ಜಗತ್ತನ್ನು ಗಮನಿಸುವುದು
ಕಾಲರದ ಪುನರಾಗಮನ
ನೂರು ವರ್ಷಗಳಿಗಿಂತಲೂ ಹೆಚ್ಚಿನ ಸಮಯದ ಅನುಪಸ್ಥಿತಿಯ ತರುವಾಯ, ಕಾಲರವು ದಕ್ಷಿಣ ಅಮೆರಿಕದಲ್ಲಿ ಹಠಾತ್ತನೆ ಪುನರಾಗಮಿಸಿದೆ. “1991ರಿಂದ, 10,000 ಮರಣಗಳಿಗೆ ನಡೆಸುತ್ತಾ, 14 ಲಕ್ಷ ರೋಗಿಗಳು ಅಲ್ಲಿ ವರದಿಸಲ್ಪಟ್ಟಿದ್ದಾರೆ” ಎಂದು ಲಂಡನಿನ ದ ಟೈಮ್ಸ್ ಹೇಳುತ್ತದೆ. ಆರೋಗ್ಯ ಅಧಿಕಾರಿಗಳ ಚಿಂತೆಗೆ ಹೆಚ್ಚನ್ನು ಕೂಡಿಸಿದ್ದು, 1992ರಲ್ಲಿ ಭಾರತ, ಬಾಂಗ್ಲಾದೇಶ, ಮತ್ತು ನೆರೆಹೊರೆಯ ದೇಶಗಳಲ್ಲಿ ಕಾಲರ ಏಕಾಣುಜೀವಿಯ ಹೊಸ ತಳಿಯ ತಲೆದೋರುವಿಕೆಯೇ. ಆ ಏಕಾಣುಜೀವಿಯು ಇಷ್ಟರ ತನಕ 2,00,000 ಜನರನ್ನು ಬಾಧಿಸಿದೆ. ಕಾಲರ ಅತಿಭೇದಿಯ ರೋಗವಾಗಿದ್ದು, ಸಾಕಷ್ಟು ಚಿಕಿತ್ಸೆಯು ಲಭ್ಯವಾಗಿರದಿದ್ದಲ್ಲಿ 70 ಪ್ರತಿಶತದಷ್ಟು ರೋಗಿಗಳಲ್ಲಿ ಮರಣವು ಸಂಭವಿಸುತ್ತದೆ. ಆದರೆ, ರೋಗವನ್ನು ಗುಣಪಡಿಸುವುದಕ್ಕಿಂತ ಅದನ್ನು ತಡೆಗಟ್ಟುವುದೇ ಮೇಲು. ಕುಡಿಯುವ ನೀರು ಮತ್ತು ಹಾಲನ್ನು ಕುದಿಸುವುದು, ನೊಣಗಳನ್ನು ದೂರವಿಡುವುದು, ಮತ್ತು ಬೇಯಿಸದಿದ್ದ ಆಹಾರವಸ್ತುಗಳನ್ನು ಕ್ಲೋರೀನ್ ಬೆರಸಿದ ನೀರಿನಲ್ಲಿ ತೊಳೆಯುವುದು, ಮೂಲಭೂತ ಸುರಕ್ಷಾ ಅಂಶಗಳಾಗಿವೆ.
ಜಾಗತಿಕ ಶಾಂತಿಯ ಬಗ್ಗೆ ಮಾತಾಡುವುದು
ಸ್ಟಾಕ್‌ಹೋಮ್ ಅಂತಾರಾಷ್ಟ್ರೀಯ ಶಾಂತಿ ಸಂಶೋಧನಾ ಸಂಸ್ಥೆಯ 1997 ವರ್ಷಪುಸ್ತಕ (ಇಂಗ್ಲಿಷ್)ಕ್ಕನುಸಾರ, ಒಂದು ಸಮಯದಲ್ಲಿ, ಶೀತಲ ಸಮರದಲ್ಲಿ ಒಂದು ಮಹತ್ತರವಾದ ಪಾತ್ರವನ್ನು ವಹಿಸಿದ ಪ್ರಾಂತೀಯ ಯುದ್ಧಗಳು ಅಂತ್ಯಗೊಂಡಿರುವಂತೆ ತೋರುತ್ತವೆ. ಶೀತಲ ಸಮರದ ಕೊನೆಯ ವರ್ಷವಾದ 1989ರಲ್ಲಿ, 36 “ಪ್ರಮುಖ ಸಶಸ್ತ್ರ ಘರ್ಷಣೆಗಳು” ಜರುಗಿದವು. ಆ ಸಂಖ್ಯೆಯು 1996ರಲ್ಲಿ 27ಕ್ಕೆ ಇಳಿಯಿತು, ಮತ್ತು ಅವುಗಳಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷವನ್ನು ಬಿಟ್ಟು, ಉಳಿದ ಎಲ್ಲ ಸಂಘರ್ಷಗಳು ಸ್ವದೇಶದ ಆಂತರಿಕ ಯುದ್ಧಗಳಾಗಿದ್ದವು. ಅಲ್ಲದೆ, ಮರಣಗಳ ಸಂಖ್ಯೆಯಿಂದ ಅಂದಾಜುಮಾಡಿದಂತೆ, ಈ ಸಂಘರ್ಷಗಳಲ್ಲಿ ಹೆಚ್ಚಿನವು ತೀವ್ರತೆಯಲ್ಲಿ ಇಳಿತವನ್ನು ತೋರಿಸಿದವು ಇಲ್ಲವೆ ತಗ್ಗಿದ ಮಟ್ಟದಲ್ಲಿ ಮುಂದುವರಿದವು. “ಇನ್ನಾವ ಸಂತತಿಯೂ ಜಾಗತಿಕ ಶಾಂತಿಗೆ ಇಷ್ಟೊಂದು ಹತ್ತಿರವಾಗಿರಲಿಲ್ಲ” ಎಂಬುದಾಗಿ, ದಕ್ಷಿಣ ಆಫ್ರಿಕದ ವಾರ್ತಾಪತ್ರಿಕೆಯಾದ ದ ಸ್ಟಾರ್ ಮುಕ್ತಾಯಗೊಳಿಸಿತು. ಟೈಮ್ ಪತ್ರಿಕೆಯು ಹೇಳುವುದು: “ಮಾನವ ಇತಿಹಾಸದಲ್ಲಿ ಅಪರೂಪವಾಗಿ ಕಾಣುವ ಶಾಂತಿಯನ್ನು, ಈ ಶತಮಾನದಲ್ಲಿ ಕಾಣದಿದ್ದ ಅಂತಾರಾಷ್ಟ್ರೀಯ ಶಾಂತಿ ಮತ್ತು ಪ್ರಶಾಂತತೆಯ ಒಂದು ಶಕವನ್ನು ಅಮೆರಿಕದ ಆಧಿಪತ್ಯವು . . . ಜಗತ್ತಿಗೆ ಕೊಟ್ಟಿದೆ.”
ಆಕಾಶದಿಂದ ಮಂದೆಗೂಡಿಸುವುದು
ಅಲ್ಟ್ರಾಲೈಟ್ಸ್ ಎಂಬುದಾಗಿ ಕರೆಯಲ್ಪಡುವ ನಿಧಾನವಾಗಿ ಹಾರುವ ವಿಮಾನಗಳನ್ನು, ಆಸ್ಟ್ರೇಲಿಯದಲ್ಲಿ ದನಕಾಯುವ ಕೆಲವರು ತಮ್ಮ ವಿಶಾಲವಾದ ದನ ಹಾಗೂ ಕುರಿ ದೊಡ್ಡಿಗಳಲ್ಲಿ ಮಂದೆಗೂಡಿಸಲಿಕ್ಕಾಗಿ ಈಗ ಉಪಯೋಗಿಸುತ್ತಿದ್ದಾರೆಂದು, ಆಸ್ಟ್ರೇಲಿಯದಲ್ಲಿರುವ ಬ್ರಿಸ್‌ಬೇನ್‌ನ ವಾರ್ತಾಪತ್ರಿಕೆಯಾದ ದ ಸಂಡೆ ಮೇಲ್ ವರದಿಸುತ್ತದೆ. ತನ್ನ ಕುರಿಗಳನ್ನು ಮಂದೆಗೂಡಿಸಿದ ಪ್ರತಿಬಾರಿ ಹಲವಾರು ಪುರುಷರಿಗೆ ಕೊಡಬೇಕಾಗಿದ್ದ ಎರಡು ವಾರಗಳ ಕೂಲಿಯನ್ನು ಅವನ ಅಲ್ಟ್ರಾಲೈಟ್ ಉಳಿಸಿತೆಂದು ಕ್ವೀನ್ಸ್‌ಲೆಂಡ್‌ನ ಒಬ್ಬ ದನಕಾಯುವವನು ಹೇಳುತ್ತಾನೆ. “ಕುದುರೆಯನ್ನು ಮೋಟರ್‌ಸೈಕಲ್ ಸ್ಥಾನಪಲ್ಲಟಗೊಳಿಸಿತು, ಮತ್ತು ಈಗ ಮೋಟರ್‌ಸೈಕಲ್‌ನ ಸ್ಥಾನವನ್ನು ಅಲ್ಟ್ರಾಲೈಟ್ ತೆಗೆದುಕೊಳ್ಳುತ್ತಿದೆ,” ಎಂದನವನು. ಹಗುರವಾದ ಈ ವಿಮಾನಗಳು, ನಾಯಿಗಳ ಬೊಗಳುವಿಕೆಯ ರೆಕಾರ್ಡುಗಳನ್ನು ನುಡಿಸುವ ಶಕ್ತಿಶಾಲಿ ಟೇಪ್ ರೆಕಾರ್ಡರ್ ಉಳ್ಳವುಗಳಾಗಿವೆ. ಇದನ್ನು ಕೇಳಿದೊಡನೆ, “ಗಾಬರಿಗೊಂಡ ದನ ಹಾಗೂ ಕುರಿಗಳು ಓಡಲಾರಂಭಿಸಿ, ಅತಿ ಹತ್ತಿರದ ಕೊಟ್ಟಿಗೆಯ ಕಡೆಗೆ ಧಾವಿಸುತ್ತವೆ” ಎಂಬುದಾಗಿ ಆ ಲೇಖನವು ಹೇಳುತ್ತದೆ.
