾರೆ. ಹೌದು, ನೀವು ಎಂದೂ ನಿಮ್ಮ ಮಕ್ಕಳನ್ನು ಪ್ರೀತಿಸುವುದನ್ನು ನಿಲ್ಲಿಸುವುದಿಲ್ಲ, ಮತ್ತು ನೀವು ಅವರ ಹೆತ್ತವರಾಗಿರುವುದು ಎಂದೂ ನಿಂತುಹೋಗುವುದಿಲ್ಲ. ಮತ್ತು ನೀವು ನಿಮ್ಮ ಮಕ್ಕಳನ್ನು ಮನೆ ಬಿಟ್ಟು ಹೋಗಲು ಅನುಮತಿಸುವಷ್ಟರ ಮಟ್ಟಿಗೆ ಪ್ರೀತಿಸಿರುವುದರಿಂದ, ನೀವು ನಿಜವಾಗಿಯೂ ಅವರನ್ನು ಕಳೆದುಕೊಂಡಿರುವುದಿಲ್ಲ.
[ಪಾದಟಿಪ್ಪಣಿ]
a ಎಚ್ಚರ! (ಇಂಗ್ಲಿಷ್) ಪತ್ರಿಕೆಯ, ಫೆಬ್ರವರಿ 8, 1983ರ ಸಂಚಿಕೆಯಲ್ಲಿರುವ “ನೀವು ಒಬ್ಬ ಹೆತ್ತವರಾಗಿರುವುದು ಎಂದಿಗೂ ನಿಂತುಹೋಗುವುದಿಲ್ಲ” ಎಂಬ ಲೇಖನವನ್ನು ನೋಡಿರಿ.
[ಪುಟ 12 ರಲ್ಲಿರುವ ಸಂಕ್ಷಿಪ್ತ ವಿವರಣೆ]
“ನನ್ನ ಜೀವಿತದಲ್ಲಿ ಮೊತ್ತಮೊದಲ ಬಾರಿಗೆ . . . , ನಾನು ಸುಮ್ಮನೆ ಬಿಕ್ಕಿಬಿಕ್ಕಿ ಅತ್ತುಬಿಟ್ಟೆ”
[ಚೌಕ/ಚಿತ್ರ]
ಪ್ರಾಯಕ್ಕೆ ಬಂದ ಮಕ್ಕಳಿಗೆ ಒಂದು ಕಿವಿಮಾತು—ನೀವು ಮನೆ ಬಿಟ್ಟು ಹೋಗಲು ಅನುಮತಿಸುವಂತೆ ಹೆತ್ತವರಿಗೆ ಸಹಾಯ ಮಾಡಿರಿ
ಸರ್ವಸಾಮಾನ್ಯವಾಗಿ, ನಮ್ಮನ್ನು ಹಿಂದೆ ಬಿಟ್ಟುಹೋಗುವುದಕ್ಕಿಂತಲೂ ನಾವು ಮನೆ ಬಿಟ್ಟು ಹೋಗುವುದರೊಂದಿಗೆ ವ್ಯವಹರಿಸುವುದು ಹೆಚ್ಚು ಸುಲಭ. ಆದುದರಿಂದ ನೀವು ನಿಮ್ಮ ಸ್ವಾತಂತ್ರ್ಯ ಹಾಗೂ ಪ್ರೌಢಾವಸ್ಥೆಯಲ್ಲಿ ಆನಂದಿಸುವಾಗ, ನಿಮ್ಮ ಹೆತ್ತವರಿಗೆ ಹೊಂದಿಕೊಳ್ಳಲು ಕಷ್ಟವಾಗುತ್ತಿರುವಲ್ಲಿ, ಅವರ ಕಡೆಗೆ ದಯಾಭಾವವನ್ನು ತೋರಿಸಿರಿ ಮತ್ತು ಅವರನ್ನು ಅರ್ಥಮಾಡಿಕೊಳ್ಳಿರಿ. ನಿಮ್ಮ ಸತತವಾದ ಪ್ರೀತಿ ಹಾಗೂ ಮಮತೆಯ ವಿಷಯದಲ್ಲಿ ಅವರಿಗೆ ಖಾತ್ರಿನೀಡಿರಿ. ಒಂದು ಚಿಕ್ಕ ಪತ್ರ, ಅನಿರೀಕ್ಷಿತವಾದ ಒಂದು ಉಡುಗೊರೆ, ಅಥವಾ ಒಂದು ಸ್ನೇಹಪರ ಟೆಲಿಫೋನ್ ಕರೆಯು, ಒಬ್ಬ ಖಿನ್ನ ಹೆತ್ತವರನ್ನು ಹರ್ಷಗೊಳಿಸಲು ಹೆಚ್ಚನ್ನು ಮಾಡಬಲ್ಲದು! ನಿಮ್ಮ ಜೀವಿತದಲ್ಲಿನ ಮಹತ್ವಪೂರ್ಣ ಘಟನೆಗಳ ಕುರಿತು ಅವರಿಗೆ ತಿಳಿಯಪಡಿಸುತ್ತಾ ಇರಿ. ಇದು, ಕುಟುಂಬ ಬಂಧಗಳು ಇನ್ನೂ ಬಲವಾಗಿವೆ ಎಂಬುದನ್ನು ಅವರು ತಿಳಿದುಕೊಳ್ಳುವಂತೆ ಮಾಡುವುದು.
ನೀವು ವಯಸ್ಕ ಜೀವಿತದ ಒತ್ತಡಗಳನ್ನು ಎದುರಿಸುವಾಗ, ನಿಮ್ಮನ್ನು ಪರಾಮರಿಸುವುದರಲ್ಲಿ ನಿಮ್ಮ ಹೆತ್ತವರು ಅನುಭವಿಸಿದ ಒತ್ತಡಗಳನ್ನು ನೀವು ಹಿಂದೆಂದಿಗಿಂತಲೂ ಹೆಚ್ಚು ಗ್ರಹಿಸುವಿರೆಂಬುದು ಸಂಭವನೀಯ. ಇದು, ನಿಮ್ಮ ಹೆತ್ತವರಿಗೆ ಹೀಗೆ ಹೇಳುವಂತೆ ನಿಮ್ಮನ್ನು ಪ್ರಚೋದಿಸಬಹುದು: “ನೀವು ನನಗಾಗಿ ಮಾಡಿರುವ ಸರ್ವ ವಿಷಯಗಳಿಗಾಗಿ ನಿಮಗೆ ಉಪಕಾರ!”