ಅವರ ಹೃದಯವು ಸ್ಪರ್ಶಿಸಲ್ಪಟ್ಟಿತು
ಗ್ಲೋರಿಯಾ ಆಡಾಮ್ ಬರೆಯುವುದು, “ನಮ್ಮದು 13 ಮಕ್ಕಳುಳ್ಳ ಕುಟುಂಬವಾಗಿತ್ತು, 4 ಹುಡುಗರು 9 ಹುಡುಗಿಯರು. ಇಸವಿ 1984ರಲ್ಲಿ ತಂದೆಯವರು ಮೆಕ್ಸಿಕೊಗೆ ಹಿಂದಿರುಗಿದ್ದರು. ಅವರು ಅಮೆರಿಕದಲ್ಲಿ ಕೆಲಸಮಾಡುತ್ತಿದ್ದಾಗ, ನಮ್ಮ ಕುಟುಂಬವು ಯೆಹೋವನ ಸಾಕ್ಷಿಗಳೊಂದಿಗೆ ಬೈಬಲನ್ನು ಅಭ್ಯಸಿಸಲು ಆರಂಭಿಸಿತ್ತೆಂದು ಅವರಿಗೆ ಗೊತ್ತಾಯಿತು. ಅವರಿಗೆ ಒಂದಿಷ್ಟೂ ಸಂತೋಷವಾಗಲಿಲ್ಲ. ಅವರು ನಮ್ಮನ್ನು ವಿರೋಧಿಸಲು ತೊಡಗಿದರು. ದಿನ ಕಳೆದಂತೆ ಅವರ ಹೃದಯವು ಹೆಚ್ಚು ಕಠಿನವಾಗುತ್ತಿರುವಂತೆ ತೋರಿತು.
“ನಾವು ನಮ್ಮ ತಂದೆಯನ್ನು ಬಹಳವಾಗಿ ಪ್ರೀತಿಸಿದೆವು, ಮತ್ತು ನಾವು ಪಡೆದುಕೊಳ್ಳುತ್ತಾ ಇದ್ದ ಜೀವದಾಯಕ ಜ್ಞಾನದಿಂದ ಅವರೂ ಪ್ರಯೋಜನ ಪಡೆದುಕೊಳ್ಳಬೇಕೆಂದು ನಾವು ಬಯಸಿದೆವು. ತಂದೆಯವರೊಂದಿಗೆ ಯೆಹೋವನ ಉದ್ದೇಶಗಳ ಕುರಿತು ಮಾತಾಡಲು ನಮಗೊಂದು ಮಾರ್ಗವನ್ನು ತೆರೆಯುವಂತೆ ಬೇಡಿಕೊಳ್ಳುತ್ತಾ, ನಾವು ಅನುದಿನವೂ ಯೆಹೋವನಿಗೆ ಉದ್ರಿಕ್ತವಾಗಿ ಪ್ರಾರ್ಥಿಸಿದೆವು. ಯೆಹೋವನು ನಮ್ಮ ಬಿನ್ನಹವನ್ನು ಆಲಿಸಿದನು ಏಕೆಂದರೆ, ತಂದೆಯವರು ಪ್ರತಿ ರಾತ್ರಿ ಟೆಲಿವಿಷನನ್ನು ಎಲ್ಲಿ ವೀಕ್ಷಿಸುತ್ತಿದ್ದರೊ ಆ ವಾಸದ ಕೊಠಡಿಯಲ್ಲಿ ಪ್ರತಿ ಸಂಜೆ ಒಟ್ಟುಗೂಡುವ ಧೈರ್ಯವನ್ನು ಆತನು ನಮಗೆ ಕೊಟ್ಟನು. ಅಲ್ಲಿ, ನನ್ನ ತಾಯಿ ಮತ್ತು ನಾವು ಹುಡುಗಿಯರು, ದೈನಿಕ ಬೈಬಲ್ ವಚನವನ್ನು ಓದಲು ಕೂಡಿಬರುತ್ತಿದ್ದೆವು.
