ನಮ್ಮ ವಾಚಕರಿಂದ
ಏಕೆ ಇಷ್ಟು ಅಸ್ವಸ್ಥನಾಗಿರಬೇಕು? “ಯುವ ಜನರು ಪ್ರಶ್ನಿಸುವುದು . . . ನಾನೇಕೆ ಇಷ್ಟು ಅಸ್ವಸ್ಥನಾಗಿರಬೇಕು?” (ಮೇ 8, 1997) ಎಂಬ ಲೇಖನಕ್ಕಾಗಿ ನಿಮಗೆ ಉಪಕಾರ. ನಾನು 21 ವರ್ಷ ಪ್ರಾಯದವಳಾಗಿದ್ದು, ಸಿಕ್‌ಲ್ ಸೆಲ್ ಅನೀಮಿಅ ರೋಗಪೀಡಿತಳಾಗಿದ್ದೇನೆ. ಈ ಲೇಖನದಲ್ಲಿ ಉಲ್ಲೇಖಿಸಲ್ಪಟ್ಟ ಯುವ ಜನರ ಭಾವನೆಗಳನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಈ ಆರೋಗ್ಯ ಸಮಸ್ಯೆಯ ಎದುರಿನಲ್ಲೂ ನನ್ನನ್ನು ಯಾರಾದರೂ ಪ್ರೀತಿಸಿ, ವಿವಾಹವಾಗಲು ಬಯಸುವರೊ ಎಂದು ನಾನು ಅನೇಕ ವೇಳೆ ಯೋಚಿಸುತ್ತೇನೆ. ಆದರೆ ನಿಮ್ಮ ಲೇಖನವು ನನಗೆ ಸಹಾಯ ಮಾಡಿತು, ಏಕೆಂದರೆ ಈ ರೀತಿಯ ಭಾವನೆಯಿರುವುದು ನನಗೊಬ್ಬಳಿಗೆ ಮಾತ್ರವಲ್ಲವೆಂದು ಈಗ ನನಗೆ ಗೊತ್ತಾಗಿದೆ.
ಡಿ. ಆರ್., ಅಮೆರಿಕ
“ಯುವ ಜನರು ಪ್ರಶ್ನಿಸುವುದು . . . ನಾನೇಕೆ ಇಷ್ಟು ಅಸ್ವಸ್ಥನಾಗಿರಬೇಕು?” (ಮೇ 8, 1997) ಎಂಬ ಲೇಖನದಲ್ಲಿ ಜೇಸನ್‌ನಿಂದ ವ್ಯಕ್ತಗೊಳಿಸಲ್ಪಟ್ಟ ಎಲ್ಲ ಭಾವೋದ್ರೇಕಗಳನ್ನು ನಾನು ಅನುಭವಿಸುತ್ತೇನೆ. ಆ ಲೇಖನವನ್ನು ನಾನು ಪ್ರತಿ ಬಾರಿ ಓದುವಾಗ, ನನ್ನ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುವ, ಗ್ರಹಿಸಿಕೊಳ್ಳುವ, ಮತ್ತು ಚಿಂತಿಸುವ ಯಾರೊ ಒಬ್ಬರೊಂದಿಗೆ ಮನಬಿಚ್ಚಿ ಮಾತಾಡುತ್ತಿರುವಂತೆ ನನಗನಿಸುತ್ತದೆ. ನನ್ನ ಭಾರವನ್ನು ಕಡಿಮೆಗೊಳಿಸಿದುದಕ್ಕಾಗಿ ನಿಮಗೆ ತುಂಬ ಉಪಕಾರ. ಯೆಹೋವನು ಚಿಂತಿಸುತ್ತಾನೆ ಮತ್ತು ಆತನ ನೇಮಿತ ಸಮಯದಲ್ಲಿ ಎಲ್ಲ ರೋಗಗಳನ್ನು ಆತನು ನಿರ್ಮೂಲಮಾಡುವನೆಂದು ನನಗೆ ಗೊತ್ತು.
ಓ. ಎ., ಘಾನ
ಈ ಲೇಖನವು ಹೊರಬರುವ ಎರಡು ವಾರಗಳ ಮುಂಚೆ ನನಗೆ ಮೂರ್ಛೆರೋಗ ಇದೆಯೆಂದು ರೋಗನಿರ್ಣಯ ಮಾಡಲಾಯಿತು. ನಾನು ಆಗ ತಾನೆ 18 ವರ್ಷ ಪ್ರಾಯದವಳಾದೆ, ಮತ್ತು ಅಸ್ವಸ್ಥಳಾಗಿರುವುದು ನಾನು ಇತ್ತೀಚೆಗೆ ಪಡೆದುಕೊಂಡ ಎಲ್ಲ ಸ್ವಾತಂತ್ರ್ಯಗಳನ್ನು ಗಮನಾರ್ಹವಾಗಿ ಕಡಿಮೆಗೊಳಿಸಿದೆ. ಬಹಳಷ್ಟು ಎಚ್ಚರಿಕೆಗಳನ್ನು ತೆಗೆದುಕೊಳ್ಳಲಿಕ್ಕಿದೆ ಮತ್ತು ಅನೇಕ ಮಾತ್ರೆಗಳನ್ನು ಜ್ಞಾಪಕದಲ್ಲಿಟ್ಟುಕೊಳ್ಳಲಿಕ್ಕಿದೆ. ಮರಣದಲ್ಲಿ ಬೇರೆ ಇಬ್ಬರು ಮಕ್ಕಳನ್ನು ಕಳೆದುಕೊಂಡಿರುವ ನನ್ನ ಹೆತ್ತವರಿಗೆ ಇದು ಬಹಳಷ್ಟು ದುಃಖವನ್ನುಂಟುಮಾಡಿದೆ. ನಿಜವಾಗಿಯೂ ನನ್ನಲ್ಲಿ ಕಣ್ಣೀರು ಬರಿಸುವಂತಹ ವಿಧದಲ್ಲಿ ಆ ಲೇಖನವು ನನ್ನ ಮೇಲೆ ಪ್ರಭಾವ ಬೀರಿತು. ನಾನು ನಿಗ್ರಹಿಸುತ್ತಾ ಇದ್ದ ಯೋಚನೆಗಳನ್ನೇ ಅದು ಸಂಬೋಧಿಸಿತು, ಮತ್ತು ಪುನಃ ನನಗೆ ಸಹಜವಾದ ಅನಿಸಿಕೆಯಾಯಿತು. ತದ್ರೀತಿಯ ಸಮಸ್ಯೆಗಳು ಹಾಗೂ ಚಿಂತೆಗಳು ಇತರರಿಗೂ ಇವೆಯೆಂದು ನಾನು ನೋಡಬಹುದಿತ್ತು. ತನ್ನ ಸಂಸ್ಥೆಯ ಮೂಲಕ ಯೆಹೋವನು, ಆತ್ಮಿಕವಾಗಿ ಬಲಿಷ್ಠಳಾಗಿ ಉಳಿಯಲು ಬೇಕಾದ ಮಾಹಿತಿಯನ್ನು ನನಗೋಸ್ಕರ ಬರಹ ರೂಪದಲ್ಲಿ ಕೊಟ್ಟಿದ್ದಾನೆ.
ಡಿ. ಎಸ್., ಅಮೆರಿಕ
ನಾನು ಲೇಖನವನ್ನು ಓದಿದಾಗ, ನನ್ನ ಕಾಯಿಲೆಯು ಬೇರೆ ವ್ಯಕ್ತಿಗಿಂತಲೂ ನನ್ನ ಹೆತ್ತವರಿಗೆ ಬಹಳಷ್ಟು ದುಃಖವನ್ನು ಉಂಟುಮಾಡುತ್ತದೆಂದು ನಾನು ಗ್ರಹಿಸಿದೆ. ನನ್ನ ರೋಗವು ಆನುವಂಶಿಕವಾದದ್ದೆಂದು ಅವರು ಹೇಳುತ್ತಾರೆ, ಮತ್ತು ಇದು ಅವರನ್ನು ಖಿನ್ನಗೊಳಿಸುತ್ತದೆ. ನಾನು ಅವರನ್ನು ಆ ಸ್ಥಿತಿಯಲ್ಲಿ ನೋಡುವಾಗ, ಅವರಿಗಾಗಿ ನಾನು ಬಹಳಷ್ಟು ವ್ಯಥೆಪಡುತ್ತೇನೆ.
ವೈ. ಏಚ್., ಜಪಾನ್
ಬಾಲ್ಯಾವಸ್ಥೆಯಲ್ಲಿ ನನಗೆ ಒಳ್ಳೆಯ ಆರೋಗ್ಯವಿತ್ತು. ಆದರೆ ತಾರುಣ್ಯದಲ್ಲಿ, ಒಂದರ ಹಿಂದೆ ಇನ್ನೊಂದು ಕಾಯಿಲೆಯನ್ನು ನಾನು ಅನುಭವಿಸಿದೆ. ನಾನು ಪೂರ್ಣ ಸಮಯದ ಶುಶ್ರೂಷೆಯನ್ನು ಆರಂಭಿಸಿದೆ, ಆದರೆ ಮೊದಲ ಎರಡು ತಿಂಗಳುಗಳ ವರಗೆ ನನ್ನ ಕಾಯಿಲೆಯ ಕಾರಣ ನನ್ನ ಗುರಿಗಳನ್ನು ನನಗೆ ಸಾಧಿಸಲಾಗಲಿಲ್ಲ. ನಾನು ಬಹಳ ಖಿನ್ನನಾದೆ. ಯೆಹೋವನ ವಿರುದ್ಧ ನಾನೇನೊ ತಪ್ಪನ್ನು ಮಾಡಿದ್ದೇನೆಂದು ಮತ್ತು ಕಾಯಿಲೆಯಿಂದ ಶಿಕ್ಷಿಸಲ್ಪಡುತ್ತಿದ್ದೇನೆಂದು (ತಪ್ಪಾಗಿ) ನೆನಸಿದೆ. ನನ್ನ ಸನ್ನಿವೇಶಕ್ಕೆ ಸರಿಯಾಗಿ ಹೊಂದಿಕೊಳ್ಳುವಂತೆ ಮತ್ತು ಎದೆಗುಂದದಿರುವಂತೆ ಈ ಲೇಖನವು ನನಗೆ ಸಹಾಯ ಮಾಡಿದೆ.