“ಮೃತ್ಯುವಿನ ರಫ್ತುಗಾರರು”
ಶ್ರೀಮಂತ ಪಾಶ್ಚಾತ್ಯ ದೇಶಗಳು, ವಿಕಾಸಶೀಲ ದೇಶಗಳಿಗೆ ರೋಗದ “ಇಮ್ಮಡಿ ಹೊರೆ”ಯನ್ನು ಸೃಷ್ಟಿಸುತ್ತಿವೆ ಎಂದು ಲೋಕಾರೋಗ್ಯ ಸಂಸ್ಥೆ (ಡಬ್ಲ್ಯೂಏಚ್‌ಓ)ಯ 1997ರ ವರದಿಯು ಹೇಳುತ್ತದೆ. ಲಂಡನಿನ ದ ಡೇಲಿ ಟೆಲಿಗ್ರಾಫ್‌ನಲ್ಲಿ ವರದಿಸಲ್ಪಟ್ಟಂತೆ, ವಿಕಾಸಶೀಲ ದೇಶಗಳು, ಧೂಮಪಾನ, ಉನ್ನತಮಟ್ಟದ ಕ್ಯಾಲೊರಿ ಹಾಗೂ ಕೊಬ್ಬಿನಾಂಶದಿಂದ ತುಂಬಿರುವ ಆಹಾರಪಥ್ಯಗಳು ಮತ್ತು ಕಡಿಮೆ ಶಾರೀರಿಕ ಚಟುವಟಿಕೆಯಂತಹ ಪಾಶ್ಚಾತ್ಯ ಜೀವನ ಶೈಲಿಗಳನ್ನು ಅಂಗೀಕರಿಸಿಕೊಂಡಂತೆ, ಹೃದ್ರೋಗಗಳು, ಮಸ್ತಿಷ್ಕ ಆಘಾತ, ಮಧುಮೂತ್ರ ರೋಗ, ಮತ್ತು ಕೆಲವೊಂದು ಕ್ಯಾನ್ಸರ್‌ಗಳು ತೀವ್ರವಾಗಿ ಹೆಚ್ಚುತ್ತಿವೆ. ಭೌಗೋಲಿಕವಾಗಿ ಜನರು ಈಗ ಹೆಚ್ಚು ದೀರ್ಘ ಕಾಲ ಬದುಕುವುದಾದರೂ, ಇದು ‘ಜೀವನದ ಗುಣಮಟ್ಟವಿರದ ಪೊಳ್ಳು ಬಹುಮಾನ’ವಾಗಿದೆ ಎಂದು ಡಬ್ಲ್ಯೂಏಚ್‌ಓನ ನಿರ್ದೇಶಕರಾದ ಡಾ. ಪೌಲ್ ಕ್ಲೀಯೂಸ್ ಹೇಳುತ್ತಾರೆ. ಅವರು ಕೂಡಿಸುವುದು: “ನಾವು ನಿಜವಾಗಿಯೂ ಮೃತ್ಯುವಿನ ರಫ್ತುಗಾರರೆಂದು ಹೇಳಿಕೊಳ್ಳುವವರು ಸರಿಯಾಗಿಯೇ ಹಾಗೆ ಹೇಳುತ್ತಾರೆ.” ಆರೋಗ್ಯಕರ ಜೀವನ ಶೈಲಿಗಳನ್ನು ಉತ್ತೇಜಿಸಲು ಡಬ್ಲ್ಯೂಏಚ್‌ಓ ತೀವ್ರವಾದ ಲೋಕವ್ಯಾಪಕ ಚಳುವಳಿಯನ್ನು ಪ್ರತಿಪಾದಿಸುತ್ತಿದೆ. ಇಲ್ಲದಿದ್ದರೆ, “ಭೌಗೋಲಿಕ ಪ್ರಮಾಣದಲ್ಲಿ ಕಷ್ಟಾನುಭವದ ಸಂಧಿಸಮಯ”ವಿರುವುದೆಂದು ಅದು ಹೇಳುತ್ತದೆ.