“ಚರ್ಚೆಯನ್ನು ತಾಯಿಯವರು ನಡೆಸಿದರು, ಮತ್ತು ಹೇಳಿಕೆಗಳನ್ನು ಓದಿದ ತರುವಾಯ ನಾವು ಸರದಿಯ ಪ್ರಕಾರ ಪ್ರಾರ್ಥಿಸುತ್ತಿದ್ದೆವು. ಕೇವಲ ಐದು ವರ್ಷ ವಯಸಿನವಳಾಗಿದ್ದ ನಮ್ಮ ಕೊನೆಯ ತಂಗಿಯಾದ ಮಾರೀ ಪ್ರಾರ್ಥಿಸುತ್ತಿದ್ದಾಗ, ಅವಳು ಉದ್ರಿಕ್ತವಾಗಿ ಹೀಗೆ ಬೇಡಿಕೊಳ್ಳುತ್ತಿದ್ದಳು: ‘ಯೆಹೋವನೇ, ದಯವಿಟ್ಟು ಅಪ್ಪನ ಹೃದಯವನ್ನು ಮೃದುಗೊಳಿಸು, ಹೀಗೆ ಅವರೂ ನಿನ್ನ ಸಾಕ್ಷಿಯಾಗುವರು.’ ತಂದೆಯವರು ಕಿವಿಗೊಡುತ್ತಿರಲಿಲ್ಲವೆಂಬಂತೆ ತೋರಿತು, ಏಕೆಂದರೆ ಅವರು ಟಿವಿಯ ಧ್ವನಿಯನ್ನು ಹೆಚ್ಚು ಮಾಡುತ್ತಿದ್ದರು. ಹಾಗಿದ್ದರೂ, ಸಮಯವು ಗತಿಸಿದಂತೆ, ಅವರು ಧ್ವನಿಯನ್ನು ಕಡಿಮೆಗೊಳಿಸತೊಡಗಿದರು, ಕೊನೆಗೆ ಒಂದು ರಾತ್ರಿ ಅದನ್ನು ಪೂರ್ತಿಯಾಗಿ ಆಫ್ ಮಾಡಿಬಿಟ್ಟರು.
“ಆ ಸಂಜೆ, ವಾಡಿಕೆಯಂತೆಯೇ, ವಚನವನ್ನು ಓದುವ ಸರದಿಯು ಯಾರದಾಗಿತ್ತೆಂದು ತಾಯಿಯವರು ಕೇಳಿದರು. ನಮಗೆ ಬಹಳಷ್ಟು ಆಶ್ಚರ್ಯವಾಗುವಂತೆ, ‘ನನ್ನ ಸರದಿ’ ಎಂದು ತಂದೆಯವರು ಹೇಳಿದರು. ನಾವು ಆಶ್ಚರ್ಯಗೊಂಡರೂ ಏನೂ ಹೇಳಲಿಲ್ಲ. ತಾಯಿಯವರು ಅವರನ್ನು ತಡೆಯಲೂ ಇಲ್ಲ ಪ್ರಶ್ನಿಸಲೂ ಇಲ್ಲ, ಬದಲಿಗೆ ಪ್ರತಿನಿತ್ಯ ಶಾಸ್ತ್ರಗಳನ್ನು ಪರೀಕ್ಷಿಸುವುದು ಎಂಬ ಪುಸ್ತಿಕೆಯನ್ನು ಅವರ ಕೈಯಲ್ಲಿಟ್ಟರು. ಬೈಬಲ್ ವಚನದ ಚರ್ಚೆಯನ್ನು ಅವರು ನಡೆಸಿದ ಬಳಿಕ, ಪ್ರಾರ್ಥನೆಯ ಸರದಿ ಯಾರದಾಗಿತ್ತೆಂದು ತಾಯಿಯವರು ಕೇಳಿದರು. ‘ನನ್ನ ಸರದಿ,’ ಎಂದು ತಂದೆಯವರು ಹೇಳಿದರು.