ಸಿ. ಕೆ., ಘಾನ
ನನ್ನ ಒಂಬತ್ತು ವರ್ಷ ಪ್ರಾಯದ ಮಗಳಿಗೆ ಕಲಿಯುವ ಅಸಾಮರ್ಥ್ಯ ಮತ್ತು ಮಿದುಳಿನ ಲಕ್ವವಿದೆ. ಅವಳು ಬಹಳ ಬುದ್ಧಿವಂತೆ, ಮತ್ತು ತನ್ನ ಅಸಾಮರ್ಥ್ಯಗಳು ಸಾಮಾನ್ಯ ಚಟುವಟಿಕೆಯನ್ನು ಸೀಮಿತಗೊಳಿಸುತ್ತವೆಂಬ ಅರಿವು ಅವಳಿಗಿದೆ. ಅವಳು ಸಾಮಾನ್ಯವಾಗಿ ಹರ್ಷಚಿತ್ತಳೂ ಆನಂದಿತಳೂ ಆಗಿರುವಾದಾದರೂ, ಆಗಾಗ್ಗೆ ಇದು ಅವಳನ್ನು ಒಂದಿಷ್ಟು ಖಿನ್ನಗೊಳಿಸುತ್ತದೆ. ಈ ಲೇಖನವೂ ಅವಳು ಎಲ್ಲಿ ಇತರ ಮಕ್ಕಳಂತಿರುವಳೊ ಆ ಭವಿಷ್ಯದ ಪ್ರಮೋದವನದ ಕುರಿತು ತನ್ನ ತಂದೆಯೊಂದಿಗಿನ ಪ್ರತಿ ರಾತ್ರಿಯ ಚರ್ಚೆಗಳೂ ಅವಳಿಗೆ ಬಹಳ ಉತ್ತೇಜನದಾಯಕವಾಗಿದ್ದವು.
ವೈ. ಪಿ., ಅಮೆರಿಕ
ಸುಮಾರು ಹತ್ತು ವರ್ಷಗಳಿಂದ, ನನ್ನ ಜೀರ್ಣಾಂಗ ವ್ಯವಸ್ಥೆಯನ್ನು ಬಾಧಿಸುವಂತಹ ‘ಅದೃಶ್ಯ ಕಾಯಿಲೆ’ಯಿಂದ ನಾನು ನರಳುತ್ತಿದ್ದೇನೆ. ಆದ ಕಾರಣ, ನಾನು ಪೂರ್ಣ ಸಮಯದ ಶುಶ್ರೂಷೆಯನ್ನು ಬಿಡಬೇಕಾಯಿತು. ಈ ಲೇಖನವನ್ನು ಓದಿದಾಗ, ಯಾರೋ ಒಬ್ಬರು ನನ್ನ ಹೋರಾಟವನ್ನು ಅರ್ಥಮಾಡಿಕೊಳ್ಳುತ್ತಾರೆ ಎಂಬ ಅನಿಸಿಕೆ ನನಗೆ ಮೊದಲನೆಯ ಬಾರಿಗೆ ಆಗುತ್ತಿದೆ. ಕಷ್ಟಾನುಭವಿಸುತ್ತಿರುವವಳು ನಾನೊಬ್ಬಳೇ ಅಲ್ಲವೆಂಬುದನ್ನು ತಿಳಿದುಕೊಳ್ಳುವುದು ಒಂದು ಉಪಶಮನವಾಗಿದೆ. ಒಂದು ಭಾರಿ ಹೊರೆಯು ನನ್ನ ಮೇಲಿಂದ ತೆಗೆಯಲ್ಪಟ್ಟಿದೆಯೊ ಎಂಬಂತೆ ನನಗನಿಸುತ್ತದೆ. ನಿಮಗೆ ಎಷ್ಟು ಉಪಕಾರ ಹೇಳಿದರೂ ಸಾಲದು. ಇಂತಹ ಉತ್ತೇಜನದಾಯಕ ಹಾಗೂ ಸಮಯೋಚಿತ ಲೇಖನಗಳು, ಈ ಹಳೆಯ ವ್ಯವಸ್ಥೆಯಲ್ಲಿ ಮುಂದುವರಿಯುತ್ತಾ ಇರುವಂತೆ ನಮಗೆ ಸಹಾಯ ಮಾಡುತ್ತವೆ.
ಎಲ್. ಕೆ., ಕೆನಡ