ಪ್ರಾರಂಭದ ಹಂತದಲ್ಲೇ ಸ್ತನದ ಕ್ಯಾನ್ಸರಿನ ಪತ್ತೇಹಚ್ಚುವಿಕೆ
ಅಂದಾಜುಮಾಡಲ್ಪಟ್ಟ ಪ್ರತಿ 12 ಮಂದಿ ಸ್ತ್ರೀಯರಲ್ಲಿ ಒಬ್ಬರನ್ನು ಬಾಧಿಸುತ್ತಾ, ಸ್ತನದ ಕ್ಯಾನ್ಸರ್ ಬ್ರೆಸಿಲಿನ ಸ್ತ್ರೀಯರಲ್ಲಿ ಅತ್ಯಂತ ಸಾಮಾನ್ಯ ಪ್ರಕಾರದ ವಿಷಯುಕ್ತ ಬೆಳವಣಿಗೆಯಾಗಿದೆ ಎಂದು ಬ್ರೆಸಿಲಿನ ಪತ್ರಿಕೆಯಾದ ಮೆಡೀಸೀನ ಕೋನ್ಸೆಲ್ಯೊ ಫೆಡರಾಲ್ ವರದಿಸುತ್ತದೆ. 25ಕ್ಕಿಂತಲೂ ಹೆಚ್ಚಿನ ಪ್ರಾಯದ ಎಲ್ಲ ಸ್ತ್ರೀಯರು, ಸ್ತನದ ಸ್ವಪರೀಕ್ಷೆಯನ್ನು ಕ್ರಮವಾಗಿ ಮಾಡಿಕೊಳ್ಳುವಂತೆ ಆ ಪತ್ರಿಕೆಯು ಉತ್ತೇಜಿಸುತ್ತದೆ. ಸ್ತ್ರೀಯರು ತಮ್ಮ ಮೊದಲ ಮ್ಯಾಮೊಗ್ರಾಮನ್ನು 35 ಮತ್ತು 40ರ ಪ್ರಾಯದೊಳಗೆ ಮಾಡಿಸಿಕೊಳ್ಳಬೇಕೆಂದು, 40 ಮತ್ತು 50ರ ನಡುವೆ ಪ್ರತಿ ಎರಡು ವರ್ಷಗಳಿಗೊಮ್ಮೆ ಒಂದು ಮ್ಯಾಮೊಗ್ರಾಮನ್ನು ಮತ್ತು ತರುವಾಯ ಪ್ರತಿವರ್ಷ ಒಂದು ಮ್ಯಾಮೊಗ್ರಾಮನ್ನು ಮಾಡಿಸಿಕೊಳ್ಳುವಂತೆಯೂ ಮೆಡೀಸೀನ ಶಿಫಾರಸ್ಸುಮಾಡುತ್ತದೆ. ಪರಿಪೂರಿತ ಕೊಬ್ಬುಗಳು ಹೆಚ್ಚಾಗಿರುವ ಆಹಾರಪಥ್ಯವನ್ನು ಸೇವಿಸುವವರು ಮತ್ತು ಯಾರ ಕುಟುಂಬದಲ್ಲಿ ಆ ರೋಗದ ಇತಿಹಾಸವಿದೆಯೊ ಅಂತಹ ಸ್ತ್ರೀಯರು ಹೆಚ್ಚಿನ ಗಂಡಾಂತರವನ್ನು ಎದುರಿಸುವುದಾದರೂ, ಸ್ತನದ ಕ್ಯಾನ್ಸರಿರುವ 70 ಪ್ರತಿಶತದಷ್ಟು ಸ್ತ್ರೀಯರಲ್ಲಿ ಯಾವುದೇ ಅಪಾಯದ ಹೆಚ್ಚು ವಿದಿತ ಅಂಶಗಳಿರಲಿಲ್ಲ. ಈ ವಾಸ್ತವಾಂಶವು, “ಪ್ರಾರಂಭದ ಹಂತದಲ್ಲೇ ಪತ್ತೇಹಚ್ಚುವ ಕಾರ್ಯನೀತಿಯ ಮಹತ್ವವನ್ನು ಸ್ಪಷ್ಟವಾಗಿ ಪ್ರದರ್ಶಿಸುತ್ತದೆ” ಎಂದು ಮೆಡೀಸೀನ ಗಮನಿಸುತ್ತದೆ.—ಏಪ್ರಿಲ್ 8, 1994ರ ಎಚ್ಚರ! ಪತ್ರಿಕೆಯನ್ನು ನೋಡಿರಿ.
ಲೋಕದ ಅತ್ಯಂತ ವೃದ್ಧ ವ್ಯಕ್ತಿಯ ಮೃತ್ಯು
ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ಗನುಸಾರ, ಲೋಕದ ಅತ್ಯಂತ ವೃದ್ಧ ವ್ಯಕ್ತಿಯಾದ ಸಾನ್ ಲ್ವೀಸ್ ಕಾಲ್ಮಾನ್, 122ರ ಪ್ರಾಯದಲ್ಲಿ, 1997, ಆಗಸ್ಟ್ 4ರಂದು ಮೃತಪಟ್ಟರೆಂದು ಫ್ರೆಂಚ್ ವಾರ್ತಾಪತ್ರಿಕೆಯಾದ ಲೆ ಫೀಗಾರೋ ವರದಿಸುತ್ತದೆ. 1875, ಫೆಬ್ರವರಿ 21ರಂದು ಸಾನ್, ಆಗ್ನೇಯ ಫ್ರಾನ್ಸಿನ ಆರ್ಲ್ಸ್‌ನಲ್ಲಿ—ದೀಪದ ಬಲ್ಬು, ಫೋನೊಗ್ರಾಫ್, ಮತ್ತು ಮೋಟಾರು ಗಾಡಿಯ ಆವಿಷ್ಕಾರದ ಮೊದಲು—ಹುಟ್ಟಿದರು. 