“ನಾವು ದಿಗ್ಭ್ರಮೆಗೊಂಡೆವು. ಪ್ರಾರ್ಥನೆಯ ಮಧ್ಯದಲ್ಲಿ, ನಮಗೆ ಕಣ್ಣೀರನ್ನು ತಡೆದುಕೊಳ್ಳಲು ಆಗಲೇ ಇಲ್ಲ. ತಂದೆಯವರೂ ಅಳಲಾರಂಭಿಸಿದರು, ಮತ್ತು ಯೆಹೋವನನ್ನು ದೂಷಿಸಿದುದಕ್ಕಾಗಿ ತನ್ನನ್ನು ಕ್ಷಮಿಸುವಂತೆ ಅವರು ಯೆಹೋವನಲ್ಲಿ ಕೇಳಿಕೊಂಡರು. ಮತ್ತು ನಮ್ಮನ್ನು ವಿರೋಧಿಸಿದ್ದಕ್ಕಾಗಿಯೂ ತಮ್ಮನ್ನು ಕ್ಷಮಿಸುವಂತೆಯೂ ಅವರು ತಾಯಿಯವರಲ್ಲಿ ಕೇಳಿಕೊಂಡರು.
“ಹೀಗೆ 1986ರಲ್ಲಿ, ನಮ್ಮ ತಂದೆಯವರಿಂದ ಬರುತ್ತಿದ್ದ ವಿರೋಧವು ನಿಂತುಹೋಯಿತು. 1990ರಲ್ಲಿ ನಮ್ಮ ಕುಟುಂಬವು ಅಮೆರಿಕದಲ್ಲಿರುವ ಟೆಕ್ಸಸ್ಗೆ ಸ್ಥಳಾಂತರಿಸಿತು. ಸಕಾಲದಲ್ಲಿ, ಅಕ್ಕತಂಗಿಯರಲ್ಲಿ ನಾವು ಏಳು ಮಂದಿ ಮಾಡಿದಂತೆಯೇ, ತಂದೆಯವರು ತಮ್ಮ ಜೀವಿತವನ್ನು ಯೆಹೋವನಿಗೆ ಸಮರ್ಪಿಸಿಕೊಂಡು, ಅದನ್ನು ನೀರಿನ ದೀಕ್ಷಾಸ್ನಾನದ ಮೂಲಕ ಸಂಕೇತಿಸಿದರು. ಏಪ್ರಿಲ್ 1997ರಲ್ಲಿ, ತಂದೆಯವರು ಒಬ್ಬ ಕ್ರೈಸ್ತ ಹಿರಿಯರಾಗಿ ನೇಮಿಸಲ್ಪಟ್ಟರು. ಈ ದಿನದ ವರೆಗೂ, ಕುಟುಂಬವಾಗಿ ದೈನಿಕ ಬೈಬಲ್ ವಚನವನ್ನು ಪರಿಗಣಿಸುವುದು ನಮಗೆ ಬಹಳ ಪ್ರಾಮುಖ್ಯವಾಗಿದೆ, ಮತ್ತು ಯೆಹೋವನಿಗೆ ಮಾಡುವ ಪ್ರಾರ್ಥನೆಯು ನಮ್ಮ ಕುಟುಂಬ ಜೀವಿತದ ಅಡಿಗಲ್ಲಾಗಿದೆ.”
[ಪುಟ 31 ರಲ್ಲಿರುವ ಚಿತ್ರ]
1. ಮೆಕ್ಸಿಕೊದಲ್ಲಿ ಪಯನೀಯರ್ ಸೇವೆ ಮಾಡುತ್ತಿರುವ ನಾಲ್ಕು ಹೆಣ್ಣುಮಕ್ಕಳು. ಮಾರೀ ಮುಂಭಾಗದಲ್ಲಿದ್ದಾಳೆ
2. ಕ್ವಾನೀಟ ಮತ್ತು ಈಸಾಕ್ ಆಡಾಮ್, ತಮ್ಮ ಮಕ್ಕಳಲ್ಲಿ ಕೆಲವರೊಂದಿಗೆ. ಗ್ಲೋರಿಯಾ ತೀರ ಬಲಭಾಗದಲ್ಲಿದ್ದಾಳೆ