1896ರಲ್ಲಿ ವಿವಾಹವಾದ ಇವರಿಗೆ ಒಬ್ಬ ಮಗಳಿದ್ದಳು. ಆ ಮಗಳು 63 ವರ್ಷಗಳ ಹಿಂದೆ ಮರಣಪಟ್ಟಳು ಮತ್ತು 1963ರಲ್ಲಿ ಮರಣಪಟ್ಟ ಮೊಮ್ಮಗನೊಬ್ಬನು ಅವರಿಗಿದ್ದನು. 1888ರಲ್ಲಿ ತಾವು ಒಬ್ಬ ಹದಿವಯಸ್ಕರಾಗಿದ್ದಾಗ ಬಣ್ಣಗಾರರಾದ ವಿನ್‌ಸೆಂಟ್ ವಾನ್ ಗೊಗ್ ತಮ್ಮನ್ನು ಭೇಟಿಯಾದುದನ್ನು ಅವರು ಜ್ಞಾಪಿಸಿಕೊಂಡರು, ಮತ್ತು 1904ರಲ್ಲಿ ನೋಬಲ್ ಪಾರಿತೋಷಕವನ್ನು ಪಡೆದುಕೊಂಡ ಕವಿ ಫ್ರೇಡೇರೀಕ್ ಮಿಸ್ಟ್ರಾಲರ ಸ್ನೇಹಿತೆಯಾಗಿದ್ದರು. ದೀರ್ಘಾಯುಷ್ಯದ ರಹಸ್ಯಗಳ ಕುರಿತು ಸಾನ್ ಅನೇಕ ವಿನೋದಮಯ ಮಾತುಗಳನ್ನಾಡಿ, ನಗುವಿಕೆ, ಚಟುವಟಿಕೆ, ಮತ್ತು “ಉಷ್ಟ್ರಪಕ್ಷಿಯ ಹೊಟ್ಟೆಯಂತಹ ಒಂದು ಹೊಟ್ಟೆ” ಎಂಬಂತಹ ಅಂಶಗಳನ್ನು ಉಲ್ಲೇಖಿಸಿದರು.
ದ್ವಿಭಾಷಿ ಮಕ್ಕಳು
ಮಗುವೊಂದು ತನ್ನ ಮಾತೃಭಾಷೆಯನ್ನು ಕಲಿತಂತೆ, ಭಾಷೆಯನ್ನು ಉಪಯೋಗಿಸುವ ಅದರ ಹೆಚ್ಚಿನ ಸಾಮರ್ಥ್ಯವು, ಬ್ರಾಕ ಕ್ಷೇತ್ರವೆಂದು ಪ್ರಸಿದ್ಧವಾಗಿರುವ ಮಿದುಳಿನ ಒಂದು ಕ್ಷೇತ್ರದಲ್ಲಿ ಇದೆ. ಇತ್ತೀಚೆಗೆ, ನ್ಯೂ ಯಾರ್ಕ್‌ನ ಮೆಮೊರಿಯಲ್ ಸ್ಲೊಆ್ಯನ್ ಕೆಟರಿಂಗ್ ಕ್ಯಾನ್ಸರ್ ಸೆಂಟರ್‌ನಲ್ಲಿರುವ ಸಂಶೋಧಕರು, ದ್ವಿಭಾಷಿ ವ್ಯಕ್ತಿಗಳು ಒಂದಲ್ಲ ಒಂದು ಭಾಷೆಯನ್ನು ಉಪಯೋಗಿಸುವಾಗ ಮಿದುಳಿನ ಯಾವ ಭಾಗವು ಸಕ್ರಿಯವಾಗಿದೆ ಎಂಬುದನ್ನು ನಿರ್ಧರಿಸಲು, ಕಾರ್ಯಸಾಧಕ ಮ್ಯಾಗ್ನೆಟಿಕ್ ರೆಸೊನನ್ಸ್ ಇಮೆಜಿಂಗ್ ಉಪಯೋಗಿಸಿದರು. ಒಂದು ಎಳೆಯ ಮಗುವಿನಂತೆ ವ್ಯಕ್ತಿಯೊಬ್ಬನು ಎರಡು ಭಾಷೆಗಳನ್ನು ಏಕಕಾಲದಲ್ಲಿ ಕಲಿಯುವಾಗ, ಎರಡೂ ಭಾಷೆಗಳು ಬ್ರಾಕ ಕ್ಷೇತ್ರದ ಅದೇ ಭಾಗದಲ್ಲಿ ಶೇಖರವಾಗುತ್ತವೆ ಎಂಬುದನ್ನು ಅವರು ಕಂಡುಕೊಂಡರು. ಆದರೂ, ತಾರುಣ್ಯದಲ್ಲಿ ಇಲ್ಲವೆ ತದನಂತರ ಎರಡನೆಯ ಭಾಷೆಯನ್ನು ಕಲಿಯುವಾಗ, ಮೊದಲಿನ ಭಾಷೆಯೊಂದಿಗೆ ಮಿಶ್ರಿತವಾಗುವ ಬದಲಿಗೆ ಅದು ಅದರ ಪಕ್ಕಕ್ಕೆ ಇರಿಸಲ್ಪಡುವಂತೆ ತೋರುತ್ತದೆ. ಲಂಡನಿನ ದ ಟೈಮ್ಸ್ ವಾರ್ತಾಪತ್ರಿಕೆಯು ಹೇಳಿಕೆನೀಡುವುದು: “ಪ್ರಥಮ ಭಾಷೆಯ ಕಲಿಯುವಿಕೆಯು, ಬ್ರಾಕ ಕ್ಷೇತ್ರದಲ್ಲಿ ಸರ್ಕಿಟ್‌ಗಳನ್ನು ಸ್ಥಾಪಿಸಿರುತ್ತದೊ ಎಂಬಂತಿದೆ, ಆದುದರಿಂದ ಎರಡನೆಯ ಭಾಷೆಯನ್ನು ಬೇರೆಲ್ಲಾದರೂ ಹೊಂದಿಸಬೇಕು.” ಜೀವನದಲ್ಲಿ ಮುಂದೆ ಎರಡನೆಯ ಭಾಷೆಯನ್ನು ಕಲಿಯುವುದು ಏಕೆ ಅಷ್ಟು ಕಷ್ಟಕರವಾಗಿದೆ ಎಂಬುದನ್ನು ವಿವರಿಸಲು ಇದು ಸಹಾಯ ಮಾಡಬಹುದೆಂದು ಸಂಶೋಧಕರು ನೆನಸುತ್ತಾರೆ.
ಶಿಶುಪಾಲನೆಯ ವಿಷಯದಲ್ಲಿ ಚೀನೀಯರ ಆತಂಕಗಳು
ಸಾಮಾಜಿಕ ವಿಜ್ಞಾನಗಳ ಚೈನೀಸ್ ಅಕ್ಯಾಡಮಿಯ ನೇತೃತ್ವದಲ್ಲಿ, ಹೆತ್ತವರ-ಮಗುವಿನ ಸಂಬಂಧಗಳ ದೊಡ್ಡ ಪ್ರಮಾಣದ ಅಧ್ಯಯನವು ಇತ್ತೀಚೆಗೆ ನಡೆಸಲ್ಪಟ್ಟಿತೆಂದು ಚೈನ ಟುಡೇ ವರದಿಸುತ್ತದೆ. ಇಂದಿನ ಮಕ್ಕಳನ್ನು ಬೆಳೆಸುವುದರ ಕುರಿತು ಅನೇಕ ಹೆತ್ತವರಿಗಿರುವ ಆತಂಕವನ್ನು ಆ ಸಂಶೋಧನೆಯು ಪ್ರಕಟಪಡಿಸಿತು. ಚೈನ ಟುಡೇ ಪತ್ರಿಕೆಗನುಸಾರ, “ತಮ್ಮ ಮಕ್ಕಳಿಗೆ ಪ್ರಾಮಾಣಿಕತೆ, ಸಭ್ಯತೆ, ಸೈರಣೆ ಮತ್ತು ಆರೈಕೆಯಂತಹ ಸಾಂಪ್ರದಾಯಿಕ ಚೈನೀಸ್ ನೈತಿಕತೆಯನ್ನು ಕಲಿಸಬೇಕೊ ಇಲ್ಲವೆ ಸ್ಪರ್ಧೆಯ ಆಧುನಿಕ ಗುಣವಿಶೇಷಗಳನ್ನು ಕಲಿಸಬೇಕೊ? ಎಂಬ ವಿಷಯದಲ್ಲಿ ಕೆಲವರು ಅನಿಶ್ಚಿತರಾಗಿರುತ್ತಾರೆ.” ಬಹುಮಟ್ಟಿಗೆ 60 ಪ್ರತಿಶತದಷ್ಟು ಹೆತ್ತವರು, ಮಕ್ಕಳ ಮೇಲೆ ಟಿವಿಯ ನಕಾರಾತ್ಮಕ ಪರಿಣಾಮಗಳ ಕುರಿತು ಚಿಂತಿಸಿದರು. ಹೆತ್ತವರು ಒಂದು ಮಗು ವೀಕ್ಷಿಸುವಂತಹ ಕಾರ್ಯಕ್ರಮಗಳನ್ನು ಅವನ ಅಥವಾ ಅವಳ ವಯಸ್ಸು ಮತ್ತು ವ್ಯಕ್ತಿತ್ವಕ್ಕನುಸಾರ ನಿಯಂತ್ರಿಸುವಂತೆ, ಮಗುವಿನೊಂದಿಗೆ ಕಾರ್ಯಕ್ರಮಗಳನ್ನು ವೀಕ್ಷಿಸಿ, ಚರ್ಚಿಸುವಂತೆ, ಮತ್ತು ಟಿವಿಯು ಮಗುವಿನ ಅತ್ಯಧಿಕ ಸಮಯವನ್ನು ತೆಗೆದುಕೊಳ್ಳುವಂತೆ ಅನುಮತಿಸದಿರಲು, ವಾರ್ತಾ ಸಂಶೋಧಕರಾದ ಬ್ಯೂ ವೇ ಬುದ್ಧಿವಾದ ನೀಡಿದರು.
ಈಗಲೂ ನಂಬರ್ ವನ್
“ಬೇರೆ ಯಾವುದೇ ಪುಸ್ತಕಕ್ಕಿಂತಲೂ ಬೈಬಲಿನ ಹೆಚ್ಚು ಪ್ರತಿಗಳು ಈಗಲೂ ಮುದ್ರಿಸಲ್ಪಡುತ್ತಿವೆ,” ಎಂದು ಈಎನ್‌ಐ ಬುಲೆಟಿನ್ ವರದಿಸುತ್ತದೆ. ಅತ್ಯುಚ್ಚ ಸಂಖ್ಯೆಗಳಲ್ಲಿ ಬೈಬಲನ್ನು ವಿತರಿಸುವ ದೇಶಗಳು, ಚೈನ, ಅಮೆರಿಕ, ಮತ್ತು ಬ್ರೆಸಿಲ್ ಆಗಿವೆ. ಯುನೈಟೆಡ್ ಬೈಬಲ್ ಸೊಸೈಟೀಸ್ (ಯುಬಿಎಸ್)ನ ಒಂದು ವರದಿಗನುಸಾರ, 1996ರಲ್ಲಿ ಸಂಪೂರ್ಣ ಬೈಬಲಿನ 1.94 ಕೋಟಿ ಪ್ರತಿಗಳು ವಿತರಿಸಲ್ಪಟ್ಟವು. ಇದೊಂದು ಹೊಸ ದಾಖಲೆಯಾಗಿದ್ದು, 1995ರಲ್ಲಿ ವಿತರಿಸಲ್ಪಟ್ಟ ಪ್ರತಿಗಳಿಗೆ ಹೋಲಿಸುವಾಗ 9.1 ಪ್ರತಿಶತ ವೃದ್ಧಿಯಾಗಿತ್ತು. “ಲೋಕದ ಕೆಲವೊಂದು ಭಾಗಗಳಲ್ಲಿನ ವಿತರಣೆಯಲ್ಲಾದ ಆಶ್ಚರ್ಯಕರ ಬೆಳವಣಿಗೆಯ” ಎದುರಿನಲ್ಲೂ, “ಶಾಸ್ತ್ರಗಳು ಎಲ್ಲರಿಗೂ ಸುಲಭವಾಗಿ ದೊರೆಯುವಂತೆ ನಾವು ಮಾಡಬೇಕಾದಲ್ಲಿ, ಮಾಡಲು ಇನ್ನೂ ಹೆಚ್ಚಿನ ಕೆಲಸವಿದೆ” ಎಂದು ಯುಬಿಎಸ್‌ನ ಪ್ರಕಟಿಸುವ ವಿಭಾಗದ ಸಂಯೋಜಕರಾಗಿರುವ ಜಾನ್ ಬಾಲ್ ಹೇಳಿದರು.
ಷಾರ್ಕ್‌ನ ಬದ್ಧ ವೈರಿಯೊ?
ಸಾಮಾನ್ಯವಾಗಿ ಷಾರ್ಕ್‌ಗಳು ಮನುಷ್ಯರಲ್ಲಿ ಭಯವನ್ನು ಹುಟ್ಟಿಸುತ್ತವೆ. ಆದರೆ ಷಾರ್ಕ್‌ಗಳು ಮನುಷ್ಯನಿಗೆ ಭಯಪಡುವ ಹೆಚ್ಚಿನ ಕಾರಣವಿದೆಯೆಂದು ತೋರುತ್ತದೆ. ಷಾರ್ಕ್ ಆಕ್ರಮಣಗಳ ಪರಿಣಾಮವಾಗಿ ಪ್ರತಿ ವರ್ಷ “ಹೆಚ್ಚುಕಡಿಮೆ 40 ಇಲ್ಲವೆ 50 ಜನರು” ಸಾಯುತ್ತಾರಾದರೂ, ಅಂದಾಜುಮಾಡಲ್ಪಟ್ಟ 10,00,00,000 ಷಾರ್ಕ್‌ಗಳು ಪ್ರತಿವರ್ಷ ಬೆಸ್ತರಿಂದ ಕೊಲ್ಲಲ್ಪಡುತ್ತವೆಂದು ಫ್ರೆಂಚ್ ವಾರ್ತಾಪತ್ರಿಕೆಯಾದ ಲೇ ಮಾಂಡ್ ವರದಿಸುತ್ತದೆ. ಈ ವಾಸ್ತವಾಂಶವು ಅನೇಕ ಜಲ ಜೀವಿವಿಜ್ಞಾನಿಗಳನ್ನು ಚಿಂತೆಗೀಡುಮಾಡಿದೆ. ಈ ನಾಶನವು ಮುಂದುವರಿಯುವುದಾದರೆ ಸಾಗರದ ನೈಸರ್ಗಿಕ ಸಮತೆಯು ಕದಡಿಸಲ್ಪಡಬಹುದೆಂದು ಅವರು ಭಯಪಡುತ್ತಾರೆ. ಜಲನಿಬಿಡತೆಯನ್ನು ನಿಯಂತ್ರಿಸುವುದರಲ್ಲಿ ಷಾರ್ಕ್‌ಗಳು ಅತಿಪ್ರಮುಖ ಪಾತ್ರವನ್ನು ವಹಿಸುತ್ತವೆ. ಷಾರ್ಕ್‌ಗಳು ಲೈಂಗಿಕ ಪಕ್ವತೆಯನ್ನು ಪಡೆಯುವುದರಲ್ಲಿ ನಿಧಾನಿಗಳೂ ಮತ್ತು ದೀರ್ಘವಾದ ಗರ್ಭಾವಸ್ಥೆಯ ತರುವಾಯ ಕೆಲವೊಂದು ಮರಿಗಳನ್ನು ಮಾತ್ರ ಹೆರುವುದರಿಂದ, ಮಿತಿಮೀರಿ ಮೀನು ಹಿಡಿಯುವುದು ಕೆಲವೊಂದು ಷಾರ್ಕ್ ಜಾತಿಗಳ ಅಳಿವಿಗೆ ನಡೆಸುವ ಬೆದರಿಕೆಯನ್ನೊಡ್ಡುತ್ತದೆ. ಜಲಜೀವನ ಪರಿಣತರು ವಿಶೇಷವಾಗಿ ಸಂತಪಿಸುವ ಒಂದು ಅಭ್ಯಾಸವು “ಈಜುರೆಕ್ಕೆಗಳ ಕತ್ತರಿಸುವಿಕೆ”—ಆಹಾರಕ್ಕಾಗಿ ಈಜುರೆಕ್ಕೆಗಳನ್ನು ಕತ್ತರಿಸಿ, ಸಾಯುವಂತೆ ಷಾರ್ಕನ್ನು ಪುನಃ ಸಮುದ್ರದೊಳಗೆ ಎಸೆಯುವುದು—ಆಗಿದೆ.
ನಿರುದ್ಯೋಗದ ಒತ್ತಡ
ಜರ್ಮನ್ ವಾರ್ತಾಪತ್ರಿಕೆಯಾದ ಸ್ಯುಟೆಡೈಚಿ ಟ್ಸೀಟುಂಗ್‌ನಲ್ಲಿ ಉಲ್ಲೇಖಿಸಲ್ಪಟ್ಟ ಅಧ್ಯಯನಗಳಿಗನುಸಾರ, ನಿರುದ್ಯೋಗದ ಭಾವನಾತ್ಮಕ ಹಾಗೂ ಸಾಮಾಜಿಕ ಒತ್ತಡಗಳು ಒಬ್ಬ ವ್ಯಕ್ತಿಯ ಆರೋಗ್ಯವನ್ನು ಬಾಧಿಸಬಲ್ಲವು. ಇಂತಹ ಒತ್ತಡದಿಂದ ದೇಹದ ಸೋಂಕು ರಕ್ಷಾ ವ್ಯವಸ್ಥೆಯು ಬಲಹೀನಗೊಳಿಸಲ್ಪಡುತ್ತದೆಂದು ಹೇಳಲಾಗಿದೆ. ಉದ್ಯೋಗದಲ್ಲಿರುವವರಿಗಿಂತ ನಿರುದ್ಯೋಗಿಗಳಿಗೆ ಹೆಚ್ಚಿನ ರಕ್ತದೊತ್ತಡ ಮತ್ತು ಹೃದಯಾಘಾತಗಳು ಸಂಭವಿಸುವ ಸಾಧ್ಯತೆಯೂ ಹೆಚ್ಚಾಗಿರುತ್ತದೆ. “ದೀರ್ಘಸಮಯದ ನಿರುದ್ಯೋಗಿಗಳು ತಾಳಿಕೊಳ್ಳಬೇಕಾದ ಒತ್ತಡವು ತೀರ ಭಯಂಕರವಾಗಿದ್ದು, ಉದ್ಯೋಗಸ್ಥರು ಅನುಭವಿಸುವ ಒತ್ತಡದ ಪರಿಣಾಮಗಳಿಗಿಂತಲೂ ಹೆಚ್ಚಿನ ಪರಿಣಾಮಗಳಿಂದ ಒಡಗೂಡಿದೆ,” ಎಂಬುದಾಗಿ ಜರ್ಮನಿಯ ಹನೋವರ್ ವಿಶ್ವವಿದ್ಯಾನಿಲಯದ ಪ್ರೊಫೆಸರ್ ತೋಮಾಸ್ ಕೀಸೆಲ್‌ಬಾಕ್ ಹೇಳುತ್ತಾರೆ. “ನಿರುದ್ಯೋಗಿಗಳಲ್ಲಿ ಬಹುಮಟ್ಟಿಗೆ ಎಲ್ಲರು ಒಂದಲ್ಲ ಒಂದು ವಿಧದ ಮಾನಸಿಕ ಕುಸಿತದ ರೋಗದಿಂದ ಕಷ್ಟಾನುಭವಿಸುತ್ತಾರೆ.” ಯೂರೋಪಿಯನ್ ಒಕ್ಕೂಟದಲ್ಲಿ ನಿರುದ್ಯೋಗಿಗಳಾಗಿರುವವರ ಸಂಖ್ಯೆಯು, ಡೆನ್ಮಾರ್ಕ್, ಫಿನ್‌ಲೆಂಡ್, ಮತ್ತು ಸ್ವೀಡನ್‌ನ ಒಟ್ಟುಗೂಡಿಸಲ್ಪಟ್ಟ ಜನಸಂಖ್ಯೆಗೆ ಹೆಚ್ಚುಕಡಿಮೆ ಸಮಾನವಾಗಿದೆಯೆಂದು ಹೇಳಲಾಗಿದೆ.